ಆಹಾರ ದ್ವೇಷದ ರಾಜಕಾರಣ
ಹಂಪಿ ಕನ್ನಡ ವಿವಿ ಸಾಹಿತ್ಯ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ ಮತ್ತು ದೇಸಿವಾದಿ ಲೇಖಕ. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಸಂಶೋಧನೆ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸ ಮಾಡಿದವರು. ‘ಕತ್ತಿಯಂಚಿನ ದಾರಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಇವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಯನ್ನು ಮರಳಿಸಿದ್ದರು. ಪ್ರವಾಸ ಇವರ ಅಚ್ಚುಮೆಚ್ಚಿನ ಹವ್ಯಾಸ. ಕರ್ನಾಟಕದ ಸೂಫಿಗಳು, ಕರ್ನಾಟಕದ ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.
ಡಾ. ರಹಮತ್ ತರೀಕೆರೆ
1. ಕರ್ನಾಟಕದಲ್ಲಿ ಈಚೆಗೆ ಮಾಂಸಾಹಾರ ಕುರಿತ ‘ವಿವಾದ’ವನ್ನು ಹುಟ್ಟಿಸಲಾಯಿತು. ಇಂತಹ ‘ವಿವಾದ’ಗಳು ಹೊಸವಲ್ಲ. ದನದಮಾಂಸ ಭಕ್ಷಿಸಿದವರೆಂದು ಜನರನ್ನು ಕೊಂದಾಗ, ಸತ್ತದನದ ಹಸಿಗೆ ಮಾಡುತ್ತಿದ್ದ ದಲಿತರನ್ನು ಬಡಿದಾಗ, ದನ ಸಾಗಣಿಕೆಗಾರರನ್ನು ಸುಲಿದಾಗ, ಮೀನೂಟವುಂಡು ಗುಡಿ ಪ್ರವೇಶಿಸಿದರೆಂದು, ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಪ್ರಶ್ನೆ ಬಂದಾಗಲೆಲ್ಲ ‘ವಿವಾದ’ಗಳು ಹುಟ್ಟಿವೆ. ಪ್ರಶ್ನೆಯೆಂದರೆ ‘ವಿವಾದ’ಗಳ ಮೇಲೆ ನಡೆಯುವ ಚರ್ಚೆ ಯಾವ ತಾತ್ವಿಕ ಬುನಾದಿಯ ಮೇಲಿರುತ್ತದೆ ಮತ್ತು ಯಾವ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವುದು. ಸಾಮಾನ್ಯವಾಗಿ ಈ ಚರ್ಚೆಗಳು ಆರೋಗ್ಯ, ನೈತಿಕತೆ, ಧರ್ಮ ಹಾಗೂ ಜಾತಿ ಎಂಬ ನಾಲ್ಕು ನೆಲೆಯಲ್ಲಿ ನಡೆಯುತ್ತವೆ.
ಅ. ಆರೋಗ್ಯದ ವಿಷಯದಲ್ಲಿ ವೈದ್ಯರೂ ಆಹಾರತಜ್ಞರೂ ಚರ್ಚೆ ಮಾಡುವಾಗ, ಮೀನು, ಮೊಟ್ಟೆ, ಕಾಳುಗಳಲ್ಲಿರುವ ಪ್ರೋಟಿನ್ ದೆೇಹಕ್ಕೆ ಮುಖ್ಯವೆಂದು ವಿವರಿಸುವ ಬರಹ-ಮಾತು ಪ್ರಕಟವಾಗುತ್ತವೆ. ಇಲ್ಲಿಯೂ ಏನು ತಿನ್ನಬೇಕು-ತಿನ್ನಬಾರದು ಎಂಬ ವಿಧಿನಿಷೇಧವಿರುತ್ತವೆಯಾದರೂ, ಚರ್ಚೆ ವಿಜ್ಞಾನದ ನೆಲೆಯಲ್ಲಿ ನಡೆಯುವುದರಿಂದ, ನೈತಿಕತೆ, ಧರ್ಮ, ಜಾತಿ ಪರಂಪರೆಯ ಪ್ರಶ್ನೆಗಳು ಅಷ್ಟು ಮುಖ್ಯವಾಗುವುದಿಲ್ಲ. ಮತೀಯವಾದಿ ಪ್ರಭಾವಕ್ಕೊಳಗಾದ ಕೆಲ ವೈದ್ಯರು ತಮ್ಮ ವೈದ್ಯಕೀಯ ಜ್ಞಾನವನ್ನು ಬದಿಗಿಟ್ಟು ಧಾರ್ಮಿಕ ನುಡಿಗಟ್ಟಿನಲ್ಲಿ ಚರ್ಚಿಸುವುದುಂಟಾದರೂ, ಅವರ ಪ್ರಮಾಣ ಕಡಿಮೆ.
