ಜನ ಜನಿತ
ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ದಿಕ್ಕು ನೀಡಿದ ಪಾಲೆತ್ತಾಡಿ

ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿ ಅಖಂಡ ಮುಂಬೈ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ದೊರಕಿದೆ. ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿ ಇಲ್ಲಿನ ಕನ್ನಡ ಸಂಸ್ಕೃತಿಯ ಸಂವರ್ಧನೆಗೆ ಶ್ರಮಿಸುತ್ತಾ ಬಂದಿರುವ ಪಾಲೆತ್ತಾಡಿ ಅವರ ವ್ಯಕ್ತಿತ್ವ, ಜೀವನ ಸಾಧನೆಯ ಕುರಿತ ಕಿರು ಲೇಖನ ಇಲ್ಲಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ ಮಹಾನಗರ. ಇಂದಿಗೂ ಮಾಯಾನಗರಿ ಮುಂಬೈಯಲ್ಲಿ ಸುಮಾರು ಇಪ್ಪತ್ತು ಲಕ್ಷ ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುವುದು ಗಮನೀಯ ಅಂಶ. ಮುಂಬೈನ ಜನಪ್ರಿಯ ಕನ್ನಡ ದೈನಿಕ ಕರ್ನಾಟಕ ಮಲ್ಲದ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರು ಮುಂಬೈನ ಗಣ್ಯವ್ಯಕ್ತಿಗಳಲ್ಲಿ ಒಬ್ಬರು. ಮುಂಬೈ ಮಹಾನಗರದಲ್ಲಿ ಕನ್ನಡ ಹಾಗೂ ತುಳು ಸಾಹಿತ್ಯ ಸಂಸ್ಕೃತಿಯ ಏಳಿಗೆಗೆ ‘ಕರ್ನಾಟಕ ಮಲ್ಲ’ ಪತ್ರಿಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಕರ್ನಾಟಕ ಮಲ್ಲ ಮುಂಬೈ ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾದ ದೈನಿಕ. ಇದರ ರೂವಾರಿ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ. ಚಂದ್ರಶೇಖರ ಪಾಲೆತ್ತಾಡಿ ಅವರು ಲೇಖಕರಾಗಿ, ಚಿಂತಕರಾಗಿ ಹೆಸರು ಮಾಡಿದ್ದಾರೆ. ‘ನಾನು, ನನ್ನ ಸ್ವಗತ’ ಚಂದ್ರಶೇಖರ ಪಾಲೆತ್ತಾಡಿ ಅವರ ಕಿರು ಆತ್ಮಕಥನ. ಇದನ್ನು ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರು ‘ಇದು ಭಾರತ’ ಎಂಬ ಅಂಕಣವನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ. ‘ನಾನು, ನನ್ನ ಸ್ವಗತ’ ಕೃತಿಯಲ್ಲಿ ಪಾಲೆತ್ತಾಡಿ ಅವರ ಜೀವನ ಸಾಧನೆಯ ದಾಖಲಾತಿ ಸಂಕ್ಷಿಪ್ತವಾಗಿ ಪಡಿ ಮೂಡಿದೆ.
