ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
ಕಥಾ ಸಂಗಮ
ಒಂದು ಮಸೀದಿಯ ಕಥೆ

ಬ್ಯಾರಿ, ಕನ್ನಡ, ತುಳು ಮೂರುಭಾಷೆಗಳಲ್ಲೂ ಕೈಯಾಡಿಸಿರುವಮುಹಮ್ಮದ್ ಕುಳಾಯಿಯವರು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಥೆಗಾರರು, ಕಾದಂಬರಿಗಾರರು. ‘ಕಾಡಂಕಲ್‌ಲ್ ಮನೆ’ ಇವರ ಜನಪ್ರಿಯ ಕಾದಂಬರಿ. ಇವರ ‘ಮಿತ್ತ ಬೈಲು ಯಮುನಕ್ಕ’ ಅನುವಾದಿತ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ದೊರಕಿದೆ. ಇವರಿಗೆ ದೊರಕಿರುವ ಲಂಕೇಶ್ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ನಿರತ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಪ್ರಶಸ್ತಿಗಳೇ ಇವರ ಸಾಹಿತ್ಯ ಬರಹಗಳ ಹಿರಿಮೆಗಳನ್ನು ಹೇಳುತ್ತವೆ. ‘ಕದನ ಕುತೂಹಲ’, ‘ಕುಚ್ಚ್ಚಿ ಕಾಡಿನ ಕಪ್ಪು ಹುಡುಗ’, ‘ನನ್ನ ಇನ್ನಷ್ಟು ಕತೆಗಳು’, ‘ರಂಗನೋ ಮಲೆ ಮಂಗನೋ’ (ಅನುವಾದ), ‘ಪೆರ್ನಾಲ್’ ಬ್ಯಾರಿ ಕಥಾ ಸಂಕಲನ ಇತರ ಕೃತಿಗಳು. ಬ್ಯಾರಿ ಭಾಷೆಯಲ್ಲಿ ‘ಅರೇಬಿಯನ್ ನೈಟ್ಸ್’ ಕಥೆಗಳನ್ನು ತಂದ ಹೆಗ್ಗಳಿಕೆ ಇವರದು.
ಮುಹಮ್ಮದ್ ಕುಳಾಯಿ
ಅದೊಂದು ನಗರ. ನಗರವೆಂದರೆ ದೊಡ್ಡ ನಗರವೇನೂ ಅಲ್ಲ, ಚಿಕ್ಕ ನಗರವೂ ಅಲ್ಲ. ಅಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಕೆಎಸ್ಸಾರ್ಟಿಸಿಯ ದೊಡ್ಡ ಬಸ್ ನಿಲ್ದಾಣ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಹೆಸರಾಂತ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು, ಹಲವಾರು ದೇವಸ್ಥಾನ, ಚರ್ಚ್, ಮಸೀದಿಗಳು ಎಲ್ಲವೂ ಇವೆ. ಹಲವಾರು ಪ್ರೇಕ್ಷಣೀಯ ಸ್ಥಳಗಳೂ ಇವೆ.
ಇಲ್ಲಿಯ ರೈಲು ನಿಲ್ದಾಣದಲ್ಲಿ ಇಳಿದು ಗೇಟಿನ ಹೊರಗೆ ಬಂದು ಎಡಕ್ಕೆ ತಿರುಗಿ ಕಾಂಕ್ರಿಟ್ ರಸ್ತೆಯಲ್ಲಿ ಸುಮಾರು 1/2 ಕಿ.ಮೀ.ನಷ್ಟು ನಡೆದರೆ ಒಂದು ಸುಂದರ, ದೊಡ್ಡ, ಭವ್ಯ, ಆಕರ್ಷಕ ಮಸೀದಿ ಸಿಗುತ್ತದೆ. ಈ ನಗರಕ್ಕೆ ಬಂದ ಪ್ರವಾಸಿಗರು ಯಾರೂ ಈ ಮಸೀದಿಯನ್ನೊಮ್ಮೆ ನೋಡದೆ ಹಿಂದಿರುಗುವುದಿಲ್ಲ. ಬಿಳಿ ಬಣ್ಣ ಬಳಿದು ಶಿಲೆ ಕಲ್ಲಿನಿಂದ ಕೆತ್ತಲ್ಪಟ್ಟಂತೆ ಜಗಜಗಿಸುವ ಈ ಮಸೀದಿಯ ನೆತ್ತಿಯಲ್ಲಿ ದೊಡ್ಡ ಗುಂಬಝ್. ಅದರ ಪಕ್ಕದಲ್ಲೇ ಆಕಾಶಕ್ಕೆ ತಲೆಕೊಟ್ಟು ನಿಂತಿರುವ ಎರಡು ಮಿನಾರಗಳು. ಅದರ ಬುಡದಲ್ಲೇ ಅದರ ಮರಿಗಳೇನೋ ಎಂಬಂತೆ ಮತ್ತೆರಡು ಪುಟ್ಟ ಮಿನಾರಗಳು. ಈ ಮಸೀದಿಯಲ್ಲಿ ಒಮ್ಮೆಗೆ ಸುಮಾರು ಐದು ಸಾವಿರ ಮಂದಿಗೆ ಸಾಮೂಹಿಕ ನಮಾಝ್ ನಿರ್ವಹಿಸುವಷ್ಟು ಸ್ಥಳಾವಕಾಶವಿದೆ. ವಿಮಾನ, ಬಸ್ಸು, ರೈಲಿನಲ್ಲಿ ಬರುವ ಪ್ರವಾಸಿಗರು, ವ್ಯಾಪಾರಿಗಳು ನಮಾಝಿಗೆಂದು ಬಂದರೆ ಅವರಿಗೆ ಸ್ನಾನ ಮಾಡಲು, ಬಟ್ಟೆ ಬದಲಿಸಲು ಮಸೀದಿಯ ಪಕ್ಕದಲ್ಲೇ ಪ್ರತ್ಯೇಕವಾಗಿ ಬಚ್ಚಲು ಮನೆ, ಪಾಯಿಖಾನೆ ಎಲ್ಲವೂ ಇದೆ. ಮಹಿಳೆಯರಿಗೆ ನಮಾಝ್‌ಗೆ ಪ್ರತ್ಯೇಕ ಸ್ಥಳಾವಕಾಶವಿದೆ. ಇಡೀ ನಗರಕ್ಕೆ ಕಳೆ ಕಟ್ಟಿದಂತಿರುವ ಈ ಮಸೀದಿ ಇತ್ತೀಚೆಗೆ ಅಂದರೆ ಐದು ವರ್ಷಗಳಷ್ಟು ಹಿಂದೆ ಕಟ್ಟಿಸಿದ್ದು. ನಾನು ಹೇಳ ಹೊರಟಿರುವುದು ಈ ಮಸೀದಿಯ ಕಥೆ.
ಐದು ವರ್ಷಗಳ ಹಿಂದೆ ಈ ಭವ್ಯ ಮಸೀದಿ ಇರುವ ಜಾಗದಲ್ಲಿ ಒಂದು ಪುರಾತನ ಪುಟ್ಟ ಮಸೀದಿ ಇತ್ತು. ಇದು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂಬುದು ಪ್ರತೀತ. ಹಾಗೆಯೇ ಅದಕ್ಕೆ ಸುಲ್ತಾನ್ ಮಸೀದಿ ಎಂದು ಹೆಸರೂ ಇತ್ತು. ಈ ಮಸೀದಿಯ ಸುತ್ತಲೂ ಮಣ್ಣಿನ ಗೋಡೆ. ಮಸೀದಿಯ ಒಳಗೆ ಹೋಗಲು ಪುಟ್ಟ ಬಾಗಿಲು. ಪುಟ್ಟ ಪುಟ್ಟ ಕಿಟಕಿಗಳು. ಕಂಬದಂತೆ ಕಾಣುವ ಒಂದು ಪುಟ್ಟ ಮಿನಾರ. ಸುಮಾರು ಎರಡು ಎಕರೆ ಜಾಗದ ಮಧ್ಯೆ ಇದ್ದ ಈ ಪುರಾತನ ಮಸೀದಿ ಹೊರಗಿನಿಂದ ನೋಡುವವರಿಗೆ ಒಂದು ಸಾಮಾನ್ಯ ಮಣ್ಣಿನ ಕಟ್ಟಡದಂತೆ ಕಾಣುತ್ತಿತ್ತು. ಆದರೆ ಅದರ ಒಳಗೆ ಹೊಕ್ಕರೆ ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತಿತ್ತು. ಯಾವುದೋ ಒಂದು ಗುಹೆಯೊಳಗೆ ಹೊಕ್ಕಂತೆ.ಅದರ ಸೌಂದರ್ಯ, ಆಕರ್ಷಣೆಗೆ ಹೃದಯದಲ್ಲಿ ಭಕ್ತಿಯ ಭಾವ ಉಕ್ಕಿ ನಮ್ಮನ್ನೇ ನಾವು ಮರೆತುಬಿಡುತ್ತಿದ್ದೆವು. ಒಳಗೆ ಕಾಲಿಡುತ್ತಿದ್ದಂತೆಯೇ ಎಡಗಡೆ ಪುಟ್ಟ ಕೊಳದಂತಿರುವ ನೀರಿನ ತೊಟ್ಟಿ. ಅದರ ಸುತ್ತ ಅಂಗಸ್ನಾನ ಮಾಡಲು ಕುಳಿತುಕೊಳ್ಳಲು ಸ್ಟೂಲ್‌ನಂತಹ ಕಲ್ಲಿನ ಆಸನಗಳು. ನೆಲ ತುಂಬಾ ಹಾಸಿದ ಈಚಲು ಚಾಪೆಗಳು. ಎಲ್ಲಕ್ಕಿಂತ ಆಕರ್ಷಣೆ ಎಂದರೆ ಬೀಟೆ ಮರದಿಂದ ಕೆತ್ತನೆ ಮಾಡಿದ ದೊಡ್ಡ ವೇದಿಕೆಯಂತಿರುವ ನಮಾಝ್ ಮಾಡುವ ಸ್ಥಳ. ಸುತ್ತ ದೊಡ್ಡ ದೊಡ್ಡ ಕಂಬಗಳು. ಅದು ನೆಲದಿಂದ ಸುಮಾರು ಎರಡು ಅಡಿಯಷ್ಟು ಎತ್ತರವಿತ್ತು. ಅದಕ್ಕೆ ಹತ್ತಲು ಎಡ-ಬಲ ಎರಡು ಕಡೆ ಮೆಟ್ಟಿಲುಗಳು. ಆಧಾರವಾಗಿ ಹಿಡಿಯಲು ಸುತ್ತ 5-6 ಕಡೆ ದಪ್ಪ ಹುರಿ ಹಗ್ಗವನ್ನು ಗಂಟು ಹಾಕಿ ಇಳಿಬಿಡಲಾಗಿತ್ತು. ವೇದಿಕೆಯ ಮೇಲೆಯೇ ಪ್ರವಚನ(ಖುತ್ಬಾ) ನೀಡುವ ಮಿಂಬರ್. ಸುಮಾರು ನೂರು ಜನ ಆ ವೇದಿಕೆಯ ಮೇಲೆ ಸಾಮೂಹಿಕ ನಮಾಝ್ ನಿರ್ವಹಿಸಬಹುದಾಗಿತ್ತು. ಶುಕ್ರವಾರದ ಜುಮಾ, ಹಬ್ಬದ ದಿನಗಳಂದು ವೇದಿಕೆ ತುಂಬಿ, ಅದರ ಎಡ, ಬಲ ಹಾಗೂ ಮುಂದೆ ನೆಲದ ಮೇಲೆ ನಮಾಝ್ ನಿರ್ವಹಿಸುತ್ತಿದ್ದರು. ವೇದಿಕೆಯ ಸುತ್ತ ಗೂಡು ದೀಪದಂತಹ ಪುರಾತನ ಲಾಟೀನಿನಂತೆ ಕಾಣುವ ನೇತಾಡಿಸಿದ 5-6 ದೀಪಗಳು. ಅರೇಬಿಯನ್ ಶೈಲಿಯ ಕೆತ್ತನೆಗಳಿಂದ ಕೂಡಿದ ಆ ವೇದಿಕೆ ಎಂತಹವರನ್ನೂ ಒಮ್ಮೆ ನಿಂತು ನೋಡುವಂತೆ ಮಾಡುತ್ತಿತ್ತು. ಕಣ್ಣು ಮುಚ್ಚಿ ಒಮ್ಮೆ ಎಲ್ಲವನ್ನೂ ಹೀರಿ ಬಿಡಬೇಕು ಎನ್ನುವಂತಹ ಹಿತವಾದ ಅತ್ತರಿನ ಸುವಾಸನೆ. ಹೀಗೆ ಆ ಪುರಾತನ ಮಸೀದಿಯನ್ನು ಒಮ್ಮೆ ಹೊಕ್ಕರೆ ಎಂತಹವರನ್ನೂ ಆಕರ್ಷಿಸಿ ಮನಸ್ಸಿಗೆ ಮುದ ಕೊಡುತ್ತಿತ್ತು.
ಆ ಮಸೀದಿಯನ್ನು ನಡೆಸಿಕೊಂಡು ಬರಲು ಒಂದು ಸಮಿತಿ ಇತ್ತು. ಅದರಲ್ಲಿ ನಗರದ ಶ್ರೀಮಂತರು, ವ್ಯಾಪಾರಿಗಳೇ ಹೆಚ್ಚಾಗಿ ಸದಸ್ಯರಾಗಿದ್ದರು. ಕೆಲವರಿಗೆ ಹಲವು ವರ್ಷಗಳಿಂದಲೂ ಈ ಪುರಾತನ ಮಸೀದಿಯನ್ನು ಒಡೆದು ಅಲ್ಲೊಂದು ಸುಂದರ, ಭವ್ಯ ಮಸೀದಿಯನ್ನು ಕಟ್ಟಿಸಬೇಕು ಅಥವಾ ಆ ಮಸೀದಿಯ ಪಕ್ಕದಲ್ಲೇ ಇನ್ನೊಂದು ದೊಡ್ಡ ಮಸೀದಿಯನ್ನು ನಿರ್ಮಿಸಬೇಕು ಎಂಬ ಆಸೆ ಇತ್ತು. ಒಂದು ಮಸೀದಿಯ ಪಕ್ಕದಲ್ಲಿ ಇನ್ನೊಂದು ಮಸೀದಿಯನ್ನು ಕಟ್ಟಲು ಅವಕಾಶ ಇಲ್ಲ ಎಂದು ಕೆಲವರು ತಿಳಿದವರು ಹೇಳುತ್ತಾ ಬಂದಿದ್ದರು. ಆದರೆ ಈ ಸಮಿತಿಯಲ್ಲಿರುವ ಕೆಲವರು ಇಷ್ಟೊಂದು ಪುರಾತನ, ಸುಂದರ ಮಸೀದಿಯನ್ನು ಯಾವ ಕಾರಣಕ್ಕೂ ಒಡೆಯುವುದು ಬೇಡ, ಇನ್ನು ಕೆಲವರು ಇದೊಂದು ಬೆಳೆಯುತ್ತಿರುವ ನಗರ, ಇಲ್ಲಿ 2-3 ಸಾವಿರ ಮಂದಿ ಏಕಕಾಲಕ್ಕೆ ಸಾಮೂಹಿಕ ನಮಾಝ್ ನಿರ್ವಹಿಸುವ ಮಸೀದಿಯ ಅಗತ್ಯ ಇದೆ. ಇಲ್ಲಿ ಒಂದು ಭವ್ಯ ಮಸೀದಿಯನ್ನು ಕಟ್ಟಲೇಬೇಕು ಎಂದು ವಾದಿಸುತ್ತಲೇ ಬಂದಿದ್ದರು. ಹೀಗೆ ಈ ಯೋಜನೆ ಮುಂದೂಡುತ್ತಲೇ ಇತ್ತು. ವರ್ಷಗಳು ಕಳೆದು ಕಮಿಟಿಯ ಅಧ್ಯಕ್ಷರು, ಸದಸ್ಯರು ಬದಲಾಗುತ್ತಿದ್ದಂತೆಯೇ ಈ ಬೇಡಿಕೆ ಹೆಚ್ಚಾಗತೊಡಗಿತು. ಗಲ್ಫ್ ದೇಶಗಳಲ್ಲಿರುವ ಮನೆಯವರು ಸಮಿತಿಯ ಸದಸ್ಯರಾದ ಮೇಲಂತೂ ಈ ಬೇಡಿಕೆ ತಾರಕಕ್ಕೇರಿತು. ಇಲ್ಲೊಂದು ದೊಡ್ಡ ಮಸೀದಿ ಕಟ್ಟಲೇಬೇಕು ಎಂಬ ಒತ್ತಾಯ ಹೆಚ್ಚಾಗತೊಡಗಿತು. ಆಗ ಮಸೀದಿ ಸಮಿತಿಯ ಅಧ್ಯಕ್ಷರು ಒಂದು ವಿಶೇಷ ಸಭೆಯನ್ನು ಕರೆದರು.