ಆ. ಮಾಂಸಾಹಾರವನ್ನು ನೈತಿಕ ನೆಲೆಯಲ್ಲಿ ವಿರೋಧಿಸುವವರು, ಅದನ್ನು ಶವಭಕ್ಷಣೆ, ಹಿಂಸೆ, ಕ್ರೌರ್ಯ, ತಾಮಸ, ರಾಕ್ಷಸೀಗುಣವೆಂಬ ನೆಲೆಯಲ್ಲಿ ಚರ್ಚಿಸುವರು. ಈ ಚರ್ಚೆಯಲ್ಲಿ ನಿರ್ದಿಷ್ಟ ಪ್ರಾಣಿಯ ಹೆಸರಾಗಲಿ, ತಿನ್ನುವ ಜನರ ಜಾತಿ-ಧರ್ಮಗಳಾಗಲಿ ಹೆಚ್ಚಾಗಿ ಪ್ರಸ್ತಾಪವಾಗುವುದು ಕಡಿಮೆ. ಇದು ಹಿಂಸೆ-ಅಹಿಂಸೆಯ ಪರಿಕಲ್ಪನೆಯು, ಜೀವದಯೆ-ಪರಿಸರನಾಶಗಳ ನೆಲೆಯಲ್ಲಿದ್ದರೂ, ಅಂತಿಮವಾಗಿ ಮಾಂಸಾಹಾರದ ಮೇಲೆ ತಿರಸ್ಕಾರ ಉತ್ಪಾದಿಸುವಲ್ಲಿ ಪರ್ಯಾವಸಾನಗೊಳ್ಳುತ್ತದೆ. ಆಹಾರಕ್ಕೂ ಬಡತನ, ದುಡಿಮೆ, ಭೌಗೋಳಿಕ ಸನ್ನಿವೇಶಕ್ಕೂ ಇರುವ ಆಂತರಿಕ ನಂಟನ್ನು ಇದು ಪರಿಗಣಿಸುವುದಿಲ್ಲ.
ಇ. ಆಹಾರವನ್ನು ಧರ್ಮ, ದೇವರು, ಸಂಸ್ಕೃತಿ, ಪರಂಪರೆ, ಭಾವನೆಗಳಿಗೆ ಲಗತ್ತಿಸಿ ಮಾಡುವ ಚರ್ಚೆಯ ಸಮಸ್ಯೆಯೆಂದರೆ, ಇದರಲ್ಲಿ ವಿಜ್ಞಾನದ ಮತ್ತು ವೈದ್ಯಕೀಯ ಹಿನ್ನೆಲೆಯವರಿಗಿಂತ ಹೆಚ್ಚಾಗಿ ಧಾರ್ಮಿಕ ಆವೇಶವುಳ್ಳವರು ಭಾಗವಹಿಸುವುದು. ಇದು ಮಾಂಸಾಹಾರವನ್ನು ಒಪ್ಪಿಕೊಂಡರೂ, ದನದ ಮತ್ತು ದನೇತರ ಮಾಂಸಗಳ ನಡುವೆ ಭೇದ ಮಾಡುತ್ತದೆ. ಹಲಾಲ್-ಝಟಕಾ ವಿಧಾನಗಳನ್ನು ಎದುರು ಬದುರು ನಿಲ್ಲಿಸುತ್ತದೆ. ಚರ್ಚೆಯು ದನದ ಮಾಂಸಕ್ಕೆ ಸೀಮಿತವಾದಾಗ, ಮುಸ್ಲಿಮರು-ಕ್ರೈಸ್ತರನ್ನು ಗುರಿಯಾಗಿಸುತ್ತದೆ. ‘ಅವರು’ ಹೊರಗಿನಿಂದ ಬಂದವರು, ‘ನಮ್ಮ’ ಧರ್ಮ, ಸಂಸ್ಕೃತಿ, ಪರಂಪರೆಗಳಿಗೆ ಬಾಹಿರರು, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ನೋಯಿಸುವವರು ಇತ್ಯಾದಿ ತರ್ಕಗಳು ಮಂಡನೆಯಾಗುತ್ತವೆ. ನಾವು-ಅವರು ಎಂಬ ಧ್ರುವೀಕರಣದಲ್ಲಿ ನಡೆಯುವ ಈ ಚರ್ಚೆ ನಾಲಗೆ ಸೀಳುವ, ಕೈಕತ್ತರಿಸುವ, ವಧಿಸುವ ಪರಿಭಾಷೆಗೆ ತಿರುಗುತ್ತದೆ. ಆಕ್ರಮಣಕಾರಿಯಾಗಿ ನಡೆಯುವ ಈ ಮಾತುಕತೆಗಳಲ್ಲಿ ದೊರೆಗಳ ರಾಜ್ಯವಿಸ್ತರಣ ಕದನಗಳನ್ನು ಧಾರ್ಮಿಕ ಆಕ್ರಮಣಕ್ಕೂ, ಕನ್ನಡ ಅಸ್ಮಿತೆಯ ಪ್ರಶ್ನೆಯನ್ನು ಉರ್ದು ವಿರೋಧಕ್ಕೂ, ವೈಯಕ್ತಿಕ ಜಗಳದ ಪ್ರಶ್ನೆಯನ್ನು ಮತೀಯ ದ್ವೇಷಕ್ಕೂ, ಪ್ರೇಮವನ್ನು ಲವ್ ಜಿಹಾದಿಗೂ ತಿರುಗಿಸುವಂತೆ, ಆಹಾರದ ಪ್ರಶ್ನೆಯನ್ನು