ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
ಕವನಗಳು

ಜ್ಯೋತಿ ಗುರುಪ್ರಸಾದ್
ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಹಾಗೂ ಕನ್ನಡ ಮುಕ್ತ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಮಾಡಿರುವ ಜ್ಯೋತಿ ಗುರುಪ್ರಸಾದ್ ಹಲವು ಕಾಲೇಜುಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಕನ್ನಡ ಕವಯತ್ರಿಗಳಲ್ಲಿ ಪ್ರಮುಖರಾಗಿ ಗುರುತಿಸಲ್ಪಡುತ್ತಿರುವ ಜ್ಯೋತಿ ಗುರುಪ್ರಸಾದ್ ಅವರ ಚುಕ್ಕಿ ಕವನ ಸಂಕಲನಕ್ಕೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರತಿಷ್ಠಿತ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ದೊರಕಿದೆ. ಇದೇ ಸಂಕಲನಕ್ಕೆ ಗುಲ್ಬರ್ಗಾದ ‘ಅಮ್ಮ’ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿಯೂ ಸಂದಿರುವುದು ಕೃತಿಯ ಯಶಸ್ವಿಯನ್ನು ಹೇಳುತ್ತದೆ.
ದಾರಿ
ಭಯ ಕಳೆದರೆ ಮಾತ್ರ ಧೈರ್ಯ
ಮೂಡುವುದು
ಕಣ್ಬಿಟ್ಟಾಗಲಿಂದ ಕಿವಿ ತೆರೆದಾಗಲಿಂದ
ಆಲಿಸಿದ ಅಪ್ಪ ಅಮ್ಮನ ದನಿ ಕೇಳಿದರೆ ಮಾತ್ರ
ಮಗುವಿನ ಮನ ಅರಳುವುದು
ಮಿಮಿಕ್ರಿ ಮುದ ನೀಡುವುದು ಸಹ
ವೇದಿಕೆಯಲ್ಲಿ ಕಲಾವಿದ ವಿನೋದಾವಳಿ
ಮಾಡಿದಾಗ
ಎದುರಿಗೆ ಬಾರದೆ ಅವಿತು ಕೂತವರು
ಹೊರಡಿಸುವ ಯಾವುದೇ ಧ್ವನಿ
ಭಯ ಹುಟ್ಟಿಸುವುದು
ಸಹಜತೆಗೆ ಹತ್ತಿರ ಬಾರದಾದಾಗ
ಮೂಲಕ್ಕೂ ಈ ಕ್ಷಣಕ್ಕೂ ತಾಳೆಯಾಗದಾಗ
ಹೆಜ್ಜೆ ಕಲಿತು ನಡೆಯುವ ಮಗುವಿಗೆ
ನಡೆಯಲು ದಾರಿ ಬೇಕು ಬೆಳಕು ಬೇಕು
ಯಾವುದೇ ಯೋಗಾಸದ ಮಂತ್ರ ಬೇಡ
--------------------------------------------
ಆಳದ ಕರುಣೆ
ಪ್ರತಿಬಾರಿ ಕುಸಿಯುವಾಗಲೂ
ಈ ದುರಿತಕಾಲದಲ್ಲಿ ಮತ್ತೆ ಮೇಲೇರಲು
ಬಹಳ ಕಷ್ಟಪಟ್ಟಿದ್ದೇನೆ
ಪಾಚಿನೆಲ ಮಳೆಗಾಲ
ಎಚ್ಚರದಿಂದ ಹೆಜ್ಜೆ ಊರಿದರೂ
ಯಾಮಾರಿಸುತ್ತಿರುತ್ತದೆ
ಎದೆ ಹಾರಿ ಬಾಯಾರುವ ಗಳಿಗೆ
ಕಣ್ಣು ಕತ್ತಲಿಟ್ಟಿದೆ ಆದರೂ ಜ್ಯೋತಿ
ಬೆಳಗುವುದು ನಿಲ್ಲದೆ ಉರಿಯುವುದು
ಪರಮಾಶ್ಚರ್ಯ
ನಿಂತಾಗ ಇನ್ನು ಸಂದೇಶವೆಲ್ಲಿರುವುದು
ನೆಲದ ಪಾಚಿಗಿಂತ ಘೋರ
ಮನುಷ್ಯನ ಶೀತಲ ಕ್ರೌರ್ಯ
ಆಳದ ಕರುಣೆಯ ನಂಬಿದ್ದೇನೆ
ನೆಲಕ್ಕೆ ಸುಣ್ಣ ಬಳಿದರೆ
ಹೇಳಿದ ಮಾತು ಕೇಳುತ್ತದೆ ಪಾಚಿ ನೆಲ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