ಹೇಡಿಗಳನ್ನು ಗುರುತಿಸೋಣ, ಧೈರ್ಯ ತುಂಬೋಣ
ಹೇಡಿತನ ತುಂಬಾ ಹಳೆಯ ರೋಗ. ಅದು ಅಷ್ಟೇ ಕೆಟ್ಟ ಹಾಗೂ ಕೊಳಕು ರೋಗವೂ ಹೌದು. ಹೇಡಿಗಳು ಯಾರೂ ತಾವು ಹೇಡಿಗಳೆಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಹೇಡಿತನ ಎಂಬುದು ಅಷ್ಟೊಂದು ಲಜ್ಜಾಸ್ಪದ ಗುಣ. ಹೇಡಿಗಳಲ್ಲಿ ಅನೇಕರು ಸಮಾಜವನ್ನು ಎದುರಿಸಲಾಗದೆ ಎಲ್ಲಾದರೂ ತಲೆ ಮರೆಸಿಕೊಂಡು ಅಜ್ಞಾತರಾಗಿರುತ್ತಾರೆ. ಇತರ ಕೆಲವು ಹೇಡಿಗಳು ತಮ್ಮ ಹೇಡಿತನವನ್ನು ಮರೆಮಾಚಲು ಸಾವಿರ ವೇಷ ಕಟ್ಟುತ್ತಾರೆ. ಸಾವಿರ ನಾಟಕ ಮಾಡುತ್ತಾರೆ. ತಾವು ಹೇಡಿಗಳಲ್ಲ ಎಂದು ಸ್ವತಃ ತಮ್ಮನ್ನೇ ನಂಬಿಸಲು ಅವರು ಹೆಣಗುತ್ತಿರುತ್ತಾರೆ. ಕೆಲವು ಹೇಡಿಗಳಂತೂ, ತಾವು ವೀರ ಶೂರರೆಂಬಂತೆ ನಟಿಸಿ, ಹಾಗೆಂದು ತಮ್ಮ ಅಕ್ಕಪಕ್ಕದವರನ್ನು ನಂಬಿಸುವ ಹೀನಾಯ ಶ್ರಮದಲ್ಲೂ ತಲ್ಲೀನರಾಗಿ ಬಿಡುತ್ತಾರೆ. ಈ ತರದ ಹೇಡಿಗಳಿಗೆ ತಮ್ಮನ್ನು ಮಾರಿಕೊಂಡ ಕೆಲವು ಪ್ರಚಾರ ಮಾಧ್ಯಮಗಳು ಈ ಹೇಡಿಗಳ ತುತ್ತೂರಿಗಳಾಗಿ, ಅವರ ಪರಮ ಪುಕ್ಕಲು ಕರ್ಮಕಾಂಡಗಳನ್ನೇ ಸಾಹಸ ಗಾಥೆಗಳಾಗಿ ಬಿಂಬಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿರುತ್ತವೆ. ನಿಜವಾಗಿ ಈ ರೀತಿ ಹೇಡಿತನವನ್ನು ಮುಚ್ಚುವವರು ಮತ್ತು ಅದನ್ನು ವೈಭವೀಕರಿಸುವವರು ಹೇಡಿಗಳ ಹೇಡಿತನವನ್ನಷ್ಟೇ ಹೆಚ್ಚಿಸುತ್ತಾರೆ.
