varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ವಡ್ಡರ್ಸೆ ಬಿತ್ತಿದ್ದ ಭರವಸೆಯ ಬೀಜ ‘ಮುಂಗಾರು’

ವಾರ್ತಾ ಭಾರತಿ : 31 Dec, 2021
ದಿನೇಶ್ ಅಮಿನ್ ಮಟ್ಟು

ಮೂಲತಃ ದಕ್ಷಿಣ ಕನ್ನಡದವರಾದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ನಾಡಿನ ಜೀವಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಬೆಳೆದ ಅಮೀನ್ ಮಟ್ಟು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ, ಅಂಕಣಕಾರರಾಗಿ ರಾಜ್ಯ, ದೇಶದ ರಾಜಕೀಯಗಳನ್ನು ವಿಶ್ಲೇಷಣೆ ಮಾಡಿದವರು. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಮತ್ತು ಬರೆಯುತ್ತಲೂ ಇದ್ದಾರೆ. ‘ಬೇರೆಯೇ ಮಾತು-ಓದುಗರ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳು’ ಅವರ ಸಂಪಾದನೆಯಲ್ಲಿ ಬಂದಿರುವ ಇತ್ತೀಚಿನ ಮಹತ್ವದ ಕೃತಿ.

ದಿನೇಶ್ ಅಮಿನ್ ಮಟ್ಟು

ಖಾಸಗಿ ಒಡೆತನದಲ್ಲಿದ್ದರೂ ಕರ್ನಾಟಕವೂ ಸೇರಿದಂತೆ ಅಂದಿನ ಮಾಧ್ಯಮ ಕ್ಷೇತ್ರ ಇಂದಿನ ದಿನಗಳ ಹಾಗೆ ಸಂಪೂರ್ಣ ಉದ್ಯಮವಾಗಿ ಪರಿವರ್ತನೆಗೊಂಡಿರಲಿಲ್ಲ. ದೇಶದ ಮಾಧ್ಯಮಕ್ಷೇತ್ರ ಅಂತಹ ಪರಿವರ್ತನೆಗೆ ಒಳಗಾಗಿದ್ದು 1991ರ ಹೊಸ ಆರ್ಥಿಕ ನೀತಿಯ ನಂತರದ ದಿನಗಳಲ್ಲಿ. ವಡ್ಡರ್ಸೆಯವರ ಮುನ್ನೋಟದ ಕಣ್ಣುಗಳಿಗೆ ಹೆಚ್ಚುಕಡಿಮೆ ಹತ್ತು ವರ್ಷಗಳಷ್ಟು ಹಿಂದೆಯೇ ಮಾಧ್ಯಮಕ್ಷೇತ್ರಕ್ಕೆ ಬಂದೊದಗಲಿರುವ ಅಪಾಯವನ್ನು ಕಂಡಿತ್ತು. ಈ ರೀತಿ ಉದ್ಯಮೀಕರಣಗೊಂಡ ಮಾಧ್ಯಮದ ಬಿಡುಗಡೆಗೆ ದಾರಿಯನ್ನೂ ಅವರು ಆ ಕಾಲದಲ್ಲಿಯೇ ಕಂಡಿದ್ದರು. ಸಂಪೂರ್ಣ ಉದ್ಯಮದ ರೂಪ ಪಡೆದಿರುವ ಇಂದಿನ ಮಾಧ್ಯಮಕ್ಕೆ ಪರ್ಯಾಯ ಏನೆಂದು ಯೋಚಿಸುವವರಿಗೆ ಈಗಲೂ ಎದುರಿಗೆ ಇರುವ ಸಿದ್ಧ ಪರ್ಯಾಯ ಮಾದರಿ- ಓದುಗರ ಒಡೆತನದಲ್ಲಿ ಕಟ್ಟಿದ್ದ ‘ಮುಂಗಾರು’.

ಸಾಮಾಜಿಕ ಪರಿವರ್ತನೆಯ ಕನಸುಗಾರರನ್ನು ವೈದ್ಯರಿಗೆ ಹೋಲಿಸುತ್ತಾರೆ. ಮೊದಲ ಬಾರಿ ವಡ್ಡರ್ಸೆಯವರನ್ನು ಕಂದು ಬಣ್ಣದ ಸಪಾರಿಯಲ್ಲಿ ಕಂಡಾಗ ಇವರು ಯಾರೋ ಸೂಟುಬೂಟು ಪತ್ರಕರ್ತರಿರಬಹುದೆಂಬ ಅನುಮಾನ ಹುಟ್ಟಿತ್ತು. ಅವರ ನಡೆ-ನುಡಿಯನ್ನು ನೋಡುತ್ತಾ, ಕೇಳುತ್ತಾ ಹೋದ ಹಾಗೆ ಅವರೊಬ್ಬ ರೈತನಂತೆ ಕಾಣತೊಡಗಿದ್ದರು. ರೈತರ ನೇರಾನೇರ ನಡವಳಿಕೆ, ಸೋಲೊಪ್ಪದ ಹೋರಾಟದ ಛಲ, ಬತ್ತದ ಆಶಾವಾದ, ನಂಬಿ ಕೆಡುವ ಹುಂಬತನ, ಇತರರನ್ನು ಬೆಳೆಸುತ್ತಲೇ ಬೆಳೆಯುವ ಗುಣ ಎಲ್ಲವೂ ವಡ್ಡರ್ಸೆಯವರಲ್ಲಿತ್ತು. ತಮ್ಮ ಕನಸಿನ ಪತ್ರಿಕೆಗೆ ಶಿಷ್ಯ ಇಂದೂಧರ ಹೊನ್ನಾಪುರ ಸೂಚಿಸಿದ್ದ ‘ಮುಂಗಾರು’ ಎಂಬ ಹೆಸರು ವಡ್ಡರ್ಸೆಯವರಿಗೆ ಇಷ್ಟವಾಗಲು ಇವೆಲ್ಲವೂ ಕಾರಣವಿರಬಹುದು. ‘ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು’ ಎನ್ನುವುದೇ ಪತ್ರಿಕೆಯ ಘೋಷವಾಕ್ಯವಾಗಿತ್ತು.

ಕೆಲವು ದಿನ ನೇಗಿಲು ಹಿಡಿದು ಸಾಗುವಳಿ ಮಾಡಿದ್ದ ವಡ್ಡರ್ಸೆಯವರಿಗೆ ಬೆಳೆ ತೆಗೆವ ರೈತರ ಕಷ್ಟಗಳು ಗೊತ್ತಿತ್ತು. ರೈತನ ಬದುಕು ಮುಂಗಾರು ಮಳೆಯ ಜೊತೆಯಲ್ಲಿನ ಜೂಜಾಟ ಎನ್ನುವುದೂ ತಿಳಿದಿತ್ತು. ನಾಲ್ಕು ದಶಕಗಳ ಹಿಂದೆ ‘ಮುಂಗಾರು’ ದಿನಪತ್ರಿಕೆಯ ಹುಟ್ಟು ಮಾಧ್ಯಮ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ಜೂಜಾಟವೇ ಆಗಿತ್ತು.

‘ಮುಂಗಾರು’ ಪ್ರಕಾಶನ ಸಂಸ್ಥೆ ಓದುಗರೇ ಷೇರುದಾರರಾಗಿದ್ದ ಪಬ್ಲಿಕ್ ಲಿಮಿಟೆಡ್ ಕಂಪೆನಿ. ಆಡಳಿತ ನಿರ್ದೇಶಕ ಮತ್ತು ಸಂಪಾದಕರಾಗಿದ್ದ ವಡ್ಡರ್ಸೆಯವರೂ ಸೇರಿದಂತೆ ಏಳು ಮಂದಿ ನಿರ್ದೇಶಕರು ತಲಾ 15,000 ರೂ.ಗಳ ಷೇರು ಬಂಡವಾಳ ಹಾಕಿದ್ದರು. ಇದರ ಜೊತೆಗೆ ಒಂದರಿಂದ ಐದು ಸಾವಿರ ರೂ. ಮುಖಬೆಲೆಯ ಷೇರುಗಳನ್ನು ಓದುಗರಿಗೆ ಮಾರಾಟ ಮಾಡುವ ಮೂಲಕ ಹತ್ತು ಲಕ್ಷ ರೂ. ಸಂಗ್ರಹಿಸುವ ಯೋಜನೆ ವಡ್ಡರ್ಸೆಯವರದ್ದಾಗಿತ್ತು. ಈ ರೀತಿ 20 ಲಕ್ಷ ರೂ. ಬ್ಯಾಂಕ್ ಸಾಲ ಮತ್ತು 10 ಲಕ್ಷ ರೂ.ಗಳ ಮೂಲ ಬಂಡವಾಳದೊಡನೆ ‘ಮುಂಗಾರು’ ಪ್ರಕಾಶನ ಸಂಸ್ಥೆ ಪ್ರಾರಂಭಗೊಂಡಿತ್ತು. ವಿಶೇಷವೆಂದರೆ ಪಡೆದ ಷೇರುಗಳಿಗೆ ಡಿವಿಡೆಂಡ್ ಕೊಡುವುದಿಲ್ಲ ಎಂದು ಹೇಳಿಯೇ ಅವುಗಳನ್ನು ಮಾರಾಟ ಮಾಡಲಾಗಿತ್ತು.

ಕೆಲವು ಶ್ರೀಮಂತ ಕುಟುಂಬಗಳ ಒಡೆತನದಲ್ಲಿದ್ದ ಪತ್ರಿಕೆಗಳ ನಡುವೆ ಓದುಗರನ್ನೇ ಷೇರುದಾರರನ್ನಾಗಿ ಮಾಡಿ ಪಬ್ಲಿಕ್ ಲಿಮಿಟೆಡ್ ಕಂಪೆನಿ ಮೂಲಕ ‘ಓದುಗರ ಒಡೆತನ’ದ ಪತ್ರಿಕೆ ಪ್ರಾರಂಭಿಸುವುದು ಆ ಕಾಲಕ್ಕೆ ಮಾತ್ರವಲ್ಲ ಈ ಕಾಲಕ್ಕೂ ಜೂಜಾಟವೇ ಆಗಿದೆ. ತಮಿಳುನಾಡಿನಲ್ಲಿ ಇಂತಹ ಎರಡು ಪ್ರಯತ್ನಗಳು ನಡೆದಿರುವುದನ್ನು ಅವರು ನೆನಪು ಮಾಡಿಕೊಳ್ಳುತ್ತಿದ್ದರು. ಚೆನ್ನೈನ ಪತ್ರಕರ್ತರ ಒಂದು ತಂಡ ದೇಶದಲ್ಲಿಯೇ ಮೊದಲ ಬಾರಿ ಸಹಕಾರಿ ಸಂಘಟನೆಯ ಮೂಲಕ ಪತ್ರಿಕೆಯನ್ನು ಪ್ರಾರಂಭಿಸಿತ್ತು. ಕೆಲವು ವರ್ಷಗಳ ನಂತರ ಇನ್ನೊಂದು ಪತ್ರಕರ್ತರ ತಂಡ ಅದೇ ಚೆನ್ನೈನಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪೆನಿ ಮೂಲಕ ಪತ್ರಿಕೆಯನ್ನು ಪ್ರಾರಂಭಿಸಿತ್ತು. ಈ ಎರಡೂ ಪ್ರಯತ್ನಗಳು ಅಲ್ಪಾಯುಷಿಯಾಗಿದ್ದವು.

ಖಾಸಗಿ ಒಡೆತನದಲ್ಲಿದ್ದರೂ ಕರ್ನಾಟಕವೂ ಸೇರಿದಂತೆ ಅಂದಿನ ಮಾಧ್ಯಮ ಕ್ಷೇತ್ರ ಇಂದಿನ ದಿನಗಳ ಹಾಗೆ ಸಂಪೂರ್ಣ ಉದ್ಯಮವಾಗಿ ಪರಿವರ್ತನೆಗೊಂಡಿರಲಿಲ್ಲ. ದೇಶದ ಮಾಧ್ಯಮಕ್ಷೇತ್ರ ಅಂತಹ ಪರಿವರ್ತನೆಗೆ ಒಳಗಾಗಿದ್ದು 1991ರ ಹೊಸ ಆರ್ಥಿಕ ನೀತಿಯ ನಂತರದ ದಿನಗಳಲ್ಲಿ. ವಡ್ಡರ್ಸೆಯವರ ಮುನ್ನೋಟದ ಕಣ್ಣುಗಳಿಗೆ ಹೆಚ್ಚುಕಡಿಮೆ ಹತ್ತು ವರ್ಷಗಳಷ್ಟು ಹಿಂದೆಯೇ ಮಾಧ್ಯಮ ಕ್ಷೇತ್ರಕ್ಕೆ ಬಂದೊದಗಲಿರುವ ಅಪಾಯವನ್ನು ಕಂಡಿತ್ತು. ಈ ರೀತಿ ಉದ್ಯಮೀಕರಣಗೊಂಡ ಮಾಧ್ಯಮದ ಬಿಡುಗಡೆಗೆ ದಾರಿಯನ್ನೂ ಅವರು ಆ ಕಾಲದಲ್ಲಿಯೇ ಕಂಡಿದ್ದರು. ಸಂಪೂರ್ಣ ಉದ್ಯಮದ ರೂಪ ಪಡೆದಿರುವ ಇಂದಿನ ಮಾಧ್ಯಮಕ್ಕೆ ಪರ್ಯಾಯ ಏನೆಂದು ಯೋಚಿಸುವವರಿಗೆ ಈಗಲೂ ಎದುರಿಗೆ ಇರುವ ಸಿದ್ಧ ಪರ್ಯಾಯ ಮಾದರಿ- ಓದುಗರ ಒಡೆತನದಲ್ಲಿ ಕಟ್ಟಿದ್ದ ‘ಮುಂಗಾರು’.

ಪ್ರಜಾವಾಣಿಯಲ್ಲಿ ತನ್ನ ವರದಿಗಳಿಂದಾಗಿ ವಡ್ಡರ್ಸೆಯವರು ಸಾಕಷ್ಟು ಜನಪ್ರಿಯರಾಗಿದ್ದರು, ಉದ್ಯೋಗದ ಭದ್ರತೆಯೂ ಇತ್ತು. ಆಗಿನ್ನೂ ಅವರಿಗೆ 55 ವರ್ಷ. ಮೂವರು ಮಕ್ಕಳ ವಿದ್ಯಾಭ್ಯಾಸ ಮುಗಿದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪತ್ನಿ ಪ್ರಪುಲ್ಲಾ ಶೆಟ್ಟಿಯವರ ಸಹಕಾರ-ಸಹಮತ ಇಲ್ಲದೇ ಹೋಗಿದ್ದರೆ ಇಂತಹದ್ದೊಂದು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ? ಆದರೆ ಕುಟುಂಬದ ಬಗ್ಗೆ ವಡ್ಡರ್ಸೆಯವರು ಕೂಡಾ ಯಾರೊಡನೆಯೂ ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ವಡ್ಡರ್ಸೆಯವರಿಗೆ ವೈಯಕ್ತಿಕವಾಗಿ ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವ ಅನಿವಾರ್ಯತೆಯೂ ಇರಲಿಲ್ಲ. ಸಂಪಾದಕೀಯ ನೀತಿ, ಸಂಬಳ-ಸೌಲಭ್ಯಗಳು ಮತ್ತು ಆಡಳಿತ ವರ್ಗದ ಮನೋಧರ್ಮದ ದೃಷ್ಟಿಯಿಂದ ಉಳಿದೆಲ್ಲ ಪತ್ರಿಕೆಗಳಿಗಿಂತ ಪ್ರಜಾವಾಣಿ ಹೆಚ್ಚು ಓದುಗರ ಪರ ಮತ್ತು ನೌಕರಸ್ನೇಹಿಯಾಗಿತ್ತು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ 25 ವರ್ಷಗಳ ಅವಧಿಯಲ್ಲಿ ‘ಪತ್ರಿಕೆಯ ಮಾಲಕರು ಒಮ್ಮೆಯೂ ಅವರ ಮರ್ಜಿಯನ್ನು ನನ್ನ ಮೇಲೆ ಹೊರಿಸುವ ಕೆಲಸ ಮಾಡಿರಲಿಲ್ಲ’ ಎಂದು ವಡ್ಡರ್ಸೆಯವರು ಬಹಳ ಕೃತಜ್ಞತೆಯಿಂದ ತಮ್ಮ ಒಂದು ಅಂಕಣದಲ್ಲಿ ನೆನೆಸಿಕೊಂಡಿದ್ದರು.