ಮತೀಯ ದ್ವೇಷದ ಚೌಕಟ್ಟಿನೊಳಗೆ ತಂದು ನಿಲ್ಲಿಸಲಾಗುತ್ತದೆ. ಇದರಿಂದ ಗೋರಕ್ಷಣೆಯ, ಮಾಂಸಾಹಾರ ಮಾರಾಟದ ನಿಷೇಧದ, ಕಸಾಯಿಖಾನೆ ನಿಲ್ಲಿಸುವ ಕಾಯ್ದೆಗಳು ಸುಲಭವಾಗಿ ಪಾಸಾಗುತ್ತವೆ. ನಾಡಿನ ರೈತಾಪಿ, ಪಶುಪಾಲನೆ, ಚರ್ಮ, ಔಷಧಿ ಆರ್ಥಿಕತೆಗಳಿಗೆ ಆಗುವ ಹಾನಿಯನ್ನು ನಿರ್ಲಕ್ಷಿಸಲಾಗುತ್ತದೆ. ಸಮಸ್ಯೆಯೆಂದರೆ, ಈ ಚರ್ಚೆಯಲ್ಲಿ ರೈತರು ಪಶುಪಾಲಕರು ಉದ್ಯಮಿಗಳು ಮಾಂಸಾಹಾರ ಸೇವಿಸುವವರು ಇದು ಮುಸ್ಲಿಮರ ತಲೆನೋವೆಂದು ಭಾವಿಸುವುದು. ‘ಗಂಡ ಸತ್ತರೂ ಸಾಯಲಿ ಸವತಿ ಮುಂಡೆಯಾಗಲಿ’ ಧೋರಣೆ ತಾಳುವುದು. ಆಹಾರದ ಈ ಮತೀಕರಣವು ಭಾವನಾತ್ಮಕ ರಾಜಕಾರಣಕ್ಕೆ ನೆಲ ಹದಗೊಳಿಸುತ್ತದೆ. ಈ ರಾಜಕಾರಣವನ್ನು ‘ಮುಸ್ಲಿಮರಿಗೆ ಬುದ್ಧಿಕಲಿಸುವರು’ ಎಂಬ ಮನೋಭಾವದಿಂದ ಬೆಂಬಲಿಸುವವರು, ಸರಕಾರದ ಆರ್ಥಿಕ ನೀತಿಯಿಂದ ತಮ್ಮ ದೈನಿಕ ಬದುಕು ಕಷ್ಟಕ್ಕೀಡಾದರೂ ಪ್ರತಿಭಟಿಸಲಾಗದ ಇಕ್ಕಟ್ಟಿಗೆ ಸಿಲುಕುವವರು.
ಈ. ಮಾಂಸಾಹಾರದ ಪ್ರಶ್ನೆಯು ಮೇಲ್ಜಾತಿ, ಕೆಳಜಾತಿಗಳ ನೆಲೆಗೆ ತಿರುಗಿಕೊಂಡಾಗ, ಅದು ದನಕ್ಕಿಂತ ಹೆಚ್ಚಾಗಿ ಕುರಿ-ಕೋಳಿ-ಮೀನು-ಮೊಟ್ಟೆಗಳ ಸುತ್ತ ನಡೆಯುತ್ತದೆ;
ಮಾಂಸಾಹಾರವನ್ನು ಕೀಳುಗಳೆವ-ರಾಕ್ಷಸೀಕರಿಸುವ, ಸಸ್ಯಾಹಾರವನ್ನು ಸಾತ್ವಿಕವೆಂದೂ ಉತ್ತಮವೆಂದೂ ಹೇಳುವ, ಆಹಾರದಿಂದ ವ್ಯಕ್ತಿ-ಜಾತಿಗಳು ಶ್ರೇಷ್ಠ-ಕನಿಷ್ಠರಾಗುತ್ತಾರೆಂದು ಪ್ರತಿಪಾದಿಸುವ ಸಸ್ಯಾಹಾರವಾದದ ವಿರುದ್ಧದ ಪ್ರತಿಭಟನೆಯಾಗಿ ಮಾರ್ಪಡುತ್ತದೆ. ಬ್ರಾಹ್ಮಣ್ಯವಾದದ ಎದುರು ಕೆಳಜಾತಿ ಮತ್ತು ದಲಿತರಲ್ಲಿ ಆಹಾರದ ಹಕ್ಕಿನ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ.
----------------------------------------------------------------------
2. ಬ್ರಾಹ್ಯಣ್ಯವಾದದ ಪ್ರತಿರೋಧದ ನೆಲೆಯಲ್ಲಿ ಏರ್ಪಡುವ ಚರ್ಚೆಯು, ಮೊದಲ ಮೂರು ನೆಲೆಗಳಿಗಿಂತಲೂ ಹೆಚ್ಚು ಸಂಕೀರ್ಣವಾದ ತುದಿಗಳಿಗೆ ಹೋಗಿ ಮುಟ್ಟುತ್ತದೆ: ಅದರ ಪ್ರತಿರೋಧದ ವಿಧಾನ ಮತ್ತು ಪರಿಣಾಮಗಳ ಸ್ವರೂಪವು ಸಾಮಾನ್ಯವಾಗಿ ಹೀಗಿರುತ್ತದೆ.
