ಉಡುಪಿ ಜಿಲ್ಲೆ: 35ಕ್ಕೇರಿದ ಕೋವಿಡ್ ಸೋಂಕಿತರು
ಉಡುಪಿ, ಡಿ.31: ಹೊಸ ವರ್ಷ ಸ್ವಾಗತಿಸಲು ಜಿಲ್ಲೆಯ ಜನತೆ ಸಿದ್ಧವಾಗಿ ರುವಾಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಯಲ್ಲೂ ಹಠಾತ್ ಏರಿಕೆ ಕಂಡುಬರುತ್ತಿದೆ. ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 35 ಮಂದಿ ಹೊಸದಾಗಿ ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ನಾಲ್ವರು ಗುಣಮುಖ ರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ ಅಕ್ಟೋಬರ್ 4ರ ಬಳಿಕ ಮೊದಲ ಬಾರಿ ನೂರರ ಗಡಿ ದಾಟಿ 124ಕ್ಕೇರಿದೆ.
ದಿನದಲ್ಲಿ ಪಾಸಿಟಿವ್ ಬಂದ 35 ಮಂದಿಯಲ್ಲಿ 26 ಮಂದಿ ಪುರುಷರು ಹಾಗೂ 9 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 31 ಮಂದಿ ಉಡುಪಿ ತಾಲೂಕಿಗೆ ಸೇರಿದರೆ ಮೂವರು ಕುಂದಾಪುರ ಹಾಗೂ ಒಬ್ಬರು ಕಾರ್ಕಳದವರು. ಪಾಸಿಟಿವ್ ಬಂದ ಒಬ್ಬರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಉಳಿದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಹ ಕೋವಿಡ್ಗೆ ಯಾರೂ ಬಲಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಗುರುವಾರ ನಾಲ್ವರು ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 76,520ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 6241 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 77,123ಕ್ಕೇರಿದೆ.
1929 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಶುಕ್ರವಾರ 1,929 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 286 ಮಂದಿ ಮೊದಲ ಡೋಸ್ ಹಾಗೂ 1643 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 162 ಮಂದಿ ಮೊದಲ ಡೋಸ್ ಹಾಗೂ 1095 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 124 ಮಂದಿ ಮೊದಲ ಡೋಸ್ ಹಾಗೂ 547 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಒಬ್ಬ ಆರೋಗ್ಯ ಕಾರ್ಯಕರ್ತ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.