varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

55 ಕ್ಯಾಮರಾಗಳು ಮತ್ತು 0 ಪತ್ರಿಕಾಗೋಷ್ಠಿ

ವಾರ್ತಾ ಭಾರತಿ : 30 Dec, 2021
ರವೀಶ್ ಕುಮಾರ್

ಪ್ರಧಾನ ಮಂತ್ರಿ ಪತ್ರಿಕಾಗೋಷ್ಠಿ ಕರೆಯದೆ ನನಗೆ ಅವರಲ್ಲಿ ಪ್ರಶ್ನೆ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮೂಲಕ ಒಕ್ಕೂಟ ಸರಕಾರಕ್ಕೂ ಅದರ ಭಟ್ಟಂಗಿತನ ಮಾಡುವ ಟಿವಿ ಚಾನೆಲ್‌ಗಳಿಗೂ ಒಟ್ಟಿಗೇ ಕುಟುಕುವ ರವೀಶ್ ಕುಮಾರ್, ಪ್ರಶ್ನೆ ಕೇಳುವ ಪತ್ರಕರ್ತ ಈ ದೇಶದಲ್ಲಿ ಇನ್ನೂ ಉಳಿದಿದ್ದಾರೆ ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಗಿ ಕಾಣುತ್ತಾರೆ. ನಾನು ಝೀರೋ ಟಿಆರ್‌ಪಿ ಆ್ಯಂಕರ್ ಎನ್ನುವ ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರ ಪ್ರೈಮ್ ಟೈಮ್ ಕಾರ್ಯಕ್ರಮ ದೇಶದ ಅತ್ಯಂತ ಪ್ರಸಿದ್ಧ ಟಿವಿ ಕಾರ್ಯಕ್ರಮಗಳಲ್ಲಿ ಒಂದು. ಅವರು ಹೇಳುವ ಸತ್ಯಗಳನ್ನು ಹೇಳುವ, ಅವರು ಕೇಳುವ ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಈ ದಿನಗಳಲ್ಲಿ ಅತ್ಯಂತ ಅಪರೂಪ. ಪತ್ರಿಕೋದ್ಯಮದಲ್ಲಿ ಅವರ ಅನುಪಮ ಸೇವೆಗಾಗಿ 2019ರಲ್ಲಿ ಅವರಿಗೆ ಪ್ರತಿಷ್ಠಿತ ರೇಮೊನ್ ಮ್ಯಾಗ್ಸೇಸೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರವೀಶ್ ಕುಮಾರ್

