ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
ಈ ಕ್ಷಣದ ಶಕ್ತಿ - ಅಲ್ಲಮಪ್ರಭು
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧ ಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಇವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. 2020ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ಇವರ ಅನುವಾದಿತ ‘ಸರಹಪಾದ’ ಕೃತಿಗೆ ಲಭಿಸಿರುತ್ತದೆ.
ಎಸ್. ನಟರಾಜ ಬೂದಾಳು
ಅಲ್ಲಮ ಒಬ್ಬ ಟ್ರಾನ್ಸೆಂಡೆಂಟಲಿಸ್ಟ್. ನಿರಂತರ ದಾಟುತ್ತಲೇ ಇರುವವನನ್ನು ಇವನು ಇಂಥವನು ಎಂದು ನಿಂತವನು ವಿವರಿಸಲಾಗದು. ಅವನ ಜೊತೆ ಅಷ್ಟು ದೂರವಾದರೂ ಹೆಜ್ಜೆ ಹಾಕುವಷ್ಟು ಹೊತ್ತು ಮಾತ್ರ ಆತ ಕಾಣಿಸಬಲ್ಲ. ಬರೀ ವಿವರಣೆಗೆ ನಿಲುಕಲಾರ. ನಾನು ನೀಡುವ ವಿವರಣೆಯೂ ಅಷ್ಟೇ.
ಮಿಥ್ಯವನೇ ಹಿಡಿದು ಮಿಥ್ಯವನೇ ಪೂಜಿಸಿ
ಮರ್ತ್ಯಲೋಕದ ಭಕ್ತರೆಲ್ಲ ವ್ಯರ್ಥವಾದರಲ್ಲ
ತಮ್ಮ ತಾವು ಕೆಟ್ಟ ಕೇಡಿಂಗೆ ಬೆರಗಾದೆ
ಕಣ್ಣಕಳೆದುಕೊಂಡು ಹೊಟ್ಟೆಸೀಳಿ ಮಗನ ಬಾಣಸವ ಮಾಡಿ
ಕೈಲಾಸಪುರಕ್ಕೆ ಹೋದವರೆಲ್ಲರು ಭಕ್ತರೆ?
ಅವರಿಗೆ ಶಿವಪಥ ಸಾಧ್ಯವಾಯಿತ್ತೆ? ಭವ ಹಿಂಗಿತ್ತೆ?
ಅಸುರ ಕರ್ಮಿಗಳ ಮಾತಂತಿರಲಿ
ನರಲೋಕದ ನರಗುರಿಗಳೆಲ್ಲ ನರಸಂಸಾರಕ್ಕೊಳಗಾದರು
ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು
ರುದ್ರಲೋಕದ ರುದ್ರರುಗಳೆಲ್ಲ ರುದ್ರ ಸಂಸಾರಕ್ಕೊಳಗಾದರು
ಮುನಿಜನಂಗಳೆಲ್ಲ ತಪೋಸಂಸಾರಕ್ಕೊಳಗಾದರು
ಜಂಗಮವ ಅರ್ಚಿಸಿದವರೆಲ್ಲ ಸಾಯುಜ್ಯವೆಂಬ ಸಂಸಾರಕ್ಕೊಳಗಾದರು
ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡಗಿಚ್ಚ ಗೆಲ್ಲಬಲ್ಲರೆ?
ಅದೆಂತೆಂದಡೆ ನಿತ್ಯ ನಿಜಾತ್ಮ ತಾನೆಂದರಿಯದೆ
ತತ್ವಮಸಿಯೆಂಬ ವಾಕ್ಯ ತಾನೆಂದರಿಯದೆ ಹೊರ ಹೊರಗೆ ಬಳಸಿ ಕೆಟ್ಟರಲ್ಲ!
ಹಿರಿಯರು ಸತ್ತರಲ್ಲ ನಾಯ ಸಾವ!
ಸತ್ತವರ ಹೆಸರ ಪತ್ರವನೋದೆ ಎತ್ತಳ ಮುಕ್ತಿ ಕಾಣಾ ಗುಹೇಶ್ವರ?
ಈವರೆಗೆ ಕಟ್ಟಿಕೊಂಡಿರುವ ಕಾಲ್ಪನಿಕ ಭಾಷಿಕ ಸಂರಚನೆಗಳ ಪೊಳ್ಳನ್ನೆಲ್ಲ ದಾಟದೆ ಹೋದರೆ ಅದೊಂದು ನಾಯ ಬಾಳು, ನಾಯ ಸಾವು ಎನ್ನುತ್ತಿದ್ದಾನೆ ಅಲ್ಲಮಗುರು! ಗಮನಿಸಿ ಇವೆಲ್ಲ ಕಾಲ್ಪನಿಕ ಮತ್ತು ಭಾಷೆಯಲ್ಲಿ ಮಾತ್ರ ಇರುವ ಸೂಚಕಗಳು. ಇವೆಲ್ಲ ಹೊರಗಿನವು. ಆದರೆ ಒಳಗೆ ಸೇರಿಸಿಕೊಂಡು ನಾಯಬಾಳು ಬಾಳಿದ ಮತ್ತು ಅವನ್ನೇ ನಮಗೆ ವರ್ಗಾಯಿಸಿದ ಹಿರಿಯರ ಬಗೆಗೆ ಇಲ್ಲಿ ವ್ಯಕ್ತವಾಗಿರುವ ಸಿಟ್ಟು ಸಹಜವಾದುದು. ಸಾಮಾನ್ಯವಾಗಿ ಎಲ್ಲೂ ಕಾಣದ ಹಿರಿಯರ ತಿರಸ್ಕಾರ ಅಲ್ಲಮನಲ್ಲಿ ಕಾಣಲು ಕಾರಣವಿದೆ. ಅಲ್ಲಮಗುರುವಿಗೆ ಕಾಲ್ಪನಿಕ ಸಂಗತಿಗಳನ್ನೇ ಸಾಧನೆಯೆಂದುಕೊಂಡ ಹಿರಿಯರ ಬಗೆಗೆ ವ್ಯಕ್ತವಾಗುತ್ತಿರುವ ಈ ಸಿಟ್ಟಿಗೆ ದೀರ್ಘಕಾಲೀನ ಪರಂಪರೆ ಇದೆ. ಗಮನಿಸಿ ಈ ಪಟ್ಟಿಯಲ್ಲಿ ತಿರಸ್ಕೃತಗೊಳ್ಳುತ್ತಿರುವುದು ಪಾರಂಪರಿಕ ಸಾಧನಾಮಾರ್ಗಗಳೇ. ಅದರಲ್ಲಿಯೂ ಭಕ್ತಿಯ ತೀವ್ರವಾದ ವಿಡಂಬನೆ ಇದೆ. ಯಾಕೆಂದರೆ ಭಕ್ತಿ ಎನ್ನುವುದೇ ಇದಿರನ್ನು ಅರ್ಚಿಸುವ ಸಂಗತಿ. ಈ ಹೊತ್ತು ಇಡೀ ವಿಶ್ವವನ್ನು ವಿನಾಶದ ಅಂಚಿಗೆ ತಳ್ಳಿರುವ ಸಂರಚನೆಗಳಲ್ಲಿ ಭಕ್ತಿಯೇ ಮುಖ್ಯವಾದುದು. ತಾನು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವಂತೆ ಮಾಡಲು ಭಕ್ತಿ ಸುಲಭ ಮಾರ್ಗ. ಪಾಂಥಿಕತೆ ಅದು ಯಾವ ಧರ್ಮದ್ದೇ ಆಗಿರಲಿ ಮನುಷ್ಯನ ಬದುಕನ್ನು ಸಂಕಟದಲ್ಲಿ ಅದ್ದಿ ಮುಳುಗಿಸುತ್ತಿದೆ. ಆದರೆ ಅದರ ಅರಿವಾಗದೆ ನಮ್ಮ ಹಿರಿಯರು ನಾಯಸಾವ ಸಾಯುತ್ತಿದ್ದಾರೆ. ನಮ್ಮನ್ನೂ ಹಾಗೆ ಸಾಯಲು ಪ್ರೇರೇಪಿಸುತ್ತಿದ್ದಾರೆ. ಹುಟ್ಟುತ್ತ ವಿಶ್ವಮಾನವರಾಗಿ ಹುಟ್ಟಿದವರನ್ನೆಲ್ಲ ಹೀಗೆ ನಾಯಸಾವಿಗೆ ದೂಡುತ್ತಿದ್ದಾರೆ. ಸಮಸ್ಯೆ ಇರುವುದು ಇದಿರಿನಲ್ಲಿ ಅಲ್ಲ. ತನ್ನಲ್ಲಿ. ರೂಮಿ ಹೇಳುತ್ತಾನೆ. ‘ಬಹಳ ಹುಡುಕಿ ಹುಡುಕಿ ವೈರಿಯನ್ನು ಹಿಡಿದೆ. ಕಡೆಗೆ ಸಿಕ್ಕ. ಅವನು ನಾನೇ.’
