varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಭವಿಷ್ಯವನ್ನು ರೂಪಿಸಬಂದ ಭೂತಕಾಲ

ವಾರ್ತಾ ಭಾರತಿ : 30 Dec, 2021
ನಾಗೇಶ್ ಹೆಗಡೆ

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ್ ಹೆಗಡೆ, ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿ ನೂರಾರು ಲೇಖನಗಳನ್ನು ಬರೆದಿರುವ ಇವರ ‘ಇರುವುದೊಂದೇ ಭೂಮಿ’ ಮಹತ್ವದ ಕೃತಿಗಳಲ್ಲೊಂದು. ಇವರ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ. ಪರಿಸರ, ವಿಜ್ಞಾನಗಳಿಗೆ ಸಂಬಂಧಿಸಿದ ಇವರ ಹಲವು ಕೃತಿಗಳಿಗೆ ಮಾಧ್ಯಮ ಅಕಾಡಮಿ, ಸಾಹಿತ್ಯ ಅಕಾಡಮಿ, ವಿಜ್ಞಾನ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.

ನಾಗೇಶ್ ಹೆಗಡೆ

ಮನುಷ್ಯನನ್ನು ಎಚ್ಚರಿಸಲು ಭೂಮಿ ಏನೆಲ್ಲ ವಿಧಿವಿಧಾನಗಳನ್ನು ಬಳಸಿತು. ಸೋತು, ಕೊನೆಯದಾಗಿ ಗತಕಾಲದ ದೈತ್ಯ ಪ್ರಾಣಿಯನ್ನು ತನ್ನ ರಾಯಭಾರಿಯಾಗಿ ವೇದಿಕೆಗೆ ತಂದಿತು.

 ಬರುತ್ತಿರುವ ಬಿಸಿಪ್ರಳಯದ ಝಳವನ್ನು ಆದಷ್ಟೂ ಕಡಿಮೆ ಮಾಡುವುದು ಹೇಗೆ? ಇದನ್ನು ಚರ್ಚಿಸಲೆಂದು ಜಗತ್ತಿನ ಮುತ್ಸದ್ದಿಗಳೆಲ್ಲ ಈಚೆಗೆ ಇಂಗ್ಲೆಂಡಿನ ಗ್ಲಾಸ್ಗೊ ನಗರದಲ್ಲಿ ಸಭೆ ಸೇರಿದ್ದರಲ್ಲ? ಅದಕ್ಕೆ ನಾಲ್ಕು ದಿನ ಮುಂಚೆ ಒಂದು ಪುಟ್ಟ ಕಾಲ್ಪನಿಕ ವೀಡಿಯೊ ಚಿತ್ರ ಎಲ್ಲೆಡೆ ಪ್ರಸಾರಕ್ಕೆ ಬಂತು. ಅದರ ಕಿರು ವಿವರ ಹೀಗಿದೆ:

ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ವಿಶಾಲ ಸಭಾಂಗಣ. ಎಲ್ಲ ದೇಶಗಳ ಜನನಾಯಕರು ಕೂತಿದ್ದಾರೆ. ಯಾರೋ ವಿಶೇಷ ಅತಿಥಿ ಬರಲಿದ್ದಾರೆಂದು ಅಲ್ಲಿನ ಮಹಾದ್ವಾರದ ಕಡೆಗೇ ಎಲ್ಲರೂ ಕುತೂಹಲದಿಂದ ಕತ್ತು ತಿರುಗಿಸಿ ನೋಡುತ್ತಿದ್ದಾರೆ. ವಿಲಕ್ಷಣ ಸಂಗೀತದೊಂದಿಗೆ ಬಾಗಿಲು ಸಣ್ಣದಾಗಿ ತೆರೆದುಕೊಳ್ಳುತ್ತದೆ. ಅದರೊಳಕ್ಕೆ ತನ್ನ ಭಯಾನಕ ಮೂತಿಯನ್ನು ತೂರಿಸಿ ಒಂದು ದೊಡ್ಡ ಡೈನೊಸಾರ್ ಪ್ರಾಣಿ ಒಳಕ್ಕೆ ಬರುತ್ತದೆ. ಎಲ್ಲರೂ ಹೌಹಾರಿ ಕೂತಲ್ಲೇ ಮರಗಟ್ಟಿರುವಾಗ ಆ ದೈತ್ಯಜೀವಿ ತನ್ನ ಎರಡು ದಪ್ಪಪಾದಗಳನ್ನು ಊರುತ್ತ ನೆಲವನ್ನೇ ನಡುಗಿಸುತ್ತಾ ಸಭಿಕರ ಮಧ್ಯದ ಸಾಗುದಾರಿಯಲ್ಲಿ ನಡೆದು ಬರುತ್ತದೆ.

ಸಭಾಂಗಣದ ಬಾಲ್ಕನಿಯ ಗಾಜಿನ ಗೂಡಿನಲ್ಲಿ ಕೂತಿದ್ದ ಮಾಧ್ಯಮದವರೆಲ್ಲ ಚೀರುತ್ತ್ತಾ ದೂರ ಧಾವಿಸುತ್ತಾರೆ. ವಿವಿಧ ದೇಶಗಳ ಪ್ರಧಾನಿಗಳು, ರಾಷ್ಟ್ರಪತಿಗಳು ಗಡಗಡ ನಡುಗುತ್ತಿದ್ದರೂ ಸಭಾ ಮರ್ಯಾದೆಗೆ ಅಂಜಿ ತಂತಮ್ಮ ಕುರ್ಚಿಗೆ ಅಂಟಿ ಕೂತಿದ್ದಾರೆ. ಕುರ್ಚಿಗೆ ಗಟ್ಟಿ ಅಂಟಿ ಕೂರುವ ಕಲೆ ಅವರಿಗೆ ಹೇಗಿದ್ದರೂ ಕರಗತವಾಗಿದೆ ತಾನೆ? ಅಷ್ಟೆತ್ತರದ ಆ ಡೈನೊಸಾರ್ (ವೆಲೊಸಿರಾಪ್ಟರ್) ಯಾರಿಗೂ ಯಾವ ಅಪಾಯವನ್ನೂ ಮಾಡದೆ ನೇರವಾಗಿ ವೇದಿಕೆ ಏರಿ, ಸಭಾಧ್ಯಕ್ಷರ ಬಳಿ ಹೋಗಿ, ಆತನ ಮುಖದ ಬಳಿ ತನ್ನ ಮೂತಿಯನ್ನು ತಂದು ಭುಸ್ಸೆಂದು ತುಸು ಹೊಗೆ ಉಗುಳಿ, ಮನುಷ್ಯನ ಭಾಷೆಯಲ್ಲೇ ‘‘ಗಾಬರಿ ಆಯ್ತೆ?’’ ಎಂದು ಗಡಸು ಧ್ವನಿಯಲ್ಲಿ ಕೇಳುತ್ತದೆ. ಆತ ಕಂಪಿಸುತ್ತಲೇ ತಲೆ ಅಲ್ಲಾಡಿಸುತ್ತಿದ್ದಾಗ ಈ ಪ್ರಾಣಿ ಮೈಕ್ ಬಳಿ ಹೋಗುತ್ತದೆ. ಅಷ್ಟೆತ್ತರದ ತನ್ನ ದೇಹವನ್ನು ಬಾಗಿಸಿ, ಮುಂಗಾಲಿನಿಂದ ಮೈಕ್ ಸರಿ ಮಾಡಿ, ಮತ್ತೊಮ್ಮೆ ಕೊಂಚ ಹೊಗೆ ಉಗುಳಿ, ಒಂದು ಪುಟ್ಟ ಭಾಷಣವನ್ನ್ನು ಬಿಗಿಯುತ್ತದೆ.

‘‘ಕೇಳಿ ಮನುಷ್ಯರೇ ಒಂದಿಡೀ ಜೀವ ಸಂಕುಲ ನಿರ್ನಾಮ ಆಗೋದು ಅಂದ್ರೆ ಏನು? ಅದರ ಬಗ್ಗೆ ನನಗೆ ಒಂಚೂರು ಗೊತ್ತಿದೆ. ಅದು ನಿಮಗೂ ಗೊತ್ತಿದೆ. ಆದರೆ ಗೊತ್ತಿದ್ದೂ ಇದ್ದೂ ನೀವಾಗಿ ನಾಮಾವಶೇಷ ಆಗೋದು ಅಂದ್ರೆ?....

