ಗದಗ | ಶಿಕ್ಷಕನಿಂದ ವಿದ್ಯಾರ್ಥಿ ಹತ್ಯೆ ಪ್ರಕರಣ; ಹಲ್ಲೆಗೊಳಗಾಗಿದ್ದ ತಾಯಿ ಕೂಡ ಚಿಕಿತ್ಸೆ ಫಲಿಸದೆ ಸಾವು
ಗದಗ, ಡಿ.22: ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹತ್ಯೆಗೈದು ಇಬ್ಬರು ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮೃತ ಬಾಲಕನ ತಾಯಿ ಗೀತಾ ಬಾರಕೇರ್ ಇಂದು (ಗುರುವಾರ) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.
ಡಿಸೆಂಬರ್ 19ರಂದು ಅತಿಥಿ ಶಿಕ್ಷನ ಮಾರಣಾಂತಿ ಹಲ್ಲೆಯಿಂದ ಬಾಲಕ ಭರತ್ ಬಾರಕೇರ ಮೃತಪಟ್ಟಿದ್ದ, ಈ ವೇಳೆ ಆರೋಪಿ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನ ತಾಯಿ ಗೀತಾ ಬಾರಕೇರ ಮೇಲೆ ಕೂಡ ಸಲಾಕೆಯಿಂದ ಮನಬಂದಂತೆ ಹಲ್ಲೆ ನಡಸಿದ್ದ, ಕೂಡಲೇ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಬಾರಕೇರ ಗುರುವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಆರೋಪಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಮೊನ್ನೆ(ಡಿ.20) ಬಂಧಿಸಿದ್ದಾರೆ.
ಶಾಲೆಗೆ ಬರಲು ಮಕ್ಕಳು ಹಿಂದೇಟು: ಘಟನೆ ಬಳಿಕ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ನರಗುಂದ ತಾಲೂಕಿನ ಹದ್ಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿಯಲ್ಲಿ ಒಟ್ಟು 427 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಪೋಷಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.