ಬ್ರಾಹ್ಮಣ ಪತ್ರಕರ್ತರೇ ಹೆಚ್ಚಿನ ಸಂಖ್ಯೆ ಮತ್ತು ಆಯಕಟ್ಟಿನ ಜಾಗಗಳಲ್ಲಿದ್ದರೂ ಕೆ.ಎನ್.ಹರಿಕುಮಾರ್ ಸಾರಥ್ಯ ವಹಿಸಿಕೊಂಡ ನಂತರ ಅಲ್ಲಿಯವರೆಗೆ ಬ್ರಾಹ್ಮಣಮಯವಾಗಿದ್ದ ಪ್ರಜಾವಾಣಿಯಲ್ಲಿ ಬದಲಾವಣೆಯ ಪರ್ವ ಶುರುವಾಗಿತ್ತು. ಹಿಂದುಳಿದ ಜಾತಿ, ದಲಿತ ಮತ್ತು ಮುಸ್ಲಿಮ್ ಸಮುದಾಯದ ಪತ್ರಕರ್ತರು ಪ್ರಜಾವಾಣಿಗೆ ಪ್ರವೇಶ ಪಡೆದಿದ್ದರು. ಆದರೆ ವಡ್ಡರ್ಸೆಯವರು ಪತ್ರಿಕೆ ಎನ್ನುವುದು ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕೆಂದು ಬಯಸುತ್ತಿದ್ದವರು ಇದು ಸಾಧ್ಯವಾಗಬೇಕಾದರೆ ಪತ್ರಿಕೆಯ ನೀತಿ-ನಿರ್ಧಾರಗಳ ಸೂತ್ರ ತಮ್ಮ ಕೈಯಲ್ಲಿಯೇ ಇರಬೇಕೆಂಬುದು ಬಯಸಿದ್ದರು. ಇಪ್ಪತ್ತೊಂದನೇ ಶತಮಾನದಲ್ಲಿ ಹುಟ್ಟಿಕೊಂಡ ‘ಅಹಿಂದ’ ಎನ್ನುವ ಸಾಮಾಜಿಕ ಒಕ್ಕೂಟದ ಕನಸನ್ನು ವಡ್ಡರ್ಸೆಯವರು 20ನೇ ಶತಮಾನದಲ್ಲಿಯೇ ಕಂಡಿದ್ದರು. ಉದಯವಾಣಿ, ನವಭಾರತದಿಂದ ಬಂದಿದ್ದ ಮೂರು-ನಾಲ್ಕು ಬ್ರಾಹ್ಮಣರನ್ನು ಹೊರತುಪಡಿಸಿದರೆ ಮೊದಲ ಕೋಟಾದಲ್ಲಿಯೇ ಸೇರ್ಪಡೆಯಾಗಿದ್ದ ‘ಮುಂಗಾರು’ ಸಂಪಾದಕೀಯ ಬಳಗದಲ್ಲಿದ್ದ ಪತ್ರಕರ್ತರೆಲ್ಲರೂ ಅಬ್ರಾಹ್ಮಣರೇ ಆಗಿದ್ದರು .

ಈ ಅಬ್ರಾಹ್ಮಣ ಪತ್ರಕರ್ತರ ಸೇರ್ಪಡೆ ವಡ್ಡರ್ಸೆಯವರು ಮತ್ತು ಬೆಂಗಳೂರಿನಿಂದ ಅವರು ಕರೆತಂದಿದ್ದ ಪತ್ರಕರ್ತರ ತಂಡದ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಮೂರೇ ತಿಂಗಳುಗಳ ಅವಧಿಯಲ್ಲಿ ಬೆಂಗಳೂರು ಪತ್ರಕರ್ತರ ತಂಡ ನಿರ್ಗಮಿಸಿದಾಗ ‘ಬ್ರಾಹ್ಮಣರೇ ವಾಸಿ, ಹೇಳಿದಷ್ಟನ್ನು ಮಾಡಿಕೊಂಡು ಹೋಗುತ್ತಾರೆ. ಈ ಕ್ರಾಂತಿಕಾರಿ ಶೂದ್ರರನ್ನು ಕಟ್ಟಿಕೊಂಡರೆ ಕಷ್ಟ’ ಎಂದು ಖಾಸಗಿಯಾಗಿ ಅವರು ಗೊಣಗಾಡಿದ್ದು ಉಂಟು. ಆದರೆ, ಈ ಗೊಣಗಾಟ ‘ಮುಂಗಾರು’ವಿನ ಸಂಪಾದಕೀಯ ನೀತಿ ಮತ್ತು ಪತ್ರಕರ್ತರ ಆಯ್ಕೆಯ ಮೇಲೆ ಯಾವ ಪ್ರಭಾವವೂ ಬೀರಿರಲಿಲ್ಲ.

ಮೊದಲ ಸಂಪಾದಕೀಯ ತಂಡದ ನೇಮಕಾತಿಗೆ ಲಿಖಿತ ಪರೀಕ್ಷೆ-ಮೌಖಿಕ ಸಂದರ್ಶನಗಳಿದ್ದರೂ ನಂತರದ ದಿನಗಳಲ್ಲಿ ನೇರ ನೇಮಕಾತಿಗಳೇ ನಡೆದದ್ದು. ಈ ರೀತಿ ಸೇರಿಕೊಂಡವರೊಬ್ಬರು ಒಮ್ಮೆ ತಮಾಷೆಯಾಗಿ ತನ್ನ ಅನುಭವ ಹೇಳುತ್ತಿದ್ದರು. ಆತ ‘ಮುಂಗಾರು’ವಿನಲ್ಲಿ ಕೆಲಸ ಬೇಕೆಂದು ಫೋನ್ ಮಾಡಿದಾಗ ವಡ್ಡರ್ಸೆಯವರು ತಕ್ಷಣ ‘ಯಾರು ನೀನು ತಮ್ಮಾ?’ ಎಂದು ಕೇಳಿದ್ದಾರೆ. ಈತ ಕುಗ್ಗಿದ ದನಿಯಲ್ಲಿ ‘ನಾನು ಶತಶತಮಾನಗಳಿಂದ ಶೋಷಣೆಗೊಳಗಾದ ಜಾತಿಯವನು ಸಾರ್’ ಎಂದು ಹೇಳಿದ್ದಾನೆ. ತಕ್ಷಣ ಶೆಟ್ರು ‘ಆಯ್ತು, ನಾಳೆ ಬಂದು ಕೆಲಸಕ್ಕೆ ಸೇರಿಕೋ’ ಎಂದು ಹೇಳಿದ್ದರಂತೆ. ಇದು ಆತನ ಅನುಭವವೋ, ಆತನೇ ಹೆಣೆದ ಜೋಕೋ ಎನ್ನುವುದು ಗೊತ್ತಿಲ್ಲದಿದ್ದರೂ ನಂಬುವಂತಿತ್ತು. ಹಾಗಿಲ್ಲದಿದ್ದರೆ ಬಿ.ಕಾಮ್. ಓದಿದ್ದ, ಪತ್ರಿಕೆಯಲ್ಲಿ ಅನುಭವವೇ ಇಲ್ಲದ ನನ್ನಂತಹವರು ಪತ್ರಕರ್ತನಾಗಲು ಹೇಗೆ ಸಾಧ್ಯವಿತ್ತು?

ನಾನು ಪತ್ರಿಕೆಯೊಂದರಲ್ಲಿ ಎರಡು ಬಾರಿ ಪತ್ರಕರ್ತರ ನೇಮಕಾತಿ ನಡೆಸುವ ಸಂಪಾದಕೀಯ ತಂಡದಲ್ಲಿದ್ದೆ. ಮೊದಲ ಹಂತದಲ್ಲಿ ಅರ್ಜಿಗಳ ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ, ನಂತರ ಲಿಖಿತ ಪರೀಕ್ಷೆ, ಕೊನೆಗೆ ಸಂದರ್ಶನ. ಇಷ್ಟೆಲ್ಲ ಆರಿಸಿ, ಗಾಳಿಸಿ ಆಯ್ಕೆ ಮಾಡಿದ 25-30 ಮಂದಿಯಲ್ಲಿ ಗಟ್ಟಿಕಾಳುಗಳಾಗಿ ಉಳಿಯುತ್ತಿದ್ದುದು 10-15 ಮಂದಿ ಮಾತ್ರ. ವಡ್ಡರ್ಸೆಯವರ ಆಯ್ಕೆಯಲ್ಲಿ ಜೊಳ್ಳುಗಳೇ ಇರಲಿಲ್ಲ ಎನ್ನುವುದು ಅಲ್ಲಿ ಕೆಲಸ ಮಾಡಿದ್ದವರ ಪಟ್ಟಿ ನೋಡಿದರೆ ಅಂದಾಜು ಆಗಬಹುದು.

 ಇಂದೂಧರ ಹೊನ್ನಾಪುರ, ಎನ್.ಎಸ್.ಶಂಕರ್, ಕೆ.ಪುಟ್ಟಸ್ವಾಮಿ, ದಿವಂಗತ ಮಹಾಬಲೇಶ್ವರ ಕಾಟ್ರಹಳ್ಳಿ, ಕೆ.ರಾಮಯ್ಯ, ಮಂಗ್ಳೂರ ವಿಜಯ, ಹಸನ್ ನಯೀಂ ಸುರಕೋಡ್, ಕೃಪಾಕರ(ಸೇನಾನಿ), ವಿ.ಮನೋಹರ, ಎಂ.ಬಿ.ಕೋಟಿ, ದಿವಂಗತ ಕೇಶವಪ್ರಸಾದ್, ರಾಮಮೂರ್ತಿ, ದಿವಂಗತ ಯಲಗುಡಿಗೆ ಮಂಜಯ್ಯ, ಜಿ.ಕೆ.ಮಧ್ಯಸ್ತ, ಅತ್ರಾಡಿ ಸಂತೋಷ್ ಹೆಗ್ಡೆ, ಪಂಜು ಗಂಗೊಳ್ಳಿ, ಪಿ.ಮಹಮ್ಮದ್, ಪ್ರಕಾಶ್ ಶೆಟ್ಟಿ, ಕೆ.ಮಕಾಳಿ, ಎಚ್. ನಾಗವೇಣಿ, ಜೈನುಲ್ಲಾ ಬಳ್ಳಾರಿ, ಸುಧಾಕರ ಬನ್ನಂಜೆ, ಯಶವಂತ ಬೋಳೂರು, ಬಿ.ಎಂ.ಹನೀಫ್, ಮಂಜುನಾಥ್ ಚಾಂದ್ ತ್ರಾಸಿ, ಬಿ.ಬಿ. ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್, ಹಿಲರಿ ಕ್ರಾಸ್ತಾ, ಅತ್ರಾಡಿ ಸಂತೋಷ್ ಹೆಗ್ಡೆ, ಬಿ.ಟಿ. ರಂಜನ್, ವಿಶ್ವ ಕುಂದಾಪುರ, ಪ್ರಕಾಶ್ ಅಬ್ಬೂರು, ಬಿ.ಗಣಪತಿ, ಮಂಜುನಾಥ್ ಭಟ್, ಚಿದಂಬರ ಬೈಕಂಪಾಡಿ, ದಿವಂಗತ ರವಿ ರಾ ಅಂಚನ್, ವಿಜು ಪೂಣಚ್ಚ, ಗಂಗಾಧರ ಹಿರೇಗುತ್ತಿ, ಟಿ.ಕೆ.ರಮೇಶ್ ಶೆಟ್ಟಿ, ಲೋಲಾಕ್ಷ, ನೆತ್ತರಕೆರೆ ಉದಯಶಂಕರ್, ಜೆ.ಎ.ಪ್ರಸನ್ನಕುಮಾರ್, ಪರಮಾನಂದ ಸಾಲ್ಯಾನ್, ಭೀಮ ಭಟ್, ದಿವಂಗತ ಪ್ರಭಾಕರ್ ಕಿಣಿ, ರಾಜಾರಾಂ ತಲ್ಲೂರು, ನಿಕಿಲ್ ಕೊಲ್ಪೆ, ಶಿವಸುಬ್ರಹ್ಮಣ್ಯ... ಹೀಗೆ ಸಾಗುತ್ತದೆ ಪಟ್ಟಿ. ಇವರಲ್ಲಿ ಕೆಲವರು ತಮ್ಮ ವೃತ್ತಿ ಬದಲಾಯಿಸಿಕೊಂಡಿರಬಹುದು, ಆದರೆ ಈ ಹೆಸರುಗಳನ್ನು ಬಲ್ಲವರು ಯಾರೂ ಈ ಪಟ್ಟಿಯಲ್ಲಿ ಜೊಳ್ಳುಗಳಿವೆ ಎಂದು ಹೇಳಲಾರರು. ಮೂರು ದಶಕಗಳ ನಂತರವೂ ಇವರೆಲ್ಲ ಗಟ್ಟಿಕಾಳುಗಳಾಗಿಯೇ ಉಳಿದಿದ್ದಾರೆ.