ಅಂದಿನ ಸಭೆಯಲ್ಲಿ ಸಮಿತಿಯ ಎಲ್ಲ ಸದಸ್ಯರು ಹಾಜರಿದ್ದರು. ಎಲ್ಲರಿಗೂ ಕುತೂಹಲ. ಹಳೇ ಮಸೀದಿ ಒಡೆಯಲು ಬಿಡಬಾರದು, ಬೇಕಾದರೆ ಅದರ ಪಕ್ಕದಲ್ಲೇ ಇನ್ನೊಂದು ದೊಡ್ಡ ಮಸೀದಿ ಕಟ್ಟೋಣ ಎಂದು ಕೆಲವರು ಹಠ ತೊಟ್ಟಂತಿದ್ದರು. ಇನ್ನು ಕೆಲವರು ಏನೇ ಆಗಲಿ ಇಂದು ಒಂದು ತೀರ್ಮಾನ ಆಗಲೇಬೇಕು. ಈ ನಗರದಲ್ಲಿ ಒಂದು ಸುಂದರ, ಭವ್ಯ, ಸುಸಜ್ಜಿತ ಮಸೀದಿಯನ್ನು ಕಟ್ಟಬೇಕು. ರಾಜ್ಯದಲ್ಲಿ ಎಲ್ಲಿಯೂ ಇಂತಹ ಮಸೀದಿ ಇರಬಾರದು, ಅಂತಹ ಮಸೀದಿ ಕಟ್ಟಿಯೇ ಸಿದ್ಧ ಎಂಬ ತೀರ್ಮಾನಕ್ಕೆ ಬಂದವರಂತೆ ಸಿದ್ಧವಾಗಿ ಬಂದಿದ್ದರು. ಸಭೆ ಪ್ರಾರಂಭವಾಯಿತು. ಒಬ್ಬೊಬ್ಬರಾಗಿ ಎದ್ದು ನಿಂತು ತಮ್ಮ ಅಭಿಪ್ರಾಯ ಹೇಳತೊಡಗಿದರು. ಹೀಗೆ ಮಸೀದಿ ಒಡೆಯುವುದು ಮತ್ತು ಬೇಡ ಎಂಬ ಎರಡು ಗುಂಪುಗಳು ಸೃಷ್ಟಿಯಾದವು. ಚರ್ಚೆ, ಮಾತು ಮುಗಿದು ಯಾವುದೇ ತೀರ್ಮಾನಕ್ಕೆ ಬರಲು ಅಧ್ಯಕ್ಷರಿಗೆ ಸಾಧ್ಯವಾಗದಾಗ ಮಸೀದಿಯ ಗುರುಗಳನ್ನು ಕರೆಯಲಾಯಿತು. ಅವರು ಬಂದು ‘‘ಒಂದು ಮಸೀದಿಯ ಪಕ್ಕದಲ್ಲೇ ಇನ್ನೊಂದು ಮಸೀದಿಯನ್ನು ಕಟ್ಟಲು ಧರ್ಮದಲ್ಲಿ ಅವಕಾಶವಿಲ್ಲ. ಇನ್ನೂ ಒಂದು, ಹಳೇ ಮಸೀದಿಯನ್ನು ಒಡೆದರೆ ಅದರ ಮಣ್ಣು, ಕಲ್ಲು, ಅವಶೇಷಗಳನ್ನು ಹೊರಗೆಲ್ಲೂ ಸಾಗಿಸಿ ಸುರಿಯಬಾರದು. ಅದನ್ನು ನೂತನ ಮಸೀದಿಗೇ ಉಪಯೋಗಿಸಬೇಕು. ಹಾಗೆಯೇ ಒಡೆದ ಮಸೀದಿಯ ಕಿಟಕಿ, ಬಾಗಿಲು, ಇತರ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಅದನ್ನು ಹೊಸ ಮಸೀದಿಗೆ ಉಪಯೋಗಿಸಬೇಕು ಅಥವಾ ಯಾವುದಾದರೂ ಮಸೀದಿಯ ಜೀರ್ಣೋದ್ಧಾರ ಮಾಡುವವರಿಗೆ ದಾನವಾಗಿ ನೀಡಬೇಕು’’ ಎಂದು ಹೇಳಿ ಎರಡು ಗುಂಪಿನ ಮಧ್ಯೆಯೂ ಗುರುತಿಸಿಕೊಳ್ಳಲು ಇಷ್ಟಪಡದೆ ಅಲ್ಲಿಂದ ಎದ್ದು ಹೋದರು. ಕೊನೆಗೂ ಸಮಿತಿಯ ಸದಸ್ಯರೆಲ್ಲ ಒಂದು ಒಮ್ಮತದ ತೀರ್ಮಾನಕ್ಕೆ ಬಂದು, ಹಳೆ ಮಸೀದಿಯನ್ನು ಒಡೆದು ಅದೇ ಜಾಗದಲ್ಲಿ ಒಂದು ಹೊಸ ಮಸೀದಿಯನ್ನು ಕಟ್ಟುವುದು ಎಂದು ತೀರ್ಮಾನಿಸಿದರು. ಸಮಿತಿಯಲ್ಲಿದ್ದ ಶ್ರೀಮಂತರಿಗಂತೂ ಖುಷಿಯೋ ಖುಷಿ. ಎಷ್ಟು ಖರ್ಚಾದರೂ ಪರವಾಗಿಲ್ಲ, ಒಂದು ಸುಂದರ, ಭವ್ಯ ಮಸೀದಿಯನ್ನೇ ಕಟ್ಟಬೇಕು ಎಂದು ಹೇಳಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು. ಬಳಿಕ ಮಸೀದಿ ನಿರ್ಮಾಣ ಸಮಿತಿಯೊಂದನ್ನು ರಚಿಸಿ ಅಂದಿನ ಸಭೆಯನ್ನು ಬರ್ಖಾಸ್ತುಗೊಳಿಸಲಾಯಿತು.
ಮಸೀದಿ ನಿರ್ಮಾಣ ಸಮಿತಿಯಲ್ಲಿ ನಗರದ ಶ್ರೀಮಂತರು, ದೊಡ್ಡ ದೊಡ್ಡ ಉದ್ಯಮಿಗಳು, ಗಲ್ಫ್ ದೇಶಗಳಲ್ಲಿ ದುಡಿಯುವ ಕೆಲವು ಯುವಕರೇ ಹೆಚ್ಚಾಗಿದ್ದರು. ಮೊದಲ ಸಭೆಯಲ್ಲಿಯೇ ಎಲ್ಲರಿಂದಲೂ ದೇಣಿಗೆಗಳು ಹರಿದು ಬಂದವು. ಗಲ್ಫ್ ದೇಶದಲ್ಲಿರುವ ಯುವಕರಂತೂ ನಾವು ಇಡೀ ಗಲ್ಫ್ ಸುತ್ತಿ ದೇಣಿಗೆ ಸಂಗ್ರಹಿಸಿ ಕೊಡುವುದಾಗಿ ಮಾತು ಕೊಟ್ಟರು. ಸಭೆಯ ಕೊನೆಯಲ್ಲಿ ಮಸೀದಿಯ ವಿನ್ಯಾಸದ ಬಗ್ಗೆ ಬಹಳಷ್ಟು ಚರ್ಚೆಯಾಯಿತು. ಆಗ ಅಲ್ಲಿದ್ದ ಇಂಜಿನಿಯರ್ ಒಬ್ಬರು, ಹೈದರಾಬಾದ್‌ನಲ್ಲಿ ಪ್ರಸನ್ನ ಕುಮಾರ್ ಎಂಬ ಒಬ್ಬ ಪ್ರಖ್ಯಾತ ಆರ್ಕಿಟೆಕ್ಟ್ ಇದ್ದಾರೆ. ಅವರು ದೇಶಾದ್ಯಂತ 60ಕ್ಕೂ ಹೆಚ್ಚು ಮಸೀದಿಗಳಿಗೆ ವಿನ್ಯಾಸ ಮಾಡಿದ್ದಾರೆ. ಅವರ ಫೀಸು ಸ್ವಲ್ಪ ಜಾಸ್ತಿ. ಆದರೆ ಬಹಳ ಸುಂದರವಾದ ವಿನ್ಯಾಸ ಮಾಡುತ್ತಾರೆ. ಅವರು ವಿನ್ಯಾಸಗೊಳಿಸಿದ ಮಸೀದಿಗಳ ಚಿತ್ರಗಳು ಬೇಕಾದರೆ ವೆಬ್‌ಸೈಟ್‌ನಲ್ಲಿ ನೋಡಬಹುದು ಎಂದರು. ಅಂತೂ ಅವರಿಂದಲೇ ಮಸೀದಿಯ ವಿನ್ಯಾಸ ಮಾಡಿಸುವುದೆಂದೂ, ಸಮಿತಿಯ ನಾಲ್ವರು ಸದಸ್ಯರು ಹೈದರಾಬಾದ್‌ಗೆ ಹೋಗುವುದೆಂದೂ ತೀರ್ಮಾನಿಸಲಾಯಿತು. ಬಹಳ ಬ್ಯುಸಿಯ ವ್ಯಕ್ತಿಯಾದುದರಿಂದ ಬಹಳ ಪ್ರಯತ್ನದ ನಂತರ ಪ್ರಸನ್ನ ಕುಮಾರ್ ಭೇಟಿಗೆ ಅವರಿಗೆ ದಿನ ನಿಗದಿಯಾಯಿತು.
ಹೈದರಾಬಾದ್‌ನ ಪ್ರಸನ್ನ ಕುಮಾರ್‌ರ ಕಚೇರಿಗೆ ಹೋದಾಗ ಅವರಿಗೆ ಆಶ್ಚರ್ಯವಾಗಿತ್ತು. ಬಹಳ ದೊಡ್ಡ ಅತ್ಯಾಧುನಿಕ ಕಚೇರಿ. ಸುಮಾರು 30-35 ಮಂದಿ ಸಿಬ್ಬಂದಿ. ಅಲ್ಲಲ್ಲಿ ಅವರು ವಿನ್ಯಾಸಗೊಳಿಸಿರುವ ಮಸೀದಿ, ಕಟ್ಟಡಗಳ ಮಾದರಿ ವಿನ್ಯಾಸಗಳು, ಚಿತ್ರಗಳು. ಅವರು ಹೋಗಿ ಕೆಲವು ನಿಮಿಷಗಳ ನಂತರ ಅವರಿಗೆ ಪ್ರಸನ್ನ ಕುಮಾರ್‌ರ ಕೋಣೆಯ ಒಳಗೆ ಹೋಗಲು ಅನುಮತಿ ಸಿಕ್ಕಿತು. ಮಾತುಕತೆಯಾಯಿತು. ಮಸೀದಿ ಸಮಿತಿಯವರ ಉತ್ಸಾಹ, ಆತುರ, ಮಾತುಗಳನ್ನು ಕೇಳಿ ಪ್ರಸನ್ನ ಕುಮಾರ್‌ಗೆ ಬಹಳ ಸಂತೋಷವಾಯಿತು.
‘‘ಜಾಗ ಎಷ್ಟಿದೆ?’’ ಪ್ರಸನ್ನ ಕುಮಾರ್ ಕೇಳಿದರು
‘‘ಎರಡು ಎಕರೆ’’
‘‘ನಿಮಗೆ ಬೇಕಾದಂತಹ, ನೀವು ಏನು ಕಲ್ಪಿಸಿದ್ದೀರೊ ಅದಕ್ಕಿಂತಲೂ ಸುಂದರ, ಭವ್ಯ ಮಸೀದಿಯ ವಿನ್ಯಾಸ ಮಾಡಿಕೊಡಲು ನಾನು ಸಿದ್ಧನಿದ್ದೇನೆ. ಅಷ್ಟು ಹಣ ಒದಗಿಸಲು ನಿಮಗೆ ಸಾಧ್ಯವಿದೆಯಾ?’’ ಪ್ರಸನ್ನಕುಮಾರ್ ಕೇಳಿದರು.
‘‘ಎಷ್ಟು ಬೇಕಾಗಬಹುದು? ’’
‘‘ಸುಮಾರು 25 ಕೋಟಿ ರೂಪಾಯಿ’’
‘‘ಆಯಿತು ಹೊಂದಿಸುತ್ತೇವೆ’’ ಸಮಿತಿಯವರು ಸಂತೋಷದಿಂದಲೇ ಒಪ್ಪಿಕೊಂಡರು.
ಅವರಲ್ಲಿರುವ ದೃಢ ನಿರ್ಧಾರ, ವಿಶ್ವಾಸ ಪ್ರಸನ್ನಕುಮಾರ್‌ಗೆ ಮೆಚ್ಚುಗೆಯಾಯಿತು.
‘‘ಆದರೆ ಒಂದು ಕಂಡೀಶನ್ ಇದೆ. ಅದಕ್ಕೆ ನೀವು ಒಪ್ಪಬೇಕು’’
‘‘ಏನು ಕಂಡೀಶನ್ ಹೇಳಿ?’’ ಸಮಿತಿಯವರು ಗಂಭೀರವಾದರು.