ಹೇಡಿಯಲ್ಲಿನ ಹೇಡಿತನವನ್ನು ಹೋಗಲಾಡಿಸುವುದಕ್ಕೆ ಇರುವುದು ಒಂದೇ ದಾರಿ. ಹೇಡಿಯನ್ನು ಹೇಡಿಯೆಂದು ಮುಕ್ತವಾಗಿ, ಮುಲಾಜಿಲ್ಲದೆ ಗುರುತಿಸಬೇಕು. ಇವನು ಹೇಡಿ ಎಂದು ಯಾವುದೇ ಹೇಡಿಯ ಹಣೆಯ ಮೇಲೇನೂ ಬರೆದಿರುವುದಿಲ್ಲ. ಹೇಡಿಯನ್ನು ಅವನ ಲಕ್ಷಣಗಳ ಆಧಾರದಲ್ಲಿ ಗುರುತಿಸಿ ನೀನು ಹೇಡಿ ಎಂದು ಮುಲಾಜಿಲ್ಲದೆ ಅವನ ಮುಖದ ಮೇಲೆ ಹೇಳಿ ಬಿಡಬೇಕು. ತಾನು ಹೇಡಿ ಎಂದು ಹೇಡಿಯು ಒಪ್ಪುವಂತೆ ನಿರ್ಬಂಧಿಸಬೇಕು. ತನ್ನ ಹೇಡಿತನವನ್ನು ಒಪ್ಪಿಕೊಳ್ಳಬೇಕಾದುದು ಹೇಡಿಯಪಾಲಿಗೆ ಅನಿವಾರ್ಯವಾಗಿ ಬಿಡಬೇಕು. ಅದಕ್ಕಾಗಿ ಹೇಡಿಗಳ ಲಕ್ಷಣಗಳೇನು ಎಂಬುದನ್ನು ಹೇಡಿಗಳಿಗೂ ಸಮಾಜಕ್ಕೂ ಎಳೆಎಳೆಯಾಗಿ ವಿವರಿಸಬೇಕು. ಹಾಗೆಯೇ, ನಿಜವಾದ ಧೈರ್ಯಶಾಲಿಗಳ ಲಕ್ಷಣಗಳು ಏನೆಂಬುದನ್ನೂ ವಿವರಿಸಿ ಕೊಡಬೇಕು. ಬನ್ನಿ ನಮ್ಮ ಪ್ರಯತ್ನ ಆರಂಭಿಸೋಣ. ದುರ್ಬಲರ ಮೇಲೆ ಕೈ ಎತ್ತುವುದು - ಇದು ಹೇಡಿಗಳ ವಿಶ್ವಮಾನ್ಯ ಲಕ್ಷಣ.
ಸಣ್ಣ, ದುರ್ಬಲ ಗುಂಪುಗಳನ್ನು ಅನಗತ್ಯ ಪ್ರಶ್ನೆ, ಟೀಕೆ, ಗೇಲಿ, ಅವಹೇಳನಗಳಿಗೆ ಗುರಿಪಡಿಸುವುದು.
ದೊಡ್ಡ ಗುಂಪುಗಳನ್ನು ಕಟ್ಟಿಕೊಂಡು ಸಣ್ಣ ಗುಂಪುಗಳ ಮೇಲೆ ಆಕ್ರಮಣ ನಡೆಸುವುದು.
ನಿರಾಯುಧ ಜನರ ಮೇಲೆ ಸಶಸ್ತ್ರ ಹಲ್ಲೆ ನಡೆಸುವುದು. ಒಂಟಿ, ಅಪರಿಚಿತ, ಅಸಹಾಯಕ ಜನರ ಮೇಲೆ ಆಕ್ರಮಣ ನಡೆಸುವುದು. ಅಕ್ಕ ಪಕ್ಕದವರ ಅಜ್ಞಾನ ಮತ್ತು ಮುಗ್ಧತೆಯನ್ನು ಜಾಣವಾಗಿ ಶೋಷಿಸಿ, ಇತರರ ವಿರುದ್ಧ ಹಿಂಸೆಗಿಳಿಯುವಂತೆ ಅವರನ್ನು ಪ್ರಚೋದಿಸುವುದು.
ಅಜ್ಞಾನಿ ಭಾವುಕರ ದೊಡ್ಡ ಗುಂಪುಗಳನ್ನು ಕಟ್ಟಿ, ಯಾವುದಾದರೂ ಸಣ್ಣ ಮುಗ್ಧ ಗುಂಪುಗಳ ವಿರುದ್ಧ ಅವರನ್ನು ಹಿಂಸೆಗಿಳಿಸುವುದು.
ಧರ್ಮ, ಅಧ್ಯಾತ್ಮ ಇತ್ಯಾದಿ ವಿಷಯಗಳ ಕುರಿತಾದ ಜನಸಾಮಾನ್ಯರ ಅಜ್ಞಾನವನ್ನು ಶೋಷಿಸಿ, ಅವರಲ್ಲಿ ಮತ್ತಷ್ಟು ಮೌಢ್ಯವನ್ನು ಬಿತ್ತಿ, ಅವರನ್ನು ಪೌರೋಹಿತ್ಯದ ದಾಸ್ಯಕ್ಕೆ ತಳ್ಳಿ ನಿತ್ಯ ದೋಚುವುದು.
ಬಾಂಬ್ ಸ್ಫೋಟ ಮುಂತಾದ ಹಿಂಸಾತ್ಮಕ ಅಪರಾಧ ಕೃತ್ಯಗಳನ್ನು ಆಯೋಜಿಸಿ ಮುಗ್ಧ ನಾಗರಿಕರ ಹತ್ಯೆ ನಡೆಸುವುದು.