► ಮಾಂಸಾಹಾರ ವಿರೋಧಿಗಳ ವಾದದಲ್ಲಿರುವ ಅಚಾರಿತ್ರಿಕತೆಯನ್ನು ಬಿಂಬಿಸುವುದು. ವೇದಕಾಲದಲ್ಲಿ ವೈದಿಕರು ದನ, ಅಜ, ಅಶ್ವ ಒಳಗೊಂಡಂತೆ ಬೇರೆಬೇರೆ ಪ್ರಾಣಿಗಳನ್ನು ಬಲಿಕೊಡುತ್ತಿದ್ದರು ಮತ್ತು ಮಾಂಸ ಸೇವಿಸುತ್ತಿದ್ದರು ಎಂಬ ಪ್ರತಿವಾದ ಮಂಡಿಸುವುದು; ಇದಕ್ಕಾಗಿ ಋಗ್ವೇದ ಮನುಧರ್ಮಶಾಸ್ತ್ರ ಮುಂತಾದ ಗ್ರಂಥಗಳನ್ನು ಉಲ್ಲೇಖಿಸುವುದು; ‘ಹಸು ದೇವತೆಯಲ್ಲ. ಅದನ್ನು ಪೂಜಿಸುವುದಿಲ್ಲ. ಅದರ ಮಾಂಸವನ್ನು ಹಿಂದಿನ ಕಾಲದಲ್ಲಿ ಬ್ರಾಹ್ಮಣರು ತಿನ್ನುತ್ತಿದ್ದರು; ದನವನ್ನು ದೇವರೆಂದು ಪರಿಭಾವಿಸುವುದು ಹಿಂದುಳಿದ ಆಲೋಚನ ಕ್ರಮ’ ಎಂದು ಸ್ವತಃ ಹಿಂದುತ್ವವಾದಿ ಚಿಂತಕರು (ಮುಖ್ಯವಾಗಿ ಸಾವರ್ಕರ್ ಹಾಗೂ ಬಿಜೆಪಿ ವಕ್ತಾರ ವಾಮನಾಚಾರ್ಯ) ಮಾಡಿರುವ ವಾದಗಳನ್ನು; ‘ಪ್ರಾಚೀನ ಭಾರತದಲ್ಲಿ ದನದ ಮಾಂಸ ತಿನ್ನದೆ ಬ್ರಾಹ್ಮಣರಾಗಲು ಸಾಧ್ಯವಿರಲಿಲ್ಲ’ ವಿವೇಕಾನಂದರ ಹೇಳಿಕೆಯನ್ನು ಮುಂದಿಡುವುದು. ಈ ಮೂಲಕ ಮಾಂಸಾಹಾರ ವಿರೋಧಿಗಳ ಹತ್ಯಾರಗಳನ್ನು ನಿಷ್ಕ್ರಿಯಗೊಳಿಸುವುದು.
► ವರ್ತಮಾನದಲ್ಲಿ ಕಾಶ್ಮೀರ, ಅಸ್ಸಾಂ, ಬಂಗಾಳ, ತ್ರಿಪುರಗಳಲ್ಲಿ ಬ್ರಾಹ್ಮಣರು ಬಲಿಗೊಟ್ಟು ಮಾಂಸ ಸೇವನೆ ಮಾಡುತ್ತಿರುವ ನಿದರ್ಶನಗಳನ್ನು; ಉಚ್ಚ ಜಾತಿಗೆ ಸೇರಿದವರು ಕದ್ದು ತಿನ್ನುವ ಮತ್ತು ವಿದೇಶಗಳಲ್ಲಿ ಸಾರ್ವಜನಿಕವಾಗಿ ತಿನ್ನುವ ಮಾಹಿತಿಗಳನ್ನು ಮಂಡಿಸುವುದು. ಹಾಲು ಮೊಸರು ಜೇನುಸಕ್ಕರೆ ರೇಷ್ಮೆ ಸೌಂದರ್ಯವರ್ಧಕ ಇನ್ಸುಲಿನ್‌ಗಳು ಹೇಗೆ ಜೀವಜನ್ಯ ಎಂದು ವಿಶ್ಲೇಷಿಸುವುದು.
► ಭಾರತದಲ್ಲಿ ಸಸ್ಯಾಹಾರಿಗಳು ಮಾಂಸಾಹಾರವನ್ನು ನಾನಾ ಬಗೆಯಲ್ಲಿ ಅಪಮಾನಿಸಿದ್ದನ್ನು ಉಲ್ಲೇಖಿಸುತ್ತ, ಹೇಗೆ ಮಾಂಸಾಹಾರಿಗಳು ಸಸ್ಯಾಹಾರಿಗಳನ್ನು ಅಪಮಾನಿಸದೆ ಡೆಮಾಕ್ರಟಿಕ್ಕಾಗಿ ಇದ್ದಾರೆಂದೂ ವಾದಿಸುವುದು; ಆಹಾರ ತರತಮವು ಮೇಲ್ಜಾತಿಗಳ ಸಾಮಾಜಿಕ ಯಜಮಾನಿಕೆಯ ಹಂಚಿಕೆಯೆಂದೂ, ತಾವು ಉಳಿದವರಿಗಿಂತ ಶ್ರೇಷ್ಠರೆಂಬ ದುರಭಿಮಾನವು ದ್ವೇಷವನ್ನು ಹುಟ್ಟಿಸುತ್ತದೆಯೆಂದೂ, ಜನಾಂಗ ಹತ್ಯೆ ಮಾಡಿದ ಹಿಟ್ಲರ್ ಸಸ್ಯಾಹಾರಿಯಾಗಿದ್ದನೆಂದೂ, ಜಗತ್ತಿನ ಅನೇಕ ತತ್ವಜ್ಞಾನಿಗಳು, ವಿಜ್ಞಾನಿಗಳು, ಲೇಖಕರು ಮೂಲತಃ ಮಾಂಸಾಹಾರಿಗಳೆಂದೂ ಅಂಕಿಅಂಶಗಳನ್ನು ಕೊಡುವುದು. ಸಸ್ಯಾಹಾರವಾದವನ್ನು ಫ್ಯಾಶಿಸಂನ ಭಾಗವಾಗಿ ನೋಡುವುದು.
