varthabharthi


ನಿಮ್ಮ ಅಂಕಣ

ಆರ್ಥಿಕ ಹಿಂದುಳಿಯುವಿಕೆ ಒಂದೇ ಮೀಸಲಾತಿಗೆ ಮಾನದಂಡವೇ?

ವಾರ್ತಾ ಭಾರತಿ : 1 Jan, 2022
ಕೆ.ಎನ್. ಲಿಂಗಪ್ಪ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಸಾಂದರ್ಭಿಕ ಚಿತ್ರ

ಮೇಲ್ವರ್ಗದ ಸಮುದಾಯಗಳು ಯಾವ ಮಟ್ಟದಲ್ಲಿ ಪ್ರಾತಿನಿಧ್ಯ ಪಡೆದಿವೆ ಎಂಬುದನ್ನು ತಿಳಿಯಲು ದತ್ತಾಂಶಗಳು ಎಲ್ಲಿವೆ? ಸರಾಸರಿ ಪ್ರಾತಿನಿಧ್ಯ ಹೆಚ್ಚಿದೆ ಅಥವಾ ಕಡಿಮೆ ಇದೆ ಎಂಬುದನ್ನು ತಿಳಿಯಬೇಕಿದ್ದರೆ ಸಮೀಕ್ಷೆಯಿಂದ ಮಾತ್ರ ಸಾಧ್ಯ. ಅಂತಹ ಸಮೀಕ್ಷೆಯ ಅನುಪಲಬ್ಧತೆಯಲ್ಲಿ ಪ್ರಾತಿನಿಧ್ಯದ ಮಟ್ಟವನ್ನು ಅಳೆಯಲು ಹೇಗೆ ಸಾಧ್ಯ? ಹೀಗೆ ಸಮೀಕ್ಷೆ ಮಾಡದೆ, ಭಾರತ ಸರಕಾರ ಮೇಲ್ಜಾತಿಗಳ ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿಕೊಡುವಲ್ಲಿ ಅನುಕೂಲಸಿಂಧು ರಾಜಕೀಯದ ಮೊರೆ ಹೋಗಿದೆ. ಈ ಕಾರಣದಿಂದಲೇ, ದಶವಾರ್ಷಿಕ ಜನಗಣತಿಯ ಜೊತೆಯಲ್ಲಿ ಜಾತಿವಾರು ಜನಸಂಖ್ಯೆಯನ್ನೂ ಗಣತಿ ಮಾಡಬೇಕೆಂಬ ಹಕ್ಕೊತ್ತಾಯ ಇರುವುದು. ಆದರೆ ಸರಕಾರಗಳು ಮಾತ್ರ ಈ ನಿಟ್ಟಿನಲ್ಲಿ ನಕಾರಾತ್ಮಕ ನಡೆ ಅನುಸರಿಸುತ್ತಿವೆ.