ಕನ್ನಡಕ್ಕೆ: ನೂರ್ ಜಹಾನ್ ಅಬೂಬಕರ್

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಸಂದರ್ಭ ಎರಡು ದಿನ ಹಗಲು ರಾತ್ರಿ 55 ಕ್ಯಾಮರಾಗಳು ಪ್ರಧಾನಮಂತ್ರಿಯನ್ನು ಕವರ್ ಮಾಡುತ್ತಿದ್ದವು. ಪ್ರಜಾಪ್ರಭುತ್ವವನ್ನು ಹೇಗೆ ಜನರಿಂದ, ಜನರಿಗಾಗಿ, ಜನರ ಆಡಳಿತ ಎಂದು ಹೇಳಲಾಗುತ್ತದೆಯೋ ಹಾಗೆಯೇ ನರೇಂದ್ರ ಮೋದಿಯವರು ಕ್ಯಾಮರಾದಿಂದ, ಕ್ಯಾಮರಾಕ್ಕಾಗಿ ಹಾಗೂ ಕ್ಯಾಮರಾಗಳ ಪ್ರಧಾನ ಮಂತ್ರಿಯಂತೆ ಕಾಣುತ್ತಿದ್ದರು. ಎರಡು ದಿನಗಳ ಈ ಕಾರ್ಯಕ್ರಮಕ್ಕಾಗಿ ಹಿಂದಿ ದಿನಪತ್ರಿಕೆಗಳಿಗೆ ಹಲವು ಬಾರಿ ಪೂರ್ಣ ಪುಟಗಳ ಜಾಹೀರಾತುಗಳನ್ನು ನೀಡಲಾಗಿತ್ತು. ಆ ಜಾಹೀರಾತುಗಳಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಂತೆ ಕಾಣುತ್ತಿದ್ದುದು ಕಡಿಮೆ. ತನ್ನನ್ನು ಯಾವುದೋ ಋಷಿ ಮುನಿಗಳ ವರ್ಚಸ್ಸಿನಲ್ಲಿ ತೋರಿಸಿಕೊಂಡು ಧಾರ್ಮಿಕ ನಾಯಕನ ಪೋಸಿನಲ್ಲಿ ನಿಂತಂತೆ ಅವರು ಕಾಣುತ್ತಿದ್ದರು. ಈ ಚಿತ್ರಗಳನ್ನು ನೀವು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಿಲ್ಲದೆ ನೋಡಲು ಸಾಧ್ಯವಿಲ್ಲ. ಹಾಗೆ ನೋಡುವಾಗಲೇ ಪ್ರಧಾನ ಮಂತ್ರಿಯವರು ಮತಗಳಿಗಾಗಿಯೂ ಈ ರೀತಿಯ ರೂಪ ಧಾರಣೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. 2019ರ ಚುನಾವಣೆ ಸಂದರ್ಭದಲ್ಲೂ ಹಠಾತ್ತನೆ ಕೈಲಾಸ ಪರ್ವತಕ್ಕೆ ಹೋಗಿ ಅಲ್ಲಿ ಕ್ಯಾಮರಾಗಳು ಅವರನ್ನು ತಪಸ್ಸಿಗೆ ಕುಳಿತ ಭಂಗಿಯಲ್ಲಿ ಸೆರೆ ಹಿಡಿದಿದ್ದು ಇದೇ ರೀತಿ. ಜನರು ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ಗೆ ವೀಡಿಯೊ ಮಾಡಿದ ಶೈಲಿಯಲ್ಲಿ ಪ್ರಧಾನಿ ಕ್ಯಾಮರಾಗಳ ಮುಂದೆ ಧ್ಯಾನ ಮಾಡಿದ್ದರು. ಒಂದು ಕಡೆ ಮತದಾನ ಆಗುತ್ತಿದ್ದರೆ, ಇನ್ನೊಂದು ಕಡೆ ಮೀಡಿಯಾಗಳು ಗಂಟೆಗಟ್ಟಲೆ ಈ ಚಿತ್ರವನ್ನು ಪ್ರಸಾರ ಮಾಡುತ್ತಿದ್ದವು. ವಿಶ್ವನಾಥ ಕಾರಿಡಾರ್‌ನಲ್ಲೂ ಕ್ಯಾಮರಾ ಬಳಸಿಕೊಂಡು ಇದೇ ರೀತಿ ಮಾಡುವ ಪ್ರಯತ್ನ ನಡೆಯಿತು.

ಆ 55 ಕ್ಯಾಮರಾಗಳ ಮುಂದೆ ನಡೆಯುತ್ತಾ, ಹಾದು ಹೋಗುತ್ತಿದ್ದ ಪ್ರಧಾನಿಯವರನ್ನು ನೋಡಿದರೆ ಅವರು ಮೀಡಿಯಾಗಳಿಂದ ದೂರ ಇರಬಯಸುತ್ತಾರೆ ಎಂದು ಯಾರೂ ಹೇಳಲಾರರು. ಇದೇ ಅವರ ಚಮತ್ಕಾರ. ಅವರು ಸದಾ ಕ್ಯಾಮರಾಗಳ ಮುಂದೆಯೇ ಇರುತ್ತಾರೆ. ಆದರೆ ಪ್ರಶ್ನೆಗಳ ಮುಂದಲ್ಲ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ನಡೆಸಿಲ್ಲ. ಆದರೂ ಅವರು ಹಗಲು ರಾತ್ರಿ ಕ್ಯಾಮರಾಗಳ ಮೂಲಕ ಮೀಡಿಯಾಗಳಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದವರಂತೆ ಮಿಂಚುತ್ತಾರೆ ಎಂಬುದು ಈ ದೇಶದ ಜನರಿಗೆ ಗೊತ್ತಿದೆಯೇ? ಮೀಡಿಯಾಗಳಿಂದ ದೂರ ಇರುವ ರಾಜಕಾರಣಿ ಸಾಮಾನ್ಯವಾಗಿ ಕ್ಯಾಮರಾಗಳಿಂದಲೂ ದೂರ ಇರುತ್ತಾನೆ. ಆದರೆ ಪ್ರಧಾನ ಮಂತ್ರಿಗಳು ಹಾಗಲ್ಲ. ಅವರು ಕ್ಯಾಮರಾಗಳ ಎದುರು ನಡೆಯುವ ಪತ್ರಿಕಾ ಗೋಷ್ಠಿ, ಪ್ರಶ್ನೋತ್ತರದಿಂದ ದೂರ ಇರುತ್ತಾರೆ. ಆದರೆ ಸದಾ ಕ್ಯಾಮರಾಗಳ ಮುಂದೆಯೇ ಇರುತ್ತಾರೆ. ಇದರಿಂದ ನಮ್ಮ ಪ್ರಧಾನ ಮಂತ್ರಿ ಅವರು ಅದೆಷ್ಟು ಪಾರದರ್ಶಕ ವ್ಯಕ್ತಿತ್ವದವರು ಎಂಬಂತೆ ಕಾಣುತ್ತದೆ.

