varthabharthi


ಅನುಗಾಲ

ಧಾರ್ಮಿಕ (ಖಳ) ನಾಯಕರು

ವಾರ್ತಾ ಭಾರತಿ : 30 Dec, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಅಲ್ಲಿ ಮಾತನಾಡಿದ ಕಾವಿಗಳು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸರಕಾರಕ್ಕೆ ನೇರವಾಗಿ ನೆರವಾಗುವುದನ್ನು ಪ್ರಚೋದನಕಾರಿಯಾಗಿ ಹೇಳಿದರು. ಈಚೆಗೆ ಇಸ್ಲಾಮಿನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ‘ತ್ಯಾಗಿ’ ಎಂಬ ನಾಮವನ್ನು ಪಡೆದವನೊಬ್ಬ ಸಹಜ ಹಿಂದೂ ಉಗ್ರಗಾಮಿಗಳಿಗೂ ನಾಚಿಕೆಯಾಗುವಷ್ಟು ಹಿಂದುತ್ವವನ್ನು ಬೋಧಿಸಿದ. ಹೀಗೆ ಮಾತನಾಡುವ ಉತ್ಸಾಹದಲ್ಲಿ ಹಿಂದುತ್ವದ ‘ಹಿಂ’ ಎಂಬ ಅಕ್ಷರವು ‘ಹಿಂ’ಸೆಯ ಸಂಕೇತವೆಂಬಂತೆ ವಿವರಿಸಿದ. ಪ್ರಾಯಃ ಈತ ರಾಜ(ಕಾರಣಿ)ಯೋಗಿಯಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಈ ಮಹಾತ್ಯಾಗಿಗೆ ಆಡಳಿತ ಪಕ್ಷದ ಟಿಕೇಟು ಸಿಕ್ಕಿದರೆ ಅಚ್ಚರಿಪಡಬೇಕಾಗಿಲ್ಲ. ಈ ದೇಶಕ್ಕೆ ಬಾಲಿವುಡ್ ಸಿನೆಮಾ ಮಾದರಿಯ (ಖಳ)ನಾಯಕರು ಬೇಕಲ್ಲ!

ಭಾರತದಲ್ಲಿ ದೇವರು, ಧರ್ಮ ಮತ್ತು ಮತಗಳು ತಪ್ಪುಕಾರಣಗಳಿಗಾಗಿ ಸದ್ದುಮಾಡುತ್ತಿವೆ. ಹಸಿವೆ, ರೋಗ, ಅನಕ್ಷರತೆ ಹಾಗೂ ಬಡತನಗಳು ಮೌನವಾಗಿವೆ ಅಥವಾ ಅವುಗಳ ಕೊರಗು ಕೇಳುತ್ತಿಲ್ಲ.

ಈ ದೇಶದ ಬಹುಪಾಲು ಜನರು ದೇವರು, ಧರ್ಮ ಮತ್ತು ಮತಗಳನ್ನು ವೈಯಕ್ತಿಕ ಅಥವಾ ಸಾಂಸಾರಿಕ ಆಚಾರಗಳೆಂದು ಬಗೆದಿವೆಯೇ ಹೊರತು ಅವನ್ನು ಸಾಮಾಜಿಕ, ರಾಜಕೀಯ ವಿಚಾರಗಳೆಂದು ತಿಳಿದಿಲ್ಲ. ರಾಜಕಾರಣಿಗಳಿಗೆ ಜನರನ್ನು ನಿಯಂತ್ರಿಸಲು ಈ ಮೂರೂ ಸಂಗತಿಗಳು ಅಗತ್ಯ ಮತ್ತು ಸುಲಭದ ಹಾದಿ ಮತ್ತು ಲಾಭದ ವ್ಯವಹಾರ. ಜನರು ಆಚರಿಸುವ ಮತ್ತು ನೀಡುವ ‘ಮತ’ವೆಂಬ ಪದ ಎಷ್ಟು ಕಾಕತಾಳೀಯ!