► ಆಹಾರದ ವಿಷಯದಲ್ಲಿ ಮತೀಯ ರಾಜಕಾರಣವು ತೋರುತ್ತಿರುವ ದ್ವಂದ್ವವನ್ನು ಬಯಲುಗೊಳಿಸುವುದು. ಅದು ತಾನು ಆಳುತ್ತಿರುವ-ಚುನಾವಣೆಗೆ ಹೋಗಲಿರುವ ರಾಜ್ಯಗಳಲ್ಲಿ, ಗೋಹತ್ಯೆ ಕಾಯ್ದೆಯನ್ನು ಜಾರಿಗೊಳಿಸದಿರುವ ಮತ್ತು ದನದ ಮಾಂಸವನ್ನೂ ಹೊರಗಿನಿಂದ ಕಡಿಮೆ ಬೆಲೆಯಲ್ಲಿ ಒದಗಿಸುವ ಆಶ್ವಾಸನೆ ಕೊಡುವ ವೈರುಧ್ಯವನ್ನು ಉಲ್ಲೇಖಿಸುವುದು. ಮತೀಯ ರಾಜಕಾರಣದ ಜತೆ ಸಂಬಂಧವುಳ್ಳ ಕಸಾಯಿಖಾನೆಯ ಕಂಪೆನಿಗಳು ಅರಬಿ ಹೆಸರುಗಳನ್ನಿಟ್ಟುಕೊಂಡು ದನದ ಮಾಂಸವನ್ನು ಅರಬ್ ದೇಶಗಳಿಗೆ ರಫ್ತು ಮಾಡುವುದನ್ನು, ಗೋಸಾಗಾಟದಲ್ಲಿ ಮತೀಯ ಸಂಘಟನೆಗೆ ಸೇರಿದವರೂ ಶಾಮೀಲಾಗಿರುವುದನ್ನು ಪುರಾವೆಗಳಾಗಿ ನೀಡುವುದು.
► ದನದಮಾಂಸ ನಿಷೇಧದಿಂದ ಔಷಧಿ, ಚರ್ಮದ ವಸ್ತು, ಶೃಂಗಾರ ಸಾಧನಗಳ ಉತ್ಪಾದನೆ ಮತ್ತು ಮೃಗಾಲಯ ನಿರ್ವಹಣೆಯ ವಿಷಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ಮನಗಾಣಿಸುವುದು. ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಸಂಭವಿಸುವ ಅನುಭವಿಸುವ ಹಿನ್ನಡೆ ಮತ್ತು ಅವ್ಯವಹಾರಿಕತೆಯನ್ನು ಚರ್ಚಿಸುವುದು. ನಾಗೇಶ ಹೆಗ್ಗಡೆಯವರ ಉಪನ್ಯಾಸ ಮತ್ತು ಬರಹಗಳು ಈ ದಿಸೆಯವು.
► ಪ್ರಾಣಿಗಳ ಆರಾಧನೆ, ಅದರ ಸೆಗಣಿ-ಮೂತ್ರಗಳನ್ನು ಔಷಧಿಯೆಂದು ಪರಿಭಾವಿಸುವುದು, ದೇಶವನ್ನು ಅವೈಜ್ಞಾನಿಕತೆಯತ್ತ ಕರೆದೊಯ್ಯುತ್ತದೆ ಮತ್ತು ಜಗತ್ತಿನೆದುರು ಭಾರತವನ್ನು ಅನಾಗರಿಕ ದೇಶವೆಂದು ಬಿಂಬಿಸುತ್ತದೆ ಎಂದು ವಿಶ್ಲೇಷಿಸುವುದು.
► ಶೂದ್ರ ದಲಿತರ ಆರೋಗ್ಯ ಮತ್ತು ರುಚಿಯ ಪ್ರಶ್ನೆಯನ್ನು ಒಳಗೊಂಡಂತೆ, ಬಹುಸಂಖ್ಯಾತ ಶೂದ್ರ ಮತ್ತು ದಲಿತರ ಸಾಂಪ್ರದಾಯಿಕ ಆಹಾರದ ಹಕ್ಕಿನ ಸಾಂಸ್ಕೃತಿಕ ಅಸ್ಮಿತೆಯ ಮತ್ತು ಸ್ವಾಭಿಮಾನದ ಸಂಗತಿಯಾಗಿ ಮಾರ್ಪಡಿಸುವುದು. ಮಾಂಸಾಹಾರ ದ್ವೇಷದಿಂದ ಸಾಮಾಜಿಕ ಸಂಬಂಧಗಳಲ್ಲಿ ಹುಟ್ಟುವ ಬಿರುಕು, ಮಾಂಸಾಹಾರಿಗಳಿಗೆ ಬಾಡಿಗೆ ಮನೆ ಕೊಡಲು ನಿರಾಕರಿಸುವಾಗಿನ ಅಪಮಾನದ ಸಂಗತಿಗಳನ್ನು ಚರ್ಚಿಸುವುದು. ಈ ನೆಲೆಯ ಚರ್ಚೆಗಳು ಉಡುಪಿಯ ‘ಆಹಾರ ನಮ್ಮ ಹಕ್ಕು’ ಸಮಾವೇಶ, ಹಂಸಲೇಖ ಪ್ರಕರಣದಲ್ಲಿ ‘ಬಾಡೇ ನಮ್ಮ ಗಾಡು’ ಹ್ಯಾಶ್‌ಟ್ಯಾಗಿನಲ್ಲಿ ಮಾಡಿದ ಮಾಂಸಾಹಾರದ ಸಂಭ್ರಮಗಳಿಗೆ ಕಾರಣವಾದವು.
