ಅಸ್ಥಿರಗೊಳಿಸುವ ಇರಾನ್ ನ ಕೃತ್ಯದಿಂದ ಆತಂಕ: ಸೌದಿ ಅರೆಬಿಯಾ
ರಿಯಾದ್, ಡಿ.30: ಅಸ್ಥಿರಗೊಳಿಸುವ ಕೃತ್ಯ ನಡೆಸುವುದನ್ನು ಮತ್ತು ಆಕ್ರಮಣಶೀಲ ಧೋರಣೆಯನ್ನು ಇರಾನ್ ಕೈಬಿಟ್ಟು ಮಧ್ಯಪ್ರಾಚ್ಯ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ತರುವ ಕಾರ್ಯಕ್ಕೆ ಇರಾನ್ ಸಹಕಾರ ನೀಡಬೇಕು ಎಂದು ಸೌದಿ ಅರೆಬಿಯಾದ ದೊರೆ ಸಲ್ಮಾನ್ ಬುಧವಾರ ಹೇಳಿದ್ದಾರೆ.
ಸೌದಿ ಅರೆಬಿಯಾದ ನೆರೆಯ ದೇಶವಾಗಿರುವ ಇರಾನ್ ತನ್ನ ನಕಾರಾತ್ಮಕ ಧೋರಣೆ ಮತ್ತು ವರ್ತನೆಯನ್ನು ಬದಲಾಯಿಸಿ ಮಾತುಕತೆ ಮತ್ತು ಸಹಕಾರದತ್ತ ಪರಿವರ್ತನೆಗೊಳ್ಳಲಿದೆ ಎಂದು ಆಶಿಸುವುದಾಗಿ ಸೌದಿ ಅರೆಬಿಯಾದ ಶೌರಾ ಸಮಿತಿಯ ವಾರ್ಷಿಕ ಸಭೆಯಲ್ಲಿ ದೊರೆ ಸಲ್ಮಾನ್ ಹೇಳಿದ್ದಾರೆ. ಪಂಥೀಯ ಮತ್ತು ಸಶಸ್ತ್ರ ಪಡೆಗಳ ಸ್ಥಾಪನೆ ಮತ್ತು ಬೆಂಬಲ, ಈ ವಲಯದ ದೇಶಗಳಲ್ಲಿ ಇರಾನ್ನ ಸೇನೆಯನ್ನು ವ್ಯವಸ್ಥಿತವಾಗಿ ನಿಯೋಜಿಸುವುದು, ಪರಮಾಣು ಕಾರ್ಯಕ್ರಮ ಮತ್ತು ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮಗಳ ಅಭಿವೃದ್ಧಿ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಅಸಹಾಕಾರದ ವರ್ತನೆ- ಇವನ್ನು ನಾವು ಬಹಳ ಕಾಳಜಿಯಿಂದ ಗಮನಿಸುತ್ತಿದ್ದೇವೆ.
ಯೆಮನ್‌ನಲ್ಲಿ ಯುದ್ಧವನ್ನು ವಿಸ್ತರಿಸುವ, ಅಲ್ಲಿನ ಮಾನವೀಯ ಬಿಕ್ಕಟ್ಟನ್ನು ಉಲ್ಬಣಗೊಳಿಸುವ ಸೌದಿ ಅರೆಬಿಯಾ ಹಾಗೂ ಈ ವಲಯದ ಭದ್ರತೆಗೆ ಬೆದರಿಕೆ ಒಡ್ಡಿರುವ ಹೌದಿ ಬಂಡುಗೋರರಿಗೆ ಇರಾನ್ ನೆರವು ನೀಡುತ್ತಿರುವುದನ್ನೂ ಗಮನಿಸುತ್ತಿದ್ದೇವೆ ಎಂದು ಸಲ್ಮಾನ್ ಹೇಳಿದ್ದಾರೆ.
ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕನ್ನು ನಿಯಂತ್ರಿಸುವ ಕ್ರಮಗಳು, ಯೆಮನ್‌ನಲ್ಲಿನ ಬಿಕ್ಕಟ್ಟು ಅಂತ್ಯಗೊಳಿಸಲು ಸೌದಿ ಕೈಗೊಂಡಿರುವ ಉಪಕ್ರಮಗಳು, ಹೆರ್ಬೊಲ್ಲಾ ಬಂಡುಗೋರರಿಂದ ಆರ್ಥಿಕ ಮತ್ತು ಭದ್ರತೆಗೆ ಸಂಬಂಧಿಸಿದ ಬೆದರಿಕೆ ಎದುರಿಸುತ್ತಿರುವ ಲೆಬನಾನ್ನ ಜನತೆಗೆ ಸೌದಿ ಅರೆಬಿಯಾದ ನೆರವು ಮುಂದುವರಿಸುವುದು ಮುಂತಾದ ವಿಷಯಗಳ ಬಗ್ಗೆ ಸಲ್ಮಾನ್ ಉಲ್ಲೇಖಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಯೆಮನ್‌ನಲ್ಲಿ ಹೌದಿ ಬಂಡುಗೋರರಿಗೆ, ಲೆಬನಾನ್‌ನಲ್ಲಿ ಹರ್ಬುಲ್ಲಾ ಬಂಡುಗೋರರಿಗೆ ಮತ್ತು ಇರಾಕ್‌ನಲ್ಲಿ ಹಷದ್ ಸಂಘಟನೆಗೆ ಆಯಾ ದೇಶದ ಸರಕಾರದ ವಿರುದ್ಧ ಹೋರಾಟ ಮುಂದುವರಿಸಲು ಇರಾನ್ ಬೆಂಬಲ ನೀಡುತ್ತಿದೆ ಎಂದು ಸೌದಿ ಅರೆಬಿಯಾ ಹಾಗೂ ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಆರೋಪಿಸುತ್ತಿವೆ.