ನಾಗ್ಪುರ ಪಂಚಾಯತ್ ಸಮಿತಿ ಚುನಾವಣೆಯಲ್ಲಿ 13 ಸ್ಥಾನದಲ್ಲೂ ಸೋಲು: ಬಿಜೆಪಿಗೆ ಭಾರೀ ಮುಖಭಂಗ
Photo: PTI
ನಾಗ್ಪುರ: ಜಿಲ್ಲೆಯಾದ್ಯಂತ ನಡೆದ ಪಂಚಾಯತ್ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು, ಆರೆಸ್ಸೆಸ್ ನ ಪ್ರಮುಖ ಕಚೇರಿಯಿರುವಲ್ಲೇ ಬಿಜೆಪಿ ಶೂನ್ಯ ಸಂಪಾದಿಸಿದೆ. ಯಾವುದೇ ಪಂಚಾಯತ್ನಲ್ಲಿಯೂ ಪ್ರಮುಖ ಸ್ಥಾನಗಳನ್ನು ಗಳಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಎರಡು ತಾಲೂಕುಗಳಲ್ಲಿ ಮಾತ್ರ ಬಿಜೆಪಿ ಉಪ ಸಭಾಪತಿ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.
13 ಪಂಚಾಯತ್ ಸಮಿತಿಗಳಲ್ಲಿ 9 ರಲ್ಲಿ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ:
ಜಿಲ್ಲೆಯ 13 ಪಂಚಾಯತ್ ಸಮಿತಿಗಳ ಪೈಕಿ 9 ಪಂಚಾಯತ್ ಸಮಿತಿಗಳು ಕಾಂಗ್ರೆಸ್ ( INC ) ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂರು ತಾಲೂಕುಗಳಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ( ಎನ್ಸಿಪಿ ) ಅಭ್ಯರ್ಥಿಗಳು ಅಧ್ಯಕ್ಷರಾಗಿದ್ದಾರೆ. ಒಂದು ತಾಲೂಕಿನಲ್ಲಿ ಏಕನಾಥ ಶಿಂಧೆ ಬಣದ ಅಭ್ಯರ್ಥಿ ಅಧ್ಯಕ್ಷರಾಗಿದ್ದಾರೆ.
ಜಿಲ್ಲೆಯ ನಾಗಪುರ ಗ್ರಾಮೀಣ, ಕಮ್ತಿ, ಸವನೆರ್, ಕಲಮೇಶ್ವರ ಪಾರ್ಶಿವಾಣಿ, ಉಮ್ರೇಡ್, ಮೌಡ, ಕುಹಿ, ಭಿವಾಪುರ ಪಂಚಾಯಿತಿ ಸಮಿತಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆದಿವೆ. ನಾರ್ಖೇಡ್, ಕಟೋಲ್ ಮತ್ತು ಹಿಂಗಾಣ ತಾಲೂಕುಗಳಲ್ಲಿ ಎನ್ಸಿಪಿ ಗೆಲುವು ಸಾಧಿಸಿದೆ. ರಾಮ್ಟೆಕ್ ಪಂಚಾಯತ್ ಸಮಿತಿಯಲ್ಲಿ ಶಿವಸೇನೆಯ ಶಿಂಧೆ ಬಣಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ನಾಗ್ಪುರದಲ್ಲೇ ಜನರು ಬಿಜೆಪಿಯ ದುರಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಂಡೆದ್ದಿದ್ದಾರೆ ಮತ್ತು ಫಡ್ನವೀಸ್ ಗೆ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಜನರು ಅಭಿಪ್ರಾಯಿಸಿದ್ದಾರೆ.