ಸಾಮಾಜಿಕ ವೈವಿಧ್ಯದಲ್ಲಿ ತರತಮ ಅನುಭವಿಸುವ ಜನಾಂಗಗಳಿಗೆ ಕಲ್ಪಿಸುವ ‘ಪರಿಹಾರ ರೂಪದ ಪ್ರಾತಿನಿಧ್ಯ’ ರಕ್ಷಿಸುವ ಉದ್ದೇಶದಿಂದ ಭಾರತ ಮತ್ತು ರಾಜ್ಯ ಸರಕಾರಗಳು, ಸಾಂವಿಧಾನಾತ್ಮಕ ಮೀಸಲಾತಿಯ ಸೇವಾ ಅವಕಾಶವನ್ನು ಸರಕಾರ ಮತ್ತು ಸರಕಾರದ ಅಂಗಸಂಸ್ಥೆಗಳ ನೇಮಕಾತಿಯಲ್ಲಿ ‘ಸೂಕ್ತ ಪ್ರಾತಿನಿಧ್ಯ’ ಇಲ್ಲದ ವರ್ಗಗಳಿಗೆ ಒದಗಿಸುತ್ತಿವೆ.ಅವೆಂದರೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಂವಿಧಾನ ಕರಡು ಸಮಿತಿಯು ‘ಹಿಂದುಳಿದ’ ಪದವನ್ನು ಸೇರ್ಪಡೆ ಮಾಡಿತು. ಅದು ಅಂತಿಮವಾಗಿ ಸಂವಿಧಾನ ಸಭೆಯಲ್ಲಿ ಅಂಗೀಕೃತವಾಗಿ ಸಂವಿಧಾನದ ಭಾಗವಾಗಿ ಉಳಿದಿದೆ ಎಂಬ ಅಂಶ ಬಹುಮುಖ್ಯವಾಗಿದೆ. ಸ್ವತಂತ್ರ ಭಾರತದಲ್ಲಿ ಸಂವಿಧಾನ ಜಾರಿಯಾದ 42 ವರ್ಷಗಳ ನಂತರವಷ್ಟೇ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ಬಂದಿದೆ. ಮೀಸಲಾತಿಗೊಳಪಡದ ಮೇಲ್‌ಸ್ತರದ ಸಮುದಾಯಗಳ ತೀವ್ರ ವಿರೋಧ ಮತ್ತು ಹೋರಾಟದ ನಡುವೆ ಮೀಸಲಾತಿ ಅನುಷ್ಠಾನ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಅಂತಹವುಗಳನ್ನು ತಣಿಸುವ ಉದ್ದೇಶದಿಂದಲೇ ‘ಆರ್ಥಿಕ ದುರ್ಬಲ ವರ್ಗ’ಗಳಿಗೂ ಮೀಸಲಾತಿ ನೀಡಬೇಕೆಂಬ ಮನದೊಳಗಣ ಹಂಬಲ ಮೊಳಕೆ ಒಡೆಯಿತು.ಹಲವು ರಾಜ್ಯ ಸರಕಾರಗಳು ಕೂಡ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ನೀಡಿ ಅಧಿಸೂಚನೆ ಹೊರಡಿಸಿದವು. ಅವುಗಳಲ್ಲಿ ಗುಜರಾತ್-ರಾಜಸ್ಥಾನ ಮುಂತಾದವು. ಆದರೆ ಆ ಅಧಿಸೂಚನೆಗಳು ನ್ಯಾಯಾಲಯಗಳ ವಿಮರ್ಶೆಗೊಳಪಟ್ಟು ಸಾಂವಿಧಾನಿಕವಾಗಿ ಅಸಿಂಧು ಎಂದು ನಿರ್ಣಯವಾದ ನಂತರ ಮೂಲೆಗೆ ಸೇರಿದವು.