ಭಾರತದ ಸಂಸತ್ತಿನ ಎರಡೂ ಮನೆಗಳು ಹೊಣೆಗಾರಿಕೆಯಿಂದ ನಡೆಯುತ್ತವೆಯೆಂಬ ನಂಬಿಕೆಯನ್ನು ಪ್ರಜ್ಞಾವಂತ ಭಾರತೀಯರೆಲ್ಲರೂ ಇಟ್ಟಿದ್ದರು. ಆದರೆ ಅವು ಸಂಸತ್ತೆಂಬ ಕಟ್ಟಡದ ಹೊರಗೂ ಒಳಗೂ ತಮಗಿಷ್ಟ ಬಂದಂತೆ ವ್ಯವಹರಿಸಿ, ಚರ್ಚೆ ಬೇಕಾದಲ್ಲಿ ಮಾಡದೆ, ಬೇಡದ ವಿಷಯಗಳ ಕುರಿತು ವೃಥಾಕಾಲಕ್ಷೇಪ ನಡೆಸಿ, ಜನರಿಗೆ ತಿಳಿಸಬೇಕಾದ್ದನ್ನು ತಿಳಿಸದೆ, ಅಗತ್ಯವಿಲ್ಲದ ವಿಷಯಗಳಿಗೆ ಅನಗತ್ಯ ಪ್ರಚಾರ ನೀಡಿ ಅಂತೂ ಕಾಟಾಚಾರದ ಸಾಂವಿಧಾನಿಕ ಹೊರೆಯನ್ನಿಳಿಸಿಕೊಂಡು ತಮ್ಮ ಕಿಸೆಗಳನ್ನು ಭರ್ತಿಮಾಡಿಕೊಂಡು ಜನರ ಕಿಸೆಗೆ ಭಾರವಾಗುತ್ತಿವೆ. ಈಚೆಗೆ ಇದೇ ಮಾತುಗಳನ್ನು ಭಾರತದ ಮುಖ್ಯ ನ್ಯಾಯಾಧೀಶರು ಹೇಳಿದರು. ಸಂಸತ್ತಿನಲ್ಲಿ ಸರಿಯಾದ ಚರ್ಚೆಗಳಾಗದೆ ಕಾನೂನುಗಳು ರಾಜಕೀಯ ಕಾರಣಕ್ಕಾಗಿಯೋ, ವೈಯಕ್ತಿಕ ಪ್ರತಿಷ್ಠೆಗಾಗಿಯೋ, ಚುನಾವಣಾ ಜನಪ್ರಿಯತೆಗಾಗಿಯೋ, ರೂಪುಗೊಳ್ಳುವುದರಿಂದ ಅವು ಸರಕಾರಿ ನರ್ಸರಿಯ ಗಿಡಗಳಂತಾಗುತ್ತವೆ. ಪ್ರಭಾವಿ ಅಥವಾ ಶಕ್ತಿಯುತ ಪ್ರತಿರೋಧ ಬಂದಾಗ ಅವನ್ನು ಹಿಂದಕ್ಕೆ ಪಡೆಯಲಾಗುತ್ತದೆ ಅಥವಾ ಇನ್ಯಾವುದೋ ಮಾರ್ಗದಲ್ಲಿ ನಿಷ್ಫಲ/ನಿರಸನಗೊಳಿಸಲಾಗುತ್ತದೆ. ಒಂದು ವರ್ಷದ ಕಾಲ ಉತ್ತರ ಭಾರತದ ರೈತರಿಂದ ಪ್ರತಿಭಟನೆಯಾದ ನಂತರವೇ ಕೃಷಿ ಕಾನೂನುಗಳು ‘ಘರ್‌ವಾಪ್ಸಿ’ಗೊಂಡವು. ಯಾವುದಾದರೂ ಕಾನೂನು ಮಂಡನೆಯಾಗುತ್ತಿದೆ ಮತ್ತು ಅಂಗೀಕೃತವಾಗುತ್ತಿದೆಯೆಂದರೆ ಅದೊಂದು ಹಿಂಸೆ ಅಥವಾ ತಮಾಷೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಭಾವೋನ್ಮಾದಕ್ಕೆ ಸಂಬಂಧಿಸಿದ ದೇವರು, ಧರ್ಮ ಮತ್ತು ಮತಗಳನ್ನು ಅತಿ ತೀವ್ರಗತಿಯಿಂದ ಯಾವುದಾದರೂ ಒಂದು ರೀತಿಯಲ್ಲಿ ಸಂಸತ್ತಿಗೆ ರವಾನಿಸಲಾಗುತ್ತಿದೆ. ಆಳುವ ಮತ್ತು ಪ್ರತಿಪಕ್ಷಗಳ ನಡುವಣ ಈ ಹೊರೆಯಲ್ಲಿ ನರಳುವುದು ಜನರೇ ವಿನಾ ಜನಪ್ರತಿನಿಧಿಗಳಲ್ಲ. ಅವರು ಎಂದಿನಂತೆ ಸಬ್ಸಿಡಿಯ ಬದುಕಿನಲ್ಲಿ ಮಗ್ನರಾಗಿರುತ್ತಾರೆ. ಭವಿಷ್ಯದಲ್ಲಿ ಸೋತರೂ ನಿವೃತ್ತಿವೇತನವಿದೆಯಲ್ಲ! ಇದರಿಂದಾಗಿ ನಮ್ಮ ಬಹುತೇಕ ಕಾನೂನುಗಳು ರಾಜಕಾರಣದ ದಡ್ಡ ಹೇಳಿಕೆಗಳಂತಾಗುತ್ತವೆ. ಎಲ್ಲಿ ಯಾವ ಹೊಸ ಕಾನೂನು ಜಾರಿಯಾಗುತ್ತದೆಯೋ ಎಂಬ ಭಯ ಮತ್ತು ಆತಂಕದಲ್ಲಿ ಜನಜೀವನ ಕುಂಟುತ್ತ ನಡೆಯುತ್ತಿದೆ. ಕೋವಿಡ್-19ರ ಉತ್ತರಾರ್ಧವು ದೇಶವನ್ನು ಕಾಡುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಮೊನ್ನೆ ಮೊನ್ನೆ ಹರಿದ್ವಾರದಲ್ಲಿ ಧರ್ಮಸಂಸತ್ತು ನಡೆಯಿತು. ಕೌಪೀನಧಾರಿಗಳೂ ಕಾಷಾಯಧಾರಿಗಳೂ ಮುಖಮುಸುಕನ್ನು ಹಾಕದೆಯೇ ಜನಜಂಗುಳಿಗಳಾದರು. ಇಂತಹ ಧರ್ಮಸಂಸತ್ತು ನಡೆಯುವುದು ಇದೇ ಮೊದಲಲ್ಲ. ಸ್ವಾಮಿ ವಿವೇಕಾನಂದರ ಚಾರಿತ್ರಿಕ ಚಿಕಾಗೋ ಭಾಷಣ (ಮತ್ತು ಅದಕ್ಕೂ ಹಿಂದೆ ವೇದಕಾಲದ ವರೆಗೆ ಇದ್ದಿರಬಹುದಾದ) ಇಂತಹ ಧರ್ಮಸಂಸತ್ತುಗಳ ಜಾಗತಿಕ ವ್ಯಾಪ್ತಿಯನ್ನು ಸಾರಿವೆ. ವಿವಿಧ ದೇಶಗಳಲ್ಲಿ ಇವು ನಡೆದಿವೆ. ಬೇರೆಬೇರೆ ಧರ್ಮಗಳು ಇವನ್ನು ನಡೆಸಿವೆ. ಅಯೋಧ್ಯೆಯ ರಾಮಮಂದಿರದ ಸಂಘರ್ಷದಲ್ಲಂತೂ ಭಗವಾಧಾರಿಗಳ ಕೊಡುಗೆ ಅಮಿತ. ಇದನ್ನು ಜನರೂ ನಂಬಿದ್ದಾರೆ. ಆದ್ದರಿಂದ ಜನಸಾಮಾನ್ಯರ ಅಪಾರ ನಿರೀಕ್ಷೆಯು ಶಾಂತಿ ಸಮಾಧಾನಗಳ ಸಂಸತ್ತಿನ ಕಡೆಯೇ ಇರುತ್ತದೆ. ಹರಿದ್ವಾರದ ಧರ್ಮಸಂಸತ್ತಿನಲ್ಲಿ ನೆರೆಗೊಂಡವರು ಕಾವಿಯ ಕಾರಣಕ್ಕಾಗಿ ಮತ್ತು ಮಠ-ಮಂದಿರಗಳ ಒಡೆತನವೋ, ಜಾತಿ(ಯಿಂದ) ಮತಗಳ ಕಾರಣಕ್ಕಾಗಿಯೋ ಪ್ರಚಾರ ಪಡೆಯುತ್ತಿರುವವರು. ಇವರಿಗೆ ಒಂದಲ್ಲ ಒಂದು ಕಾರಣಕ್ಕಾಗಿ ರಾಜಕೀಯ ನಿಲ್ದಾಣದಲ್ಲಿ ಪ್ರಶಸ್ತಿ-ಪ್ರಾಶಸ್ತ್ಯಗಳು ದೊರಕುತ್ತಿವೆ. ಯೋಗಿ ಆದಿತ್ಯನಾಥ್ ಶತಾಂಶ ಮತಾಂಧ ರಾಜಕಾರಣಿಯಾದರೂ ಯೋಗಿ ಎಂಬ ಶುದ್ಧ ಭಾರತೀಯ ಪರಂಪರೆಯ ಪದವನ್ನು ಉಳಿಸಿಕೊಂಡದ್ದು ಯೋಗೇಶ್ವರ ಶ್ರೀಕೃಷ್ಣನ ಆತ್ಮ ನೆಲೆ ಸೇರಿದ್ದರೂ ಈಗ ಶಾಂತವಾಗದಿರಲು ಕಾರಣವಾಗಬಹುದು. ರಾಮನ ಸ್ಥಿತಿಯಂತೂ ಈಗ ದಯನೀಯ. ಅಯೋಧ್ಯಾ ರಾಮ ಈಗ ರಾಜಕೀಯ ರಾಮನಾಗಿದ್ದಾನೆ. ಇಷ್ಟು ಸುಲಭವಾಗಿ ರಾಮನನ್ನು ಸೋಲಿಸಬಹುದೆಂದು ತಿಳಿದಿದ್ದರೆ ರಾವಣನು ಸೀತಾಪಹಾರಕ್ಕೆ ಕೈಹಾಕದೆ ಇಂತಹದ್ದೇನಾದರೂ ತಂತ್ರೊೀಪಾಯವನ್ನು ಹೂಡುತ್ತಿದ್ದನೇನೋ?