‘ಮುಂಗಾರು’ ಪತ್ರಿಕೆಯ ವೈಫಲ್ಯಕ್ಕೆ ಮೂಲ ಕಾರಣ ಅವರು ಆಯ್ಕೆ ಮಾಡಿಕೊಂಡ ಸ್ಥಳ ಎನ್ನುವ ಆಭಿಪ್ರಾಯವೂ ಇದೆ. ಪತ್ರಿಕೆ ಮತ್ತು ವಡ್ಡರ್ಸೆಯವರನ್ನು ಬಲ್ಲ ಬಹುತೇಕ ಮಂದಿಯ ಅಭಿಪ್ರಾಯವನ್ನು ತಳ್ಳಿಹಾಕಲಾಗದು. ಬೆಂಗಳೂರಿನಲ್ಲಿಯೇ ಪ್ರಾರಂಭಿಸಿದ್ದರೆ ಪತ್ರಿಕೆ ಉಳಿಯುತ್ತಿತ್ತು, ಬೆಳೆಯುತ್ತಿತ್ತು ಎನ್ನುವವರೂ ಇದ್ದಾರೆ. ವಡ್ಡರ್ಸೆಯವರು ‘ಮುಂಗಾರು’ ಪತ್ರಿಕೆಯನ್ನು ಮಂಗಳೂರಿನಿಂದಲೇ ಪ್ರಾರಂಭಿಸಲು ಎರಡು-ಮೂರು ಕಾರಣಗಳಿದ್ದವು. ಈ ಕಾರಣಗಳು ‘ಮುಂಗಾರು’ ಪತ್ರಿಕೆಯ ವೈಫಲ್ಯಕ್ಕೆ ಕಾರಣಗಳೂ ಹೌದು. ಮೊದಲ ಕಾರಣ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಾತಿ ರಚನೆ. ಬಿಲ್ಲವರು ಮತ್ತು ಮುಸ್ಲಿಮರು ಹೆಚ್ಚು ಕಡಿಮೆ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ, ಸಂಖ್ಯೆಯಲ್ಲಿ ಅವರ ನಂತರದ ಸ್ಥಾನದಲ್ಲಿದ್ದರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಾಢ್ಯರಾಗಿರುವ ಬಂಟರು ಇರುವ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿ. ಇವರ ಜೊತೆಗೆ ಇತರ ಹಿಂದುಳಿದವರು, ದಲಿತರು ಮತ್ತು ಕ್ರಿಶ್ಚಿಯನ್ನರನ್ನು ಸೇರಿಸಿದರೆ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡಾ 80-90ರಷ್ಟಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಲ್ಲಿನ ‘ಅಹಿಂದ’ ಸಮಾಜ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿದೆ. ಅದು ಕ್ರಾಂತಿ ರಂಗದ ಕಹಳೆ ಊದಿದ್ದ ಎಸ್. ಬಂಗಾರಪ್ಪನವರು ತನ್ನ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕಾಲ. ಕರಾವಳಿಯ ಬಿಲ್ಲವ/ಈಡಿಗ ಸಮುದಾಯದಲ್ಲಿ ಎಸ್. ಬಂಗಾರಪ್ಪನವರು ವಿಸ್ತಾರವಾದ ಅಭಿಮಾನಿ ಬಳಗ ಹೊಂದಿದ್ದರು. ದೇವೇಗೌಡ, ಜೀವರಾಜ ಆಳ್ವ, ಅಬ್ದುಲ್ ನಝೀರ್ ಸಾಬ್, ಜೆ.ಎಚ್. ಪಟೇಲ್, ಕೆ.ಎಚ್. ರಂಗನಾಥ್ ಸೇರಿದಂತೆ ವಡ್ಡರ್ಸೆಯವರಿಗೆ ಪಕ್ಷಾತೀತವಾಗಿ ಹಲವಾರು ರಾಜಕಾರಣಿಗಳ ಜೊತೆ ಒಡನಾಟವಿತ್ತು. ಆದರೆ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಹಿಂದುಳಿದ ಈಡಿಗ ಜಾತಿಯ ಎಸ್. ಬಂಗಾರಪ್ಪನವರ ಬಗ್ಗೆ ವಡ್ಡರ್ಸೆಯವರಿಗೆ ವಿಶೇಷವಾದ ಅಭಿಮಾನ ಇತ್ತು. ವಡ್ಡರ್ಸೆಯವರ ಬಗ್ಗೆ ಬಂಗಾರಪ್ಪನವರಿಗೆ ಅಷ್ಟೇ ಗೌರವ ಇತ್ತು. ‘ಮುಂಗಾರು’ ಪತ್ರಿಕೆಯ ಸ್ಥಾಪನೆ ಮತ್ತು ಅದನ್ನು ಮಂಗಳೂರಿನಿಂದಲೇ ಶುರುಮಾಡಲು ಬಂಗಾರಪ್ಪನವರ ಬೆಂಬಲದ ಆಶ್ವಾಸನೆಯೂ ಒಂದು ಕಾರಣ. ‘ಮುಂಗಾರು’ ಪ್ರಕಾಶನ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದ ಬಿಲ್ಲವರೆಲ್ಲರೂ ಎಸ್. ಬಂಗಾರಪ್ಪನವರ ನಿಕಟವರ್ತಿಗಳೇ ಆಗಿದ್ದರು. ಅದೇ ರೀತಿ ಬಂಟರಲ್ಲಿಯೂ ತಮ್ಮ ಸಮುದಾಯಕ್ಕೆ ಸೇರಿದ ಜನಪ್ರಿಯ ಪತ್ರಕರ್ತನೆಂಬ ಕಾರಣಕ್ಕಾಗಿ ವಡ್ಡರ್ಸೆಯವರನ್ನು ವೈಯಕ್ತಿಕವಾಗಿ ಮೆಚ್ಚಿಕೊಂಡವರೂ ಇದ್ದರು. ದೊಡ್ಡ ಪ್ರಮಾಣದಲ್ಲಿ ಮಧ್ಯಮ ವರ್ಗ ಇರುವ ಈ ಎರಡೂ ಜಾತಿಗಳಲ್ಲಿ ಮುಂಬೈ ಮೂಲದ ಶ್ರೀಮಂತ ಹೊಟೇಲ್ ಉದ್ಯಮಿಗಳೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಕರಾವಳಿಯ ಓದುಗರನ್ನೇ ಗುರಿಯಾಗಿಟ್ಟುಕೊಂಡಿದ್ದ ಏಕೈಕ ಪತ್ರಿಕೆ ಉದಯವಾಣಿ, ಮಣಿಪಾಲದ ಗೌಡಸಾರಸ್ವತ ಬ್ರಾಹ್ಮಣ ಉದ್ಯಮಿಗಳ ಮಾಲಕತ್ವದ್ದು. ಹೀಗಿರುವಾಗ ಅವಕಾಶ ವಂಚಿತ ಸಮುದಾಯಗಳ ದನಿಯಾಗಿ ಒಂದು ಪತ್ರಿಕೆಯನ್ನು ರೂಪಿಸಿದರೆ ಜನ ಸ್ವೀಕರಿಸಬಹುದೆಂಬ ನಿರೀಕ್ಷೆ ವಡ್ಡರ್ಸೆಯವರಿಗಿತ್ತು. ‘ಮುಂಗಾರು’ ಪ್ರಕಾಶನದ ಕಂಪೆನಿಯ ಏಳು ಸ್ಥಾಪಕ ನಿರ್ದೇಶಕರಲ್ಲಿ ತಲಾ ಮೂರು ಮಂದಿ ಬಿಲ್ಲವ ಮತ್ತು ಬಂಟರು. ಒಬ್ಬರು ಮುಸ್ಲಿಮ್ ಮತ್ತು ಇನ್ನೊಬ್ಬರು ಕ್ರಿಶ್ಚಿಯನ್ ಆಗಿದ್ದರು. ದಕ್ಷಿಣ ಕನ್ನಡವನ್ನು ಆರಿಸಿಕೊಳ್ಳಲು ಎರಡನೇ ಕಾರಣ- ರಾಜ್ಯಮಟ್ಟದ ಎಲ್ಲ ಪತ್ರಿಕೆಗಳು ರಾಜಧಾನಿಯಲ್ಲಿಯೇ ಮುದ್ರಣಗೊಳ್ಳುತ್ತಿದ್ದದ್ದು. ದಕ್ಷಿಣ ಕನ್ನಡವೂ ಸೇರಿದಂತೆ ನೆರೆಯ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪತ್ರಿಕೆಗಳು ತಲುಪುತ್ತಿದ್ದುದೇ ಮಧ್ಯಾಹ್ನದ ಹೊತ್ತು. ದಕ್ಷಿಣ ಕನ್ನಡ-ಉಡುಪಿ-ಉತ್ತರಕನ್ನಡ ಜಿಲ್ಲೆಗಳ ಜನರಿಗೆ ಬೆಳಗ್ಗೆ ಸಿಗುತ್ತಿದ್ದ ಪತ್ರಿಕೆಯೇ ಉದಯವಾಣಿಯಾದ ಕಾರಣ ಅದು ಅನಿವಾರ್ಯವಾಗಿತ್ತು. ಕರಾವಳಿಯ ಶಿಕ್ಷಿತ ಓದುಗರಿಗೆ ಒಂದು ಗುಣಮಟ್ಟದ ಪತ್ರಿಕೆಯನ್ನು ಮುಂಜಾನೆಯೇ ಕೈಗೆ ಕೊಟ್ಟರೆ ಬೆಂಬಲಿಸಬಹುದು ಎನ್ನುವ ನಿರೀಕ್ಷೆ ವಡ್ಡರ್ಸೆಯವರಲ್ಲಿತ್ತು.

ಮೂರನೇ ಕಾರಣ- ಜಾಹೀರಾತು. ಪ್ರಚಾರಪ್ರಿಯತೆ ದ.ಕ.ದವರ ರಕ್ತದಲ್ಲಿಯೇ ಇದೆ. ಹುಟ್ಟಿನಿಂದ ಸಾವಿನವರೆಗೆ ಎಲ್ಲವನ್ನೂ ಪ್ರಚಾರದ ಮೂಲಕ ಸಂಭ್ರಮಿಸುವ ಚಾಳಿ ಅಲ್ಲಿಯ ಜನರಲ್ಲಿದೆ. ಈಗಲೂ ಉದಯವಾಣಿ ಪತ್ರಿಕೆಯನ್ನು ಬಿಡಿಸಿದರೆ ಮೂರು-ನಾಲ್ಕು ಪುಟಗಳಲ್ಲಿ ಕೇವಲ ಮದುವೆ, ಸಾವು, ವಿವಾಹ ವಾರ್ಷಿಕೋತ್ಸವದ ಜಾಹೀರಾತುಗಳಿರುತ್ತವೆ. ದ.ಕ. ಜನರ ಈ ಪ್ರಚಾರದ ಶೋಕಿಯ ದೌರ್ಬಲ್ಯದಿಂದಾಗಿ ಜಾಹೀರಾತಿನ ಹೊಳೆ ಹರಿಯುತ್ತದೆ ಎಂಬ ವಿಶ್ವಾಸ ವಡ್ಡರ್ಸೆಯವರಲ್ಲಿತ್ತು. ಮೇಜಿನ ಮೇಲಿನ ಈ ಲೆಕ್ಕಾಚಾರಗಳೆಲ್ಲ ಯಾರಾದರೂ ತಲೆ ತೂಗುವಂತಿತ್ತು. ಆದರೆ, ದಕ್ಷಿಣ ಕನ್ನಡ ಬದಲಾಗಿತ್ತು...

ಎಂಬತ್ತರ ದಶಕವನ್ನು ‘ಚಳವಳಿಗಳ ಸುವರ್ಣಯುಗ’ ಎಂದು ಕರೆಯಬಹುದು. ಅದು ದಲಿತ ಚಳವಳಿ, ರೈತ ಚಳವಳಿ ಮತ್ತು ಭಾಷಾ ಚಳವಳಿಗಳು ಧಗಧಗಿಸಿ ಉರಿದು ರಾಜ್ಯದಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಪರಾಭವಗೊಂಡು ಜನತಾ ರಂಗ ಅಧಿಕಾರಕ್ಕೆ ಬಂದಿದ್ದ ಕಾಲ. ಈ ರಾಜಕೀಯ ಬದಲಾವಣೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆಂಬ ವಿಶ್ವಾಸವನ್ನು ಉಕ್ಕಿಸುತ್ತಿದ್ದ ಕಾಲ. ವಡ್ಡರ್ಸೆಯವರ ಓದುಗರ ಒಡೆತನದ ಪತ್ರಿಕಾ ಸಾಹಸಕ್ಕೆ ಈ ಚಳವಳಿಗಳು ಕೂಡಾ ಪ್ರೇರಣೆ ಮತ್ತು ಕಾರಣ. ಆದರೆ, ರಾಜ್ಯದಲ್ಲಿ ಇಂತಹ ಪರಿವರ್ತನೆಯ ಗಾಳಿ ಬಲವಾಗಿ ಬೀಸುತ್ತಿದ್ದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ಮೂರೂ ಚಳವಳಿಗಳಿಂದ ದೂರವೇ ಉಳಿದಿದ್ದವು ಎನ್ನುವುದು ಕೂಡಾ ವಾಸ್ತವ. ಅಷ್ಟು ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಲೇ ನಿಧಾನವಾಗಿ ಕೋಮುವಾದ ಮೊಳಕೆಯೊಡೆಯಲಾರಂಭಿಸಿತ್ತು.

1983ರ ವಿಧಾನಸಭಾ ಚುನಾವಣೆಯಲ್ಲಿ ಈಗಿನ ಉಡುಪಿ ಜಿಲ್ಲೆಯನ್ನೂ ಒಳಗೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 15 ಕ್ಷೇತ್ರಗಳಲ್ಲಿ ಮೊದಲ ಬಾರಿ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ರಾಜ್ಯದಲ್ಲಿ ಜನತಾ ಪಕ್ಷದ ಸರಕಾರ 18 ಬಿಜೆಪಿ ಶಾಸಕರ ಬೆಂಬಲದ ಬಲದಿಂದ ಅಸ್ತಿತ್ವದಲ್ಲಿದ್ದ ಕಾರಣದಿಂದಾಗಿ ಆಡಳಿತದಲ್ಲಿ ಬಿಜೆಪಿ ಪ್ರಭಾವ ನಿರ್ಣಾಯಕವಾಗಿತ್ತು (ಬಿಜೆಪಿ ಬ್ಲಾಕ್ ಮೇಲ್ ರಾಜಕಾರಣದಿಂದ ಮುಕ್ತಿ ಪಡೆಯುವ ಉದ್ದೇಶದಿಂದಲೇ ರಾಮಕೃಷ್ಣ ಹೆಗಡೆ ಅವರು 1985ರಲ್ಲಿ ಮಧ್ಯಂತರ ಚುನಾವಣೆಯ ರಿಸ್ಕ್ ತೆಗೆದುಕೊಂಡಿದ್ದರು). ಈ ನಡುವೆ ಭೂ ಸುಧಾರಣೆ ಕಾಯ್ದೆ ಜಾರಿಯಾದ ಹತ್ತು ವರ್ಷಗಳ ಸಣ್ಣ ಅವಧಿಯಲ್ಲಿ ಜಿಲ್ಲೆಯ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಸಂರಚನೆ ಅಡಿಮೇಲಾಗಿತ್ತು. ಬಂಟರು ಭೂಮಿಯ ಜೊತೆ ಜಿಲ್ಲೆಯಲ್ಲಿ ರಾಜಕೀಯ ನಾಯಕತ್ವವನ್ನೂ ಕಳೆದುಕೊಂಡಿದ್ದರು. ನಿರ್ಣಾಯಕ ಸಂಖ್ಯೆಯಲ್ಲಿರುವ ಗೇಣಿದಾರ ಸಮುದಾಯದ ಬಿಲ್ಲವರು, ಭೂಮಿ ಮತ್ತು ರಾಜಕೀಯ ನಾಯಕತ್ವ ಪಡೆದು ತಲೆ ಎತ್ತಿ ನಡೆಯತೊಡಗಿದ್ದರು. ಬಂಟರು ಕಾಂಗ್ರೆಸ್ ಪಕ್ಷ ಸೋತು ಜನತಾ ರಂಗ ಅಧಿಕಾರಕ್ಕೆ ಬಂದಿರುವುದನ್ನು ಸಂಭ್ರಮಿಸತೊಡಗಿದ್ದರು. ಆ ಸಮುದಾಯದಲ್ಲಿ ಬಹಳಷ್ಟು ಮಂದಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಅಭಿಮಾನಿಗಳಾಗಿ ಪರಿವರ್ತನೆಗೊಂಡಿದ್ದರು.

