varthabharthi


ವೈವಿಧ್ಯ

ಉತ್ತರ ಸಿಗದ ಪ್ರಶ್ನೆಗಳು

ವಾರ್ತಾ ಭಾರತಿ : 31 Dec, 2021
ಪಲ್ಲವಿ ಇಡೂರು

ಭಾರತ ಮತ್ತು ಬ್ರಿಟಿಷ್ ಸಂಬಂಧದ ಹಾದಿಯನ್ನು ವಿಧಿ ಯಾಕೋ ಆಗಸ್ಟ್ ತಿಂಗಳಿನೊಂದಿಗೆ ಜೋಡಿಸಿದೆಯೇನೊ ಅನ್ನುವಂತೆ ಈ ಘಟನೆಗಳು ನಡೆದಿವೆ ಎನ್ನಬಹುದು. ಕ್ರಿ.ಶ.1608ರಲ್ಲಿ ಮೊದಲ ಬಾರಿ ಭಾರತದ ಸೂರತ್ ನಗರದ ಬಂದರಿನಲ್ಲಿ ಬಂದಿಳಿದು ವಾಣಿಜ್ಯ ವ್ಯವಹಾರ ಶುರುವಿಟ್ಟುಕೊಂಡಿದ್ದ ಈಸ್ಟ್ ಇಂಡಿಯಾ ಕಂಪೆನಿಗೆ, ಬಂಗಾಳ, ಬಿಹಾರ ಮತ್ತು ಒಡಿಶಾದಲ್ಲಿ ಮೊದಲನೇ ಸಲ ಕಪ್ಪನೀಡಿ, ಭೂ ಕಂದಾಯ ವಸೂಲಿಗೆ ದಾರಿ ಮಾಡಿಕೊಟ್ಟಿದ್ದು ಅಂದಿನ ಮೊಗಲ್ ದೊರೆ ಎರಡನೇ ಶಾಹ್ ಆಲಮ್, 1765ರ ಅಗಸ್ಟ್ ತಿಂಗಳಿನಲ್ಲಿ. ಅಲ್ಲಿಂದ ಶುರುವಾದ ಈಸ್ಟ್ ಇಂಡಿಯಾ ಕಂಪೆನಿಯ ದಂಡಯಾತ್ರೆ, ಆನಂತರ ಕಂಪೆನಿಯ ಹಿಡಿತದಿಂದ ಬ್ರಿಟಿಷ್ ಅರಮನೆಗೆ ಅಧಿಕಾರ ಹಸ್ತಾಂತರವಾಗಿ, ಭಾರತ ಬ್ರಿಟಿಷ್ ರಾಜ್ ಆಡಳಿತಕ್ಕೆ ಸಿಲುಕಿದ್ದು 1858ರಲ್ಲಿ, ಮತ್ತದೇ ಆಗಸ್ಟ್ ತಿಂಗಳಿನಲ್ಲಿ, ‘ಆ್ಯಕ್ಟ್ ಫಾರ್ ದಿ ಬೆಟರ್ ಗೌರ್ನಮೆಂಟ್ ಆಫ್ ಇಂಡಿಯಾ’ ಅನ್ನುವ ಕಾರಣ ಕೊಟ್ಟು, ಮೊದಲನೇ ಭಾರತ ಸರಕಾರ ಕಾಯ್ದೆ-1858ನ್ನು ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತಂದ ಬ್ರಿಟಿಷ್ ಸರಕಾರ ಅಲ್ಲಿಂದ ನಡೆಸಿದ್ದು ಸುದೀರ್ಘ ನಿರಂಕುಶ ಪ್ರಭುತ್ವದ ರಾಜಕೀಯ, ಕಟ್ಟಕಡೆಯದಾಗಿ ಭಾರತದ ಸ್ವಾತಂತ್ರ್ಯದ ನಿರ್ಧಾರಕ್ಕೆ ಬಂದು, ಅಧಿಕಾರ ಹಸ್ತಾಂತರಿಸಲು ಆಯ್ಕೆ ಮಾಡಿಕೊಂಡಿದ್ದು 1947ರ ಆಗಸ್ಟ್ ತಿಂಗಳನ್ನು. ಈ ರೀತಿ ಅವರ ಆಗಮನ, ನಿರ್ಗಮನವೆರಡೂ ಒಂದು ರೀತಿಯಲ್ಲಿ ಅನನ್ಯವಾದುದು. ವ್ಯಾಪಾರಕ್ಕಾಗಿ ಬಂದು ದೇಶವಾಳಲು ನಿಂತರೆ, ಹೊರಡಬೇಕೆಂದು ನಿರ್ಧರಿಸಿದವರೇ ಯಾವುದೇ ಯುದ್ಧವಿಲ್ಲದೆ, ಷರತ್ತುಗಳಿಲ್ಲದೆ ಹೊರಟು ನಿಂತರು. ಇತಿಹಾಸದಲ್ಲಿ ಮತ್ತೊಂದು ಇದಕ್ಕೆ ಸಮನಾದ ಘಟನೆ ಘಟಿಸಿರಲಾರದು!