‘‘ನಾನು ಈವರೆಗೆ 60ಕ್ಕೂ ಹೆಚ್ಚು ಮಸೀದಿಗಳಿಗೆ ವಿನ್ಯಾಸ ಮಾಡಿಕೊಟ್ಟಿದ್ದೇನೆ. ಆದರೆ ನನ್ನಲ್ಲಿ ವಿನ್ಯಾಸ ಮಾಡಿಸಿ, ಎಲ್ಲ ಒಪ್ಪಿಗೆ ಸೂಚಿಸಿ ಹೋಗುತ್ತಾರೆ. ಕೊನೆ ಗಳಿಗೆಯಲ್ಲಿ ಏನಾದರೂ ಒಂದು ಬದಲಾವಣೆ ಮಾಡಿ ಬಿಡುತ್ತಾರೆ. ಹೀಗೆ ಬದಲಾವಣೆ ಮಾಡದ, ನಾನು ಹೇಳಿದಂತೆ ಕಟ್ಟಿಸಿದ ಒಂದೇ ಒಂದು ಮಸೀದಿ ಕೂಡಾ ಇಲ್ಲ. ಅದಕ್ಕಾಗಿ ನಿಮ್ಮಲ್ಲಿ ಒಂದು ಕಂಡೀಶನ್ ಏನೆಂದರೆ, ನಾನು ವಿನ್ಯಾಸಗೊಳಿಸಿದಂತೆ ನೀವು ಮಸೀದಿಯನ್ನು ಕಟ್ಟಿಸಬೇಕು. ಅದರಲ್ಲಿ ಒಂದು ಚುಕ್ಕೆಯಷ್ಟು ಕೂಡಾ ಬದಲಾವಣೆ ಮಾಡಬಾರದು. ಹಾಗೆಯೇ ಮಾಡುವುದಾದರೆ ನೀವು ವಿನ್ಯಾಸಕ್ಕಾಗಿ ನನಗೆ ಒಂದು ರೂಪಾಯಿ ಕೂಡಾ ಕೊಡುವುದು ಬೇಡ. ಸಂಪೂರ್ಣ ಉಚಿತವಾಗಿ ಮಾಡಿಕೊಡುತ್ತೇನೆ. ಆ ಮಸೀದಿಯ ಗೋಡೆಯಲ್ಲಿ ಎಲ್ಲಿಯಾದರೂ ಒಂದು ಕಡೆ ನನ್ನ ಹೆಸರು ಹಾಕಿಸಿ ಅಷ್ಟೇ ಸಾಕು’’
ಮಸೀದಿ ಸಮಿತಿಯವರು ಅದಕ್ಕೆ ಒಪ್ಪಿದರು.
‘‘ ಸರಿ ಹಾಗಾದರೆ, ನನಗೆ ಒಮ್ಮೆ ನಿಮ್ಮ ಊರಿಗೆ ಬರಬೇಕು. ಆ ಜಾಗ ನೋಡಬೇಕು. ಒಂದು ವಾರ ಬಿಟ್ಟು ನಾನು ಬರುತ್ತೇನೆ’’ ಎಂದರು ಪ್ರಸನ್ನಕುಮಾರ್.
ವಾರ ಬಿಟ್ಟು ಪ್ರಸನ್ನಕುಮಾರ್ ಬರುವ ದಿನ ತಿಳಿದು ಸಮಿತಿಯವರೆಲ್ಲ ಸೇರಿದರು. ಹೊಸ ಮಸೀದಿ ಕಟ್ಟಿಸುವ ಅರ್ಕಿಟೆಕ್ಟ್ ಬರುತ್ತಾರಂತೆ ಎಂಬ ವಿಷಯ ಮನೆ ಮನೆ ಹರಡಿತ್ತು. ಎಲ್ಲರಲ್ಲೂ ಕುತೂಹಲ.
ಪ್ರಸನ್ನಕುಮಾರ್ ಬಂದರು. ಜಾಗ, ಪರಿಸರ ಎಲ್ಲ ಪರಿಶೀಲಿಸಿದರು. ತನ್ನ ಡೈರಿಯಲ್ಲಿ ಎಲ್ಲವನ್ನೂ ಮಾರ್ಕ್‌ಮಾಡಿಕೊಂಡರು. ಅಂದೇ ಸಂಜೆ ಅವರು ಹೊರಟು ನಿಂತರು. ಹೋಗುವಾಗ ಅವರ ಫೀಸು ಕೇಳಿದ್ದಕ್ಕೆ ‘‘ನನ್ನ ಒಂದು ಭೇಟಿಯ ಫೀಸು 50 ಸಾವಿರ ರೂಪಾಯಿ. ಆದರೆ ನೀವು ನನಗೆ ಒಂದು ರೂಪಾಯಿಯೂ ಕೊಡುವುದು ಬೇಡ. ವಿಮಾನದ ಟಿಕೆಟ್ ಕೊಟ್ಟರೆ ಸಾಕು. ನನಗೆ ಮಾತು ಕೊಟ್ಟಂತೆ ನನ್ನ ಕನಸಿನ ಮಸೀದಿ ನಿರ್ಮಿಸಿದರೆ ಅದೇ ನೀವು ನನಗೆ ಕೊಡುವ ಫೀಸು. ನೀವು ಒಂದು ತಿಂಗಳು ಬಿಟ್ಟು ಬನ್ನಿ. ಮಾದರಿ ವಿನ್ಯಾಸ ಮಾಡಿ ಇಡುತ್ತೇನೆ’’ ಎಂದು ಹೇಳಿ ಹೊರಟು ಹೋದರು.
ಮತ್ತೆ ತಿಂಗಳು ಬಿಟ್ಟು ಮಸೀದಿ ಕಮಿಟಿಯವರು ಹೋದಾಗ ಡ್ರಾಯಿಂಗ್ ಕಾಗದದಲ್ಲಿ ಬಿಡಿಸಿದ್ದ ಮಸೀದಿಯ ನಕ್ಷೆಗಳನ್ನೆಲ್ಲ ತೋರಿಸಿ ವಿವರಿಸಿದ ಪ್ರಸನ್ನಕುಮಾರ್ ಬಳಿಕ ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ನೋಡುವುದೇನು! ಒಂದು ಮೇಜಿನ ಮೇಲೆ ಗಾಜಿನ ಆವರಣದ ಒಳಗೆ ಒಂದು ಸುಂದರ ಮಸೀದಿ ಕಟ್ಟಡದ ಮಾದರಿ ವಿನ್ಯಾಸವನ್ನಿಡಲಾಗಿತ್ತು.
‘‘ಇದು ನಿಮ್ಮ ಮಸೀದಿ’’ ಪ್ರಸನ್ನಕುಮಾರ್ ಹೇಳಿದರು. ಅವರ ಮುಖದ ತುಂಬಾ ತೃಪ್ತಿಯ ಮಂದಹಾಸವಿತ್ತು. ಅದನ್ನು ನೋಡಿದ ಸಮಿತಿಯವರಿಗೆ ಆಶ್ಚರ್ಯದಿಂದ ಮಾತೇ ಹೊರಡಲಿಲ್ಲ. ಅವರು ಆ ವಿನ್ಯಾಸವನ್ನು ನೋಡುತ್ತಾ ಕಂಬದಂತೆ ನಿಂತುಬಿಟ್ಟರು. ಅದು ಅಷ್ಟು ಸುಂದರವಾಗಿತ್ತು.
‘‘ಒಪ್ಪಿಗೆ ತಾನೇ’’ ಪ್ರಸನ್ನಕುಮಾರ್ ಮುಗುಳು ನಗುತ್ತಾ ಕೇಳಿದರು.
‘‘ಯಾಕೆ ಹಾಗೆ ಕೇಳುತ್ತೀರಿ. ನಾವು ನಿರೀಕ್ಷಿಸಿದ್ದಕ್ಕಿಂತಲೂ ನೂರು ಪಟ್ಟು ಸುಂದರವಾಗಿದೆ. ಆಕರ್ಷಕವಾಗಿದೆ. ನಾವು ನಿಮಗೆ ಆಭಾರಿಯಾಗಿದ್ದೇವೆ. ’’
‘‘ಅದೇನೂ ಬೇಡ. ನಾನು ಹೇಳಿದಂತೆ ಇದರಲ್ಲಿ ಯಾವುದೇ ಒಂದು ಪುಟ್ಟ ಬದಲಾವಣೆಯನ್ನೂ ಮಾಡದೆ ಕಟ್ಟಿಸಿದರೆ ಅದೇ ನೀವು ನನಗೆ ಮಾಡುವ ದೊಡ್ಡ ಉಪಕಾರ.’’
‘‘ಆಯಿತು ನೀವು ಹೇಳಿದಂತೆ ಒಂದು ಚುಕ್ಕೆಯಷ್ಟೂ ಬದಲಾವಣೆ ಮಾಡದೆ ಕಟ್ಟಿಸುತ್ತೇವೆ.’’‘‘ಇಲ್ಲಿಂದ ಹೋಗುವಾಗ ಎಲ್ಲರೂ ಹೀಗೆಯೇ ಹೇಳುವುದು. ಆಮೇಲೆ ಕಟ್ಟಿಸುವಾಗ ಏನಾದರೂ ಒಂದು ಬದಲಾವಣೆ ಮಾಡಿಯೇ ಬಿಡುತ್ತಾರೆ. ಇದು ಇದುವರೆಗಿನ ನನ್ನ ಅನುಭವ. ’’
‘‘ಇಲ್ಲ ನಾವು ಹಾಗೆ ಮಾಡುವುದಿಲ್ಲ. ನಮ್ಮನ್ನು ನಂಬಿ’’ ಸಮಿತಿಯವರು ಅವರಿಗೆ ಮಾತು ಕೊಟ್ಟರು.
‘‘ನನಗೆ ಒಂದು 4-5 ಸಲ ನಿಮ್ಮಲ್ಲಿಗೆ ಬರಬೇಕಾದೀತು. ಅದು ಯಾವಾಗ ಎಂದು ಆಮೇಲೆ ಹೇಳುತ್ತೇನೆ. ನೀವು ಈ ವಿನ್ಯಾಸವನ್ನು ತೆಗೆದುಕೊಂಡು ಹೋಗಿ.’’
‘‘ಏನು? ತೆಗೆದುಕೊಂಡು ಹೋಗಬೇಕಾ?’’ ಸಮಿತಿಯವರ ಮುಖ ಅರಳಿತು. ಅವರ ಉತ್ಸಾಹ ಇಮ್ಮಡಿಯಾಯಿತು. ಅವರಿಗದು ನಂಬಲಿಕ್ಕೇ ಸಾಧ್ಯವಾಗಲಿಲ್ಲ. ಹಾಗೆ ಅವರು ಅದನ್ನು ತೆಗೆದುಕೊಂಡು ಊರಿಗೆ ಬಂದರು.
ಬಂದವರೇ ಮಸೀದಿಯ ಹೊರಗಡೆ ಒಂದು ಪುಟ್ಟ ಕೋಣೆಯಂತೆ ಕಟ್ಟಿ ಅದರಲ್ಲಿ ಆ ಮಾದರಿ ವಿನ್ಯಾಸವನ್ನು ಇಟ್ಟರು. ಮಸೀದಿಯ ಮಾದರಿ ವಿನ್ಯಾಸ ತಂದಿದ್ದಾರೆ ಎಂಬ ಸುದ್ದಿ ನಗರದ ಮುಸ್ಲಿಮರ ಮನೆಗೆಲ್ಲ ಹರಡಿತು. ಆಮೇಲೆ ಪ್ರತಿದಿನ ಮಸೀದಿಯ ಮುಂದೆ ಮಹಿಳೆಯರು, ಪುರುಷರು, ಮಕ್ಕಳೆನ್ನದೆ ಜನ ಸೇರತೊಡಗಿದರು. ಎಲ್ಲರ ಮುಖದಲ್ಲೂ ಆಶ್ಚರ್ಯ. ‘‘ಇದು ನಮ್ಮ ಮಸೀದಿಯಾ?. ಇಷ್ಟು ಸುಂದರ ಮಸೀದಿ ಇಲ್ಲಿ ಕಟ್ಟುತ್ತಾರಾ?’’ ಎಂದು ಮಾತನಾಡಿಕೊಳ್ಳುತ್ತಾ ಜನ ಮತ್ತೆ ಮತ್ತೆ ಬಂದು ಆ ಮಾದರಿಯನ್ನು ನೋಡಿ ಖುಷಿಪಡತೊಡಗಿದರು. ಮಸೀದಿಯ ಮಾಡೆಲ್ ಅಲ್ಲಿಟ್ಟ ಬಳಿಕ ಹೊಸ ಮಸೀದಿ ಕಟ್ಟಲು ಹಣದ ಹೊಳೆಯೇ ಹರಿದು ಬರತೊಡಗಿತು.
ಹಳೇ ಮಸೀದಿ ಒಡೆದು ಹೊಸ ಮಸೀದಿಯ ಕೆಲಸ ಪ್ರಾರಂಭವಾಯಿತು. ಹಳೇ ಮಸೀದಿ ಒಡೆಯುವಾಗ ಎಲ್ಲರ ಕಣ್ಣಲ್ಲೂ ನೀರು. ಕೆಲವು ಹಿರಿಯರಂತೂ ಅತ್ತೇ ಬಿಟ್ಟಿದ್ದರು. ಮಸೀದಿ ಕಟ್ಟಡ ಮೇಲೇರಿ ಪೂರ್ಣಗೊಳ್ಳುವವರೆಗೆ ಪ್ರಸನ್ನಕುಮಾರ್ 4-5 ಸಲ ಬಂದು ಹೋಗಿದ್ದರು. ತಾನು ಮಾಡಿದ ಮಾದರಿಯಂತೆಯೇ ಒಂದು ಕಡ್ಡಿಯಷ್ಟೂ ಬದಲಾವಣೆ ಇಲ್ಲದೆ ಮಸೀದಿ ನಿರ್ಮಾಣಗೊಂಡಿದ್ದರಿಂದ ಅವರಿಗೆ ಬಹಳ ಖುಷಿಯಾಗಿತ್ತು. ಅವರ ವೃತ್ತಿ ಬದುಕಿನ ದೊಡ್ಡ ಕನಸೊಂದು ನನಸಾಗಿತ್ತು.
ಎರಡು ಎಕರೆ ಜಾಗದ ಸುತ್ತಲೂ ಎತ್ತರದ ಆವರಣ ಗೋಡೆ. ಅದರ ಮಧ್ಯೆ ಸುಂದರ ಭವ್ಯ ಮಸೀದಿ. ಇದನ್ನು ನೋಡಲೆಂದೇ ದೂರ ದೂರದ ಊರಿನಿಂದಲೂ ಜನಸಾಗರವೇ ಬರತೊಡಗಿತು. ಮಸೀದಿ ಪೂರ್ಣಗೊಳ್ಳುತ್ತಿದ್ದಂತೆಯೇ ಸಮಿತಿಯವರು ಮತ್ತೆ ಸಭೆ ಸೇರಿದರು. ಮಸೀದಿ ಉದ್ಘಾಟನೆಯ ದಿನಾಂಕವನ್ನು ನಿಗದಿಗೊಳಿಸಿ ಅತಿಥಿಗಳನ್ನು ಅಂತಿಮಗೊಳಿಸಿದರು. ಮತ್ತೆ ನಡೆದ ಚರ್ಚೆಯಲ್ಲಿ ಇಷ್ಟು ದೊಡ್ಡ ಮಸೀದಿಗೆ ಹೆಚ್ಚು ಪಾಂಡಿತ್ಯವಿರುವ ಒಬ್ಬ ಗುರುಗಳನ್ನು ನೇಮಿಸಬೇಕು ಎಂದು ಕೆಲವು ಯುವಕರು ಸಲಹೆ ಕೊಟ್ಟರು. ಆದರೆ ಇದಕ್ಕೆ ಹಿರಿಯರು ಒಪ್ಪಲಿಲ್ಲ. ಹಳೆಯ ಮಸೀದಿಯ ಗುರುಗಳು ಒಳ್ಳೆಯ ಪಾಂಡಿತ್ಯ ಇರುವವರು. ಹಲವಾರು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಅವರನ್ನು ಬದಲಾಯಿಸುವುದು ಬೇಡ. ಹೊಸ ಮಸೀದಿಗೂ ಅವರೇ ಗುರುಗಳಾಗಿರಲಿ ಎಂದು ಸೂಚಿಸಿದರು. ಇದಕ್ಕೆ ಎಲ್ಲರೂ ಒಪ್ಪಿದರು. ಆದರೆ ಅಝಾನ್ (ಬಾಂಗ್) ಕೊಡಲು ಸುಶ್ರಾವ್ಯ ಕಂಠದ ಮುಅಝ್ಝಿನ್ ಒಬ್ಬರನ್ನು ನೇಮಿಸಬೇಕು ಎಂದು ಕೆಲವರು ಹೇಳಿದಾಗ ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಆಗ ಒಬ್ಬ ಹಿರಿಯರು, ಕೇರಳದ ಪೊನ್ನಾನಿ ಸಮೀಪದ ಒಂದು ಮಸೀದಿಯಲ್ಲಿ ಸಂಶುದ್ದೀನ್ ಮುಸ್ಲಿಯಾರ್ ಎಂಬ ಒಬ್ಬರು ಮುಅಝ್ಝಿನ್ ಇದ್ದಾರೆ. ತುಂಬಾ ಇಂಪಾಗಿ, ಶುದ್ಧ ಉಚ್ಚಾರದಿಂದ ಅಝಾನ್ ಕೊಡುತ್ತಾರೆ. ಅವರೇನಾದರೂ ಇಲ್ಲಿಗೆ ಬರಲು ಒಪ್ಪಿದರೆ ಈ ಮಸೀದಿಗೆ ತಕ್ಕ ಮುಅಝ್ಝಿನ್ ಎಂದರು. ಹಾಗೇ ಅಲ್ಲಿಗೆ ಹೋಗಲು ಸಭೆ ಮೂವರನ್ನು ನೇಮಿಸಿತು.