ಬಿ.ಪಿ ಮಂಡಲ್ ಅಧ್ಯಕ್ಷತೆಯ ಎರಡನೇ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಸಲ್ಲಿಸಿದ ವರದಿ ಆಧರಿಸಿ ಭಾರತ ಸರಕಾರ 1990 ರಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಪ್ರತಿಶತ 27ರಷ್ಟು ಮೀಸಲಾತಿ ಕೋಟಾ ನಿಗದಿಗೊಳಿಸಿ ಆದೇಶ ಹೊರಡಿಸಿತು. ತೆರೆಮರೆಯಲ್ಲಿ ಕುಳಿತಿದ್ದ ಮೀಸಲಾತಿ ವಿರೋಧಿ ಬಣಗಳು ತಕ್ಷಣ ಎಚ್ಚೆತ್ತುಕೊಂಡು ಮೀಸಲಾತಿ ಜಾರಿ ವಿರೋಧಿಸಿ ಹೋರಾಟದ ಹಾದಿ ಹಿಡಿದವು. ಹೋರಾಟದ ಸ್ವರೂಪ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಭಾರತ ಸರಕಾರ, ಹೋರಾಟದ ಬಿಸಿಯನ್ನು ಶಮನಗೊಳಿಸುವ ದಿಕ್ಕಿನಲ್ಲಿ ಮುಂದಡಿ ಇಟ್ಟು ಮೀಸಲಾತಿಗೆ ಒಳಪಡದ ಮೇಲ್ಜಾತಿ ಸಮುದಾಯಗಳ ಆರ್ಥಿಕ ದುರ್ಬಲ ವರ್ಗಗಳಿಗೆ (EWS)ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಶತ 10ರಷ್ಟು ಮೀಸಲಾತಿಯನ್ನು ಒದಗಿಸಿತು. ಆದರೆ, ಸರ್ವೋಚ್ಚ ನ್ಯಾಯಾಲಯ ಆರ್ಥಿಕ ದುರ್ಬಲ ವರ್ಗಗಳಿಗೆ ನೀಡಿರುವ ಮೀಸಲಾತಿ ಸಂವಿಧಾನ ವಿರೋಧಿ ಎಂದು ತೀರ್ಪಿತ್ತು, ಆದೇಶವನ್ನು ಅನೂರ್ಜಿತಗೊಳಿಸಿತು (ಇಂದಿರಾ ಸಹಾನಿ ಭಾರತ ಸರಕಾರ). ನ್ಯಾಯಾಲಯ, ತೀರ್ಪಿನಲ್ಲಿ ಆರ್ಥಿಕ ಮಾನದಂಡ ಒಂದನ್ನೇ ಅನುಸರಿಸಿ, ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಸರ್ವೋಚ್ಚ ನ್ಯಾಯಾಲಯ ಇಂದಿರಾ ಸಹಾನಿ ಪ್ರಕರಣದಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗದ ನಿಮಿತ್ತ ಮೀಸಲಾತಿ ಕಲ್ಪಿಸಿರುವುದು ಸಂವಿಧಾನ ಬದ್ಧ ಎಂದು ತೀರ್ಪು ನೀಡಿದ ಮೇಲೆ, ಅಂತಹ ಮೀಸಲಾತಿಯನ್ನು ಸಹಿಸದ ಮೇಲ್ಜಾತಿ ಜನ ಬಹಿರಂಗವಾಗಿ ಮಾತ್ರ ಅದನ್ನು ಮೂದಲಿಸುವ ಗೊಡವೆಗೆ ಹೋಗಲಿಲ್ಲ.ಆದರೆ, ಸರ್ವೋಚ್ಚ ನ್ಯಾಯಾಲಯ ಅದೇ ತೀರ್ಪಿನಲ್ಲಿ, ಆರ್ಥಿಕ ದುರ್ಬಲ ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ ನಂತರವೂ, ಆ ಜನ ಪರದೆಯ ಹಿಂಬದಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೂ, ಮೀಸಲಾತಿ ನೀಡಬೇಕೆಂದು ಒತ್ತಾಯ ಹೇರುತ್ತಲೇ ಬಂದರು. ಆ ದಿನಗಳಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು ಮಾತ್ರ ಉಭಯ ಸಂಕಟಕ್ಕೆ ಒಳಗಾಗಿ ಕಾಲ ದೂಡಿಕೊಂಡೇ ಬಂದವು.