ಧರ್ಮ, ದೇವರು-ದೇವತೆಗಳು, ಪೂಜಾಸ್ಥಳಗಳು, ಶ್ರದ್ಧಾ ಕೇಂದ್ರಗಳು, ಧಾರ್ಮಿಕ ಸಂಕೇತಗಳು, ಭಾವನೆಗಳು - ಇವೆಲ್ಲವನ್ನೂ, ರಾಜಕೀಯ ಸ್ವಾರ್ಥಕ್ಕಾಗಿ ಬಳಸುವುದು. ಇವೆಲ್ಲವನ್ನೂ ಸಮಾಜದಲ್ಲಿ ಉದ್ವಿಗ್ನತೆ ಬೆಳೆಸಿ ಜನರನ್ನು ವಿಭಜಿಸುವುದಕ್ಕಾಗಿ ಮತ್ತು ಬಂಡವಾಳಿಗರು ಮತ್ತು ಪುರೋಹಿತರ ಹಿತಾಸಕ್ತಿಗಳಿಗಾಗಿ ಬಳಸುವುದು.
ತಾವು ಸಮಾನವಾಗಿ ದ್ವೇಷಿಸುವ ಎರಡು ಗುಂಪುಗಳನ್ನು ಪರಸ್ಪರ ಕಾದಾಡಿಸಿ ಅವರ ನಡುವೆ ನಡೆಯುವ ಅತ್ಯಾಚಾರ, ಹಿಂಸಾಚಾರಗಳನ್ನು ಕಂಡು ಸಂಭ್ರಮಿಸುವುದು.
ಸ್ವತಃ ತಮ್ಮನ್ನು ಮತ್ತು ತಮ್ಮ ಮಡದಿ ಮಕ್ಕಳನ್ನು ಎಲ್ಲ ಬಗೆಯ ಸಂಪನ್ನ ಹಾಗೂ ಸುಭದ್ರ ಸ್ಥಿತಿಯಲ್ಲಿಟ್ಟು, ಸಮಾಜದ ಕೆಳಸ್ತರದಲ್ಲಿರುವ ಬಡವರನ್ನು ದಾರಿಗೆಡಿಸಿ, ಅವರಿಂದ ಅಪರಾಧಕೃತ್ಯಗಳನ್ನು ಮಾಡಿಸಿ, ಅವರ ಮಕ್ಕಳು ಆಸ್ಪತ್ರೆ, ಜೈಲುಗಳಲ್ಲಿ ಕೊಳೆಯುತ್ತಿರುವುದನ್ನು ಕಂಡು ವಿಜೃಂಭಿಸುವುದು.
ತಮ್ಮ ಬಲಿ ಪಶುಗಳಿಂದ ಎಲ್ಲವನ್ನೂ ಕಿತ್ತುಕೊಂಡು, ಮುಂದೊಮ್ಮೆ ಅವರಿಗೇನಾದರೂ ಜುಜುಬಿ ನೆರವು, ಪರಿಹಾರ, ಬಹುಮಾನಗಳನ್ನು ನೀಡಿ ದಾನಶೂರರಾಗಿ, ಆಪದ್ಬಾಂಧವರಾಗಿ, ವಿಮೋಚಕರಾಗಿ ಮೆರೆಯುವುದು.
ಸರಕಾರ, ಸರಕಾರಿ ಕಚೇರಿ, ಸರಕಾರಿ ಅಧಿಕಾರ, ಸವಲತ್ತು, ಸಮವಸ್ತ್ರ ಇತ್ಯಾದಿಗಳನ್ನೆಲ್ಲ ನಾಗರಿಕರ ವಿರುದ್ಧ, ಅವರ ದಮನಕ್ಕೆ, ಅವರ ಧ್ವನಿ ಅಡಗಿಸುವುದಕ್ಕೆ ಮತ್ತು ಅವರನ್ನು ದಾಸರಾಗಿಸುವುದಕ್ಕೆ ಬಳಸುವುದು.
ಸಮಾಜಕ್ಕೆ ಸತ್ಯವು ತಲುಪದಂತೆ ತಡೆಯುವುದು. ಸದಾ ಸುಳ್ಳು ಮತ್ತು ವದಂತಿಗಳ ಪ್ರಸಾರದಲ್ಲಿ ನಿರತರಾಗಿರುವುದು. ವದಂತಿಗಳ ಮೂಲಕವೇ ಸಮಾಜದ ಮೇಲೆ ಸವಾರಿ ನಡೆಸುವುದು.