ನರೇಂದ್ರ ಮೋದಿಯವರು ಕ್ಯಾಮರಾಗಳ ಪಾರದರ್ಶಕತೆಯ ಅರ್ಥವನ್ನೇ ಬದಲಾಯಿಸಿಬಿಟ್ಟಿದ್ದಾರೆ. ಯಾವತ್ತೂ ದೇಶದೆದುರು ಯಾವುದಾದರೂ ಪ್ರಶ್ನೆ ಬಂದಾಗ ಅವರು ಆ ಪ್ರಶ್ನೆಗಳಿಗೆ ನೇರ ಉತ್ತರ ನೀಡುವುದಿಲ್ಲ. ಆಗ ಅವರು ಯಾವುದಾದರೂ ಮಂದಿರ ಅಥವಾ ಧಾರ್ಮಿಕ ಸ್ಥಳಕ್ಕೆ ಹೋಗಿಬಿಡುತ್ತಾರೆ. ಚುನಾವಣೆ ಬರುವಾಗ ಸಹಜವಾಗಿ ಜನರಿಗೂ ಪ್ರಧಾನಿ ಬಳಿ ಕೇಳಲು ಕೆಲವು ಪ್ರಶ್ನೆಗಳಿರುತ್ತವೆ. ಆದರೆ, ಆಗ ಪ್ರಧಾನಿ ಮಾತ್ರ ತಮ್ಮ ಭಾವ ಭಂಗಿ ಬದಲಾಯಿಸಿಕೊಂಡು ಬಿಡುತ್ತಾರೆ. ಇದಾದ ಕೂಡಲೇ ಮೀಡಿಯಾಗಳಲ್ಲಿ ಇದರ ಬಗ್ಗೆ ಚರ್ಚೆ ಆರಂಭವಾಗಿ ನರೇಂದ್ರ ಮೋದಿ ಠಾಗೋರರ ಹಾಗೆ ಕಾಣುತ್ತಿದ್ದಾರೆ ಅಥವಾ ಶಿವಾಜಿ ರೀತಿ ಕಾಣುತ್ತಿದ್ದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾಗಳಲ್ಲಿ ಈ ಬಗ್ಗೆಯೇ ಸುದೀರ್ಘ ಚರ್ಚೆ ಆರಂಭಿಸಿ ಜನರು ತಾವು ಪ್ರಧಾನ ಮಂತ್ರಿಯನ್ನು ನೋಡುತ್ತಿದ್ದೇವೆ ಎಂಬುದನ್ನೇ ಮರೆತು ಬಿಡುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ. ಅವರನ್ನು ಯಾರದೋ ಅವತಾರದಂತೆ ಬಿಂಬಿಸಲಾಗುತ್ತದೆ. ಸೋಷಿಯಲ್ ಮೀಡಿಯಾಗಳ ಚರ್ಚೆ ಹಾಗೂ ಚಿತ್ರಗಳಲ್ಲಿ ಪ್ರಧಾನ ಮಂತ್ರಿಯವರನ್ನು ಭಕ್ತ ಹಾಗೂ ಅವತಾರದ ಮಿಶ್ರಣವಾಗಿ ತೋರಿಸಲಾಗುತ್ತದೆ. ಹಲವು ರಾಜಕಾರಣಿಗಳು ಅವರ ಅವತಾರಗಳ ಬಗ್ಗೆ ಹೇಳಿಕೆಯನ್ನೂ ಕೊಡುತ್ತಾರೆ. ಭಾರತದ ಜನರು ಮುಗ್ಧರು. ತಮ್ಮ ಮನೆಯಲ್ಲೇ ಯಾರಾದರೂ ಉಪವಾಸ ಆಚರಿಸಿದರೆ ಅವರನ್ನು ಪವಿತ್ರ ಎಂದು ಪರಿಗಣಿಸಿ ಅವರಿಗೆ ವಿಶೇಷ ಆದರ, ಸತ್ಕಾರ ಮಾಡುತ್ತಾರೆ. ಅವರ ಕಾಲು ಮುಟ್ಟಿ ನಮಸ್ಕರಿಸಿ, ಅವರ ಕಾಲು ಒತ್ತಿ ಅದರಿಂದ ತಮಗೂ ಒಂದಿಷ್ಟು ಪುಣ್ಯ ಬರುತ್ತೆ ಎಂದು ನಂಬುತ್ತಾರೆ. ಎದುರಿಗೆ ಅರ್ಚಕರು ಬಂದರೆ ನಮಸ್ಕರಿಸಲು ಮರೆಯುವುದಿಲ್ಲ.