ದಕ್ಷಿಣ ಕನ್ನಡ ಅತೀ ಹೆಚ್ಚು ಅಕ್ಷರಸ್ಥರನ್ನು ಒಳಗೊಂಡಿದ್ದರೂ ಅವರಲ್ಲಿ ಹೆಚ್ಚಿನವರಿಗೆ ಶಾಲಾ-ಕಾಲೇಜು ಕಲಿಕೆ, ಉದ್ಯೋಗ ಪಡೆಯುವ ಸಾಧನವಾಗಿತ್ತೇ ಹೊರತು ಜ್ಞಾನಸಂಪಾದನೆಯ ಮಾರ್ಗವಾಗಿರಲಿಲ್ಲ. ಶಿಕ್ಷಿತರೆನಿಸಿಕೊಂಡ ಬಹುತೇಕ ಮಂದಿ ಸಹಜವಾಗಿ ಉದಯವಾಣಿಯ ಓದುಗರಾಗಿದ್ದರು. ಸುಮಾರು ಎರಡು ದಶಕಗಳ ಕಾಲ ಉದಯವಾಣಿ ಪತ್ರಿಕೆ ಇಂತಹದ್ದೊಂದು ಅಭಿರುಚಿಯ ಓದುಗ ಸಮೂಹವನ್ನು ಬೆಳೆಸಿತ್ತು. ಅವರಲ್ಲಿ ಬಹಳಷ್ಟು ಮಂದಿಗೆ ಚಳವಳಿಗಳು ಮಾತ್ರವಲ್ಲ ಅಂಬೇಡ್ಕರ್, ಲೋಹಿಯಾ ಹೆಸರುಗಳೂ ಅಪರಿಚಿತವಾಗಿತ್ತು.

ಅವರು ಬೇರೊಂದು ಪತ್ರಿಕೆಯ ನಿರೀಕ್ಷೆಯಲ್ಲಿದ್ದರು, ನಿಜ. ನಿರೀಕ್ಷೆಯ ಪತ್ರಿಕೆ ‘ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರ’ ಎಂಬ ಘೋಷಿತ ಸೈದ್ಧಾಂತಿಕ ನಿಲುವಿನ ಪತ್ರಿಕೆ ಆಗಿರಲಿಲ್ಲ. ಮಧ್ಯಮ ವರ್ಗದ ದೊಡ್ಡ ಸಮುದಾಯವನ್ನು ಹೊಂದಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಓದುಗರು ಎಡ, ಬಲ ಅಲ್ಲದ ಮಧ್ಯದ ಹಾದಿಯ ಪತ್ರಿಕೆಯ ನಿರೀಕ್ಷೆಯಲ್ಲಿದ್ದರು. ಇದೇ ಸಮಯದಲ್ಲಿ ಸೈದ್ಧಾಂತಿಕವಾಗಿ ಬಿಜೆಪಿಯ ಹುಟ್ಟುವಿರೋಧಿಯಾಗಿದ್ದ ಮತ್ತು ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ವಡ್ಡರ್ಸೆಯವರು ‘ಚಿಂತನೆಯ ಮಳೆ ಸುರಿದು ಜನಶಕ್ತಿಯ ಬೆಳೆ ತೆಗೆಯುವ ‘ಮುಂಗಾರು’ ಪತ್ರಿಕೆಯನ್ನು ದಕ್ಷಿಣ ಕನ್ನಡದಿಂದ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದ್ದರು. ಅದು ವೈಚಾರಿಕವಾಗಿ ಬಂಜರು ಆಗಿದ್ದ ನೆಲದಲ್ಲಿ ಕ್ರಾಂತಿಯ ಬೆಳೆ ತೆಗೆಯುವ ಅವಸರದ ನಿರ್ಧಾರವಾಗಿತ್ತು. ಬಿಡುಗಡೆಗೊಂಡ ಪತ್ರಿಕೆಯ ಮೊದಲ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ಪುರೋಹಿತರ ಕೈಯಿಂದ ಉರುಳಿಬಿದ್ದ ಚೆಂಬುವಿನ ಮೂರು ಕಾಲಂ ವ್ಯಂಗ್ಯಚಿತ್ರವೇ ಕರಾವಳಿ ಓದುಗರನ್ನು ಬೆಚ್ಚಿ ಬೀಳಿಸಿತು.

ಪ್ರಜಾವಾಣಿಯಲ್ಲಿನ ಬರವಣಿಗೆಗಳ ಮೂಲಕ ಹಳೇ ಮೈಸೂರಿನಲ್ಲಿ ಜನಪ್ರಿಯರಾಗಿದ್ದ ವಡ್ಡರ್ಸೆಯವರು ದಕ್ಷಿಣ ಕನ್ನಡ ಜಿಲ್ಲೆಯ ಓದುಗರಿಗೆ ಬಹುತೇಕ ಅಪರಿಚಿತರಾಗಿದ್ದರು. ಈ ಓದುಗರಿಗೆ ವಡ್ಡರ್ಸೆ ಮತ್ತು ‘ಮುಂಗಾರು’ ಪತ್ರಿಕೆಯನ್ನು ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ. ತನ್ನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಎಳ್ಳಷ್ಟು ಮುಚ್ಚಿಡದೆ, ನಮ್ಮದು ‘ಬಾಯಿ ಇಲ್ಲದವರಿಗೆ ಬಾಯಾಗುವ, ದೀನದಲಿತರ ಪಕ್ಷಪಾತಿಯಾಗುವ, ಪುರೋಗಾಮಿ ವಿಚಾರಗಳ ದೀವಿಗೆ ಹಿಡಿದ, ಕಪಟಾಚಾರವನ್ನು ಬಯಲಿಗೆಳೆಯುವ ಪತ್ರಿಕೆ’ ಎಂಬ ಅಬ್ಬರದ ಘೋಷಣೆಯೊಂದಿಗೆ ‘ಮುಂಗಾರು’ ಪ್ರವೇಶವಾಗಿತ್ತು. ಇದು ಕೇವಲ ಘೋಷಣೆಯಾಗಿರಲಿಲ್ಲ. ವರದಿಗಳು, ವಿಶೇಷ ಲೇಖನಗಳು, ಸಂಪಾದಕೀಯ, ಸಂಪಾದಕೀಯ ಪುಟದ ಲೇಖನಗಳು ಹೀಗೆ ಪತ್ರಿಕೆಯ ಪುಟಪುಟಗಳಲ್ಲಿ ಪತ್ರಿಕೆ ತನ್ನ ಸೈದ್ಧಾಂತಿಕ ನಿಲುವನ್ನು ಜೋರು ದನಿಯಲ್ಲಿ ಕೂಗಿ ಕೂಗಿ ಹೇಳುತ್ತಿತ್ತು.

ಉಡುಪಿ ಜಿಲ್ಲೆಯ ವಡ್ಡರ್ಸೆ ಹುಟ್ಟೂರಾಗಿದ್ದರೂ ಮೂವತ್ತೈದನೇ ವರ್ಷಕ್ಕೆ ಕರಾವಳಿ ಬಿಟ್ಟಿದ್ದ ವಡ್ಡರ್ಸೆಯವರು ದಕ್ಷಿಣ ಕನ್ನಡ ಜಿಲ್ಲೆಗೆ ಹಿಂದಿರುಗಿದ್ದು 20 ವರ್ಷಗಳ ನಂತರ. ಬಾಲ್ಯದ ದಿನಗಳನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ವಾಸವಾಗಿದ್ದು ನವಭಾರತದಲ್ಲಿ ಕೆಲಸಕ್ಕಿದ್ದ ಒಂದೆರಡು ವರ್ಷ ಮಾತ್ರ. ಇಷ್ಟು ಕಾಲ ದಕ್ಷಿಣ ಕನ್ನಡದಿಂದ ದೂರ ಇದ್ದು ಅಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದಿದ್ದ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಅರಿವು ಇಲ್ಲದೆ ಇದ್ದ ವಡ್ಡರ್ಸೆಯವರಿಗೆ ಎದುರಾದ ಕಟು ವಾಸ್ತವ ಆಘಾತವನ್ನುಂಟು ಮಾಡಿತ್ತು.

ಬಹಳ ಮುಖ್ಯವಾಗಿ, ವ್ಯವಹಾರಸ್ಥರಲ್ಲದ ವಡ್ಡರ್ಸೆಯವರು ತಮ್ಮ ಶತ್ರು ಪಾಳಯದ ಶಕ್ತಿಯನ್ನು ಅಂದಾಜು ಮಾಡುವಲ್ಲಿ ಸೋತಿದ್ದರು. ಆದರ್ಶವಾದಿಗಳ ಸೇನೆ ಕಟ್ಟಿಕೊಂಡು ಸಿದ್ಧಾಂತದ ಗುಡುಗು-ಸಿಡಿಲಿನೊಡನೆ ಪ್ರವೇಶವಾದ ‘ಮುಂಗಾರು’ ಪತ್ರಿಕೆಯನ್ನು ಕಂಡು ಪ್ರತಿಸ್ಪರ್ಧಿ ಪತ್ರಿಕೆಯಾದ ಉದಯವಾಣಿ ವಿಚಲಿತಗೊಂಡಿತ್ತು. ಪ್ರಾರಂಭದ ದಿನಗಳಲ್ಲಿ ‘ಮುಂಗಾರು’ ಪತ್ರಿಕೆ ಕರಾವಳಿಯ ಜಿಲ್ಲೆಗಳಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಉಂಟು ಮಾಡಿದ ಸಂಚಲನವೇ ಹಾಗಿತ್ತು. ನನಗೆ ತಿಳಿದ ಹಾಗೆ ಮೊದಲ ದಿನವೇ ‘ಮುಂಗಾರು’ ಪತ್ರಿಕೆಯ 35 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿತ್ತು.

ಎದುರಾಳಿಯನ್ನು ಆರೋಗ್ಯಕರವಾದ ಪೈಪೋಟಿಯಲ್ಲಿ ಎದುರಿಸುವ ವಿಶಾಲ ಮನಸ್ಸು ಪ್ರತಿಸ್ಪರ್ಧಿ ಪತ್ರಿಕೆಗೆ ಇರಲಿಲ್ಲ. ಮೊದಲಿಗೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿದ್ದ ಜಾಹೀರಾತು ಏಜಂಟರ ಸಭೆ ನಡೆಸಿದ್ದ ಪ್ರತಿಸ್ಪರ್ಧಿ ಪತ್ರಿಕೆ, ‘ಮುಂಗಾರು’ ಪತ್ರಿಕೆಗೆ ಜಾಹೀರಾತು ನೀಡದಂತೆ ಫರ್ಮಾನು ಹೊರಡಿಸಿತ್ತು. ಜಾಹೀರಾತು ನೀಡಿದರೆ ಅಂತಹವರ ಜಾಹೀರಾತುಗಳನ್ನು ತಾವು ಸ್ವೀಕರಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿತ್ತಂತೆ. ಈ ನಿಲುವನ್ನು ಸಭೆಯಲ್ಲಿ ಪ್ರತಿಭಟಿಸಿದ ಏಕೈಕ ಜಾಹೀರಾತು ಏಜಂಟ್ ಅನ್ವರ್ ಮಾಣಿಪ್ಪಾಡಿ (ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ) ಎಂದು ವಡ್ಡರ್ಸೆಯವರು ಹೇಳುತ್ತಿದ್ದರು. ಇದೇ ರೀತಿ ಎರಡೂ ಜಿಲ್ಲೆಗಳಲ್ಲಿರುವ ಪತ್ರಿಕಾ ಏಜಂಟರ ಸಭೆ ಕರೆದು ಯಾರೂ ಕೂಡಾ ‘ಮುಂಗಾರು’ ಪತ್ರಿಕೆಯನ್ನು ಮಾರಬಾರದು, ಒಂದೊಮ್ಮೆ ಮಾರಿದರೆ ಅವರಿಗೆ ತಮ್ಮ ಬಳಗದ ಯಾವ ಪತ್ರಿಕೆಗಳನ್ನು ನೀಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಪ್ರತಿಸ್ಪರ್ಧಿ ಪತ್ರಿಕೆಯ ಬಳಗದಲ್ಲಿ ವಾರಪತ್ರಿಕೆ, ಸಿನೆಮಾ ಪತ್ರಿಕೆ ಮತ್ತು ಒಂದು ಮಾಸಿಕ ಕೂಡಾ ಇದ್ದ ಕಾರಣ ಯಾವ ಏಜಂಟರು ಅವರ ಮಾತನ್ನು ಉಲ್ಲಂಘಿಸುವ ಸ್ಥಿತಿಯಲ್ಲಿ ಇರಲಿಲ್ಲ. ಎಷ್ಟೋ ಏಜಂಟರು ‘ಮುಂಗಾರು’ ಪತ್ರಿಕೆಯ ಮೇಲಿನ ಅಭಿಮಾನದಿಂದ ಪತ್ರಿಕೆಯನ್ನು ಒಳಗೆ ಬಚ್ಚಿಟ್ಟುಕೊಂಡು ಕೇಳಿದವರಿಗೆ ಮಾತ್ರ ಕೊಡುತ್ತಿದ್ದರು. ಇನ್ನೂ ಕಣ್ಣು ಬಿಡುತ್ತಿರುವ ಸಂದರ್ಭದಲ್ಲಿಯೇ ಎದುರಾದ ಈ ಅನಾರೋಗ್ಯಕಾರಿ ಪೈಪೋಟಿ, ‘ಮುಂಗಾರು’ ಪತ್ರಿಕೆಗೆ ಚೇತರಿಸಿಕೊಳ್ಳಲಾಗದಂತಹ ಹಾನಿ ಮಾಡಿತ್ತು. ವರದಿಗಾರರಾಗಿ ಸುಮಾರು 30 ವರ್ಷ ಕೆಲಸ ಮಾಡಿದ್ದ ವಡ್ಡರ್ಸೆಯವರಿಗೆ ಪತ್ರಿಕೆಯ ಇತರ ವಿಭಾಗಗಳಾದ ಮುದ್ರಣ, ಜಾಹೀರಾತು ಮತ್ತು ಪ್ರಸರಣದ ಬಗ್ಗೆ ಅನುಭವ ಇರಲಿಲ್ಲ. ಒಂದು ಸಂಸ್ಥೆಯ ಉದ್ಯೋಗಿಗಳ ಗರಿಷ್ಠ ಮತ್ತು ಕನಿಷ್ಠ ಸಂಬಳದ ಅಂತರ 1:5ಕ್ಕಿಂತ ಹೆಚ್ಚಾಗಿರಬಾರದೆಂಬ ಸಮಾಜವಾದಿ ಸಿದ್ಧಾಂತಕ್ಕೆ ಬದ್ಧರಾಗಿದ್ದ ವಡ್ಡರ್ಸೆಯವರು ಅದನ್ನು ಪಾಲಿಸಿದ್ದರು. ಪತ್ರಿಕೆಯ ಸಂಪಾದಕರು ಮತ್ತು ಆಡಳಿತ ನಿರ್ದೇಶಕರಾಗಿದ್ದ ವಡ್ಡರ್ಸೆಯವರ ಮಾಸಿಕ ವೇತನ 2,000 ರೂಪಾಯಿಗಳಾಗಿದ್ದರೆ, ಕಚೇರಿ ಜವಾನನ ವೇತನ 400 ರೂಪಾಯಿಗಳಾಗಿತ್ತು. ಪತ್ರಕರ್ತರಿಗೆ ಆಗಿನ ಪಾಳೇಕಾರ್ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನ ಶ್ರೇಣಿಯನ್ನೂ ನಿಗದಿಗೊಳಿಸಿದ್ದರು.