‘‘ನನಗಂತೂ ನಂಬೋಕೆ ಆಗೋಲ್ಲ! ನಮ್ಮ ಕತೆ ಬಿಡಿ- ನಮ್ಮ ತಲೆಯ ಮೇಲೆ ಒಂದು ಕ್ರುದ್ರಗ್ರಹ ಬಂದು ಬಿತ್ತು. ನಿಮಗೇನು ಕಷ್ಟ ಬಂದಿದೆ? ನೀವಾಗಿ ತಲೆಯ ಮೇಲೆ ಯಾಕೆ ಚಪ್ಪಡಿ ಎಳ್ಕೋತಾ ಇದೀರಾ! ನೀವು ಫಾಸಿಲ್ ಇಂಧನಗಳನ್ನು ಉರಿಸಿ ಉರಿಸಿ ಭೂಮಿಯನ್ನು ಸರ್ವನಾಶದ ಅಂಚಿಗೆ ತಂದಿದ್ದೀರಾ (ವೇದಿಕೆಯ ಹಿಂದಿನ ವಿಶಾಲ ಪರದೆಯ ಮೇಲೆ ಚಂಡಮಾರುತ, ಹಿಮಕುಸಿತ, ಕಾಡಿನ ಬೆಂಕಿಯ ಧಗಧಗ ಚಿತ್ರಗಳು ಬರುತ್ತವೆ). ಸಾಲದೂಂತ ನೀವು ವರ್ಷವರ್ಷವೂ ಶತಕೋಟಿ ಡಾಲರ್‌ಗಳ ಸಬ್ಸಿಡಿ ಕೊಡುತ್ತಾ ಆ ಇಂಧನಗಳ ಇನ್ನಷ್ಟು ಬಳಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಾ....

‘‘ನಾವೂ ಹಾಗೇ ಮಾಡಿದ್ದೆವು ಅಂದುಕೊಳ್ಳಿ; ದೊಡ್ಡ ದೊಡ್ಡ ಉಲ್ಕೆಗಳು, ಕಕ್ಷಾಬಂಡೆಗಳು ಇನ್ನೂ ಜಾಸ್ತಿ ಸಂಖ್ಯೆಯಲ್ಲಿ ಬಂದು ನಮ್ಮ ತಲೆಯ ಮೇಲೆ ಬೀಳಲೆಂದು ನಾವೂ ವ್ಯವಸ್ಥೆ ಮಾಡಿಕೊಂಡು ಅವಕ್ಕೆಲ್ಲ ಸಬ್ಸಿಡಿ ಕೊಡುತ್ತಾ ಹೋಗಿದ್ದಿದ್ದರೆ ನೀವು ಏನನ್ನುತ್ತಿದ್ದೀರಿ? (ದನಿ ಎತ್ತರಿಸಿ) ನೀವೀಗ ಅದನ್ನೇ ಮಾಡುತ್ತಿದ್ದೀರಿ! ‘‘ಆ ಅಷ್ಟೊಂದು ಭಾರೀ ಹಣದಿಂದ ನೀವು ಬೇರೆ ಏನೇನು ಮಾಡಬಹುದಿತ್ತು ಊಹಿಸಿ. ಜಗತ್ತಿನಾದ್ಯಂತ ಅದೆಷ್ಟು ಕೋಟಿ ಜನರು ದಟ್ಟ ದರಿದ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ (ಪರದೆಯ ಮೇಲೆ ಬಡಜನರ ಚಿತ್ರ ಬರುತ್ತದೆ). ಅವರಿಗೆ ಸಹಾಯ ಮಾಡಬೇಕು ಅನ್ನೋ ಯೋಚನೆ ನಿಮಗೆ ಬರೋದೇ ಇಲ್ಲವೆ? ನನಗಂತೂ ಅರ್ಥ ಆಗ್ತಾ ಇಲ್ಲ. ನಿಮ್ಮ ಇಡೀ ಮನುಕುಲದ ಸಮೂಲಾಗ್ರ ನಾಶಕ್ಕೆಂದೇ ನೀವು ಹಣ ಸುರೀತಾ ಇದ್ದೀರಲ್ರೀ! ‘‘ಸ್ವಲ್ಪ ವಾಸ್ತವದ ಕಡೆ ಗಮನ ಹರಿಸಿ. ನಿಮ್ಮೆದುರು ಈಗ ದೊಡ್ಡದೊಂದು ಅವಕಾಶದ ಬಾಗಿಲು ತೆರೆದಿದೆ. ಮಹಾಸಾಂಕ್ರಾಮಿಕದಿಂದ ಇದೀಗ ಹೊರಬರುತ್ತಿದ್ದೀರಿ. ನಿಮ್ಮ ದಾರಿಯನ್ನು ಬದಲಾಯಿಸಿಕೊಳ್ಳಿ. ಸರ್ವನಾಶದ ಈ ಮಾರ್ಗವನ್ನು ಬಿಟ್ಟುಬಿಡಿ. ತೀರ ತಡವಾಗುವ ಮುನ್ನ ನಿಮ್ಮ ಪ್ರಭೇದವನ್ನು ಉಳಿಸಿಕೊಳ್ಳಿ. ಏನೆಲ್ಲ್ಲಾ ಕುಂಟುನೆಪ ಹೇಳುತ್ತಾ ಕಾಲವನ್ನು ತಳ್ಳಬೇಡಿ.

ಬದಲಿಗೆ, ಬದಲಾವಣೆಯತ್ತ, ಬಚಾವಾಗುವತ್ತ ದಾರಿ ಹುಡುಕಿ. ಧನ್ಯವಾದ’’

- ಹೀಗೆಂದು ಹೇಳಿ ಆ ದೈತ್ಯ ಪ್ರಾಣಿ ವೇದಿಕೆಯಿಂದ ನಿರ್ಗಮಿಸುವಾಗ ಮುತ್ಸದ್ದಿಗಳೆಲ್ಲ ಎದ್ದು ಒಬ್ಬೊಬ್ಬರಾಗಿ, ಕೊನೆಗೆ ಒಟ್ಟಾಗಿ ಚಪ್ಪಾಳೆ ತಟ್ಟುತ್ತಾರೆ.

   ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್‌ಡಿಪಿ ಇದೇ ಮೊದಲ ಬಾರಿಗೆ ತಾನೇ ಮುಂದಾಗಿ ಅಸಲಿ ಸಭಾಂಗಣದಲ್ಲಿ ಈ ವೀಡಿಯೊ ಚಿತ್ರೀಕರಣ ಮಾಡಿದೆ.‘‘ನಿರ್ನಾಮದ ಮಾರ್ಗ ನಿಮ್ಮದಾಗದಿರಲಿ’’ ಎಂಬ ಘೋಷಣೆಯೊಂದಿಗೆ ಅನೇಕ ಭಾಷೆಗಳಲ್ಲಿ ಜಗತ್ತಿನ ಎಲ್ಲ ದೇಶಗಳಲ್ಲಿ ಬಿಡುಗಡೆ ಮಾಡಿದೆ.

ಡೈನೊಸಾರ್‌ಗಳ ನಿರ್ನಾಮ ಆಗಿದ್ದು ಸುಮಾರು ಆರೂವರೆ, ಏಳು ಕೋಟಿ ವರ್ಷಗಳ ಹಿಂದೆ. ಅದಕ್ಕೂ ಹಿಂದಿನ ಸುಮಾರು ಇಪ್ಪತ್ತು ಕೋಟಿ ವರ್ಷಗಳ ಕಾಲ ಅವು ಇಡೀ ಭೂಮಿಯನ್ನು ಆವರಿಸಿದ್ದವು. ಎಲ್ಲ ಖಂಡಗಳಲ್ಲೂ ಅವೇ ಇದ್ದವು ಎಂತಲೂ ಹೇಳಬಹುದು. ಏಕೆಂದರೆ ಆಗ ಇಡೀ ಭೂಮಿಗೆಲ್ಲ ಒಂದೇ ಖಂಡವಿತ್ತು. ಹೀಗಿರುವಾಗ ಆಕಾಶದಿಂದ ಭಾರೀ ಗಾತ್ರದ ಉಲ್ಕಾ ಬಂಡೆಯೊಂದು ಭೂಮಿಗೆ ಅಪ್ಪಳಿಸಿತು. ಆಗ ಮೇಲೆದ್ದ ಬೆಂಕಿ, ಹೊಗೆ, ಧೂಳು ಇಡೀ ಭೂಮಿಯನ್ನು ಸುತ್ತುವರಿಯಿತು. ಅನೇಕ ವರ್ಷಗಳ ಕಾಲ ಎಲ್ಲೆಲ್ಲೂ ಮೋಡ ಕವಿದಿತ್ತು. ಬಿಸಿಲೇ ಇಲ್ಲದ್ದರಿಂದ ಋತುಮಾನಗಳು ಸ್ಥಗಿತವಾದವು. ಹುಲ್ಲು, ಹಸಿರು ಕೂಡ ಬೆಳೆಯಲಾರದೆ ದಶಕಗಳ ಕಾಲ ಎಲ್ಲೆಲ್ಲೂ ಕತ್ತಲು ಕವಿದ ಬರಗಾಲವೇ ಆಗಿತ್ತು. ತಿನ್ನಲು ಆಹಾರ ಸಿಗದೆ ಡೈನೊಸಾರ್ ಸಮೇತ ಅನೇಕ ಜೀವ ಪ್ರಭೇದಗಳು ನಿರ್ನಾಮವಾದವು; ನಿರ್ವಂಶವಾದವು.