ನಮ್ಮನ್ನಾಳಿದ ಈಸ್ಟ್ ಇಂಡಿಯಾ ಕಂಪೆನಿಗಾಗಲಿ ಅಥವಾ ಬ್ರಿಟಿಷ್ ಸರಕಾರಕ್ಕಾಗಲಿ ಭಾರತದ ನೆಲ, ಜನ, ಇಲ್ಲಿನ ವಿಭಿನ್ನ ಸಂಸ್ಕೃತಿಯಾಗಲಿ, ವಿವಿಧ ರೂಪದ ನಂಬಿಕೆಗಳಾಗಲಿ ಯಾವುದರ ಪರಿಚಯವೂ ಇರಲಿಲ್ಲ. ಅಷ್ಟೆಲ್ಲ ವರ್ಷಗಳ, ಶತಶತಮಾನಗಳ ಆಡಳಿತದಲ್ಲೂ ಅವರಿಂದ ಗ್ರಹಿಸಲಾಗಿದ್ದು ಕೂಡ ಒಂದು ಸಣ್ಣ ತುಣುಕಷ್ಟೇ. ಇವರ ಆಡಳಿತಕ್ಕೊಳಪಡುವ ಮೊದಲು ಇಲ್ಲಿನ ಜನ ತಮ್ಮ ತಮ್ಮ ಅದೃಷ್ಟಕ್ಕೆ ತಾವೇ ಜವಾಬ್ದಾರರಾಗಿದ್ದರು. ಹೋರಾಟಕ್ಕೂ, ಸಹಕಾರಕ್ಕೂ ಒಬ್ಬರನ್ನೊಬ್ಬರು ಕೊಂದುಕೊಳ್ಳುವುದಕ್ಕೂ, ಕಾಳಜಿ ತೋರಿಸುವುದಕ್ಕೂ ಹೀಗೆ ಎಲ್ಲದಕ್ಕೂ ಅದು ಅವರದೇ ಆಂತರಿಕ ವಿಚಾರವಾಗಿತ್ತು. ಆದರೆ ಬಿಟಿಷರು ಬಂದಿದ್ದೇ ಇಲ್ಲಿನ ಆಂತರಿಕ ವಿಚಾರವೂ ಅವರ ಹದ್ದುಬಸ್ತಿನಲ್ಲಿರಬೇಕಾದ, ಬ್ರಿಟಿಷರ ತನಿಖೆಗೊಳಪಡಬೇಕಾದ ವಿಚಾರವಾಗಿ ಮಾರ್ಪಟ್ಟಿತು. ಅದರ ಒಟ್ಟೂ ಪರಿಣಾಮವಾಗಿ ಸಣ್ಣಪುಟ್ಟ ತಕರಾರುಗಳಿಗೆ ಮೀಸಲಾಗಿದ್ದ ಹಿಂದೂ-ಮುಸಲ್ಮಾನರ ಚಿಕ್ಕಚಿಕ್ಕ ತಗಾದೆಗಳು ದೊಡ್ಡ ಮಟ್ಟದ ರಾಜಕೀಯ ದಾಳವಾಗಿ ಬೆಳೆಯಲು ಕಾರಣವಾಯಿತು.