ಕಳೆದ ಕಾಲು ಶತಮಾನದಲ್ಲಿ ಮುಂಬೈಯಲ್ಲಿ ಪತ್ರಿಕೆಯ ಮೂಲಕ ಕನ್ನಡಕ್ಕಾಗಿ ದುಡಿದ, ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರೂ ಒಬ್ಬರು. ಪಾಲೆತ್ತಾಡಿ ಅವರ ನಿರಂತರ ಪರಿಶ್ರಮ, ಪ್ರಯತ್ನಗಳಿಂದ ಕರ್ನಾಟಕ ಮಲ್ಲ ಇಂದಿಗೂ ಉಳಿದು ಬೆಳೆದು ಸಮೃದ್ಧ ಪತ್ರಿಕೆಯಾಗಿ ಮುಂಬೈ ಮಹಾನಗರದಲ್ಲಿ ಕಂಗೊಳಿಸುತ್ತಿದೆ ಎಂಬುದು ಅಭಿಮಾನದ ಸಂಗತಿ. ಕಳೆದ ಕಾಲು ಶತಮಾನದಲ್ಲಿ ಮುಂಬೈ ಕನ್ನಡಿಗರ ಮನಸೂರೆಗೊಂಡ ಕರ್ನಾಟಕ ಮಲ್ಲದಲ್ಲಿ ಪಾಲೆತ್ತಾಡಿ ಅವರು ಬರೆದ ಸಂಪಾದಕೀಯಗಳು, ಅಂಕಣ ಬರಹಗಳ ಸಂಖ್ಯೆ ಹತ್ತಿರ ಹತ್ತಿರ ಹತ್ತು ಸಾವಿರ. ಅವರ ಬರವಣಿಗೆಗೂ ವ್ಯಕ್ತಿತ್ವಕ್ಕೂ ಅವಿನಾಭಾವ ಸಂಬಂಧವಿದೆ. ಪತ್ರಿಕೋದ್ಯಮಿ ಎಂದ ತಕ್ಷಣ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿರುವ ವ್ಯಕ್ತಿ ಎಂದೇ ಭಾವಿಸಲಾಗುತ್ತಿದೆ. ಆದರೆ ಹೆಚ್ಚಿನ ಪತ್ರಿಕೆಗಳ ಸಂಪಾದಕರು, ಉಪಸಂಪಾದಕರು ನಾಲ್ಕು ಗೋಡೆಗಳ ನಡುವೆ ಆಸನಕ್ಕೆ ಅಂಟಿಕೊಂಡೇ ಇರುವುದು ವಾಡಿಕೆ. ಅಪಾರ ಜನಪ್ರಿಯತೆಯನ್ನು ಸಂಪಾದಿಸಿರುವ ಪಾಲೆತ್ತಾಡಿ ತುಳು-ಕನ್ನಡಿಗರು ಕರೆದಲ್ಲೆಲ್ಲ ಹೋಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾಲೆತ್ತಾಡಿ ಒಬ್ಬ ಸೂಕ್ಷ್ಮಜ್ಞ, ವಿಚಾರವಾದಿ, ಪ್ರಗತಿಪರ ಚಿಂತಕ, ಅಪರೂಪದ ಪತ್ರಕರ್ತ. ಅವರ ಮೇಲೆ ಮುಂಬೈ ಕನ್ನಡಿಗರು ಅಪಾರವಾದ ಭರವಸೆಯನ್ನಿಟ್ಟುಕೊಂಡಿದ್ದಾರೆ.
ಚಂದ್ರಶೇಖರ ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅನ್ಯಾಯ, ಅಸಮಾನತೆಯ ಬಗೆಗೆ ಅವರು ಸದಾ ಗುಡುಗುತ್ತಾ ಬಂದವರು. ಅವರು ಖಂಡಿತವಾದಿ, ದಾಕ್ಷಿಣ್ಯಪರನಲ್ಲ. ಧರ್ಮಾಂಧತೆ, ಜಾತಿಯ ಅಂಧತೆ, ಪಕ್ಷಾಂಧತೆ ಈ ಮೂರು ಅಂಧತೆಯಿಂದ ಅವರು ಮಾರುದ್ದ ದೂರ. ಸತ್ಯನಿಷ್ಠೆ, ನಿರ್ದಾಕ್ಷಿಣ್ಯ ಧೋರಣೆಯನ್ನು ಮೈಗೂಡಿಸಿಕೊಂಡ ಅವರು ಧೀರ ಪತ್ರಿಕೋದ್ಯಮಿ. ಚಂದ್ರಶೇಖರ ಪಾಲೆತ್ತಾಡಿ ಅವರು ಸ್ವಭಾವತಃ ನಿಗರ್ವಿ. ಅವರ ನಡೆ ನುಡಿ ಸ್ವಚ್ಛ. ಎಲ್ಲರ ಆಪ್ತಮಿತ್ರನೂ ಹೌದು.
