ಶುನಕ ಪುರಾಣವು
ಮುಂಬೈಯಲ್ಲಿ ನೆಲೆಸಿರುವ ವ್ಯಾಸರಾವ್ ನಿಂಜೂರ್ ಅವರದು ವಿಜ್ಞಾನ ಕ್ಷೇತ್ರ. ಆದರೆ ಅವರು ಜನಪ್ರಿಯರಾಗಿರುವುದು ಸಾಹಿತಿಯಾಗಿ. ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಬಯೋ ಕೆಮೆಸ್ಟ್ರಿ ಮತ್ತು ಫುಡ್ ಟೆಕ್ನಾಲಜಿ ವಿಭಾಗದಲ್ಲಿ, ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆಯಲ್ಲಿದ್ದು ಸ್ವಯಂ ಇಚ್ಛೆಯಿಂದ ನಿವೃತ್ತರಾದವರು. ಮುಂಬೈ ವಿಶ್ವವಿದ್ಯಾನಿಲಯದ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದವರು. ‘ಉಸಿರು’ ‘ಚಾಮುಂಡೇಶ್ವರಿ ಭವನ’ ಇವರ ಪ್ರಮುಖ ಕನ್ನಡ ಕಾದಂಬರಿಗಳು. ಚಾಮುಂಡೇಶ್ವರಿ ಭವನ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿದೆ. ಇಲ್ಲಿ, ಪುಟ್ಟದೊಂದು ನಾಯಿಮರಿಯ ನೆಪದಲ್ಲಿ ತಮ್ಮ ಬಾಲ್ಯದ ತುಣುಕುಗಳನ್ನು ಹಂಚಿಕೊಂಡಿದ್ದಾರೆ.
ಡಾ. ವ್ಯಾಸರಾವ್ ನಿಂಜೂರ್
ಇದು ನಾನು ಚಿಕ್ಕವನಾಗಿದ್ದಾಗ ನಡೆದ ಘಟನೆ. ಘಟನೆ ಏನು, ಘಟನಾವಳಿಗಳು ಎಂದರೂ ತಪ್ಪಿಲ್ಲ. ನಾನೊಮ್ಮೆ ಸ್ಲೇಟ್, ವಾಂಟೆಗೆ ಸಿಕ್ಕಿಸಿದ ಕಡ್ಡಿ, ಹರಕು ಪುಸ್ತಕಧಾರಿಯಾಗಿ, ಸೊಂಟದಿಂದ ಕೆಳಗಿಳಿಯಲು ಇನ್ನಿಲ್ಲದ ತವಕ ತೋರುತ್ತಿದ್ದ ಚಡ್ಡಿಯನ್ನು ಮೇಲೆಳೆಯುತ್ತ, ಸರಕಾರಿ ಕನ್ನಡ ಹಿರಿಯ ಪಾಥಮಿಕ ಶಾಲೆಯಿಂದ ಡ್ರಿಲ್ ಮಾಸ್ಟರರಿಗೆ ಮಂಗಮಾಡಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಗ, ನಮ್ಮ ಬಾಕ್ನೂರ್ ಗದ್ದೆಯ ಕಟ್ಟಪುಣಿ (ದೊಡ್ಡ ಹೂಣಿ)ಯಲ್ಲಿ ಸಣ್ಣ ಆಕ್ರಂದನ ಕೇಳಿದಂತಾಯ್ತು. ನಾನು ಸದ್ದು ಬಂದತ್ತ ಗಮನ ಹರಿಸಿ ನೋಡುತ್ತೇನೆ ನನ್ನ ಎದೆಯೆತ್ತರಕ್ಕೆ ಬೆಳೆದ ಹುಲ್ಲಿನ ಎಡೆಯಲ್ಲಿ ನಾಯಿಯ ಕುಕ್ಕುರು (ಸಣ್ಣ ಮರಿ), ಅಳು ದನಿಯಲ್ಲಿ ನನ್ನನ್ನು ಕಾಪಾಡಿ ಎನ್ನುವ ಭಿನ್ನಹದ ವಿಚಿತ್ರ ಸ್ವರ ಹೊರಡಿಸುತ್ತಿತ್ತು. ಇಲ್ಲಿಯೇ ಬಿಟ್ಟರೆ ಚಳಿ, ಹಸಿವುಗಳಿಂದ ಅದು ಪಡ್ಚವಾಗುವುದು ಖಂಡಿತವೆಂದು ಬಗೆದ ನಾನು ಅತ್ಯಂತ ಕುಕ್ಕುಲಾತಿಯಿಂದ ಆ ಮರಿಯನ್ನು ಹಸಿ ಹುಲ್ಲುಗಳೆಡೆಯಿಂದ ತೆಗೆದು, ನನ್ನೆದೆಗೆ ಒರಗಿಸಿಕೊಂಡೆ. ಮರಿ ಖುಷಿಯಿಂದ ನನ್ನ ಕೈಗಳನ್ನು ನೆಕ್ಕಿ, ಅಂಗಿಯ ಕಿಸೆಯೊಳಗೆ ಮೂತಿ ತೂರಿ ಮಲಗುವ ಸನ್ನಾಹದತ್ತ ಜಾರಿತು.
