27 ವರ್ಷಗಳ ಸೇವೆಯ ಬಳಿಕ ಸ್ಥಗಿತಗೊಳ್ಳಲಿರುವ ಇಂಟರ್ನೆಟ್ ಎಕ್ಸ್ಪ್ಲೋರರ್
Photo: Twitter/@VijayPravinM
ನ್ಯೂಯಾರ್ಕ್, ಜೂ.15: 27 ವರ್ಷ ಸೇವೆ ಸಲ್ಲಿಸಿದ ಇಂಟರ್ನೆಟ್ ಎಕ್ಸ್ಪ್ಲೋರರ್ ಬುಧವಾರದಿಂದ ಸ್ಥಗಿತಗೊಳ್ಳಲಿದೆ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇದೀಗ ಬಳಕೆದಾರರು ಮೈಕ್ರೋಸಾಫ್ಟ್ನ ಬ್ರೌಸರ್ ಎಜ್ಗೆ ಬದಲಾಯಿಸಿಕೊಳ್ಳಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ. ಇಂಟರ್ನೆಟ್ ಎಕ್ಸ್ಪ್ಲೋರರ್ನ ಸೇವೆ ಸ್ಥಗಿತಗೊಳಿಸುವುದಾಗಿ ಮೈಕ್ರೋಸಾಫ್ಟ್ ಕಳೆದ ವರ್ಷವೇ ಘೋಷಿಸಿತ್ತು.
ಇಂಟರ್ನೆಟ್ ಎಕ್ಸ್ಪ್ಲೋರರ್ಗಿಂತ ಮೈಕ್ರೋಸಾಫ್ಟ್ ಎಜ್(Microsoft Edge) ಹೆಚ್ಚು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆಧುನಿಕ ಬ್ರೌಸಿಂಗ್ ಅನುಭವವಾಗಿದೆ. ಮಾತ್ರವಲ್ಲ ಹಳೆಯ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳಿಗೆ ಸುಲಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ ಎಂದು ಮೈಕ್ರೋಸಾಫ್ಟ್ ಎಜ್ನ ಪ್ರಧಾನ ವ್ಯವಸ್ಥಾಪಕ ಸೀನ್ ಲಿಂಡರ್ಸೆ ಹೇಳಿದ್ದಾರೆ.
ನೆಟ್ಸ್ಕೇಪ್ ನ್ಯಾವಿಗೇಟರ್ ಎಂಬ ಜನಪ್ರಿಯ ಬ್ರೌಸರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ 1995ರ ಅವಧಿಯಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್ನ ಪ್ರಥಮ ಆವೃತ್ತಿ ಬಿಡುಗಡೆಗೊಂಡಿತ್ತು. ಸಂಸ್ಥೆಯು ಕಡೆಯ ಆವೃತ್ತಿಯನ್ನು 2013ರಲ್ಲಿ ಬಿಡುಗಡೆಗೊಳಿಸಿದೆ. ಗೂಗಲ್ ಕ್ರೋಮ್ ಅತ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟ ಬ್ರೌಸರ್ ಆಗಿದ್ದರೆ , ಆ ಬಳಿಕದ ಸ್ಥಾನದಲ್ಲಿ ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ಫೈರ್ಫಾಕ್ಸ್ ಗುರುತಿಸಿಕೊಂಡಿದೆ ಎಂದು ಆಸ್ಟ್ರೇಲಿಯಾದ ಬಳಕೆದಾರರ ಆಯೋಗದ ನೇತೃತ್ವದಲ್ಲಿ ನಡೆದ ರಾಯ್ ಮಾರ್ಗನ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ‘ಗಾರ್ಡಿಯನ್’ ವರದಿ ಮಾಡಿದೆ.