ನಮಸ್ತೆ ಮಾಡಿದ್ದರಿಂದ ಆ ಅರ್ಚಕರು ಆಶೀರ್ವಾದ ಮಾಡಿ ತನ್ನ ಸಮಸ್ಯೆಗಳು ಬಗೆಹರಿಯಬಹುದು, ಪಾಪ ಕಡಿಮೆಯಾಗಿ ಪುಣ್ಯ ಸಿಗಲಿ ಎಂಬ ಬಯಕೆಯೂ ಇರುತ್ತದೆ. ಜನರು ಅರ್ಚಕರನ್ನೇ ಈಶ್ವರನ ಮುಂದುವರಿದ ರೂಪದಂತೆ ಇಂದಿಗೂ ನೋಡುತ್ತಾರೆ ಎಂಬುದು ಪ್ರಧಾನ ಮಂತ್ರಿಗೆ ಗೊತ್ತಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಒಬ್ಬ ಅರ್ಚಕ ಬಂದ ಕೂಡಲೇ ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಪೂಜೆ ಮುಗಿದ ಮೇಲೆ ಆ ಅರ್ಚಕ ಅದೆಷ್ಟು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಮರೆತು ಬಿಡುವ ಜನ ಪೂಜೆ ನಡೆಯುತ್ತಿರುವಾಗ ಮಾತ್ರ ಅವರನ್ನೇ ಈಶ್ವರನ ಪ್ರತಿರೂಪವೆಂಬಂತೆ ಗೌರವಿಸಿ ಕಾಲಿಗೆ ಬೀಳುತ್ತಾರೆ. ದಾನ ದಕ್ಷಿಣೆ ಕೊಡುತ್ತಾರೆ. ಡಾ. ಅಂಬೇಡ್ಕರ್ ಅವರನ್ನು ಓದಿಕೊಂಡವರು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನರೇಂದ್ರ ಮೋದಿ ಈಗ ಇದನ್ನೇ ಮಾಡುತ್ತಿದ್ದಾರೆ. ಚುನಾವಣೆ ಬಂದ ಕೂಡಲೇ ಒಮ್ಮೆ ತಪಸ್ವಿ ಆದರೆ ಮತ್ತೊಮ್ಮೆ ಅರ್ಚಕರಾಗಿ ಜನರು ತನ್ನನ್ನು ನೋಡಿದ ಕೂಡಲೇ ಪ್ರಣಾಮ ಮಾಡುವ ಹಾಗೆ ಬದಲಾಗಿ ಬಿಡುತ್ತಾರೆ. ಆಗ ಅವರಲ್ಲಿ ಜನ ಪ್ರಶ್ನೆ ಕೇಳುವ ಬದಲು ಆಶೀರ್ವಾದ ಬೇಡಲು ಪ್ರಾರಂಭಿಸಲಿ ಎಂಬುದು ಇದರ ಉದ್ದೇಶ. ಚುನಾವಣೆಯ ಸಂದರ್ಭದಲ್ಲಿ ಜನರು ಪ್ರಧಾನ ಮಂತ್ರಿಯವರಲ್ಲಿ ಪ್ರಶ್ನೆ ಕೇಳಬಯಸುತ್ತಾರೆ. ಬೆಲೆಯೇರಿಕೆ ಬಗ್ಗೆ, ನಿರುದ್ಯೋಗದ ಬಗ್ಗೆ ಅವರು ಮಾತಾಡಲಿ ಎಂದು ಜನ ಬಯಸುತ್ತಾರೆ. ಆದರೆ ಪ್ರಧಾನಿ ಈ ಪ್ರಶ್ನೆಗಳ ಬಗ್ಗೆ ಮೌನವಾಗುತ್ತಾರೆ. ಬೆಲೆಯೇರಿಕೆ ಹಾಗೂ ನಿರುದ್ಯೋಗ ರಾಜಕೀಯದ ವಿಷಯವೇ ಅಲ್ಲ ಮತ್ತು ತಾವು ರಾಜಕಾರಣಿಯೇ ಅಲ್ಲ ಎಂಬಂತೆ ಅವರು ವರ್ತಿಸುತ್ತಾರೆ. ಆಗ ಅವರು ಅರ್ಚಕರಾಗಿ ಬಿಡುತ್ತಾರೆ. ಯಾವುದಾದರೂ ಮಂದಿರಕ್ಕೆ ಹೋಗುತ್ತಾರೆ. ಅಲ್ಲಿ ಕ್ಯಾಮರಾಗಳು ಅವರ ಪ್ರತಿಯೊಂದು ಹೆಜ್ಜೆಯನ್ನು ಸೆರೆ ಹಿಡಿಯುತ್ತವೆ. ಜನರಿಗೆ ಇವರು ಕೇವಲ ಪ್ರಧಾನ ಮಂತ್ರಿಯಲ್ಲ, ಬೇರೆ ಏನೋ ಕೂಡ ಆಗಿದ್ದಾರೆ ಎಂಬಂತಹ ಭಾವನೆ ಸೃಷ್ಟಿಸಲಾಗುತ್ತದೆ. ಸ್ವಲ್ಪ ಅರ್ಚಕ, ಸ್ವಲ್ಪ ಮಹಾಪುರುಷ ಎಂಬಂತಹ ಇಮೇಜ್ ತೋರಿಸಲಾಗುತ್ತದೆ.

ಕಾಶಿ ಕಾರಿಡಾರ್ ಕಾರ್ಯಕ್ರಮದಲ್ಲೂ ಪ್ರಧಾನ ಮಂತ್ರಿ ಇದನ್ನೇ ಮಾಡಿದರು. ಎರಡು ದಿನಗಳ ಕಾಲ ಕ್ಯಾಮರಾಗಳ ಮುಂದೆ ಅರ್ಚಕರಾಗಿ ಮತ್ತು ಪ್ರಧಾನ ಮಂತ್ರಿಯ ರೂಪದಲ್ಲಿ ಬಂದರು. ಅರ್ಚಕರ ರೂಪ ಸ್ವಲ್ಪ ಜಾಸ್ತಿಯಾಯಿತು ಎಂದು ಅನಿಸಿದರೆ ರಾತ್ರಿ ಹೊತ್ತು ಬನಾರಸ್‌ನ ಅಭಿವೃದ್ಧಿ ಪ್ರಗತಿ ಪರಿಶೀಲನೆ ಮಾಡಿ ಪ್ರಧಾನ ಮಂತ್ರಿಯೂ ಆಗಿಬಿಡುತ್ತಾರೆ. ಕಳೆದೊಂದು ವರ್ಷದಿಂದ ಭಾರತದ ಜನರು ಪ್ರತಿ ವಸ್ತುವಿಗೆ ಅದರ ಹಲವು ಪಟ್ಟು ಬೆಲೆ ತೆತ್ತು ಖರೀದಿಸುತ್ತಿದ್ದಾರೆ. ಅವರ ಸಂಪಾದನೆ ಕಡಿಮೆಯಾಗುತ್ತಿದೆ. ಬ್ಯಾಂಕ್‌ಗಳ ಬಡ್ಡಿ ದರ ಎಷ್ಟು ಕಡಿಮೆಯಾಗಿದೆಯೆಂದರೆ ಅದನ್ನು ನಂಬಿ ಬದುಕಲು ಅಸಾಧ್ಯವಾಗಿದೆ. ಆದರೂ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದೆ. ಜನರು 100 ರೂ. ತೆತ್ತು ಪೆಟ್ರೋಲ್ ಖರೀದಿಸುವಂತೆ ಮಾಡಲಾಯಿತು. ಕೊರೋನದಿಂದ ಸರಕಾರದ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಲಾಯಿತು.

ಅಭಿವೃದ್ಧಿ ಕೆಲಸ ಮತ್ತು ಲಸಿಕೆ ಅಭಿಯಾನ ಮುಂದುವರಿಸಲು ತೆರಿಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಅಂದರೆ ಸರಕಾರದ ಬಳಿ ದುಡ್ಡು ಇಲ್ಲವೆಂದಾದರೆ ಜನರ ಜೇಬಿಗೆ ಆಗಾಗ ಕೈ ಹಾಕಿ ದುಡ್ಡು ತೆಗೆದುಕೊಳ್ಳಲಾಗುತ್ತದೆ ಎಂದಾಯಿತು. ಹೀಗಿರುವಾಗ ಸರಕಾರ ತನ್ನ ಕಾರ್ಯಕ್ರಮಗಳಿಗೆ ಖರ್ಚು ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಬೇಡವೇ?

