varthabharthi


ಸಂಪಾದಕೀಯ

ಕರ್ನಾಟಕ ಬಂದ್ ಯಾಕೆ ಬೇಡ?

ವಾರ್ತಾ ಭಾರತಿ : 31 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಒಂದು ಕಾಲವಿತ್ತು. ‘ಭಾರತ ಬಂದ್’ ಎಂದು ಯಾವುದೇ ಸಂಘಟನೆಗಳು ಘೋಷಣೆ ಮಾಡಿದರೆ ಸರಕಾರ ಬೆಚ್ಚುವ ಕಾಲ. ಒಂದು ದಿನ ಅಥವಾ ಎರಡು ದಿನಗಳ ಕಾಲ ಬಂದ್ ನಡೆದರೆ, ಆ ಬಂದ್‌ನಿಂದಾಗಿ ದೇಶಕ್ಕಾದ ನಷ್ಟವೆಷ್ಟು ಎನ್ನುವುದನ್ನು ಮಾಧ್ಯಮಗಳು ಮುಖಪುಟಗಳಲ್ಲಿ ಚರ್ಚೆ ನಡೆಸುತ್ತಿದ್ದವು. ಸಾಧಾರಣವಾಗಿ ಇಂತಹ ಬಂದ್‌ಗಳನ್ನು ಕಾರ್ಮಿಕ ಸಂಘಟನೆಗಳೇ ಅಧಿಕವಾಗಿ ಹಮ್ಮಿಕೊಳ್ಳುವುದರಿಂದ ಇರಬೇಕು, ಮಾಧ್ಯಮಗಳಿಗೆ ಬಂದ್‌ನಿಂದ ಸಂಭವಿಸುವ ನಷ್ಟದ ಬಗ್ಗೆ ವಿಶೇಷ ಆಸಕ್ತಿಯಿರುತ್ತಿತ್ತು. ಬಂದ್‌ನಿಂದಾಗಿ ಜನಸಾಮಾನ್ಯರಿಗಾದ ತೊಂದರೆಗಳನ್ನು ಕೂಡ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿತ್ತು. ಬಂದ್‌ಗಳ ಕಾರಣಕ್ಕಾಗಿಯೇ ಕೇರಳ ರಾಜ್ಯವನ್ನು ವಿಶೇಷವಾಗಿ ಟೀಕಿಸುವವರು ಈಗಲೂ ಇದ್ದಾರೆ. ಜನಸಾಮಾನ್ಯರಿಗೂ ಈ ಬಂದ್‌ಗಳ ಬಗ್ಗೆ ಸಣ್ಣದೊಂದು ಅಸಹನೆ ಇರುತ್ತಿತ್ತು. ಹಾಗೆಯೇ, ಕೋಮುಗಲಭೆಗಳು ಸಂಭವಿಸಿದಾಗ ವಿಧಿಸಲಾಗುವ ‘ಕರ್ಫ್ಯೂ’ ಕೂಡ ಜನರ ಬದುಕನ್ನು ಹೈರಾಣಾಗಿಸುತ್ತವೆ. ಒಂದೆರಡು ದಿನ ಕರ್ಫ್ಯೂನಿಂದ ತತ್ತರಿಸಿದ ಯಾವುದೇ ಊರು, ಮತ್ತೊಮ್ಮೆ ಅಂತಹ ಗಲಭೆಯನ್ನು ಬಯಸಲಾರದು. ಕರ್ಫ್ಯೂ ಕೂಡ ಜನಸಾಮಾನ್ಯರ ಮೇಲಿನ ಆರ್ಥಿಕತೆಯ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರುತ್ತದೆ. ವಿಪರ್ಯಾಸವೆಂದರೆ, ಈ ಹಿಂದೆ ಬಂದ್ ಮೂಲಕ ಸರಕಾರವನ್ನು ಜನರು ಬೆದರಿಸುತ್ತಿದ್ದರೆ, ಕಳೆದೆರಡು ವರ್ಷಗಳಿಂದ ಇಂತಹ ಭಾರತ್ ಬಂದ್‌ಗಳು ಸರಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿವೆ. ಒಂದೆರಡು ದಿನವಲ್ಲ, ಹಲವು ತಿಂಗಳುಗಳ ಕಾಲ ಬಂದ್ ಘೋಷಿಸಿ ಸರಕಾರವೇ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ ಮತ್ತು ಈ ಬಂದ್‌ನ್ನು ಸರಕಾರ ಜನರಿಗೆ ನೀಡಿದ ಒಂದು ‘ಕೊಡುಗೆ’ಯಂತೆ ಮಾಧ್ಯಮಗಳು ಬಣ್ಣಿಸುತ್ತಿವೆ. ಲಾಕ್‌ಡೌನ್‌ನಿಂದಾಗಿ ಈ ದೇಶದ ಆರ್ಥಿಕತೆಗೆ ಆದ ನಷ್ಟಗಳೆಷ್ಟು ಎನ್ನುವುದರ ಬಗ್ಗೆ ಚರ್ಚಿಸಲು ಯಾವ ಮಾಧ್ಯಮಗಳಿಗೂ ಆಸಕ್ತಿಯಿಲ್ಲ. ಮಾಧ್ಯಮಗಳೇ ‘ಸರಕಾರವೇಕೆ ಬಂದ್ ಘೋಷಿಸುತ್ತಿಲ್ಲ’ ಎಂದು ಪ್ರಶ್ನಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಈ ಬಂದ್‌ಗೆ ಲಾಕ್‌ಡೌನ್, ಜನತಾ ಕರ್ಫ್ಯೂ ಎಂಬಿತ್ಯಾದಿ ಸುಂದರ ಪದಗಳನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ.

