varthabharthi


ನಿಮ್ಮ ಅಂಕಣ

‘ಕೊರಗರು’ ಮತ್ತು ಕೊರಗುವವರು

ವಾರ್ತಾ ಭಾರತಿ : 31 Dec, 2021
ಕಲ್ಲಚ್ಚು ಮಹೇಶ ಆರ್. ನಾಯಕ್

ಕರ್ನಾಟಕ ಕರಾವಳಿಯ ಪ್ರಸ್ತುತ ನಡುವಯಸ್ಕರಾದ ಯಾವುದೇ ಧರ್ಮ ಜಾತಿಯ ಯಾರಾದರೂ ಸೈ, ಅದೆಂತಹ ವೈಭವಯುತ ವ್ಯವಸ್ಥೆಯಲ್ಲಿ ಹುಟ್ಟಿ ಬೆಳೆದಿದ್ದರೂ ಕೊನೆಯ ಪಕ್ಷ ನವರಾತ್ರಿಯ ಸಂದರ್ಭದಲ್ಲಿ ತಮ್ಮ ಬಾಲ್ಯದಲ್ಲಿ ಕರಿಕಪ್ಪು‘ಕೊರಗ’ ವೇಷ ನೋಡದಿರಲಾರರು. (ಈಗ ಇದು ನಿಷೇಧ) ಅಂದರೆ, ಒಂದೇ ಮಾತಿನಲ್ಲಿ ಹೇಳಬೇಕಾದರೆ ‘ಕೊರಗ’ ಸಮುದಾಯದ ಬದುಕಿನ ಕರಾಳತೆಯ ಅಂದಿನ ಹೀನಾಯ ಸ್ಥಿತಿಯ ಕಲ್ಪನೆಯಂತೂ ಖಂಡಿತ ಇದ್ದಿತ್ತೆಂದರ್ಥ. ಆದರೆ ಕಾಲಕ್ರಮೇಣ ಸಂವಿಧಾನ ಕೊಟ್ಟ ಬಲದಿಂದ ಇಂದು ಅದೇ ಕೊರಗರು (ಮತ್ತು ಎಲ್ಲ ದಲಿತ ವರ್ಗದವರು) ಹಂತ ಹಂತವಾಗಿ ಬದುಕಿನ ಗಟ್ಟಿತನಕ್ಕೆ ಮುಖಮಾಡಲು ಅವಕಾಶವಾಗಿ ಇಂದು ಒಂದಿಷ್ಟು ಸಮಾಜದಲ್ಲಿ ತನ್ನನ್ನು ತಾನು ಹೊಳೆಯುವ ರೀತಿಯಲ್ಲಿ ತೊರ್ಪಡಿಸುವ ರೀತಿಗೆ ಬಂದಿದ್ದಾರೆ. ಬಹುಶಃ ಇದು ಈಗ ಅನೇಕರಿಗೆ ಕೊರಗುವಂತೆ ಮಾಡಿದೆ.

 ಮೊನ್ನೆಯ ಉಡುಪಿ ಜಿಲ್ಲೆಯ ಕೋಟದ ಕೊರಗರ ಮದುವೆ ಮನೆಯ ಪೊಲೀಸ್ ಹಲ್ಲೆ ಪ್ರಕರಣ ಅಪ್ಪಿ ತಪ್ಪಿ ಕಣ್ಣಿಗೆ ಬಿತ್ತಾದರೂ, ಈ ಕೊರಗುವಿಕೆಯ ಹತ್ತಾರು ಬಗೆಯ ಪರಿತಾಪಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಭಾರತದಲ್ಲಿ ಇಂದಿಗೂ ಅದು ಯಾವ ಪ್ರದೇಶದಲ್ಲೇ ಆಗಲಿ ದಲಿತರು ಬಲಿತರಾಗಿ ಸಬಲೀಕರಣಗೊಳ್ಳುತ್ತಿದ್ದರೆಂದರೆ, ಕೇವಲ ಬ್ರಾಹ್ಮಣ ವರ್ಗ ಮಾತ್ರವಲ್ಲ ಹಿಂದುಳಿದ ಇತರ ಸಮುದಾಯದ ಮಂದಿಗೂ ಸಹಿಸಲಾಗುತ್ತಿಲ್ಲ. ಬಹಿರಂಗವಾಗಿ ಕೆಲವೊಮ್ಮೆ ಏನೂ ಮಾಡಲಾಗದಿದ್ದರೂ ಆಂತರಿಕ ತಳಮಳ ಅಸಮಾಧಾನ ಶತಸಿದ್ಧ. ಶತಮಾನಗಳಿಂದ ತುಳಿಯಲ್ಪಟ್ಟ ಸಮುದಾಯ ನಂತರದ ದಿನಗಳಲ್ಲಿ ತಮಗೆ ಸರಿಸಮಾನವಾಗಿ ಬೆಳೆಯುತ್ತಿರುವುದು, ಭಾಷಣದಲ್ಲಿ ‘‘ನಾವೆಲ್ಲ ಒಂದೇ’’ ಎನ್ನುವ ಹಿಂದೂ ಸಮಾಜದ ಅನೇಕರಿಗೆ, ಅವುಗಳ ಗುತ್ತಿಗೆ ಪಡೆದಿರುವ ಸಂಘಟನೆಗಳಿಗಂತೂ ಮುಂದೊಂದು ದಿನ ಸಾಮಾಜಿಕ ನೆಲೆಯ ತಮ್ಮ ಸ್ಥಾನಮಾನ ಆರ್ಥಿಕ ರಾಜಕೀಯ ಹಿಡಿತವನ್ನು ಕಿತ್ತೆಸೆಯಬಹುದೆಂಬ ಆತಂಕದಿಂದ ಭಯದ ವಾತಾವರಣವನ್ನೇ ತಂದಿಟ್ಟಿದೆ.