ನಾವು ಅಲ್ಲಮನ, ಬುದ್ಧನ, ರೂಮಿಯ, ಸರಹನ ಓದುಗರು ಮಾತ್ರ. ಅವರ ದಾರಿಗರಲ್ಲ. ಸಾಧಕರೂ ಇರಬಹುದು. ಅಷ್ಟೋ ಇಷ್ಟೋ ಅರಿತು ಬಾಳಬೇಕೆಂಬ ಹಂಬಲದ ನಾವೆಲ್ಲ ಒಂದೆರಡು ಹೆಜ್ಜೆಗಳನ್ನಾದರೂ ಇಡಬಯಸುವವರು. ನಮ್ಮನ್ನೂ ಈ ಮಹಾಂತರೆಲ್ಲ ಕರುಣೆಯಿಂದ ಕಾಣುವವರು. ಹಾಗಾಗಿ ಇಂತಹ ಮಾತುಕತೆಗೆ ಅವರ ಅಪ್ಪಣೆ ಬೇಡಲು ಸಾಧ್ಯ. ವಚನಗಳ ಓದಿಗೆ ಬರಿಗೈಲಿ ಹೊರಡಲಾಗದು, ವಚನಗಳ ಅನುಸಂಧಾನಕ್ಕೆ ಸಾಧಕ ಸಂಹಿತೆಯ ನೆರವಿರಬೇಕು ಇಲ್ಲವೇ ಅನೇಕ ತತ್ವಸಂಹಿತೆಗಳ ಆಸರೆಯಾದರೂ ಇರಬೇಕು ಅಥವಾ ಎಲ್ಲವನ್ನೂ ದಾಟಿ ಬರಿಗೈ ಮಾಡಿಕೊಂಡು ಕೂಡ ಹೋಗಬಹುದು. ನಮ್ಮ ನಡುವಿನ ವಚನಗಳ ಓದು ಒಂದೇ ಮಾದರಿಯ ಜಾಡಿಗೆ ಬಿದ್ದು ಕೊರಕಲಾಗಿದೆ. ಅದು ಬೇರೆ ಓದುಗಳ ಸಾಧ್ಯತೆಗಳನ್ನು ಮುಚ್ಚಿ ಹಾಕಿದೆ. ಅವುಗಳ ಸುತ್ತ ಇರುವ ಪಾಂಥಿಕ ಶಠತ್ವದ ಬೇಲಿ ಕೂಡ ಬಲವಾಗಿಯೇ ಇದೆ. ವಚನಗಳು ಒಡನಾಡಿದ ಅನೇಕ ದೇಸಿ ಚಿಂತನಾಕ್ರಮಗಳ ನೆರವಿನಿಂದ ಬೇರೊಂದು ಓದನ್ನು ನಡೆಸಬಹುದು ಎಂಬುದು ನನ್ನ ನಂಬುಗೆ. ಅಂತಹ ಓದಿಗೆ ಒದಗಿಬರುವ ಸಲಕರಣೆಗಳೆಂದೇ ಈ ಮಾತುಗಳನ್ನು ಕೂಡ ಭಾವಿಸಿ.
ಈ ಹೊತ್ತು ಇಡೀ ವಿಶ್ವವನ್ನು ವಿನಾಶದ ಅಂಚಿಗೆ ತಳ್ಳಿರುವ ಸಂರಚನೆಗಳಲ್ಲಿ ಭಕ್ತಿಯೇ ಮುಖ್ಯವಾದುದು. ತಾನು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವಂತೆ ಮಾಡಲು ಭಕ್ತಿ ಸುಲಭ ಮಾರ್ಗ. ಪಾಂಥಿಕತೆ ಅದು ಯಾವ ಧರ್ಮದ್ದೇ ಆಗಿರಲಿ ಮನುಷ್ಯನ ಬದುಕನ್ನು ಸಂಕಟದಲ್ಲಿ ಅದ್ದಿ ಮುಳುಗಿಸುತ್ತಿದೆ. ಆದರೆ ಅದರ ಅರಿವಾಗದೆ ನಮ್ಮ ಹಿರಿಯರು ನಾಯಸಾವ ಸಾಯುತ್ತಿದ್ದಾರೆ. ನಮ್ಮನ್ನೂ ಹಾಗೆ ಸಾಯಲು ಪ್ರೇರೇಪಿಸುತ್ತಿದ್ದಾರೆ. ಹುಟ್ಟುತ್ತ ವಿಶ್ವಮಾನವರಾಗಿ ಹುಟ್ಟಿದವರನ್ನೆಲ್ಲ ಹೀಗೆ ನಾಯಸಾವಿಗೆ ದೂಡುತ್ತಿದ್ದಾರೆ.
ಈ ದೃಷ್ಟಿಯಿಂದ ವಚನಗಳ ಓದಿಗೆ ಒದಗಿಸಿಕೊಳ್ಳಬಹುದಾದ ಪರಿಕಲ್ಪನೆಗಳೆಂದು ಕೆಲವನ್ನು ಗುರುತಿಸಿಕೊಳ್ಳಬಹುದು. ದೈವಮಾರ್ಗವನ್ನು ನಿರಾಕರಿಸಿದ ಗುರುಮಾರ್ಗ, ದ್ವೈತಾದ್ವೈತಗಳನ್ನು ನಿರಾಕರಿಸಿದ ಬಯಲು ಅಥವಾ ಶೂನ್ಯತೆ, ವೇದ ಶಾಸ್ತ್ರ ಪುರಾಣಗಳನ್ನು ನಿರಾಕರಿಸಿದ ಪ್ರಮಾಣ ನಿರಾಕರಣೆ, ವರ್ಣಾಶ್ರಮ, ಜಾತಿ ವ್ಯವಸ್ಥೆಗಳನ್ನು ವಿಧಿಸುವ ಮನುಸ್ಮತಿ ಮುಂತಾದ ವೈದಿಕ ಹಿಂದೂ ಧರ್ಮವನ್ನು ನಿರಾಕರಿಸಿದ ಶರಣ ಧರ್ಮ, ಮುಟ್ಟು ಮೈಲಿಗೆ ಶುದ್ಧಾಶುದ್ಧಗಳನ್ನು ನಿರಾಕರಿಸಿದ ನಿಸರ್ಗ ಸಾಮರಸ್ಯ, ದೈವ-ಭಕ್ತನೆಂಬ ತರತಮವನ್ನು ನಿರಾಕರಿಸಿದ ಲಿಂಗಾಂಗ ಸಾಮರಸ್ಯ, ನಿತ್ಯನಾರಕೀ ತತ್ವವನ್ನು ನಿರಾಕರಿಸಿದ ಸರ್ವಮುಕ್ತಿ ಸಾಧ್ಯತೆ, ಹರಿಸರ್ವೋತ್ತಮ ತತ್ವವನ್ನು ನಿರಾಕರಿಸಿದ ಸರ್ವ ಮಂಗಲ (ಶಿವ) ತತ್ವ, ಪಂಚಾಂಗವನ್ನು ನಿರಾಕರಿಸಿದ ಕಾಲದೇಶ ನಿರಾಕರಣೆ, ವ್ಯಕ್ತಿರೂಪದ ಗುರುವನ್ನು ನಿರಾಕರಿಸಿದ ಅರಿವೇ ಗುರು, ಅಕ್ಷರವನ್ನು ಮಾತ್ರ ಜ್ಞಾನವೆಂಬುದನ್ನು ನಿರಾಕರಿಸಿದ ಶ್ರಮ ಕಸುಬು ಕೌಶಲಗಳು ಜ್ಞಾನದ ಮಾಧ್ಯಮಗಳೆಂಬ ನಿಲುವು, ತಾನು-ಇದಿರಿನ ನಿರಸನ, ಮನೋನಿರಸನ-ಅಮನಸ್ಕ -ಮನೋಲಯ ಅಥವಾ ಭಾವದಗ್ಧ ಸ್ಥಿತಿ, ಕುರುಹಿನ ನಿರಾಕರಣೆ, ಪ್ರಕ್ರಿಯಾ ಮೀಮಾಂಸೆ, ಮುಂತಾದ ಪರಿಕಲ್ಪನೆಗಳು ವಚನದ ಓದಿಗೆ ಒದಗಿಬರುತ್ತವೆ. ಬೌದ್ಧ, ಜೈನ, ನಾಥ, ಸಿದ್ಧ, ಆಜೀವಿಕ, ಸಹಜಯಾನ ಮುಂತಾದ ದೇಸಿ ಶ್ರಮಣಧಾರೆಗಳು ಮುಂದಿಟ್ಟ ಈ ಪರಿಕಲ್ಪನೆಗಳ ಅನುಸಂಧಾನದಲ್ಲಿ ವಚನಕಾರರು ಕಟ್ಟಿ ಬದುಕಿನ ವಚನಗಳನ್ನು ಅವುಗಳ ನೆರವಿಲ್ಲದೆ ನಡೆಸುವ ಓದನ್ನು ಸರಿಯೆಂದು ಭಾವಿಸಲಾಗದು. ಈಗ ವಚನಗಳನ್ನು ಓದಲು ಬಳಸುತ್ತಿರುವ ವೀರಶೈವ/ಲಿಂಗಾಯತವೂ ಒಂದು ಓದಿನ ಮಾದರಿಯಾಗಿದೆ. ಅದನ್ನು ಕೂಡ ನಮ್ಮ ಇಂದಿನ ಓದಿಗೆ ಬಳಸಿಕೊಳ್ಳಬಹುದು. ಆದರೆ ಅದೊಂದೇ ಓದಿನ ಮಾದರಿಯೆಂಬ ಗ್ರಹಿಕೆಯನ್ನು ದಾಟುವುದು ಅನಿವಾರ್ಯ. ಇಡಿಯಾಗಿ ವಚನಸಾಹಿತ್ಯವನ್ನು ಷಟ್‌ಸ್ಥಲವೋ, ಗುರುಲಿಂಗಜಂಗಮ ತ್ರೈವಿಧ್ಯವೋ, ಕುರುಹನ್ನು ಹಿಡಿದು ಕುರುಹ ದಾಟುವ ಲಿಂಗಾಯತವೋ? ಇಂತಹ ಒಂದು ಓದಿಗೆ ಸೀಮಿತಗೊಳಿಸಲಾಗದು. ಈ ದೃಷ್ಟಿಯಿಂದ ಕೆಲವು ಪರಿಕಲ್ಪನೆಗಳನ್ನು ವಿವರಿಸಿಕೊಂಡು ವಚನಗಳ ಅನುಸಂಧಾನಕ್ಕೆ ತೊಡಗಬಹುದು.
ಅಮನಸ್ಕ, ಮನೋಲಯ, ಮನೋನಿರಸನ:
ತನಗೆ ಗೊತ್ತಿಲ್ಲದ, ಅನುಭವಿಸಿಲ್ಲದ, ತಾನು ಕಂಡಿಲ್ಲದುದರ ಬಗೆಗೆ ಅತಿ ಹೆಚ್ಚು ಬರೆದವನು, ಮಾತನಾಡಿದವನು ಮನುಷ್ಯ ಪ್ರಾಣಿ ಮಾತ್ರ. ಬಹುಶಃ ಭಾಷೆಯ ಉಗಮದ ಜೊತೆಗೇ ಇಂತಹ ಅನುಭವಿಸಿಲ್ಲದುದರ ಬಗೆಗಿನ ಮಾತುಕತೆ ಶುರುವಾಗಿರಬೇಕು. ಬರೀ ಮಾತುಕತೆಯಲ್ಲಿಯೇ ಇದು ಮುಗಿದಿದ್ದರೆ ಅಷ್ಟು ಸಮಸ್ಯೆಯಾಗುತ್ತಿರಲಿಲ್ಲ. ಭಾಷೆಯ ಮೂಲಕ ನಮ್ಮ ಮನಸ್ಸಿನಲ್ಲಿ ಶೇಖರಗೊಳ್ಳುವ ಭಾಷಿಕ ಸಂರಚನೆಗಳು (ಇದನ್ನು ಮನೋಸಂಚ ಎನ್ನುತ್ತಾನೆ ಅಲ್ಲಮ) ನಮ್ಮನ್ನು ಆಳಲು ಶುರುಮಾಡುತ್ತವೆ. ಬರಬರುತ್ತ ಮನಸ್ಸಿನಲ್ಲಿ ಸಂಗ್ರಹಗೊಂಡಿರುವ ಈ ಸಂಚ ಹೇಳಿದಂತೆ ನಾವು ಕೇಳುವಂತಾಗುತ್ತದೆ. ನಮ್ಮ ತೀರ್ಮಾನಕ್ಕೆ ಏನೂ ಉಳಿಯುವುದಿಲ್ಲ. ಆಯಾ ಸಂದರ್ಭ ಸನ್ನಿವೇಶಗಳಿಗನುಗುಣವಾಗಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಕೂಡ ಆಗುವುದಿಲ್ಲ. ಈ ಕ್ಷಣದ ಲೋಕದ ಅನುಸಂಧಾನ ಸರಿ ಇರಬೇಕಾದರೆ ಈ ಕ್ಷಣಕ್ಕನುಗುಣವಾಗಿ ನಾವು ತೀರ್ಮಾನ ತೆಗೆದುಕೊಳ್ಳುವಂತಾಗಬೇಕು. ಹಾಗೆ ಆಗಬೇಕಾದರೆ ಮನಸ್ಸಿನಲ್ಲಿ ಶೇಖರಗೊಂಡಿರುವ ಸಂರಚನೆಗಳಿಂದ ಮುಕ್ತವಾಗಿ ಸ್ವತಂತ್ರವಾಗಿ ಯೋಚಿಸಬೇಕು. ಇಲ್ಲಿ ಮುಕ್ತಿ ಬೇಕಿರುವುದು ನಮ್ಮ ಮನಸ್ಸಿನಿಂದಲೇ. ಹಾಗೆ ಮನೋಸಂರಚನೆಗಳನ್ನು ಖಾಲಿಯಾಗಿಸಿಕೊಳ್ಳುವುದನ್ನು ಅಮನಸ್ಕ, ಮನೋಲಯ, ಮನೋ ನಿರಸನ, ಭಾವದಗ್ಧ ಸ್ಥಿತಿ ನಿರ್ಲೇಪ ಮುಂತಾಗಿ ಸೂಚಿಸುತ್ತಾರೆ. ಇಂತಹ ಭಾವದಗ್ಧ ಸ್ಥಿತಿಯ ಅಗತ್ಯವನ್ನು ಹೇಳುವ ಕೆಲವು ವಚನಗಳನ್ನು ನೋಡಬಹುದು.
ಗುರು ಸ್ವಾಯತವಾಯಿತ್ತು, ಲಿಂಗ ಸ್ವಾಯತವಾಯಿತ್ತು
ಜಂಗಮ ಸ್ವಾಯತವಾಯಿತ್ತು ಬಸವಣ್ಣನಿಂದಲೆಂದರೆ ?
ತನುವಿಲ್ಲದಿರಬೇಕು; ಮನವಿಲ್ಲದಿರಬೇಕು
ಅರಿವರತು ಮರಹು ನಷ್ಟವಾಗಿರಬೇಕು
ಗೊಹೇಶ್ವರಲಿಂಗದಲ್ಲಿ ನಿರ್ಲೇಪಿಯಾದಲ್ಲದಿಲ್ಲ ಕಾಣ ಮಡಿವಾಳ ಮಾಚಯ್ಯ
ಮನ ಉಂಟೆ ಮರಳೆ, ಶಿವಯೋಗಿಗೆ?
ಮತ್ತೊಮ್ಮೆ ಮನಮಗ್ನ ಉಂಟೆ ಶಿವಯೋಗಿಗೆ?