ಪೊನ್ನಾನಿ ಸಮೀಪದ ಒಂದು ಹಳ್ಳಿಯಲ್ಲಿ ಒಂದು ಪುಟ್ಟ ಮಸೀದಿಯಲ್ಲಿ ಸಂಶುದ್ದೀನ್ ಮುಸ್ಲಿಯಾರ್ ಮುಅಝ್ಝಿನ್ ಆಗಿದ್ದರು. ಅಲ್ಲಿಗೆ ಅವರು ಹೋಗಿ ತಲುಪಿದಾಗ ಮಧ್ಯಾಹ್ನ ಸುಮಾರು 12 ಗಂಟೆ ಕಳೆದಿತ್ತು. ಇನ್ನೊಂದು ಅರ್ಧ ಗಂಟೆಯಲ್ಲಿ ಮಧ್ಯಾಹ್ನದ ಅಝಾನ್ ಆಗುತ್ತದೆ. ಅಝಾನ್ ಕೇಳಿ ಆಮೇಲೆ ಸಂಶುದ್ದೀನ್ ಮುಸ್ಲಿಯಾರ್‌ರನ್ನು ಭೇಟಿಯಾಗೋಣ ಎಂದು ತೀರ್ಮಾನಿಸಿ, ಅಲ್ಲಿ ತನಕ ಅಲ್ಲೊಂದು ಹೊಟೇಲ್ ಹೊಕ್ಕು ಚಹಾ ಹೀರುತ್ತಾ ಮೂವರು ಕುಳಿತರು. ಕೆಲ ಹೊತ್ತಿನಲ್ಲೇ ಬೆರಳಲ್ಲಿ ಬಡಿದು ಶಬ್ದ ಪರಿಶೀಲಿಸುವ ಮಸೀದಿಯ ಧ್ವನಿವರ್ಧಕದ ಸದ್ದು ಕೇಳಿಸಿತು. ತಕ್ಷಣ ಮೂವರ ಕಿವಿಗಳೂ ನೆಟ್ಟಗಾದವು. ‘ಅಲ್ಲಾಹು ಅಕ್ಬರ್.... ಅಲ್ಲಾಹು ಅಕ್ಬರ್...’ ಅಝಾನ್ ಮೊಳಗುತ್ತಿದ್ದಂತೆಯೇ ಮೂವರ ದೇಹಗಳೂ ಪುಳಕಿತವಾಗಿ ಮರಗಟ್ಟಿದಂತಾಯಿತು. ರೋಮಗಳೆಲ್ಲ ನಿಮಿರಿ ನಿಂತವು. ಆ ಸುಶ್ರಾವ್ಯ ಧ್ವನಿ ಕಿವಿಗಳನ್ನು ಹೊಕ್ಕು ನರನಾಡಿಗಳಲ್ಲೂ ಹರಿದು ಇಡೀ ದೇಹವೇ ಸ್ತಬ್ಧವಾದಂತಾಯಿತು. ಅಝಾನ್ ಮುಗಿಯುವವರೆಗೂ ಅವರಿಗೆ ತಾವೆಲ್ಲಿದ್ದೇವೆ, ತಾವಿಲ್ಲಿಗೆ ಯಾಕೆ ಬಂದಿದ್ದೇವೆ ಎಂಬುದನ್ನೇ ಮರೆತು ಬಿಟ್ಟಿದ್ದು, ಅಝಾನ್ ಮುಗಿದಾಗ ಮಸೀದಿಯತ್ತ ಹೆಜ್ಜೆ ಹಾಕಿದ ಅವರಿಗೆ ಮಾತು ಮರೆತು ಹೋಗಿತ್ತು. ಯಾವಾಗ ಒಮ್ಮೆ ಆ ಮುಸ್ಲಿಯಾರ್‌ರನ್ನು ಭೇಟಿಯಾಗಲಿಲ್ಲ, ಅವರನ್ನು ನೋಡಲಿಲ್ಲ ಎಂಬ ತವಕ. ಅವರು ಮಸೀದಿಯೊಳಗೆ ಹೊಕ್ಕು ಮುಸ್ಲಿಯಾರ್‌ರ ಮುಂದೆ ನಿಂತರು.
ಸುಮಾರು 35-40ರ ಒಳಗಿನ ಪ್ರಾಯ, ಎತ್ತರ ನಿಲುವು, ಸುಂದರ ಮೈಕಟ್ಟು, ಗೋಧಿಬಣ್ಣ, ಮುಖದ ತುಂಬಾ ಓರಣವಾಗಿ ಕತ್ತರಿಸಿದ ತೆಳು ಗಡ್ಡ, ಚಂದ್ರನಂತೆ ಹೊಳೆಯುವ ಸುರ್ಮ ಹಚ್ಚಿದ ಬೊಗಸೆ ಕಣ್ಣುಗಳು, ತಲೆಗೆ ಬಿಳಿ ಮುಂಡಾಸು, ಭುಜದ ಮೇಲೆ ಹರಡಿದ ಬಣ್ಣದ ಚೌಕಳಿ ಶಾಲು, ಉದ್ದ ತೋಳಿನ ಬಿಳಿ ಅಂಗಿ, ಬಿಳಿ ವೇಸ್ಟಿ ಲುಂಗಿ, ಮುಖದ ತುಂಬಾ ಮಂದಹಾಸ, ಒಂದೊಂದು ಶಬ್ದ ತುಟಿಯಿಂದ ಹೊರಬರುವಾಗಲೂ ಮುತ್ತು ಉದುರಿದಂತೆ, ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವಂತಹ ಆಕರ್ಷಣೆ. ಮಸೀದಿಯ ಪಕ್ಕದಲ್ಲೇ ಒಂದು ಪುಟ್ಟ ಕೋಣೆಯಲ್ಲಿ ಅವರ ಸಂಸಾರ.
ಮಧ್ಯಾಹ್ನದ ನಮಾಝ್ ಮುಗಿದ ಮೇಲೆ ಮೂವರು ಅವರಲ್ಲಿ ತಾವು ಬಂದ ವಿಷಯ ತಿಳಿಸಿದರು. ‘‘ಇಲ್ಲ, ನನಗೆ ಬರಲು ಸಾಧ್ಯವಿಲ್ಲ’’ ಎಂದು ಬಿಟ್ಟರು ಮುಸ್ಲಿಯಾರ್
‘‘ಯಾಕೆ? ಏನು ಸಮಸ್ಯೆ ಹೇಳಿ?’’
‘‘ಸಮಸ್ಯೆ ಹೇಳಿ ಮುಗಿಯುವಂತಹದ್ದಲ್ಲ’’
‘‘ಇಲ್ಲಿ ನಿಮಗೆ ಎಷ್ಟು ಸಂಬಳ ಕೊಡುತ್ತಾರೆ?’’
‘‘ಏಳು ಸಾವಿರ ರೂಪಾಯಿ’’
‘‘ಅದರ ಡಬಲ್ ಅಂದರೆ, ತಿಂಗಳಿಗೆ 14 ಸಾವಿರ ರೂ. ಕೊಡುತ್ತೇವೆ, ದಯವಿಟ್ಟು ಬನ್ನಿ’’ ಮೂವರು ಅಂಗಲಾಚುವಂತೆ ಅವರಲ್ಲಿ ಕೇಳಿಕೊಂಡರು.
ಕೆಲ ಹೊತ್ತು ಮುಸ್ಲಿಯಾರ್ ಮಾತನಾಡಲಿಲ್ಲ: ಏನೋ ಯೊಚಿಸುವಂತೆ ಕುಳಿತುಬಿಟ್ಟರು.
‘‘ಯಾಕೆ ವೌನವಾಗಿದ್ದೀರಿ ಬರುತ್ತೀರಿ ತಾನೇ?’’
‘‘ಸಮಸ್ಯೆ ಅದಲ್ಲ, 4-5 ವರ್ಷಗಳಿಂದಲೂ ನನ್ನ ಪತ್ನಿ ಅನಾರೋಗ್ಯದಿಂದಿದ್ದಾಳೆ. ನನಗೆ ಮೂವರು ಪುಟ್ಟ ಮಕ್ಕಳಿದ್ದಾರೆ. ಆ ಮಕ್ಕಳನ್ನು ಅವಳ ಜೊತೆ ಬಿಟ್ಟು ಬರುವ ಹಾಗಿಲ್ಲ. ನೀವು ಅಲ್ಲಿಯೇ ನಮಗೊಂದು ಮನೆ ಮಾಡಿಕೊಡುವುದಾದರೆ ಬರುವ ಬಗ್ಗೆ ಯೋಚಿಸುತ್ತೇನೆ’’ ಎಂದರು ಮುಸ್ಲಿಯಾರ್.
‘‘ಮನೆ ತಾನೇ ಖಂಡಿತ ವ್ಯವಸ್ಥೆ ಮಾಡುತ್ತೇವೆ. ಆದರೆ ನಮಗೆ ಒಂದು 5-6 ತಿಂಗಳು ಸಮಯ ಕೊಡಿ. ಅದರೊಳಗೆ ವ್ಯವಸ್ಥೆ ಮಾಡುತ್ತೇವೆ. ಈಗ ನೀವೊಬ್ಬರೇ ಬನ್ನಿ’’ ಎಂದು ಮೂವರೂ ಭರವಸೆ ನೀಡಿದರು.
ಮುಸ್ಲಿಯಾರ್ ಒಪ್ಪಿದರು. ಅವರು ಬರುವ ದಿನ ನಿಗದಿಯಾಯಿತು. ಮೂವರಿಗೂ ಖುಷಿಯೋ ಖುಷಿ. ಅಂದು ಶುಕ್ರವಾರ. ನೂತನ ಭವ್ಯ ಮಸೀದಿಯ ಉದ್ಘಾಟನೆಯ ದಿನ. ಪ್ರಸನ್ನ ಕುಮಾರ್, ವಿವಿಧ ಧರ್ಮಗಳ ನೇತಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಸ್ಲಿಯಾರ್ ಒಂದು ದಿನ ಮೊದಲೇ ಬಂದಿದ್ದರು. ಮಧ್ಯಾಹ್ನದ ಅಝಾನ್‌ನೊಂದಿಗೆ ಮಸೀದಿ ಉದ್ಘಾಟನೆಯಾಗಿ ಜುಮಾ ನಮಾಝ್ ನಿರ್ವಹಿಸುವುದೆಂದು ತೀರ್ಮಾನವಾಗಿತ್ತು. ಸಾವಿರಾರು ಜನರು ನೆರೆದಿದ್ದರು. ಸಭಾ ಕಾರ್ಯಕ್ರಮಕ್ಕೆ ಹೊರಗೆ ದೊಡ್ಡ ಪೆಂಡಾಲ್ ಹಾಕಲಾಗಿತ್ತು. ಅಝಾನ್ ಸಮಯವಾಯಿತು. ಮುಸ್ಲಿಯಾರ್ ವುಝು(ಅಂಗ ಸ್ನಾನ) ಮಾಡಿ ಮಸೀದಿಯ ಒಳಗೆ ಹೋದರು. ಮೈಕ್‌ನ ಸ್ವಿಚ್ ಆನ್ ಮಾಡಿ ಬೆರಳಲ್ಲಿ ಹೊಡೆದು ಧ್ವನಿವರ್ಧಕ ಪರೀಕ್ಷಿಸಿದರು. ‘‘ಅಲ್ಲಾಹು ಅಕ್ಬರ್.... ಅಲ್ಲಾಹು ಅಕ್ಬರ್....’’ ಅಂಗಸ್ನಾನ ಮಾಡುತ್ತಿದ್ದ, ಅಲ್ಲಲ್ಲಿ ಚದುರಿ ನಿಂತು ಮಾತನಾಡುತ್ತಿದ್ದ ಜನರೆಲ್ಲ ಒಮ್ಮೆಲೇ ನಿಂತು ಬಿಟ್ಟರು. ಸ್ವರ್ಗಲೋಕದಿಂದ ಕರೆ ಬಂದಂತೆ ಅವರು ಚಕಿತರಾಗಿ ಬಿಟ್ಟಿದ್ದರು. ಮುಸ್ಲಿಯಾರ್‌ರ ಧ್ವನಿ ಸಂಗೀತದ ಅಲೆಗಳಂತೆ ಆಕಾಶ ತುಂಬಾ ಹರಡಿ ಇಡೀ ನಗರವನ್ನು ಒಂದು ಕ್ಷಣ ಸ್ತಬ್ಧಗೊಳಿಸಿತು. ಹಕ್ಕಿಗಳು ಹಾರುವುದನ್ನು ಮರೆತು ಎಲ್ಲಿಂದ ಬರುತ್ತಿದೆ ಈ ಅಲೆ ಎಂದು ಆಶ್ಚರ್ಯದಿಂದ ತನ್ನ ತಲೆಯನ್ನು ಅತ್ತಿತ್ತ ತಿರುಗಿಸಿ ನೋಡಿದವು. ಪ್ರಾಣಿಗಳು ಕಿವಿ ನಿಮಿರಿಸಿ ಕಣ್ಣರಳಿಸಿ ಇದ್ದಲ್ಲೇ ನಿಂತು ಬಿಟ್ಟವು. ಅಝಾನ್ ಮುಗಿದ ನಂತರವೂ ಆ ಇಂಪಾದ ಧ್ವನಿ ಜನರ ಕಿವಿಯಲ್ಲಿ ಮಾರ್ದನಿಸುತ್ತಲೇ ಇತ್ತು. ಇಡೀ ನಗರದ ಜನರು ಧರ್ಮ ಭೇದ ಮರೆತು ಅಝಾನ್‌ಗೆ ಕಿವಿಯಾದರು. ‘ಯಾರು ಮಾರಾಯ ಇಂದು ಅಝಾನ್ ಕೊಡುವುದು, ಧ್ವನಿ ಬಹಳ ಇಂಪಾಗಿದೆ. ಯಾಕೋ ಮನಸ್ಸು ಅಧ್ಯಾತ್ಮದ ಕಡೆಗೆ ಸೆಳೆಯುತ್ತಿದೆ. ಆ ಧ್ವನಿ ದೇವರಿಗೆ ಸಮೀಪ ಇರುವಂತೆ ಭಾಸವಾಗುತ್ತ್ತಿದೆ.ಎಂತಹ ಕಂಠಸಿರಿ ಮಾರಾಯ’ ಹೀಗೆ ಜನ ಮಾತನಾಡಿಕೊಳ್ಳತೊಡಗಿದರು. ಎಲ್ಲಿ ನೋಡಿದರೂ ಅಝಾನ್‌ನ ಬಗ್ಗೆಯೇ ಚರ್ಚೆ.