ನನಗೀಗ ಒಂಥರಾ ಉಭಯ ಸಂಕಟ. ಈ ಮರಿಯನ್ನು ಬೇರೆಲ್ಲಾದರೂ ಬಿಟ್ಟು ನಿನ್ನ ದಾರಿ ನೀನು ನೋಡಿಕೊ ಎನ್ನುವಂತಿಲ್ಲ. ಮನೆಯಲ್ಲಿ ಈ ಕುಕ್ಕುರನ್ನು ಪ್ರತಿಷ್ಠಾಪಿಸಿದರೆ ಸದಾಕಾಲ ಕಟ್ಟುನಿಟ್ಟಿನ ಮಡಿ ಪಾಲಿಸುವ ನಮ್ಮ ಮನೆಯ ಕೆಂಪು ಸೇನಾನಿ ಅಜ್ಜಿಯಂದಿರು ಒಂಚೂರೂ ಕರುಣೆ ತೋರಿಸದೆ ಈ ಮರಿಯನ್ನು ಕುಷ್ಟನಿಗೋ, ಪಾಂಚನಿಗೋ ಕೊಟ್ಟುಬಿಡು, ಇಲ್ಲಿ ಅದರ ವಾಸ ಬಿಲ್‌ಕುಲ್ ಬೇಡ ಎಂದು ಖಡಕ್ಕಾಗಿ ಹೇಳಿದರೆ ಏನು ಮಾಡೋಣ. ಹೆದರುತ್ತಲೇ ನಾಯಿಮರಿಯನ್ನು ಮನೆಗೆ ತಂದು ನನ್ನ ಹಳೆಯ ಬೈರಾಸವನ್ನು ಮಡಚಿ, ಅದಕ್ಕೆ ಹಾಸಿಗೆ ಮಾಡಿ ಚಾವಡಿಯ ಮೂಲೆಯಲ್ಲಿ ಅದನ್ನು ಇರಿಸಿದೆ. ನಾಯಿಮರಿ ಧನ್ಯವಾದಗಳು ಎನ್ನುವಂತೆ ಸ್ವರಸೂಸಿ, ನಾನು ಮಾಡಿದ ಹಂಸ ತೂಲಿಕಾ ತಲ್ಪಿದಲ್ಲಿ ತನ್ನ ಶಯನೋತ್ಸವಕ್ಕೆ ಸಜ್ಜಾಯಿತು. ಅದೇ ಸಮಯ ನನ್ನ ಅಜ್ಜಿ ಕಿಚ್ಚಮ್ಮ (ಕೃಷ್ಣ ವೇಣಿ ಅಮ್ಮ) ಸ್ನಾನ ಮುಗಿಸಿ ಬಂದವರೆ ನಾಯಿ ಮರಿ ಚಾವಡಿಯಲ್ಲಿ ಮಲಗಿದ್ದನ್ನು ಕಂಡವರೆ ಮಹಾಕಾಳಿಯ ಅವತಾರ ತಾಳಿ, ನನಗೆ ಬೈಗುಳಗಳ ಪುಷ್ಪಾರ್ಚನೆ ಮಾಡುತ್ತಾ ‘‘ಹಡೆ ಎಲ್ಲಾದರೂ ನಾಯಿಯನ್ನು ಮನೆಯ ಒಳಗೆ ತರಬಾರದು ಎನ್ನುವಷ್ಟು ಅಕಲು ನಿನಗಿಲ್ಲವೇ. ನಿನ್ನ ಅಪ್ಪಯ್ಯ ಬರಲಿ. ಹುಣಸೆ ಅಡರಿನ ಪೆಟ್ಟು ನಿನ್ನ ಬೆನ್ನಿಗೆ ಬಿದ್ದರೆ ಎಲ್ಲ ಸರಿ ಹೋಗುತ್ತದೆ’’ ಎನ್ನುತ್ತ ಹರಿನಾಮ ಸ್ಮರಣೆಯೊಂದಿಗೆ ಪಡಸಾಲೆ ಪ್ರವೇಶಿಸಿದರು.