ಕೊರೋನವನ್ನು ಎದುರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ಕೊರೋನ ಹೆಚ್ಚಾಗಿದೆ ಎಂದು ಮಾಧ್ಯಮಗಳು ಬೊಬ್ಬಿಟ್ಟಾಗ, ಲಾಕ್‌ಡೌನ್ ಘೋಷಿಸಿ ಕೊರೋನವನ್ನು ಎದುರಿಸಲು ಮುಂದಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷಯ, ಮಲೇರಿಯಾ, ಡೆಂಗಿ ಮೊದಲಾದ ರೋಗಗಳು ಹಬ್ಬಿದಾಗಲೂ ಅದಕ್ಕೆ ಔಷಧಿಯಾಗಿ ಲಾಕ್‌ಡೌನ್‌ನ್ನು ಘೋಷಿಸಿದರೆ ಅಚ್ಚರಿಯೇನೂ ಇಲ್ಲ. ಲಾಕ್‌ಡೌನ್‌ನಿಂದ ಕೊರೋನವನ್ನು ಎದುರಿಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಪದೇ ಪದೇ ಎಚ್ಚರಿಸಿದ್ದರೂ ಸರಕಾರ, ಲಾಕ್‌ಡೌನ್ ಮೂಲಕವೇ ಕೊರೋನವನ್ನು ಎದುರಿಸಲು ಹೊರಟಿರುವುದು ವಿಪರ್ಯಾಸವಾಗಿದೆ. ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸುವುದಕ್ಕಾಗಿಯೂ ಲಾಕ್‌ಡೌನ್‌ನ್ನು ಬೆದರಿಕೆಯಾಗಿ ಬಳಸುತ್ತಿದೆ. ಇದರಿಂದಾಗಿ ಕೊರೋನ ಕಡಿಮೆಯಾಗಿದೆಯೋ ಇಲ್ಲವೋ, ದೇಶದ ಆರ್ಥಿಕತೆ ಸರ್ವನಾಶವಾಗಿದೆ. ನಿರುದ್ಯೋಗಗಳು ವ್ಯಾಪಕವಾಗಿವೆ. ಜೊತೆಗೆ ಕ್ಷಯದಂತಹ ಸಾಂಕ್ರಾಮಿಕ ರೋಗಗಳು ಮಾರಕ ರೂಪವನ್ನು ತಲುಪುತ್ತಿವೆ. ಹಾಗೆಂದು ಸರಕಾರಕ್ಕೆ ಬಂದ್‌ನಿಂದ ಆಗುವ ಅನಾಹುತಗಳ ಬಗ್ಗೆ ಅರಿವಿಲ್ಲ ಎಂದರೆ ನಮ್ಮ ಮೂರ್ಖತನವಾಗುತ್ತದೆ. ಪರಭಾಷಿಕರ ದಬ್ಬಾಳಿಕೆಯ ವಿರುದ್ಧ ಡಿ.31ರಂದು ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟ ಬಗ್ಗೆ ಸರಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಬಲವಂತದ ಬಂದ್ ಮಾಡಿದರೆ ಕಠಿಣಕ್ರಮವನ್ನು ಜರುಗಿಸುವುದಾಗಿಯೂ ಅದು ಬೆದರಿಕೆಯೊಡ್ಡಿದೆ.