ಜುಮಾ ನಮಾಝ್ ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಗಳೆಲ್ಲ ತಮ್ಮ ಭಾಷಣದಲ್ಲಿ ಮುಸ್ಲಿಯಾರ್‌ರ ಅಝಾನನ್ನು ಹೊಗಳುವವರೇ. ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್‌ರನ್ನು ಸನ್ಮಾನಿಸಲಾಯಿತು. ಅವರಂತೂ ತನ್ನ ಕನಸಿನ ಮಸೀದಿಯೊಂದು ತನ್ನೆದುರೇ ತಲೆಎತ್ತಿ ನಿಂತಿರುವುದನ್ನು ಕಂಡು ಬಹಳ ಸಂತೋಷಗೊಂಡಿದ್ದರು.
ಸಂಜೆ, ಮುಸ್ಸಂಜೆ, ರಾತ್ರಿ, ಮರುದಿನದಿಂದ ಮುಸ್ಲಿಯಾರ್‌ರದ್ದೇ ಖಾಯಂ ಅಝಾನ್ ಕೇಳಿದ ಜನ ಧರ್ಮಭೇದ ಮರೆತು ಪ್ರತಿ ಹೊತ್ತಿನ ಅಝಾನ್‌ಗಾಗಿ ಕಾಯತೊಡಗಿದರು. ರೈಲು ನಿಲ್ದಾಣ, ಬಸ್ಸು ನಿಲ್ದಾಣ, ಅಂಗಡಿ ಮುಂಗಟ್ಟು, ಆಸ್ಪತ್ರೆ, ಕಚೇರಿ, ಮಾರುಕಟ್ಟೆಗಳು ಹೀಗೆ ಎಲ್ಲೆಂದರಲ್ಲಿ ಅಝಾನ್ ಕೇಳುತ್ತಿದ್ದಂತೆಯೇ ಅದು ಮುಗಿಯುವ ತನಕ ಜನ ವೌನವಾಗಿ ಬಿಡುತ್ತಿದ್ದರು. ಎಲ್ಲರ ಮುಖದಲ್ಲೂ ಅದೇನೋ ಸಂತೃಪ್ತ ಭಾವ. ಏನೋ ಧಾರ್ಮಿಕ ಉದಾತ್ತವಾದದ್ದನ್ನು ದೇಹದೊಳಗೆ ಇಳಿಸಿಕೊಂಡಂತಹ ಅನುಭವ.
ಮರುದಿನದಿಂದಲೇ ಮುಸ್ಲಿಯಾರ್‌ರನ್ನು ಕಾಣಲು ಬರುವ ಜನರ ಸಂಖ್ಯೆ ಹೆಚ್ಚಾಗ ತೊಡಗಿತು. ಎಲ್ಲ ಧರ್ಮಗಳ ಜನರೂ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿ ಮಾತನಾಡಿಸಿ ಹೋಗುವುದು ಮಾಮೂಲಿಯಾಯಿತು. ಎಲ್ಲರ ಮನಸ್ಸಲ್ಲೂ ಅವರ ಬಗ್ಗೆ ಗೌರವ ಮೂಡತೊಡಗಿತು. ಇಡೀ ನಗರವೇ ಅವರ ಬಗ್ಗೆ ಮಾತನಾಡತೊಡಗಿತು.
ಅದೊಂದು ಸಂಜೆ ಹೊತ್ತು. ಮಸೀದಿಯ ಮುಂದೆ ನಿಂತ ಕಾರಿನಿಂದ ಇಳಿದ ವ್ಯಕ್ತಿಯೊಬ್ಬರು ಅಲ್ಲಿದ್ದವರಲ್ಲಿ ‘‘ನನಗೆ ಅಝಾನ್ ಕೊಡುವ ಮುಸ್ಲಿಯಾರ್‌ರನ್ನೊಮ್ಮೆ ಕಾಣಬೇಕು’’ ಎಂದರು. ಆ ವ್ಯಕ್ತಿಯನ್ನು ಅವರು ಮುಸ್ಲಿಯಾರ್‌ರ ಬಳಿಗೆ ಕರೆದುಕೊಂಡು ಹೋದರು. ಮುಸ್ಲಿಯಾರ್‌ರ ಮುಂದೆ ನಿಂತ ಆ ವ್ಯಕ್ತಿ ಅವರನ್ನೊಮ್ಮೆ ಅಪಾದಮಸ್ತಕವಾಗಿ ನೋಡಿ ಹಸ್ತಲಾಘವಕ್ಕೆ ಕೈ ನೀಡುತ್ತಾ ‘‘ನನ್ನ ಹೆಸರು ಕೃಷ್ಣ ಭಟ್. ನಾನು ಈ ನಗರದಲ್ಲಿ ಒಬ್ಬ ಪ್ರಖ್ಯಾತ ವಕೀಲನಾಗಿದ್ದೇನೆ. ನಿಮ್ಮ ಅಝಾನ್ ಕೇಳಿದ ಮೇಲೆ ನಿಮ್ಮನ್ನೊಮ್ಮೆ ಕಾಣಬೇಕು ಎಂದು ಬಹಳ ಸಲ ಯೋಚಿಸಿದ್ದೆ. ಆದರೆ ಕೆಲಸದ ಒತ್ತಡದಿಂದ ಸಮಯವೇ ಸಿಗಲಿಲ್ಲ. ಇಂದು ನಿಮ್ಮನ್ನು ಭೇಟಿ ಮಾಡುವುದೇ ಎಂದು ತೀರ್ಮಾನಿಸಿ ಬಂದೆ. ನಿಮ್ಮನ್ನು ನೋಡಿದ್ದು ತುಂಬಾ ಸಂತೋಷವಾಯಿತು. ನನ್ನ ಒಂದು ಅಪೇಕ್ಷೆ ಇದೆ ನಡೆಸಿಕೊಡುತ್ತೀರಾ?’’ ಕೇಳಿದರು.
‘‘ಏನು ಹೇಳಿ?’’
‘‘ನೀವು ನಾಳೆ ಬೆಳಗ್ಗೆ ಉಪಾಹಾರಕ್ಕೆ ನನ್ನ ಮನೆಗೆ ಬರುತ್ತೀರಾ?’’
ಮುಸ್ಲಿಯಾರರ ಮುಖದಲ್ಲಿ ನಗು ಅರಳಿತು. ‘‘ಆಯಿತು ಭಟ್ಟರೇ. ಅದಕ್ಕೇನಂತೆ. ನಿಮ್ಮ ಸ್ನೇಹ, ವಿಶ್ವಾಸಕ್ಕಿಂತ ದೊಡ್ಡದು ಯಾವುದಿದೆ ಹೇಳಿ’’
‘‘ಸರಿ, ನಾಳೆ ಬೆಳಗ್ಗೆ ಕಾರು ಕಳುಹಿಸುತ್ತೇನೆ. ಖಂಡಿತ ಬರಬೇಕು’’ ಎಂದು ಹೇಳಿ ಕೃಷ್ಣ ಭಟ್ಟರು ಹೊರಟರು.
ಮರುದಿನ ಬೆಳಗ್ಗೆ ಮುಸ್ಲಿಯಾರರು ಕೃಷ್ಣ ಭಟ್ಟರ ಮನೆಯಲ್ಲಿದ್ದರು. ಕೃಷ್ಣ ಭಟ್ಟರ ಸಂಭ್ರಮವಂತೂ ಹೇಳತೀರದು. ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದರು. ಬಳಿಕ ಕುಳಿತು ಮಾತನಾಡ ತೊಡಗಿದರು.
‘‘ಮುಸ್ಲಿಯಾರರೇ, ನಾವು ಪರಸ್ಪರ ನೋಡಿದ್ದು, ಪರಿಚಯವಾಗಿದ್ದು ನಿನ್ನೆ. ಆದರೆ ಅದೆಷ್ಟೋ ವರ್ಷಗಳ ಗೆಳೆತನ ಇದ್ದಂತೆ ಭಾಸವಾಗುತ್ತಿದೆ. ನಮ್ಮ ಮಧ್ಯೆ ಏನೋ ಒಂದು ಋಣಾನುಬಂಧ ಇರಲೇ ಬೇಕು. ಇಲ್ಲದಿದ್ದರೆ ನೀವಿಂದು ಇಲ್ಲಿಗೆ ತಲುಪುತ್ತಲೇ ಇರಲಿಲ್ಲ ಅಲ್ಲವೇ?’’ ಕೃಷ್ಣ ಭಟ್ಟರು ಮುಸ್ಲಿಯಾರರ ವ್ಯಕ್ತಿತ್ವವನ್ನು ಸಂಪೂರ್ಣ ಹೃದಯದೊಳಗೆ ಇಳಿಸಿ ಬಿಟ್ಟಿದ್ದರು.
‘‘ಅದು ಹೌದು ಭಟ್ಟರೇ, ಮನುಷ್ಯ-ಮನುಷ್ಯ ಸಂಬಂಧ ಎಂದರೆ ಇದೇ ಅಲ್ಲವೇ. ಒಬ್ಬ ದೇವರ ಸೃಷ್ಟಿ, ಒಬ್ಬ ತಂದೆ-ತಾಯಿಯ ಸಂತತಿ ಎಂದರೆ ಹೀಗೆಯೇ. ಆದರೆ ಇದು ಯಾರಿಗೂ ಅರ್ಥವಾಗುವುದಿಲ್ಲ’’ ಮುಸ್ಲಿಯಾರರು ಭಟ್ಟರನ್ನು ಕಣ್ಣು ತುಂಬಿಸಿಕೊಳ್ಳುತ್ತಾ ಕೇಳಿದರು.
‘‘ಮುಸ್ಲಿಯಾರರೇ, ನಾನು ಈ ನಗರದ ಹೆಸರಾಂತ ವಕೀಲ. ನನ್ನ ಕೈಕೆಳಗೆ ಸುಮಾರು 20 ಮಂದಿ ಜೂನಿಯರ್‌ಗಳಿದ್ದಾರೆ. ದಿನದ ಒಂದರ್ಧ ಗಂಟೆಯೂ ನನಗೆ ಬಿಡುವು ಎಂಬುದು ಇರುವುದಿಲ್ಲ. ಇಷ್ಟು ದೊಡ್ಡ ಮನೆ, ಕಾರುಗಳಿವೆ. ಒಳ್ಳೆಯ ಸಂಪಾದನೆ ಇದೆ. ಬೇಕಾದಷ್ಟು ಹಣ, ಸಂಪತ್ತು ಇದೆ. ಆದರೆ ಮನಸ್ಸಿಗೆ ನೆಮ್ಮದಿ ಎಂಬುದಿಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೂ ಓಟ. ಈ ಓಟ ಮುಗಿಯಲಿಕ್ಕೆ ಇಲ್ಲವೇನೋ ಅನಿಸುತ್ತಿದೆ. ಒಮ್ಮಿಮ್ಮೆ ಬೇಜಾರು ಬಂದು ಬಿಡುತ್ತದೆ. ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ. ಬೆಳಗ್ಗೆಯಂತೂ 8 ಗಂಟೆಯಲ್ಲದೆ ನನಗೆ ಏಳಲಿಕ್ಕೇ ಆಗುವುದಿಲ್ಲ. ಆದರೆ ಮುಸ್ಲಿಯಾರರೇ, ಮುಂಜಾನೆಯ ನಿಮ್ಮ ಅಝಾನ್ ಕೇಳಿದ ಮೇಲಂತೂ ನನಗೆ ಬೇಗನೆ ಎಚ್ಚರಿಕೆಯಾಗುತ್ತದೆ. ಅಝಾನ್‌ಗಿಂತ ಒಂದೈದು ನಿಮಿಷ ಮೊದಲು ಅದು ಹೇಗೆ ಎಚ್ಚರವಾಗುತ್ತದೋ ಗೊತ್ತಿಲ್ಲ. ನಾನು ಎದ್ದು ನಿಮ್ಮ ಧ್ವನಿಗಾಗಿ ಕಾದು ಕುಳಿತುಕೊಳ್ಳುತ್ತೇನೆ. ಅಝಾನ್ ಕೇಳಿದ ಮೇಲಂತೂ ಮನಸ್ಸಿಗೆ ಅದೇನೋ ಸಮಾಧಾನ, ಹುರುಪು, ಉತ್ಸಾಹ.
ಮುಸ್ಲಿಯಾರ್ ಮಾತನಾಡಲಿಲ್ಲ, ಮುಗುಳುನಕ್ಕರು ಅಷ್ಟೇ.
‘‘ಮುಸ್ಲಿಯಾರರೇ, ನನಗೆ ಮುಂಜಾನೆಯ ನಿಮ್ಮ ಅಝಾನ್‌ನ ಅರ್ಥ ಸ್ವಲ್ಪ ಹೇಳಬಹುದೇ?’’
ಸೋಫಾಗೆ ಒರಗಿದ್ದ ಮುಸ್ಲಿಯಾರರು ನೆಟ್ಟಗೆ ಕುಳಿತುಕೊಂಡರು.
ಭಟ್ಟರೇ, ಅಝಾನ್ ಎಂದರೆ ದೇವರ ಆರಾಧನೆಗೆ ಬನ್ನಿ ಎಂದು ಮುಸ್ಲಿಮರನ್ನು ಮಸೀದಿಗೆ ಕರೆಯುವುದು. ಅದರ ಭಾವಾರ್ಥ ಹೀಗಿದೆ:
‘‘ಅಲ್ಲಾಹನು ಮಹಾನನು. ಅಲ್ಲಾಹನಲ್ಲದೆ ಆರಾಧ್ಯನಿಲ್ಲವೆಂದು ನಾನು ಸಾಕ್ಷ ವಹಿಸುತ್ತೇನೆ. ಮುಹಮ್ಮದ್ ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ ವಹಿಸುತ್ತೇನೆ. ಬನ್ನಿರಿ ನಮಾಝಿಗೆ, ಬನ್ನಿರಿ ವಿಜಯದೆಡೆಗೆ, ನಿದ್ದೆಗಿಂತ ನಮಾಝ್ ಅತ್ಯುತ್ತಮವಾಗಿದೆ. ಅಲ್ಲಾಹನು ಮಹಾನನು, ಅಲ್ಲಾಹನಲ್ಲದೆ ಆರಾಧ್ಯನಿಲ್ಲ.’’
‘‘ನಿದ್ದೆಗಿಂತಲೂ ಆರಾಧನೆ ಅತ್ಯುತ್ತಮವಾಗಿದೆ’’
‘‘ಓಹ್ ಎಂತಹ ಮಾತು, ಎಂತಹ ಅರ್ಥಗರ್ಭಿತ ವಾಕ್ಯ. ಇದು ಸತ್ಯ ಮುಸ್ಲಿಯಾರರೇ. ನಿದ್ದೆಗಿಂತಲೂ ದೇವರ ಆರಾಧನೆ, ಅದೂ ಮುಂಜಾನೆ ಮಾಡುವ ಆರಾಧನೆ ಮನುಷ್ಯನ ಇಡೀ ದಿನವನ್ನು ಹಸನುಗೊಳಿಸುತ್ತದೆ. ಅಂದಿಡೀ ಮನಸ್ಸಿಗೆ ನೆಮ್ಮದಿ, ಸಮಾಧಾನ ನೀಡುತ್ತದೆ.’’ ಬಳಿಕ ಕೃಷ್ಣಭಟ್ಟರು ಆ ವಿಷಯವಾಗಿಯೇ ಮಾತನಾಡತೊಡಗಿದರು. ಮಾತಿನಮಧ್ಯೆ ಸಮಯ ಸರಿದದ್ದೇ ತಿಳಿಯಲಿಲ್ಲ. ‘‘ನಾನಿನ್ನು ಹೊರಡುತ್ತೇನೆ, ಹೊತ್ತಾಯಿತು’’ ಮುಸ್ಲಿಯಾರ್ ಎದ್ದು ನಿಂತರು.