ಅಜ್ಜಿಯ ಬಾಯಿಗೆ ಬೆದರಿ ಮರಿ ಶ್ವಾನವನ್ನು ಅತ್ಯಂತ ಅಚ್ಚೆಯೊಂದಿಗೆ ಚಾವಡಿಯಿಂದ ಜಗಲಿಯ ಮೂಲೆಗೆ ಸ್ಥಳಾಂತರಿಸಿದೆ. ಈಗ ಬದುಕಿದ್ದರೆ ಪ್ರಾಣಿದಯಾ ಸಂಘದ ಮಾನ್ಯ ಸದಸ್ಯೆಯಾಗಬಹುದಾಗಿದ್ದ ನನ್ನ ಅಮ್ಮ, ಒಂದು ಅಲ್ಯೂಮಿನಿಯಮ್ ದಬರಿಯಲ್ಲಿ ಸ್ವಲ್ಪ ಅನ್ನ ಮತ್ತು ದಪ್ಪ ಹಾಲನ್ನು ಮರಿಯ ಮುಂದಿರಿಸಿದಳು. ಮರಿಯು ಬಕಾಸುರನಂತೆ ಅನ್ನ, ಹಾಲನ್ನು ಮುಕ್ಕಿ ನಾಲಗೆಯಿಂದ ತನ್ನ ತುಟಿಗಳನ್ನು ಸವರಿ ತೃಪ್ತಿಯ ದನಿ ಹೊರಡಿಸಿತು.
ನನಗೆ ಅಪ್ಪಯ್ಯ ಏನು ಹೇಳುತ್ತಾರೋ ಎನ್ನುವ ಭಯ ಕಾಡುತ್ತಿತ್ತು. ಮನಸ್ಸಿನಲ್ಲಿ ‘ಪುಕು ಪುಕು’ ಅನ್ನಿಸುತ್ತಿತ್ತು. ಅಪ್ಪಯ್ಯ ತಮ್ಮ ಸರ್ಕೀಟು ಮುಗಿಸಿ ಬಾವಿಕಟ್ಟೆಯಲ್ಲಿ ಕೈಕಾಲು ಮುಖ ತೊಳೆದು, ಅಂಗ ವಸ್ತ್ರದಿಂದ ಮುಖ ಒರೆಸುತ್ತ್ತಾ ಬಂದವರಿಗೆ ಈ ಶುನಕ ದೃಷ್ಟಿಗೆ ಬಿತ್ತು. ಅವರು ಏನೂ ಅನ್ನದೆ ನಾಯಿಮರಿಯ ಬೆನ್ನು ತಡವಿ, ನನ್ನನ್ನು ಕರೆದು ‘ಇದು ಎಲ್ಲಿ ಸಿಕ್ಕಿತೋ ನಿನಗೆ?’ ಎಂದು ವಿಚಾರಿಸಿದರು. ನಾನು ಹೆದರುತ್ತಲೇ ಕಟ್ಟಹುಣಿಯಲ್ಲಿ ಹುಲ್ಲಿನ ಮಧ್ಯೆ ಪನಿ(ಇಬ್ಬನಿ)ಯಿಂದ ನಡುಗುತ್ತಿದ್ದ ಮರಿಯನ್ನು ತಂದುದಾಗಿ ಹೇಳಿದೆ. ‘‘ಒಳ್ಳೆಯ ಕೆಲಸ ಮಾಡಿದೆ. ಮನೆಯಲ್ಲೊಂದು ನಾಯಿ ಸಾಕಬೇಕು ಎಂದು ಲಾಗಾಯ್ತಿನಿಂದ ಅಂದುಕೊಂಡಿದ್ದೆ. ಈಗ ಆ ಆಸೆ ಕೈಗೂಡಿತು. ಚಂದದ ಮರಿ. ಹಣೆಯಲ್ಲಿ ಬಿಳಿಯ ನಾಮ ಉಂಟು. ಆದ್ದರಿಂದ ಇದನ್ನು ‘ದಾಸು’ ಎಂದು ಕರೆಯೋಣ. ಏನಂತೀ?’’ ಎನ್ನುತ್ತ ನಾನು ‘ಟಿಪ್ಪು, ಟೈಗರ್’ ಎಂದೆಲ್ಲ ಹೆಸರಿಡಬೇಕು ಎಂದು ಕೈಗೊಂಡ ತೀರ್ಮಾನಗಳಿಗೆಲ್ಲ ತಣ್ಣೀರೆರಚಿ ಬಿಟ್ಟರು. ಅಪ್ಪಯ್ಯ ಹೇಳಿದ ಬಳಿಕ ಅಪೀಲು ಉಂಟೆ? ನಾಯಿ ಮರಿ ದಾಸುವಾಗಿ ಬಿಟ್ಟಿತು.