ಇಲ್ಲದ ಮನವನುಂಟೆಂದು ನುಡಿದು
ಅಡಗಿಸಿದೆನೆಂಬ ಮಾತು ಮನವ ನೆಲೆಮಾಡಿ ತೋರುತ್ತದೆ
ಗೊಹೇಶ್ವರನನ ಅರೆದ ಶರಣಂಗೆ ತೋರಲಿಲ್ಲ ಅಡಗಲಿಲ್ಲ ಕೇಳಾ
ಭಾಷೆಯಲ್ಲಿ ಸಂಭವಿಸುವ ಪರಿಕಲ್ಪನಾತ್ಮಕ ಜಗತ್ತನ್ನು ನಮ್ಮ ಕಣಕಣಗಳಲ್ಲಿ ತುಂಬಿಕೊಂಡಿದ್ದೇವೆ. ಮಾತಿನ ಸೂತಕಕ್ಕೆ ನಾವೆಲ್ಲ ಒಳಗಾಗಿದ್ದೇವೆ. ಮಾತಿಗೆ ಸೂತಕವುಂಟಾಗುವುದು ದೃಷ್ಟಿವಾದಗಳ ಸೋಂಕಿನಿಂದ. ದೃಷ್ಟಿವಾದಗಳನ್ನು ನಿರಸನಗೊಳಿಸಿ, ಮನೋಸಂಚವನ್ನು ಖಾಲಿಯಾಗಿಸಿಕೊಂಡವನು ನುಡಿವ ಮಾತಿಗೆ ಯಾವ ಹಂಗೂ ಕಾಡುವುದಿಲ್ಲ. ಲೋಕವನ್ನು ಅವಳಿ ವಿರುದ್ಧಗಳೆಂದು, ಎಲ್ಲವನ್ನೂ ಇರುವಿಕೆ ಎಂದು, ಎಲ್ಲಕ್ಕೂ ಮತ್ತೊಂದು ಮೂಲವನ್ನು ಗುರುತಿಸಿಕೊಂಡು, ಅನುಸಂಧಾನ ಮಾಡುವ ಕ್ರಮವನ್ನು ಸಹಜಯಾನಿಗಳು ಎಚ್ಚರದಿಂದ ನಿರಾಕರಿಸಿದರು. ನಮ್ಮ ಬದುಕು ಒಂದು ನೆನಪುಗಳ ಪ್ರವಾಹ. ಅಂತಹ ದೃಷ್ಟಿವಾದಗಳು ನಿರಸನಗೊಳ್ಳದ ಹೊರತು ಲೋಕನಡೆಯ ಸಹಜಪಥವನ್ನು ಹಿಡಿಯಲು ಸಾಧ್ಯವಾಗದೆಂಬುದು ಅವರ ಸೂಚನೆ. ಇದೊಂದು ನಿರಂತರ ಯಾನವಾಗಿರುವುದರಿಂದ ಯಾವ ಸ್ಥಗಿತ ನಿಲುವುಗಳೂ ಈ ನಡೆಯನ್ನು ನಿಲ್ಲಿಸಲಾರವು. ಇದನ್ನು ಅಮನಸ್ಕ, ಮನೋಲಯ, ಅದ್ವಯ ಮುಂತಾದ ಪದಗಳಿಂದ ಸೂಚಿಸಿದರೂ, ಆ ಪದಗಳ ಹಂಗಿನ ಎಚ್ಚರವೂ ಅಲ್ಲಮನಿಗಿದೆ!
ವಚನ ಸಂಗ್ರಹದ ಅನೇಕ ಆವೃತ್ತಿಗಳು ಬಂದಿವೆ. ಬಹುಪಾಲು ಆವೃತ್ತಿಗಳು ಷಟ್‌ಸ್ಥಲದ ಕ್ರಮವನ್ನು ಹಿಡಿದು ಜೋಡಿಸಿದ ಸಂಪುಟಗಳೇ ಆಗಿವೆ. ಈವರೆಗೆ ಸಮಗ್ರ ವಚನ ತಾತ್ವಿಕತೆಯನ್ನು ಕಾಶ್ಮೀರ ಶೈವದ ಮೂಲಕವೋ, ತಮಿಳಿನ ಶೈವ ಸಿದ್ಧಾಂತದ ಮೂಲಕ ಮಾತ್ರ ನೋಡಿದ್ದೇವೆ. ಸಿದ್ಧ, ನಾಥ, ಬೌದ್ಧ, ಕಾಪಾಲಿಕ ಇತ್ಯಾದಿ ಶ್ರಮಣ ಧಾರೆಗಳ ಮೂಲಕ ನೋಡುವ ಪ್ರಯತ್ನಗಳಾಗಿಲ್ಲ. ಇವೆಲ್ಲ ಹೊರಗಿನಿಂದ ತಂದು ಅನ್ವಯಿಸಿಕೊಳ್ಳಬೇಕಾದ ತಾತ್ವಿಕ ಆಕರಗಳಲ್ಲ. ಬದಲಿಗೆ ವಚನ ತಾತ್ವಿಕತೆಯು ಇವುಗಳ ಒಡನಾಟದಲ್ಲಿ, ಕೊಡು ಕೊಳುಗೆಯಲ್ಲಿ ರೂಪುಗೊಂಡದ್ದು. ಮೊದಲಿಗೆ ಪ್ರಭು ಒಬ್ಬ ಸಾಧಕ. ಅವನ ‘ಶ್ರಾವಕರು’ ಸಾಧಕರು ಅಥವಾ ಸಾಧನೆಯ ಹಾದಿಯಲ್ಲಿರುವವರು. ಅಲ್ಲಮನ ವಚನಗಳ ವ್ಯಾಖ್ಯಾನದ ಉದ್ದೇಶದ ಜೋಡಣೆಗಳಲ್ಲಿ ಒಂದು ಹಂತದ ಕ್ರಿಯೇಟಿವಿಟಿ ಇದೆಯಾದರೂ, ಅಂತಹ ಜೋಡಣೆಯ ಆಚೆಗಿನ ವಚನಗಳ ರಾಶಿಯೂ ದೊಡ್ಡದಿದೆ. ಮರು ಜೋಡಣೆಯ ಅನೇಕ ಪ್ರಯತ್ನಗಳು ನಡೆದಿವೆ. ಅಲ್ಲಮಪ್ರಭುವಿನ ಅನುಸಂಧಾನಗಳೆಂದು ಹೆಸರಿಸಬಹುದಾದ ಶೂನ್ಯಸಂಪಾದನೆಗಳು, ಪ್ರಭುಲಿಂಗಲೀಲೆ, ಪ್ರಭುದೇವರ ಪುರಾಣ, ಪ್ರಭುದೇವರ ರಗಳೆ ಮುಂತಾದುವು ನಿರ್ದಿಷ್ಟವಾದ ಒಂದು ಪಾಂಥಿಕ ದೃಷ್ಟಿಕೋನದವು. ಇವುಗಳಿಂದಾಗಿ ಅವನು ಅನುಭವಮಂಟಪದ ಅಧ್ಯಕ್ಷನೆಂದು ವೀರಶೈವ ವಿಚಾರದಲ್ಲಿ ಮಾತ್ರ ಸ್ಥಾನ ಪಡೆದನೆ ಹೊರತು ವೀರಶೈವ ಆಚಾರದಲ್ಲಿ ಮಾನ್ಯತೆಯನ್ನು ಪಡೆಯಲಿಲ್ಲ. ವೀರಶೈವ ವಿಚಾರ ಮತ್ತು ಆಚಾರ- ಇವೆರಡರಿದಂದಲೂ ಬಿಡಿಸಿಕೊಂಡ ಮಂಟೇದಲ್ಲಮ ಪರಂಪರೆ ಪಡೆದ ವಿಸ್ತರಣೆಗಳು ಈಗ ಕನ್ನಡ ಕಾವ್ಯ ಮೀಮಾಂಸೆಯ ಆಕರವಾಗಿ ಕಾಣಿಸುತ್ತಿವೆ. ಸಿದ್ಧ, ನಾಥ, ಸೂಫಿ ಪರಂಪರೆಗಳಲ್ಲಿಯೂ ಕಾಣಿಸಿಕೊಳ್ಳುವ ಅಲ್ಲಮನನ್ನು ಪಂಥಾತೀತವಾಗಿ ಈ ಎಲ್ಲ ಪಾಂಥಿಕ ಬಾಂದುಗಳ ಆಚೆಗೆ ಕಂಡು ಮಾತನಾಡಿಸುವ ಕನ್ನಡದ ಶ್ರಾವಕ ಪ್ರತಿಭೆಯು ಕೂಡ ಘನವಾದುದೇ ಆಗಿದೆ.