ಭೂಚರಿತ್ರೆಯ ಆ ಪ್ರಳಯಕಾಲದ ವಿವರಗಳು ನಮಗೆ ಗೊತ್ತಾಗಿದ್ದು ಹೇಗೆ ಗೊತ್ತೇ? ಚರಿತ್ರೆಯ ಪುಟಗಳು ಭೂಮಿಯ ಶಿಲಾಸ್ತರಗಳಲ್ಲಿ ಹೂತು ಕೂತಿವೆ. ಡೈನೊಸಾರ್‌ಗಳ ಪಳೆಯುಳಿಕೆ ಇದ್ದ ಶಿಲಾಸ್ತರಗಳಲ್ಲೇ ‘ಇರಿಡಿಯಂ’ ಎಂಬ ಲೋಹದ ಅತಿಸೂಕ್ಷ್ಮ ಕಣಗಳೂ ಸಿಕ್ಕಿವೆ. ಶಿಲೆಗಳಲ್ಲಿ ಅಷ್ಟೇ ಅಲ್ಲ, ಹಿಮಪದರಗಳಲ್ಲೂ ಅವು ಸಿಕ್ಕಿವೆ. ಇರಿಡಿಯಂ ಲೋಹ ಉಲ್ಕೆಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಲೋಹವೇ ವಿನಾ ಭೂಮಿಯಲ್ಲಿ ಸಹಜವಾಗಿ ಇದರ ಕಣಗಳು ಸಿಗುವುದು ತೀರಾ ತೀರಾ ಕಡಿಮೆ. ಮೇಲಾಗಿ ಆ ಕಾಲಘಟ್ಟವನ್ನು ಬಿಟ್ಟರೆ ಅದಕ್ಕೂ ಮುಂಚೆ ಅಥವಾ ನಂತರವೂ ಎಲ್ಲೂ ಈ ಲೋಹ ಇಡೀ ಭೂಮಿಯನ್ನು ಏಕರೂಪವಾಗಿ ಆವರಿಸಿದ್ದಿಲ್ಲ. ಇದರರ್ಥ ಏನೆಂದರೆ, ಇತಿಹಾಸದ ಬೃಹತ್ ಘಟನೆಗಳು ಭೂಮಿಯ ಎಲ್ಲೆಡೆ ಯಾವುದೋ ರೂಪದಲ್ಲಿ ದಾಖಲಾಗುತ್ತವೆ.

ಎಲ್ಲೆಲ್ಲೂ ನಮ್ಮದೇ ಅಸ್ಥಿಪಂಜರಗಳು

ಈಗ ನಾವೊಂದು ತುಂಟ ಪ್ರಶ್ನೆಯನ್ನು ಎತ್ತಿಕೊಳ್ಳೋಣ: ಐದಾರು ಕೋಟಿ ವರ್ಷಗಳ ನಂತರ ಯಾರಾದರೂ ಈ ಭೂಮಿಯನ್ನು ಅಗೆದರೆ ಈ ಕಲಿಯುಗದ ಯಾವ ಯಾವ ಕುರುಹುಗಳು ಶಿಲಾಪದರಗಳಲ್ಲಿ ಸಿಗುತ್ತವೆ? ಉತ್ತರ ತೀರಾ ಸುಲಭ.ಅಗೆದಲ್ಲೆಲ್ಲ ಸಿಮೆಂಟ್ ಕಾಂಕ್ರಿಟ್ ಮತ್ತು ಡಾಂಬರು ರಸ್ತೆಯ ಪದರಗಳು, ಕಬ್ಬಿಣ, ಅಲ್ಯೂಮಿನಿಯಂ, ತಾಮ್ರದ ತುಂಡುಗಳು, ಯುರೇನಿಯಂ ಕಣಗಳು ಸಿಗುತ್ತವೆ.ಅಲ್ಲಲ್ಲಿ ಡೇಂಜರಸ್ ಪ್ಲುಟೋನಿಯಂ ಪುಡಿ ಸಿಗುತ್ತವೆ. ಕಣಿವೆಗಳಲ್ಲಿ ಅಗೆದಲ್ಲೆಲ್ಲ ರಬ್ಬರ್ ಟಯರ್‌ಗಳು, ನೈಲಾನ್ ಚಿಂದಿಬಟ್ಟೆಗಳು ಸಿಗುತ್ತವೆ. ಎಲ್ಲೆಂದರಲ್ಲಿ ಕೋಳಿಮೂಳೆ, ಕುರಿ-ಮೇಕೆಗಳ, ದನ-ಹಂದಿಗಳ ಎಲುಬು ಹೇರಳ ಸಿಗುತ್ತವೆ.

ಒಂದೂವರೆ, ಎರಡು ಮೀಟರ್ ಉದ್ದದ ಮನುಷ್ಯನೆಂಬ ಸಾಮಾನ್ಯ ಗಾತ್ರದ ಪ್ರಾಣಿಯ ಅಸ್ಥಿಪಂಜರದ ತುಣುಕುಗಳು ಎಲ್ಲ ಖಂಡಗಳಲ್ಲೂ ಸಿಗುತ್ತವೆ. ಹಿಮಖಂಡಗಳಲ್ಲಿ ಹೂತಿರುವ ಗಾಳಿಗುಳ್ಳೆಗಳಲ್ಲಿ ಹೆಚ್ಚಿನ ಭಾಗ ಲಂಟಾನಾ, ಪಾರ್ಥೇನಿಯಂ, ಭತ್ತ, ಗೋಧಿ,ಕಬ್ಬು, ಜೋಳದ ಪರಾಗ ಕಣಗಳೇ ತುಂಬಿರುತ್ತವೆ. ಆನೆ, ಹುಲಿ, ಕರಡಿ, ಸಿಂಹಗಳಂಥ ವನ್ಯಜೀವಿಗಳ ಕುರುಹು ಮಾತ್ರ ಎಲ್ಲೋ ತೀರಾ ಅಪರೂಪಕ್ಕೆ ಅದೃಷ್ಟವಂತರಿಗೆ ಮಾತ್ರ ಸಿಗುತ್ತವೆ. ಹತ್ತು ಸಾವಿರ ವರ್ಷಗಳ ಹಿಂದಿನ ಪದರಗಳಲ್ಲಿ ಕಂಡುಬರುತ್ತಿದ್ದ ಆ ವನ್ಯಜೀವಿಗಳ ಪಳೆಯುಳಿಕೆಗಳು, ಮನುಷ್ಯಯುಗದ ಪದರಗಳಲ್ಲಿ ಹೇಳಹೆಸರಿಲ್ಲದಂತಾಗಿವೆ.

ಅದು ಭವಿಷ್ಯದಲ್ಲಿ ಕಾಣುವ ನಮ್ಮ ಭೂತಕಾಲ! ಹತ್ತಿರ ಹತ್ತಿರ ಒಂದು ಕೋಟಿ ವರ್ಷಗಳ ಹಿಂದೆ ಅವತರಿಸಿದ ಮನುಷ್ಯನೆಂಬ ಎರಡು ಕಾಲಿನ ಪ್ರಾಣಿಯ ವಿಲಕ್ಷಣ ಇತಿಹಾಸ ಅದು. ತನ್ನ ವಿಕಾಸದ ಸುದೀರ್ಘ ಅವಧಿಯಲ್ಲಿ ಇತರೆಲ್ಲ ಜೀವಿಗಳ ಹಾಗೆ ಪ್ರಕೃತಿಯ ಜೊತೆ ಒಂದಾಗಿ ಬಾಳಿದ್ದ ಈ ಹೊಮೊ ಸೇಪಿಯನ್ ಸೇಪಿಯನ್ ಎಂಬ ಜೀವಿ ತನ್ನ ಯುಗದ ಕೊನೇ ಕ್ಷಣದಲ್ಲಿ ಅದು ಹೇಗೊ ತಂತ್ರಜ್ಞಾನವನ್ನು ಕೈವಶ ಮಾಡಿಕೊಂಡ ಕೇವಲ ಮುನ್ನೂರು ವರ್ಷಗಳಲ್ಲಿ ಭೂಮಿಯ ಚರಿತ್ರೆಯನ್ನೇ ಹೇಗೆ ಪಲ್ಲಟ ಮಾಡಿದನೆಂಬ ಶಿಲಾಶಾಸನ ಅದು.