ಆದರೆ, ಅನತಿಕಾಲದಲ್ಲೇ ಆ ದಿನಗಳೂ ಬಂದವು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ, ಮೇಲ್ಜಾತಿಗಳ ಹಿತ ಕಾಯುವ ಪಕ್ಷವೆಂದೇ ಹಣೆ ಪಟ್ಟಿ ಅಂಟಿಸಿಕೊಂಡಿರುವ ಬಿಜೆಪಿ, ಕೇಂದ್ರ ಸರಕಾರವನ್ನು ತನ್ನ ಕೈವಶ ಮಾಡಿಕೊಂಡ ನಂತರದಲ್ಲಿ ಸುಪ್ತಾವಸ್ಥೆಯಲ್ಲಿದ್ದ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಕೂಗು ಒಮ್ಮೆಲೇ ಎದ್ದು ಸದ್ದು ಮಾಡತೊಡಗಿತು. ಪ್ರಶಸ್ತ ಸಮಯಕ್ಕಾಗಿ ಕಾಯುತಿದ್ದ ಬಿಜೆಪಿ ಸರಕಾರ, ಮುಂದೆ ಎದುರಾಗಲಿದ್ದ 2019ರ ಚುನಾವಣೆಯಲ್ಲಿ ಮೇಲ್ವರ್ಗಗಳ ಮತಗಳ ಮೇಲೆ ಕಣ್ಣಿಟ್ಟು, ಅದನ್ನು ಅನುಷ್ಠಾನಗೊಳಿಸಲು ಅಣಿಯಾಯಿತು. 2019ರ ಮೊದಲ ತಿಂಗಳಲ್ಲಿ ಸಂವಿಧಾನ ತಿದ್ದುಪಡಿಗೆ ಸರಕಾರ ವಿಧೇಯಕ ಒಂದನ್ನು ಸಂಸತ್ತಿನಲ್ಲಿ ಮಂಡಿಸಿ ಅವಸರದಲ್ಲಿ ಅನುಮೋದನೆ ಪಡೆಯಿತು. ದ್ರಾವಿಡ ಪಕ್ಷವೊಂದನ್ನು ಹೊರತುಪಡಿಸಿ ಮತ್ತ್ಯಾವ ಪಕ್ಷವೂ ವಿಧೇಯಕವನ್ನು ವಿರೋಧಿಸಲಿಲ್ಲ ಎಂಬುದು ಮತ ರಾಜಕೀಯದ ಮಹತ್ವವನ್ನು ಒತ್ತಿ ಹೇಳುತ್ತದೆ. ತಿದ್ದುಪಡಿಯ ಕಾರಣ ವಿಧಿಗಳಾದ 15(6) ಮತ್ತು 16(6) ಹೊಸದಾಗಿ ಸ್ಥಾನ ಪಡೆದುಕೊಂಡವು. ಈ ವಿಧಿಗಳನ್ನು ಸೇರಿಸಲು ಸಂವಿಧಾನದ ವಿಧಿ 19(1) ರ ಉಪವಿಧಿ (g) ಅಥವಾ 29(2)ರ ವಿಧಿಗಳು ಪ್ರತಿಬಂಧಿಸುವುದಿಲ್ಲ ಎಂಬುದೂ ತಿದ್ದುಪಡಿಯಲ್ಲಿ ಸೇರಿಕೊಂಡಿತು. ಈ ನಿಮಿತ್ತ ಆರ್ಥಿಕ ದುರ್ಬಲ ವರ್ಗಗಳಿಗೆ ಪ್ರತಿಶತ 10ರಷ್ಟು ಮೀಸಲಾತಿ ನೀಡಲು ಸಂವಿಧಾನದ ಮಾನ್ಯತೆ ಸಿಕ್ಕಂತಾಯಿತು. ಮಂಡಲ್ ವರದಿ ಜಾರಿ ವಿರೋಧಿಸಿ ಹೋರಾಟಕ್ಕಿಳಿದು ಕೆಲವು ಮುಗ್ಧರ ಪ್ರಾಣಕ್ಕೂ ಸಂಚಕಾರ ತಂದ ಜನ ಮೀಸಲಾತಿಯನ್ನು ಮರುಮಾತಿಲ್ಲದೆ ಸ್ವಾಗತಿಸಿಬಿಟ್ಟರು.