ವಾಙ್ಮಯ ಸೇವೆಯಲ್ಲಿ ಪತ್ರಿಕೆಗಳ ಪಾತ್ರ ಗಮನಾರ್ಹವಾದುದು. ಪತ್ರಿಕೆಗಳ ಮುಖಾಂತರ ಬರಹಗಾರರು ಹುಟ್ಟಿಕೊಳ್ಳುತ್ತಾರೆ. ಬರಹಗಳು ಹುಟ್ಟಿಕೊಳ್ಳುತ್ತವೆ. ಕರ್ನಾಟಕ ಮಲ್ಲ ದೈನಿಕದ ಮೂಲಕ ಅನೇಕ ಬರಹಗಾರರು ಪ್ರಸಿದ್ಧರಾಗಿದ್ದಾರೆ. ಅಲ್ಲಿನ ಅಂಕಣಗಳಿಂದಾಗಿ ಅನೇಕ ಬರಹಗಾರರು ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಮಲ್ಲದಿಂದಾಗಿ ಮುಂಬೈ ಮಹಾನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸತ್ಯ. ಕರ್ನಾಟಕ ಮಲ್ಲದ ಮೂಲಕ ಪಾಲೆತ್ತಾಡಿ ಅವರು ಸಮಸ್ತ ಕನ್ನಡಿಗರ ಆಗುಹೋಗುಗಳಿಗೆ ಸ್ಫೂರ್ತಿಯಾಗಿದ್ದಾರೆ.
ಮುಂಬೈ ಸಾಹಿತ್ಯ ವಲಯವಾಗಿ ರೂಪುಗೊಳ್ಳಲು ಇಲ್ಲಿನ ಪತ್ರಿಕೋದ್ಯಮವೂ ಕಾರಣವಾಗಿದೆ. ಕರ್ನಾಟಕ ಮಲ್ಲ ಈ ಸುದೀರ್ಘ ಪರಂಪರೆಯನ್ನು ಸಶಕ್ತವಾಗಿ ಪೋಷಿಸಿಕೊಂಡು ಬಂದಿದೆ. ಅಶೋಕ್ ಸುವರ್ಣ, ಡಾ. ಜೀವಿ ಕುಲಕರ್ಣಿ, ರವಿ ಅಂಚನ್, ಶ್ರೀನಿವಾಸ ಜೋಕಟ್ಟೆ, ಡಾ. ಜಿ. ಡಿ. ಜೋಶಿ, ಕೊಲ್ಯಾರು ರಾಜು ಶೆಟ್ಟಿ, ಕೋಡು ಭೋಜ ಶೆಟ್ಟಿ, ರತ್ನಾಕರ ಶೆಟ್ಟಿ, ಶ್ರೀಧರ ಉಚ್ಚಿಲ್ ಮೊದಲಾದವರು ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳು ಕೃತಿರೂಪದಲ್ಲಿ ಬೆಳಕು ಕಂಡಿವೆ. ಈ ಎಲ್ಲ ಲೇಖಕರಿಗೆ ಪ್ರೋತ್ಸಾಹ ನೀಡುತ್ತಾ ಬಂದವರು ಚಂದ್ರಶೇಖರ ಪಾಲೆತ್ತಾಡಿ. ಪಾಲೆತ್ತಾಡಿ ಅವರು ಕಳೆದ ಎರಡೂವರೆ ದಶಕಗಳಿಂದ ಮುಂಬೈ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲರಾಗಿದ್ದಾರೆ. ಈಗ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರ್ನಾಟಕ ಮಲ್ಲದ ಸಂಪಾದಕರಾಗಿ ಅದರ ಘನತೆಯನ್ನು ಹೆಚ್ಚಿಸಿದ ಕೀರ್ತಿ ಪಾಲೆತ್ತಾಡಿ ಅವರಿಗೆ ಸಲ್ಲುತ್ತದೆ.