► ಆಹಾರದ ಮೇಲಿನ ಹಲ್ಲೆಗಳು ದಲಿತ-ಶೂದ್ರರ ಅಸ್ಮಿತೆಗಳ ಮೇಲೆ ಮೇಲ್ಜಾತಿಗಳು ಮಾಡುತ್ತ ಬಂದಿರುವ ಸಾಂಸ್ಕೃತಿಕ ಹೇರಿಕೆಯೆಂದು ವ್ಯಾಖ್ಯಾನಿಸುವುದು. ಬದಲಿಗೆ ತಮ್ಮ ಬಲಿ ಮತ್ತು ಮಾಂಸಾಹಾರವುಳ್ಳ ಹಬ್ಬ ದೈವಾರಾಧನೆ ಸಂಸ್ಕೃತಿ, ಪರಂಪರೆಗಳ ಹುಡುಕಾಟ ಮತ್ತು ಸಮರ್ಥನೆಯಾಗಿ ಮಾರ್ಪಡಿಸುವುದು; ಬೌದ್ಧಧರ್ಮ ವಿವೇಚನರಹಿತ ಪ್ರಾಣಿಬಲಿ ನಿಷೇಧಿಸಿದರೂ ಮಾಂಸಾಹಾರವನ್ನು ಹೇಗೆ ನಿಷೇಧಿಸಲಿಲ್ಲ ಎಂದು ಪರ್ಯಾಯ ಧರ್ಮದ ಸಾಧ್ಯತೆಗಳನ್ನು ತೆರೆಯುವುದು. ಬ್ರಾಹ್ಮಣವಾದವನ್ನು ಪ್ರತಿಪಕ್ಷದಲ್ಲಿಟ್ಟು ದಲಿತ ಶೂದ್ರ ಮುಸ್ಲಿಮ್ ಕ್ರೈಸ್ತ ಬೌದ್ಧರ ಆಹಾರ ಹಕ್ಕನ್ನು ಸಮರ್ಥಿಸುವ ಎಲ್ಲ ಲಿಬರಲ್ ಮತ್ತು ವೈದ್ಯಕೀಯ ಧಾರೆಗಳನ್ನು ಒಗ್ಗೂಡಿಸುವುದು.
► ಬಹುಸಂಖ್ಯಾತ ಶೂದ್ರ ದಲಿತ ಬುಡಕಟ್ಟುಗಳ ಆಹಾರವನ್ನು ನಿರಾಕರಿಸುವುದೇ ಧರ್ಮವಾದರೆ, ಅದು ನಮ್ಮದಲ್ಲ. ದೇಶದ ಮೂಲನಿವಾಸಿಗಳ ಆಹಾರ ಪದ್ಧತಿಯನ್ನು ಒಪ್ಪದವರು ಹೊರಗಿನಿಂದ ಬಂದ ಆರ್ಯರು-ಎಂಬ ಪ್ರತಿಪಟ್ಟನ್ನು ಹಾಕುವುದು. ಈ ಮೂಲಕ ಜನಾಂಗಗಳ ವಲಸೆಯ ಚರಿತ್ರೆಗೆ ಹೋಗುವುದು.
► ಶೂದ್ರ ದಲಿತರಲ್ಲೇ ಇರುವ ಬ್ರಾಹ್ಮಣೀಕರಗೊಂಡು ಮಾಂಸವನ್ನು ನಿಷೇಧಿಸಿಕೊಂಡಿರುವ, ಅದನ್ನು ಪ್ರತ್ಯೇಕವಾಗಿ ಬೇಯಿಸಿ ಹೊಲಸು ಎಂದು ಕರೆಯುವ, ದನ, ಹಂದಿ ಮಾಂಸಗಳ ಬಗ್ಗೆ ಇರುವ ತರತಮ ಮಾಡುವ ವೈರುಧ್ಯಗಳನ್ನು ವಿಮರ್ಶಿಸುತ್ತ ಆತ್ಮಾವಲೋಕನ ಮಾಡಿಕೊಳ್ಳುವುದು.
► ಭಾರತದಂತಹ ಬಹುಧರ್ಮ ಬಹುಸಂಸ್ಕೃತಿಗಳಿರುವ ದೇಶದಲ್ಲಿ, ಆಹಾರದ ಪ್ರಶ್ನೆಯನ್ನು ಡೆಮಾಕ್ರಸಿಯಲ್ಲಿರುವ ಮತ್ತು ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯನಾಗರಿಕ ಹಕ್ಕು, ಸಹನಶೀಲತೆ ಹಾಗೂ ಕಾನೂನಿನ ಆಳ್ವಿಕೆಯ ಸಂಗತಿಯನ್ನಾಗಿಸುವುದು. ಈ ಹಿನ್ನೆಲೆಯಲ್ಲಿ ಹಂಸಲೇಖ ಪ್ರಕರಣದಲ್ಲೆದ್ದ ಪ್ರತಿರೋಧವು ಸಂವಿಧಾನದ ದಿನದ ಆಚರಣೆಯಾಗಿ ಮಾರ್ಪಟ್ಟಿದ್ದು ಗಮನಾರ್ಹ.
