varthabharthi


ಸಂಪಾದಕೀಯ

ಅತಿಥಿ ಉಪನ್ಯಾಸಕರ ಬಗ್ಗೆ ಸಹಾನುಭೂತಿ ಇರಲಿ

ವಾರ್ತಾ ಭಾರತಿ : 4 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರಾಜ್ಯದ ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುವ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಮತ್ತು ಸಂಬಳ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಚಳವಳಿ ಮಾರ್ಗವನ್ನು ಹಿಡಿದಿದ್ದಾರೆ. ಇದರಿಂದಾಗಿ ಕೋವಿಡ್ ಕಾರಣದಿಂದ ತುಂಬಾ ತಡವಾಗಿ ಆರಂಭವಾದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಯ ಮೇಲೆ ಮತ್ತೆ ದುಷ್ಪರಿಣಾಮ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಇವರ ಬೇಡಿಕೆಗಳ ಬಗ್ಗೆ ಸಹಾನುಭೂತಿ ತೋರಿಸಬೇಕಾದ ರಾಜ್ಯ ಸರಕಾರ ನಕಾರಾತ್ಮಕವಾಗಿ ವರ್ತಿಸುತ್ತಿದೆ. ತಮ್ಮ ಬೇಡಿಕೆಗಳಿಗಾಗಿ ಮನವಿ ಸಲ್ಲಿಸಲು ಬಂದ ಅತಿಥಿ ಉಪನ್ಯಾಸಕರೊಂದಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಡೆದುಕೊಂಡ ರೀತಿ ಸರಿಯಲ್ಲ. ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಸಹಾನುಭೂತಿ ತೋರಿಸಬೇಕಾದ ಸಚಿವರು ‘‘ಕೆಲಸ ಬೇಡವಾದರೆ ಬಿಟ್ಟು ಹೋಗಿ’’ ಎಂದು ದರ್ಪದ ಭಾಷೆಯಲ್ಲಿ ಮಾತಾಡಿದ್ದು ಅವರ ಸ್ಥಾನ ಮಾನಕ್ಕೆ ಶೋಭೆ ತರುವುದಿಲ್ಲ.

ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,183 ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಾರೆ. ದೈನಂದಿನ ಪಾಠಗಳಿಗೆ ಬಹುತೇಕ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಈ ಕಾಲೇಜುಗಳಲ್ಲಿ ಕಾರ್ಯಭಾರಕ್ಕೆ ತಕ್ಕಂತೆ ಬೋಧಕ ಸಿಬ್ಬಂದಿ ಇಲ್ಲ. ಸರಕಾರಕ್ಕೂ ನೇಮಕಾತಿ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಅತಿಥಿ ಉಪನ್ಯಾಸಕರಿಗೆ ಹನ್ನೊಂದು ಸಾವಿರದಿಂದ ಹದಿಮೂರು ಸಾವಿರ ರೂಪಾಯಿವರೆಗೆ ಸಂಬಳ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಬೆಲೆ ಏರಿಕೆ, ಹಣದುಬ್ಬರದ ಇಂದಿನ ದಿನಗಳಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಕುಟುಂಬವನ್ನು ನಡೆಸಿಕೊಂಡು ಹೋಗುವುದು ಸಾಧ್ಯವೇ ಎಂಬ ಬಗ್ಗೆ ಆಡಳಿತದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯೋಚಿಸಬೇಕು. ಅಧಿಕಾರದಲ್ಲಿರುವವರ ಕಿವಿಗಳು ಕಿವುಡಾದಾಗ ಪ್ರತಿಭಟನೆ ಅನಿವಾರ್ಯವಾಗುತ್ತದೆ.

ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷ ಕೋವಿಡ್ ಕಾರಣದಿಂದ ರಾಜ್ಯದ ಕಾಲೇಜುಗಳು ಮುಚ್ಚಿದಾಗ ಅತಿಥಿ ಉಪನ್ಯಾಸಕರ ಪರದಾಟ ಅಸಹನೀಯವಾಗಿತ್ತು. ಬಹುತೇಕ ಅತಿಥಿ ಉಪನ್ಯಾಸಕರು ಕೂಲಿ ಕೆಲಸ, ತರಕಾರಿ ಮಾರಾಟ ಮಾಡಿ, ರಸ್ತೆಯಲ್ಲಿ ಡಬ್ಬಾ ಅಂಗಡಿಗಳಲ್ಲಿ ಚಹಾ, ಕಾಫಿ ವ್ಯಾಪಾರ ಮಾಡಿ ಜೀವನ ಸಾಗಿಸಿದರು. ಇದಲ್ಲದೆ ಕಾಲೇಜುಗಳು ನಡೆದಾಗಲೂ ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಮೂರು ತಿಂಗಳು ಸಂಬಳ ಸಿಗಲೇ ಇಲ್ಲ. ಉಳಿದ ಕಾಲಾವಧಿಯ ಸಂಬಳವನ್ನೂ ಕಂತಿನಲ್ಲಿ ಪಾವತಿ ಮಾಡಲಾಗುತ್ತದೆ. ಇದು ಶೋಷಣೆಯಲ್ಲದೆ ಮತ್ತೇನು? ನಮ್ಮನ್ನು ಶೋಷಣೆಯಿಂದ ಪಾರು ಮಾಡಿ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದಾಗ ‘ಶೋಷಣೆ’ ಶಬ್ದ ಬಳಸಿದ್ದನ್ನು ಕೇಳಿ ಕೆಂಡಾ ಮಂಡಲವಾದ ಅವರು ‘‘ನಿಮ್ಮನ್ನು ಯಾರು ಕೆಲಸಕ್ಕೆ ಕರೆದಿದ್ದರು, ಬೇಡವಾಗಿದ್ದರೆ ಬಿಟ್ಟು ಹೋಗಿ’’ ಎಂದು ದರ್ಪದ ಮಾತನ್ನು ಆಡಿದರು.

ಕೊರೋನ ಮೊದಲ ಅಲೆ ಅಬ್ಬರಿಸಿದಾಗ 2019ರಲ್ಲಿ ಶಾಲೆ ಕಾಲೇಜುಗಳು ಸರಿಯಾಗಿ ನಡೆದಿರಲಿಲ್ಲ. ಕಳೆದ ವರ್ಷ ಕೂಡ ತರಗತಿಗಳು ತುಂಬಾ ತಡವಾಗಿ ಆರಂಭವಾದವು. 2022ರ ಫೆಬ್ರವರಿ 11ರೊಳಗೆ ಎಲ್ಲಾ ಪಾಠಗಳನ್ನು ಪೂರ್ಣಗೊಳಿಸುವ ಗುರಿ ಇಟ್ಟು ಕೊಳ್ಳಲಾಗಿದೆ. ಪರಿಸ್ಥಿತಿ ಹೀಗಿರುವಾಗ ಉಪನ್ಯಾಸಕರಿಲ್ಲದೆ ಕಾಲೇಜುಗಳಲ್ಲಿ ಪಾಠ ಕಲಿಕೆ ನಡೆದು ಗುರಿ ತಲುಪಲು ಹೇಗೆ ಸಾಧ್ಯ? ಇದರ ಜೊತೆಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಪಡಿಪಾಟಲು ಬೇರೆ. ಹೀಗಾಗಿ ಹಳಿ ತಪ್ಪಿದ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತೆ ಹಳಿಗೆ ತರಲು ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ವಿಧಾನ ಮಂಡಲದಲ್ಲೂ ಈ ಬಗ್ಗೆ ಹಲವಾರು ಸಲ ಪ್ರಸ್ತಾಪವಾಗಿದೆ. ಆದರೆ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಒದಗಿಸುವಲ್ಲಿ ಯಾವ ಸರಕಾರಗಳೂ ಯಶಸ್ವಿಯಾಗಿಲ್ಲ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಕಾರಣವಲ್ಲದೆ ಬೇರೇನೂ ಅಲ್ಲ.