ನೀವು ಉತ್ತರ ಪ್ರದೇಶದಲ್ಲಿ ನಡೆಯುವ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಎಷ್ಟು ಭವ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. ಆ ಕಾರ್ಯಕ್ರಮಗಳಿಗೆ ಮಾಡಲಾಗುತ್ತಿರುವ ಖರ್ಚು ನೋಡಿ. ಒಂದೊಂದು ಕಾರ್ಯಕ್ರಮಗಳಿಗೂ ಹಲವು ಕೋಟಿ ರೂ. ಪುಡಿ ಮಾಡಲಾಗುತ್ತಿದೆ. ಭಾಷಣ ಆಲಿಸಲು ಜನರನ್ನು ಬಸ್‌ಗಳಲ್ಲಿ ತುಂಬಿ ತರಲಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಕಡಿಮೆ ಇರುತ್ತಾರೆ. ಸುತ್ತಮುತ್ತಲ ಸರಕಾರಿ ಸಿಬ್ಬಂದಿಯನ್ನು ಕರೆಯಲಾಗುತ್ತದೆ. ಸರಕಾರಿ ಯೋಜನೆಗಳ ಬಡ ಫಲಾನುಭವಿಗಳನ್ನು ಹಿಡಿದಿಡಿದು ಕರೆತರಲಾಗುತ್ತದೆ. ಇದಕ್ಕಾಗಿ ಪಡಿತರ ಅಂಗಡಿಯವರಿಂದ ಆರಂಭಿಸಿ ಗ್ರಾಮ ಪ್ರಧಾನರಿಗೆ ಟಾರ್ಗೆಟ್ ನೀಡಿ ಪ್ರಧಾನ ಮಂತ್ರಿಯ ಕಾರ್ಯಕ್ರಮಕ್ಕೆ ಇಷ್ಟು ಮಂದಿಯನ್ನು ತರಬೇಕು ಎಂದು ಹೇಳಲಾಗುತ್ತದೆ. ಈ ಎಲ್ಲ ವಿಷಯಗಳು ಉತ್ತರ ಪ್ರದೇಶದ ಪತ್ರಿಕೆಗಳಲ್ಲಿ ಬಂದಿವೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನಿಯ ಸರಕಾರಿ ಕಾರ್ಯಕ್ರಮಗಳಿಗೆ ತಗಲಿದ ಖರ್ಚು ಎಷ್ಟು ಎಂದು ಲೆಕ್ಕ ತೆಗೆದರೆ ಅದುವೇ ಹಲವು ಸಾವಿರ ಕೋಟಿ ರೂ. ಆಗಬಹುದು. ಈ ಕಾರ್ಯಕ್ರಮಗಳ ಖರ್ಚಿನ ಜೊತೆ ಜಾಹೀರಾತುಗಳ ಖರ್ಚಿನ ವಿವರವನ್ನು ಸೇರಿಸಬೇಕು. ಒಟ್ಟಾರೆಯಾಗಿ ದೇಶದ ಜನರು ಅತ್ಯಂತ ಸಾಮಾನ್ಯ ಜೀವನ ನಡೆಸಲು ಹೆಣಗುತ್ತಿರುವಾಗ, ಎರಡು ಹೊತ್ತಿನ ಊಟ ಹೊಂದಿಸಲು ಕಷ್ಟ ಪಡುತ್ತಿರುವಾಗ ದೇಶದ ಪ್ರಧಾನ ಮಂತ್ರಿ ಈ ರೀತಿ ಸರಕಾರಿ ಹಣವನ್ನು ಹುಡಿ ಹಾರಿಸುತ್ತಿರುವುದು ಶೋಭೆ ತರುವ ವಿಷಯವಲ್ಲ. ಅವರು ಕ್ಯಾಮರಾಗಳ ಎದುರು ಅರ್ಚಕರಾಗಬಹುದು. ಆದರೆ ಅದೇ ಕ್ಯಾಮರಾಗಳು ಅವರು ಯಾವುದೇ ಅರ್ಚಕರಲ್ಲ ಎಂಬುದನ್ನು ತೋರಿಸುತ್ತಿವೆ. ಇವರಿಗೆ ಜನರ ದುಡ್ಡಲ್ಲಿ ರಾಜ ವೈಭವ ತೋರಿಸುವ ಚಪಲ ಹತ್ತಿಕೊಂಡಿದೆ.