ಅಲ್ಲಮ ಮಾರ್ಗವೆಂದರೆ ಮತ್ತೇನೋ ಒಂದನ್ನು ಪಡೆಯುವುದಲ್ಲ; ಬದಲಿಗೆ ಇರುವ ಕೇಡನ್ನು ದೂರಾಗಿಸಿಕೊಳ್ಳುವ ಪ್ರಯತ್ನವೆಂದೇ ನನ್ನ ಅನಿಸಿಕೆ. ಅಲ್ಲಮಪ್ರಭು ಕನ್ನಡದ ನಿಜದನಿಯನ್ನು, ಕನ್ನಡದ ಲೋಕದೃಷ್ಟಿಯನ್ನು ಕಂಡುಕೊಳ್ಳಲು ಇರುವ ಒಂದು ಮಾರ್ಗವೆಂದು ನನಗೆ ಅನ್ನಿಸುತ್ತದೆ. ಬದುಕಿನಲ್ಲಿರುವ ಬಹುತ್ವ ಇಲ್ಲಿ ಪ್ರತಿಫಲಿತವಾಗುತ್ತಿದೆ. ಹಾಗಾಗಿ ನಿನ್ನೆಗಳನ್ನು ಕಾಣಲು ಮಾತ್ರವಲ್ಲ, ಬದುಕಿನ ಸರಿ-ತಪ್ಪುಗಳನ್ನು ಗುರುತಿಸಿ ಮುಂದೆ ಹೋಗಲು ಅಲ್ಲಮನ ಜೊತೆಗಿನ ಅಷ್ಟು ದೂರದ ನಡೆ ಒದಗಿ ಬರುವುದೆಂಬ ನಂಬಿಕೆಯಿಂದ ಕೆಲವು ಸಾಲುಗಳನ್ನು ಆಡಬಯಸುತ್ತೇನೆ.
ಪ್ರತ್ಯೇಕಬುದ್ಧ ಅಲ್ಲಮಪ್ರಭು!
ಭಾರತೀಯ ಶ್ರಮಣಧಾರೆಗಳಲ್ಲಿನ ‘ಪ್ರತ್ಯೇಕ ಬುದ್ಧರ’ ಪರಂಪರೆಗೆ ಸೇರಿದವನು ಅಲ್ಲಮನಾಥ. ಅವನಿಗೆ ಯಾರ ಹಂಗೂ ಇಲ್ಲ. ಅದೊಂದು ಸ್ವಯಂಪ್ರಭೆ. ಬೆಳಕಿನ ಹುಳವಾಗಿ ಬಂದ ಮಂಟೇದಲ್ಲಮನಿಗೆ ಯಾವ ಗುರುವಿನ, ದೈವದ ಹಂಗಿಲ್ಲ. ಆದರೆ ಅಲ್ಲಮ ಭಾರತೀಯ ಶ್ರಮಣ ಧಾರೆಗಳಾದ ಜೈನ, ಬೌದ್ಧ, ಕಾಳಾಮುಖ, ಆಜೀವಿಕ, ಅಚಲ, ನಾಥ, ಸಿದ್ಧ, ಚಾರ್ವಾಕ ಮುಂತಾದ ಪರಂಪರೆಗಳ ನಡುವೆ ಇದ್ದಾನೆ. ಕನ್ನಡದಲ್ಲಿ ಇವುಗಳ ತಾತ್ವಿಕತೆಯ ಸೂಕ್ಷ್ಮಅನುಸಂಧಾನ ಅಲ್ಲಮನೆಂಬ ಬೆಳಕಿನ ಅಡಿಯಲ್ಲಿಯೂ ನಡೆದಿದೆ. ಅಲ್ಲಮನ ಜಂಗಮ ಪ್ರತಿಭೆಗೆ ತಡೆಯಿಲ್ಲ. ಇಂತಹ ಪ್ರತಿಭೆಯನ್ನು ಬೌದ್ಧರು ಖಡ್ಗಮೃಗಕ್ಕೆ ಹೋಲಿಸುತ್ತಾರೆ. ಖಡ್ಗವನ್ನು ಮುಖದಲ್ಲಿಯೇ ಧರಿಸಿ ಚಲಿಸುವ ಖಡ್ಗಮೃಗವನ್ನು ಯಾವ ಪ್ರಾಣಿಯೂ ಎದುರಾಗದು. ಪ್ರತ್ಯೇಕಬುದ್ಧರಿಗೆ ಗುರುವಿನ ಶಿಷ್ಯರ ಹಂಗಿಲ್ಲ. ಅದರಲ್ಲಿಯೂ ಅಲ್ಲಮಪ್ರಭು ಚಲನಶೀಲತೆಯೆಂಬುದನ್ನೂ ಹಿಂದೆ ಹಾಕಿ ಹೋಗುತ್ತಾನೆ! ನಿರ್ದಿಷ್ಟ ಗತಿಯ ಚಲನೆಯೂ ಅವನಿಗೆ ಬಂಧನದಂತೆ ಗೋಚರಿಸಬಹುದು! ಅವನಿಗೆ ಕುರುಹಿನ ಹಂಗಿಲ್ಲ, ಚರಿತ್ರೆಯ ಹಂಗಿಲ್ಲ ಗುರುವಿನ ಹಂಗಿಲ್ಲ ಕಡೆಗೆ ಅರಿವಿನ ಹಂಗೂ ಇಲ್ಲ!
ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ!
ತನುವಿನಲ್ಲಿ ಸುಖವ ಧರಿಸಿಕೊಂಡಡೆ ಆ ತನುವಿಂಗೆ ಕೊರತೆ ನೋಡಾ !