ಸಾಮಾನ್ಯ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡರೆ ಈಜಿ ದಡಸೇರಲು ಇವರೆಲ್ಲರೂ ಬಲ್ಲರು. ಘೋರಸಮುದ್ರದಲ್ಲಿ ಮುಳುಗಿದಾಗ ಮಾತ್ರ ಬಣ್ಣ ಬಯಲಾಗುತ್ತದೆ. ಅಸಾರಾಂ ಬಾಪು, ದೇರಾಸಚ್ಚಾಸೌಧದ ಗುರುಮೀತ್‌ಸಿಂಗ್ ಮುಂತಾದವರ ಹಾಗೆ ಜೈಲುಸೇರಿದ ಮಹಾನುಭಾವರ ಸಂಖ್ಯೆ ಬಹಳಷ್ಟಿದೆ. ಇನ್ನುಳಿದವರೆಲ್ಲರೂ ಸಾಚಾ ಅಂತಲ್ಲ. ಆದರೆ ಸಿಕ್ಕಿಬಿದ್ದವರಷ್ಟೇ ಕಳ್ಳರು ಎಂಬ ಸಾಮಾಜಿಕ ಚಿಂತನೆಯಿಂದಾಗಿ ಇತರರು ಇನ್ನೂ ತಮ್ಮ ಗಿಲಿಟನ್ನು ಭದ್ರವಾಗಿ ಉಳಿಸಿಕೊಂಡಿದ್ದಾರೆ. ಅಪರೂಪಕ್ಕೆ ಒಬ್ಬೊಬ್ಬರು ಪ್ರಾಮಾಣಿಕರಾಗಿರಬಹುದು. ಅಂತರ್ಜಲ ಇನ್ನೂ ಆರದಿರಲು ಈ ಅಪವಾದಗಳನ್ನು ನೆನಪಿಸಿಕೊಳ್ಳಬಹುದು. ಆದರೆ ಅವರನ್ನು ಹೆಸರಿಸುವ ಧೈರ್ಯ ನನಗಂತೂ ಇಲ್ಲ.