ಇಂತಹ ಮುಖ್ಯ ವಾಹಿನಿಗೆ ಬರುತ್ತಿರುವ ಕೊರಗರ ಕಂಡು ಕೊರಗಿ ಒಳಗೊಳಗೆ ಅವರಿಗೆ ಸರಕಾರದಿಂದಲೇ ಪೆಟ್ಟು ಕೊಡಿಸಿ ಖುಷಿ ಪಟ್ಟವರ ಮತ್ತೊಂದು ಪ್ರಬಲ ಕಾರಣವಿದು. ಮೂಲತಃ ದಲಿತರು ದುರದೃಷ್ಟವಶಾತ್ ನಮ್ಮ ನಡುವೆ ವರ್ಣಾಶ್ರಮದ ಆಧಾರದಲ್ಲಿ ಹುಟ್ಟಿಕೊಂಡ ಸಾಮಾಜಿಕವಾಗಿ ನಿಕೃಷ್ಟವೆನ್ನುತ್ತಿದ್ದ ವೃತ್ತಿಗಳಲ್ಲೇ ತಮ್ಮ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾಗ ಅವರ ಬಗ್ಗೆ ಯಾರಬಳಿಯೂ ಯಾವ ಕಾಳಜಿಯೂ ಇರಲಿಲ್ಲ, ಕೊರಗೂ ಬರಲಿಲ್ಲ. ಕಾಲಕ್ರಮೇಣ ಅವರ ಕೈಗೆ ಸಿಕ್ಕಿದ ಶಿಕ್ಷಣ, (ಇದಕ್ಕೆ ಮೂಲ ಕಾರಣ ಕ್ರೈಸ್ತ ಸಂಸ್ಥೆಗಳು) ಅಂಬೇಡ್ಕರ್ ದೂರದೃಷ್ಟಿಯ ಮೀಸಲಾತಿಯ ಭಾಗವಾಗಿ ದೊರೆತ ಉದ್ಯೋಗ ದಲಿತರನ್ನು ಬಲಿತರನ್ನಾಗಿ ಮಾಡಲು ಆರಂಭಿಸಿದ್ದೇ ತಡ ಈ ಕೊರಗುವಿಕೆಯ ಹಪಹಪಿಕೆಯನ್ನು ವಿಸ್ತಾರಗೊಳಿಸಿದೆ. ಇದಕ್ಕೆಲ್ಲ ಸ್ವಲ್ಪಮಟ್ಟಿಗೆ ಸ್ವತಃ ದಲಿತರು ಕೂಡಾ ಕಾರಣ. ಬ್ರಾಹ್ಮಣ್ಯದ ವ್ಯವಸ್ಥೆಯನ್ನು (ಅದರಲ್ಲೂ ವಿಪರೀತ ದುಡ್ಡು ಖರ್ಚು ಮಾಡುವ ಆರಾಧನಾ ಪದ್ಧ್ದತಿ) ಮೈ ಮೇಲೆ ಎಳೆದುಕೊಂಡು ಒಂದರ್ಥದಲ್ಲಿ ನವದಲಿತರಾಗಹೊರಟ್ಟದ್ದು, ರಾಜಕೀಯ ಪ್ರೌಢಿಮೆಯನ್ನು ತೋರಿಸಲು ವಿಫಲರಾದದ್ದು, ವೈಯಕ್ತಿಕವಾಗಿ ತಾನು ಬೆಳೆದಂತೆಲ್ಲ ತನ್ನದೇ ಸಮುದಾಯದ ಪಕ್ಕದಾತನನ್ನು ಬೆಳೆಸಲು ಪ್ರಯತ್ನಿಸದೆ ಇರುವಂತಹದ್ದು, ಅಪರೂಪಕ್ಕೆ ಮೀಸಲಾತಿಯ ದುರುಪಯೋಗ ಪಡೆದದ್ದು... ಹೀಗೆ ಕೆಲವಿದೆ. ಇವುಗಳಿಂದಲೇ ಈಗ ದೇಶದ ಯುವ ಜನಾಂಗ ಇತಿಹಾಸದ ಕರಾಳತೆಯನ್ನು ಅರಿಯದೆ ಏಕಮುಖವಾಗಿ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂಬ ಎಚ್ಚರಿಕೆಯಿಂದ, ಕೊರಗರೆದುರು ಕೊರಗುವವರಿಗೆ ಗಟ್ಟಿ ಉತ್ತರ ಕೊಡಲು ಬಹಳ ಬೇಗ ಅವರೊಳಗೂ ಬದಲಾವಣೆ ಕಾಲದ ತುರ್ತು ಅಗತ್ಯ. ಬಹುಶಃ ಅಹಿಂದ ಕಲ್ಪನೆಯ ಹಿಂದಿರುವ ದೊಡ್ಡ ಶಕ್ತಿಯಾದ ಈ ನೆಲದ ಮೂಲ ದಲಿತರೆಂಬ ಅರಿವಿನೊಂದಿಗೆ, ಈಗ ಮದುವೆಯಲ್ಲಿ ತಿಂದ ಪೆಟ್ಟು ಮುಂದೆ ಅವರನ್ನು ಮಸಣದೆಡೆಗೆ ಕೊಂಡೊಯ್ಯುವ ಮೊದಲು ಇನ್ನಷ್ಟು ಬಲಿತು ಬಲಿಷ್ಠರಾಗಿ ಬೆಳೆದು ಕೊರಗರು ಕರಿಕಪ್ಪಾಗಿಯೇ ಜಗದಲ್ಲಿ ಮಿರುಗಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)