ಒಂದೆರಡು ತಿಂಗಳಲ್ಲಿ ಅಮ್ಮನ ಆರೈಕೆಯಲ್ಲಿ ಬೆಳೆದ ದಾಸು ದಷ್ಟ-ಪುಷ್ಟವಾಗಿ ಕಂಗೊಳಿಸಲಾರಂಭಿಸಿತು. ಅದು ಅಪ್ಪಯ್ಯನಿಗೆ ಭಯಂಕರ ವಿಧೇಯತೆ ತೋರಿಸಿದರೆ, ಅಮ್ಮನನ್ನು ಕಂಡಾಗ ಬಾಲವಲ್ಲಾಡಿಸುತ್ತ ದೂರದಿಂದಲೇ ತನ್ನ ಭಾಷೆಯಲ್ಲಿ ಬೇಡಿಕೆ ಸಲ್ಲಿಸುತ್ತಿತ್ತು. ಬಹಿರ್ದೆಸೆಗೆ ನಮ್ಮ ತೋಟವನ್ನು ಮಾತ್ರ ಆಶ್ರಯಿಸುತ್ತಿದ್ದ ದಾಸು ನಮ್ಮ ತೋಟದಲ್ಲಿನ ಕಾಲ್ನಡಿಗೆಯ ದಾರಿಯಲ್ಲಿ ಎಂದೂ ಹೊಲಸು ಮಾಡುತ್ತಿರಲಿಲ್ಲ.
ದಾಸುವಿನ ದೈನಂದಿನ ದಿನಚರಿಯ ಪ್ರಮುಖ ಭಾಗವೆಂದರೆ ನಮ್ಮೀರ್ವರು ಅಜ್ಜಿಯಂದಿರ ಮಡಿ ಕೆಡಿಸುವುದು. ಅವರು ಸ್ನಾನ ಪೂರೈಸಿ ಮೋಮಯ, ವೃತ್ತಿಕೆ ತಮ್ಮ ತಲೆಗೆ ಸ್ವಲ್ಪ ಸವರುತ್ತಿದ್ದಂತೆ ದಾಸು ಅವರ ಸೀರೆಯ ಚುಂಗು ತನ್ನ ಎದುರಿನ ಕಾಲಿನಿಂದ ಹಿಡಿದೆಳೆದು ಬಾಲ ಅಲ್ಲಾಡಿಸುತ್ತಿತ್ತು. ಅಜ್ಜಿಯಂದಿರಿಗೆ ಕೋಪ ತಡೆಯಲಾರದೆ ಬೋಗುಣಿಯಿಂದ ಅದರ ತಲೆಗೆ ಜಪ್ಪಿಟಿಡಲು ಹೋದರೆ, ದಾಸು ಅತ್ಯಂತ ಘೋರವಾಗಿ ಬೊಬ್ಬಿಡುತ್ತ ಓಡಿ ಹೋಗಿ ಅಪ್ಪಯ್ಯನ ಬಳಿ ಕಂಪ್ಲೆಂಟು ಒಪ್ಪಿಸಲು ಮುಂದಾಗುತ್ತಿತ್ತು. ಅಸಲಿಗೆ ಅದಕ್ಕೆ ಯಾವ ಅಪಾಯವೂ ಆಗಿರಲಿಲ್ಲ. ಬೋಗುಣಿಯನ್ನು ಅದರ ತಲೆಗೆ ಕುಟ್ಟಲು ಹೋದ ಅಜ್ಜಿಗೆ ಬೋಗುಣಿಯಲ್ಲಿ ನಳಿ (ಪೆಟ್ಟಿನ ಗುರುತು) ಬಿದ್ದದ್ದು ಕಂಡು, ದಾಸುವಿಗೆ ತಮ್ಮ ಶಬ್ದ ಭಂಡಾರದಲ್ಲಿದ್ದ ಎಲ್ಲ ಬೈಗುಳಗಳನ್ನೂ ರವಾನಿಸಬೇಕಾಯಿತು.