ಮೀಡಿಯಾಗಳ ಮೂಲಕ ಈ ದೇಶದ ಜನರೊಂದಿಗೆ ಏನು ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಹಳ ಸಮಯಬೇಕಾಗುತ್ತದೆ. ಜನರು ಸ್ವಲ್ಪ ಅರಿತುಕೊಳ್ಳುವಾಗ ಪ್ರಧಾನಿ ಕ್ಯಾಮರಾಗಳ ಮುಂದೆ ಬೇರೆಯೇ ರೂಪದಲ್ಲಿ ಪ್ರತ್ಯಕ್ಷರಾಗಿಬಿಡುತ್ತಾರೆ. ಪ್ರತಿ ಬಾರಿ ತನ್ನನ್ನೇ ಎಲ್ಲರಿಗಿಂತ ಮುಂದಿಡುತ್ತಾರೆ. ಸ್ವತಃ ತಾವೇ ಸುದ್ದಿಯಾಗಿಬಿಡುತ್ತಾರೆ. ಆದರೆ ಆ ಸುದ್ದಿಯಲ್ಲಿ ಸುದ್ದಿಯಾಗುವ ಯಾವುದೇ ಅಂಶ ಇರುವುದಿಲ್ಲ. ಅವರ ಉಪಸ್ಥಿತಿಯಲ್ಲಿ ಮಾಧ್ಯಮಗಳು ಗುಲಾಮರಂತೆ ಬರೆಯಲು, ಮಾತಾಡಲು ಶುರು ಮಾಡುತ್ತವೆ.

ಕಾಶಿ ಕಾರಿಡಾರ್ ಸಂದರ್ಭದಲ್ಲಿ ಹಿಂದಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ನಾಚಿಕೆಗೇಡು. ಬಾಬಾ ವಿಶ್ವನಾಥನ ಹೆಸರೇ ಸಾಕಿತ್ತು. ಆದರೆ ಈಗ ಪ್ರಧಾನ ಮಂತ್ರಿಯವರು ಅವರ ಹೆಸರಿನ ಜೊತೆ ಕಾರಿಡಾರ್ ಸೇರಿಸಿದ್ದಾರೆ. ಎಲ್ಲ ವಿಷಯಗಳಿಗೂ ಪ್ರಾಸ ಮಾಡುವ ಅಭ್ಯಾಸ ಇರುವುದರಿಂದ ನಿರಾಕಾರ ರೂಪದಲ್ಲಿ ಜನಸಾಮಾನ್ಯರ ಮನಸ್ಸಲ್ಲಿ ಬೇರೂರಿದ್ದ ಆ ಮಂದಿರ ಈಗ ಕಾಶಿ ಕಾರಿಡಾರ್ ಆಗಿಬಿಟ್ಟಿದೆ. ಯಾವ ಮಂದಿರವನ್ನು ವಿಸ್ತರಿಸಲು ಬನಾರಸ್‌ನ ಐತಿಹಾಸಿಕ ಬೀದಿಗಳನ್ನು ಕೆಡವಲಾಗಿತ್ತೋ ಆ ಮಂದಿರದ ಹೆಸರಿನ ಜೊತೆ ಈಗ ಕಾರಿಡಾರ್ ಎಂದು ಸೇರಿಸಲಾಗಿದೆ. ‘ನ್ಯೂಸ್ ಲಾಂಡ್ರಿ’ ವೆಬ್‌ಸೈಟ್‌ನಲ್ಲಿ ಅಭಿಷೇಕ್ ಉಪಾಧ್ಯಾಯ ಅವರ ಒಂದು ವಿವರವಾದ ವರದಿಯಿದೆ. ಈ ಕಾರಿಡಾರ್‌ಗಾಗಿ ಹೇಗೆ ಬನಾರಸ್‌ನ ಐತಿಹಾಸಿಕ ಪಕ್ಕಾ ಮಹಲ್ ಅನ್ನು ಧ್ವಂಸ ಮಾಡಲಾಯಿತು ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ. ಜಗತ್ತಿನ ಎಲ್ಲ ದೇಶಗಳು ತಮ್ಮ ಪಾರಂಪರಿಕ ನಗರಗಳನ್ನು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ಶ್ರಮಿಸುತ್ತವೆ. ಆದರೆ ಪ್ರಧಾನ ಮಂತ್ರಿ ಬನಾರಸ್‌ನ ಭೂಗೋಳವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಪತ್ರಿಕೆಗಳ ವರದಿಗಳಲ್ಲಿ ಬನಾರಸ್‌ನ ಇತಿಹಾಸವೇ ಮಾಯವಾಗಿದೆ. ಅಲ್ಲಿ ನರೇಂದ್ರ ಮೋದಿಯೇ ಇತಿಹಾಸ ಪುರುಷರಾಗಿದ್ದಾರೆ. ಈ ಕಾರಿಡಾರ್ ನಿರ್ಮಾಣದ ಸಂದರ್ಭ ಬನಾರಸ್‌ನಲ್ಲಿ ಪರಂಪರೆ ಉಳಿಸಿ ಎಂಬ ಆಂದೋಲನ ನಡೆದಿತ್ತು. ಅಲ್ಲಿನ ಬೀದಿ ಬೀದಿಗಳಲ್ಲಿರುವ ಸಣ್ಣ ಸಣ್ಣ ಮಂದಿರಗಳನ್ನು ಒಡೆದು ಹಾಕಲಾಗಿತ್ತು. ಜನರು ಶತಮಾನಗಳಿಂದ ಮೂರ್ತಿ ಇಟ್ಟು ಪೂಜಿಸುತ್ತಿದ್ದ ಎಲ್ಲ ಮನೆಗಳನ್ನು ಧ್ವಂಸ ಮಾಡಲಾಗಿತ್ತು. ಎರಡೆರಡು ಶತಮಾನಗಳ ಹಿಂದಿನ ಕಟ್ಟಡಗಳನ್ನು ಕೆಡವಲಾಗಿತ್ತು. ಹಳೆಯ ಬನಾರಸ್ ಅನ್ನು ನಿರ್ಮೂಲನೆ ಮಾಡಿ ಹೊಸ ಬನಾರಸ್ ಅನ್ನು ನಿರ್ಮಿಸಲಾಗಿದೆ. ನಾವು ಪ್ರಾಣ ಕೊಡುತ್ತೇವೆ. ಆದರೆ ಮನೆ ಕೊಡುುದಿಲ್ಲ ಎಂದು ಅಲ್ಲಿನ ಬೀದಿಗಳಲ್ಲಿ ಜನ ಪೋಸ್ಟರ್‌ಅಂಟಿಸಿದ್ದರು. ಆದರೆ ಅವರೆಲ್ಲರನ್ನೂ ಬನಾರಸ್‌ನ ಹೊಸ ಇತಿಹಾಸದಿಂದ ತೆಗೆದು ಹಾಕಲಾಗಿದೆ.