‘‘ಸರಿ ಮುಸ್ಲಿಯಾರೇ ನಮ್ಮ ಸ್ನೇಹ ಹೀಗೇ ಇರಲಿ. ನೀವು ಆಗಾಗ ಬರುತ್ತಿರಿ. ನಿಮ್ಮ ಜೊತೆ ಮಾತನಾಡಿದರೆ ಮನಸ್ಸಿಗೆ ಏನೋ ಸಮಾಧಾನ, ತೃಪ್ತಿ’’ ಎಂದು ಭಟ್ಟರು ಮುಸ್ಲಿಯಾರರನ್ನು ಳಿಸಿಕೊಟ್ಟರು.
ಆನಂತರ ಕೃಷ್ಣ ಭಟ್ಟರು ಯಾವಾಗಲಾದರೂ ಒಮ್ಮೆ ಮಸೀದಿಯ ಮುಂದೆ ಹಾದು ಹೋಗುವಾಗ ಹಣ್ಣು-ಹಂಪಲು, ಒಣ ಹಣ್ಣುಗಳನ್ನು ಮುಸ್ಲಿಯಾರರಿಗೆ ನೀಡಿ ಮಾತನಾಡಿಸಿ ಹೋಗುತ್ತಿದ್ದರು.
ಮಸೀದಿಯ ಉದ್ಘಾಟನೆಯಾಗಿ ಒಂದೆರಡು ತಿಂಗಳಲ್ಲಿ ಮಸೀದಿ ಕಟ್ಟಿಸಿದ ಖರ್ಚು ವೆಚ್ಚಗಳ ಬಗ್ಗೆ ಗುಸು-ಗುಸು
ಪ್ರಾರಂಭವಾಯಿತು. ಮಸೀದಿ ಕಟ್ಟಿಸಲು ಹಗಲಿರುಳು ಪ್ರಾಮಾಣಿಕವಾಗಿ ದುಡಿದ ಐದು-ಆರು ಮಂದಿಯ ವಿರುದ್ಧ ಹಣ ವಂಚನೆಯ ಆರೋಪ, ಅಪಪ್ರಚಾರಗಳು ಕೇಳಿಬರತೊಡಗಿತು. ಒಂದು ರೂಪಾಯಿಯೂ ವಂಚನೆ ಮಾಡದ, ತಮ್ಮ ಜೇಬಿನಿಂದಲೇ ಅದೆಷ್ಟೋ ಹಣವನ್ನು ವ್ಯಯಿಸಿದ್ದ ಅವರಿಗೆ ಇದರಿಂದ ಬಹಳ ನೋವಾಗತೊಡಗಿತು. ಈ ಬಗ್ಗೆ ಅಲ್ಲಲ್ಲಿ ಮಾತುಗಳು, ಅಪಪ್ರಚಾರ, ಆರೋಪಗಳು ಹೆಚ್ಚಾದಾಗ ಹಿಂಸೆ ತಡೆಯಲಾಗದೆ ಮಸೀದಿಯ ಆಡಳಿತ ಸಮಿತಿಯ ಸಭೆ ಕರೆದು ಲೆಕ್ಕಪತ್ರವನ್ನೆಲ್ಲ ಮಂಡಿಸಿ ಐವರೂ ಸಮಿತಿಗೆ ರಾಜೀನಾಮೆ ನೀಡಿ ಹೊರ ಬಂದರು. ಅಧಿಕಾರ, ಪ್ರಚಾರಕ್ಕಾಗಿ ಹಾತೊರೆಯುತ್ತಿದ್ದ ಕೆಲವು ಸಮಯ ಸಾಧಕರಿಗೆ ಇದೇ ಬೇಕಾಗಿತ್ತು. ರಾಜೀನಾಮೆ ನೀಡಿದ ತಕ್ಷಣ ಅವರು ಇಡೀ ಸಮಿತಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬಿಟ್ಟಿದ್ದರು.
ತಿಂಗಳುಗಳು ಕಳೆಯಿತು, ಮುಸ್ಲಿಯಾರ್‌ಗೆ ಮನೆ ಕೊಡಿಸುತ್ತೇನೆಂದು ಹೇಳಿದವರ ಸುದ್ದಿಯೇ ಇಲ್ಲ. ಸಮಿತಿುವರಲ್ಲಿ ಕೇಳಿದರೆ, ‘ಅದು ನಾವು ಹೇಳಿದ್ದಲ್ಲವಲ್ಲ, ಹಿಂದಿನ ಕಮಿಟಿಯವರು ಹೇಳಿದ್ದಲ್ಲವಾ, ನೋಡುವ, ಮಾಡುವ’ ಹೀಗೆ ಹೇಳತೊಡಗಿದ್ದರು. ವರ್ಷವೊಂದು ಕಳೆದರೂ ಮುಸ್ಲಿಯಾರ್‌ಗೆ ಮನೆ ಕೊಡಲೇ ಇಲ್ಲ. ಇದು ಮುಸ್ಲಿಯಾರ್‌ಗೆ ಬಹಳ ನೋವನ್ನುಂಟು ಮಾಡಿತು. ಒಂದು ದಿನ ಅವರು ಈ ವಿಷಯವನ್ನೆಲ್ಲ ಕೃಷ್ಣ ಭಟ್ಟರಲ್ಲಿ ಹಂಚಿಕೊಂಡರು. ತನ್ನ ಸಂಸಾರದ ವಿಷಯವನ್ನೆಲ್ಲ ಹೇಳಿಕೊಂಡರು.
‘‘ಮನೆ ಅಲ್ಲವಾ, ನೀವೇನು ಈ ಬಗ್ಗೆ ಚಿಂತೆ ಮಾಡಬೇಡಿ. ಎಲ್ಲ ಸರಿಯಾಗುತ್ತದೆ. ನಿಮಗೆ ಮನೆ ಸಿಗುತ್ತದೆ, ಸ್ವಲ್ಪ ಕಾಯಿರಿ’’ ಎಂದು ಭಟ್ಟರು ಸಮಾಧಾನ ಮಾಡಿದರು.
ಅದೊಂದು ದಿನ ಸೌದಿ ಅರೇಬಿಯಾದಿಂದ ಇಬ್ಬರು ಅರಬಿಗಳು ಆ ಮಸೀದಿಗೆ ನಮಾಝಿಗೆಂದು ಬಂದಿದ್ದರು. ಅವರಿಗೆ ಮುಸ್ಲಿಯಾರ್‌ರ ಅಝಾನ್ ಕೇಳಿ ತುಂಬಾ ಖುಷಿಯಾಯಿತು. ಅವರು ಮುಸ್ಲಿಯಾರರನ್ನು ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡು ‘‘ನಿಮ್ಮಲ್ಲಿ ಸ್ವಲ್ಪ ಮಾತನಾಡಲಿಕ್ಕಿದೆ. ನಾವು ನಗರದ ಇಂತಹ ಹೊಟೇಲ್‌ನಲ್ಲಿ ತಂಗಿದ್ದೇವೆ. ನೀವು ಅಲ್ಲಿಗೆ ಬರಬಹುದಾ?’’ ಎಂದು ಕೇಳಿದರು. ಮರುದಿನ ಮುಸ್ಲಿಯಾರ್ ಆ ಹೊಟೇಲ್‌ಗೆ ಹೋಗಿ ಅವರನ್ನು ಭೇಟಿಯಾದರು.
‘‘ನೋಡಿ ಮುಸ್ಲಿಯಾರರೇ, ಸೌದಿಯಲ್ಲಿ ನಮ್ಮ ಒಂದು ಮಸೀದಿಯಿದೆ. ನಮಗೆ ಅಲ್ಲಿಗೆ ಒಬ್ಬ ಮುಅಝ್ಝಿನ್ ಬೇಕು. ನಿಮ್ಮ ಅಝಾನ್ ನಮಗೆ ಬಹಳ ಖುಷಿಯಾಯಿತು. ನೀವು ಸೌದಿಗೆ ಬನ್ನಿ. ನಿಮಗೆ ನಿಮ್ಮ ಅಲ್ಲಿಯ ಖರ್ಚು ಎಲ್ಲ ಕಳೆದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಕೊಡುತ್ತೇವೆ. ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ’’ ಎಂದರು.
ಒಂದು ಕ್ಷಣ ಮುಸ್ಲಿಯಾರ್‌ಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘‘ಯಾವುದಕ್ಕೂ ನಾನೊಮ್ಮೆ ಊರಿಗೆ ಹೋಗಿ ನನ್ನ ಪತ್ನಿಯಲ್ಲಿ ಒಂದು ಮಾತು ಕೇಳುತ್ತೇನೆ’’ ಎಂದು ಹೇಳಿದರು. ‘‘ಸರಿ, ನಾವು ಇನ್ನೂ ಎರಡು ವಾರ ಇದೇ ಹೊಟೇಲ್‌ನಲ್ಲಿ ಇರುತ್ತೇವೆ. ಆದಷ್ಟು ಬೇಗ ಹೇಳಿ’’ ಎಂದರು ಅರಬಿಗಳು.
ಮರುದಿನವೇ ಮುಸ್ಲಿಯಾರ್ ಊರಿಗೆ ಹೋದರು. ಪತ್ನಿಯಲ್ಲಿ ವಿಷಯವೆಲ್ಲ ತಿಳಿಸಿದರು. ‘‘ನೀವು ಹೋಗಿ, ಒಂದೆರಡು ವರ್ಷ ದುಡಿದು ಬನ್ನಿ. ಸ್ವಲ್ಪ ದುಡ್ಡು ಆದರೆ ನಮ್ಮ ಕಷ್ಟಗಳೆಲ್ಲ ಮುಗಿಯಬಹುದು. ನಮಗೆ ಒಂದು ಸ್ವಂತ ಮನೆಯನ್ನಾದರೂ ಕಟ್ಟಿಸಬಹುದು. ಇಲ್ಲಿ ನಾನು ಹೇಗಾದರೂ ಸುಧಾರಿಸುತ್ತೇನೆ’’ ಎಂದು ಪತ್ನಿ ಆಶೆಯ ಕಣ್ಣಿನಿಂದ ಹೇಳಿದರು.
ಆದರೂ ಪತ್ನಿ, ಮಕ್ಕಳನ್ನು ಬಿಟ್ಟು ಹೋಗಲು ಮುಸ್ಲಿಯಾರ್‌ರ ಮನಸ್ಸು ಹಿಂದೇಟು ಹಾಕತೊಡಗಿತ್ತು.
ಮತ್ತೆ ನಗರಕ್ಕೆ ಮರಳಿದ ಮುಸ್ಲಿಯಾರ್ ಮಸೀದಿಯ ಸಮಿತಿಯವರನ್ನು ಕಂಡು ತಾನು ಇಲ್ಲಿ ಬಿಡುವುದಾಗಿಯೂ, ಸೌದಿಗೆ ಹೋಗುವುದಾಗಿಯೂ ಹೇಳಿದರು. ಸಮಿತಿಯವರು ‘ಯಾಕೆ?, ಏನು?’ ಎಂದು ಹೇಳಿದರು ಅಷ್ಟೇ. ಅವರ ಮಾತಿನಲ್ಲಿ ಇಲ್ಲಿ ಬಿಡುವುದು ಬೇಡ ಎಂಬ ಒತ್ತಾಯವಿರಲಿಲ್ಲ.
‘‘ನಾನು ಇಲ್ಲಿಗೆ ಬರುವಾಗ ಆರು ತಿಂಗಳಲ್ಲಿ ನನಗೆ ಮನೆ ಕೊಡುತ್ತೇವೆಂದು ಹೇಳಿದ್ದೀರಿ. ಈಗ ಒಂದು ವರ್ಷ ಕಳೆಯಿತು, ಮನೆ ಕೊಡಲಿಲ್ಲ. ನನ್ನ ಸಂಸಾರದ ಪರಿಸ್ಥಿತಿ ಸರಿಯಿಲ್ಲ. ನಾನಲ್ಲಿ ಬಾಡಿಗೆ ಮನೆಯಲ್ಲಿರುವುದು, ಇಲ್ಲಿಗೆ ಸಂಸಾರ ಕರೆ ತಂದಿದ್ದರೆ ಕನಿಷ್ಠ ಅಲ್ಲಿಯ ಬಾಡಿಗೆ ಹಣವಾದರೂ ಉಳಿಯುತ್ತಿತ್ತು. ಜೊತೆಗೆ ಹೋಗಿ ಬರುವ ಖರ್ಚು ಬೇರೆ ಉಳಿತಾಯವಾಗುತ್ತಿತ್ತು.’’
‘‘ಅದು ನಾವು ಹೇಳಿದ್ದಲ್ಲವಲ್ಲ, ಹಿಂದಿನ ಸಮಿತಿಯವರು ಹೇಳಿದ್ದಲ್ಲವಾ? ಆದರೂ ನೋಡೋಣ, ಮಾಡೋಣ’’
‘‘ಈ ಮಾತನ್ನು ನೀವು ಹಲವು ಬಾರಿ ಹೇಳಿದ್ದೀರಿ. ಆದರೂ ನನಗೊಂದು ಮನೆ ನೀಡುವ ಮನಸ್ಸು ಮಾಡಲಿಲ್ಲ’’
‘‘ನೋಡಿ ಮುಸ್ಲಿಯಾರ್‌ರೇ, ಅದು ಹಾಗೆಲ್ಲ ಕೊಡಲಿಕ್ಕೆ ಆಗುತ್ತದಾ? ನಮ್ಮ ಕೈಯಿಂದ ಕೊಡುವುದಲ್ಲವಲ್ಲ. ಈ ವಿಷಯವನ್ನು ಸಮಿತಿಯಲ್ಲಿಡಬೇಕು. ಅಲ್ಲಿ ಪಾಸಾಗಬೇಕು. ತುಂಬಾ ಕೆಲಸವಿದೆ. ನೋಡೋಣ. ಮತ್ತೆ ನಿಮ್ಮಿಷ್ಟ’’
ಕಮಿಟಿಯವರ ಮಾತಿನಲ್ಲಿ ಭರವಸೆ ಇರಲಿಲ್ಲ. ಇವರು ಮತ್ತೆ ತನ್ನನ್ನು ಸತಾಯಿಸುತ್ತಿದ್ದಾರೆ, ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರ ಮಾತಿನ ಧಾಟಿಯಿಂದ ಮನದಟ್ಟಾಯಿತು. ಈಗಲಾದರೂ ಮನೆ ಕೊಡಬಹುದು, ತಾನು ಇಲ್ಲಿಯೇ ಇರಬಹುದು ಎಂದು ಆಶೆಯಿಂದಿದ್ದ ಮುಸ್ಲಿಯಾರ್‌ರಿಗೆ ನಿರಾಶೆಯಾಯಿತು. ನೋವಿನಿಂದ ಕರುಳು ಹಿಂಡಿದಂತಾಯಿತು. ಹಾಗೆಯೇ ಸ್ವಲ್ಪ ಹೊತ್ತು ಕಂಬದಂತೆ ನಿಂತು ಯೋಚಿಸುತ್ತಿದ್ದ ಅವರ ಕಣ್ಣು ಮಂಜಾಗತೊಡಗಿತು. ತಕ್ಷಣ ಒಂದು ನಿರ್ಧಾರಕ್ಕೆ ಬಂದವರಂತೆ ಅಲ್ಲಿಯೇ ರಾಜೀನಾಮೆ ಬರೆದುಕೊಟ್ಟು ಹೊರಟೇ ಬಿಟ್ಟರು. ಮತ್ತೆ ಅರಬಿಗಳನ್ನು ಕಂಡು ತನ್ನ ಒಪ್ಪಿಗೆ ಸೂಚಿಸಿದರು. ಅರಬಿಗಳು ‘‘ಪಾಸ್‌ಪೋರ್ಟ್ ಇದೆಯೇ?’’ ಕೇಳಿದರು. ‘‘ಇದೆ’’. ‘‘ಹಾಗಾದರೆ ತಕ್ಷಣ ಹೊರಡಿ’’ ಎಂದರು.