ಕಾರ್ಮಿಕರ ಕೈಗಳಿಂದ ಉದ್ಯೋಗ ಕಸಿದುಕೊಳ್ಳಬಾರದೆಂಬ ಆದರ್ಶಕ್ಕೆ ಬದ್ಧರಾಗಿದ್ದ ವಡ್ಡರ್ಸೆಯವರು ಮೊಳೆ ಜೋಡಿಸಿ ಪ್ಲೇಟ್ ಮಾಡಿ ಮುದ್ರಿಸುವ ಹಳೆಯ ಮುದ್ರಣ ವ್ಯವಸ್ಥೆಗೆ ಜೋತುಬಿದ್ದಿದ್ದರು. ಕೊನೆಯವರೆಗೂ ಕಂಪ್ಯೂಟರ್‌ಗಳು ಪತ್ರಿಕಾ ಕಚೇರಿ ಪ್ರವೇಶಿಸಿರಲಿಲ್ಲ. ಕಾರ್ಮಿಕ ನಾಯಕರಾಗಿ ಕಾರ್ಮಿಕ ವರ್ಗವನ್ನು ನಿರ್ವಹಿಸಿದ್ದ ವಡ್ಡರ್ಸೆಯವರಿಗೆ ಮಾಲಕರಾಗಿ ಅವರನ್ನು ನಿರ್ವಹಿಸುವ ಸಂದರ್ಭ ಬಂದಾಗ ಮಾತ್ರ ಕಷ್ಟದ ಅರಿವಾಗತೊಡಗಿತ್ತು. ಪತ್ರಿಕೆ ಪ್ರಾರಂಭವಾದ 19 ತಿಂಗಳೊಳಗೆ ಮುದ್ರಣ ವಿಭಾಗದಲ್ಲಿ ಮೊಳೆ ಜೋಡಿಸುವ ಕಾರ್ಮಿಕರು ಇದ್ದಕ್ಕಿದ್ದ ಹಾಗೆ ಸಂಬಳ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿಟ್ಟು ಮುಷ್ಕರ ಶುರು ಮಾಡಿದ್ದರು. ‘ಮುಂಗಾರು’ ಆಗಲೂ ನಷ್ಟದಲ್ಲಿತ್ತು. ಈ ಮುಷ್ಕರದ ಹಿಂದೆ ಪ್ರತಿಸ್ಪರ್ಧಿ ಪತ್ರಿಕೆ ಮತ್ತು ಸೈದ್ಧಾಂತಿಕ ವಿರೋಧಿಗಳ ಕೈವಾಡದ ಗಾಳಿ ಸುದ್ದಿ ಹರಡಿತ್ತು. ಇದರಲ್ಲಿ ಆಶ್ಚರ್ಯವಾಗುವಂತಹದ್ದು ಏನೂ ಇರಲಿಲ್ಲ. ಪತ್ರಕರ್ತರ ಆಯ್ಕೆಯಲ್ಲಿ ಎಡವದೇ ಇದ್ದ ವಡ್ಡರ್ಸೆಯವರು, ಕಚೇರಿಯ ಇತರ ಸಿಬ್ಬಂದಿಯ ನೇಮಕಾತಿಯಲ್ಲಿ ಎಡವುತ್ತಲೇ ಇದ್ದರು.

‘ಮುಂಗಾರು’ ಪತ್ರಿಕೆಯ ಜಾಹೀರಾತು ಮತ್ತು ಪ್ರಸರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರತಿಸ್ಪರ್ಧಿ ಪತ್ರಿಕೆಯ ಜೊತೆ ಶಾಮೀಲಾಗಿದ್ದ ಬಗ್ಗೆ ದೂರುಗಳಿದ್ದವು. ಈ ರೀತಿ ವಡ್ಡರ್ಸೆಯವರು ಹೆಜ್ಜೆಹೆಜ್ಜೆಗೂ ಆದರ್ಶ ಮತ್ತು ವ್ಯವಹಾರದ ನಡುವಿನ ಸಂಘರ್ಷವನ್ನು ಎದುರಿಸಬೇಕಾಯಿತು. ಅದನ್ನು ತೂಗಿಸಿಕೊಂಡು ಹೋಗುವ ಜಾಣತನವೂ ಅವರಿಗಿರಲಿಲ್ಲ. ಮನಸ್ಸುಗಳ ಪರಿವರ್ತನೆ ಮೂಲಕ ನಡೆಸುವ ಸಾಮಾಜಿಕ ಬದಲಾವಣೆ ನಿಧಾನವಾಗಿ ನಡೆಯುವ ಪ್ರಕ್ರಿಯೆಯೇ ಹೊರತು ಕಾಲ ನಿಗದಿ ಮಾಡಿ ಅವಸರದಲ್ಲಿ ಅನುಷ್ಠಾನಗೊಳಿಸುವ ಯೋಜನೆ ಅಲ್ಲ ಎನ್ನುವುದು ಅವರಿಗೆ ಅರಿವಾಗಿದ್ದರೂ ಅವರು ಬಹಳ ದೂರ ಬಂದುಬಿಟ್ಟಿದ್ದರು. ಮೆದುಳು ದಾರಿ ಬದಲಿಸಲು ಹೇಳುತ್ತಿದ್ದರೂ ಹೃದಯ ಒಪ್ಪುತ್ತಿರಲಿಲ್ಲ. ಈ ಸಂಘರ್ಷ ಕೊನೆಯ ದಿನಗಳವರೆಗೆ ಮುಂದುವರಿದಿತ್ತು.

ಬೆಂಗಳೂರಿನಿಂದ ಅವರು ಪ್ರೀತಿಯಿಂದ ಕರೆದುಕೊಂಡು ಬಂದಿದ್ದ ಯುವಶಿಷ್ಯರೆಲ್ಲರೂ ಕನಸು ಕಂಗಳ ಆದರ್ಶವಾದಿಗಳಾಗಿದ್ದರು. ಸಣ್ಣಪುಟ್ಟ ರಾಜಿಗೆ ಕೂಡಾ ಅವರು ಸಿದ್ಧ ಇರಲಿಲ್ಲ. ಪ್ರಾರಂಭದಲ್ಲಿ ಸಣ್ಣದಾಗಿ ಹುಟ್ಟಿಕೊಂಡ ವಡ್ಡರ್ಸೆಯವರ ಜೊತೆಗಿನ ಭಿನ್ನಾಭಿಪ್ರಾಯದ ಕಿಡಿ ಹತ್ತಿಕೊಳ್ಳುತ್ತಾ ಹೋಯಿತು. ‘ಮುಂಗಾರು’ ಪ್ರಕಾಶನ ಸಂಸ್ಥೆಯ ನಿಯಮಾವಳಿ ಪ್ರಕಾರ ಯಾರೂ ಕೂಡಾ ಗರಿಷ್ಠ ರೂ.15,000ಕ್ಕಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಖರೀದಿಸಲು ಅವಕಾಶ ಇರಲಿಲ್ಲ. ಆದರೆ ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆಯವರೊಬ್ಬರಿಗೆ ಮಾತ್ರ ಈ ನಿಯಮವನ್ನು ಸಡಿಲಿಸಿ ಅವರಿಗೆ 25,000 ರೂಪಾಯಿಗಳ ಷೇರು ನೀಡಲಾಗಿತ್ತು. ಇದರಿಂದಾಗಿ ಮೊದಲ ಬಾರಿ ಗುರು-ಶಿಷ್ಯರ ನಡುವೆ ವಾಗ್ವಾದ ನಡೆದಿತ್ತು. ನಂತರದ ದಿನಗಳಲ್ಲಿ ವಡ್ಡರ್ಸೆಯವರೇ ಹೇಳಿಕೊಂಡಂತೆ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಉದಾರವಾಗಿರಲು ಕಾರಣ ಇತ್ತು. ಮಣಿಪಾಲದ ಪೈಗಳ ಶಿಕ್ಷಣ ಸಾಮ್ರಾಜ್ಯಕ್ಕೆ ಇದಿರಾಗಿ ಧರ್ಮಸ್ಥಳದ ಹೆಗ್ಗಡೆಯವರ ಶಿಕ್ಷಣ ಸಾಮ್ರಾಜ್ಯದಲ್ಲಿ ಒಬ್ಬ ಪ್ರತಿಸ್ಪರ್ಧಿಯನ್ನು ಅವರು ಗುರುತಿಸಿದ್ದರು.

ಇದೇ ರೀತಿ ಒಮ್ಮೆ ಒಂದು ಭೂತದ ಕೋಲದ ಫೋಟೊ ಪ್ರಕಟನೆೆಗೆ ಸಂಬಂಧಿಸಿದಂತೆ ಗುರು-ಶಿಷ್ಯರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಹೊಟೇಲ್ ಉದ್ಯಮಿ ಹಾಗೂ ಎಸ್.ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದ ‘ಮುಂಗಾರು’ ಪ್ರಕಾಶನ ಸಂಸ್ಥೆಯ ನಿರ್ದೇಶಕ ಎಂ.ರಾಮಪ್ಪ ಅವರು ಒಮ್ಮೆ ತಮ್ಮ ಮನೆಯಲ್ಲಿ ನಡೆದಿದ್ದ ಭೂತದ ಕೋಲದ ಫೋಟೊ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಬಯಸಿದಾಗ ಸಂಪಾದಕರಾಗಿದ್ದ ವಡ್ಡರ್ಸೆಯವರ ಸೂಚನೆಯ ಹೊರತಾಗಿಯೂ ಬೆಂಗಳೂರು ಶಿಷ್ಯ ಬಳಗ ಒಕ್ಕೊರಲಿನಿಂದ ವಿರೋಧಿಸಿತ್ತು.

ಈ ಶೀತಲ ಸಮರ ನಡೆಯುತ್ತಿದ್ದ ದಿನಗಳಲ್ಲಿಯೇ ಒಮ್ಮೆ ವಡ್ಡರ್ಸೆಯವರು ನ್ಯೂಸ್ ಪ್ರಿಂಟ್ ಖರೀದಿ ಸಮಸ್ಯೆ ಬಗೆಹರಿಸಲು ಎಸ್.ಬಂಗಾರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಬಂಗಾರಪ್ಪನವರು ತಮಗೆ ಗೊತ್ತಿದ್ದ ಅಬಕಾರಿ ಉದ್ಯಮಿಯೊಬ್ಬರಿಗೆ ಫೋನ್ ಮಾಡಿ ಒಂದು ಲಾರಿ ನ್ಯೂಸ್ ಪ್ರಿಂಟ್ ಕಳಿಸಲು ಹೇಳಿದ್ದರು. ಅದರ ಮರುದಿನದ ಪತ್ರಿಕೆಯ ಮುಖಪುಟದಲ್ಲಿ ಸೀರೆ ಉಟ್ಟು, ಬಳೆ ತೊಟ್ಟು, ಇಂದಿರಾಗಾಂಧಿಯವರ ಮನೆ ಮುಂದೆ ನಿಂತ ಬಂಗಾರಪ್ಪನವರ ವ್ಯಂಗ್ಯಚಿತ್ರ ಪ್ರಕಟವಾಗಿತ್ತು. ಅದು ಬಂಗಾರಪ್ಪನವರು ಮರಳಿ ಕಾಂಗ್ರೆಸ್ ಪಕ್ಷ ಸೇರಲು ಮಾತುಕತೆ ನಡೆಯುತ್ತಿದ್ದ ಕಾಲವಾಗಿತ್ತು. ಇದು ತಮ್ಮ ಸಹದ್ಯೋಗಿಗಳು ಉದ್ದೇಶಪೂರ್ವಕವಾಗಿ ಮಾಡಿದ ಕೀಟಳೆ ಎಂದು ವಡ್ಡರ್ಸೆಯವರು ಬಹಳ ನೊಂದಿದ್ದರು. ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟವಾದ ದಿನ ಅಳುಕುತ್ತಲೇ ಭೇಟಿಯಾದ ಪತ್ರಿಕೆಯ ನಿರ್ದೇಶಕರಿಗೆ ಬಂಗಾರಪ್ಪನವರೇ ಸಮಾಧಾನ ಮಾಡಿ ಕಳುಹಿಸಿದ್ದರಂತೆ. ‘ನನಗೆ ಶೆಟ್ರು ಏನೆಂದು ಗೊತ್ತು, ಶೆಟ್ರಿಗೆ ಬೇಜಾರು ಮಾಡ್ಕೊಳ್ಳಬೇಡಿ ಎಂದು ಹೇಳಿ’ ಎಂದು ಹೇಳಿದ್ದರಂತೆ. ಇಂತಹ ಹಲವಾರು ಘಟನೆಗಳು ಮೊದಲ ಮೂರು ತಿಂಗಳ ಅವಧಿಯಲ್ಲಿ ನಡೆದು ಹೋಯಿತು. ವಡ್ಡರ್ಸೆಯವರು ತಮಗೆ ಕೊಟ್ಟ ಮಾತು ತಪ್ಪಿ ವ್ಯವಸ್ಥೆಯ ಜೊತೆ ರಾಜಿಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರ ಶಿಷ್ಯರ ಆರೋಪವಾಗಿತ್ತು. ಆದರೆ ಆರ್ಥಿಕವಾಗಿ ತೀವ್ರ ಬಿಕ್ಕಟ್ಟನ್ನು ಎದುರಿಸಿದ್ದ ವಡ್ಡರ್ಸೆಯವರಿಗೆ ಈ ರೀತಿ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಲೇ ಇಲ್ಲ. ಬಹುಶಃ ವಡ್ಡರ್ಸೆಯವರು ಕೂಡಾ ತನ್ನ ಅಸಹಾಯಕತೆ-ಅನಿವಾರ್ಯತೆಗಳನ್ನು ತನ್ನ ಶಿಷ್ಯರಿಗೆ ಮನವರಿಕೆ ಮಾಡಿಕೊಡಲು ವಿಫಲರಾಗಿದ್ದರು. ಇತ್ತೀಚೆಗೆ ಕೋಟಿಗಾನಹಳ್ಳಿ ರಾಮಯ್ಯನವರು ಈ ಘಟನೆಗಳನ್ನೆಲ್ಲ ನೆನಪಿಸುತ್ತಾ ‘ನಾವು ಕೂಡಾ ಎಷ್ಟು ಬಾಲಿಷವಾಗಿ ನಡೆದುಕೊಂಡಿದ್ದೆವೆಲ್ಲಾ’ ಎಂದು ನಿಟ್ಟುಸಿರುಬಿಟ್ಟಿದ್ದರು.