ಹಾಗೆ ನೋಡಿದರೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಒಂದು ರೀತಿಯಲ್ಲಿ ಛಿದ್ರಗೊಂಡ ಹರುಕು ಮುರುಕು ಸ್ವಾತಂತ್ರ್ಯವೆನ್ನಬಹುದೇನೊ. ಏಕೆಂದರೆ, ಭೂಮಿ ಮತ್ತು ಜನರ ನಡುವೆ ಎದ್ದಿರುವ ಬೇಲಿ, ಮುರಿದು ಹೋದ ಸಂಬಂಧ, ಪ್ರಳಯಾಂತಕ ಹಿಂಸೆ ಇವೆಲ್ಲವೂ ಈ ಸ್ವಾತಂತ್ರ್ಯವನ್ನು ಪೂರ್ತಿಯಾಗಿ ಸಂಭ್ರಮಿಸಲು ಬಿಡಲಿಲ್ಲ. ಈ ಭೂಮಿಯ ಮೇಲೆ ಯಾರೂ ಅನುಭವಿಸಿರದಂತಹ ರೀತಿಯಲ್ಲಿ ಮಿಲಿಯನ್‌ಗಟ್ಟಲೆ ಜನರನ್ನು ತಮ್ಮ ಮೂಲನೆಲೆಯಿಂದಲೇ ಬೇರು ಸಮೇತ ಕಿತ್ತು ಎಸೆದಂತಿತ್ತು. ಶತಮಾನಗಳಿಂದ ಯಾವುದು ತಮ್ಮ ನೆಲೆಯಾಗಿತ್ತೋ ಅವೆಲ್ಲವನ್ನೂ ಬಿಟ್ಟು ಗೊತ್ತುಗುರಿಯಿಲ್ಲದ, ಕಂಡು ಕೇಳರಿಯದ, ಹೊಸದೊಂದು ಜಾಗಕ್ಕೆ ಬಂದು ನಿರಾಶ್ರಿತರಂತೆ ನೆಲೆನಿಂತು, ಹರಿದು-ಮುರಿದು ಬರಡಾಗಿದ್ದ ಬದುಕನ್ನು ನನ್ನವರು, ತನ್ನವರಾರೂ ಇಲ್ಲದೆ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎರಡೂ ಕಡೆಯವರಿಗೆ ತಂದಿತ್ತಿದ್ದು ಧರ್ಮದ ರಾಜಕೀಯ! ಅದು ಈಗಲೂ ಉಳಿಸಿರುವುದು ಕರಗಲಾರದ ಕಹಿ, ಮಾಗದ ಗಾಯ!

ವಾಸ್ತವದಲ್ಲಿ ಈ ‘ಛಿದ್ರಗೊಂಡ ಸ್ವಾತಂತ್ರ್ಯ’ವನ್ನು ಪಕ್ಕಕ್ಕಿಟ್ಟು ನೋಡಿದರೂ, ಈ ಸ್ವಾತಂತ್ರ್ಯ ನಮಗೆ ಶಾಂತಿಯನ್ನೇನೂ ಉಳಿಸಿಲ್ಲ. ಅಥವಾ ಮುಂದೆಂದೂ ಶಾಂತಿ ನೆಲೆಸಬಹುದು ಎನ್ನುವ ಆಶಾವಾದವನ್ನೂ ಉಳಿಸಿಲ್ಲ. ಉಗ್ರವಾದ ಭಾಷಣ, ಕೆರಳಿಸುವ ಮಾತುಗಳು, ಧರ್ಮದ ರಾಜಕೀಯ ತಂತ್ರಗಳು, ಕೋಮುವಾದ ಎಲ್ಲವೂ ವಿಭಜನೆಯ ನಂತರ ಅಕ್ಕಪಕ್ಕದಲ್ಲಿದ್ದು, ಸೋದರರಂತೆ ಬೆಳೆಯಬೇಕಾಗಿದ್ದ ಆಗಷ್ಟೇ ಕಣ್ಣು ತೆರೆದ ಎರಡು ದೇಶಗಳ ಮತ್ತು ಜನರ ನಡುವೆ ಮುಗಿಯಲಾರದ ವೈಷಮ್ಯ ತುಂಬಿ ಅದೀಗ ಹೆಮ್ಮರವಾಗಿ ಬೆಳೆಯುವಂತಾಗಿದೆ.

