ಫೈಝ್ ಅಹ್ಮದ್ ಫೈಝ್ ಕವಿತೆಗಳು
ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್‌ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ಸದ್ಯ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉತ್ತಮ ಕನ್ನಡ, ಉರ್ದು ಲೇಖಕರೂ ಆಗಿರುವ ಎಲ್. ಕೆ. ಅತೀಕ್ ಅವರು ಖ್ಯಾತ ಕವಿ ಫೈಝ್ ಅಹ್ಮದ್ ಫೈಝ್ ಅವರ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇನ್ನು ಕೆಲದಿನ ಪ್ರಿಯೆ
ಇನ್ನು ಕೆಲದಿನ ಪ್ರಿಯೆ ಕೇವಲ ಕೆಲವೇ ದಿನ
ಅನಿವಾರ್ಯವಾಗಿದೆ ಬದುಕು ಹಿಂಸೆಯ ನೆರಳಲಿ
ಸಹಿಸೋಣ ಹಿಂಸೆಯ ಇನ್ನೂ ಸ್ವಲ್ಪಕಾಲ
ಪಿತ್ರಾರ್ಜಿತ ಬಳುವಳಿ ಇದು, ಅಸಹಾಯಕರಿದ್ದೇವೆ
ಸೆರೆಮನೆಯಲ್ಲಿದೆ ಶರೀರ, ಮನಸ್ಸಿಗೆ ಬೇಡಿ
ಬಂದಿಯಾಗಿದೆ ಚಿಂತನೆ, ಯೋಚನೆಗೆ ಸರಪಳಿ
ಆದರೂ ಬದುಕುತ್ತಿದ್ದೇವೆ, ನಮ್ಮ ಧೈರ್ಯ
ಬದುಕೇನು, ಆಗಿದೆ ತಿರುಕನ ಅಂಗಿ
ತಗಲುತ್ತಿದೆ ಪ್ರತಿ ಕ್ಷಣ ನೋವಿನ ತೇಪೆ
ದಬ್ಬಾಳಿಕೆಯ ದಿನಗಳು ಇರುವುವು ಕೆಲವು
ಸ್ವಲ್ಪ ತಾಳ್ಮೆ, ಅರಿಕೆಯ ದಿನಗಳು ಕೆಲವು
ಕಾಲದ ಬಿಸಿಯಲ್ಲಿ ಬೆಂದ ಬೀಡಲ್ಲಿ
ಬದುಕಬೇಕು ಆದರೆ ಹೀಗೆಯೆ ಅಲ್ಲ
ಅಪರಿಚಿತರ ಕೈಗಳಲ್ಲಿ ಅಪಾರ ಹಿಂಸೆ ಸಹಿಸಬೇಕಿಂದು ಶಾಶ್ವತವಾಗಲ್ಲ
ನಿನ್ನ ರೂಪಕ್ಕೆ ಅಂಟಿದ ಕಾಲದ ಧೂಳು
ನಮ್ಮ ಕೆಲದಿನಗಳ ಯವ್ವನದ ಸೋಲುಗಳು
ಬೆಳದಿಂಗಳ ರಾತ್ರಿಗಳ ವ್ಯರ್ಥ ಉರಿಯುತ್ತಿರುವ ನೋವು
ಎದೆಯ ನಿರುಪಯುಕ್ತ ಮಿಡಿತ ಶರೀರದ ಅಸಹಾಯಕ
ಕೂಗು ಇನ್ನು ಕೆಲದಿನ ಪ್ರಿಯೆ ಕೇವಲ ಕೆಲವೇ ದಿನ
ನಾಯಿಗಳು
ಭಿಕ್ಷೆಯ ಚಪಲದ ವರದಾನ ಪಡೆದ
ಬೀದಿಗಳಲ್ಲಿ ಕೆಲಸವಿಲ್ಲದೆ ಅಲೆಯುವ ಈ ನಾಯಿಗಳು
ಸಮಾಜದ ಉಪೇಕ್ಷೆಯೇ ಇವರ ವರಮಾನ