ಸಂವಿಧಾನದ ಈ ತಿದ್ದುಪಡಿಗೆ ಪೂರಕವಾಗಿ ಯಾವುದೇ ಪೂರ್ವಭಾವಿ ‘ಕಸರತ್ತು’ ನಡೆಸುವ ಗೋಜಿಗೆ ಸರಕಾರ ಹೋಗಿರಲಿಲ್ಲ ಎಂಬುದು ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ. ಸಂವಿಧಾನದ ವಿಧಿಗಳನ್ವಯ ಹಿಂದುಳಿದ ವರ್ಗಗಳನ್ನು ಗುರುತಿಸಲು ಭಾರತ ಸರಕಾರ ಎರಡು ರಾಷ್ಟ್ರೀಯ ಆಯೋಗಳನ್ನು ನೇಮಕ ಮಾಡಿತ್ತು (ವಿಧಿ 340). ಮೊದಲನೇ ಕಾಕಾ ಕಾಲೇಲ್ಕರ್ ಆಯೋಗ (1955) ನೀಡಿದ್ದ ವರದಿಯನ್ನು ಸರಕಾರ ತಿರಸ್ಕರಿಸಿತ್ತು. ಎರಡನೇ ಮಂಡಲ್ ಆಯೋಗ (1980) ನೀಡಿದ ವರದಿ ಅನುಸರಿಸಿ, ಶತಶತಮಾನಗಳಿಂದ ಅಕ್ಷರ ವಂಚಿತರಾಗಿಯೂ ಮತ್ತು ಸಾಮಾಜಿಕವಾಗಿಯೂ ಹಿಂದುಳಿದಿದ್ದ ವರ್ಗಗಳಿಗೆ ಕೇಂದ್ರ ಸರಕಾರ ಮೀಸಲಾತಿ ನೀಡಿ ಆದೇಶ (1993) ಹೊರಡಿಸಿತು. ಆಯೋಗ, ನಾಗರಿಕರಲ್ಲಿ ಹಿಂದುಳಿದ ವರ್ಗಗಳನ್ನು ವಿಧಿ 15(4) ಗುರುತಿಸಲು ಕೆಲ ಮಾನದಂಡಗಳನ್ನು ಅಳವಡಿಸಿಕೊಂಡಿತ್ತು. ಮತ್ತು ಆ ಮಾನದಂಡಗಳನ್ವಯ ದೇಶವ್ಯಾಪಿ 3743 ಜಾತಿ-ಉಪ ಜಾತಿಗಳನ್ನು ಹಿಂದುಳಿದವು ಎಂದು ಗುರುತಿಸಿತ್ತು. ಅವುಗಳಿಗೆ ಕೋಟಾ ಲಭ್ಯತೆ ಮತ್ತು ಜನಸಂಖ್ಯಾನುಸಾರ, ಪ್ರತಿಶತ 27ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಬೇಕೆಂದು ಆಯೋಗ ಶಿಫಾರಸು ಮಾಡಿತ್ತು ಕೂಡಾ. ಸರಕಾರ ಮತ್ತು ಆಯೋಗ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ವೈಜ್ಞಾನಿಕ ನಿಲುವನ್ನು ಅನುಸರಿಸಿದ್ದರೂ, ಆಯೋಗದ ವರದಿ ನ್ಯಾಯಾಂಗದ ವಿಮರ್ಶೆಗೆ (ಇಂದಿರಾ ಸಹಾನಿ v/s  ಭಾರತ ಸರಕಾರ) ಒಳಪಟ್ಟಿತ್ತು ಎಂಬುದೂ ಗಮನಾರ್ಹ ಅಂಶವಾಗಿದೆ.