ಇದೆಲ್ಲ ಆಗಿ ಮೂರು ವರ್ಷಗಳು ಕಳೆದಿತ್ತು.
ಒಂದು ದಿನ ಮಸೀದಿಯ ಹೊರಾಂಗಣದಲ್ಲಿ ಯಾರೋ ಒಬ್ಬರು ನಿಂತಿರುವುದನ್ನು ಕಂಡ ಧರ್ಮಗುರುಗಳು ಅನುಮಾನಿಸುತ್ತಾ ಅವರ ಬಳಿ ಬಂದು ‘‘ನೀವು ಸಂಶುದ್ದೀನ್ ಮುಸ್ಲಿಯಾರ್ ಅಲ್ಲವಾ?’’ ಕೇಳಿದರು. ‘‘ಹೌದು ನಾನೇ’’. ಕಪ್ಪಗೆ ಒಣಗಿದ ಚರ್ಮ, ಕಡ್ಡಿಯಂತಾದ ದೇಹ, ಕಳೆಗುಂದಿದ ಮುಖ, ಗುಳಿಬಿದ್ದ ಕಣ್ಣುಗಳು, ನಿಂತುಕೊಳ್ಳಲು ತ್ರಾಣವಿಲ್ಲದಂತೆ ಅಲುಗಾಡುತ್ತಿದ್ದ ಅವರನ್ನು ಕಂಡು ಗುರುಗಳಿಗೆ ಆಶ್ಚರ್ಯವಾಯಿತು.
‘‘ಏನು ಮುಸ್ಲಿಯಾರರೇ ನಿಮ್ಮ ಅವಸ್ಥೆ. ಯಾಕೆ, ಆರೋಗ್ಯ ಸರಿಯಿಲ್ಲವೇ?’’
‘‘ಹೌದು ಆರೋಗ್ಯ ಸರಿಯಿಲ್ಲ’’ ಎಂದು ಹೇಳಿ ಮಾತು ಮುಂದುವರಿಸಲು ಇಷ್ಟವಿಲ್ಲದೆ ‘‘ಎಲ್ಲ ಇನ್ನೊಮ್ಮೆ ಹೇಳುತ್ತೇನೆ’’ ಎಂದು ಸುಮ್ಮನಾದರು. ಆ ಮೇಲೆ ಮಸೀದಿಗೆ ಬಂದವರಲೆಲ್ಲ ಸ್ವಲ್ಪ ಹಣ ಒಟ್ಟು ಮಾಡಿ ಅವರಿಗೆ ನೀಡಿದರು.
ಮುಸ್ಲಿಯಾರ್ ಬಂದ ವಿಷಯ ಅದು ಹೇಗೋ ಒಂದು ಬೆಳ್ಳಗ್ಗೆ ಕೃಷ್ಣ ಭಟ್ಟರಿಗೆ ತಿಳಿದು ಹೋಯಿತು. ತಕ್ಷಣ ಕಾರು ತೆಗೆದುಕೊಂಡು ಮಸೀದಿಯತ್ತ ಧಾವಿಸಿದರು. ಮುಸ್ಲಿಯಾರರನ್ನು ಕಂಡು ಅವರಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಕರುಳು ಕಿತ್ತು ಬಂದಂತಹ ಸಂಕಟ. ‘‘ಬನ್ನಿ ಮುಸ್ಲಿಯಾರರೇ, ನಾವು ಮನೆಯ ಕಡೆ ಒಮ್ಮೆ ಹೋಗಿ ಬರುವ’’ ಎಂದು ಅವರ ಕೈಹಿಡಿದು ಬಲವಂತವಾಗಿ ಮನೆಗೆ ಕರೆದೊಯ್ದರು. ಅವರಿಗೆ ಕುಡಿಯಲು, ತಿನ್ನಲು ಕೊಟ್ಟು ಸುಧಾರಿಸಿದ ಮೇಲೆ ‘‘ಹೇಳಿ ಮುಸ್ಲಿಯಾರರೇ, ಯಾಕೆ ಹೀಗೆ ಸೊರಗಿದ್ದೀರಿ, ಆರೋಗ್ಯ ಸರಿಯಿಲ್ಲವೇ? ಹೇಳಿ, ಒಂದೂ ಬಿಡದೆ ನನಗೆ ಹೇಳಬೇಕು’’ ಎನ್ನುತ್ತಾ ಅವರ ಮುಖ ನೋಡುತ್ತಾ ಕುಳಿತು ಬಿಟ್ಟರು.
ಮುಸ್ಲಿಯಾರ್ ತಲೆ ಕೆಳಗೆ ಹಾಕಿ ವೌನವಾಗಿ ಹೇಳುವುದೋ, ಬೇಡವೋ ಎಂದು ಯೋಚಿಸುತ್ತಾ ಕುಳಿತು ಬಿಟ್ಟರು. ಆದರೆ ತಮಗಾದ ಅನ್ಯಾಯ, ಶೋಷಣೆ, ಮೋಸ, ಕಷ್ಟ-ನಷ್ಟ ಎಲ್ಲವನ್ನೂ ಯಾರಲ್ಲಾದರೂ ಹೃದಯ ಬಿಚ್ಚಿ ಹೇಳಬೇಕಾಗಿತ್ತು. ಹೇಳದಿದ್ದರೆ ಯಾವುದೇ ಕ್ಷಣದಲ್ಲಾದರೂ ಅವರ ಹೃದಯ ಖಂಡಿತವಾಗಿಯೂ ಒಡೆದು ಹೋಗುತ್ತಿತ್ತು. ಹೇಳಿಕೊಳ್ಳಲು ಕೃಷ್ಣ ಭಟ್ಟರಂತಹ ಒಬ್ಬ ಆತ್ಮೀಯ, ಪ್ರಾಮಾಣಿಕ ಗೆಳೆಯ ಅವರಿಗೆ ಬೇರೆ ಯಾರೂ ಇರಲಿಲ್ಲ. ಅವರು ತಲೆ ಎತ್ತಿದರು. ಕೃಷ್ಣಭಟ್ಟರ ಕಣ್ಣಿಗೆ ಕಣ್ಣಿಟ್ಟು ನೋಡಿದರು. ಅವರ ಕಣ್ಣು ತೇವಗೊಳ್ಳತೊಡಗಿತು.
‘‘ಹಲವಾರು ಕನಸುಗಳನ್ನು ಹೊತ್ತುಕೊಂಡು ಸೌದಿ ಅರೇಬಿಯಾಕ್ಕೆ ಹೋದ ನನ್ನನ್ನು ಅರಬಿಗಳು ವಂಚಿಸಿ ಬಿಟ್ಟರು ಭಟ್ಟರೇ. ಸೌದಿ ವಿಮಾನ ನಿಲ್ದಾಣದಲ್ಲಿ ಇಳಿದ ನನ್ನನ್ನು ಕೆಲವರು ಬಂದು ಮರುಭೂಮಿಯ ಕುಗ್ರಾಮದ ಒಂದು ಸಣ್ಣ ಮಸೀದಿಗೆ ಕರೆದುಕೊಂಡು ಹೋದರು. ಅಲಿದ್ದದ್ದು ಒಟ್ಟು 25-30 ಬದವಿಗಳ(ಮೂಲನಿವಾಸಿಗಳು) ಮನೆಗಳು. ಅವರಿಗೆ ಕುರಿಸಾಕುವ ಕೆಲಸ. ಅವರು ಅರಬಿಗಳ ಗುಲಾಮರಂತೆ ಜೀವಿಸುತ್ತಿದ್ದರು. ಅಲ್ಲಿ ಹೋದ ಮೇಲೆ ನಾನೂ ಅವರಲ್ಲೊಬ್ಬ ಗುಲಾಮನಂತಾಗಿ ಬಿಟ್ಟೆ. ಅವರನ್ನು ಬಿಟ್ಟು ಬೇರೆ ಯಾರ ಸಂಪರ್ಕವೂ ಅಲ್ಲಿ ನನಗಿರಲಿಲ್ಲ. ಮಸೀದಿಯಲ್ಲಿ ಅಝಾನ್ ಕೊಡುವುದು, ನಮಾಝ್ ಮಾಡಿಸುವುದು, ಮಸೀದಿ ಶುಚಿಗೊಳಿಸುವುದು ನನ್ನ ಕೆಲಸ. ಹತ್ತಿರದಲ್ಲಿ ಎಲ್ಲಿಯೂ ಒಂದು ಅಂಗಡಿ ಕೂಡಾ ಇರಲಿಲ್ಲ. ತಿಂಗಳಾಗುವಾಗ ಒಂದಿಷ್ಟು ಅಡುಗೆ ಸಾಮಗ್ರಿಗಳನ್ನು ತಂದು ಹಾಕುತ್ತಿದ್ದರು. ನಾನೇ ಸ್ಟವ್‌ನಲ್ಲಿ ಬೇಯಿಸಿಕೊಳ್ಳಬೇಕಾಗಿತ್ತು. ವರ್ಷ ಕಳೆದರೂ ನನಗೆ ಸಂಬಳ ಕೊಡಲೇ ಇಲ್ಲ. ನನ್ನನ್ನು ಇಲ್ಲಿಂದ ಕಳುಹಿಸಿದ ಅರಬಿಗಳನ್ನು ನಾನು ಅಲ್ಲಿ ನೋಡಲೇ ಇಲ್ಲ. ಅಲ್ಲಿಗೆ ಬಂದ ಅರಬಿಗಳಲ್ಲಿ ನನ್ನ ಕಷ್ಟ ಹೇಳಿ ಸಂಬಳ ಕೇಳಿದರೆ ‘ನಿಮ್ಮ ಪತ್ನಿಯ ಬ್ಯಾಂಕ್ ಖಾತೆ ನಂಬರ್ ಕೊಡಿ ಅವರ ಖಾತೆಗೆ ಸ್ವಲ್ಪ ಸ್ವಲ್ಪ ಹಾಕುತ್ತೇವೆ. ಬಾಕಿ ನೀವು ಊರಿಗೆ ಹೋಗುವಾಗ ಒಮ್ಮೆಲೇ ಕೊಡುತ್ತೇವೆ’ ಎಂದು ಪತ್ನಿಯ ಖಾತೆ ನಂಬರ್ ತೆಗೆದುಕೊಂಡಿದ್ದರು. ಊರಿಗೆ ದುಡ್ಡು ಕಳುಹಿಸಿದ್ದಾರಾ? ಇಲ್ಲವಾ? ಅಲ್ಲಿ ಹೆಂಡತಿ ಮಕ್ಕಳು ಹೇಗಿದ್ದಾರೆ? ಇದ್ದಾರಾ, ಸತ್ತಿದ್ದಾರಾ? ಎಂದು ತಿಳಿಯಲು ಅಲ್ಲಿ ಫೋನ್ ಕೂಡಾ ಸಿಗುತ್ತಿರಲಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತಹ ಸ್ಥಿತಿ ನನ್ನದಾಗಿತ್ತು. ಸುಮಾರು ಆರು ತಿಂಗಳ ನಂತರ ಒಂದು ಟ್ರಕ್ ತುಂಬಾ ಕುರಿಗಳನ್ನು ತಂದು ಮಸೀದಿಯ ಮುಂದೆ ಇಳಿಸಿದರು. ಬಳಿಕ ಆ ಕುರಿಗಳನ್ನು ಸಾಕುವ ಕೆಲಸವನ್ನೂ ನನಗೆ ವಹಿಸಲಾಯಿತು. ಹೀಗೆ ಮೂರು ವರ್ಷ ನಾನು ಆ ನರಕದಲ್ಲಿ ಬೆಂದು ಕರಟಿ ಹೋದೆ. ನನ್ನ ಈ ಸ್ಥಿತಿಯನ್ನು ಹೇಳಿಕೊಳ್ಳಲು ಒಬ್ಬನೇ ಒಬ್ಬ ವ್ಯಕ್ತಿಯೂ ನನಗೆ ಅಲ್ಲಿ ಸಿಗಲಿಲ್ಲ. ಒಮ್ಮೆ ದಾರಿ ಹೋಕ ಒಂದಿಬ್ಬರು ಊರಿನ ಯುವಕರು ಆ ಮಸೀದಿಗೆ ನಮಾಝಿಗೆ ಬಂದಿದ್ದರು. ಅವರಲ್ಲಿ ನಾನು ನನ್ನ ಸ್ಥಿತಿಯನ್ನೆಲ್ಲ ವಿವರಿಸಿ ಅತ್ತು-ಗೋಗರೆದು ನನ್ನನ್ನು ಹೇಗಾದರೂ ಇಲ್ಲಿಂದ ಪಾರು ಮಾಡಿ ಎಂದು ಬೇಡಿಕೊಂಡೆ. ಅವರು ಅಲ್ಲಿರುವ ಊರಿನವರ ಒಂದು ಸಂಘಟನೆಯನ್ನು ಸಂಪರ್ಕಿಸಿ ನನ್ನನ್ನು ರಕ್ಷಿಸಿ ಅಲ್ಲಿಂದ ವಿಮಾನ ಹತ್ತಿಸಿ ಬಿಟ್ಟರು. ನಾನು ಬರುವ ಸಂಪೂರ್ಣ ಖರ್ಚನ್ನು ಆ ಸಂಘಟನೆಯವರೇ ಭರಿಸಿದರು. ಈ ಮೂರು ವರ್ಷಗಳಲ್ಲಿ ನಾನು ಅನುಭವಿಸಿದ ಕಷ್ಟ, ಮಾನಸಿಕ ಹಿಂಸೆ, ನೋವು ಅದು ನನಗೇ ಗೊತ್ತು. ಅದನ್ನು ಇಲ್ಲಿ ವಿವರಿಸಲು ನನಗೆ ಶಬ್ದಗಳೇ ಇಲ್ಲ ಭಟ್ಟರೇ’’ ಎನ್ನುತ್ತಾ ಮುಸ್ಲಿಯಾರ್ ಕಣ್ಣೊರೆಸಿಕೊಂಡರು.
ಭಟ್ಟರ ಪ್ರೀತಿಯ ಅಪ್ಪುಗೆಯಿಂದ ಬಿಡಿಸಿಕೊಂಡು ಮುಸ್ಲಿಯಾರರು ಮೂಗು, ಕಣ್ಣು ಒರೆಸಿಕೊಳ್ಳುತ್ತಾ ‘‘ನಾನಿನ್ನು ಹೊರಡುತ್ತೇನೆ’’ ಎಂದರು. ‘‘ಒಂದು ನಿಮಿಷ ನಿಲ್ಲಿ ಮುಸ್ಲಿಯಾರರೇ ಈಗ ಬಂದೆ’’ ಎಂದ ಕೃಷ್ಣ ಭಟ್ಟರು ಒಳಗೆ ಹೋದವರು ಮತ್ತೆ ಬಂದು ನೋಟಿನ ಒಂದು ಕಂತೆಯನ್ನು ಮುಸ್ಲಿಯಾರರ ಕೈಗಿಟ್ಟರು.
‘‘ಅಲ್ಲ ಮುಸ್ಲಿಯಾರರೇ, ನೀವು ಇಲ್ಲಿಂದ ಹೋಗುವಾಗ ನನ್ನಲ್ಲಿ ಒಂದು ಮಾತು ಹೇಳದೆ ಹೋದಿರಲ್ಲ ಯಾಕೆ ಹಾಗೆ ಮಾಡಿದಿರಿ?’’