ಜಗದ ತಿರಸ್ಕಾರ ಇವರ ದುಡಿಮೆ
ರಾತ್ರಿ ವಿಶ್ರಾಮವಿಲ್ಲ ಹಗಲು ಸುಖವಿಲ್ಲ
ಕೊಳಚೆಯಲ್ಲಿ ಮನೆ, ಚರಂಡಿಗಳಲ್ಲಿ ವಾಸ
ಸಿಟ್ಟಿಗೆದ್ದರೆ ರೊಟ್ಟಿಯ ತುಂಡೊಂದನ್ನು ಚೂರು ಕಾಣಿಸಿ
ಇವರನ್ನು ಪರಸ್ಪರ ಹೊಡೆದಾಡಿಸಿ ಬಡಿದಾಡಿಸಿ
ಈ ಪ್ರತಿಯೊಬ್ಬರ ಕಾಲೊದೆಯನ್ನು ತಿನ್ನುವರು
ಈ ಹಸಿವಿನಿಂದ ಮಣಿದು ಸಾಯುವರು
ಈ ಶೋಷಿತ ಸಮುದಾಯ ತಲೆ ಎತ್ತಿದರೆ
ಮಾನವ ತನ್ನೆಲ್ಲ ಕಪಟತನ ಮರೆಯುವನು
ಇವರು ಬಯಸಿದರೆ ಪ್ರಪಂಚವನ್ನು ತಮ್ಮದಾಗಿಸಿಕೊಳ್ಳುವರು
ಇವರು ಮಾಲಕರ ಎಲುಬುಗಳನ್ನು ಅಗೆಯುವರು
ಯಾರಾದರೂ ಇವರಿಗೆ ಅವಮಾನದ ಅರಿವು ಮೂಡಿಸಿರಿ
ಯಾರಾದರೂ ಇವರ ಮಲಗಿದ ಬಾಲವನ್ನು ಅಲ್ಲಾಡಿಸಿರಿ
ಮಾತನಾಡು
ಮಾತನಾಡು, ಸ್ವತಂತ್ರವಾಗಿವೆ ನಿನ್ನ ತುಟಿಗಳು
ಮಾತನಾಡು, ನಿನ್ನ ನಾಲಿಗೆ ನಿನ್ನದೆ
ನಿನ್ನ ಗಟ್ಟಿ ದೇಹ ನಿನ್ನದೆ
ಮಾತನಾಡು, ನಿನ್ನ ಪ್ರಾಣ ಇನ್ನೂ ನಿನ್ನದಾಗಿದೆ
ನೋಡು ಕಮ್ಮಾರನ ಸಾಲೆಯಲ್ಲಿ
ಬಿಸಿಯಾಗಿದೆ ಕೆಂಡ, ಕೆಂಪಾಗಿದೆ ಉಕ್ಕು
ತೆರೆಯುತ್ತಿದೆ ಬೀಗಗಳ ದವಡೆ
ಹರಿಯುತ್ತಿದೆ ಸರಪಳಿಯ ಕೊಂಡಿ
ಮಾತನಾಡು, ಈ ಸ್ವಲ್ಪ ಸಮಯ ಬಹಳವಾಗಿದೆ
ದೇಹ ನಾಲಿಗೆಗಳ ಸಾವಿನ ಮುಂಚೆ
ಮಾತನಾಡು, ನಿಜ ಇನ್ನೂ ಬದುಕಿದೆ
ಮಾತನಾಡು, ಹೇಳುವುದೇನಿದೆ ಹೇಳು
ಎದ್ದಿದ್ದೇನೆ ಕಣ್ಣಲಿ ನಿನ್ನ ರೂಪ ತುಂಬಿ
ಅರಳಿದೆ ಪ್ರಕೃತಿ ನಿನ್ನ ಉಡುಪಿನಂತೆ
ಹಾದು ಬಂದಿದೆ ತಂಗಾಳಿ ನಿನ್ನ ಮನೆಯಿಂದ
ಘಮಘಮಿಸುತ್ತಿದೆ ನನ್ನ ಮುಂಜಾವು ನಿನ್ನ ಮೈಯಂತೆ
ಹೆದ್ದಾರಿ
ಮಂಕುಕವಿದ ದೂರ ಹೊರಟ ಒಂದು ಹೆದ್ದಾರಿ
ದೂರ ಸ್ಥಿತಿಜದ ಮೇಲೆ ತನ್ನ ದೃಷ್ಟಿ
ಶೀತಲ ಮಣ್ಣಿನ ಮೇಲೆ ತನ್ನ ಎದೆಯ
ಕಪ್ಪುಗಣ್ಣಿನಂಥ ಸೌಂದರ್ಯ ಹಾಸಿದೆ