ತಾನು ಇಷ್ಟೆಲ್ಲ ಅವಾಂತರಗಳನ್ನು ಮಾಡುತ್ತಿದ್ದೇನೆಂಬ ಅರಿವು ಆತನಿಗೆ ಬರಲು ಇಷ್ಟೇಕೆ ತಡವಾಗುತ್ತಿದೆ? ಈ ಫಾಸಿಲ್ ಇಂಧನಗಳ ಯುಗದ ಆರಂಭದಲ್ಲೇ ಏಕೆ ಗೊತ್ತಾಗಲಿಲ್ಲ? ಗೊತ್ತಾಗಿತ್ತು. ಈಗಲ್ಲ, 125 ವರ್ಷಗಳ ಹಿಂದೆಯೇ 1896ರಲ್ಲಿ ಸ್ವಾಂತೆ ಅರ್ಹೇನಿಯಸ್ ಎಂಬ ಸ್ವೀಡಿಶ್ ವಿಜ್ಞಾನಿ ಭೂಮಿಯ ತಾಪಮಾನ ಮೆಲ್ಲಗೆ ಏರುತ್ತಿದೆಯೆಂದೂ ಅದಕ್ಕೆ ಪೆಟ್ರೋಲ್, ಕಲ್ಲಿದ್ದಲಿನಂತಹ ಫಾಸಿಲ್ ಇಂಧನಗಳೇ ಕಾರಣವೆಂದೂ ಹೇಳಿದ್ದ. ಆಗಿನ್ನೂ ಈ ಖನಿಜ ಇಂಧನಗಳ ಬಳಕೆ ಇಷ್ಟೊಂದು ವ್ಯಾಪಕವಾಗಿಯೇನೂ ಇರಲಿಲ್ಲ. ಆತ ತೀರಾ ಸಾಮಾನ್ಯ ವಿಜ್ಞಾನಿಯಾಗಿದ್ದರೆ ಆತನ ಸಂಶೋಧನೆ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆದರೆ ಆತನಿಗೆ ಸ್ವೀಡನ್‌ನ ಮೊದಲ ನೊಬೆಲ್ ಪ್ರಶಸ್ತಿ ಸಿಕ್ಕಿದ್ದರಿಂದ ತನ್ನ ಅನಿಸಿಕೆಯನ್ನು ಸಾಕಷ್ಟು ಜೋರಾಗಿ ಹೇಳುವ ಅವಕಾಶ ಅವನಿಗೇ ಸಿಕ್ಕಿತ್ತು. ಹೇಳುತ್ತಲೂ ಇದ್ದ. ಆದರೂ ಯಾರೂ ಆ ಕುರಿತು ಕ್ಯಾರೇ ಅನ್ನಲಿಲ್ಲ. ಮುಖ್ಯ ಕಾರಣ ಏನೆಂದರೆ, ಆಗ ವಾತಾವರಣದಲ್ಲಿ ತೀರಾ ಕಡಿಮೆ (ಶೇ.0.03ಗಿಂತ ಕಡಿಮೆ) ಪ್ರಮಾಣದಲ್ಲಿದ್ದ ಇಂಗಾಲದ ಡೈಆಕ್ಸೈಡನ್ನು (ಸಿಒಟು) ಅಳೆದು ನೋಡುವುದು ಹೇಗೆಂಬುದೇ ಯಾರಿಗೂ ಗೊತ್ತಿರಲಿಲ್ಲ. ಅದಕ್ಕೆ ಬಣ್ಣ, ರುಚಿ, ವಾಸನೆ ಏನೇನೂ ಇರಲಿಲ್ಲವಲ್ಲ? ನಂತರದ 50 ವರ್ಷಗಳ ಕಾಲ ಯಾರೂ ಈ ಪ್ರಳಯಾಂತಕ ಅನಿಲದ ಕಡೆ ಗಮನವನ್ನೇ ಹರಿಸಿರಲಿಲ್ಲ.

ಅಳತೆಗೆ ಸಿಕ್ಕ ಇಂಗಾಲದ ಸಂದೇಶ

ಆಮೇಲೊಂದು ವಿಲಕ್ಷಣ ಸಂಗತಿ ರೂಪುಗೊಂಡಿತು. ಅಮೆರಿಕದ ಚಾರ್ಲಿ ಡೇವಿಡ್ ಕೀಲಿಂಗ್ ಎಂಬ ರಸಾಯನ ವಿಜ್ಞಾನಿ ಕಾರ್ಬನ್ ಡೈಆಕ್ಸೈಡ್ ಅನಿಲದ ಅನ್ವೇಷಣೆಗೆ ಹೊರಟ. ಹೇಗೆ ಅತ್ತ ತಿರುಗಿದನೋ ಗೊತ್ತಿಲ್ಲ. ಅವನ ಜೊತೆ ಕಾಲೇಜಿನಲ್ಲಿ ಪದವಿ ಪಡೆದ ಎಲ್ಲರನ್ನೂ ಪೆಟ್ರೋಲ್ ಕಂಪೆನಿಗಳು ಕೈಬೀಸಿ ಕರೆದು ಉದ್ಯೋಗ ಕೊಡುತ್ತಿದ್ದವು. ಕೀಲಿಂಗ್ ಅತ್ತ ಮುಖ ಹಾಕಿಲ್ಲ. ಈತ ತುಸು ಭಾವುಕ ಜೀವಿ. ಪಿಯಾನೊ ನುಡಿಸುತ್ತ, ಹಾಡು ಗುನುಗುನಿಸುತ್ತ ಗುಡ್ಡಬೆಟ್ಟ ಸುತ್ತುವವ. ತಾನು ಭೂವಿಜ್ಞಾನವನ್ನು ವಿಶೇಷ ಅಧ್ಯಯನ ಮಾಡಲು ಹೊರಟ. ಆದರೆ ತಲೆತಗ್ಗಿಸಿ ನೆಲದತ್ತ ನೋಡುವ ಬದಲು ತಲೆ ಎತ್ತಿ ವಾಯುಮಂಡಲದ ಕಡೆ ಗಮನ ಹರಿಸಿದ. ಅಲ್ಲಿ ಕಾರ್ಬನ್ ಡೈಆಕ್ಸೈಡನ್ನು ಅಳೆಯಲು ಹೊರಟ. ತನ್ನ ಅಸ್ತಿತ್ವವನ್ನೇ ಬಚ್ಚಿಟ್ಟುಕೊಂಡು ತೀರಾ ತೆಳುವಾಗಿ ವಾಯುಮಂಡಲದಲ್ಲಿ ಹರಡಿಕೊಂಡಿರುವ ಇದು ಆತನಿಗೆ ಆಕರ್ಷಕ ಎನ್ನಿಸಿದ್ದು ಹೇಗೋ ಗೊತ್ತಿಲ್ಲ. ಎಲ್ಲಿಂದಲೊ ಅಶರೀರವಾಣಿ ಕೇಳಿಸಿತೆ? ಏನೋ ಗೊತ್ತಿಲ್ಲ. ಅಂತೂ ಈ ಅನಿಲದ ಪ್ರಮಾಣವನ್ನು ಅಳೆಯಲು ತಾನೇ ಒಂದು ಸಲಕರಣೆಯನ್ನು ಸೃಷ್ಟಿ ಮಾಡಿದ. ಅದನ್ನು ಹೊತ್ತು ಅಮೆರಿಕದ ಕ್ಯಾಲಿಫೋರ್ನಿಯಾದ ಗುಡ್ಡ ಬೆಟ್ಟ, ಕಣಿವೆ, ಕರಾವಳಿ, ಸಮುದ್ರ ಎಲ್ಲ ಕಡೆಗೆ ಓಡಾಡತೊಡಗಿದ. ಆದರೆ ಕೀಲಿಂಗ್‌ಗೆ ಸಿಒಟು ಸರಾಸರಿ ಪ್ರಮಾಣ ಎಷ್ಟಿದೆ ಎಂದು ಅಳೆಯಲು ಕಷ್ಟವಾಗುತ್ತಿತ್ತು. ಏಕೆಂದರೆ ನಗರದ ಗಾಳಿ ಬೀಸಿದಾಗಲೆಲ್ಲ ಅವನ ಉಪಕರಣದ ಅಂಕಿಗಳು ಎರ್ರಾಬಿರ್ರಿ ಆಗುತ್ತಿದ್ದವು. ಋತುಮಾನ ಬದಲಾದ ಹಾಗೆಲ್ಲ ಸಿಒಟು ಪ್ರಮಾಣವೂ ಹೆಚ್ಚು ಕಮ್ಮಿ ಆಗುತ್ತಿತ್ತು. ಈ ರಗಳೆಯೇ ಬೇಡವೆಂದು ಆತ ಅವರಿವರನ್ನು ಕಾಡಿ ಬೇಡಿ, ಧನ ಸಹಾಯ ಪಡೆದು ದೂರದ ಹವಾಯಿ ದ್ವೀಪಕ್ಕೆ ಹೋಗಿ ಅಲ್ಲಿ ತನ್ನ ಉಪಕರಣವನ್ನು ಸ್ಥಾಪಿಸಿ ಕೂತ. 1958ರಿಂದ ಐದು ವರ್ಷಗಳ ಕಾಲ ಆತ ವಾಯುಮಂಡಲದಲ್ಲಿ ಸಿಒಟುವನ್ನು ಅಳೆದೇ ಅಳೆದ. ಕನ್ನಡದ ಕವಿ ಎ.ಕೆ.ರಾಮಾನುಜನ್ ಅವರ ಕವನವೊಂದರಲ್ಲಿ ಬಂದ ಅಂಗುಲ ಹುಳ ಎಲ್ಲವನ್ನೂ ಅಳೆಯುತ್ತ ಹೋದಂತೆ, ಈತ ಸಿಒಟು ಅನಿಲವನ್ನು ಅಳೆದೇ ಅಳೆದ. ‘‘ವರ್ಷವರ್ಷಕ್ಕೂ ಸಿಒಟು ಪ್ರಮಾಣ ಏರುತ್ತಿದೆ’’ ಎಂದು ವರದಿ ಮಾಡಿದ. ಅದು ಏರುವ ಪ್ರಮಾಣವನ್ನು ಆತ ಒಂದು ಆಲೇಖದಲ್ಲಿ ಗುರುತಿಸಿ ವೈಜ್ಞಾನಿಕ ಪ್ರಬಂಧವನ್ನೂ ಪ್ರಕಟಿಸಿದ. ಆದರೆ ಸುಲಭವಾಗಿ ಅಳೆಯಲೂ ಸಾಧ್ಯವಿಲ್ಲದಂಥ ಇಂಥ ಅತ್ಯಲ್ಪ ಪ್ರಮಾಣದ ಅನಿಲದ ಬಗ್ಗೆ ಈತ ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದಾನೊ ಎಂದು ಬಹುತೇಕ ಎಲ್ಲರೂ ಕಡೆಗಣಿಸಿದರು. ಅಮೆರಿಕದ ರಾಷ್ಟ್ರೀಯ ವಿಜ್ಞಾನ ದತ್ತಿನಿಧಿಯಿಂದ ಆತನಿಗೆ ಸಿಗುತ್ತಿದ್ದ ಧನಸಹಾಯವನ್ನೂ 1963ರಲ್ಲಿ ನಿಲ್ಲಿಸಲಾಯಿತು.