ಯಾವುದೇ ಉದ್ಯೋಗ ಅಥವಾ ಆದಾಯವಿಲ್ಲದೆ ತೀರಾ ಗೊಂದಲ ಹಾಗೂ ಅಸಹಾಯಕ ಸನ್ನಿವೇಶದಲ್ಲಿರುವ ಬಡ ಯುವಕರಲ್ಲಿ ರಾಷ್ಟ್ರೀಯವಾದ, ದೇಶಪ್ರೇಮ, ದೇಶ ರಕ್ಷಣೆ ಇತ್ಯಾದಿ ಭಾವುಕ ಉನ್ಮಾದಗಳನ್ನು ಬೆಳೆಸಿ ಅವರಿಂದ ಅಕ್ರಮ, ಅನೈತಿಕ ಹಾಗೂ ಅಪರಾಧಕೃತ್ಯಗಳನ್ನು ಮಾಡಿಸುವುದು.
ದೇಶಸೇವೆ, ಧರ್ಮರಕ್ಷಣೆ ಇತ್ಯಾದಿ ಹೆಸರುಗಳಲ್ಲಿ ಮುಗ್ಧ ವಿದ್ಯಾರ್ಥಿ ಯುವಜನರನ್ನು ದಾರಿ ತಪ್ಪಿಸಿ ಅವರಿಂದ ಶುದ್ಧ ಗೂಂಡಾಗಿರಿ, ಪುಂಡಾಟಿಕೆ, ವಿಧ್ವಂಸ ಹಾಗೂ ಅಪರಾಧ ಕೃತ್ಯಗಳನ್ನು ಮಾಡಿಸಿ ಅವರ ಭವಿಷ್ಯ ನಾಶ ಮಾಡುವುದು.
ಈ ಬಗೆಯ ಲಕ್ಷಣಗಳಿರುವವರು ಎಷ್ಟು ದಪ್ಪದ ಮೀಸೆ ಮತ್ತು ಎಷ್ಟು ಉದ್ದದ ಗಡ್ಡ ಬೆಳೆಸಿಕೊಂಡು ಮೆರೆದಾಡಿದರೂ ಅವರ ಹೇಡಿತನ ಮರೆಯಾಗುವುದಿಲ್ಲ. ಅವರು ತಮ್ಮ ಕೈಯಲ್ಲಿ ಎಷ್ಟು ದೊಡ್ಡ ಕಡಗ ಧರಿಸಿಕೊಂಡಿದ್ದರೂ, ವಿವಿಧ ಬಣ್ಣದ ಎಷ್ಟು ನೂಲುಗಳನ್ನು ಕೈಯಲ್ಲಿ ಕಟ್ಟಿಕೊಂಡಿದ್ದರೂ, ಎಷ್ಟು ಭವ್ಯ ಟೊಪ್ಪಿ, ಮುಂಡಾಸು, ಶಾಲು ಧರಿಸಿಕೊಂಡಿದ್ದರೂ ಅವರ ಹೇಡಿತನ ಮಾತ್ರ ಗುಟ್ಟಾಗಿ ಉಳಿಯುವುದಿಲ್ಲ. ಅವರು ತಮ್ಮ ಶಂಡತನದ ಮೇಲೆ ತೆರೆ ಎಳೆಯಲು ಶಿವಾಜಿ ಮಹಾರಾಜನಂತೆ ಅಥವಾ ರಾಣಾ ಪ್ರತಾಪ ಸಿಂಹನಂತೆ ಪೋಸು ಕೊಡುವುದುಂಟು. ಬಿಗುವಾದ ಟಿ ಶರ್ಟ್ ಧರಿಸಿ, ರಟ್ಟೆ ತೋರಿಸಿ, ಟ್ಯಾಟ್ಟೂ ಪ್ರದರ್ಶಿಸಿ, ಪೌರುಷ ನಟಿಸುವುದುಂಟು. ಬೈಕ್, ಕಾರುಗಳಲ್ಲಿ ತಲವಾರು, ಗನ್ನು ಅಥವಾ ಹುಲಿ ಚಿರತೆಗಳ ಸ್ಟಿಕ್ಕರ್ ಹಾಕಿ ಪರಾಕ್ರಮ ಮೆರೆಯುವುದುಂಟು. ಆದರೆ ಪಾಪ, ಬಡಪಾಯಿಗಳ ಪಾಡು ನೋಡಿ. ಇದಾವುದೂ ಅವರನ್ನು ಶೂರರಾಗಿಸುವುದಿಲ್ಲ. ಇಂತಹ ಯಾವ ಸರ್ಕಸ್‌ನಿಂದಲೂ ಅವರು ಬಯಸುವ ಗುರುತು ಸಾಬೀತಾಗುವುದಿಲ್ಲ. ಹೆಚ್ಚಿನವರು ಅವರನ್ನು ವಿದೂಷಕರಾಗಿಯೇ ಕಾಣುತ್ತಾರೆ. ಹೆಚ್ಚೆಂದರೆ ಕೆಲವರು ಒಂದಿಷ್ಟು ಅನುಕಂಪ ಪ್ರಕಟಿಸುತ್ತಾರೆ, ಅಷ್ಟೇ.