ಆದರೆ, ಯಾವ ವಿಧಿ -ವಿಧಾನಗಳನ್ನೂ ಅನುಸರಿಸದೆ ಭಾರತ ಸರಕಾರ ಮೇಲ್ಜಾತಿಗಳ ಆರ್ಥಿಕ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ (103) ಮಾಡಿ ಪ್ರತಿಶತ 10ರಷ್ಟು ಮೀಸಲಾತಿ ಕೋಟಾವನ್ನೂ ನಿಗದಿ ಮಾಡಿತು. ಸರಕಾರದ ಈ ನಿರ್ಧಾರ ಅವೈಜ್ಞಾನಿಕ ಮತ್ತು ಸ್ವೇಚ್ಛಾವರ್ತಿ ಹಾಗೂ ವಿಚಾರಹೀನ ಎಂಬುದು ಸಂವಿಧಾನ ತಜ್ಞರ ಅಭಿಮತವಾಗಿದೆ.ಹಾಗೆಯೇ ಸಂವಿಧಾನದ ಮೂಲ ಸ್ವರೂಪ ಮತ್ತು ಆಶಯಗಳಿಗೆ ಅದು ವಿರುದ್ಧವಾಗಿದೆ ಎಂಬುದು ಕೂಡ. ಸರಕಾರದ ಈ ನಿರ್ಧಾರದ ಹಿಂದಿರುವ ವಿರೋಧಾಭಾಸಗಳೆಂದರೆ -ಮೇಲ್ವರ್ಗದ ಸಮುದಾಯಗಳು, ಸಾಮಾನ್ಯ ವರ್ಗದಲ್ಲಿ ಪ್ರತಿಶತ 50ರಷ್ಟು ಸ್ಪರ್ಧಿಸಿ ಬಹುತೇಕ ಹುದ್ದೆ-ಸ್ಥಾನಗಳನ್ನು ಭುಜಿಸುತ್ತಿವೆ. ಹೀಗಿದ್ದಾಗ್ಯೂ, ಅವುಗಳು ‘ಸಾಕಷ್ಟು’ ಅಥವಾ ‘ಸೂಕ್ತ’ ಹುದ್ದೆಗಳನ್ನು ಪಡೆಯಲು ಶಕ್ತವಾಗಿಲ್ಲ ಎಂಬುದನ್ನು ಸರಕಾರ ಯಾವ ಅಳತೆಗೋಲನ್ನನುಸರಿಸಿ ಗೊತ್ತು ಮಾಡಿಕೊಂಡಿದೆ ಎಂಬುದೇ ನಿಗೂಢ.ಸಂವಿಧಾನದ ಈ ತಿದ್ದುಪಡಿಯಿಂದಾಗಿ ಮೇಲ್ವರ್ಗದ ಜನ ಉಭಯತ್ರ ಪ್ರಯೋಜನ ಪಡೆದುಕೊಂಡು (ಶೇ.50+ಶೇ.10) ಸಂತುಷ್ಟರಾಗಿದ್ದಾರೆ! ಹಾಗೆಯೇ, ಯಾವುದೇ ರೀತಿಯಲ್ಲೂ ಒಟ್ಟಾರೆ ಮೀಸಲಾತಿ ಪ್ರತಿಶತ 50ರ ಮಿತಿಯನ್ನು ದಾಟ ಬಾರದೆಂಬ, ಸರ್ವೋಚ್ಚ ನ್ಯಾಯಾಲಯದ ಕಟ್ಟಪ್ಪಣೆ ಇದ್ದಾಗ್ಯೂ, ಆರ್ಥಿಕ ಹಿಂದುಳಿದ ವರ್ಗಗಳಿಗೆ ಪ್ರತಿಶತ 10ರಷ್ಟು ಕೋಟಾ ನಿಗದಿ ಮಾಡಿ ಮೀಸಲಾತಿ ನೀಡಿರುವುದೂ ನೈತಿಕತೆಗೆ ಹೊರತಾದುದಲ್ಲವೇ? ಒಟ್ಟಿನಲ್ಲಿ ಸಾಮಾನ್ಯವರ್ಗದ ಕೋಟಾವಂತೂ ಇಳಿಕೆಯಾಯಿತು.