ಪಾಲೆತ್ತಾಡಿ ಅವರದು ಹೋರಾಟದ ಬದುಕು. ಅವರು ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ಅವರು ಎಡಪಂಥೀಯ ನಿಲುವನ್ನು ಮೈಗೂಡಿಸಿಕೊಂಡಿದ್ದರೂ ಅವರದು ಸಮನ್ವಯ ದೃಷ್ಟಿ, ಸರ್ವೋದಯ ದೃಷ್ಟಿ. ಹೀಗಾಗಿ ಅವರು ಎಲ್ಲರೊಂದಿಗೆ ಪರಸ್ಪರ ಸಂಬಂಧ, ಸಂಪರ್ಕ ಸಮನ್ವಯವನ್ನಿಟ್ಟುಕೊಂಡಿದ್ದಾರೆ. ಅವರದು ಚಿಕಿತ್ಸಕ ಮನೋಧರ್ಮ. ತಮ್ಮದೇ ಆದ ಘನತೆ, ಗಾಂಭೀರ್ಯ ಮಹತ್ತುಗಳಿಂದ ಅಪಾರ ಓದುಗರನ್ನು ಅವರು ಗಳಿಸಿಕೊಂಡಿದ್ದಾರೆ. ಕನ್ನಡ ಅಂಕಣ ಬರಹಗಾರರಲ್ಲಿ ಕರ್ನಾಟಕ ಮಲ್ಲದ ಸಂಪಾದಕ ಪಾಲೆತ್ತಾಡಿ ಅವರಿಗೆ ಉನ್ನತ ಸ್ಥಾನವೊಂದು ಯಾವತ್ತೂ ಮೀಸಲಾಗಿರುತ್ತದೆ. ದಿನಪತ್ರಿಕೆಯೊಂದಕ್ಕೆ ಸುಮಾರು ಎರಡೂವರೆ ದಶಕಗಳ ಕಾಲ ಸಂಪಾದಕೀಯ, ಅಂಕಣಗಳನ್ನು ಬರೆದ ಸಂಪಾದಕರಿವರು. ಮಂಗಳೂರು ಮಿತ್ರ, ಹೊಸದಿಗಂತ, ಉದಯದೀಪ ಇದೀಗ ಕರ್ನಾಟಕ ಮಲ್ಲ ಹೀಗೆ ನಾನಾ ಪತ್ರಿಕೆಗಳಲ್ಲಿ, ಬೇರೆ ಬೇರೆ ಹುದ್ದೆಗಳಲ್ಲಿ ದುಡಿದ ಅನುಭವಿ ಪತ್ರಕರ್ತ ಪಾಲೆತ್ತಾಡಿ. ಸಾಮಾಜಿಕ ಪ್ರಜ್ಞೆ ಅವರ ಮಾತು, ಕೃತಿ, ನೋಟ, ನಿಲುವುಗಳಲ್ಲಿ ಎದ್ದು ಕಾಣುವ ಅಂಶ.
ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಾಧನೆಯನ್ನು ಖ್ಯಾತ ಪತ್ರಿಕೋದ್ಯಮಿ, ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪಅವರು ಹೀಗೆ ಕಂಡಿದ್ದಾರೆ: ‘‘ಮುಂಬೈ ಮೊದಲಿನಿಂದಲೂ ಕನ್ನಡದ ಭದ್ರ ಕೋಟೆಯೇ ಆಗಿತ್ತು. ಮುಂಬೈ ನಗರದ ಇತಿಹಾಸವನ್ನು ಕೆದಕಿದರೆ ಅಲ್ಲಿ ನಮಗೆ ಕಾಣ ಸಿಗುವುದು ಕನ್ನಡಿಗರ ಸಾಂಸ್ಕೃತಿಕ ಇತಿಹಾಸವೇ. ಇಂದಿಗೂ ಮುಂಬೈಯಲ್ಲಿ ಕನ್ನಡ ತಲೆ ಎತ್ತಿ ನಿಂತಿದೆ. ಮುಂಬೈ ಮಹಾನಗರದ ಕನ್ನಡಿಗರು ಮಹಾನ್ ಸಾಧಕರು. ನಾನು ಮತ್ತೆ ಮತ್ತೆ ಮುಂಬೈಗೆ ಬಂದು ಹೋಗುತ್ತಿದ್ದೇನೆ. ಹೀಗೆ ಬಂದಾಗಲೆಲ್ಲ ಕರ್ನಾಟಕ ಮಲ್ಲ ಪತ್ರಿಕೆಯನ್ನು ತಪ್ಪದೇ ಓದುತ್ತಾ ಬಂದಿದ್ದೇನೆ. ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಸಂಪಾದಕೀಯಗಳು ನನಗೆ ತುಂಬಾ ಹಿಡಿಸಿವೆ. ಅವರ ನೇರ, ಸರಳ ಶೈಲಿ ವಾಚನೀಯವಾಗಿದೆ. ಪತ್ರಿಕೆ ಒಂದು ಸಶಕ್ತ ಮಾಧ್ಯಮ. ಮುಂಬೈಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಉನ್ನತಿಗೆ ಕರ್ನಾಟಕ ಮಲ್ಲ ಮಹತ್ವದ ಕೊಡುಗೆಯನ್ನು ನೀಡಿದೆ. ಹೊರನಾಡ ಕನ್ನಡಿಗರ ಸಾಧನೆಯನ್ನು ಕುರಿತು ಮಾತನಾಡುವಾಗ ಕರ್ನಾಟಕ ಮಲ್ಲ ಹಾಗೂ ಅದರ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರ ಸಾಧನೆಯನ್ನು ನಾವು ಪ್ರಸ್ತಾಪಿಸಲೇಬೇಕು.’’