ಶತಮಾನಗಳ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ, ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾದ, ಅನೇಕ ಐತಿಹಾಸಿಕ ಹೋರಾಟಗಳಿಗೆ ಕಾರಣವಾದ, ಬ್ರಿಟಿಷರ ಅತ್ಯಂತ ದಾರುಣ, ಅಮಾನುಷ ಹಿಂಸೆಗೆ ಸಾಕ್ಷಿಯಾದ, ಜಗತ್ತಿಗೆ ಶಾಂತಿಯುತ ಹೋರಾಟವೂ ಫಲಕೊಡಬಲ್ಲುದು ಎಂಬುದಕ್ಕೆ ಸಾಕ್ಷಿಯಾದ ಸ್ವಾತಂತ್ರ್ಯ ಹೋರಾಟವು ಪರ್ಯಾವಸಾನಗೊಂಡಿದ್ದು ಮಾತ್ರ ಒಂದಾಗಿದ್ದ ವಿಶಾಲ ಭೂಪ್ರದೇಶವನ್ನು ಕತ್ತರಿಸಿ ಎರಡು ತುಂಡು ಮಾಡಿ ಹಂಚುವುದರ ಮೂಲಕ, ಅಕ್ಷರಶಃ ಅಣ್ಣತಮ್ಮಂದಿರ, ದಾಯಾದಿಗಳ ಆಸ್ತಿ ಜಗಳದ ನಂತರದ ಆಸ್ತಿ ಒಪ್ಪಂದದಂತೆ ಆದರೆ ತುಂಡರಿಸುವ ಧಾವಂತದಲ್ಲಿ ಉಳಿಸಿದ್ದು ಕಹಿ, ಕೆರಳಿಸಿದ್ದು ಧಾರ್ಮಿಕ ಭಾವನೆ ಮತ್ತು ಹಚ್ಚಿದ್ದು ಹಿಂದೂ-ಮುಸ್ಲಿಂ ಎನ್ನುವ ಆರದ ಬೆಂಕಿ. ಮೊದಮೊದಲು ತನ್ನ ಲಾಭಕ್ಕೆ ಬ್ರಿಟಿಷರು ಹೊತ್ತಿಸಿದ ಕಿಡಿ ಬರಬರುತ್ತಾ ಮನುಷ್ಯತ್ವವೆನ್ನುವ ಅಸ್ಮಿತೆಯನ್ನು ಮರೆಯುವ ಮಟ್ಟಿಗೆ ಆವರಿಸಿ ಇವತ್ತಿಗೂ ಸುಡುತ್ತಲೇ ಇದೆ.

ಇವೆಲ್ಲದರಿಂದಲೂ ಬಹುವಾಗಿ ಘಾಸಿಗೊಂಡವರೆಂದರೆ, ಮನೆ-ಮಠ, ಆಸ್ತಿ, ಅಸ್ಮಿತೆ, ತಮ್ಮವರನ್ನು ಕಳೆದುಕೊಂಡು, ದಾರುಣವಾಗಿ ಅತ್ಯಾಚಾರಕ್ಕೆ, ಕೊಲೆಗೆ ಒಳಗಾದ ಗಡಿ ಪ್ರದೇಶದ ಜನರು ಮತ್ತು ಇವೆಲ್ಲವೂ ನಡೆಯಕೂಡದೆಂದು ಭಾರತಕ್ಕಾಗಮಿಸಿದಂದಿನಿಂದ ಶಾಂತಿಯ ಸಂದೇಶಗಳನ್ನು ಜನಮನ, ಮನೆಗಳಿಗೆ ತಲುಪಿಸಿ ಸತ್ಯಾಗ್ರಹವೆಂಬ ಹೊಸದೊಂದು ಪ್ರತಿಭಟನೆಯ ರೀತಿಯನ್ನೇ ಹುಟ್ಟುಹಾಕಿ, ಜಗತ್ತನ್ನೇ ಆಳುತ್ತಾ ಬೀಗುತ್ತಿದ್ದ ಬ್ರಿಟಿಷರಂತಹ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮಹಾತ್ಮಾ ಗಾಂಧೀಜಿಯವರು, ಯಾವ ಹಿಂದೂ ಹಾಗೂ ಮುಸಲ್ಮಾನರ ಏಕತೆಗಾಗಿ ಕನಸು ಕಂಡಿದ್ದರೋ, ವಿಭಜನೆಯ ನಂತರದ ಅವರ ಹತಾಶೆಯನ್ನು ಅವರ ನುಡಿಗಳು ಹೇಳುತ್ತವೆ: ‘‘ನಾನು ವೈಫಲ್ಯದಿಂದ ಸಾಯಲು ಬಯಸುವುದಿಲ್ಲ. ಆದರೆ ಇವತ್ತು ನಾನು ಸೋತಿದ್ದೇನೆ. ವಿಭಜನೆ ಬಂದುಬಿಟ್ಟಿದೆ, ಅದು ನನ್ನನ್ನು ಘಾಸಿಗೊಳಿಸಿದೆ ನಿಜ, ಆದರೆ ಅದಕ್ಕಿಂತಲೂ ಘಾಸಿಗೊಳಿಸಿರುವುದು ವಿಭಜನೆಯಾಗಿರುವ ರೀತಿ’’. ಗಾಂಧೀಜಿಯವರ ಈ ನುಡಿಗಳು ಶಾಂತಿಯಿಂದ ರಕ್ತಸಿಕ್ತ ವಿಭಜನೆಗೆ ದೇಶ ಹೊರಳಿಕೊಂಡ ಬಗೆಗೆ ಮೂಕಸಾಕ್ಷಿಯಾಗಿದೆ!