ಒಟ್ಟಿನಲ್ಲಿ ಈ ಮಂದಿ ತಮ್ಮ ಸ್ವಾರ್ಥಗಳನ್ನೆಲ್ಲ ತ್ಯಜಿಸಿ, ಸಮಷ್ಟಿ ಹಿತಕ್ಕಾಗಿ, ಮೌನವಾಗಿ ಸದಾ ಸಕ್ರಿಯರಾಗಿರುತ್ತಾರೆ. ಅವರೇ ನಿಜಾರ್ಥದಲ್ಲಿ ವೀರರು, ಶೂರರು, ಧೀರರು, ಪರಾಕ್ರಮಿಗಳು.
ಕೆಲವರು ಮೇಲ್ನೋಟಕ್ಕೆ ಸ್ವಸ್ಥರಂತಿರುತ್ತಾರೆ. ಆದರೆ ಅವರಿಗೆ ಒಂದು ವೇದಿಕೆ ಅಥವಾ ಕೈಗೊಂದು ಮೈಕು ಸಿಕ್ಕರೆ ಸಾಕು. ಅವರು ಆ ಮೈಕನ್ನೇ ತಮ್ಮ ಪೌರುಷಕ್ಕೆ ಪುರಾವೆಯಾಗಿಸುವ ಶ್ರಮ ಆರಂಭಿಸುತ್ತಾರೆ. ಅವರು ಭಾಷಣ ಆರಂಭಿಸಿದರೆಂದರೆ ಅದರಲ್ಲಿ ಒಂದಷ್ಟು ಚೀರಾಟ, ಕಿರುಚಾಟ, ಅರಚಾಟ ಮತ್ತು ಬಹಳಷ್ಟು ಪೆದ್ದು ಆವೇಶ ಮತ್ತು ಭಾವುಕತೆ ಬಿಟ್ಟರೆ ಬೇರಾವುದೂ ಇರುವುದಿಲ್ಲ. ಕೆಲವೊಮ್ಮೆ ಅದರಲ್ಲಿ ಮಣಗಟ್ಟಲೆ ಅಜ್ಞಾನ, ದ್ವೇಷ, ಅಸೂಯೆ, ತಾತ್ಸಾರ, ಹಗೆತನ, ಪ್ರತೀಕಾರ ಭಾವ ಮತ್ತು ಹಿಂಸೆಯ ದಾಹ ತುಂಬಿರುತ್ತದೆ. ಯಾವುದಾದರೂ ವ್ಯಕ್ತಿ, ಸಂಸ್ಥೆ, ಪಕ್ಷ, ಸಂಘಟನೆ, ಸರಕಾರ ಇತ್ಯಾದಿಗಳನ್ನು ಗುರಿಯಾಗಿಸಿ ದೊಡ್ಡ ಧ್ವನಿಯಲ್ಲಿ ಅವರಿಗೆ ಎಚ್ಚರಿಕೆಗಳನ್ನು ನೀಡಿ, ಬೆದರಿಕೆಗಳನ್ನೊಡ್ಡಿ, ಡೆಡ್‌ಲೈನ್‌ಗಳನ್ನು ಕೊಟ್ಟು, ಜನ್ಮ ಪ್ರಧಾನವಾದ ಹಾಗೂ ಲಿಂಗಪ್ರಧಾನವಾದ ಸವಾಲುಗಳನ್ನು ಎಸೆದು, ನೀನು, ನಿಮ್ಮಪ್ಪ ಎಂದೆಲ್ಲಾ ಹೇಳಿ ತಮ್ಮ ಮುಂದಿರುವ ಮುಗ್ಧರು ಮತ್ತು ಮೂರ್ಖರಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಈ ಕೆಲವು ಮಂದಿಯಾದರೂ ತನ್ನನ್ನು ವೀರನೆಂದು ಒಪ್ಪಿದ್ದಾರೆಂಬ ಅಮಲಿಗೊಳಗಾಗುತ್ತಾರೆ.