‘ಕೀಲಿಂಗ್ ಕರ್ವ್’ ಎಂಬ ಕಂಚಿನ ಕಂಠ

ಆದರೆ ಸ್ವಾರಸ್ಯ ನೋಡಿ.ಮರುವರ್ಷ ಅದೇ ದತ್ತಿನಿಧಿಯ ವಿಜ್ಞಾನಿಗಳು ಅವನ ಅದೇ ಆಲೇಖವನ್ನು ಆಧರಿಸಿ ಭೂತಾಪಮಾನ ಏರಿಕೆ ಸಾಧ್ಯತೆಯ ಬಗ್ಗೆ ರಾಷ್ಟ್ರಪತಿಗೆ ಎಚ್ಚರಿಸಿದರು. ಕೀಲಿಂಗ್ ನಿರೂಪಿಸಿದ ಆಲೇಖಕ್ಕೆ ಅದೆಷ್ಟು ಮಹತ್ವ ಬಂತೆಂದರೆ ಅದಕ್ಕೆ ‘‘ಕೀಲಿಂಗ್ ಕರ್ವ್’’ ಎಂತಲೇ ಹೆಸರು ಬಂತು. ಹವಾಯಿಯಲ್ಲಿರುವ ಅಮೆರಿಕನ್ ರಾಷ್ಟ್ರೀಯ ವಿಜ್ಞಾನ ಅಕಾಡಮಿಯಲ್ಲಿ ಆ ಆಲೇಖದ ಕಂಚಿನ ಪ್ರತಿರೂಪವನ್ನು ಸ್ಥಾಪಿಸಲಾಯಿತು.‘‘ಕೀಲಿಂಗ್ ಕರ್ವ್’’ ಹೆಸರಿನ ನಾಟಕವೂ ರಂಗಕ್ಕೆ ಬಂತು. ಚಾರ್ಲ್ಸ್ ಕೀಲಿಂಗ್‌ಗೆ ಅನೇಕ ಪ್ರಶಸ್ತಿಗಳು ಮತ್ತು ಶ್ವೇತಭವನದ ಸನ್ಮಾನವೂ ಸಿಕ್ಕಿತು. ಜಗತ್ತಿನ ಅನೇಕ ಕಡೆ ಸಿಒಟು ಏರಿಕೆಯ ಅಧ್ಯಯನಗಳು ನಡೆಯತೊಡಗಿದವು.1960ರ ದಶಕದಲ್ಲಿ ವಾಯುಮಂಡಲದಲ್ಲಿ 280 ಪಿಪಿಎಮ್ (ಅಂದರೆ ಶೇ.0.0280) ಇದ್ದ ಸಿಒಟು ಪ್ರಮಾಣ ಸತತ ಏರುತ್ತಾ 300 ದಾಟಿ, 350 ದಾಟಿ, 400ನ್ನೂ ಮೀರುತ್ತಿರುವುದು ದಾಖಲಾಗುತ್ತಾ ಹೋಯಿತು. ತಾಪಮಾನ ಏರಿಕೆಯ ಅಧ್ಯಯನದಲ್ಲಿ ಪ್ರಶಂಸನೀಯ ಕೆಲಸ ಮಾಡಿದವರಿಗೆ ನೀಡಲೆಂದು ‘‘ಕೀಲಿಂಗ್ ಕರ್ವ್ ಪ್ರಶಸ್ತಿ’’ಯನ್ನೂ ಸ್ಥಾಪಿಸಲಾಯಿತು. ತಾಪಮಾನ ಏರಿಕೆಯ ಅಧ್ಯಯನಕ್ಕೆಂದೇ ವಿಶ್ವಸಂಸ್ಥೆಯಿಂದ ನಿಯೋಜಿತವಾದ ಐಪಿಸಿಸಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು. ಅದೊಂದಕ್ಕೇ ಅಲ್ಲ ಅನ್ನಿ; ತಾಪಮಾನ ಏರಿಕೆಯ ಬಗ್ಗೆ ಸಾಕ್ಷ ಚಿತ್ರ ಸಿದ್ಧಪಡಿಸಿ ಜನಜಾಗೃತಿ ಹೆಚ್ಚಿಸಿದ ಅಮೆರಿಕದ ಉಪಾಧ್ಯಕ್ಷ ಅಲ್ ಗೋರ್ ಅವರಿಗೆ ಐಪಿಸಿಸಿ ಜೊತೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನೂ ನೀಡಲಾಯಿತು. ಹಾಗಿದ್ದರೆ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಏರಿಕೆಯನ್ನು ನಿಲ್ಲಿಸುವ ಪ್ರಯತ್ನ ಏನಾದರೂ ನಡೆಯಿತೆ? ಜಪಾನಿನ ಕ್ಯೋಟೊ ನಗರದಲ್ಲಿ ಒಂದು ಜಾಗತಿಕ ಸಮ್ಮೇಳನ ನಡೆಯಿತು. ಫಾಸಿಲ್ ಇಂಧನಗಳನ್ನು ಉರಿಸುತ್ತಲೇ ಶ್ರೀಮಂತಿಕೆಯ ಅಷ್ಟೆತ್ತರಕ್ಕೆ ಏರಿದ ದೇಶಗಳೇ ಪೃಥ್ವಿಯನ್ನೂ ಈ ಸಂಕಷ್ಟದಿಂದ ಪಾರುಮಾಡಲೆಂದು ಬಡದೇಶಗಳಿಗೆ ಒಂದಿಷ್ಟು ಹಣವನ್ನು ಮತ್ತು ಸೌರಶಕ್ತಿಯ ತಂತ್ರಜ್ಞಾನವನ್ನು ನೀಡಬೇಕೆಂದು ಒಪ್ಪಂದವಾಯಿತು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಯಾವ ಗಂಭೀರ ಯತ್ನಗಳೂ ನಡೆಯಲಿಲ್ಲ.