ನಮ್ಮ ಅಪ್ಪಯ್ಯನಿಗೆ ಎತ್ತಿನಗಾಡಿಯ ಖಯಾಲಿ. ಗಾಡಿಯನ್ನು ಮನೆಯ ಸಮೀಪದ ಜಿಡ್ಡ(ಸ್ವಲ್ಪ ಎತ್ತರದ ಸ್ಥಳ)ದಲ್ಲಿ ಪಾರ್ಕ್ ಮಾಡಿ ಎತ್ತುಗಳನ್ನು ಹಟ್ಟಿಗೆ ತರುತ್ತಿದ್ದರು. ಆಗ ಅವರಿಗೆ ಕಂಪೆನಿ ಕೊಡುತ್ತಿದ್ದುದು ಇದೇ ದಾಸು. ಕೆಲವೊಮ್ಮೆ ಎತ್ತುಗಳ ಕಾಲುಗಳ ನಡುವೆ ನುಸುಳಿ ಅವುಗಳಿಂದ ಒದೆ ತಿನ್ನುವ ಪ್ರಸಂಗಗಳೂ ಈ ದಾಸುವಿಗೆ ಅಭ್ಯಾಸವಾಗಿ ಹೋಗಿತ್ತು.
ಇನ್ನು ಅಪ್ಪಯ್ಯ ಕಾಲ್ನಡಿಗೆಯಲ್ಲಿ ಪೇಟೆಗೆ ಹೋಗಲು ಚಪ್ಪಲಿ ಮೆಟ್ಟಿದರೆ ಅವರ ಕಾಲುಗಳ ಸುತ್ತ ಕುಂಯಿಗುಡುತ್ತ ಸುತ್ತುತ್ತ ತಾನು ಸ್ವಲ್ಪ ದೂರ ಬರುವುದಾಗಿ ಸೂಚಿಸುತ್ತಿತ್ತು. ‘‘ಆಯ್ತು ಮಾರಾಯ’’, ಬಾ ಎಂದು ಅವರು ಒಪ್ಪಿಗೆ ಸೂಚಿಸಿದೊಡನೆ ಆನಂದದಿಂದ ಕುಣಿಯಲಾರಂಭಿಸುತ್ತಿತ್ತು: ‘ಸಾಕು ನಿನ್ನ ನರ್ತನ ಸೇವೆ’ ಎಂದು ಅಪ್ಪಯ್ಯ ಹೇಳದೊಡನೆ ತನ್ನ ಕುಣಿತ ನಿಲ್ಲಿಸಿ ಒಂದೆರಡು ಬಾರಿ ಸಣ್ಣಗೆ ಬೊಗಳಿ, ತಾನು ಅಪ್ಪಯ್ಯನ ಅಂಗರಕ್ಷಕನಾಗಿ ಹೋಗುತ್ತಿರುವುದನ್ನು ಮನೆಯವರಿಗೆ ತಿಳಿಸುತ್ತಿತ್ತು. ಅಪ್ಪಯ್ಯ ಹಲವಾರು ಹುಣಿಗಳನ್ನು ಕ್ರಮಿಸಿ, ನಮ್ಮೂರಿನ ಏಕಮೇವ ರೋಡು ರಸ್ತೆಯನ್ನು ತಲುಪುವ ವರೆಗೆ ಬೆಂಗಾವಲಾಗಿದ್ದ ದಾಸು, ಸೀದಾ ಮನೆಗೆ ವಾಪಸ್ ಬಂದು ತನ್ನ ಬೊಗಳುವಿಕೆಯಲ್ಲಿ ಅಪ್ಪಯ್ಯ ಸುರಕ್ಷಿತವಾಗಿ ರೋಡು ತಲುಪಿದ್ದಾರೆ ಎನ್ನುವುದನ್ನು ಮನೆಯವರಿಗೆ ತಿಳಿಸುತ್ತಿತ್ತು.