ಇಂತಹ ಪರಮ ಹೇಡಿಗಳೇ ಮೆರೆದಾಡುವ ಸಮಾಜದಲ್ಲಿ, ಯಾರು ನಿಜವಾದ ವೀರರು ಮತ್ತು ಶೂರರು? ಅವರನ್ನು ಗುರುತಿಸುವುದು ಹೇಗೆ? ನಿಜವಾಗಿ, ಅವರನ್ನು ಕೂಡ ಅವರ ವೇಷಭೂಷಣಗಳ ಅಥವಾ ಜಾತಿ ಧರ್ಮ, ಪಕ್ಷ ಸಂಘಟನೆಗಳ ಬದಲು ಅವರ ನಿತ್ಯದ ಚಟುವಟಿಕೆಗಳ ಆಧಾರದಲ್ಲಿ ಗುರುತಿಸುವುದೇ ಸೂಕ್ತವೆನಿಸುತ್ತದೆ.
ನಿಜಕ್ಕೂ ಧೈರ್ಯಶಾಲಿಗಳಾಗಿರುವವರು ಯಾವಾಗಲೂ ನ್ಯಾಯದ ಪರ ಹಾಗೂ ಅನ್ಯಾಯದ ವಿರುದ್ಧ ನಿಂತಿರುತ್ತಾರೆ. ಅವರು ಸದಾ ಸಮಾಜದ ದುರ್ಬಲರು, ವಂಚಿತರು, ದಮನಿತರು ಮತ್ತು ಬಡವರ ಜೊತೆ ಕಂಡು ಬರುತ್ತಾರೆ.
ಅವರು ಅನ್ಯಾಯವು ತಮ್ಮ ಮನೆಬಾಗಿಲಿಗೆ ಬರುವ ದಿನಕ್ಕಾಗಿ ಕಾದು ಕುಳಿತಿರುವುದಿಲ್ಲ. ಅವರು ಸಂವೇದನಾಶೀಲರಾಗಿರುತ್ತಾರೆ. ಸಮಾಜದಲ್ಲಿ ಯಾವುದೇ ಜಾತಿ, ಧರ್ಮ, ಭಾಷೆ ಅಥವಾ ಯಾವುದೇ ಪಕ್ಷದ ವ್ಯಕ್ತಿಯ ಮೇಲೆ ಅನ್ಯಾಯವಾದಾಗ, ಅವರು ತಕ್ಷಣವೇ ಆತನ ಬಳಿಗೆ ಧಾವಿಸಿ ಅವನ ಜೊತೆಗೆ ನಿಲ್ಲುತ್ತಾರೆ. ಅವನಲ್ಲಿ ಧೈರ್ಯ ತುಂಬುತ್ತಾರೆ. ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ಅವನನ್ನು ಸಜ್ಜುಗೊಳಿಸುತ್ತಾರೆ. ಅವರು ಸಮಾಜದ ರೈತರು, ಕಾರ್ಮಿಕರು ಮತ್ತಿತರ ವರ್ಗಗಳಿಗೆ ಅವರ ಹಕ್ಕುಗಳನ್ನು ಕೊಡಿಸುವ ಶ್ರಮದಲ್ಲಿ ತೊಡಗಿರುತ್ತಾರೆ. ತೀರಾ ಅಪರಿಚಿತರಿಗೆ ಅನ್ಯಾಯವಾದಾಗಲೂ ಅವರಲ್ಲಿ ಆಕ್ರೋಶ ಕುದಿಯುತ್ತದೆ. ದೈತ್ಯ ಕಂಪೆನಿಗಳು ತಮ್ಮ ದೂರಗಾಮಿ ನರಭಕ್ಷಕ ಯೋಜನೆಗಳನ್ನು ರೂಪಿಸ ಹೊರಟಾಗ ಅವರು ಅದನ್ನು ದೂರದಿಂದಲೇ ಗುರುತಿಸಿ ಆ ಕುರಿತು ಜನರಲ್ಲಿ ಜಾಗೃತಿ ಬೆಳೆಸುತ್ತಾರೆ. ಅವರು ಬಂಡವಾಳಿಗರ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಸಂಚುಗಳ ವಿರುದ್ಧ ಜನಾಂದೋಲನ ಕಟ್ಟುತ್ತಾರೆ. ಕಾರ್ಪೊರೇಟಾಸುರರ ಚಾಕರಿ ಮಾಡುವ ಸರಕಾರಗಳು ಅಭಿವೃದ್ಧಿಯ ಹೆಸರಲ್ಲಿ ಜನವಿರೋಧಿ ಯೋಜನೆ ಮತ್ತು ಧೋರಣೆಗಳನ್ನು ಅನುಷ್ಠಾನಿಸಲು ಪ್ರಯತ್ನಿಸಿದಾಗ ಅವರು ಅದನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಸ್ವತಃ ಜಾಗೃತರಾಗುತ್ತಾರೆ. ಸಮಾಜವನ್ನೂ ಜಾಗೃತಗೊಳಿಸುತ್ತಾರೆ. ಜನರಿಗೆ ಅವರ ಹಕ್ಕು ಅಧಿಕಾರಗಳು ಮತ್ತು ದೂರಗಾಮಿ ಹಿತಾಸಕ್ತಿಗಳ ಕುರಿತು ತಿಳುವಳಿಕೆ ನೀಡುತ್ತಾರೆ.