► ವೈಯಕ್ತಿಕವಾಗಿ ಮಾಂಸಾಹಾರಿಗಳಾಗಿಯೂ ಚರ್ಚೆಯಲ್ಲಿ ನಿರ್ಲಿಪ್ತವಾಗಿ ಉಳಿವ ಮತ್ತು ಆಹಾರದ ಹಕ್ಕನ್ನು ರಕ್ಷಿಸದ ನಾಗರಿಕ ಸಮಾಜದ, ಮಾನವ ಹಕ್ಕುಸಂಘಟನೆಗಳ, ವರ್ಗಹೋರಾಟಕ್ಕೆ ಹಾತೊರೆಯುತ್ತ ಸಾಂಸ್ಕೃತಿಕ ಸಂಗತಿಗಳಿಗೆ ಮಿಡಿಯದ ಕೆಲವು ಧಾರೆಯ ಕಮ್ಯುನಿಸ್ಟರನ್ನು ಖಂಡಿಸುವುದು. ತಮ್ಮ ಆಹಾರದ ಹಕ್ಕಿನ ಬೆಂಬಲಕ್ಕೆ ನಿಲ್ಲದ ಸರಕಾರ, ನ್ಯಾಯಾಲಯ, ಮಾಧ್ಯಮಗಳ ವಿಮರ್ಶೆಗೆ ತೊಡಗುವುದು. ಪ್ರಭುತ್ವ ಮತ್ತು ನಾಗರಿಕ ಸಮಾಜಗಳು ಸಂವೇದನಶೀಲಗೊಂಡು ಮಧ್ಯಪ್ರವೇಶ ಮಾಡುವುದರ ಪ್ರಾಮುಖ್ಯವನ್ನು ಪ್ರತಿಪಾದಿಸುವುದು. ಆಳುವ ಪ್ರಭುತ್ವಗಳ ರೈತವಿರೋಧಿ ಬೆಲೆಯೇರಿಕೆ ಉದ್ಯೋಗಸೃಷ್ಟಿ ಮುಂತಾದ ನೀತಿಗಳ ವಿರುದ್ಧದ ಸುಪ್ತ ಆಕ್ರೋಶವನ್ನು ಸೇರಿಸಿಕೊಂಡು, ಬಲಪಂಥೀಯ ರಾಜಕಾರಣದ ನಿರಾಕರಣೆಯತ್ತ ತಿರುಗುವುದು.
► ಭಾರತದಲ್ಲಿ ಭಾಷೆ ವೃತ್ತಿ ಆಹಾರ ಜಾತಿ ಧರ್ಮಗಳಿಗೆ ಸಂಬಂಧಪಟ್ಟಂತೆ ಎಬ್ಬಿಸಲಾಗುವ ವಿವಾದ ಮತ್ತು ಏರ್ಪಡುವ ಚರ್ಚೆಗಳು, ಆಯಾ ವಿಷಯಗಳಿಗೆ ಸೀಮಿತಗೊಳ್ಳುವುದಿಲ್ಲ. ಅವು ಹುಟ್ಟಿರುವ ಚಾರಿತ್ರಿಕ ಸನ್ನಿವೇಶ ಯಾವುದು, ಎದುರಾಳಿ ಮತ್ತು ಪ್ರತಿರೋಧಿಗಳು ಯಾರು ಎಂಬ ಆಧಾರದಲ್ಲಿ ಬೇರೆಬೇರೆ ತಾರ್ಕಿಕ ಕೊನೆಯನ್ನು ಮುಟ್ಟುತ್ತವೆ. ಸಾಮಾನ್ಯವಾಗಿ, ದನದಮಾಂಸ ವಿಷಯದಲ್ಲಿ ಮುಸ್ಲಿಮರನ್ನು ಶತ್ರುಗಳಾಗಿ ಕಲ್ಪಿಸಿಕೊಂಡು ಹುಟ್ಟುವ ಆಕ್ರಮಣಕಾರಿ ಸಸ್ಯಾಹಾರವಾದಗಳು, ಚರ್ಚೆಯು ಶೂದ್ರ-ದಲಿತ-ಬುಡಕಟ್ಟುಗಳ ಆಯಾಮ ಪಡೆದೊಡನೆ, ಹಿಂಜರಿದು ಆತ್ಮರಕ್ಷಕವಾಗುತ್ತವೆ. ಕಾರಣ, ಉಚ್ಚಜಾತಿಗಳ ಸೋಶಿಯಲ್ ಇಂಜಿನಿಯರಿಂಗ್ ಕಾರ್ಯಾಚರಣೆಗೆ ಆಗುವ ಆಘಾತ. ಬಹುಸಂಖ್ಯಾತ ಶೂದ್ರ-ದಲಿತರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು, ಕೃತಕವೂ ಕಾಲ್ಪನಿಕವೂ ಆದ ಎದುರಾಳಿಯನ್ನು ಕಟ್ಟಿಕೊಟ್ಟು, ಜಾತಿಶ್ರೇಣೀಕರಣ ಉಳಿಸಿಕೊಂಡೇ ತನ್ನ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಯಜಮಾನಿಕೆಯನ್ನು ಆಹಾರ ದೈವರಾಧನೆ ಸಂಸ್ಕೃತಿಗಳ ಹೆಸರಲ್ಲಿ ಹೇರುವ ಸಾಂಸ್ಕೃತಿಕ ರಾಜಕಾರಣ ಭಗ್ನಗೊಳ್ಳುವುದು. ಈಚೆಗೆ ಉಚ್ಚಜಾತಿಗಳು ತಮ್ಮ ಎಂದಿನ ಉಪಾಯಗಾರಿಕೆಯ ನಯವನ್ನೂ ಮರೆತು ಕಠೋರವಾಗಿ ವರ್ತಿಸುತ್ತಿವೆ. ಚರಿತ್ರೆಯಲ್ಲಿ ಹಿಂದೆಂದೂ ಇಲ್ಲದಷ್ಟು ರಾಜಕೀಯ ಅಧಿಕಾರ ಪಡೆದಿರುವುದೇ ಇದಕ್ಕೆ ಕಾರಣ. ಆದರೆ ಅಧಿಕಾರಸ್ಥ ವರ್ಗಗಳ ತಂತ್ರಗಾರಿಕೆ ಮತ್ತು ಕಟುತ್ವಗಳು ದಮನಕ್ಕೆ ಒಳಗಾದವರ ಎಚ್ಚೆತ್ತಪ್ರಜ್ಞೆಗಳ ಎದುರು ಕಂಗಾಲಾಗುತ್ತವೆ. ಹಂಸಲೇಖ ಪ್ರಕರಣದಲ್ಲಿ ಆಗಿದ್ದು ಇದುವೇ.