ಜೀವಸಂಕುಲಕ್ಕೆ ಬರಲಿರುವ ಅಪಾಯಗಳ ಬಗ್ಗೆ ಪೃಥ್ವಿಯೇ ಈ ಇಬ್ಬರು ವಿಜ್ಞಾನಿಗಳ (ಸ್ವಾಂಟಿ ಅರ್ಹೇನಿಯಸ್ ಮತ್ತು ಚಾರ್ಲಿ ಕೀಲಿಂಗ್) ಮೂಲಕ ಎಚ್ಚರಿಕೆ ನೀಡಿತೆಂದು ಭಾವಿಸೋಣ. ಆದರೂ ಅದು ಎಲ್ಲರ ಕಿವಿಗೆ ಬೀಳಲಿಲ್ಲ. ಈ ಬಾರಿ ಪೃಥ್ವಿ ಮೆಲ್ಲಗೆ ತಾನಾಗಿ ತನ್ನ ಗೋಳನ್ನು ತೋಡಿಕೊಳ್ಳತೊಡಗಿತು. ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ಧ್ರುವಪ್ರದೇಶಗಳಲ್ಲಿ ತಾಲೂಕು ಗಾತ್ರದ ಹಿಮಬಂಡೆಗಳು ಕರಗಿ ಕುಸಿಯತೊಡಗಿದವು. ಸುಂಟರಗಾಳಿಗಳ ಸಂಖ್ಯೆ ತುಸು ಹೆಚ್ಚಾಗತೊಡಗಿತ್ತು. ಹಿಮಪ್ರದೇಶದ ಅರಣ್ಯಗಳೂ ಅಲ್ಲಲ್ಲಿ ಹೊತ್ತಿ ಉರಿಯತೊಡಗಿದವು. ವಿಶ್ವಸಂಸ್ಥೆಯಿಂದ ನಿಯೋಜಿತರಾದ ವಿಜ್ಞಾನಿಗಳು ಭೂತಾಪ ಏರಿಕೆಯ ಬಗ್ಗೆ ಗಂಭೀರ ಎಚ್ಚರಿಕೆ ಕೊಟ್ಟರು. ಆದರೂ ಜಾಗತಿಕ ಮಟ್ಟದಲ್ಲಿ ಶ್ರೀಮಂತ ಸರಕಾರಿ ವಲಯಗಳಲ್ಲಿ ಅಂತಹ ಆತಂಕಗಳೇನೂ ಕಂಡುಬಂದಿರಲಿಲ್ಲ. ಅವರನ್ನೆಲ್ಲ ಮತ್ತೆ ಒಟ್ಟಿಗೆ ಕೂರಿಸಿ ಪ್ಯಾರಿಸ್‌ನಲ್ಲಿ ಇನ್ನೊಂದು ವಿಶ್ವಸಮ್ಮೇಳನ ನಡೆಸಲು ವಿಶ್ವಸಂಸ್ಥೆ ಸಿದ್ಧತೆ ನಡೆಸತೊಡಗಿತು.

ಧರ್ಮಗುರುಗಳ ಘಂಟಾಘೋಷ

ಮೊದಲ ಎಚ್ಚರಿಕೆಯ ಗಂಟೆ ಮೊಳಗಿ 50+ ಐವತ್ತು ವರ್ಷಗಳೇ ಕಳೆದರೂ ವಿವಿಧ ದೇಶಗಳ ರಾಜಕೀಯ ಪಕ್ಷಗಳಿಗೆ ಭೂತಾಪದ ಚಿಂತೆ ಗಂಭೀರವಾಗಿ ತಟ್ಟಿದಂತಿಲ್ಲ. ಅವು ಮತದಾರರನ್ನು ಒಲಿಸಿಕೊಳ್ಳಲು ಇನ್ನಷ್ಟು ಮತ್ತಷ್ಟು ಅಭಿವೃದ್ಧಿ ಸೂತ್ರಗಳನ್ನು ಹೆಣೆಯುತ್ತ, ಕಾರ್ಪೊರೇಟ್ ಕಂಪೆನಿಗಳು ಹೇಳಿದಂತೆಲ್ಲ ಹೇರಳ ಫಾಸಿಲ್ ಇಂಧನಗಳನ್ನು ವ್ಯಯಿಸುತ್ತ ತಂತಮ್ಮ ಮುಂದಿನ ಚುನಾವಣೆಯವರೆಗೆ ಮಾತ್ರ ಗಮನವಿಟ್ಟಿದ್ದು ಪೃಥ್ವಿಯ ಗಮನಕ್ಕೂ ಬಂದಿರಬೇಕು. ವಿಜ್ಞಾನಿಗಳಿಂದ ಹೇಳಿಸಿದ್ದಂತೂ ನಾಟಲಿಲ್ಲ. ಪ್ರಭಾವೀ ಧಾರ್ಮಿಕ ಮುಖಂಡರ ಮೂಲಕ ಹೇಳಿಸಿದರೆ ಹೇಗೆಂದು ಪೃಥ್ವಿ ಯೋಚಿಸಿರಬೇಕು. ಜಗತ್ತಿನ ಬಹುಸಂಖ್ಯಾತ ಹಾಗೂ ಬಲುಶಕ್ತಿವಂತ ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ 2015ರಲ್ಲಿ ಇಡೀ ತಮ್ಮ ಅನುಯಾಯಿಗಳಿಗೆ ಒಂದು ಸುದೀರ್ಘ ಸುತ್ತೋಲೆಯನ್ನು ಹದಿನಾರು ಭಾಷೆಗಳಲ್ಲಿ ಹೊರಡಿಸಿದರು. ‘‘ನಮ್ಮೆಲ್ಲ ಮನುಜಕುಲಕ್ಕೆ ಮಾತಾಸ್ವರೂಪಿಣಿಯಾದ ಈ ಭೂದೇವಿ ನಲುಗುತ್ತಿದ್ದಾಳೆ. ಅವಳ ಅತಿಯಾದ ಶೋಷಣೆಯಾಗುತ್ತಿದೆ. ದೇವರ ಇಚ್ಛೆಗೆ ವಿರುದ್ಧವಾಗಿ ಅಸಮಾನತೆ ಮತ್ತು ಬಡವರ ಸಂಕಟಗಳೂ ಹೆಚ್ಚುತ್ತಾ ಹೋಗಿ ಮನುಕುಲವೇ ಧ್ವಂಸವಾಗುವ ಹಂತಕ್ಕೆ ಬಂದಿದೆ’’ ಎಂದು ಹೇಳಿದರು. ಲಭ್ಯವಿರುವ ಎಲ್ಲ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನೂ ಮುಂದಿಟ್ಟು, ಪೃಥ್ವಿಯನ್ನು ರಕ್ಷಿಸಲೇಬೇಕಾದ ಜರೂರತ್ತನ್ನು ಆರು ಅಧ್ಯಾಯಗಳಲ್ಲಿ ಒತ್ತಿ ಹೇಳಿ ಒಂದು ಪುಸ್ತಕವನ್ನೇ ಹೊರಡಿಸಿದರು. ಜಗತ್ತಿನ ಬಹುತೇಕ ಎಲ್ಲ ಶ್ರೀಮಂತ ದೇಶಗಳ ಕ್ರಿಶ್ಚಿಯನ್ ಭಕ್ತರಿಗೆ ಧರ್ಮಗುರುಗಳ ಸಂದೇಶವನ್ನು ತಲುಪಿಸುವ ವ್ಯವಸ್ಥೆಯೂ ಆಯಿತು. ಆಫ್ರಿಕದ ಬಡ ದೇಶಗಳಿಗೂ ಪೋಪ್ ಸಂದೇಶ ತಲುಪಿತು. ತನ್ನ ಮೂಲಕ ಮಾತೃಸಮಾನ ಈ ಭೂಮಿಯೇ ಎಚ್ಚರಿಕೆ ನೀಡುತ್ತದೆ ಎಂಬ ಮಾತನ್ನು ಸೇರಿಸಲು ಪೋಪ್ ಮರೆಯಲಿಲ್ಲ.

ಫಾಸಿಲ್ ಇಂಧನಗಳನ್ನು ಮೇಲೆತ್ತಿಯೇ ಧನಿಕರಾದ ಶತಕೋಟ್ಯಧೀಶರ ಪಟ್ಟಿಯಲ್ಲಿ ಕ್ರಿಶ್ಚಿಯನ್ನರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪೃಥ್ವಿ ಮಾತೆಯ ಕೂಗು ಧರ್ಮಗುರುಗಳ ಮೂಲಕ ಕೇಳಿಸಬಹುದೆಂಬ ಆಸೆ ಆಸೆಯಾಗಿಯೇ ಉಳಿಯಿತು. ಪ್ಯಾರಿಸ್‌ನಲ್ಲಿ ಇನ್ನೊಂದು ಪ್ರಮುಖ ಜಾಗತಿಕ ಸಮ್ಮೇಳನ ಸೇರಿತು. ಅಲ್ಲಿ ನೆರೆದ ರಾಜಕೀಯ ಮುತ್ಸದ್ದಿಗಳು ತಮತಮಗೆ ತೋಚಿದಂತೆ ಸ್ವಯಂ ಇಚ್ಛೆಯಿಂದ ಫಾಸಿಲ್ ಇಂಧನಗಳ ಬಳಕೆಯಲ್ಲಿ ಕಡಿತ ಮಾಡುವುದಾಗಿ ಘೋಷಿಸಿದರು ನಿಜ. ಅಲ್ಲಿ ಇಲ್ಲಿ ಸೌರಶಕ್ತಿ, ಗಾಳಿಶಕ್ತಿಯಂತಹ ಬದಲೀ ಸುರಕ್ಷಿತ ಶಕ್ತಿಮೂಲಗಳನ್ನು ರೂಢಿಬದ್ಧಗೊಳಿಸುವ ಅಷ್ಟಿಷ್ಟು ಪ್ರಯತ್ನಗಳು ನಡೆದುವಾದರೂ ಫಾಸಿಲ್ ಇಂಧನಗಳ ಗಣಿಗಾರಿಕೆ ತುಸುವೂ ಕಡಿಮೆಯಾಗಲಿಲ್ಲ. ಸರ್ವಶಕ್ತ ಅಮೆರಿಕ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್ ಮಹಾಶಯನಂತೂ ತಾಪಮಾನ ಏರಿಕೆಯೇ ಸುಳ್ಳೆಂದು ಘೋಷಿಸಿ, ಪ್ಯಾರಿಸ್ ಒಪ್ಪಂದದಿಂದ ಹೊರಕ್ಕೆ ನಡೆದದ್ದೂ ಆಯಿತು. ಟ್ರಂಪ್ ತೈಲಕಂಪೆನಿಗಳ ಆಟದ ಬೊಂಬೆಯಾಗಿ ಮೆರೆಯುತ್ತಿರುವುದು ಎಲ್ಲರ ಗಮನಕ್ಕೂ ಬಂತು. ಪೃಥ್ವಿಯಾದರೂ ಏನು ಮಾಡೀತು?