ಹಿರಿಯ ಸಾಹಿತಿ ವಿಜ್ಞಾನಿ ಡಾ. ನಿಂಜೂರು ಅವರು: ‘‘ಚಂದ್ರಶೇಖರ ಪಾಲೆತ್ತಾಡಿ ಅವರು ಧೀರ ಪತ್ರಿಕೋದ್ಯಮಿ, ನಿಷ್ಠುರವಾದಿ. ಎಡಪಂಥೀಯರಾದರೂ ಕೂಡ ಸಮನ್ವಯ ದೃಷ್ಟಿಯುಳ್ಳವರು. ಕರ್ನಾಟಕ ಮಲ್ಲ ಮುಂಬೈಗರ ಮಟ್ಟಿಗೆ ತಮ್ಮದೇ ಪತ್ರಿಕೆ ಎನ್ನುವಷ್ಟರ ಮಟ್ಟಿಗೆ ಪ್ರೀತಿ’’ ಎಂದು ಪಾಲೆತ್ತಾಡಿ ಅವರ ಘನ ವ್ಯಕ್ತಿತ್ವವನ್ನು ಸರಿಯಾಗಿ ಗ್ರಹಿಸಿದ್ದಾರೆ.
ದೇಶದ ಪತ್ರಿಕೋದ್ಯಮದ ಒಳಹೊರಗನ್ನು ಚೆನ್ನಾಗಿ ಬಲ್ಲ ಪಾಲೆತ್ತಾಡಿ ಅವರು ಪ್ರಬುದ್ಧ ಚಿಂತಕರೂ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾದ ಸಾಧನೆಗೈದವರಿಗೆ ಕೊಡಮಾಡುವ ಪ್ರತಿಷ್ಠಿತ ‘ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ’ಗೂ ಅವರು ಪಾತ್ರರಾಗಿದ್ದರು. ಇದೀಗ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪಾಲೆತ್ತಾಡಿ ಅವರಿಗೆ ಸಂದಿರುವುದು ನಿಷ್ಠಾವಂತ ಪತ್ರಿಕೋದ್ಯಮಿಯೊಬ್ಬರಿಗೆ ಸಂದ ಅರ್ಹ ಗೌರವ ಎಂದೇ ಹೇಳಬಹುದಾಗಿದೆ. ಈ ಪ್ರಶಸ್ತಿಗಾಗಿ ಅವರು ಯಾವುದೇ ಲಾಬಿ ಮಾಡಿಲ್ಲ, ಅತ್ತು ಕರೆದು ವಶೀಲಿ ಹಚ್ಚಿಲ್ಲ. ಅದು ಅವರ ಸಾಧನೆಯನ್ನು ಅರಸಿಕೊಂಡು ಬಂದಿದೆ ಎಂಬುದು ಹೇಳಲೇಬೇಕಾದ ಸಂಗತಿ. ನಾಡಿನ ಪತ್ರಕರ್ತರಿಗೆ ಪಾಲೆತ್ತಾಡಿ ಅವರು ಎಲ್ಲ ದೃಷ್ಟಿಯಿಂದಲೂ ಆದರ್ಶಪ್ರಾಯರಾಗಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