‘‘ಊರಿಗೆ ಹೋದ ನಾನು, ಮತ್ತೆ ಒಮ್ಮೆ ಇಲ್ಲಿಗೆ ಬಂದು ನಿಮಗೆ ಮತ್ತು ಎಲ್ಲರಿಗೂ ಹೇಳಿ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆ ಅರಬಿಗಳು ಅವಸರ ಮಾಡಿದರು. ಎಲ್ಲವೂ ಕಣ್ಣು ಮುಚ್ಚಿ ತೆರೆಯುವುದರೊಳಗೆ ನಡೆದು ಹೋಗಿತ್ತು ಭಟ್ಟರೆ’’
‘‘ನಾನು ಒಂದು ದೊಡ್ಡ ತಪ್ಪು ಮಾಡಿದೆ ಮುಸ್ಲಿಯಾರರೇ. ನನ್ನಲ್ಲಿ ಇನ್ನೂ ಎರಡು ಮನೆಗಳಿವೆ. ಎರಡನ್ನೂ ಬಾಡಿಗೆಗೆ ಕೊಟ್ಟಿದ್ದೇನೆ ಒಂದು ಖಾಲಿಯಾಗುವುದರಲ್ಲಿತ್ತು. ಆದರೆ ಯಾವಾಗ ಖಾಲಿಯಾಗುತ್ತೆ ಗೊತ್ತಿರಲಿಲ್ಲ. ಅದು ಖಾಲಿಯಾದ ತಕ್ಷಣ ನಿಮಗೆ ಕೊಡಬೇಕು ಎಂದು ತೀರ್ಮಾನಿಸಿದ್ದೆ. ಖಾಲಿಯಾದ ತಕ್ಷಣ ನಿಮಗೆ ಹೇಳೋಣ ಎಂದಿದ್ದೆ. ಅಷ್ಟರಲ್ಲಿ ನೀವು ಹೇಳದೆ ಕೇಳದೆ ಹೋಗಿಬಿಟ್ಟಿರಿ. ನೀವು ಹೋದ ಎರಡೇ ತಿಂಗಳಲ್ಲಿ ಆ ಮನೆ ಖಾಲಿಯಾಗಿತ್ತು’’.
‘‘ಎಲ್ಲ ನನ್ನ ದುರದೃಷ್ಟ’’ ಎಂದು ಮುಸ್ಲಿಯಾರ್ ಸುಮ್ಮನೆ ಕುಳಿತುಬಿಟ್ಟರು. ಆನಂತರ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದರು. ಮುಸ್ಲಿಯಾರ್ ಹೊರಟು ನಿಂತರು.
‘‘ಮುಸ್ಲಿಯಾರರೇ, ನನ್ನ ಒಂದು ಆಸೆ ಇದೆ. ಅದನ್ನು ನೆರವೇರಿಸಿಕೊಡುತ್ತೀರಾ? ಅದು ನಿಮಗೆ ಇಷ್ಟ ಇದ್ದರೆ ಮಾತ್ರ’’
‘‘ಹೇಳಿ ಭಟ್ಟರೆ, ಏನದು ಹೇಳಿ’’
‘‘ ನಿಮ್ಮ ಅಝಾನ್ ಕೇಳದೆ ಮೂರು ವರ್ಷಗಳೇ ಕಳೆದು ಹೋದವು. ಪ್ರತಿದಿನ ಮುಂಜಾನೆ ಅಝಾನ್ ಆಗುವಾಗ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ. ನಿಮ್ಮ ಕಂಠದಿಂದ ಹೊರಡುವ ಆ ಅಝಾನ್ ಒಮ್ಮೆ ಕೇಳಬೇಕೂಂತ ತುಂಬ ಆಸೆಯಾಗಿದೆ. ಒಮ್ಮೆ ಬೆಳಗ್ಗಿನ ಆ ಅಝಾನ್ ಹೇಳುತ್ತೀರಾ? ’’
‘ಇಲ್ಲಿ?’’
‘‘ಹೌದು, ಇಲ್ಲಿ , ಈಗ’’
ಮುಸ್ಲಿಯಾರ್ ಒಂದು ಕ್ಷಣ ಗೊಂದಲಕ್ಕೀಡಾದರು. ಇಲ್ಲಿ ಅಝಾನ್ ಕೊಡುಬಹುದೇ, ಯಾಕೆ ಕೊಡಬಾರದು? ಇದು ದೇವರ ಆರಾಧನೆಗೆ ಜನರನ್ನು ಎಚ್ಚರಿಸುವುದು.... ಜೀವದ ಗೆಳೆಯ ಭಟ್ಟರು ಆಸೆ ಪಟ್ಟಿದ್ದಾರೆ......
‘‘ಏನಾದರೂ ಸಮಸ್ಯೆ ಇದೆಯೇ ಮುಸ್ಲಿಯಾರರೇ’’ ಭಟ್ಟರು ಕೇಳಿದರು.
‘‘ಛೇ ಛೇ, ಏನೂ ಸಮಸ್ಯೆ ಇಲ್ಲ’’ ಮುಸ್ಲಿಯಾರ್ ಅಝಾನ್ ಕೊಡಲು ಸಿದ್ಧರಾದರು.
‘‘ಒಂದು ನಿಮಿಷ ಈಗ ಬಂದೆ’’ ಎಂದ ಭಟ್ಟರು ಒಳಗೆ ಹೋಗಿ ತನ್ನ ಪ್ಯಾಂಟು, ಅಂಗಿ ಕಳಚಿ ಬಿಳಿ ರೇಷ್ಮೆ ಅಂಗಿ, ಬಿಳಿ ಲುಂಗಿ, ಹೆಗಲಲ್ಲೊಂದು ಬಿಳಿ ಶಾಲು ಹಾಕಿಕೊಂಡು ಬಂದು ನೆಲದ ಮೇಲೆ ಕಾಲು ಮಡಚಿ ಕುಳಿತುಕೊಂಡು ‘‘ಹಾಂ, ಪ್ರಾರಂಭಿಸಿ’’ ಎಂದರು.
‘ಅಲ್ಲಾಹು ಅಕ್ಬರ್ ....ಅಲ್ಲಾಹು ಅಕ್ಬರ್ ...’ ಮುಸ್ಲಿಯಾರ್‌ರ ಕಂಠದಿಂದ ಅಝಾನ್ ಧ್ವನಿ ಸಂಗೀತದಂತೆ ಹೊಮ್ಮತೊಡಗಿತು. ಭಟ್ಟರು ಧ್ಯಾನಸ್ಥರಾದಂತೆ ಕಣ್ಣುಮುಚ್ಚಿ ಕುಳಿತು ಬಿಟ್ಟರು.
ಅಝಾನ್ ಹೇಳುತ್ತಿದ್ದಂತೆಯೇ ಮುಸ್ಲಿಯಾರ್‌ಗೆ ತಾನು ಪೊನ್ನಾನಿಯ ಸಮೀಪದ ಪುಟ್ಟ ಮಸೀದಿಯಿಂದ ಈ ನಗರದ ದೊಡ್ಡ ಮಸೀದಿಗೆ ಬಂದದ್ದು, 25 ಕೋಟಿ ರೂಪಾಯಿಯ ಮಸೀದಿ ಕಟ್ಟಿಸಿದವರು ತನಗೊಂದು ಸೂರು ಒದಗಿಸದೆ ಮಾತು ತಪ್ಪಿದ್ದು, ಹೊಸ ಸಮಿತಿಯವರು ತನಗೆ ಮನೆ ಕೊಡುತ್ತೇನೆಂದು ಸತಾಯಿಸಿದ್ದು, ಒಂದು ಲಕ್ಷ ರೂಪಾಯಿ ಸಂಬಳ ಕೊಡುತ್ತೇನೆಂದು ಅರಬಿಗಳು ಇಲ್ಲಿಂದ ಕರೆದುಕೊಂಡು ಹೋಗಿ ಮರುಭೂಮಿಯ ಕಾದ ಕೆಂಡದಂತಹ ಮರಳುಗಾಡಿನಲ್ಲಿ ಒಂದು ರೂಪಾಯಿಯೂ ಕೊಡದೆ ನನ್ನನ್ನು ಉರಿಸಿದ್ದು, ತನ್ನ ಪತ್ನಿ ಮಕ್ಕಳು ಅನಾರೋಗ್ಯದಿಂದ, ಹಸಿವಿನಿಂದ ಒದ್ದಾಡಿದ್ದು, ಈ ಎಲ್ಲ ಅನ್ಯಾಯ, ಮೋಸ, ವಂಚನೆ, ಶೋಷಣೆ, ದೌರ್ಜನ್ಯದ ದೃಶ್ಯಗಳು ಒಂದೊಂದಾಗಿ ಅವರ ಕಣ್ಣು ಮುಂದೆ ಸುಳಿಯತೊಡಗಿತು. ಅಝಾನ್‌ನ ಕೊನೆಯ ವಾಕ್ಯ ಹೇಳುವಾಗ ದುಃಖ ಉಮ್ಮಳಿಸಿ ಬಂದು ತನ್ನೆರಡು ಅಂಗೈಯಿಂದಲೂ ಮುಖ ಮುಚ್ಚಿ ಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು. ಕೃಷ್ಣಭಟ್ಟರು ಗಾಬರಿಯಿಂದ ಎದ್ದು ಅವರ ಬಳಿ ಬಂದು, ‘‘ಏನಾಯಿತು? ಏನಾಯಿತು ಮುಸ್ಲಿಯಾರರೇ?’ ಎಂದು ಕೇಳಿದಾಗ ಮುಸ್ಲಿಯಾರರ ಅಳು ಜಾಸ್ತಿಯಾಯಿತು. ಅವರು ಕೃಷ್ಣಭಟ್ಟರ ಭುಜದ ಮೇಲೆ ಮುಖ ಇಟ್ಟು ಗೋಳೋ ಎಂದು ಅತ್ತು ಬಿಟ್ಟರು. ಕೃಷ್ಣ ಭಟ್ಟರು ಅವರನ್ನು ಅಪ್ಪಿ ಹಿಡಿದು ಸಮಾಧಾನಿಸುವಂತೆ ಬೆನ್ನು ಸವರತೊಡಗಿದರು. ಅದೆಷ್ಟು ಹೊತ್ತು ಅವರು ಹಾಗೆಯೇ ನಿಂತಿದ್ದರೋ ಅವರಿಗೇ ಗೊತ್ತಿಲ್ಲ. ಮುಸ್ಲಿಯಾರರು ಎಚ್ಚರವಾದವರಂತೆ ಭಟ್ಟರ ಬಾಹುಗಳಿಂದ ಬಿಡಿಸಿಕೊಂಡು ಅವರ ಮುಖ ನೋಡಿದರು. ಭಟ್ಟರ ಕಣ್ಣು ತುಂಬಾ ನೀರು ಮಡುಗಟ್ಟಿ ನಿಂತಿತ್ತು. ಅಳುವುದಕ್ಕೆ ತಯಾರಾದ ತುಟಿಗಳು ಅದುರುತ್ತಿದ್ದವು. ಇದನ್ನು ಕಂಡ ಮುಸ್ಲಿಯಾರ್‌ಗೆ ತಡೆಯಲಾಗಲಿಲ್ಲ. ‘‘ಅಣ್ಣಾ...ನನ್ನಣ್ಣ ..’’ ಎಂದು ಕೂಗಿ ಅಳುತ್ತಾ ಭಟ್ಟರನ್ನು ಮತ್ತೆ ಆಲಂಗಿಸಿಕೊಂಡರು. ಮತ್ತೆ ಇಬ್ಬರೂ ಮಾತನಾಡಲಿಲ್ಲ. ಅವರ ವೌನವೇ ಮಾತನಾಡತೊಡಗಿತ್ತು.
ಭಟ್ಟರ ಪ್ರೀತಿಯ ಅಪ್ಪುಗೆಯಿಂದ ಬಿಡಿಸಿಕೊಂಡು ಮುಸ್ಲಿಯಾರರು ಮೂಗು, ಕಣ್ಣು ಒರೆಸಿಕೊಳ್ಳುತ್ತಾ ‘‘ನಾನಿನ್ನು ಹೊರಡುತ್ತೇನೆ’’ ಎಂದರು. ‘‘ಒಂದು ನಿಮಿಷ ನಿಲ್ಲಿ ಮುಸ್ಲಿಯಾರರೇ ಈಗ ಬಂದೆ’’ ಎಂದ ಕೃಷ್ಣ ಭಟ್ಟರು ಒಳಗೆ ಹೋದವರು ಮತ್ತೆ ಬಂದು ನೋಟಿನ ಒಂದು ಕಂತೆಯನ್ನು ಮುಸ್ಲಿಯಾರರ ಕೈಗಿಡುತ್ತಾ ‘‘ಮುಸ್ಲಿಯಾರರೇ, ಇದರಲ್ಲಿ ಎರಡು ಲಕ್ಷ ರೂ. ಇದೆ. ಇದನ್ನು ಇಟ್ಟುಕೊಳ್ಳಿ ಇನ್ನು ಏನಾದರೂ ನಿಮಗೆ ಸಹಾಯ ಬೇಕಿದ್ದರೆ ಯಾವ ಮುಜುಗರವೂ ಇಲ್ಲದೆ ನನಗೆ ತಿಳಿಸಿ. ಹೆಂಡತಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡಿ ’’ಎಂದಾಗ ಮುಸ್ಲಿಯಾರ್ ಬೇಡ ಅನ್ನಲಿಲ್ಲ. ಅವರ ಎರಡು ಅಂಗೈಯ ಮಧ್ಯೆ ನೋಟಿನ ಕಂತೆ ಭದ್ರವಾಗಿತ್ತು. ಅವರಿಗೆ ದುಡ್ಡಿನ ಅಷ್ಟು ಅವಶ್ಯಕತೆಯಿತ್ತು. ಮತ್ತೊಮ್ಮೆ ಕೃಷ್ಣ ಭಟ್ಟರನ್ನು ಆಲಂಗಿಸಿಕೊಂಡ ಮುಸ್ಲಿಯಾರರು ಹೊರಟರು. ಕಾರಿನಲ್ಲಿ ಬಿಟ್ಟು ಬರುತ್ತೇನೆ ಎಂದು ಏಷ್ಟು ಒತ್ತಾಯಿಸಿದರೂ ಒಪ್ಪದ ಮುಸ್ಲಿಯಾರರು ರಸ್ತೆಯಲ್ಲಿ ಹೆಜ್ಜೆ ಹಾಕ ತೊಡಗಿದ್ದರು. ಕಿಟಕಿ ಪಕ್ಕ ನಿಂತು ಮುಸ್ಲಿಯಾರ್ ಕಣ್ಣೊರೆಸಿಕೊಂಡು ಹೋಗುತ್ತಿರುವುದನ್ನೇ ನೋಡುತ್ತಿದ್ದ ಕೃಷ್ಣ ಭಟ್ಟರಿಗೆ ಅವರ ಅಝಾನ್‌ನ ಧ್ವನಿ ಕೊಳಲ ನಾದದಂತೆ ಕಿವಿಯಲ್ಲಿ ಗುಂಯ್ ಗುಡತೊಡಗಿತ್ತು. ಮುಸ್ಲಿಯಾರ್ ಕಣ್ಮರೆಯಾಗುವವರೆಗೂ ಅವರು ಹಾಗೆಯೇ ನಿಂತಿದ್ದರು. ಬಳಿಕ ಅವರ ದೇಹದಿಂದ ದೊಡ್ಡ ನಿಟ್ಟುಸಿರೊಂದು ಹೊರಬಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