ಇದರ ಪರಿಣಾಮವನ್ನು ವಿಭಜನೆಯ ನಂತರವೂ ಅನುಭವಿಸಿಕೊಂಡು ಬಂದಿದ್ದು ಅಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳಾದರೆ, ಇಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು. ಹಾಗೆ ನೋಡಿದರೆ, ಇತಿಹಾಸ ಹೇಳುವ ಭರದಲ್ಲಿ ಭಾರತದೊಳಗಿದ್ದ ಭಾರತೀಯ ಮುಸ್ಲಿಮರ ನಿಲುವನ್ನು ಅಷ್ಟು ತೀಕ್ಷ್ಣವಾಗಿ ಗಮನಿಸಲೇ ಇಲ್ಲವೆನ್ನಬಹುದು. ವಿಭಜನೆಯ ವಿಚಾರ ಅತಿಯಾಗಿ ಚರ್ಚೆಯಾಗುತ್ತಿದ್ದಾಗ, ಜಿನ್ನಾ ಮತ್ತು ಮುಸ್ಲಿಂ ಲೀಗ್ ಪಾಕಿಸ್ತಾನದ ಬೇಡಿಕೆಯಿಟ್ಟು ಕೂತಿದ್ದಾಗ ರಾಷ್ಟ್ರೀಯತೆಯ ವಾದವನ್ನು ಪದೇ ಪದೇ ಪುನರುಚ್ಛರಿಸುತ್ತಿದ್ದು, ವಿಭಜನೆಯ ವಿರುದ್ಧ ದನಿ ಎತ್ತಿದ್ದ ಗುಜರಾತಿನ ಭಾಗದ ಕಕ್ಸರ್‌ಗಳು, ಖೈಬರ್ ಫಖ್ತೂನ್‌ಖ್ವಾ ಪ್ರದೇಶದ ಪಶ್ತೂನಿಗಳು, ಮೊಮಿನ್‌ರು ಮುಂತಾದವರು. ಅದರಂತೆಯೇ ಆಲ್ ಇಂಡಿಯಾ ಆಝಾದ್ ಮುಸ್ಲಿಂ ಕಾನ್ಫರೆನ್ಸ್ ನಡಿಯಲ್ಲಿ ವಿಭಜನೆಯನ್ನು ವಿರೋಧಿಸಿದ ಐಕ್ಯತೆಯ ಭಾರತದಾದ್ಯಂತ ಅನೇಕ ಮುಸ್ಲಿಂ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಅತಿಯಾದ ಕೋಮುವಾದದ ನಡುವೆಯೂ ಸಹಬಾಳ್ವೆಯ ಕನಸು ಕಂಡಿದ್ದರು. ವಿಭಜನೆಯ ನಂತರ, ಅಷ್ಟೆಲ್ಲ ಘಟನೆಗಳ ನಂತರವೂ ಭಾರತದಲ್ಲಿ ಇವತ್ತಿಗೂ ಪ್ರತಿಯೊಬ್ಬರ ವೈಯಕ್ತಿಕ ಆಚಾರ ವಿಚಾರಗಳನ್ನು ಗೌರವಿಸುತ್ತ, ಮಾನವೀಯತೆಯನ್ನು ಜೀವಂತವಾಗಿಟ್ಟುಕೊಳ್ಳಲು ಕಾರಣವಾಗಿರುವುದು ಸಂವಿಧಾನ ರಚನಾ ಸಮಿತಿಯು ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನವಾಗಿದೆ.