ದಾಸುವಿಗೆ ನನ್ನಲ್ಲಿ ತುಂಬ ಸಲಿಗೆ. ನನ್ನೊಂದಿಗೆ ಓಡುವುದು, ನಾನು ದೂರ ಬಿಸಾಡಿದ ಚೆಂಡನ್ನೊ, ಕಾಗದವನ್ನೊ ಹೆಕ್ಕಿ ಬಾಯಲ್ಲಿರಿಸಿಕೊಂಡು ತರುವುದು, ನನ್ನನ್ನು ಶಾಲೆಯ ವರೆಗೆ ಬಿಟ್ಟು ಬರುವುದು, ಸಂಜೆ ಶಾಲೆಯಿಂದ ಮರಳುವಾಗ ಸರಿಯಾದ ಸಮಯಕ್ಕೆ ಬಂದು ಮನೆಯ ತನಕ ಕಂಪೆನಿ ಕೊಡುವುದು, ಇವನ್ನೆಲ್ಲ ನಿಷ್ಠೆಯಿಂದ ಮಾಡುತ್ತಿತ್ತು.
ದಾಸುವಿನ ಇನ್ನೊಂದು ಮಹತ್ವದ ಕಾಯಕವೆಂದರೆ, ಅಪ್ಪಯ್ಯ ವೇಸ್ಟಿ ಧರಿಸಿ ಅರ್ಧ ತೋಳಿನ ಅಂಗಿ ಧರಿಸಿದರೆ ಅವರು ಎಲ್ಲೋ ಸರ್ಕೀಟು ಬಿಡುತ್ತಾರೆ ಎಂದು ಅದಕ್ಕೆ ತಿಳಿಯುತ್ತಿತ್ತು. ಕೂಡಲೇ ಅವರ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ತಂದು ಮೊದಲೇ ಹೇಳಿದ ಹಾಗೆ ರಸ್ತೆ ಮುಟ್ಟುವವರೆಗೆ ಅವರನ್ನು ಹಿಂಬಾಲಿಸುತ್ತಿತ್ತು. ಒಮ್ಮೆ ಕಟ್ಟ ಹುಣಿಯಲ್ಲಿ ಅವರು ನಡೆಯುತ್ತಿದ್ದಾಗ, ಬದಿಯ ಹುಲ್ಲಿನ ನಡುವೆ ಇದ್ದ ಕಡಂಬಳ ಹಾವು ಅದರ ಕಣ್ಣಿಗೆ ಬಿತ್ತು. ಕೂಡಲೇ ನೆಗೆದು ಹಾವನ್ನು ಬೆದರಿಸಿ ಅದನ್ನು ಓಡಿಸಿ ಅಪ್ಪಯ್ಯನನ್ನು ಹಾವಿನ ಕಡಿತದಿಂದ ದಾಸು ಪಾರು ಮಾಡಿತು.
ದಾಸುವಿನ ಶೌರ್ಯ ಇಷ್ಟಕ್ಕೇ ಸೀಮಿತ ಎಂದು ಭಾವಿಸತಕ್ಕದ್ದಲ್ಲ. ನಮ್ಮ ತೆಂಗಿನ ತೋಟಕ್ಕೆ ಲಗ್ಗೆ ಇಟ್ಟು ಸೀಯಾಳವನ್ನು ಬಗೆದು ತಿಂದು ಖಾಲಿ ಚಿಪ್ಪನ್ನೊಳಗೊಂಡ ಬೊಂಡವನ್ನು ಬೀಳಿಸುತ್ತಿದ್ದ ಇಲಿ, ಹೆಗ್ಗಣಗಳಿಗೆ ಗತಿ ಕಾಣಿಸುತ್ತಿತ್ತು. ಹಟ್ಟಿಯಲ್ಲಿರುವ ಹಸು, ಎಮ್ಮೆ, ಗಾಡಿ ಹೋರಿಗಳ ಮೈಗೆ ಮುತ್ತುವ ತಿಗಣೆಯಂತಹ ಹುಳಗಳನ್ನು ಬೇಟೆಯಾಡಿ ಈ ಪ್ರಾಣಿಗಳಿಗೆ ಸುಖ ನಿದ್ರೆ ದಯಪಾಲಿಸುತ್ತಿತ್ತು.