ಅರೆವನರೆದು ಸುಖವಾಯಿತ್ತೆಂದಡೆ
ಆ ಅರೆವಿಗೆ ಭಂಗ ನೋಡಾ ಗುಹೇಶ್ವರ
ಎಷ್ಟು ಸರಿಯಾಗಿ ಹೇಳಿದರೆಂದು ಸಂಭ್ರಮಿಸಿದ್ದೇ ಆದರೆ ಅದು ಸರಿಯಾದುದಲ್ಲವೆಂದೇ ಅರ್ಥ! ಸುಖದುಃಖಗಳೆರಡನ್ನೂ ದಾಟಲಾಗದ್ದು ಭಂಗವೆಂಬುದು ಪ್ರಭುವಿನ ನಿಲುವು. ಅಲ್ಲಮಪ್ರಭು ಮತ್ತು ಇತರ ವಚನಕಾರರು ರೂಪಿಸಿಕೊಟ್ಟ ತಾತ್ವಿಕತೆ ಏಕಾಕಿಯಾಗಿ ರೂಪುಗೊಂಡದ್ದಲ್ಲ. ಅದರ ಹಿಂದೆ ಅನೇಕ ಚಿಂತನಾಪ್ರಸ್ಥಾನಗಳು ಒದಗಿಸಿಕೊಟ್ಟ ತಾತ್ವಿಕ ಸಿದ್ಧತೆ ಇದೆ. ಉಪನಿಷತ್ತುಗಳು, ವಿವಿಧ ಬೌದ್ಧ ಪಂಥಗಳು, ಸಿದ್ಧಪರಂಪರೆಗಳು ಮತ್ತು ಪ್ರಧಾನವಾಗಿ ಶ್ರಮಣ ಧಾರೆಗಳು ರೂಪಿಸಿಕೊಟ್ಟ ತಾತ್ವಿಕತೆಯ ಪ್ರಭಾವ ಇದೆ. ಅಲ್ಲಮನ ಮಟ್ಟಿಗೇ ಗಮನಿಸುವುದಾದರೆ ಅಲ್ಲಮ ಪ್ರತಿಭೆ ರೂಪುಗೊಂಡ ಆವರಣವೇ ಅತ್ಯಂತ ವಿಶಿಷ್ಟವಾದದ್ದು. ಅವನು ಬೆಳೆದದ್ದು ಬಳ್ಳಿಗಾವೆಯ ಕೋಡಿಮಠದ ಆವರಣದಲ್ಲಿ. ಕೋಡಿಮಠಕ್ಕೆ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಸುಮಾರು ಕ್ರಿ.ಶ. ಎರಡನೆಯ ಶತಮಾನದಿಂದ ಎಂಟನೆಯ ಶತಮಾನದವರೆಗೂ ಬೌದ್ಧ ವಜ್ರಯಾನ ಪಂಥದ ಕೇಂದ್ರವಾಗಿ, ಬೌದ್ಧ ಮಹಾಯಾನ ದರ್ಶನದ ಸನಿವಾಸ ವಿಶ್ವವಿದ್ಯಾಲಯವಾಗಿ, ಇತರ ಭಾರತೀಯ ದರ್ಶನಗಳ ಕೇಂದ್ರವಾಗಿ, ಪ್ರಧಾನವಾಗಿ ನಾಗಾರ್ಜುನನ ಪ್ರಥಮ ಕಾರ್ಯಕ್ಷೇತ್ರವಾಗಿ ಭಾರತದ ಬೌದ್ಧ ಚರಿತ್ರೆಯಲ್ಲಿ ಒಂದು ಪ್ರಮುಖ ಕೇಂದ್ರವಾಗಿದೆ. ಅಶೋಕನು ಈ ಬೌದ್ಧ ವಿಶ್ವವಿದ್ಯಾಲಯಕ್ಕೆ ರಕ್ಕಿತನೆಂಬ ಪ್ರತಿನಿಧಿಯನ್ನು ಕಳಿಸಿದ್ದುದರ ಬಗ್ಗೆ ದಾಖಲೆ ಇದೆ. ಇಂದಿಗೂ ಆ ಪ್ರದೇಶದಲ್ಲಿ ಚೆಲ್ಲಾಡಿ ಬಿದ್ದಿರುವ ಬೌದ್ಧ ಅವಶೇಷಗಳು, ತಾರಾಭಗವತಿ, ಅವಲೋಕಿತೇಶ್ವರ ಮುಂತಾದ ಶಿಲ್ಪಗಳು ಅದರ ಬಗ್ಗೆ ಸಾಕ್ಷಿ ನುಡಿಯುತ್ತಿವೆ. ಬೌದ್ಧ ಪಠ್ಯಗಳೆಲ್ಲವನ್ನೂ ಚೀನೀ ಭಾಷೆಗೆ ಭಾಷಾಂತರಿಸಿದ ಕ್ರಿ.ಶ. ಆರನೆಯ ಶತಮಾನದ ಕುಮಾರಜೀವನಿಂದ ಇಂದಿನ ಎ.ಕೆ.ವಾರ್ಡರರಂತಹ ಆಧುನಿಕ ಬೌದ್ಧ ವಿದ್ವಾಂಸರವರೆಗೆ ಅವರೆಲ್ಲ ಸ್ಪಷ್ಟವಾಗಿ ಅಭಿಪ್ರಾಯ ಪಡುವಂತೆ ಬೌದ್ಧ ಮಹಾಯಾನ ಪಂಥವು ರೂಪು ಪಡೆದದ್ದು ಕರ್ನಾಟಕದಲ್ಲಿ, ಬೌದ್ಧ ಮಹಾಯಾನ ಮತ್ತು ಮಾಧ್ಯಮಕ ತತ್ವದ ಪ್ರಧಾನ ಆಚಾರ್ಯ ನಾಗಾರ್ಜುನನಿಗೆ ಕರ್ನಾಟಕದ ‘ಮಹಾನಾಗ’ನಿಂದ ದೊರಕಿದ ವೈಪುಲ್ಯ ಸೂತ್ರಗಳೇ ಅವನು ರೂಪಿಸಿಕೊಟ್ಟ ಮಹಾಯಾನ ತತ್ವದ ಮೂಲ ಆಕರ. ಹಾಗಾಗಿ ಬೌದ್ಧ ಮಹಾಯಾನದ ಅದರಲ್ಲೂ ವಜ್ರಯಾನ ಪಂಥದ ಪ್ರಧಾನ ಕೇಂದ್ರವಾಗಿದ್ದ ಬಳ್ಳಿಗಾವೆಯ ಕೋಡಿಮಠದ ಆವರಣದಲ್ಲಿ ಅಲ್ಲಮಪ್ರತಿಭೆ ರೂಪುಗೊಂಡದ್ದು ಎಂಬುದಂತೂ ನಿಶ್ಚಿತ.
ಶೂನ್ಯತೆಯನ್ನು ವಿವರಿಸಲು ಬೌದ್ಧ ಧರ್ಮವು ಅನಿತ್ಯ, ಅನಾತ್ಮ ಮತ್ತು ಪ್ರತೀತ್ಯಸಮುತ್ಪಾದವೆಂಬ ಮೂರು ಪರಿಕಲ್ಪನೆಗಳನ್ನು ಬಳಸುತ್ತದೆ. ಈ ಲೋಕದಲ್ಲಿನ ಎಲ್ಲವೂ ನಿರಂತರ ಬದಲಾವಣೆಯಲ್ಲಿದೆ; ಯಾವುದಕ್ಕೂ ಅದರದ್ದೇ ಆದ ಆತ್ಮ ಅಥವಾ ಸ್ವಂತದ್ದು ಎಂದು ಗುರುತಿಸಬಹುದಾದದ್ದು ಇಲ್ಲ; ಮತ್ತು ಎಲ್ಲವೂ ಸಂಬಂಧದಲ್ಲಿ ಮಾತ್ರ ಉಂಟಾಗುತ್ತವೆ. ಅಲ್ಲಮನಲ್ಲಿ ಈ ವಿವರಣೆಗಳನ್ನು ಸೂತ್ರೀಕರಿಸುವ ಪ್ರಯತ್ನವನ್ನು ಮಾಡಬಹುದು.
ಇಬ್ಬರ ಮಧ್ಯದಲೊಂದು ಮಗು ಹುಟ್ಟಿತ್ತು
ಆ ಮಗುವಿನ ಹುಟ್ಟ ತಾಯಿಯೂ ಅರಿಯಳು ತಂದೆಯೂ ಅರಿಯರು
ಹೆಸರಿಟ್ಟು ಕರೆದು ಜೋಗುಳವಾಡುತ್ತೈದಾರೆ ನೋಡಾ
ಕೈ ಬಾಯಿಗೆ ಬಂದ ಶಿಶು ಮೈದೋರದಿದ್ದರೆ
ಕಂಡು ನಾನು ನಾಚಿದೆನು ಕಾಣಾ ಗೊಹೇಶ್ವರ.
ಅಲ್ಲಮಪ್ರಭುವಿನ ಈ ವಚನಕ್ಕೆ ಬೇರೋಂದು ಪಾಂಥಿಕ ವ್ಯಾಖ್ಯಾನವಿದ್ದೀತು ಅಥವಾ ಅನೇಕ ವ್ಯಾಖ್ಯಾನಗಳಿರಲು ಸಾಧ್ಯ. ಅಲ್ಲಮನ ವಚನಗಳ ಅನುಸಂಧಾನವೂ ಹಲವು ರೀತಿಯಲ್ಲಿರಲು ಸಾಧ್ಯ. ಪ್ರಭುವಿನಂತಹ ಸಾಧಕನೊಡನೆ ಸಾಧಕನೊಬ್ಬನು ಸಂವಾದಿಸುವ ಕ್ರಮವೇ ಬೇರೆ, ಭಾಷಿಕನೊಬ್ಬನು ಅಲ್ಲಮನ ವಚನಗಳೊಂದಿಗೆ ನಡೆಸುವ ಸಂವಾದಕ್ರಮವೇ ಬೇರೆ. ಈ ಹಿನ್ನೆಲೆಯಲ್ಲಿ ಈ ವಚನದ ನಿರ್ವಚನಕ್ಕೆ ಪ್ರಯತ್ನಿಸಬಹುದು. ಕಾರಣ ಪರಿಸ್ಥಿತಿಗಳೇ ತಾಯಿತಂದೆಗಳಾಗಿ ಹುಟ್ಟುಪಡೆದ ಪರಿಣಾಮ ಅಥವಾ ಫಲವೆಂಬುದು ಕೂಡ ಸ್ವತಂತ್ರ ಅಸ್ತಿತ್ವವುಳ್ಳುದಲ್ಲ. ಆದರೆ ಅದಕ್ಕೆ ಒಂದು ಹೆಸರನ್ನಿಟ್ಟು ಅದನ್ನು ಸ್ವತಂತ್ರ ಶಾಶ್ವತ ವಸ್ತುವೆಂದು ಕರೆದು ಅದರ ಬಗೆಗೆ ಮೋಹವನ್ನು ಬೆಳೆಸಿಕೊಳ್ಳುವ ಸಾಮಾನ್ಯ ಲೋಕಕ್ರಮವನ್ನು ‘ಹೆಸರಿಟ್ಟು ಕರೆದು ಜೋಗುಳವಾಡುವುದು’ ಸೂಚಿಸುತ್ತದೆ. ಕ್ರಿಯಾ ಸಾಮರ್ಥ್ಯವುಳ್ಳದ್ದಾದರೂ ಸ್ವತಂತ್ರ ಅಸ್ತಿತ್ವವಿಲ್ಲದುದರಿಂದ ಅದು ಮೈದೋರದು. ಹಾಗಿದ್ದರೂ ಸಾಮಾನ್ಯ ಲೋಕನಂಬಿಕೆಯಲ್ಲಿ ಅದು ಸ್ವತಂತ್ರ ‘ಸತ್ತು’ ಎಂದು ದಾಖಲಾಗುವುದನ್ನು ಅಲ್ಲಮ ಬೆರಗಿನಿಂದ ಗಮನಿಸುತ್ತಾನೆ.