ಅಸ್ಪೃಶ್ಯತೆ, ಜಾತಿಭೇದ, ಅಸಮಾನತೆ, ಸಾಮಾಜಿಕ ಪಕ್ಷಪಾತ, ಹಸಿವು, ನಿರಕ್ಷರತೆ, ದಾರಿದ್ರ್ಯ, ಪೋಷಕಾಂಶಗಳ ಕೊರತೆ, ನಿರಾಶ್ರಯ, ನಿರುದ್ಯೋಗ, ಬಾಲ ಕಾರ್ಮಿಕರು, ಲಿಂಗ ತಾರತಮ್ಯ - ಇವೆಲ್ಲ ನೈಜ ವೀರ ಶೂರರ ಮುಂದಿನ ನಿತ್ಯದ ಸವಾಲುಗಳಾಗಿರುತ್ತವೆ. ಈ ಸವಾಲುಗಳನ್ನು ನಿಭಾಯಿಸುವ ಚಟುವಟಿಕೆಯಲ್ಲಿ ಅವರು ಬಹಳ ಭಾವುಕರಾಗಿ, ತುಂಬಾ ಆವೇಶದೊಂದಿಗೆ, ದಣಿಯದೆ ಸದಾ ತಲ್ಲೀನರಾಗಿರುತ್ತಾರೆ. ದುರಾಡಳಿತ, ಅದಕ್ಷತೆ, ಲಂಚ ಮತ್ತು ಭ್ರಷ್ಟಾಚಾರಗಳ ವಿರುದ್ಧ ಮಾತ್ರವಲ್ಲ ಮದ್ಯ, ಜೂಜು, ಮಾದಕವ್ಯಸನ ಮುಂತಾದ ಸಾಮಾಜಿಕ ಅನಿಷ್ಟಗಳ ನಿರ್ಮೂಲನಕ್ಕಾಗಿ ಅವರು ನಿತ್ಯ ಹೋರಾಡುತ್ತಾರೆ. ಪೌರೋಹಿತ್ಯದ ಮೂಲಕ ನಡೆಯುತ್ತಿರುವ ಪರಂಪರಾಗತ ಶೋಷಣೆಯನ್ನು ಅವರು ವಿರೋಧಿಸುತ್ತಾರೆ. ಅವರು ಸಮಾಜದ ಜನರಲ್ಲಿ ಪರಸ್ಪರ ಪ್ರೀತಿ ಮತ್ತು ನಂಬಿಕೆಯನ್ನು ಮೂಡಿಸಿ ನ್ಯಾಯ ಹಾಗೂ ಸಮಾನತೆಗಾಗಿ ಎಲ್ಲರನ್ನೂ ಜೊತೆಗೂಡಿಸಿ ಸಂಯುಕ್ತ ಹೋರಾಟವನ್ನು ಸಂಘಟಿಸುತ್ತಾರೆ. ಅಗತ್ಯ ಬಿದ್ದಾಗಲೆಲ್ಲ ಅವರು ಸರಕಾರ, ಮಂತ್ರಿಗಳು, ಪುಡಾರಿಗಳು ಮತ್ತು ಪ್ರಭಾವಿ ಅಧಿಕಾರಿಗಳ ಅಕ್ರಮ ನೀತಿಗಳ ವಿರುದ್ಧ ಸಮರ ಘೋಷಿಸುತ್ತಾರೆ. ಬಳಕೆದಾರರಿಗೆ ಮತ್ತು ನಾಗರಿಕರಿಗೆ ಅವರ ನ್ಯಾಯಬದ್ಧ ಹಕ್ಕು ಅಧಿಕಾರಗಳನ್ನು ಕೊಡಿಸುವುದಕ್ಕಾಗಿ ಅವರು ಹೋರಾಡುತ್ತಾರೆ. ಪೌರಹಕ್ಕುಗಳ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅವರು ಅಗತ್ಯ ಬಿದ್ದರೆ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದು ಬಿಡುತ್ತಾರೆ. ಅವರಿಗೆ ಹುದ್ದೆ, ಸ್ಥಾನಮಾನ, ಪ್ರಚಾರ, ಸನ್ಮಾನ, ಅಧಿಕಾರ ಇತ್ಯಾದಿಗಳ ಯಾವ ಆಶೆಯೂ ಇರುವುದಿಲ್ಲ. ಜನತೆಗೆ ನ್ಯಾಯ ಕೊಡಿಸುವ ಪ್ರಕ್ರಿಯೆಯಲ್ಲಿ ಜೈಲಿಗೆ ಹೋಗಲು, ಹಲ್ಲೆಗೊಳಗಾಗಲು ಮಾತ್ರವಲ್ಲ ಹುತಾತ್ಮರಾಗಲಿಕ್ಕೂ ಅವರು ಸದಾ ಸನ್ನದ್ಧರಾಗಿರುತ್ತಾರೆ. ಆಳುವವರು ಯಾರೇ ಇರಲಿ ಈ ನ್ಯಾಯಪರರು ಆಡಳಿತಗಾರರನ್ನು ಸಂಶಯಿಸುತ್ತಾ ಅವರನ್ನು ವಿಮರ್ಶಾತ್ಮಕವಾಗಿ ನೋಡುತ್ತಾ, ಹೆಜ್ಜೆ ಹೆಜ್ಜೆಗೂ ಅವರನ್ನು ಪ್ರಶ್ನಿಸುತ್ತಾ, ವಸ್ತುನಿಷ್ಠವಾಗಿ ಅವರನ್ನು ಟೀಕಿಸುತ್ತಾ ಇರುತ್ತಾರೆ. ಆಳುವವರು ಎಡವಿದಾಗಲೆಲ್ಲ ಅವರು ಎಚ್ಚರಿಸುತ್ತಾರೆ. ಆಳುವವರು ತಪ್ಪು ದಿಕ್ಕಿನೆಡೆಗೆ ನಡೆದಾಗ ಈ ವೀರರು ಅವರ ಹಾದಿಯಲ್ಲಿ ಅಡ್ಡ ನಿಲ್ಲುತ್ತಾರೆ.
ಒಟ್ಟಿನಲ್ಲಿ ಈ ಮಂದಿ ತಮ್ಮ ಸ್ವಾರ್ಥಗಳನ್ನೆಲ್ಲ ತ್ಯಜಿಸಿ, ಸಮಷ್ಟಿ ಹಿತಕ್ಕಾಗಿ, ಮೌನವಾಗಿ ಸದಾ ಸಕ್ರಿಯರಾಗಿರುತ್ತಾರೆ. ಅವರೇ ನಿಜಾರ್ಥದಲ್ಲಿ ವೀರರು, ಶೂರರು, ಧೀರರು, ಪರಾಕ್ರಮಿಗಳು. ಅವರು ಪುರುಷರಿರಲಿ, ಮಹಿಳೆಯರಿರಲಿ ಅವರೇ ಸಮಾಜದ ನೈಜ ಸಂರಕ್ಷಕರು ಮತ್ತು ಸಮಾಜದ ಹಿತೈಷಿಗಳು.
ಈ ವೀರರು ಮತ್ತವರ ಚಟುವಟಿಕೆಗಳನ್ನು ನಾವು ನಮ್ಮ ಸುತ್ತಮುತ್ತಲ ಹೇಡಿಗಳಿಗೆ ಪರಿಚಯಿಸಬೇಕು. ನೀವು ವೀರರಾಗಬೇಕಿದ್ದರೆ ಅದಕ್ಕಾಗಿ ವೇಷಭೂಷಣಗಳನ್ನು ಮತ್ತು ನಾಟಕಗಳನ್ನು ಅವಲಂಬಿಸುವ ಬದಲು ನಿಜ ಜೀವನದಲ್ಲಿ ಇಂತಹ ಶೌರ್ಯ ಪರಾಕ್ರಮದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಅವರಿಗೆ ಉಪದೇಶಿಸಿ ಮನವರಿಕೆ ಮಾಡಿಸಬೇಕು.
ಒಟ್ಟಿನಲ್ಲಿ ಈ ಮಂದಿ ತಮ್ಮ ಸ್ವಾರ್ಥಗಳನ್ನೆಲ್ಲ ತ್ಯಜಿಸಿ, ಸಮಷ್ಟಿ ಹಿತಕ್ಕಾಗಿ, ಮೌನವಾಗಿ ಸದಾ ಸಕ್ರಿಯರಾಗಿರುತ್ತಾರೆ. ಅವರೇ ನಿಜಾರ್ಥದಲ್ಲಿ ವೀರರು, ಶೂರರು, ಧೀರರು, ಪರಾಕ್ರಮಿಗಳು.