ಅಮ್ಮ ಎಚ್ಚರಿಸಿದರೆ ಅತ್ತ ಮಕ್ಕಳ ಲಕ್ಷ ಹೋಗುವುದು ಕಮ್ಮಿ. ಮಗುವೇ ಎಚ್ಚರಿಸಿದರೆ?

ಹದಿಹುಡುಗಿಯ ರಂಗಪ್ರವೇಶ

ಸ್ವೀಡನ್‌ನ ಗ್ರೇಟಾ ಥನ್ಬರ್ಗ್ ಎಂಬ ಬಾಲೆಯ ಮೂಲಕ ಭೂಮಿ ಅದನ್ನೂ ಯತ್ನಿಸಿತು. ಈ ಹೈಸ್ಕೂಲ್ ಹುಡುಗಿ ಒಬ್ಬಂಟಿಯಾಗಿ ಪೃಥ್ವಿರಕ್ಷಣೆಗಾಗಿ ಸ್ವೀಡನ್‌ನ ಸಂಸತ್ ಭವನದ ಎದುರು ಧರಣಿ ಕೂತು ಸುದ್ದಿ ಮಾಡಿದಳು.‘‘ನಮ್ಮ ಭವಿಷ್ಯದ ಮೇಲೆ ಈ ಜಗನ್ನಾಯಕರು ಕಕ್ಕ ಮಾಡುತ್ತಿದ್ದಾರೆ!’’ ಎಂದು ಅವಳು ಕೂಗಿ ಕೂಗಿ ಹೇಳಿದ್ದಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ನಾನಾ ದೇಶಗಳಲ್ಲಿ ಬೀದಿಗೆ ಬಂದರು. ಬ್ರಿಟನ್, ಫ್ರಾನ್ಸ್, ಜರ್ಮನಿ, ಐರೋಪ್ಯ ಸಂಘಟನೆಗಳ ಮುಖ್ಯಸ್ಥರು ತಮ್ಮ ಸಂಸತ್ತಿಗೆ ಅವಳನ್ನು ಕರೆಸಿ ಹಿರಿಯರಿಗೆ ಪಾಠ ಹೇಳಿಸಿದರು. ವಿಶ್ವಸಂಸ್ಥೆಯೂ 2019ರ ಮಹಾಧಿವೇಶನಕ್ಕೆ ಅವಳನ್ನು ಕರೆಸಿತು.ವಿಶ್ವನಾಯಕರಿಗೆ ಅವಳ ಮೂಲಕ ಛೀಮಾರಿ ಹಾಕಿಸಿತು.

ಮನುಕುಲಕ್ಕೆ ಆ ಮಗುವಿನ ಚೀತ್ಕಾರ, ಛೀಮಾರಿ ತಟ್ಟಿತೆ? ಭೂಮಿಯ ಸಂಕಟಗಳ ಕುರಿತು ಕಲರವ ತುಸು ಹೆಚ್ಚಾಯಿತು.ಮಾಧ್ಯಮಗಳಲ್ಲಿ ಮಾತುಕತೆ ಇಮ್ಮಡಿಯಾಯಿತು. ಬಿಸಿ ತುಸು ಜಾಸ್ತಿಯೇ ತಟ್ಟುತ್ತಿತ್ತೇನೊ ಆದರೆ ಕೊರೋನ ವಕ್ಕರಿಸಿತು.ರಾಷ್ಟ್ರಗಳು ತಾಪಮಾನ ಏರಿಕೆಯನ್ನು ಮರೆತೇಬಿಡುವಷ್ಟು ದೊಡ್ಡ ಪ್ರಮಾಣದಲ್ಲಿ ಔಷಧ ಕಂಪೆನಿಗಳು ಮತ್ತು ಮೊಬೈಲ್ ಕಂಪೆನಿಗಳು ಹುಯಿಲೆಬ್ಬಿಸಿ ಎಲ್ಲರನ್ನೂ ಭಯಸಾಗರದಲ್ಲಿ ಅದ್ದಿದವು. ಜನರೆಲ್ಲ ಗೃಹಬಂಧಿಗಳಾಗಿ ಟಿವಿಯಲ್ಲಿ ಕೋವಿಡ್ ಅಂಕಿಸಂಖ್ಯೆಗಳ ಏರಿಕೆಯನ್ನು ನೋಡುತ್ತಾ ಕಂಗಾಲಾಗಿ, ಮಕ್ಕಳಿಗೆ ಆನ್‌ಲೈನ್ ಪಾಠ ಹೇಳಿಸತೊಡಗಿದರು. ಗ್ರೇಟಾ ಸೇರಿದಂತೆ ಯುವ ಪೀಳಿಗೆಯ ಧ್ವನಿ ಅಡಗಿತು.

ಈಗ ಭೂಮಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಪಾಯದ ಸಂಕೇತಗಳನ್ನು ರವಾನಿಸತೊಡಗಿತು.ಈ ನಡುವೆ ಭೂಮಿಯ ಪರವಾಗಿ ಪಂಚಭೂತಗಳು ಸಿಡಿದೆದ್ದು ಅಲ್ಲಲ್ಲಿ ಇಲ್ಲಿಲ್ಲಿ ಬೆಂಕಿ, ಜಡಿಮಳೆ, ಬಿರುಗಾಳಿ, ಹಿಮಕುಸಿತ, ಧೂಳುಮಾರುತ, ಬರಗಾಲದಂತಹ ಪ್ರಕರಣ ಹೆಚ್ಚತೊಡಗಿತು. ಐಪಿಸಿಸಿಯ ಆರನೇ ವರದಿ ಹಿಂದೆಂದಿಗಿಂತ ಖಾರವಾಗಿ ಹೊರಬಂತು. ಇದು- ಕೆಂಪು ಸಂಕೇತ ಎಂದು ಇನ್ನೊಂದಿಷ್ಟು ಎಚ್ಚರಿಕೆಯ ಗಂಟೆಗಳು ಮೊಳಗಿದವು. ಸರಕಾರಿ ವಕ್ತಾರರು ಬಿಸಿಭೂಮಿ ಕುರಿತು ನೀಡುವ ಬೀಸುಹೇಳಿಕೆಗಳ ಆವರ್ತನ ಸಂಖ್ಯೆ ತುಸು ಜಾಸ್ತಿಯಾಯಿತು ಎಂಬುದನ್ನು ಬಿಟ್ಟರೆ ಮತ್ತೇನೂ ವಿಶೇಷ ಜರುಗಲಿಲ್ಲ. ದುರಂತಗಳಿಗೆ ಪರಿಹಾರ ನೀಡುವ ಕಾರ್ಯಕ್ರಮಗಳು ತುಸು ಚುರುಕಾದುದಂತೂ ಹೌದು. ಆದರೂ ಮುಂಬರುವ ಗ್ಲಾಸ್ಗೊ ವಿಶ್ವಮೇಳದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕೆಂದು ಯಾವ ಭೂಪತಿಯೂ ಕರೆ ನೀಡಲಿಲ್ಲ.

ಅದಕ್ಕೇ ಈಗ ಲೇಟೆಸ್ಟ್ ಉಪಾಯ- ಏನೆಂದರೆ, ಇದೇ ಡೈನೊಸಾರ್ ಅವತಾರ. ಐದಾರು ಕೋಟಿ ವರ್ಷಗಳ ಹಿಂದೆ ಅಂತಹ ವಿಶ್ವವ್ಯಾಪಿ ಬಲಾಢ್ಯ ಜೀವಸಂಕುಲವೊಂದು ಹೇಳ ಹೆಸರಿಲ್ಲದೆ ನಿರ್ನಾಮವಾಗಿ ಹೋಗಿದ್ದನ್ನು ಮತ್ತೆ ನೆನಪಿಸಿದರೆ ಈ ಮನುಷ್ಯರು ಎಚ್ಚೆತ್ತುಕೊಂಡಾರೆಯೇ?

ವಾಸ್ತವ ಏನೆಂಬುದು ನಮಗೂ ಗೊತ್ತು. ವಿಶ್ವಸಂಸ್ಥೆಯ ಸಭಾಂಗಣಕ್ಕೆ ಇದೀಗ ಡೈನೊಸಾರ್ ಜೀವಂತ ಬಂದಿದ್ದು, ಅದನ್ನು ನೋಡಿ ವಿಶ್ವನಾಯಕರು ಹಾ ಹೂ ಎಂದು ಕಂಪಿಸಿದ್ದು ಎಲ್ಲವೂ ನಾಟಕ ಎಂಬುದು ಎಲ್ಲರಿಗೂ ಗೊತ್ತು. ಆದರೂ ಈ ಸಂಕೇತದ ಹಿಂದೆ ಬೇರೇನೋ ಅರ್ಥವಿದೆ. ಈ ದೈತ್ಯಜೀವಿಗಳು ಹಿರಿಯರ ಪಾಲಿಗೆ ಪಳೆಯುಳಿಕೆಗಳೇ ಆದರೂ ಎಳೆಯರ ಗುಂಡಿಗೆಯನ್ನು ಡವಗುಡಿಸುತ್ತವೆ; ಯುವಜನರ ಕಲ್ಪನೆಗಳಿಗೆ ರೆಕ್ಕೆಪುಕ್ಕ ಕೊಡುತ್ತವೆ.

ಯುವಶಕ್ತಿಗೆ ರಣವೀಳ್ಯ

ಭೂಮಿಗೆ ಬಂದ ಸಂಕಟವನ್ನು ತಗ್ಗಿಸಲೆಂದು ನಡೆಯುವ ವಿಶ್ವಮಟ್ಟದ ಒಪ್ಪಂದಗಳಲ್ಲಿ ಈ ನಾಯಕ ಗಣಗಳು ಅದೇನೆ ಸಹಿ ಎಳೆದು ಬಂದರೂ, ಭೂಮಿಯ ಸಂರಕ್ಷಣೆಯ ಅಸಲಿ ಕೆಲಸ ಯುವಜನರಿಂದ ಮಾತ್ರ ಸಾಧ್ಯ. ಇಂದಿನ ಮಾಹಿತಿ ಕ್ರಾಂತಿಯ ಯುಗದಲ್ಲಿ ಭೂಮಿಯ ಭವಿಷ್ಯವನ್ನು ಬದಲಿಸುವ, ಮನುಕುಲವನ್ನು ಹೊಸ ಹಾದಿಯತ್ತ ತಿರುಗಿಸುವ ಕೆಲಸವನ್ನು ಯುವಜನರೇ ಕೈಗೆತ್ತಿಕೊಳ್ಳಬೇಕು. ಅದು ವಾಯುಮಂಡಲದಲ್ಲಿ ಮಡುಗಟ್ಟಿರುವ ಕಾರ್ಬನ್‌ನನ್ನು ಹೀರಿ ತೆಗೆಯುವ ಹೊಸ ತಂತ್ರ ಇರಬಹುದು; ಅಥವಾ ಕಾರ್ಬನ್ ವಿಸರ್ಜನೆಯನ್ನು ಪ್ರತಿಬಂಧಿಸುವ ಹೊಸ ಸಂಶೋಧನೆ ಇರಬಹುದು; ಇಲ್ಲವೇ ಪಶ್ಚಿಮದ ಸಿರಿವಂತ ದೇಶಗಳಿಂದ ಇದಕ್ಕೆಂದೇ ಹರಿದು ಬರುವ ಡಾಲರ್‌ಗಳನ್ನು ಸೆಳೆದು ಸದ್ಬಳಕೆ ಮಾಡಬಲ್ಲ ಆರ್ಥಿಕ ಕೌಶಲ ಇರಬಹುದು; ಅಥವಾ ಶಕ್ತಿಬಳಕೆಯನ್ನು ತಗ್ಗಿಸಬಲ್ಲ ಹೊಸ ಯಂತ್ರೋಪಕರಣಗಳನ್ನು ರೂಪಿಸುವ ಕೆಲಸ ಇರಬಹುದು; ಜೊತೆಗೆ ಗಿಡಮರಗಳನ್ನು ತ್ವರಿತ ಬೆಳೆಸಬಲ್ಲ ಹೊಸ ಭೂಸೇನೆಯನ್ನು ಕಟ್ಟಿ ನಿಲ್ಲಿಸುವ ಸೋಶಿಯಲ್ ಇಂಜಿನಿಯರಿಂಗ್ ಕೆಲಸ ಇರಬಹುದು ಅಥವಾ ಭೂತಾಪದ ಬಗ್ಗೆ ಜನಜಾಗೃತಿ ಮೂಡಿಸಲೆಂದು ಹೊಸ ಮಾಧ್ಯಮಮಾರ್ಗದ ನಿರ್ಮಾಣವೇ ಇರಬಹುದು-ಎಲ್ಲವೂ ಯುವಜನರಿಂದಲೇ ಆಗಬೇಕು. ಇಂದು ನಾವು ಉರಿಸುವ ಫಾಸಿಲ್ ಇಂಧನಗಳೆಲ್ಲ ಡೈನೊಸಾರ್‌ಗಳ ಯುಗದಲ್ಲೇ ಭೂಮಿಯೊಳಗೆ ಶೇಖರವಾಗಿದ್ದೆಂದು ವಿಜ್ಞಾನಿಗಳು ಹೇಳುತ್ತಾರೆ.ಅವು ತನ್ನ ಒಡಲಲ್ಲಿದ್ದರೆ ಕ್ಷೇಮವೆಂದು ಭೂಮಿಯೇ ಅವನ್ನೆಲ್ಲ ಆ ಯುಗದಲ್ಲೇ ಭೂಗತ ಮಾಡಿಟ್ಟಿದ್ದರೂ ಇರಬಹುದು. ಆಧುನಿಕ ಮನುಷ್ಯ ನೆಲದಾಳದಿಂದ ಅದೇ ಇಂಧನಗಳನ್ನು ಮೇಲೆತ್ತಬಲ್ಲ ದೈತ್ಯಯಂತ್ರಗಳನ್ನು ಸೃಷ್ಟಿಸಿ, ಡೈನೊಸಾರ್ ಮಾದರಿಯ ದುರಂತದತ್ತ ಹೆಜ್ಜೆ ಹಾಕುತ್ತಿರುವಾಗ ಗತಕಾಲದ ಆ ದೈತ್ಯಜೀವಿಯೇ ಬಂದು ಹೊಸಯುಗದ ಪ್ರಾರಂಭಕ್ಕೆ ಪ್ರೇರಣೆ ನೀಡುತ್ತಿದ್ದರೆ ಅದೇ ಒಂದು ನೆಪವಾಗಿ ಭವಿಷ್ಯದ ಮನುಕುಲವನ್ನು ಸುರಕ್ಷಿತ ಹಾದಿಯತ್ತ ತಿರುಗಿಸುವ ಪ್ರಯತ್ನ ಇಂದು ನಡೆಯಬಾರದೇಕೆ?

ಇಂದು ನಾವು ಉರಿಸುವ ಫಾಸಿಲ್ ಇಂಧನಗಳೆಲ್ಲ ಡೈನೊಸಾರ್‌ಗಳ ಯುಗದಲ್ಲೇ ಭೂಮಿಯೊಳಗೆ ಶೇಖರವಾಗಿದ್ದೆಂದು ವಿಜ್ಞಾನಿಗಳು ಹೇಳುತ್ತಾರೆ. ಅವು ತನ್ನ ಒಡಲಲ್ಲಿದ್ದರೇ ಕ್ಷೇಮವೆಂದು ಭೂಮಿಯೇ ಅವನ್ನೆಲ್ಲ ಆ ಯುಗದಲ್ಲೇ ಭೂಗತ ಮಾಡಿಟ್ಟಿದ್ದರೂ ಇರಬಹುದು. ಆಧುನಿಕ ಮನುಷ್ಯ ನೆಲದಾಳದಿಂದ ಅದೇ ಇಂಧನಗಳನ್ನು ಮೇಲೆತ್ತಬಲ್ಲ ದೈತ್ಯಯಂತ್ರಗಳನ್ನು ಸೃಷ್ಟಿಸಿ, ಡೈನೊಸಾರ್ ಮಾದರಿಯ ದುರಂತದತ್ತ ಹೆಜ್ಜೆ ಹಾಕುತ್ತಿರುವಾಗ ಗತಕಾಲದ ಆ ದೈತ್ಯಜೀವಿಯೇ ಬಂದು ಹೊಸಯುಗದ ಪ್ರಾರಂಭಕ್ಕೆ ಪ್ರೇರಣೆ ನೀಡುತ್ತಿದ್ದರೆ ಅದೇ ಒಂದು ನೆಪವಾಗಿ ಭವಿಷ್ಯದ ಮನುಕುಲವನ್ನು ಸುರಕ್ಷಿತ ಹಾದಿಯತ್ತ ತಿರುಗಿಸುವ ಪ್ರಯತ್ನ ಇಂದು ನಡೆಯಬಾರದೇಕೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)