ಎಲ್ಲ ಸಂಗತಿಗಳೂ ಸ್ವತಂತ್ರ ಅಸ್ತಿತ್ವವಿಲ್ಲದವುಗಳಾದುದರಿಂದ ಮತ್ತೊಂದಕ್ಕೆ ಪ್ರಮಾಣವಾಗಲಾರವು. ಎಲ್ಲವೂ ಪ್ರತೀತ್ಯಸಮುತ್ಪನ್ನವೇ ಆಗಿವೆ. ಪ್ರತೀತ್ಯ ಎಂದರೆ ಅವಸ್ಥೆ ಎಂದರ್ಥ. ಅಂದರೆ ಲೋಕದಲ್ಲಿ ಸ್ವತಂತ್ರ ವಸ್ತುಗಳೆಂಬುವು ಇಲ್ಲ. ಅನೇಕ ಅವಸ್ಥೆಗಳು ಒಟ್ಟಾಗಿ ಮತ್ತೊಂದು ಅವಸ್ಥೆಯನ್ನು ಉಂಟುಮಾಡುತ್ತವೆ. ಆ ಅವಸ್ಥೆ ಕೂಡ ನಿರಂತರ ಬದಲಾಗುತ್ತಲೇ ಇರುತ್ತದೆ. ಅದನ್ನು ಅಲ್ಲಮ ಹೀಗೆ ವಿಶ್ಲೇಷಿಸುತ್ತಾನೆ.
ಪಂಚಭೂತ ಸಂಗದಿಂದ ಜ್ಯೋತಿಯಾಯಿತ್ತು
ಪಂಚಭೂತ ಸಂಗದಿಂದ ಕರ್ಪೂರವಾಯಿತ್ತು
ಈ ಎರಡರ ಸಂಯೋಗವೇನಾಯಿತ್ತು ಹೇಳಾ?
ವಾಜ್ಞ್ಮಕ್ಕತೀತ ಗುಹೇಶ್ವರ.
ವಸ್ತು ಪ್ರಪಂಚ ಸಂಗದಿಂದಾದುದು ಮತ್ತು ಹೀಗೆ ಉಂಟಾದ ಸಂರಚನೆಯಲ್ಲಿ ಶಾಶ್ವತ ಸತ್ತೆಂಬುದು ಇಲ್ಲವೆಂಬ ಸ್ಪಷ್ಟ ನಿಲುವನ್ನು ಈ ವಚನ ವ್ಯಕ್ತಪಡಿಸುತ್ತಿದೆ. ಲೋಕಪ್ರವಾಹದಲ್ಲಿ ಚಲಿಸಲು ಬೇಕಾದ ನಿರಂತರ ವರ್ತಮಾನವನ್ನು ಅಲ್ಲಮ ಎಚ್ಚರದಿಂದ ಕಾಯ್ದುಕೊಳ್ಳುತ್ತಾನೆ. ಸಾಮಾನ್ಯವಾಗಿ ಚಲನಶೀಲವಾದ ಪ್ರಕ್ರಿಯೆಯು ಶಾಶ್ವತವಾದ ನೈತಿಕತೆಯನ್ನು ತಳುಕು ಹಾಕಿಕೊಳ್ಳುತ್ತದೆ. ಆದರೆ ಅಲ್ಲಮ ಅಂತಹ ಶಾಶ್ವತ ನೈತಿಕತೆಯನ್ನು ತಳುಕು ಹಾಕಿಕೊಳ್ಳುವುದಿಲ್ಲ. ಚಲನಶೀಲತೆ ಸಾಮಾನ್ಯವಾಗಿ ಪ್ರಚೋದಿಸುವ ನೈತಿಕ ಮೌಲ್ಯಗಳಿಗೆ ಬೌದ್ಧಧರ್ಮ ತಳುಕು ಹಾಕಿಕೊಂಡರೆ ಅಲ್ಲಮ ಅಂತಹ ಶಾಶ್ವತ ಮೌಲ್ಯಗಳಾಚೆಗೆ ನಿಂತು ನೋಡುತ್ತಾನೆ. ಈ ಅಂಶವನ್ನು ಅನೇಕ ವಚನಗಳಲ್ಲಿ ಗುರುತಿಸಬಹುದು.
ಅರಿದ ಶರಣಂಗೆ ಆಚಾರವಿಲ್ಲ
ಆಚಾರವುಳ್ಳವಂಗೆ ಲಿಂಗವಿಲ್ಲ
ಲಿಂಗವಿಲ್ಲದ ಶರಣನ ಸುಳುಹು
ಜಗಕ್ಕೆ ವಿಪರೀತಚರಿತ್ರವದು ಪ್ರಕಟವಲ್ಲ ನೋಡಾ!
ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು
ಸಟೆಯ ಹಿಡಿದು, ದಿಟವ ಮರೆದು
ಇಲ್ಲದ ಲಿಂಗವನುಂಟೆಂದು ಪೂಜಿಸುವರಾಗಿ
ಆಚಾರವುಂಟು ಆಚಾರವುಳ್ಳವಂಗೆ ಗುರುವುಂಟು
ಗುರುವುಳ್ಳವಂಗೆ ಲಿಂಗವುಂಟು
ಲಿಂಗಪೂಜಕಂಗೆ ಭೋಗವುಂಟು ?
ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು
ಗೊಹೇಶ್ವರ ಲಿಂಗವು ಅಲ್ಲಿ ಇಲ್ಲವೆಂಬುದನು
ಈ ವೇಷಲಾಂಛನರೆತ್ತ ಬಲ್ಲರು ಹೇಳಾ ಸಂಗನ ಬಸವಣ್ಣ?
ಗೊಹೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ!