 ಈಗ ಪ್ರಧಾನ ಮಂತ್ರಿಯೇ ಇತಿಹಾಸ. ಪ್ರಧಾನಮಂತ್ರಿಯೇ ಈಗ ಠಾಗೋರ್. ಪ್ರಧಾನ ಮಂತ್ರಿಯೇ ಈಗ ಋಷಿ ಮುನಿಗಳು. ಅವರೇ ಕ್ಯಾಮರಾ, ಅವರೇ ನ್ಯೂಸ್. ಜನರ ಇತಿಹಾಸ ಪ್ರತಿದಿನ ಕಿರಿದಾಗುತ್ತಾ ಹೋಗುತ್ತಿದೆ. ಆ ಜನರು ಕ್ಯಾಮರಾ ಮೂಲಕ ಪ್ರಧಾನಿ ನಮಗೆ ಅದೆಷ್ಟು ಹತ್ತಿರವಾಗುತ್ತಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ನಿಜವಾಗಿ ಕ್ಯಾಮರಾಗಳ ನೆಪದಲ್ಲಿ ಪ್ರಧಾನಿ ನಮ್ಮಿಂದ ದೂರ ಆಗುತ್ತಿದ್ದಾರೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಅವರಿಗೆ ಜನರ ದುಃಖ ಸಂಕಷ್ಟದ ಬಗ್ಗೆ ಯಾವುದೇ ತಲೆಬಿಸಿ ಇಲ್ಲ. ಅವರು ಭಾಷಣದಲ್ಲಿ ಅತ್ತು ಬಿಡುತ್ತಾರೆ, ಸೇವೆ ಸೇವೆ ಎಂದು ಬಿಡುತ್ತಾರೆ. ಆದರೆ ಅವರು ಸೇವೆ ಮತ್ತು ತ್ಯಾಗದ ಮಾತಾಡುವ ಭಾಷಣಗಳನ್ನು ಆಯೋಜಿಸಿರುವ ರೀತಿಯನ್ನು ಗಮನಿಸಿ. ಅದೆಷ್ಟು ಭವ್ಯ? ಅದೆಷ್ಟು ದುಬಾರಿ?

ಆಗ ನಿಮಗೆ ಪ್ರಧಾನಿಯಲ್ಲಿ ಅರ್ಚಕರಲ್ಲ, ಬೇರೆಯವರು ಕಾಣುತ್ತಾರೆ. ಆ ಬೇರೆಯವರು ಯಾರು?

ಯಾರೆಂದು ನೀವು ಸ್ವತಃ ಯೋಚಿಸಬೇಕು ಎಂದು ನನ್ನ ಬಯಕೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)