ಯಾವುದೇ ಧರ್ಮ ಅಥವಾ ಸಮಾಜದಲ್ಲಿ ವ್ಯಕ್ತಿ ಅಥವಾ ಪಂಗಡದ ಮೈಬಣ್ಣ ದೇಹರಚನೆ ಜಾತಿ, ಧರ್ಮ, ಆಹಾರಪದ್ಧತಿಯ ಕಾರಣಕ್ಕಾಗಿ ಕೀಳರಿಮೆ-ಶ್ರೇಷ್ಠತೆ ಅನುಭವಿಸುವ ಸನ್ನಿವೇಶ ಇರುವುದೇ ಅನೈತಿಕ ಮತ್ತು ಅಮಾನುಷ. ಹಲವು ಸಮುದಾಯಗಳೂ, ಹಲವು ನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಗಳೂ, ವೈಯಕ್ತಿಕವಾಗಿ ವಿಭಿನ್ನ ಅಭಿರುಚಿಗಳೂ ಇರುವ ಸಮಾಜದಲ್ಲಿ, ಡೆಮಾಕ್ರಟಿಕ್ಕಾದ ಆಹಾರತತ್ವವೊಂದರ ಜರೂರತ್ತಿದೆ. ಈ ತತ್ವವನ್ನು ಹೀಗೆ ವ್ಯಾಖ್ಯಾನಿಸಬಹುದು: ‘ನಾವು ನಿರ್ದಿಷ್ಟ ಆಹಾರ ತಿನ್ನುವುದಿಲ್ಲ. ಹೀಗಾಗಿ ನೀವೂ ತಿನ್ನಬಾರದು’ ಎನ್ನುವುದು ತಪ್ಪು; ‘ನಾವು ತಿನ್ನದೇ ಇರುವುದನ್ನು ನೀವು ತಿಂದರೆ ಸಹಿಸುವುದಿಲ್ಲ’ ಎನ್ನುವುದು ದ್ವೇಷ; ‘ನಾವು ನಿಷೇಧಿಸಿದ್ದನ್ನು ನೀವು ತಿಂದದ್ದಾದರೆ ಕೊಲ್ಲುತ್ತೇವೆ’ ಎನ್ನುವುದು ಕ್ರೌರ್ಯ; ‘ಕದ್ದುಮುಚ್ಚಿ ನಾವೂ ತಿನ್ನುತ್ತೇವೆ. ಅದನ್ನು ಮಾರಿ ಕಮಾಯಿ ಮಾಡುತ್ತೇವೆ. ಆದರೆ ನೀವು ಸೇವಿಸುವಂತಿಲ್ಲ’ ಎನ್ನುವುದು ಹಿಪಾಕ್ರಸಿ. ಆದರೆ ‘ನಾವು ಇಂತಿಂತಹದ್ದನ್ನು ಈಈ ಕಾರಣಗಳಿಂದ ಸೇವಿಸುವುದಿಲ್ಲ. ಆದರೆ ಇದನ್ನು ಸೇವಿಸುವ ನಿಮ್ಮ ಹಕ್ಕನ್ನು ಮನ್ನಿಸುತ್ತೇವೆ’ ಎನ್ನುವುದು ಬಹುತ್ವದ ಮೌಲ್ಯ. ಈ ಹಕ್ಕಿಗೆ ಚ್ಯುತಿಬಂದಾಗ ರಕ್ಷಣೆಗೆ ನಿಲ್ಲುತ್ತೇವೆ ಎಂದರಂತೂ ದೊಡ್ಡ ಆದರ್ಶ. ನಾಗರಿಕ ಸಮಾಜಗಳಲ್ಲಿ ನಿಜವಾದ ಡೆಮಾಕ್ರಸಿಯು ರಾಜಕೀಯ ಪದ್ಧತಿಯ ಮೂಲಕ ಮಾತ್ರ ಜಾರಿಯಲ್ಲಿರುವುದಿಲ್ಲ. ಜನರ ದೈನಿಕ ಆಲೋಚನಾ ಕ್ರಮ ಮತ್ತು ವರ್ತನೆಗಳಲ್ಲಿ ಅದು ಸಹಜವಾಗಿ ನೆಲೆಸಿರುತ್ತದೆ. ಅಲ್ಲಿ ಆಹಾರವನ್ನು ಸೇವಿಸುವ ಹಕ್ಕನ್ನು ಪಡೆದುಕೊಳ್ಳಲು ಹೋರಾಡುವ ಸನ್ನಿವೇಶವು ಯಾವತ್ತೂ ಸೃಷ್ಟಿಯಾಗಬಾರದು. ಆದರೆ ಸಹಜ ಹಕ್ಕಾಗಿ ಪಡೆದುಕೊಳ್ಳುವ ಹಾದಿ ಮುಚ್ಚಿದಾಗ ಚಳವಳಿ ಮೂಲಕ ಗಳಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.