ಅತಿಥಿ ಉಪನ್ಯಾಸಕರು ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಿಗಾಗಿ ಬೀದಿಗೆ ಬಂದಾಗಲೆಲ್ಲ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ ಎಂಬ ಸಿದ್ಧ ಉತ್ತರ ಉನ್ನತ ಶಿಕ್ಷಣ ಇಲಾಖೆಯಿಂದ ಬರುತ್ತದೆ. ಹಸಿದವರ ಮೂಗಿಗೆ ತುಪ್ಪಸವರುವ ಇಂತಹ ಉತ್ತರಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಅತಿಥಿ ಉಪನ್ಯಾಸಕರು ಹೋರಾಟಕ್ಕಿಳಿದು ಒಂದು ತಿಂಗಳಾಗುತ್ತಾ ಬಂತು. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಸರಕಾರ ಕೊಡುವ ಒಂದಿಷ್ಟು ಸಂಬಳದಿಂದ ಅವರ ಕುಟುಂಬದ ನಿರ್ವಹಣೆ ಅಸಾಧ್ಯ. ಈ ಕಾರಣದಿಂದ ಇವರ ಬೇಡಿಕೆಗಳ ಬಗ್ಗೆ ಸರಕಾರ ಸಹಾನುಭೂತಿಯಿಂದ ವರ್ತಿಸಬೇಕು. ಯುಜಿಸಿ ನಿಗದಿ ಪಡಿಸಿದ ಮಾನದಂಡಗಳ ಆಧಾರದಲ್ಲಿ ಈ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಮತ್ತು ಸಂಬಳ, ಭತ್ತೆಗಳನ್ನು ನೀಡಬೇಕು. ಪಶ್ಚಿಮ ಬಂಗಾಳ, ದಿಲ್ಲಿ ಮತ್ತು ಪಂಜಾಬ್ ಸರಕಾರಗಳು ಅತಿಥಿ ಉಪನ್ಯಾಸಕರಿಗೆ ನೀಡಿರುವ ಸೇವಾ ಭದ್ರತೆಯನ್ನು ಅಧ್ಯಯನ ಮಾಡಿ ಅದೇ ಮಾದರಿಯಲ್ಲಿ ರಾಜ್ಯದ ಅತಿಥಿ ಉಪನ್ಯಾಸಕರಿಗೂ ನ್ಯಾಯವನ್ನು ಒದಗಿಸಬೇಕು.

ಸರಿಯಾದ ಸಂಬಳವಿಲ್ಲದ ಕಾರಣಕ್ಕಾಗಿ ಹತಾಶರಾದ ಕೆಲ ಅತಿಥಿ ಉಪನ್ಯಾಸಕರು ಕೋವಿಡ್ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕರು ಕಾಯಿಲೆಗಳ ಚಿಕಿತ್ಸೆಗೆ ಹಣವಿಲ್ಲದೆ ಅಸು ನೀಗಿದ್ದಾರೆ. ಈಗಲಾದರೂ ಸರಕಾರ ಇವರ ನ್ಯಾಯ ಸಮ್ಮತ ಬೇಡಿಕೆಗಳಿಗೆ ಸ್ಪಂದಿಸಬೇಕು. ಬೋಧಕರ ಹುದ್ದೆಗಳಿಗೆ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಭರ್ತಿ ಮಾಡಿಕೊಂಡರೆ ಇಂತಹ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಹಾಗಾಗಿ ಶಿಕ್ಷಣ ಇಲಾಖೆ ಈ ಸೂಕ್ಷ್ಮ ಸಮಸ್ಯೆಯನ್ನು ವಿಳಂಬ ಮಾಡದೆ ಬಗೆ ಹರಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)