ಇರಲಿ; ಈ ಧರ್ಮಸಂಸತ್ತಿನ ಬಗ್ಗೆ ಪ್ರಧಾನಮಂತ್ರಿಗಳು ಮತ್ತು ಅವರ ಸಚಿವಸಂಪುಟದವರು ಅಲ್ಲಿ ಹಾಜರಿದ್ದವರಿಗೆ ನಿಮ್ಮ ನಿಮ್ಮ ಧರ್ಮವನ್ನು ಉಳಿಸಿಕೊಳ್ಳಿ ಅಂತಲೋ, ಕಾಪಾಡಿಕೊಳ್ಳಿ ಅಂತಲೋ ಹೇಳಿದ್ದರೆ ಅದು ಎಲ್ಲ ಮಾಮೂಲು/ಸಾಮಾನ್ಯ ಧರ್ಮಪ್ರಚಾರಕರ ಸಭೆಯಾಗುತ್ತಿತ್ತು. ಆದರೆ ಮಾಧ್ಯಮ ವರದಿಗಳ ಪ್ರಕಾರ ಅಲ್ಲಿ ಹಿಂಸೆಯ ಪಟಾಕಿಗಳು ವಿಜೃಂಭಿಸಿದವು. ಸದ್ಯ ಸರಕಾರ ಹಿಂದುತ್ವದ ಹೆಸರಿನಲ್ಲಿ ಮತಾಂಧತೆಯನ್ನು, ಏಕಮುಖಿ ಸಂಸ್ಕೃತಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಳುತ್ತಿದೆಯೋ ಅದನ್ನು ಈ ಮಂದಿ ಜನರಿಗೆ ಅರ್ಥವಾಗುವ ಮತ್ತು ಅರ್ಥವಾಗದ ಭಾಷೆಗಳಲ್ಲಿ ವ್ಯಾಖ್ಯಾನಿಸಿದವು. ಅಲ್ಲಿ ಮಾತನಾಡಿದ ಕಾವಿಗಳು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸರಕಾರಕ್ಕೆ ನೇರವಾಗಿ ನೆರವಾಗುವುದನ್ನು ಪ್ರಚೋದನಕಾರಿಯಾಗಿ ಹೇಳಿದರು. ಈಚೆಗೆ ಇಸ್ಲಾಮಿನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ‘ತ್ಯಾಗಿ’ ಎಂಬ ನಾಮವನ್ನು ಪಡೆದವನೊಬ್ಬ ಸಹಜ ಹಿಂದೂ ಉಗ್ರಗಾಮಿಗಳಿಗೂ ನಾಚಿಕೆಯಾಗುವಷ್ಟು ಹಿಂದುತ್ವವನ್ನು ಬೋಧಿಸಿದ. ಹೀಗೆ ಮಾತನಾಡುವ ಉತ್ಸಾಹದಲ್ಲಿ ಹಿಂದುತ್ವದ ‘ಹಿಂ’ ಎಂಬ ಅಕ್ಷರವು ‘ಹಿಂ’ಸೆಯ ಸಂಕೇತವೆಂಬಂತೆ ವಿವರಿಸಿದ. ಪ್ರಾಯಃ ಈತ ರಾಜ(ಕಾರಣಿ)ಯೋಗಿಯಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಈ ಮಹಾತ್ಯಾಗಿಗೆ ಆಡಳಿತ ಪಕ್ಷದ ಟಿಕೇಟು ಸಿಕ್ಕಿದರೆ ಅಚ್ಚರಿಪಡಬೇಕಾಗಿಲ್ಲ. ಈ ದೇಶಕ್ಕೆ ಬಾಲಿವುಡ್ ಸಿನೆಮಾ ಮಾದರಿಯ (ಖಳ)ನಾಯಕರು ಬೇಕಲ್ಲ!

ಹಿಂದೂ ಎಂಬುದು ಒಂದು ಧರ್ಮವಲ್ಲ, ಅದೊಂದು ಜೀವನವಿಧಾನ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದರೂ ಇಲ್ಲ ಅದೊಂದು ಮತವೇ ಹೊರತು ಜೀವನವಿಧಾನವಲ್ಲ ಎಂದು ನಮ್ಮ ಆಧುನಿಕ ಸಂತರೆಲ್ಲರೂ ತಮ್ಮ ನಡವಳಿಕೆಯಲ್ಲಿ ಪ್ರದರ್ಶಿಸಿದ್ದಾರೆ. ರಿಲಿಜನ್ ಎಂಬ ಪದಕ್ಕೆ ‘ಮತ’ ಎಂದೇ ಪ್ರಯೋಗಿಸಿದ್ದಾರೆ. ಕರ್ನಾಟಕದ ಉದಾಹರಣೆಯನ್ನೇ ಹೇಳುವುದಾದರೂ ಧಾರ್ಮಿಕ ಸ್ವಾತಂತ್ರ್ಯದ ಮಸೂದೆಯನ್ನು ಮತಾಂತರ ನಿಷೇಧ ವುಸೂದೆಯೆಂದೇ ಉಲ್ಲೇಖಿಸಲಾಗುತ್ತಿದೆ.

ಮತಾಂತರವೊಂದೇ ಈ ವಿರಾಗಿಗಳ ಟೀಕೆಗೆ ಗುರಿಯಾದದ್ದಲ್ಲ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸ್ವಾತಂತ್ರ್ಯಪೂರ್ವ ಪ್ರೇರಣೆಗೆ ವಿರುದ್ಧವಾಗಿ ಈಗ ಹಿಂದೂ ಅಲ್ಲದವರನ್ನು ಸಾಯಿಸಲು ಕರೆ ನೀಡಲಾಯಿತು. ಅಂತಹ ಆಂದೋಲನದಲ್ಲಿ ಮಡಿಯುವುದು ವೀರಸ್ವರ್ಗವೆಂದು ನಂಬಿಸಲಾಯಿತು. ಒಟ್ಟಿನಲ್ಲಿ ಹಿಂದೂದೇಶಕ್ಕೆ ರಾಷ್ಟ್ರೀಯತೆಗೂ ಮಿಗಿಲಾದ ಹೊಸ ಹಿಂಸಾಸಿದ್ಧಾಂತವನ್ನು ರೂಪಿಸಲಾಯಿತು.

ಈ ಕುರಿತು ಪ್ರಕರಣವೊಂದು ‘ತ್ಯಾಗಿ’ ಸೇರಿದಂತೆ ಇಬ್ಬರ ವಿರುದ್ಧ ದಾಖಲಾಗಿದೆಯಂತೆ. ಅಷ್ಟೊಂದು ಜನರ ನಡುವೆ ಈ ಇಬ್ಬರೇ ಬಲಿಪಶುಗಳಾದದ್ದು ಆಘಾತಕರ. ಇದಕ್ಕೆ ಅಲ್ಲಿನ ಪೊಲೀಸ್ ಉನ್ನತಾಧಿಕಾರಿಗಳು ನೀಡಿದ ಕಾರಣವೆಂದರೆ ದೂರುದಾರರು ಇಬ್ಬರ ಹೆಸರನ್ನು ಮಾತ್ರ ಕಾಣಿಸಿದ್ದಾರೆಂಬ ಮಾಹಿತಿ. ಈ ದೇಶದ ಪೊಲೀಸರ ನಡವಳಿಕೆಗಳು ತರ್ಕಕ್ಕೆ ಮೀರಿದವು, ತಮ್ಮೆದುರೇ ಕೊಲೆ ನಡೆದರೂ ಯಾರಾದರೂ ದೂರು ನೀಡಲಿ ಎಂದು ಕಾಯುವ ಅನನ್ಯ ಶ್ರದ್ಧೆ ಅವರದ್ದು. ಯಾರಾದರೂ ಬಂದು ತನ್ನನ್ನು ಕೊಲೆ ಮಾಡಲು ಬರುತ್ತಿರುವರೆಂದೋ, ಕೊಲೆಮಾಡುತ್ತೇವೆಂದು ಹೆದರಿಸುತ್ತಿದ್ದಾರೆಂದೋ ದೂರಿತ್ತರೆ ‘‘ಇರಲಿ, ಅವರು ಬರಲಿ, ನಿಮ್ಮನ್ನು ಕೊಂದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ’’ ಎಂಬ ಅಭಯಸಿಂಹಗಳೇ ಹೆಚ್ಚು. ಮೇಲಾಗಿ ಪೊಲೀಸರು ರಾಜಕಾರಣವನ್ನು ಅಭ್ಯಸಿಸದೆ ಕ್ರಮ ಕೈಗೊಳ್ಳುವುದಿಲ್ಲ. ದೇಶದ ಅಧಿಕಾರಕೇಂದ್ರವೇ ತನ್ನ ಆಶೀರ್ವಾದವನ್ನು ಈ ಸಂತ-ಸನ್ಯಾಸಿಗಳಿಗೆ ನೀಡಿದ ಮೇಲೆ ಅವರ ವಿರುದ್ಧ ಯಾವ ಕ್ರಮ ಜರುಗೀತು? ಆದ್ದರಿಂದ ಈ ಧರ್ಮಸಂಸತ್ತಿನ ಕುರಿತು ಕಾನೂನು ಕ್ರಮದ ಬ್ಗೆ ಭ್ರಮೆಯನ್ನಿಟ್ಟುಕೊಳ್ಳಬೇಕಾಗಿಲ್ಲ.