ಈ ಅರ್ಧ ಸೈದ್ಧಾಂತಿಕ, ಇನ್ನರ್ಧ ಪ್ರತಿಷ್ಠೆಯ ಸಂಘರ್ಷ, ಅತಿರೇಕದ ಮಟ್ಟಕ್ಕೆ ತಲುಪಿ, ಒಂದು ದಿನ ‘ವಾರದ ಮುಂಗಾರು’ ಸಂಚಿಕೆಯಲ್ಲಿ ಕುಸಿದು ಬಿದ್ದಿರುವ ‘ಮುಂಗಾರು’ ಕಟ್ಟಡದ ಚಿತ್ರದೊಡನೆ ಪ್ರಕಟವಾದ ದಿವಂಗತ ಕೇಶವ ಪ್ರಸಾದ್ ಅವರ ‘ಕೊನೆಯಪತ್ರ’ ಎಂಬ ಕವನದೊಂದಿಗೆ ಸ್ಫೋಟಗೊಂಡಿತು. ‘ಮುಂಗಾರು’ ಪತ್ರಿಕೆ ಮತ್ತು ಸಂಪಾದಕರ ಮೇಲೆ ಆತ್ಮವಂಚನೆಯ ಆರೋಪ ಹೊರಿಸಿ ಅಣಕಮಾಡಿದ್ದ ಆ ಕವನ ಬೆಂಗಳೂರಿನಿಂದ ಬಂದಿದ್ದ ವಡ್ಡರ್ಸೆಯವರ ಶಿಷ್ಯಬಳಗದ ರಾಜೀನಾಮೆ ಪತ್ರವಾಗಿತ್ತು. ತಾನು ನಂಬಿದವರು, ತಮ್ಮದೇ ಪತ್ರಿಕೆಯಲ್ಲಿ ತನ್ನ ವಿರುದ್ಧವೇ ಬರೆದ ಕವನ ವಡ್ಡರ್ಸೆಯವರನ್ನು ಘಾಸಿಗೊಳಿಸಿತ್ತು. ಗೌರವಪೂರ್ವಕವಾಗಿ ನಡೆಯಬೇಕಾಗಿದ್ದ ವಿದಾಯ ಒಂದಷ್ಟು ಮನಸ್ಸುಗಳನ್ನು ಒಡೆದು ಹಾಕಿತ್ತು. ಇಂದೂಧರ ಹೊನ್ನಾಪುರ, ಎನ್.ಎಸ್. ಶಂಕರ್, ಕೆ. ಪುಟ್ಟಸ್ವಾಮಿ, ಕೆ.ರಾಮಯ್ಯ, ಹಸನ್ ನಯೀಂ ಸುರಕೋಡ್, ಮಂಗ್ಳೂರು ವಿಜಯ ಸೇರಿದಂತೆ ಸುಮಾರು 10-12 ಅನುಭವಿ ಪತ್ರಕರ್ತರ ತಂಡ ಇನ್ನೂ ಅಂಬೆಗಾಲಿಡುತ್ತಿದ್ದ ‘ಮುಂಗಾರು’ ಪತ್ರಿಕೆಯನ್ನು ಮೂರೇ ತಿಂಗಳಲ್ಲಿ ತೊರೆದು ಹೋದದ್ದು ದೊಡ್ಡ ಆಘಾತ. ಆ ಕಾಲದಲ್ಲಿ ಉದಯವಾಣಿಯಿಂದ ಬಂದಿದ್ದ ಜಿ.ಕೆ.ಮಧ್ಯಸ್ಥ ಎಂಬ ಹಿರಿಯರೊಬ್ಬರನ್ನು ಬಿಟ್ಟರೆ ಉಳಿದಂತೆ ಇದ್ದದ್ದು ನಮ್ಮಂತಹ ಇನ್ನೂ ಪತ್ರಿಕೋದ್ಯಮಕ್ಕೆ ಕಣ್ಣು ಬಿಡುತ್ತಿರುವ ಹೊಸಬರು ಮಾತ್ರ. ಅದರ ನಂತರ ‘ಮುಂಗಾರು’ ಪತ್ರಿಕೆ ಮತ್ತು ವಡ್ಡರ್ಸೆಯವರ ಇನ್ನೊಂದು ಪಯಣ ಶುರುವಾಯಿತು.

ಆ ಪಯಣದ ಹಾದಿ ಇನ್ನಷ್ಟು ದುರ್ಗಮವಾಗಿತ್ತು. ದಿನ ಕಳೆದಂತೆ ಪತ್ರಿಕೆಯ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಇತ್ತು. ನಿರೀಕ್ಷಿಸಿದಂತೆ ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚಲಿಲ್ಲ, ಜಾಹೀರಾತಿನ ಹೊಳೆ ಹರಿದೂ ಬರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಬಿಡುಗಡೆ ಸಿಗಲೂ ಇಲ್ಲ. 126 ಪೂರ್ಣಾವಧಿ ಮತ್ತು 32 ಅರೆಕಾಲಿಕ ನೌಕರರ ಒಟ್ಟು ಮಾಸಿಕ ವೇತನ ಒಂದು ಲಕ್ಷ ರೂಪಾಯಿಗಳನ್ನು ಹೊಂದಿಸುವುದೇ ವಡ್ಡರ್ಸೆಯವರಿಗೆ ಸಾಹಸವಾಗಿತ್ತು. ಪ್ರತಿ ತಿಂಗಳ ಕೊನೆಯ ವಾರಗಳಲ್ಲಿ ವಡ್ಡರ್ಸೆಯವರು ಒಂದು ಸುತ್ತು ಪ್ರವಾಸ ಮುಗಿಸಿ ಷೇರು ಮಾರಾಟದ ಮೂಲಕ ದುಡ್ಡು ತಂದರಷ್ಟೇ ಸಂಬಳವಾಗುವ ಪರಿಸ್ಥಿತಿ ಇತ್ತು. ನ್ಯೂಸ್‌ಪ್ರಿಂಟ್ ದಾಸ್ತಾನಿನಲ್ಲಿ ಇಟ್ಟುಕೊಳ್ಳುವಷ್ಟು ಶಕ್ತಿ ಇಲ್ಲದ ಕಾರಣ ಮರುದಿನದ ಪತ್ರಿಕೆ ಪ್ರಕಟವಾಗಿ ಮಾರುಕಟ್ಟೆಗೆ ಬರುವ ಖಾತರಿ ಇರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ನ್ಯೂಸ್‌ಪ್ರಿಂಟ್‌ಗೆ ದುಡ್ಡು ಹೊಂದಿಸಿಕೊಳ್ಳಲಾಗದೆ ವಡ್ಡರ್ಸೆಯವರು ತಮ್ಮ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದದ್ದುಂಟು.

ಆರ್ಥಿಕ ಬಿಕ್ಕಟ್ಟಿನ ಜೊತೆಯಲ್ಲಿ ಪ್ರತಿನಿತ್ಯದ ಸೈದ್ಧಾಂತಿಕ ಸಂಘರ್ಷಕ್ಕೆ ವಡ್ಡರ್ಸೆಯವರು ಎದೆಯೊಡ್ಡಬೇಕಾಗಿತ್ತು. ಬಂಗಾರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣಬಯಸಿದ್ದ ವಡ್ಡರ್ಸೆಯವರು, 1984ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದ ಬೆಳವಣಿಗೆಗಳಿಂದ ಕನಲಿ ಹೋಗಿದ್ದರು. ಆ ಚುನಾವಣೆಯ ಗೆಲುವಿನ ಸರದಾರನಾಗಿದ್ದ ಬಂಗಾರಪ್ಪನವರಿಗೆ ಉಳಿದ ನಾಯಕರು ಸೇರಿ ಮೋಸ ಮಾಡಿದರೆಂದು ಹೇಳುತ್ತಲೇ ಇದ್ದರು ಮತ್ತು ಹಾಗೆಯೇ ಬರೆದಿದ್ದರು ಕೂಡಾ. ವ್ಯಕ್ತಿಚಿತ್ರದ ಬರಹಗಳ ಅವರ ಜನಪ್ರಿಯ ‘ನಮ್ಮವರು’ ಅಂಕಣದಲ್ಲಿ ವಡ್ಡರ್ಸೆಯವರು ಬಂಗಾರಪ್ಪನವರನ್ನು ಕುರಿತು ‘ಮೋಸ ಹೋದ ಬಂಗಾರಪ್ಪ’ ಎಂಬ ತಲೆಬರಹದಡಿ ಲೇಖನ ಬರೆದಾಗ ಒಂದು ವರ್ಗದಿಂದ ಪ್ರಮುಖವಾಗಿ ಹೆಗಡೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

1985ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತಾ ರಂಗ ಮುಖಭಂಗದ ಸೋಲು ಅನುಭವಿಸಿದಾಗ ವಡ್ಡರ್ಸೆಯವರು ‘ಸಾಕಿನ್ನು ಮೋಸ’ ಎಂಬ ತಲೆಬರಹ ಕೊಟ್ಟು ಪತ್ರಿಕೆಯ ಮುಖಪುಟದಲ್ಲಿಯೇ ದೀರ್ಘವಾದ ಸಂಪಾದಕೀಯ ಬರೆದಿದ್ದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಲೋಕಸಭಾ ಚುನಾವಣಾ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವುದು ಸಂಪಾದಕೀಯದ ನಿಲುವಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರೂ ಹೆಗಡೆಯವರ ಜನಪ್ರಿಯತೆ ಕುಂದಿರಲಿಲ್ಲ. ಸೋಲಿನ ನೈತಿಕ ಹೊಣೆ ಹೊತ್ತು ಹೆಗಡೆಯವರು ವಿಧಾನಸಭೆಯನ್ನು ವಿಸರ್ಜನೆಗೊಳಿಸಿ ಮಧ್ಯಂತರ ಚುನಾವಣೆ ಎದುರಿಸಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಾಗ ವಡ್ಡರ್ಸೆ ಮತ್ತು ‘ಮುಂಗಾರು’ ಪತ್ರಿಕೆಯ ವಿರುದ್ಧ ಇನ್ನಷ್ಟು ತೀವ್ರವಾದ ದಾಳಿ ಶುರುವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಆ ಕಾಲದಲ್ಲಿ ಓದುಗರ ಓಲೆಗಳ ಮೂಲಕ ನಡೆಯುತ್ತಿತ್ತು. ವಡ್ಡರ್ಸೆಯವರನ್ನು ವೈಯಕ್ತಿಕವಾಗಿ ಹೀಗಳೆಯುವ ಬಹಳಷ್ಟು ಪತ್ರಗಳು ಆ ಸಂಪಾದಕೀಯಕ್ಕೆ ಪ್ರತಿಕ್ರಿಯೆಯಾಗಿ ಬಂದಿದ್ದವು. ಹೀಗೆ ದ್ವೇಷಕಾರಿದವರಲ್ಲಿ ಬಂಟ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಬೆಳವಣಿಗೆ ವಡ್ಡರ್ಸೆಯವರನ್ನು ಬಹಳ ಘಾಸಿಗೊಳಿಸಿತ್ತು.

ದ್ವೇಷಕಾರುವ ಇಂತಹ ಓದುಗರ ಪತ್ರಗಳಿಗೆ ಪ್ರತಿಕ್ರಿಯಿಸುವ ಉದ್ದೇಶದಿಂದಲೇ ವಡ್ಡರ್ಸೆಯವರು ‘ಓದುಗರೊಂದಿಗೆ ಸಂಪಾದಕ’ ಎಂಬ ಹೊಸ ಅಂಕಣ ಪ್ರಾರಂಭಿಸಿದ್ದರು. ಇದು ಮಾಧ್ಯಮ ಕ್ಷೇತ್ರದ ವಿನೂತನ ಮತ್ತು ವಿಶಿಷ್ಟ ಪ್ರಯೋಗ. ಇದರಲ್ಲಿ ಪತ್ರಿಕೆ ಪ್ರಕಟಿಸಿದ ವರದಿ, ಸಂಪಾದಕೀಯ, ಲೇಖನಗಳ ಜೊತೆ ಪತ್ರಿಕೆಯ ಸಂಪಾದಕೀಯ ನಿಲುವಿನ ಬಗ್ಗೆಯೂ ಓದುಗರು ಕೇಳುವ ಪ್ರಶ್ನೆಗಳಿಗೆ ಸಂಪಾದಕರಾದ ವಡ್ಡರ್ಸೆಯವರು ಪ್ರತಿಕ್ರಿಯೆ ನೀಡುತ್ತಿದ್ದರು. ಬ್ರಿಟನ್‌ನ ‘ದಿ ಗಾರ್ಡಿಯನ್’ ಪತ್ರಿಕೆ, ಮೊದಲ ಬಾರಿ Readers Editor ನೇಮಿಸಿದ್ದು 1996ರಲ್ಲಿ. ಅದಕ್ಕಿಂತ ಹತ್ತು ವರ್ಷ ಮೊದಲು ವಡ್ಡರ್ಸೆಯವರು ‘ಮುಂಗಾರು’ ಪತ್ರಿಕೆಯಲ್ಲಿ ‘ಓದುಗರೊಂದಿಗೆ ಸಂಪಾದಕ’ ಎಂಬ ಅಂಕಣ ಪ್ರಾರಂಭಿಸಿದ್ದರು. ಚರ್ಚೆಯನ್ನು ಮುಂದುವರಿಸಲು ‘ಸಂಪಾದಕರೊಂದಿಗೆ ಓದುಗ’ ಎಂಬ ಅಂಕಣವೂ ಪ್ರಕಟವಾಗುತ್ತಿತ್ತು. ವಿವಾದದ ಕಿಡಿ ಹೊತ್ತಿಸಿದ್ದ ಹೆಗಡೆ ಮತ್ತು ಬಂಗಾರಪ್ಪನವರ ಬಗ್ಗೆ ಬರೆದಿದ್ದ ಅಂಕಣಗಳು, ಸಂಪಾದಕೀಯಗಳು, ಕೈಗಾ ಅಣು ಸ್ಥಾವರ ಮತ್ತು ಬೇಡ್ತಿ ವಿದ್ಯುತ್ ಯೋಜನೆಯನ್ನು ಸಮರ್ಥಿಸಿದ ಲೇಖನ, ತಿಪ್ಪಗೊಂಡನಹಳ್ಳಿಯಲ್ಲಿ ನಡೆದ ಪರ್ಜನ್ಯ ಜಪದ ವರದಿ, ಸಾರಾ ಅಬೂಬಕರ್ ಮೇಲೆ ನಡೆದ ಹಲ್ಲೆ ಪ್ರಕರಣ, ಮಣಿಪಾಲದಲ್ಲಿ ನಡೆಸಲು ಉದ್ದೇಶಿಸಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿರೋಧ... ಮೊದಲಾದ ವಿಷಯಗಳ ಜೊತೆಗೆ ಆಂತರಿಕ ವಿಷಯಗಳಾದ ವಡ್ಡರ್ಸೆಯವರ ಬೆಂಗಳೂರು ಶಿಷ್ಯರ ನಿರ್ಗಮನ, ಕಾರ್ಮಿಕರ ಮುಷ್ಕರ, ಆರ್ಥಿಕ ಮುಗ್ಗಟ್ಟು ಬಗ್ಗೆಯೂ ವಡ್ಡರ್ಸೆಯವರು ಈ ಅಂಕಣದಲ್ಲಿ ಮುಕ್ತವಾಗಿ ಓದುಗರೊಂದಿಗೆ ಚರ್ಚಿಸುತ್ತಿದ್ದರು.