ತನ್ನ ಬರಡು ಬೀಡಲ್ಲಿ ಕಲ್ಪನೆಗಳಲ್ಲಿ ತಲ್ಲೀನ
ಪ್ರಿಯತಮೆಯ ಸಮ್ಮಿಲನದ ಕನಸುಗಳಲಿ
ಮೈಮನಸ ಆಯಾಸ ಅಂಗಾಂಗಗಳ ದಣಿವಿ
ನಿಂದ ಸೋತ ಒಬ್ಬ ನೊಂದ ಹೆಂಗಸಿನಂತೆ
ಸ್ವಾತಂತ್ರದ ಮುಂಜಾವು ಆಗಸ್ಟ್ 1947
ಈ ಶಲಕಲೆಯ ಬೆಳಕು, ಈ ಮುಸುಕಿನ ಮುಂಜಾವು
ಯಾವುದರ ನಿರೀಕ್ಷೆ ಇದ್ದರೂ, ಇದು ಆ ಮುಂಜಾವು ಅಲ್ಲ
ನಾವು ಗೆಳೆಯರು ಪಡೆಯ ಹೊರಟ
ಎಲ್ಲಾದರೂ ಸಿಗುವುದೆಂಬ ಅಪೇಕ್ಷಿತ ಮುಂಜಾವು ಇದಲ್ಲ
ಆಕಾಶದ ವಿಸ್ತಾರದಲ್ಲಿ ನಕ್ಷತ್ರಗಳ ಕೊನೆಯ ಗುರಿ
ಎಲ್ಲಾದರೂ ಇರುವುದು ರಾತ್ರಿಯ ದಣಿದ ತೆರೆಗಳಿಗೆ ತೀರ
ಎಲ್ಲಿಯಾದರು ಹೋಗಿ ನಿಲ್ಲುವುದು ಹೃದಯದ ದುಃಖದ ಹಡಗು
ಬಿಸಿ ರಕ್ತದ ಗೆಳೆಯರು ಮಾಟಗಳ ರಾಜಬೀದಿಗಳಲ್ಲಿ
ಹೊರಟಾಗ ತಡೆದವದೆಷ್ಟು ಕೈಗಳು
ಸುಂದರ ನಗರಿಯ ತಾಳೆಗೆಟ್ಟ ಶಯನ ಗೃಹಗಳಿಂದ
ಕೂಗುತ್ತಿದ್ದವು ತೋಳುಗಳು, ಕರೆಯುತ್ತಿದ್ದವು ದೇಹಗಳು
ಆದರೆ ಪ್ರಿಯವಾಗಿತ್ತು ಅವರಿಗೆ ಮುಂಜಾವಿನ ಗುರಿಯ ಗುಂಗು
ಬಹಳ ಹಿತವಾಗಿತ್ತು ಬೆಳಕಿನ ಸುಂದರಿಯರ ಸೆರಗು
ಉಬ್ಬಿ ಉಬ್ಬಿದ ಬಯಕೆ ಕುಗ್ಗಿ ಕುಗ್ಗಿದ ಆಯಾಸ
ಕೇಳಿದ್ದೇನೆ, ಬೆಳಕು ಮತ್ತು ಕತ್ತಲು ಅಗಲಿವೆ ಎಂದು
ಕೇಳಿದ್ದೇನೆ, ದಾರಿ ಮತ್ತು ಗುರಿಗಳ ಸಮ್ಮಿಲನವಾಯಿತೆಂದು
ಜನ ನಾಯಕರ ನೀತಿಗಳು ಬದಲಾಗಿವೆಯಂತೆ
ಸಮ್ಮಿಲನದ ಗುರಿ ಒಪ್ಪಿತ ವಿರಹದ ಗುರಿ ಖಂಡನಾರ್ಹ
ಹೃದಯದ ಬೆಂಕಿ ಕಣ್ಣಿನ ಬಯಕೆ ಎದೆಯ ಉರಿ
ಯಾರಿಗೂ ಮಿಲನದ ಸುಖ ದಕ್ಕಲಿಲ್ಲ
ಎಲ್ಲಿಂದ ಬಂತು ಮುಂಜಾವಿನ ತಂಗಾಳಿ ಹೋಯಿತು ಎಲ್ಲಿಗೆ
ಈಗಲೂ ಬೀದಿ ದೀಪಕ್ಕೆ ಸುದ್ದಿಯೇ ಇಲ್ಲ
ಇನ್ನೂ ರಾತ್ರಿಯ ಗಾಢತೆ ಕಡಿಮೆಯಾಗಲಿಲ್ಲ
ಕಣ್ಣು ಮತ್ತು ಹೃದಯಗಳ ವಿಮೋಚನೆಯ ಕಾಲ ಸನ್ನಿಹಿತವಾಗಿಲ್ಲ
ನಡೆಯಿರಿ, ಸಾಗಿರಿ, ಆ ಗುರಿ ಇನ್ನೂ ದಕ್ಕಿಲ್ಲ.