ರಾಜಕೀಯ ಇತಿಹಾಸವನ್ನು ಇಷ್ಟೆಲ್ಲ ಕೂಲಂಕಷವಾಗಿ ಗಮನಿಸಿದ ಮೇಲೂ ಮತ್ತೆ ಮತ್ತೆ ಕಾಡುವುದು, 1947ರಲ್ಲಿ ಭಾರತ ಏಕೆ ಈ ರೀತಿಯಲ್ಲಿ ವಿಭಜನೆಯಾಯಿತು?! ವಿಭಜನೆಯೊಂದೇ ದಾರಿಯಾಗಿತ್ತಾ? ವಿಭಜನೆಯಿಲ್ಲದೆ ಸ್ವಾತಂತ್ರ್ಯ ಸಾಧ್ಯವೇ ಇರಲಿಲ್ಲವೇ? ಅಥವಾ ವಿಭಜನೆಯಾಗದ ಭಾರತವಿದ್ದಿದ್ದರೆ ಹೇಗಿರುತ್ತಿತ್ತು? ಇಷ್ಟೆಲ್ಲ ರಾಜಕೀಯದ ನಂತರ ದೇಶದೊಳಗೆ ಶಾಂತಿ ನೆಲೆಸಿರುತ್ತಿತ್ತೇ? ವಿಭಜನೆಯಿಲ್ಲದ ಭಾರತ ಇನ್ನಷ್ಟು ಸುಭಿಕ್ಷವಾಗಿರುತ್ತಿತ್ತಾ? ಬೇಕೋ ಬೇಡವೋ ಎರಡು ದೇಶಗಳ ನಡುವೆ ಹುಟ್ಟಿಕೊಂಡ ಈ ಕೋಮು ದ್ವೇಷಕ್ಕೆ ಕೊನೆಯಿಲ್ಲವೇ? ಈ ಕೋಮುದ್ವೇಷ 1947ರಲ್ಲೇ ಕೊನೆಯಾಯಿತಾ ಅಥವಾ ಈಗ ಸ್ವತಂತ್ರ ಭಾರತದಲ್ಲಿ ಇನ್ನೊಂದು ರೂಪದಲ್ಲಿ ಜೀವಂತವಾಗಿದೆಯಾ? ಹೀಗೆ ಪ್ರಶ್ನೆಗಳು ಹಲವಾರು. ಆದರೆ ರಾಜಕೀಯ ದಾಳಗಳಿಗೆ ಒಂದು ದೇಶದ, ಅಲ್ಲಿನ ನಿವಾಸಿಗಳ ಭವಿಷ್ಯವನ್ನೇ ಬದಲಿಸುವಂತಹ ಶಕ್ತಿ ಯಿರುವುದು ಸಂಶಯವೇ ಇಲ್ಲದ ಸತ್ಯ.

ಪುಸ್ತಕ: ಆಗಸ್ಟ್

ಮಾಸದ ರಾಜಕೀಯ ಕಥನ

ಲೇಖಕರು:

ಪಲ್ಲವಿ ಇಡೂರು

ಪ್ರಕಾಶಕರು: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ, ನಂ10, 24ನೇ ಮೈನ್, ಗಿರಿನಗರ ‘ಟಿ’ ಬ್ಲಾಕ್ ಬೆಂಗಳೂರು-560085

ಮೊ:9902590303 ಬೆಲೆ: ರೂ. 230

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)