ಅಜ್ಜಿಯಂದಿರ ಮಡಿ ಕೆಡಿಸಿದರೂ ಅವರೊಂದಿಗೆ ತನ್ನದೇ ಭಾಷೆಯಲ್ಲಿ ಸಂವಾದ ನಡೆಸಿ, ಇನ್ನು ಮುಂದೆ ನಿಮ್ಮ ಸೀರೆ ಸುತಾರಾಂ ಕಚ್ಚುವುದಿಲ್ಲ ಎನ್ನುವ ಭರವಸೆ ನೀಡುತ್ತಿತ್ತು. ಅಜ್ಜಿಯಂದಿರು ಸ್ನಾನಕ್ಕೆ ಹೊರಡುವ ಮೊದಲು ಅಪರೂಪಕ್ಕೆ ಅದರೊಂದಿಗೆ ಸಂಭಾಷಿಸುವುದಿತ್ತು. ಅಜ್ಜಿಯಂದಿರ ಸಲುಗೆಗೆ ಮಾರುಹೋಗಿ, ಅವರ ಕೈ ನೆಕ್ಕಲು ಮುಂದಾಗುವ ದಾಸುವಿಗೆ ದೋಂಟೆಯ ಮೆತ್ತಗಿನ ಪೆಟ್ಟು ಲಭ್ಯವಾದೊಡನೆ ಅದು ಕುಂಯಿಗುಡುತ್ತ ನಿಮ್ಮ ತಂಟೆಗೆ ಬರುವುದಿಲ್ಲ ಎಂದು ಅದರದೇ ವಿಶಿಷ್ಟ ಭಾಷೆಯಲ್ಲಿ ಆಶ್ವಾಸನೆ ನೀಡುತ್ತಿತ್ತು. ಹೀಗೆ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಪ್ರಾಣಿಯಾಗಿದ್ದ ದಾಸು ಒಂದು ದಿನ ದಾರುಣವಾಗಿ ಸಾವನ್ನಪ್ಪಿತು. ಅದು, ನಡೆದದ್ದು ಹೀಗೆ: ನಮ್ಮ ನೆರೆಕರೆಯ ಬಡಗುಮನೆಯಲ್ಲಿ ಒಂದು ಹೆಣ್ಣುನಾಯಿ ಇತ್ತು. ನೆರೆಮನೆಯಲ್ಲೇ ಇದ್ದ ಕಾರಣ ದಾಸು ಹಾಗೂ ಆ ಹೆಣ್ಣು ನಾಯಿ ಆಗಾಗ ಭೇಟಿ ಮಾಡಿ ಪ್ರೇಮ ಸಲ್ಲಾಪ ಮಾಡುವ ಕಟ್ಟಳೆ ಇತ್ತು. ಕೆಲವೊಮ್ಮೆ ಹಲವಾರು ಗಂಡು ನಾಯಿಗಳು ಈ ಹೆಣ್ಣಿನ ಬಳಿ ತಾಕಲಾಡುತ್ತಿದ್ದವು. ದಾಸು ಇದನ್ನು ಸಹಿಸದೆ ಈ ನಾಯಿಗಳೊಂದಿಗೆ ಘೋರ ಕಾಳಗ ನಡೆಸಿ ಅವುಗಳನ್ನು ಅಟ್ಟಿ ಬಿಡುತ್ತಿತ್ತು. ಒಮ್ಮೆ ಮಾತ್ರ ಜಮೆಯಾದ ಹಲವಾರು ನಾಯಿಗಳೊಂದಿಗೆ ಹೋರಾಡಿ, ಕೈ ಸಾಗದೆ ಮೈ ತುಂಬ ಗಾಯ ಮಾಡಿಕೊಂಡು ಮನೆಗೆ ಮರಳಿತು. ಯಾವ ಮದ್ದು ಮಾಡಿದರೂ ಪ್ರಯೋಜನವಾಗದೆ ಒಂದು ದಿನ ಅಸುನೀಗಿ ಮನೆಮಂದಿಯೆಲ್ಲ ಕಣ್ಣೀರಿಡುವಂತಾಯಿತು.