‘ಮುಂಗಾರು’ ಪತ್ರಿಕೆ ವಿರುದ್ಧ ಪ್ರತಿಸ್ಪರ್ಧಿ ಪತ್ರಿಕೆ ಮಾತ್ರವಲ್ಲ, ಸೈದ್ಧಾಂತಿಕ ವಿರೋಧಿಗಳಿಂದಲೂ ಯೋಜನಾಬದ್ಧವಾದ ಅಪಪ್ರಚಾರ ಶುರುವಾಗಿದ್ದ ಕಾರಣ ಕೊನೆ ವರ್ಷಗಳಲ್ಲಿ ‘ಓದುಗ ಒಡೆಯ’ರಿಂದ ಷೇರು ಸಂಗ್ರಹ ಹೆಚ್ಚು ಕಡಿಮೆ ನಿಂತೇ ಹೋಗಿತ್ತು. ಪತ್ರಿಕೆಯನ್ನು ಉಳಿಸಲು ಬೇಕಾದ ಸಂಪನ್ಮೂಲ ಸಂಗ್ರಹಕ್ಕಾಗಿ ವಡ್ಡರ್ಸೆಯವರು ಅನಿವಾರ್ಯವಾಗಿ ತಮಗೆ ಪರಿಚಯದ ಶ್ರೀಮಂತರ ಮನೆ ಬಾಗಿಲು ಬಡಿಯಲು ತೊಡಗಿದ್ದರು. ಈ ಹಂತದಲ್ಲಿ ತಮಗೆ ತಾವೇ ಹಾಕಿಕೊಂಡಿದ್ದ ಅನೇಕ ನಿರ್ಬಂಧಗಳನ್ನು ಸಡಿಲಗೊಳಿಸುತ್ತಾ ಹೋದರು. ಕಂಪೆನಿಯ ನಿರ್ದೇಶಕರ ಸಂಖ್ಯೆ ಹೆಚ್ಚಾಗುತ್ತಾ ಹನ್ನೆರಡರವರೆಗೆ ತಲುಪಿತ್ತು. ಕೊನೆಗೆ, ಕಷ್ಟದ ದಿನಗಳಲ್ಲಿ ವಡ್ಡರ್ಸೆಯವರಿಗೆ ಆರ್ಥಿಕ ನೆರವು ನೀಡಿದ್ದ ಉದ್ಯಮಿ ಡಾ.ಡಿ.ಸಿ.ಚೌಟ ಅವರೇ ‘ಮುಂಗಾರು’ ಪತ್ರಿಕೆಯನ್ನು ತಮ್ಮ ವಶಕ್ಕೆ ಪಡೆದರು. 15,000 ರೂ.ಗಳ ಗರಿಷ್ಠ ಮಿತಿಯ ನಿಬರ್ಂಧವನ್ನು ಸಡಿಲಿಸಿ ಡಾ.ಚೌಟರಿಗೆ ದೊಡ್ಡ ಮೊತ್ತದ ಷೇರುಗಳನ್ನು ವಡ್ಡರ್ಸೆಯವರು ಮಾರಾಟ ಮಾಡಿದ್ದ ಕಾರಣದಿಂದಾಗಿ ಕಂಪೆನಿಯನ್ನು ವಶಕ್ಕೆ ಪಡೆಯುವುದು ಅವರಿಗೆ ಸುಲಭವಾಗಿತ್ತು. ಓದುಗರ ಒಡೆತನ ಅಲ್ಲಿಗೆ ಕೊನೆಗೊಂಡಿತ್ತು. ಇದರ ನಂತರ ವಡ್ಡರ್ಸೆಯವರನ್ನು ಕಂಪೆನಿಯ ಆಡಳಿತ ನಿರ್ದೇಶಕನ ಸ್ಥಾನದಿಂದ ಕೆಳಗಿಳಿಸಿದ ಡಾ.ಚೌಟರು ತಮ್ಮ ಸಹೋದರನನ್ನು ಆ ಸ್ಥಾನದಲ್ಲಿ ತಂದು ಕೂರಿಸಿದರು. ಪತ್ರಿಕೆಯ ಸಂಪಾದಕೀಯ ವಿಭಾಗದ ಮೇಲ್ವಿಚಾರಣೆಗೆ ಮುಂಬೈನ ನಿವೃತ್ತ ಪತ್ರಕರ್ತ ವೈ.ಎಂ.ಹೆಗ್ಡೆಯವರನ್ನು ತಂದು ಕಾರ್ಯನಿರ್ವಾಹಕ ಸಂಪಾದಕರನ್ನಾಗಿ ನೇಮಿಸಲಾಯಿತು. ವಡ್ಡರ್ಸೆಯವರು ಸಂಪಾದಕರಾಗಿ ಮುಂದುವರಿದರು. ಮೇಲ್ನೋಟಕ್ಕೆ ತಮ್ಮ ನೋವು-ನಿರಾಶೆಗಳನ್ನು ತೋರ್ಪಡಿಸಿಕೊಳ್ಳದಿದ್ದರೂ ಈ ಬೆಳವಣಿಗೆಗಳಿಂದ ವಡ್ಡರ್ಸೆಯವರು ಒಳಗಿಂದೊಳಗೆ ಸಂಕಟಪಡುತ್ತಿದ್ದರು. ಇದರ ನಂತರ ಅವರು ಕಚೇರಿಗೆ ಬರುವುದು ಅಪರೂಪವಾಗುತ್ತಾ ಹೋಗಿತ್ತು. ಆಸಕ್ತಿಯಿಂದ ಬರೆಯುವುದೂ ಕಡಿಮೆಯಾಗಿತ್ತು. ಕಂಪ್ಯೂಟರ್, ಇಂಟರ್‌ನೆಟ್, ಗೂಗಲ್ ಮೊದಲಾದ ಯಾವ ತಂತ್ರಜ್ಞಾನದ ಸಾಧನಗಳು ಇಲ್ಲದೆ, ಕೇವಲ ತಮ್ಮ ಬುದ್ಧಿ, ಮನಸ್ಸು, ಪೆನ್ನು ಮತ್ತು ಕಾಗದಗಳನ್ನಷ್ಟೇ ಜೊತೆಯಲ್ಲಿಟ್ಟುಕೊಂಡ ಹಿಂದಿನ ತಲೆಮಾರಿನ ಪತ್ರಕರ್ತರ ಸಾಲಿಗೆ ಸೇರಿದವರು ವಡ್ಡರ್ಸೆ ರಘುರಾಮ ಶೆಟ್ಟಿಯವರು. ‘ಮುಂಗಾರು’ವಿನಲ್ಲಿ ಪ್ರಕಟವಾಗಿದ್ದ ಅವರ ಬಹಳಷ್ಟು ಬರವಣಿಗೆಗಳನ್ನು ಅವರು ಕಂಪೋಸಿಂಗ್ ವಿಭಾಗದಲ್ಲಿ ಕಾರ್ಮಿಕರ ಜೊತೆಯಲ್ಲಿ ಕೂತು, ಅಲ್ಲಿಯೇ ಕೈಗೆ ಸಿಕ್ಕ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಬಾಯಲ್ಲಿ ಗಣೇಶ್ ಬೀಡಿ ತುರುಕಿ ಹೊಗೆ ಬಿಡುತ್ತಾ ಬರೆದವರು. ಒಮ್ಮೆ ಬರೆದುದನ್ನು ತಿದ್ದಿದ್ದು ಕಡಿಮೆ. ಡೆಡ್‌ಲೈನ್‌ಗೇ ಅವರು ಬರೆಯುತ್ತಿದ್ದ ಕಾರಣ ಅವರ ಹಿಂದೆಯೇ ಕಾಯುತ್ತಿದ್ದ ಕಂಪೋಸಿಟರ್‌ಗಳು ಒಂದು ಹಾಳೆಯಲ್ಲಿನ ಬರವಣಿಗೆ ಮುಗಿಯುತ್ತಿದ್ದಂತೆ ಅವರಿಂದ ಕಿತ್ತುಕೊಂಡು ಹೋಗಿ ಕಂಪೋಸ್ ಮಾಡುತ್ತಿದ್ದರು. ಇಡೀ ‘ಬಹುರೂಪಿ ಅರಸು’ ಪುಸ್ತಕದ ಲೇಖನ ಮಾಲೆಯನ್ನು ಅವರು ಯಾವ ಡೈರಿಯ ನೆರವಿಲ್ಲದೆ ನೆನಪಿನ ಬಲದಿಂದಲೇ ಬರೆದಿದ್ದರು. ರಾಜಕೀಯದ ವಿದ್ಯಮಾನ, ಚುನಾವಣೆ, ವಿದ್ಯುತ್ ಮತ್ತು ನೀರಾವರಿಗೆ ಸಂಬಂಧಿಸಿದ ವಿಷಯಗಳನ್ನು ನಿದ್ದೆಯಿಂದ ಎಬ್ಬಿಸಿ ಕೇಳಿದರೂ ಗಂಟೆಗಟ್ಟಲೇ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಅವರೊಳಗಿದ್ದ ಪತ್ರಕರ್ತನ ಶಕ್ತಿ-ಸತ್ವಗಳನ್ನೆಲ್ಲ ‘ಮುಂಗಾರು’ ಪತ್ರಿಕೆಯ ಜಂಜಾಟಗಳು ಹೀರಿಕೊಳ್ಳದೇ ಇದ್ದಿದ್ದರೆ ಪತ್ರಕರ್ತರಾಗಿ ಅವರು ಇನ್ನಷ್ಟು ಬರೆಯುವುದಿತ್ತು, ನಾವು ತಿಳಿದುಕೊಳ್ಳುವುದಿತ್ತು.

ಕೊನೆ ದಿನಗಳಲ್ಲಿ ‘ಬೇರೆಯೇ ಮಾತುಗಳು’ ಎಂಬ ಅಂಕಣ ಬರೆಯುತ್ತಿದ್ದ ವಡ್ಡರ್ಸೆಯವರು ಬೇರೆಯೇ ನಮೂನೆಯ ಪತ್ರಕರ್ತರಾಗಿದ್ದರು. ಅವರ ಭಾಷೆ, ಬರವಣಿಗೆಯ ಶೈಲಿ, ಬಳಸುತ್ತಿದ್ದ ವಿಶಿಷ್ಟ ನುಡಿಕಟ್ಟುಗಳು ಕೂಡಾ ಬೇರೆಯೇ ಆಗಿದ್ದವು. ಪತ್ರಿಕಾ ವರದಿಗಳ ಬಗ್ಗೆ ಅವರಿಗಿದ್ದ ಕಲ್ಪನೆಯೇ ಸಾಂಪ್ರದಾಯಿಕ ಪತ್ರಕರ್ತರಿಗಿಂತ ಭಿನ್ನವಾಗಿತ್ತು. ಪ್ರಾರಂಭದ ದಿನಗಳ ಒಂದು ಶನಿವಾರ, ವಡ್ಡರ್ಸೆಯವರು ನನ್ನನ್ನು ಕರೆದು ಭತ್ತದ ಕೊಯ್ಲಿನ ಬಗ್ಗೆ ನಾಳೆ ಒಂದು ಲೇಖನ ಕೊಡು ಎಂದು ಆದೇಶ ನೀಡಿದರು. ‘ನಾಳೆ ರವಿವಾರ ಕೃಷಿ ಇಲಾಖೆಗೆ ರಜೆ’ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೆ. ‘ಆ ಕಚೇರಿಯಲ್ಲೇನಿದೆ ಮಣ್ಣಂಗಟ್ಟಿ? ಹಳ್ಳಿಯಲ್ಲಿದ್ದುಕೊಂಡು ಸುಗ್ಗಿಯ ದಿನಗಳ ಸಂಭ್ರಮ ನೋಡಿಲ್ವಾ? ಅದನ್ನೇ ಬರೆದುಕೊಂಡು ಬಾ’ ಎಂದು ಗದರಿದ್ದರು. ‘ನನಗೆ ಸ್ವಲ್ಪ ಜ್ವರ ಇದೆ’ ಎಂದು ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಅದಕ್ಕೆ ನಗುತ್ತಾ ‘ಮನೆಗೆ ಹೋಗುತ್ತಾ ಒಂದು ಕ್ವಾರ್ಟರ್ ಡಾಕ್ಟರ್ ಬ್ರಾಂಡಿ ಕೊಂಡುಹೋಗಿ ಬಿಸಿನೀರಲ್ಲಿ ಕುಡಿ, ಜ್ವರ ಓಡಿಹೋಗುತ್ತೆ’ ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ ಬೆನ್ನಮೇಲೆ ಗುದ್ದಿ ಹೊರಟು ಹೋಗಿದ್ದರು. ಅಲ್ಲಿಯವರೆಗೆ ಇಲ್ಲದ ಜ್ವರ ವಡ್ಡರ್ಸೆ ಅವರ ಭಯದಿಂದಾಗಿ ಶುರುವಾಗಿತ್ತು. ಅವರು ಹೇಳಿದ ಔಷಧಿ ಸೇವಿಸಿದ ಮೇಲೆ ಧೈರ್ಯ ಬಂದು ಒಂದು ನಾಸ್ಟಾಲಿಜಿಯಾ ಶೈಲಿಯಲ್ಲಿ ಸುಗ್ಗಿಯ ದಿನಗಳಲ್ಲಿ ನಾನು ಊರಲ್ಲಿ ಕಂಡುಂಡದ್ದನ್ನೆಲ್ಲ ಇಡೀ ರಾತ್ರಿ ಕೂತು ಬರೆದೆ. ಕೆ.ರಾಮಯ್ಯನವರು ಅದಕ್ಕೆ ‘ಭತ್ತದ ಕೊಯಿಲು, ಹರ್ಷದ ಹೊನಲು’ ಎಂಬ ಹೆಡ್ಡಿಂಗ್ ಕೊಟ್ಟಿದ್ದರು. ಅದನ್ನು ವಡ್ಡರ್ಸೆಯವರು ಸೋಮವಾರ ಪತ್ರಿಕೆಯ ಮುಖಪುಟದಲ್ಲಿ ಫ್ಲೈಯರ್ ಆಗಿ ಪ್ರಕಟಿಸಿದ್ದರು. ಖುಷಿಪಟ್ಟಿದ್ದ ವಡ್ಡರ್ಸೆಯವರು ಆ ದಿನ ಸಂಜೆ ಕರೆದೊಯ್ದು ಒಂದು ಬಿಯರ್ ಕೊಡಿಸಿದ್ದರು. ಅದು ನನ್ನ ಮೊದಲ ಪತ್ರಿಕಾ ವರದಿ. ಇದು ವಡ್ಡರ್ಸೆ ತಮ್ಮ ಕಿರಿಯರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ರೀತಿ. ಅದರ ನಂತರ ನಾನಲ್ಲಿದ್ದಷ್ಟು ದಿನ ಪ್ರತಿವರ್ಷ ನನ್ನನ್ನು ಜಿಲ್ಲೆಗಳಿಗೆ ಕಳಿಸಿ ಮಳೆ-ಬೆಳೆ ಸಮೀಕ್ಷೆ ನಡೆಸುತ್ತಿದ್ದರು. ವಡ್ಡರ್ಸೆ ಎಂಬ ಮುಂಗಾರು ಮಳೆ ನನ್ನಂತಹವನ ತಲೆ ಮೇಲೆ ಸುರಿಯದೆ ಇದ್ದಿದ್ದರೆ, ಯಾವುದೋ ಬ್ಯಾಂಕಿನಲ್ಲಿಯೋ, ಕಂಪೆನಿಯಲ್ಲಿಯೋ ಗುಮಾಸ್ತನಾಗಿ ಸೇರಿ ಬರಡಾಗಿ ಬದುಕಿ ಸಾಯುತ್ತಿದ್ದೆನೋ ಏನೋ? ‘ಮುಂಗಾರು’ ಮುಚ್ಚಿದ ನಂತರ ಬೆಂಗಳೂರು ಸೇರಿದ ವಡ್ಡರ್ಸೆಯವರು ಕೆಲಕಾಲ ದೇವರಾಜ ಅರಸು ಸಂಶೋಧನ ಕೇಂದ್ರದ ಅಧ್ಯಕ್ಷರಾಗಿದ್ದರು. ಈ ನಡುವೆ ಅವರ ಸಾಹಸ-ದುಸ್ಸಾಹಸದ ಎಲ್ಲ ದಿನಗಳಲ್ಲಿಯೂ ಜೊತೆ ನೀಡಿದ್ದ ಪ್ರೀತಿಯ ಮಡದಿ ಪ್ರಪುಲ್ಲಾ ಶೆಟ್ಟಿಯವರು ನಿಧನರಾದರು. ಅದರ ನಂತರ ಊರು ಸೇರಿದ ವಡ್ಡರ್ಸೆಯವರು ಏಕಾಂಗಿಯಾಗಿ ಹೋದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಅವರ ಇಳಿವಯಸ್ಸಿನ ಹತಾಶೆ-ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಅವರ ಸೈದ್ಧಾಂತಿಕ ಬದ್ಧತೆಯನ್ನು ಅಣಕಮಾಡುವ ಪ್ರಯತ್ನಗಳು ಕೂಡಾ ಊರಲ್ಲಿ ನಡೆಯಿತು. 1995ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹೆಚ್ಚು ಕಡಿಮೆ ಹನ್ನೊಂದು ವರ್ಷಗಳ ಅಲ್ಪಾಯುಷದ ನಂತರ ‘ಮುಂಗಾರು’ ಪತ್ರಿಕೆಯ ಸಾವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಾಲ ವಸೂಲಿಗಾಗಿ ಪತ್ರಿಕೆಯ ಕಟ್ಟಡವನ್ನು ಬ್ಯಾಂಕಿನವರು ವಶಪಡಿಸಿಕೊಂಡಿದ್ದರು.