ಮೇಲ್ವರ್ಗದ ಸಮುದಾಯಗಳು ಯಾವ ಮಟ್ಟದಲ್ಲಿ ಪ್ರಾತಿನಿಧ್ಯ ಪಡೆದಿವೆ ಎಂಬುದನ್ನು ತಿಳಿಯಲು ದತ್ತಾಂಶಗಳು ಎಲ್ಲಿವೆ? ಸರಾಸರಿ ಪ್ರಾತಿನಿಧ್ಯ ಹೆಚ್ಚಿದೆ ಅಥವಾ ಕಡಿಮೆ ಇದೆ ಎಂಬುದನ್ನು ತಿಳಿಯಬೇಕಿದ್ದರೆ ಸಮೀಕ್ಷೆಯಿಂದ ಮಾತ್ರ ಸಾಧ್ಯ. ಅಂತಹ ಸಮೀಕ್ಷೆಯ ಅನುಪಲಬ್ಧತೆಯಲ್ಲಿ ಪ್ರಾತಿನಿಧ್ಯದ ಮಟ್ಟವನ್ನು ಅಳೆಯಲು ಹೇಗೆ ಸಾಧ್ಯ? ಹೀಗೆ ಸಮೀಕ್ಷೆ ಮಾಡದೆ, ಭಾರತ ಸರಕಾರ ಮೇಲ್ಜಾತಿಗಳ ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿಕೊಡುವಲ್ಲಿ ಅನುಕೂಲಸಿಂಧು ರಾಜಕೀಯದ ಮೊರೆ ಹೋಗಿದೆ. ಈ ಕಾರಣದಿಂದಲೇ, ದಶವಾರ್ಷಿಕ ಜನಗಣತಿಯ ಜೊತೆಯಲ್ಲಿ ಜಾತಿವಾರು ಜನಸಂಖ್ಯೆಯನ್ನೂ ಗಣತಿ ಮಾಡಬೇಕೆಂಬ ಹಕ್ಕೊತ್ತಾಯ ಇರುವುದು. ಆದರೆ ಸರಕಾರಗಳು ಮಾತ್ರ ಈ ನಿಟ್ಟಿನಲ್ಲಿ ನಕಾರಾತ್ಮಕ ನಡೆ ಅನುಸರಿಸುತ್ತಿವೆ.ಇತ್ತೀಚೆಗೆ ಭಾರತ ಸರಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ, ಜಾತಿ -ಜನಗಣತಿ ಕಾರ್ಯ ಕೈಗೊಳ್ಳಲು ಆಡಳಿತಾತ್ಮಕ ತೊಂದರೆ ಇದೆ ಎಂದು ಶಪಥ ಪತ್ರ ಸಲ್ಲಿಸಿದೆ.

ಮೇಲ್ಜಾತಿಗಳಲ್ಲಿ ವಾರ್ಷಿಕ 8 ಲಕ್ಷ ರೂಪಾಯಿಗಳಿಗೂ ಕಡಿಮೆ ಆದಾಯ ಹೊಂದಿರುವವರನ್ನು ಮಾತ್ರ ಆರ್ಥಿಕವಾಗಿ ಹಿಂದುಳಿದ ವರ್ಗಗಳು ಎಂದು ಮೀಸಲಾತಿಗಾಗಿ ಭಾರತ ಸರಕಾರ ಪರಿಗಣಿಸಿದೆ. ಆದರೆ, ಈ ಮಿತಿಯನ್ನು ಮಾತ್ರ ಯಾವ ಮಾನದಂಡವನ್ನೂ ಆಧರಿಸಿ ನಿಗದಿಗೊಳಿಸಲಾಗಿಲ್ಲ.ಕೆಲ ದಿನಗಳ ಹಿಂದೆ, ಪ್ರಕರಣವೊಂದರ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಭಾರತ ಸರಕಾರವನ್ನು ಈ ಮಿತಿ ನಿಗದಿ ಪಡಿಸುವ ಹಿಂದಿನ ತರ್ಕವನ್ನು ಪ್ರಶ್ನಿಸಿತು. ನ್ಯಾಯಾಲಯದ ಈ ಪ್ರಶ್ನೆಯಿಂದ ವಿಚಲಿತಗೊಂಡ ಭಾರತ ಸರಕಾರ, ಈ ದಿಸೆಯಲ್ಲಿ ತಜ್ಞ ಸಮಿತಿಯೊಂದನ್ನು ನೇಮಿಸಿ ವರದಿ ಕೇಳಿದೆ. ಈ ಹಿಂದೆ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಇಂದಿರಾ ಸಹಾನಿ ಪ್ರಕರಣ ಹಿಂದುಳಿದ ವರ್ಗಗಳಲ್ಲಿರುವ ‘ಕೆನೆಪದರ’ (cremay layer)ವನ್ನು ಹೊರಗಿಡಲು, ಕೇಂದ್ರ ಸರಕಾರ ತಜ್ಞ ಸಮಿತಿ ನೇಮಿಸಿ ವರದಿ ಪಡೆದುಕೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಇಂತಹ ದೃಷ್ಟಾಂತ ವಿದ್ದರೂ, ಭಾರತ ಸರಕಾರ ಈ ವಿಷಯದಲ್ಲಿ ಗಮನವೀಯದೆ ಮೀಸಲಾತಿ ಜಾರಿಗೊಳಿಸುವಲ್ಲಿ ಅತ್ಯಾತುರವನ್ನು ಹೊಂದಿತ್ತು ಎಂಬುದು ದೃಢಪಡುತ್ತದೆ.

ಭಾರತ ಸರಕಾರವು, ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಮತ್ತೊಂದು ಬಡತನ ನಿರ್ಮೂಲನ ಕಾರ್ಯಕ್ರಮವೆಂದು ಪರಿಗಣಿಸಿದ ಹಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದಲ್ಲಿ ಬಡತನ ಶಾಶ್ವತವಲ್ಲ. ಯೋಜಿತ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಿಂದ ಬಡತನ ಹೋಗಲಾಡಿಸಲು ಸಾಧ್ಯವಿದೆ. ಹಾಗಾಗಿ, ಇಂತಹ ಮೀಸಲಾತಿ ಮುಂದೊಂದು ದಿನ ಅಪ್ರಸ್ತುತವೆನಿಸಿಕೊಳ್ಳುತ್ತದೆ. ಆದರೆ, ಜಾತಿಯೊಳಗಣ ಕಳಂಕ, ಅಸ್ಪೃಶ್ಯತೆ ಇತ್ಯಾದಿ ಸಾಮಾಜಿಕ ಅನಿಷ್ಟಗಳ ನಿರ್ಮೂಲನೆ ಸಾಧ್ಯವೇ? ಇಂತಹ ಅನಿಷ್ಟಗಳು ಕೊನೆಗೊಂಡು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವಂತಾದರೆ, ಮೀಸಲಾತಿಗೆ ಮಂಗಳ ಹಾಡಬಹುದು!

ಮೇಲ್ಜಾತಿಗಳ ಆರ್ಥಿಕ ದುರ್ಬಲ ವರ್ಗಗಳಿಗೆ ನೀಡಿರುವ ಪ್ರತಿಶತ 10 ರಷ್ಟು ಮೀಸಲಾತಿಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಅಂದಾಜು 33 ರಿಟ್ ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ದಾಖಲಾಗಿವೆ.ಸದ್ಯ ಪಂಚ ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಅದು ವಿಚಾರಣೆಗಾಗಿ ಬಾಕಿ ಇದೆ. ನ್ಯಾಯಾಲಯದಲ್ಲಿ ವಿಚಾರಣೆ ಮುಗಿದು ತೀರ್ಪು ಹೊರಬರುವವರೆಗೂ, ಕಾಯಬೇಕಾಗಿದೆ, ಕಾಯೋಣ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು