ಹಿಮನದಿಗಳಿಗೂ ತಟ್ಟಿದ ಹವಾಮಾನ ವೈಪರೀತ್ಯದ ಬಿಸಿ
ಭೂಮಿಯ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ಬೃಹತ್ ಗ್ರಂಥವಾಗುತ್ತದೆ. ಒಂದೆಡೆ ಹೆಚ್ಚಿದ ನೆರೆ, ಇನ್ನೊಂದೆಡೆ ಹೆಚ್ಚಾದ ಬರ, ಮತ್ತೊಂದೆಡೆ ಅಧಿಕಗೊಂಡ ತಾಪಮಾನ, ಮಗದೊಂದೆಡೆ ಹೆಚ್ಚಾದ ಜೀವಿಗಳ ಆಕ್ರಂದನ. ಇವೆಲ್ಲವೂ ಹವಾಮಾನ ವೈಪರೀತ್ಯದ ಒಂದೊಂದು ಸ್ವರೂಪಗಳು. ಹವಾಮಾನ ವೈಪರೀತ್ಯದಿಂದಾಗಿ ಜೀವಿಗಳ ಜೈವಿಕ ಪ್ರಕ್ರಿಯೆ ಮಾತ್ರ ಬದಲಾಗುತ್ತಿಲ್ಲ. ಬದಲಾಗಿ ಕೆಲವು ಜೀವಿಗಳ ಆವಾಸ ತಾಣವೇ ಬದಲಿಯಾಗುತ್ತಿದೆ. ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಇದಕ್ಕೆಲ್ಲ ಕಾರಣ ನಾಡಿನಲ್ಲಿದ್ದ ಮಾನವನ ಮೃಗೀಯ ವರ್ತನೆ ಎಂಬುದರಲ್ಲಿ ಎರಡು ಮಾತಿಲ್ಲ ಅಲ್ಲವೇ?
ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ತಾಪಮಾನ ಮತ್ತು ಭಾರೀ ಮಳೆ ಬೀಳುವ ಸಂದರ್ಭಗಳು ಹೆಚ್ಚಾಗಿವೆೆ. ಭೂಮಿಯ ಮೂರನೇ ಧ್ರುವ ಎಂದು ಕರೆಯಲ್ಪಡುವ ಹಿಮಾಲಯ ಪ್ರದೇಶವು ಗ್ರಹದ ಧ್ರುವದ ಹೊರಗಿನ ಅತಿದೊಡ್ಡ ಹಿಮಚ್ಛಾದಿತ ಪ್ರದೇಶವಾಗಿದೆ. ತಾಪಮಾನ ಏರಿಕೆಯಿಂದಾಗಿ ಇಲ್ಲಿನ ನೀರ್ಗಲ್ಲುಗಳು ಅತ್ಯಂತ ವೇಗವಾಗಿ ಕರಗಿ ಹೊಸ ಸರೋವರಗಳನ್ನು ಸೃಷ್ಟಿಸುತ್ತವೆ ಮತ್ತು ಹಾಲಿ ಇರುವ ಸರೋವರ ಗಳನ್ನು ವಿಸ್ತರಿಸುತ್ತಿವೆ. ಅಲ್ಲದೆ ಏರುತ್ತಿರುವ ತಾಪಮಾನ ಮತ್ತು ವಿಪರೀತ ಮಳೆಯಿಂದಾಗಿ ಈ ಪ್ರದೇಶಗಳು ವಿವಿಧ ಬಗೆಯ ನೈಸರ್ಗಿಕ ಅಪಾಯಗಳಿಗೆ ಗುರಿಯಾಗುತ್ತವೆ, ಅದರಲ್ಲಿ ವಿನಾಶಕಾರಿ ನೀರ್ಗಲ್ಲುಗಳ ಸ್ಫೋಟದಿಂದಾಗಿ ಸರೋವರಗಳ ಪ್ರವಾಹವೂ ಅಧಿಕವಾಗುತ್ತಿದೆ. ವಿಜ್ಞಾನಿಗಳು ತಮ್ಮ ಇತ್ತೀಚಿನ ವರದಿಯಲ್ಲಿ ಗುಡ್ಡಗಳ ಪ್ರದೇಶದಲ್ಲಿ ಕರಗಿದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಬಹುತೇಕ ಸಾಮಾನ್ಯವಾಗಿ ಮುಂಗಾರು ಋತುಮಾನದ (ಜೂನ್, ಜುಲೈ, ಆಗಸ್ಟ್) ಕಾಲಾವಧಿಯಲ್ಲಿ ಸಂಭವಿಸುವ ಮೇಘ ಸ್ಫೋಟಗಳು ಕಾರಣ ಎಂದಿದ್ದಾರೆ. ಆದರೆ ಇತ್ತೀಚೆಗೆ (2021ರ ಫೆಬ್ರವರಿ 7) ಗಂಗಾನದಿಯ ಉಪ ನದಿ ಧೌಲಿಗಂಗಾದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾದ ಹಿಮಪಾತವು ಒಣ ಹವೆಯಿಂದಾದ ಪರಿಣಾಮವನ್ನು ಸೂಚಿಸಿತ್ತು. ಮೇಲ್ಭಾಗದ ಧೌಲಿಗಂಗಾ ಜಲಾನಯನ ಪ್ರದೇಶದಲ್ಲಿ ಹಿಮಪಾತಗಳು, ಹಿಮ ಬೀಳುವುದು, ಬಂಡೆಗಳ ಕುಸಿತಗಳು ಮತ್ತು ಇತರ ಗುರುತಿಸಲಾಗದ ಸಣ್ಣ ಅವಘಡಗಳಿಂದಾಗಿ ಇಂತಹ ಸಂದರ್ಭಗಳಲ್ಲಿ ಕರಗಿದ ನೀರು ಹೆಚ್ಚಾಗಿ ದೊಡ್ಡ ಸರೋವರಗಳ ಮೂಲಕ ಆ ಭಾಗದಲ್ಲಿ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಉಷ್ಣವಲಯದ ಸಮುದ್ರದ ನೀರು ಮತ್ತು ವಾತಾವರಣದ ಉಷ್ಣತೆಯು ಹೆಚ್ಚಾಗಲು ಕಾರಣವಾಗುವ ಎಲ್‌ನಿನೊ ವಿದ್ಯಮಾನವು ಒಂದು ನೈಸರ್ಗಿಕ ಹವಾಮಾನ ಪ್ರಕ್ರಿಯೆಯಾಗಿದೆ ಎಂದು ಸಂಶೋಧಕರು ವಿವರಿಸಿದರು, ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಎಲ್‌ನಿನೋ ಪರಿಣಾಮ ಇನ್ನಷ್ಟು ಹೆಚ್ಚಾಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಹವಾಮಾನ ಸಂಶೋಧಕರ ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಬಲವಾದ ಎಲ್‌ನಿನೊ ಪರಿಣಾಮದಿಂದಾಗಿ ನ್ಯೂಗ್ಯೂನಿಯಾ ಪರ್ವತದ ಹಿಮನದಿಗಳು ಕಣ್ಮರೆಯಾಗುತ್ತವೆ ಎಂದಿದ್ದಾರೆ.
ಹಿಮನದಿಗಳಲ್ಲಿನ ಹಿಮ ಕರಗುವಿಕೆ ಪ್ರಮಾಣ ದ್ವಿಗುಣ ಗೊಂಡಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರಾದ ಜೆ.ಎಂ. ಮೌರರ್, ಜೆ.ಎಂ. ಸ್ಕೇಫರ್, ಎಸ್. ರುಪ್ಪರ್ ಮತ್ತು ಎ. ಕಾರ್ಲೆ ಅವರು ಮಾಡಿದ ಹಿಮಾಲಯನ್ ಹಿಮನದಿಗಳ ಬಗೆಗಿನ ಅಧ್ಯಯನವು ಹೊರಹಾಕಿದೆ. 1975ರಿಂದ 2000 ಮತ್ತು 2000ರಿಂದ 2016ರ ಅವಧಿಯಲ್ಲಿ ಹಿಮನದಿಗಳಲ್ಲಿನ ಹಿಮ ಕರಗುವಿಕೆಯ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದಾರೆ. ಇವರ ಸಂಶೋಧನೆಗಳು ಹಿಮಾಲಯ ಮತ್ತು ಉಪ-ಹಿಮಾಲಯನ್ ಶ್ರೇಣಿಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ.
ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಂತಹ ಪರಿಸರ ವಿನಾಶಕಾರಿ ವಿದ್ಯಮಾನಗಳು, ಹಿಮ ಮತ್ತು ಮಂಜುಗಡ್ಡೆ ಮೇಲೆ ಮಾನವಜನ್ಯ ಬ್ಲಾಕ್ ಕಾರ್ಬನ್, ಅಲ್ಬಿಡೋ ಪರಿಣಾಮ ಇವುಗಳು ಹಿಮ ಕರಗುವಿಕೆಯ ಪ್ರಮಾಣ ಹೆಚ್ಚಲು ಕಾರಣವಾಗಿವೆ ಎಂದು ಅಧ್ಯಯನ ಹೇಳಿದೆ. ಮಂಜುಗಡ್ಡೆ ಕರಗುವಿಕೆಗೆ ಕಾರಣವಾದ ಅಂಶಗಳ ಆಧಾರದ ಮೇಲೆ ಈ ವಿದ್ವತ್ಪೂರ್ಣ ಅಧ್ಯಯನ ನಡೆಸಲಾಗಿದ್ದು, ಮಾಲಿನ್ಯದ ಮೂಲಗಳು, ಹಿಮಾಲಯನ್ ಶ್ರೇಣಿಗಳ ಯೋಜಿತವಲ್ಲದ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳ ಕಾರಣಕ್ಕೆ ಉತ್ತರಾಖಂಡದಲ್ಲಿ ನಡೆದ ಹಿಮನದಿ ಸ್ಫೋಟ ದುರಂತ ಸೇರಿದಂತೆ ಹಲವು ವಿನಾಶಕಾರಿ ದುರಂತಗಳಿಗೆ ಕಾರಣವಾಗುತ್ತಿವೆ.
ಉದಾಹರಣೆಗೆ, ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ ಅಮರನಾಥ ಯಾತ್ರೆ, ಬದರಿನಾಥ ಮತ್ತು ಕೇದಾರನಾಥ ಯಾತ್ರೆ, ಕೈಲಾಸ ಮಾನಸರೋವರ ಯಾತ್ರೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಕ್ಕಾಗಿ ವಾರ್ಷಿಕವಾಗಿ ಲಕ್ಷಾಂತರ ಜನರು ಈ ಪರ್ವತಗಳಿಗೆ ಭೇಟಿ ನೀಡುತ್ತಾರೆ. ಆದರೆ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲದೆ ಈ ಪ್ರವಾಸ ನಡೆಯುತ್ತಲೇ ಬಂದಿದೆ. ಪ್ರವಾಸದ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ವಾಹನಗಳ ಓಡಾಟವು ಈ ಪ್ರದೇಶದ ಮಾಲಿನ್ಯವನ್ನು ಹೆಚ್ಚಿಸುತ್ತದೆ ಮತ್ತು ಈ ಪರಿಸರದಲ್ಲಿ ಮಾನವ ಉಂಟುಮಾಡಬಲ್ಲ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆರ್ಥಿಕ ಕಾರಣಗಳಿಗಾಗಿ ಅಭಿವೃದ್ಧಿ ಆದ್ಯತೆಯಾದಾಗ, ಅರಣ್ಯನಾಶವು ಅದರ ತತ್‌ಕ್ಷಣದ ಪರಿಣಾಮವಾಗುತ್ತದೆ. ಪ್ರವಾಸೋದ್ಯಮವನ್ನು ಬೆಂಬಲಿಸಲು ಮತ್ತು ಜಲ ವಿದ್ಯುತ್ ಯೋಜನೆಗಳಿಗಾಗಿ ಹಿಮಾಲಯನ್ ರಾಜ್ಯಗಳಲ್ಲಿ ನೂರಾರು ಚದರ ಕಿಲೋಮೀಟರ್ ಕಾಡುಗಳನ್ನು ಕಡಿಯಲಾಗಿದೆ. ಈ ಕಾಡುಗಳು ನೈಸರ್ಗಿಕ ಇಂಗಾಲದ ಮತ್ತು ಅರಣ್ಯನಾಶವು ಕಪ್ಪುಇಂಗಾಲದ ಹಿಮನದಿಯ ಮಂಜುಗಡ್ಡೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಲು ಕಾರಣವಾಗುತ್ತಿದೆ ಎಂಬುದನ್ನು ಈ ಅಧ್ಯಯನ ಬಹಿರಂಗಪಡಿಸಿದೆ.
ಹಿಮ ಹೆಚ್ಚು ಕರಗಿದಂತೆಲ್ಲಾ ಅಸ್ಥಿರವಾದ ಪ್ರೋಗ್ಲಾಸಿಯಲ್ ಸರೋವರಗಳ ವಿಸ್ತರಣೆಯಿಂದಾಗಿ ಪ್ರವಾಹ ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಇದು ಉತ್ತರಾಖಂಡದ ಚಮೋಲಿ ದುರಂತದ ಹಿಂದಿನ ಸತ್ಯ ಇರಬಹುದೆಂದು ಶಂಕಿಸಲಾಗಿರುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜಾಗತಿಕ ಹವಾಮಾನ ಬದಲಾವಣೆಯು ಮಾನವರ ಅವೈಜ್ಞಾನಿಕ ಹಾಗೂ ಸಮರ್ಥನೀಯವಲ್ಲದ ಅಭಿವೃದ್ಧಿ ಚಟುವಟಿಕೆಗಳು ದುರ್ಬಲವಾದ ಪ್ರದೇಶಗಳಿಗೆ ವಿನಾಶಕಾರಿಯಾಗಿದೆ. 1975 ರಿಂದ 2000ರವರೆಗಿನ ತಾಪಮಾನಕ್ಕೆ ಹೋಲಿಸಿದರೆ, ಹಿಮಾಲಯದ ವಾತಾವರಣದ ಉಷ್ಣತೆಯು 2000ದಿಂದ 2016ರ ನಡುವೆ 0.4 ಡಿಗ್ರಿ ಸೆಲ್ಸಿಯಸ್‌ನಿಂದ 1.4 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಈ ತಾಪಮಾನ ಏರಿಕೆಯು ಹಿಮ ವೇಗವಾಗಿ ಕರಗುವುದಕ್ಕೆ ಸಹಾಯ ಮಾಡುತ್ತದೆ.
ಹೊಸ ಅಧ್ಯಯನದ ಪ್ರಕಾರ, ಪರ್ವತ ಶ್ರೇಣಿಯಲ್ಲಿನ ಬೃಹತ್ ಮಂಜುಗಡ್ಡೆಗಳು ಅಸಾಧಾರಣ ವೇಗದಲ್ಲಿ ಕರಗುತ್ತಿರುವುದರಿಂದ ಕುಡಿಯುವುದರಿಂದ ಹಿಡಿದು ಕೃಷಿಯವರೆಗೆ ಹಿಮಾಲಯದ ಹಿಮನದಿಗಳಿಂದ ನೀರನ್ನು ಅವಲಂಬಿಸಿರುವ ಎರಡು ಶತಕೋಟಿ ಜನರ ಜೀವನದ ಮೇಲೆ ಶೀಘ್ರದಲ್ಲೇ ತೀವ್ರವಾದ ಪರಿಣಾಮ ಬೀರಬಹುದು. ಮಂಜುಗಡ್ಡೆಯ ನಷ್ಟವು ಮಾನವ ಉಂಟುಮಾಡುವ ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮಗಳಲ್ಲಿ ಒಂದಾಗಿದೆ ಮತ್ತು ಇದು ಗ್ರಹದ ವಿಶಾಲ ಪ್ರದೇಶಗಳಿಗೆ ನೀರಿನ ಭದ್ರತೆಯನ್ನು ಅಪಾಯಕ್ಕೆ ತರಬಹುದು.
ಹಿಮಾಲಯವು ಬೃಹತ್ ಪರ್ವತ ವ್ಯವಸ್ಥೆಯಾಗಿದ್ದು, ಇದು ಸುಮಾರು 2,500 ಕಿಲೋಮೀಟರ್ (1,500 ಮೈಲುಗಳು) ವ್ಯಾಪಿಸಿದೆ ಮತ್ತು 32,000ಕ್ಕೂ ಹೆಚ್ಚು ಹಿಮನದಿಗಳಿಗೆ ನೆಲೆಯಾಗಿದೆ. ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿನ್‌ನಲ್ಲಿ ಮಾತ್ರ ಹಿಮಾಲಯಕ್ಕಿಂತ ಹೆಚ್ಚು ಹಿಮವಿದೆ. ಆದರೆ ಅಂಟಾರ್ಕ್ಟಿಕ್ ಹಿಮನದಿಗಳಿಗಿಂತ ಭಿನ್ನವಾಗಿ, ಹಿಮಾಲಯದ ಹಿಮನದಿಗಳು ಪ್ರಮುಖ ನದಿ ವ್ಯವಸ್ಥೆಗಳಿಗೆ ನೀರನ್ನು ಪೂರೈಸುತ್ತವೆ. ಈ ಪ್ರದೇಶದಲ್ಲಿ ಲಕ್ಷಾಂತರ ಜನರ ಜೀವನೋಪಾಯಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಹಿಮನದಿಗಳು ಬೆಂಬಲ ನೀಡುತ್ತವೆ.
ಪ್ರಪಂಚದ ಇತರ ಭಾಗಗಳಲ್ಲಿರು ವಂತೆ, ಹಿಮಾಲಯದ ಹಿಮನದಿಗಳು ಉಷ್ಣತೆಯು ಹೆಚ್ಚಾಗುತ್ತಿದ್ದಂತೆ ಹಿಮವನ್ನು ಕಳೆದುಕೊಳ್ಳುತ್ತಿವೆ. ಆದರೆ ಹಿಮಾಲಯದ ಹಿಮನದಿಗಳು ಪ್ರಪಂಚದ ಇತರ ಭಾಗಗಳಿಗಿಂತ ಹೆಚ್ಚು ತೀವ್ರವಾಗಿ ಪ್ರಭಾವಿತವಾಗಿವೆ ಎಂಬುದನ್ನು ಅಧ್ಯಯನ ತೋರಿಸು ತ್ತದೆ. ಯುನೈಟೆಡ್ ಕಿಂಗ್‌ಡಮ್ ವಿಶ್ವವಿದ್ಯಾನಿಲಯಗಳ ಸಂಶೋಧಕರು ತಮ್ಮ ಹೊಸ ಅಧ್ಯಯನದಲ್ಲಿ, 700 ವರ್ಷಗಳ ಹಿಂದೆ ಹಿಮನದಿಯ ವಿಸ್ತರಣೆಯ ಸಮಯದಲ್ಲಿ ಸರಾಸರಿಗಿಂತ ಕಳೆದ ಕೆಲವು ದಶಕಗಳಲ್ಲಿ ಹತ್ತು ಪಟ್ಟು ವೇಗವಾಗಿ ಮಂಜುಗಡ್ಡೆ ಕರಗಿಹೋಗಿದೆ ಎಂದು ಕಂಡುಹಿಡಿದಿದ್ದಾರೆ. ‘‘ಈಗ ಹಿಮಾಲಯದ ಹಿಮನದಿಗಳಿಂದ ಕಳೆದ ಶತಮಾನಗಳ ಸರಾಸರಿ ವೇಗಕ್ಕಿಂತ ಕನಿಷ್ಠ ಹತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಿಮವು ಕಳೆದುಹೋಗುತ್ತಿದೆ. ನಷ್ಟದ ದರದಲ್ಲಿನ ಈ ವೇಗವರ್ಧನೆಯು ಕಳೆದ ಕೆಲವು ದಶಕಗಳಲ್ಲಿ ಮಾತ್ರ ಹೊರಹೊಮ್ಮಿದೆ ಮತ್ತು ಮಾನವ ಪ್ರೇರಿತ ಹವಾಮಾನ ಬದಲಾವಣೆಯೊಂದಿಗೆ ಹೊಂದಿಕೆಯಾಗುತ್ತದೆ’’ ಎಂದು ಅಧ್ಯಯನದ ಲೇಖಕ ಜೊನಾಥನ್ ಕ್ಯಾರಿವಿಕ್ ತಿಳಿಸಿದ್ದಾರೆ.
ಸಂಶೋಧಕರು ಅಧ್ಯಯನದಲ್ಲಿ ಹಿಮಾಲಯದಲ್ಲಿನ 14,798 ಹಿಮನದಿಗ ಗಾತ್ರವನ್ನು ಅಧ್ಯಯನಕ್ಕೆ ಒಳಪಡಿಸಿದರು. ಹಿಮನದಿ ವಿಸ್ತರಣೆಯ ಸಮಯದಲ್ಲಿ ಇದನ್ನು ‘ಲಿಟಲ್ ಐಸ್ ಏಜ್’ ಎಂದೂ ಕರೆದಿದ್ದಾರೆ. ಹಿಮಾಲಯದ ಹಿಮನದಿಗಳು ತಮ್ಮ ಪ್ರದೇಶದ ಸುಮಾರು ಶೇ.40ರಷ್ಟು ಭಾಗವನ್ನು ಕಳೆದುಕೊಂಡಿವೆ ಎಂದು ಅವರು ಅಂದಾಜಿಸಿದ್ದಾರೆ. 2021ರ ಮುಕ್ತಾಯದ ವೇಳೆಗೆ ಮಂಜುಗಡ್ಡೆಗಳ ಪ್ರಮಾಣ 28,000 ಚದರ ಕಿಲೋಮೀಟರ್‌ಗಳಿಂದ 19,600 ಚದರ ಕಿಲೋಮೀಟರ್‌ಗೆ ಇಳಿಯುತ್ತದೆ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ 390 ಹಿಮನದಿಗಳು 586 ಘನ ಕಿಲೋಮೀಟರ್‌ಗಳಷ್ಟು ಮಂಜುಗಡ್ಡೆಯನ್ನು ಕಳೆದುಕೊಂಡಿವೆ. ಇದು ಸ್ಕ್ಯಾಂಡಿನೇವಿಯಾ, ಮಧ್ಯ ಯುರೋಪಿಯನ್ ಆಲ್ಪ್ಸ್ ಮತ್ತು ಕಾಕಸಸ್ ಸೇರಿದಂತೆ ಎಲ್ಲಾ ಮಂಜುಗಡ್ಡೆಗಳಿಗೆ ಸಮನಾಗಿರುತ್ತದೆ. ಸಂಶೋಧಕರ ಅಂದಾಜಿನಪ್ರಕಾರ, ಕರಗಿದ ಮಂಜುಗಡ್ಡೆಯು ಜಾಗತಿಕ ಮಟ್ಟದಲ್ಲಿ 0.92ರಿಂದ 1.38 ಮಿಲಿಮೀಟರ್‌ನಷ್ಟು ಸಮುದ್ರ ಮಟ್ಟವನ್ನು ಹೆಚ್ಚಿಸಿದೆ.
ಹಿಮಾಲಯದ ಸುತ್ತಲಿನ ಎಲ್ಲಾ ಪ್ರದೇಶಗಳಿಗೆ ಇದು ಪ್ರಮುಖ ಪರಿಣಾಮಗಳನ್ನು ಉಂಟುಮಾಡುತ್ತದೆ(ಇದು ಏಶ್ಯದ ದೊಡ್ಡ ಭಾಗವಾಗಿದೆ), ಹಿಮನದಿ ಆಧಾರಿತ ನದಿಗಳಲ್ಲಿ ಹೆಚ್ಚಿನ ನೀರಿನಿಂದ ಪ್ರವಾಹ ಹೆಚ್ಚಳ ಸೇರಿದಂತೆ, ಹೆಚ್ಚು ತೀವ್ರವಾದ ಹವಾಮಾನ ಘಟನೆಗಳು, ಮಾನ್ಸೂನ್‌ನಲ್ಲಿ ಬದಲಾವಣೆಗಳು ಆಗಲಿವೆ. ಇದು ಲಕ್ಷಾಂತರ ಜನರ ಜೀವನೋಪಾಯವನ್ನು ಬದಲಿಸುತ್ತದೆ. ಕಡಿಮೆ ಕೃಷಿ ಇಳುವರಿ ಮತ್ತು ಅಣೆಕಟ್ಟುಗಳು ಕಡಿಮೆ ನೀರನ್ನು ಪಡೆಯುವುದರಿಂದ ಶಕ್ತಿ ಉತ್ಪಾದನೆಯಲ್ಲಿ ಬದಲಾವಣೆ ಆಗುತ್ತದೆ.
ಹಿಮಾಲಯದ ಹಿಮನದಿಗಳ ಹಿಮದ ಮೇಲ್ಮೈಯನ್ನು ಪುನರ್‌ನಿರ್ಮಿಸಲು ತಂಡವು ಉನ್ನತ ಮಟ್ಟದ ಡಿಜಿಟಲ್ ಮಾದರಿಗಳು ಮತ್ತು ಉಪಗ್ರಹ ಚಿತ್ರಗಳನ್ನು ಬಳಸಿದೆ. ಹಿಂದಿನ ಹಿಮನದಿಯ ವ್ಯಾಪ್ತಿ ಮತ್ತು ಹಿಮದ ಮೇಲ್ಮೈ ಎತ್ತರವನ್ನು ಅಂದಾಜು ಮಾಡಲು ಸಂಶೋಧಕರು ರೇಖೆಗಳ ಜ್ಯಾಮಿತಿಯನ್ನು ಬಳಸಿದರು ಮತ್ತು ನಂತರ ಇದನ್ನು ಈಗಿನ ಹಿಮನದಿಗಳಿಗೆ ಹೋಲಿಸಿ ವ್ಯತ್ಯಾಸಗಳನ್ನು ಲೆಕ್ಕಾಚಾರ ಹಾಕಿದ್ದಾರೆ. ಹಿಮಾಲಯದ ಪೂರ್ವ ಪ್ರದೇಶದಲ್ಲಿ ಹಿಮನದಿಗಳು ವೇಗವಾಗಿ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಿವೆ ಎಂದು ಅಧ್ಯಯನವು ತೋರಿಸಿದೆ. ಇದು ಪರ್ವತ ಶ್ರೇಣಿಯಲ್ಲಿನ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ವ್ಯತ್ಯಾಸಗಳು ಮತ್ತು ವಾತಾವರಣದೊಂದಿಗೆ ಅವುಗಳ ಪರಸ್ಪರ ಕ್ರಿಯೆಯಿಂದಾಗಿ ಹಿಮನದಿಗಳು ಭೂಮಿಯಲ್ಲಿ ಕೊನೆಗೊಳ್ಳುವುದಕ್ಕಿಂತ ಸರೋವರಗಳಲ್ಲಿ ಮಂಜುಗಡ್ಡೆಯು ವೇಗವಾಗಿ ಕುಸಿಯುತ್ತಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಪ್ರದೇಶದ ಜನರು ಈಗಾಗಲೇ ಶತಮಾನಗಳಿಂದ ಸಾಕ್ಷಿಯಾಗಿರುವ ಹಾಗೂ ಎಲ್ಲದಕ್ಕೂ ಮೀರಿದ ಬದಲಾವಣೆಗಳನ್ನು ನೋಡುತ್ತಿದ್ದಾರೆ. ‘‘ಈ ಸಂಶೋಧನೆಯು ಬದಲಾವಣೆಗಳು ವೇಗಗೊಳ್ಳುತ್ತಿವೆ ಮತ್ತು ಅದು ಇಡೀ ರಾಷ್ಟ್ರ ಮತ್ತು ಪ್ರದೇಶಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇತ್ತೀಚಿನ ದೃಢೀಕರಣವಾಗಿದೆ’’ ಎಂದು ಡುಂಡಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಹಾಗೂ ವರದಿಯ ಸಹ ಲೇಖಕ ಸೈಮನ್ ಕುಕ್ ತಿಳಿಸಿದ್ದಾರೆ.
ಈ ಅಂಶಗಳನ್ನು ಗಮನಿಸಿದರೆ ಯಾವುದಕ್ಕೂ ಬಗ್ಗದ ನಮ್ಮ ಹೆಮ್ಮೆಯ ಹಿಮಾಲಯ ತಾಪಮಾನಕ್ಕೆ ಕರಗಿ ನೀರಾಗುವುದಂತೂ ಖಚಿತವಾಗುತ್ತಿದೆ. ಕರಗುವಿಕೆ ವೇಗಕ್ಕೆ ಕಡಿವಾಣ ಹಾಕಲು ಕೆಲವು ಕಟ್ಟುನಿಟ್ಟಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದು ಕೇವಲ ಸರಕಾರದ ಹಾಗೂ ವಿಜ್ಞಾನಿಗಳ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬ ಭಾರತೀಯರ ಹಾಗೂ ಪ್ರಕೃತಿ ಪ್ರೇಮಿಗಳ ಕಾರ್ಯವಾಗಬೇಕು. ಇದಕ್ಕೆ ಇರುವುದೊಂದೇ ಮಾರ್ಗ. ತಾಪಮಾನದ ಬಿಸಿಯನ್ನು ಕಡಿಮೆ ಮಾಡುವುದು. ತಾಪಮಾನದ ಬಿಸಿಯನ್ನು ಕಡಿಮೆ ಮಾಡಲು ನಮ್ಮ ಜೀವನಶೈಲಿಯಲ್ಲಿ ನೂರಾರು ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರ ಸಾಧ್ಯ. ಇದಕ್ಕೆ ಸರ್ವರ ಸಹಮತ ಅಗತ್ಯ.