ಬೌದ್ಧ ಸಿದ್ಧರಿಗೆ ಮೂಲಮಾತೃಕೆಗಳಿಲ್ಲ, ಪಠ್ಯಾತ್ಮಕ ಕುಲದ ಸಂಕಲ್ಪವಿಲ್ಲ, ಸಿದ್ಧಾಂತ ತತ್ವಜ್ಞಾನವನ್ನು ನೀಡುವ ಸಂಕಲ್ಪವೂ ಇಲ್ಲ. ಇವೆಲ್ಲ ಅವರ ಸಹಜಯಾನಕ್ಕೆ ಭಂಗ ತರುವ ಸಂಗತಿಗಳಾಗಿ ಅವರಿಗೆ ತೊಡಕಾಗುತ್ತವೆಂದು ಗೊತ್ತು. ಹಾಗಾಗಿ ಅವರು ಯಾವುದನ್ನೂ ವಿಸರ್ಜಿಸದೆ ಬಿಡುವುದಿಲ್ಲ. ಈ ವಿಸರ್ಜನೆಯ ಒತ್ತಡ ಎಲ್ಲಿಂದ ಬಂತು? ಅವರಿಗೆ ಈ ತೊಡಕಿನ ಮೂಲ ಚಿತ್ತವೇ ಎಂಬುದು ಅರಿವಾದಾಗ ಅದನ್ನು ಸಮಾಧಾನದಿಂದಲೇ ಕಂಡುಕೊಂಡಿದ್ದಾರೆ. ಚಿತ್ತದ ಗುಣವೇ ಸಂಗ್ರಹ. ಅದು ಎಲ್ಲವನ್ನೂ ಒಟ್ಟುಮಾಡಿ ಬಳಸಲು ನೋಡುತ್ತದೆ. ಎಲ್ಲವನ್ನೂ ಬಿಟ್ಟು ನೋಡುವುದನ್ನು ಅದಕ್ಕೆ ಕಲಿಸುವುದೇ ಇಂತಹ ಅನುಭಾವಿಗಳಿಗೆ ಇರುವ ಸವಾಲು. ಇದು ಸಾಧಕರ ದಾರಿಯಾಗದೆ ಸಾಮಾನ್ಯರ ದಾರಿ ಕೂಡ ಆಗಲಿ ಎನ್ನುವುದೇ ಅವರು ನಮ್ಮೆಡನೆ ಮಾತಾಡಲು ಇರುವ ಅಕ್ಕರಾಸ್ತೆ. ಅವರಿಗೆ ಚಿತ್ತವೇ ತಾನು ಮತ್ತು ಇದಿರು. ಎರಡನ್ನೂ ಏಕೀಭವಿಸಿ, ನಿರಸನಗೊಳಿಸಿ, ಅಮನಸ್ಕಗೊಳಿಸುವುದರಲ್ಲಿಯೇ ಅವರಿಗೆ ಆಸಕ್ತಿ. ಅದಕ್ಕಾಗಿ ಅವರು ಚಿತ್ತವನ್ನು ಅದರ ಉತ್ತುಂಗಕ್ಕೇರಿಸಿ ಒಮ್ಮೆ ನೋಡೇಬಿಡೋಣ ಎಂದು ಹೊರಟವರು. ಅದನ್ನು ಅಲ್ಲಮನ ವಚನ ಹೀಗೆ ಮುಂದಿಡುತ್ತದೆ.
ಕೊಂಡ ಆಹಾರದ ರಸವ ಕಟ್ಟಿ ಯೋಗಿಗಳಾದೆವೆಂಬ
ಭಂಡರು ನೀವು ಕೇಳಿರೊ
ಜೋಡು ದೇಹದ ಮಲಿನವ ಕಟ್ಟಿ ಮಾಯೆಯ ಗೆದ್ದಿಹವೆಂಬರು!
ಬಿಂದುವಿನ ಸಂಚವನಿವರೆತ್ತ ಬಲ್ಲರು?
ಮನದ ಮಲಿನವೆ ಮಾಯೆ
ಮನದ ಸಂಚವೆ ಬಿಂದು
ಇಂತಪ್ಪ ಬಿಂದುವ ಕಟ್ಟಿ ಮಾಯೆಯ ಗೆಲಲರಿಯದವರು
ಅವರೆತ್ತಣ ಯೋಗಿಗಳು ಗುಹೇಶ್ವರಾ
ಚಿತ್ತದ ಗುಣವೇ ಸಂಗ್ರಹ. ಅದು ಎಲ್ಲವನ್ನೂ ಒಟ್ಟುಮಾಡಿ ಬಳಸಲು ನೋಡುತ್ತದೆ. ಎಲ್ಲವನ್ನೂ ಬಿಟ್ಟು ನೋಡುವುದನ್ನು ಅದಕ್ಕೆ ಕಲಿಸುವುದೇ ಇಂತಹ ಅನುಭಾವಿಗಳಿಗೆ ಇರುವ ಸವಾಲು. ಇದು ಸಾಧಕರ ದಾರಿಯಾಗದೆ ಸಾಮಾನ್ಯರ ದಾರಿ ಕೂಡ ಆಗಲಿ ಎನ್ನುವುದೇ ಅವರು ನಮ್ಮೆಡನೆ ಮಾತಾಡಲು ಇರುವ ಅಕ್ಕರಾಸ್ತೆ. ಅವರಿಗೆ ಚಿತ್ತವೇ ತಾನು ಮತ್ತು ಇದಿರು. ಎರಡನ್ನೂ ಏಕೀಭವಿಸಿ, ನಿರಸನಗೊಳಿಸಿ, ಅಮನಸ್ಕಗೊಳಿಸುವುದರಲ್ಲಿಯೇ ಅವರಿಗೆ ಆಸಕ್ತಿ. ಅದಕ್ಕಾಗಿ ಅವರು ಚಿತ್ತವನ್ನು ಅದರ ಉತ್ತುಂಗಕ್ಕೇರಿಸಿ ಒಮ್ಮೆ ನೋಡೇಬಿಡೋಣ ಎಂದು ಹೊರಟವರು.
ಅಲ್ಲಮಗುರುವಂತೂ ಮನೋಲಯವನ್ನು ಅದರ ತಾರ್ಕಿಕ ತುದಿ ಮತ್ತು ಅದರಾಚೆಗೂ ಕೊಂಡೊಯ್ದವನು. ಅವನಿಗೆ ಇದಿರೆಂಬುದು ಇಲ್ಲವಾದುದರಿಂದ ತಾನು ಎಂಬುದು ಉಂಟಾಗುವುದೇ ಇಲ್ಲ. ಲೋಕಾನುಭವಗಳು ತಮ್ಮನ್ನು ತಾವು ವಿಸರ್ಜಿಸಿಕೊಂಡೇ ಅಲ್ಲಮನೆದುರಿಗೆ ಬರುತ್ತವಾದ್ದರಿಂದ ಅವನಿಗೆ ಅವುಗಳನ್ನು ವಿಸರ್ಜಿಸಬೇಕಾದ ಪ್ರಮೇಯವೂ ಉಳಿಯುವುದಿಲ್ಲ.
ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೋ?
ಮನವ ಹಿಡಿದು ತಡೆದಿಹನೆಂಬವರ ಮರುಳಾಗಿ ಕಾಡಿತ್ತು ನೋಡಾ ಮನವು
ಮನವಿಕಲ್ಪಜ್ಞಾನದಿಂದರೆದು ಅದ ಶುದ್ಧವ
ಮಾಡಿಹೆನೆಂಬುದು ತಾನೆ ಮನ ನೋಡಾ!
ನಮ್ಮ ಗೊಹೇಶ್ವರಲಿಂಗದ ಅನುವನರೆದಿಹೆನೆಂಬವರು
ಮನವಿಲ್ಲದಿರಬೇಕು ನೋಡಾ, ಸಿದ್ಧರಾಮಯ್ಯ
ನೀನೆಂಬುದ ಧಿಃಕರಿಸಿ, ತಾನೆಂಬುದ ನಿಃಕರಿಸಿ
ಉಭಯಭಾವದಲ್ಲಿ ಸನ್ನಿಹಿತವಾಗಿರಬಲ್ಲಡೆ ಪರತಂತ್ರ !
ಸ್ವತಂತ್ರ ಪರತಂತ್ರವೆಂಬೆರಡನೂ ವಿವರಿಸದೆ
ತನ್ನ ಮರೆದಿಪ್ಪನೆ ಉಪಮಾತೀತನು!
ಗೊಹೇಶ್ವರನ ಶರಣರು ದೇಹವಿಲ್ಲದ ನಿರ್ದೇಹಿಗಳೆಂಬುದು
ಇಂದೆನಗೆ ಕಾಣಬಂದಿತ್ತು ನೋಡಾ, ಸಿದ್ಧರಾಮಯ್ಯ
ತಾನಲ್ಲ, ಇದಿರಲ್ಲ, ತಾನೂ ಇದಿರು
ಎರಡೂ ಹೌದು, ತಾನು ಇದಿರು ಎರಡೂ ಅಲ್ಲ- ಈ ಚತುಷ್ಕೋಟಿಯ ಮೀರಿ ಸುಮ್ಮನಿರಬಲ್ಲವನು, ಅದೂ ಸುಮ್ಮನಿದ್ದೇನೆ
ಎಂದುಕೊಳ್ಳದೆ ಸುಮ್ಮನಿರುವವನು ಶರಣನು !
ಇದು ಅಲ್ಲಮನ ಸಹಜಯಾನದ ಪರಿ!
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