varthabharthi


ನಿಮ್ಮ ಅಂಕಣ

ಕೇಂದ್ರ ಸರಕಾರ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲಿ

ವಾರ್ತಾ ಭಾರತಿ : 30 Dec, 2021
-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಕರ್ನಾಟಕ ರಾಜ್ಯದಲ್ಲಿ ಅನ್ನವನ್ನು ತಿನ್ನುತ್ತಿರುವ ಎಂಇಎಸ್‌ನ ಪುಂಡರು ನಾಡಿನ ಧ್ವಜವನ್ನು ಸುಟ್ಟಂತಹ ನೀಚಕಾರ್ಯ, ಸಂಗೊಳ್ಳಿ ರಾಯಣ್ಣ ಮತ್ತು ಅಣ್ಣ ಬಸವಣ್ಣನವರ ಪ್ರತಿಮೆಗಳಿಗೆ ಮಾಡಿದ ಅವಮಾನ ಕನ್ನಡಿಗರನ್ನು ಕೆರಳಿಸಿದೆ. ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್‌ವಿಂಗಡಿಸುವ ಸಲುವಾಗಿ ಅನೇಕ ಸಮಿತಿಗಳು ವರದಿಯನ್ನು ನೀಡಿ ಅಂತಿಮವಾಗಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ಮಹಾಜನ್ ವರದಿಯೇ ಅಂತಿಮವೆಂದು, ಆ ವರದಿಗೆ ಎಲ್ಲರೂ ಬದ್ಧರೆಂದು ಹೇಳಿದ ಮೇಲೆ ಮಹಾರಾಷ್ಟ್ರದವರು ಮತ್ತೆ ಮತ್ತೆ ಬೆಳಗಾವಿ ವಿಚಾರದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರಕಾರ ಮಹಾಜನ್ ವರದಿಯನ್ನು ಸಂಪೂರ್ಣವಾಗಿ ಒಪ್ಪಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಗಡಿ ಸಮಸ್ಯೆ ಮುಗಿದ ಅಧ್ಯಾಯವೆಂದು ಘೋಷಣೆಯನ್ನು ಮಾಡಿ ಬೆಳಗಾವಿಯ ವಿಚಾರದಲ್ಲಿ ಯಾವುದೇ ಮಾತುಕತೆ ಇಲ್ಲ, ಅದು ಮುಗಿದ ಅಧ್ಯಾಯ. ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿ ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಎತ್ತುವ ಎಲ್ಲ ತಕರಾರುಗಳು ಸಹ ಸಂವಿಧಾನ ವಿರೋಧಿ ಎನ್ನುವ ಮಾತನ್ನು ಗಟ್ಟಿಯಾದ ಧ್ವನಿಯಲ್ಲಿ ಹೇಳಬೇಕಾಗಿದೆ. ಎರಡು ರಾಜ್ಯಗಳ ನಡುವೆ ಸಂಘರ್ಷಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ದಿವ್ಯ ಮೌನವನ್ನು ವಹಿಸಿರುವುದು ಅವರ ಜಾಣ ಕಿವುಡು ಪ್ರದರ್ಶನವಾಗಿರುತ್ತದೆ. ಈ ಕೂಡಲೇ ಕೇಂದ್ರ ಸರಕಾರ ಈ ವಿಚಾರದಲ್ಲಿ ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ಲೋಕಸಭೆಯಲ್ಲಿ ವ್ಯಕ್ತಪಡಿಸಬೇಕು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)