ದೇವರು, ಧರ್ಮ ಮತ್ತು ಮತಗಳನ್ನು ಪ್ರಾಮಾಣಿಕವಾಗಿ ನಂಬಿದ ಮುಗ್ಧರಿಗೆ ಸಂತ-ಸನ್ಯಾಸಿಗಳ ಹೆಸರಿನ ಮೋಸಗಾರರು ಈ ಧರ್ಮಸಂಸತ್ತಿನ ಹೆಸರಿನಲ್ಲಿ ವಿಶ್ವಾಸದ್ರೋಹ ಮಾಡಿದ್ದಾರೆ. ದಿಲ್ಲಿಯ ಸಂಸತ್ತಿನ ಅರಾಜಕ ನಡತೆಗನುಗುಣವಾಗಿ ಧರ್ಮಸಂಸತ್ತು ಕೂಡಾ ಬೇಜವಾಬ್ದಾರಿಯಿಂದ ವರ್ತಿಸಿದೆ. ಇದು ಮಾಡಬಹುದಾದ ದೀರ್ಘಕಾಲೀನ ಪರಿಣಾಮವನ್ನು ಸಂಬಂಧಿತರು ಊಹಿಸಿದಂತಿಲ್ಲ. ಯಾವ ಧರ್ಮವೇ ಆಗಲಿ, ನೇತ್ಯಾತ್ಮಕವಾದ್ದನ್ನು ಹೇಳಬಾರದೆಂದಿದ್ದರೂ ಒಂದಷ್ಟು ಮಂದಿ ಇದರ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆ, ವಿನಾಶಕ್ಕೆ ಎಳೆಯುತ್ತಾರೆ. ಅವರಿಗೆ ರಾಜಕಾರಣದ ಸಂಬಂಧ ಹತ್ತಿರವಾದಷ್ಟೂ ಅದು ಕ್ರೂರವಾಗುತ್ತಹೋಗುತ್ತದೆ. ಅವರಿಗೆ ಧರ್ಮ ಬೇಕಾಗುವುದೇ ತಮ್ಮ ವ್ಯವಹಾರಕ್ಕೆ; ಅದು ತಂದುಕೊಡಬಲ್ಲ ಭೌತಿಕ ಲಾಭಕ್ಕೆ. ದೇವರ ಹೆಸರಿನಲ್ಲಿ ಏನೇನು ಆಗಿದೆ ಮತ್ತು ಆಗುತ್ತಿದೆ ಹಾಗೂ ಆಗಬಹುದು ಎಂಬುದು ನಿಚ್ಚಳವಾಗಿದೆ. ಜಾತಿ-ಮತಗಳು ಮತಗಟ್ಟೆಗಳೇ ಆಗಿ ಪರಿವರ್ತನೆಗೊಂಡಿವೆ. ದೇಶದ ಸಂವಿಧಾನದ ಮೂರು ಅಂಗಗಳು ನಿಧಾನಕ್ಕೆ ಅಳಿದು ಈ ಕೆಲವು ಅಪಾಯಕಾರಿ ಮತ್ತು ದಮನಕಶಾರಿ ಮನೋಭಾವಗಳೇ ಆ ಸ್ಥಾನವನ್ನು ಆಕ್ರಮಿಸಿಕೊಂಡು ಪರ್ಯಾಯ ಅಂಗಳಾಗಬಹುದೇನೋ?