‘‘ಸುದೀರ್ಘ ಅವಧಿಯ ಕೋವಿಡ್ ಸಾಂಕ್ರಾಮಿಕದಿಂದ ಬೀದಿ ಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸೇರಿ ವಿವಿಧ ವರ್ಗಗಳ ಜನತೆ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಮಾಡುವುದು ಒಳ್ಳೆಯದಲ್ಲ’’ ಎಂದು ರಾಜ್ಯ ಗೃಹ ಸಚಿವರು ಸಲಹೆ ನೀಡಿದ್ದಾರೆ. ‘ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಕೈ ಬಿಡಿ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಮನವಿ ಮಾಡಿದ್ದಾರೆ. ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಒಂದು ದಿನದ ಬಂದ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದಾದರೆ, ಕಳೆದೆರಡು ವರ್ಷಗಳಿಂದ ಸರಕಾರದ ಬಂದ್‌ನಿಂದ ಜನ ಸಾಮಾನ್ಯರು ಸಂತೋಷ ಪಟ್ಟಿದ್ದಾರೆಯೇ?. ‘ಜವಳಿ ಕಟ್ಟು ಹೊತ್ತವನಿಗೆ ಲಂಗೋಟಿ ಭಾರವೇ?’ ಎಂಬ ಗಾದೆಯೊಂದು ಗ್ರಾಮೀಣ ಪ್ರದೇಶದಲ್ಲಿದೆ. ಈಗಾಗಲೇ ವರ್ಷ ಪೂರ್ತಿ ಬಂದ್‌ನಿಂದ ಸರ್ವನಾಶವಾಗಿರುವ ಜನಸಾಮಾನ್ಯರಿಗೆ, ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿರುವ ಒಂದು ದಿನದ ಬಂದ್‌ನಿಂದ ತೊಂದರೆಯಾಗುತ್ತದೆ ಎಂದು ಗೃಹ ಸಚಿವರು ಹೇಳುವುದೇ ತಮಾಷೆಯ ವಿಷಯವಾಗಿದೆ. ಒಂದು ರೀತಿಯಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಗೃಹಸಚಿವರು ಅಣಕವಾಡಿದ್ದಾರೆ. ಇದೇ ಸಂದರ್ಭದಲ್ಲಿ, ‘ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂದ್ ಬೇಡ’ ಎಂಬ ಮುಖ್ಯಮಂತ್ರಿಯ ಮಾತಿನಲ್ಲೂ ಸ್ಪಷ್ಟತೆಯಿಲ್ಲ. ಕೋವಿಡ್ ಪ್ರಕರಣ ಜಾಸ್ತಿಯಾಗಿದೆ ಎನ್ನುವ ಕಾರಣಕ್ಕಾಗಿಯೇ ಪದೇ ಪದೇ ಬಂದ್‌ಗಳನ್ನು ಘೋಷಿಸಿದ ಸರಕಾರ, ಕನ್ನಡಪರ ಸಂಘಟನೆಗಳು ಬಂದ್ ಘೋಷಿಸಿದಾಗ ಕೋವಿಡ್ ಹೆಚ್ಚುತ್ತದೆ ಎಂದು ಹೇಳುವುದರಲ್ಲಿ ಯಾವ ನ್ಯಾಯವಿದೆ?.

 ಬೆಳಗಾವಿಯಲ್ಲಿ ಎಂಇಎಸ್‌ನ್ನು ಸಾಕಿರುವುದೇ ಬಿಜೆಪಿ ಮತ್ತು ಸಂಘಪರಿವಾರ. ಅವರನ್ನು ಓಲೈಸುವುದಕ್ಕಾಗಿಯೇ ಮರಾಠಿ ಭಾಷೆಯ ಅಭಿವೃದ್ಧಿಗೆ ಪ್ರಾಧಿಕಾರವನ್ನು ಬಿಜೆಪಿ ಸರಕಾರ ಸ್ಥಾಪಿಸಿತು. ಮರಾಠಿ ಅಸ್ಮಿತೆಗಳನ್ನು ಕನ್ನಡಿಗರ ಮೇಲೆ ಹೇರುವಲ್ಲಿ ಬಿಜೆಪಿಯ ಪಾತ್ರ ಸಣ್ಣದೇನೂ ಅಲ್ಲ. ಈ ಕನ್ನಡ ಪರ ಹೋರಾಟ ಶಿವಾಜಿ ಅಭಿಮಾನಿಗಳು ಮತ್ತು ಸಂಗೊಳ್ಳಿ ರಾಯಣ್ಣನ ಬೆಂಬಲಿಗರ ನಡುವಿನ ತಿಕ್ಕಾಟವಾಗಿ ಪರಿವರ್ತನೆಯಾಗಿರುವುದು ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆ ಕಾರಣದಿಂದ, ಕೊರೋನವನ್ನು ಮುಂದಿಟ್ಟು ಕನ್ನಡಪರ ಸಂಘಟನೆಗಳ ಬಂದ್‌ನ್ನು ದಮನಿಸಲು ಯತ್ನಿಸುತ್ತಿದೆ. ಈಗಾಗಲೇ ಕನ್ನಡ ಪರ ಸಂಘಟನೆಗಳು ಸರಕಾರದ ಮನವಿಗೆ ಓಗೊಟ್ಟು ಬಂದ್ ಹಿಂದೆಗೆದಿದೆಯಾದರೂ, ಕನ್ನಡ ವಿರೋಧಿ ಸಂಘಟನೆಗಳ ಬಗ್ಗೆ ತನ್ನ ಧೋರಣೆಯನ್ನು ರಾಜ್ಯಕ್ಕೆ ಸ್ಪಷ್ಟ ಪಡಿಸುವುದು ಸರಕಾರದ ಕರ್ತವ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)