1984ರ ಸೆಪ್ಟಂಬರ್ 9ರಂದು ಮಂಗಳೂರಿನ ಪುರಭವನದಲ್ಲಿ ‘ಮುಂಗಾರು’ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ್ದ ಸಾಹಿತಿ ದೇವನೂರ ಮಹದೇವ ಅವರು ‘ದಕ್ಷಿಣ ಕನ್ನಡ ಭೂತಗಳ ನಾಡು, ವಡ್ಡರ್ಸೆ ಎಂಬ ಭೂತ ಇಲ್ಲಿಗೆ ಬಂದು ಯಾವ ಮಾಯಕ ಮಾಡುತ್ತೋ ನೋಡೋಣ’ ಎಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಭೂತಗಳದ್ದು ಒಂದೊಂದು ದುರಂತ ಕತೆ, ಅವುಗಳು ‘ಮಾಯವಾದ’ ಮೇಲೆಯೇ ದೈವಗಳಾದದ್ದು. ಅಂತೆಯೇ ‘ಮುಂಗಾರು’ ಮತ್ತು ‘ವಡ್ಡರ್ಸೆ’ಯವರದ್ದು.

ವಡ್ಡರ್ಸೆಯವರು ತೀರಾ ಅಶಿಸ್ತಿನ ಮನುಷ್ಯ. ಅವರು ಬರೆದ ಬಹಳಷ್ಟು ಲೇಖನಗಳು, ಅಂಕಣಗಳನ್ನು ಅವರು ಸಂಗ್ರಹಿಸಿ ಇಟ್ಟಿಲ್ಲ. ಬೈಕಂಪಾಡಿಯಲ್ಲಿನ ‘ಮುಂಗಾರು’ ಕಚೇರಿಯಲ್ಲಿ ಬೈಂಡ್ ಮಾಡಿ ಇಡಲಾಗಿದ್ದ ಪತ್ರಿಕೆಗಳು ಯಾವುದೋ ರದ್ದಿ ಅಂಗಡಿ ಸೇರಿರಬಹುದು. ವಡ್ಡರ್ಸೆಯವರ ಲೇಖನಗಳು ಮಾತ್ರವಲ್ಲ ‘ಮುಂಗಾರು’ ಪತ್ರಿಕೆಯ ಸುಮಾರು 300ಕ್ಕೂ ಹೆಚ್ಚು ಸಂಪಾದಕೀಯಗಳು ಕೂಡಾ ನನ್ನ ಸಂಗ್ರಹದಲ್ಲಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಕೂಡಾ ಪ್ರಕಟಿಸುವ ಯೋಜನೆ ಇದೆ. ಈ ಪ್ರಸ್ತಾವನೆಯಲ್ಲಿ ‘ಮುಂಗಾರು’ ಮತ್ತು ವಡ್ಡರ್ಸೆಯವರ ಬದುಕಿನ ಏಳುಬೀಳಿನ ಪಯಣದ ಒಂದು ನೋಟವನ್ನು ನೀಡಲು ಪ್ರಯತ್ನಿಸಿದ್ದೇನೆ. ಅವರ ಬರವಣಿಗೆಗಳ ವೈವಿಧ್ಯ, ಅದರ ಹಿಂದಿನ ಅವರ ನೀತಿ-ನಿಲುವು, ಸಿದ್ಧಾಂತ-ಬದ್ಧತೆಗಳನ್ನು ಓದಿಯೇ ತಿಳಿದುಕೊಳ್ಳಬೇಕು.

ವಡ್ಡರ್ಸೆಯವರು ಮೂಲತಃ ಕನಸುಗಳ ಬೆನ್ನತ್ತಿ ಓಡುತ್ತಿದ್ದ ಅಲೆಮಾರಿ. ಜಮೀನ್ದಾರ ಕುಟುಂಬದಲ್ಲಿ ಹುಟ್ಟಿದ್ದ ರಘುರಾಮ ಶೆಟ್ಟಿಯವರು ಒಂಬತ್ತನೇ ತರಗತಿಯಲ್ಲಿಯೇ ಓದು ನಿಲ್ಲಿಸಿ ಕನಸಿನ ಬೆನ್ನತ್ತಿ ಮುಂಬೈಗೆ ಓಡಿ ಹೋದವರು (ಅವರ ಮುಂಬೈ ಜೈತ್ರಯಾತ್ರೆಯ ಕತೆ ಹೇಳುತ್ತಿದ್ದಾಗ ಅದೇ ರೀತಿ ಮುಂಬೈಗೆ ಓಡಿಹೋಗಿ ಬದುಕು ಕಟ್ಟಿಕೊಂಡ ನನ್ನ ತಂದೆಯ ಕತೆ ಹೇಳಿ ‘ಮುಂಬೈನಲ್ಲಿಯೇ ಹುಟ್ಟಿದ್ದ ನಾನು ನಿಮಗಿಂತ ಸೀನಿಯರ್ ಮುಂಬೈ ಸಿಟಿಜನ್’ ಎನ್ನುತ್ತಿದ್ದೆ).

ಈ ರೀತಿ ಮುಂಬೈಗೆ ಓಡಿಹೋಗಿ ಹೊಟೇಲ್ ಕೆಲಸಕ್ಕೆ ಸೇರಿದವರು ಕೊನೆಗೆ ಹೊಟೇಲ್ ಮಾಲಕರಾಗುತ್ತಿದ್ದರು. ವಡ್ಡರ್ಸೆಯವರು ಪತ್ರಕರ್ತರಾದರು. ಇದಕ್ಕೆ ಕಾರಣ ಅವರೊಳಗಿದ್ದ ಜನರ ಬವಣೆ ಬಗ್ಗೆ ಬರೆಯುವ ತುಡಿತ ಮತ್ತು ಅದನ್ನು ಬಡಿದೆಬ್ಬಿಸಿದ ಹೊಟೇಲ್ ಮುಂದಿನ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕಾ ಕಚೇರಿ. ಬರೆಯುವ ಹುಚ್ಚಿ ನಿಂದಾಗಿ ಕಾರ್ಮಿಕರ ಬವಣೆ ಬಗ್ಗೆ ಪತ್ರಿಕೆಗೆ ಬರೆಯತೊಡಗಿದ ವಡ್ಡರ್ಸೆಯವರಿಗೆ ಅಲ್ಲಿನ ಕಾರ್ಮಿಕ ಸಂಘಟನೆಯ ಸಂಪರ್ಕ ಸಿಕ್ಕಿತ್ತು. ಅದು ಅವರನ್ನು ಡಾ.ರಾಮಮನೋಹರ ಲೋಹಿಯಾ ನಡೆಸುತ್ತಿದ್ದ ತರಬೇತಿ ತರಗತಿಗಳಿಗೆ ಕೊಂಡೊಯ್ದು ನಿಲ್ಲಿಸಿತ್ತು. ಇದರಿಂದ ಬದುಕಿನ ದಾರಿಯನ್ನು ಮತ್ತು ಆ ಪಯಣಕ್ಕೆ ಬೇಕಾದ ಸೈದ್ಧಾಂತಿಕ ಸ್ಪಷ್ಟತೆಯನ್ನು ಪಡೆದ ವಡ್ಡರ್ಸೆಯವರು ಅಲ್ಲಿಂದ ಇನ್ನೊಂದು ಕನಸಿನ ಬೆನ್ನು ಹತ್ತಿ ಊರಿಗೆ ಬಂದು ‘ನವಭಾರತ’ ಪತ್ರಿಕೆ ಸೇರಿಕೊಂಡರು. ಅಲ್ಲಿಂದ ಬೆಂಗಳೂರಿಗೆ ಹಾರಿ ‘ತಾಯಿನಾಡು’, ‘ವಿಶ್ವವಾಣಿ’ಯಲ್ಲಿ ಕೆಲಸ ಮಾಡಿ, ‘ಪ್ರಜಾವಾಣಿ’ ಸೇರಿದರು. ಅವರದ್ದೇ ನುಡಿಕಟ್ಟಿನಲ್ಲಿ ಹೇಳುವುದಾದರೆ ‘ಪತ್ರಿಕಾರಂಗವನ್ನು ಮೂಲಗೇಣಿಯ ಆಸ್ತಿ ಮಾಡಿಕೊಂಡಿದ್ದ ಬ್ರಾಹ್ಮಣ ಪತ್ರಕರ್ತರಿಗೆ ಸವಾಲೆಸೆದು ದೈತ್ಯನಾಗಿ ಬೆಳೆದರು...’ ಅದರ ನಂತರ ಮತ್ತೆ ‘ಮುಂಗಾರು’ ಪತ್ರಿಕೆಯ ಕನಸು ಬೆಂಬತ್ತಿ ಹೋದರು. ‘ಮುಂಗಾರು’ ನನ್ನಂತಹವರಿಗೆ ಕನಸು ಕಾಣಲು ಕಲಿಸಿದ ವಡ್ಡರ್ಸೆಯವರು, ಕಂಡಿದ್ದ ಕನಸು ಮಾತ್ರ ಆಗಿರಲಿಲ್ಲ, ಅದು ಅವರು ಬಿತ್ತಿದ್ದ ಭರವಸೆಯ ಬೀಜವೂ ಆಗಿತ್ತು. ವರ್ತಮಾನದ ದಿನಗಳಲ್ಲಿ ನೈತಿಕವಾಗಿ ಬರಡಾಗುತ್ತಿರುವ ಮಾಧ್ಯಮಕ್ಷೇತ್ರ ಮತ್ತೆ ಚಿಗುರಿ ಆರೋಗ್ಯಕರವಾಗಿ ನಳನಳಿಸಬೇಕಾದರೆ ‘ಚಿಂತನೆಯ ಮಳೆಹರಿಸಿ ಜನಶಕ್ತಿ ಬೆಳೆ ತೆಗೆವ’ ‘ಮುಂಗಾರು’ ಸುರಿದು ನೆಲದೊಳಗಿನ ಭರವಸೆಯ ಬೀಜ ಮೊಳೆತು ಮರವಾಗಬೇಕು, ಬದುಕು ಹಸಿರಾಗಬೇಕು. ಆ ನಿರೀಕ್ಷೆಯಲ್ಲಿರೋಣ.

ಉಡುಪಿ ಜಿಲ್ಲೆಯ ವಡ್ಡರ್ಸೆ ಹುಟ್ಟೂರಾಗಿದ್ದರೂ ಮೂವತ್ತೈದನೇ ವರ್ಷಕ್ಕೆ ಕರಾವಳಿ ಬಿಟ್ಟಿದ್ದ ವಡ್ಡರ್ಸೆಯವರು ದಕ್ಷಿಣ ಕನ್ನಡ ಜಿಲ್ಲೆಗೆ ಹಿಂದಿರುಗಿದ್ದು 20 ವರ್ಷಗಳ ನಂತರ. ಬಾಲ್ಯದ ದಿನಗಳನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ವಾಸವಾಗಿದ್ದು ನವಭಾರತದಲ್ಲಿ ಕೆಲಸಕ್ಕಿದ್ದ ಒಂದೆರಡು ವರ್ಷ ಮಾತ್ರ. ಇಷ್ಟು ಕಾಲ ದಕ್ಷಿಣ ಕನ್ನಡದಿಂದ ದೂರ ಇದ್ದು ಅಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದಿದ್ದ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಅರಿವು ಇಲ್ಲದೆ ಇದ್ದ ವಡ್ಡರ್ಸೆಯವರಿಗೆ ಎದುರಾದ ಕಟು ವಾಸ್ತವ ಆಘಾತವನ್ನುಂಟು ಮಾಡಿತ್ತು.

‘ಮುಂಗಾರು’ ಪತ್ರಿಕೆ ವಿರುದ್ಧ ಪ್ರತಿಸ್ಪರ್ಧಿ ಪತ್ರಿಕೆ ಮಾತ್ರವಲ್ಲ, ಸೈದ್ಧಾಂತಿಕ ವಿರೋಧಿಗಳಿಂದಲೂ ಯೋಜನಾಬದ್ಧವಾದ ಅಪಪ್ರಚಾರ ಶುರುವಾಗಿದ್ದ ಕಾರಣ ಕೊನೆ ವರ್ಷಗಳಲ್ಲಿ ‘ಓದುಗ ಒಡೆಯ’ರಿಂದ ಷೇರು ಸಂಗ್ರಹ ಹೆಚ್ಚು ಕಡಿಮೆ ನಿಂತೇ ಹೋಗಿತ್ತು. ಪತ್ರಿಕೆಯನ್ನು ಉಳಿಸಲು ಬೇಕಾದ ಸಂಪನ್ಮೂಲ ಸಂಗ್ರಹಕ್ಕಾಗಿ ವಡ್ಡರ್ಸೆಯವರು ಅನಿವಾರ್ಯವಾಗಿ ತಮಗೆ ಪರಿಚಯದ ಶ್ರೀಮಂತರ ಮನೆ ಬಾಗಿಲು ಬಡಿಯಲು ತೊಡಗಿದ್ದರು.

‘ಮುಂಗಾರು’ ವಡ್ಡರ್ಸೆಯವರು ಕಂಡಿದ್ದ ಕನಸು ಮಾತ್ರ ಆಗಿರಲಿಲ್ಲ. ಅದು ಅವರು ಬಿತ್ತಿದ್ದ ಭರವಸೆಯ ಬೀಜವೂ ಆಗಿತ್ತು. ವರ್ತಮಾನದ ದಿನಗಳಲ್ಲಿ ನೈತಿಕವಾಗಿ ಬರಡಾಗುತ್ತಿರುವ ಮಾಧ್ಯಮ ಕ್ಷೇತ್ರ ಮತ್ತೆ ಚಿಗುರಿ ಆರೋಗ್ಯಕರವಾಗಿ ನಳನಳಿಸಬೇಕಾದರೆ ‘ಚಿಂತನೆಯ ಮಳೆಹರಿಸಿ ಜನಶಕ್ತಿ ಬೆಳೆ ತೆಗೆವ’ ‘ಮುಂಗಾರು’ ಸುರಿದು ನೆಲದೊಳಗಿನ ಭರವಸೆಯ ಬೀಜ ಮೊಳೆತು ಮರವಾಗಬೇಕು, ಬದುಕು ಹಸಿರಾಗಬೇಕು. ಆ ನಿರೀಕ್ಷೆಯಲ್ಲಿರೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)