ಮುಂದಿನ ದಿನಗಳು (ಪ್ರಜ್ಞಾವಂತರಿಗೆ ಮಾತ್ರ) ಆತಂಕಕಾರಿಯಾಗ ಬಹುದು. ವಿವೇಕಾನಂದರ ಈ ದೇಶವು ವಿವೇಕವನ್ನು ಕಳೆದುಕೊಂಡು ಆನಂದವನ್ನು ಪಡೆಯುತ್ತಿದೆ. ವಿವೇಕಾನಂದರು ಶುದ್ಧ ಧಾರ್ಮಿಕ ವ್ಯಕ್ತಿಯೇನೂ ಅಲ್ಲ. ಆದರೆ ಶ್ರೇಷ್ಠ ಮಾನವರು. ಧರ್ಮ, ದೇವರ, ಜಾತಿಮತಗಳ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ಅಮಾನವೀಯವೆಂದು ಟೀಕಿಸಿದವರು. ಧರ್ಮವೆಂದರೇನೆಂದು ಅರ್ಥಮಾಡಿಕೊಂಡವರು. ಅದನ್ನು ತಮ್ಮ ಮಾತುಗಳಲ್ಲಿ ಬರಹಗಳಲ್ಲಿ ಹೇಳಿದವರು. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಈ ಅವಾಂತರಗಳನ್ನು ಗಮನಿಸಿದಾಗ ವಿವೇಕಾನಂದರು ಧರ್ಮದ ಬಗ್ಗೆ ಹೇಳಿದ ಈ ಕೆಳಗಿನ ಮಾತುಗಳನ್ನು ನೆನಪಿಸಬಹುದು:

‘‘ಪ್ರತಿಯೊಂದು ಆತ್ಮದಲ್ಲಿಯೂ ದಿವ್ಯತೆ ಹುದುಗಿರುವುದು. ಈ ಸುಪ್ತವಾದ ದಿವ್ಯತೆಯನ್ನು ಬಾಹ್ಯ ಮತ್ತು ಆಂತರಿಕ ಪ್ರಕೃತಿಯ ನಿಗ್ರಹದಿಂದ ವ್ಯಕ್ತಪಡಿಸುವುದು ಜೀವನದ ಗುರಿ.

ಇದನ್ನು ಕರ್ಮಯೋಗದಿಂದಾಗಲಿ, ಜ್ಞಾನಯೋಗದಿಂದಾಗಲಿ, ಯಾವು ದಾದರೂ ಒಂದು ಮಾರ್ಗದಿಂದ ಅಥವಾ ಎಲ್ಲ ಮಾರ್ಗಗಳ ಸಂಯೋಗದಿಂದ ಸಾಧಿಸಿ ಮುಕ್ತರಾಗಿ.

ಇದೇ ಧರ್ಮದ ಸರ್ವಸ್ವ, ಸಿದ್ಧಾಂತ, ನಂಬಿಕೆ, ಬಾಹ್ಯಾಚಾರ, ಪವಿತ್ರ ಗ್ರಂಥ, ದೇವಸ್ಥಾನ, ವಿಗ್ರಹ- ಇವೆಲ್ಲ ಗೌಣ.’’

ಧರ್ಮವನ್ನು ನಂಬದವರೂ ಒಪ್ಪಬಹುದಾದ ಅಂಶಗಳು ಇವು.

ಭಾರತ ತನ್ನ ಸಂವಿಧಾನದ ಅಂಶಗಳನ್ನು ತನ್ನ ಬಹುಮತಕ್ಕೆ ತಕ್ಕಂತೆ ಅರ್ಥವಿಸುವ ಕಾಲದಲ್ಲಿ ಎಲ್ಲವೂ ತಮ್ಮ ಅರ್ಥವನ್ನು ಕಳೆದುಕೊಳ್ಳಬಹುದು. ಜನಪ್ರಿಯ ಬಹುಮತವೆಂದರೆ ಏನು ಬೇಕಾದರೂ ಮಾಡಬಹುದೆಂದಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಯಾರನ್ನೂ ಹೆಸರಿಸದೆ ಹೇಳಿದ್ದು ಈ ಎಲ್ಲ ಘಟನೆಗಳ ಮತ್ತು ಈ ದೇಶದ ಪ್ರಸ್ತುತ ಪರಿಸ್ಥಿತಿಯ, ದುಸ್ಥಿತಿಯ, ಸಾಂಕೇತಿಕ ವಿಮರ್ಶೆಯೆಂದು ತಿಳಿಯುವುದು ವಿವೇಕ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)