ಚಿಟ್ಟೆಗಳ ರೆಕ್ಕೆಗಳಲ್ಲಿ ರಹೀಮನ ನೆರಳು...
ಕೋಲಾರದ ಬಳಿಯ ಕಲ್ಲುಗುಡ್ಡವೊಂದರಲ್ಲಿ ‘ಆದಿಮ’ ಎಂಬ ಸಂಸ್ಥೆ ಕಟ್ಟಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಹೊಸದೊಂದು ಚಿಂತನಧಾರೆಯನ್ನು ಸೇರಿಸಿದ, ಆ ಮೂಲಕ ಆದಿಮ ಸಮುದಾಯಗಳ ಕಲೆ, ಸಂಸ್ಕೃತಿಗೆ ಹೊಸ ದಾರಿ ತೋರಿಸಿದ ವಿಶಿಷ್ಟ ಲೇಖಕ ರಂಗಕರ್ಮಿ ರಾಮಯ್ಯ. ನೂರಾರು ಕನಸುಗಳನ್ನು ಕಾಣುತ್ತಾ ರಂಗಚಟುವಟಿಕೆಗಳ ಮೂಲಕವೇ ಬದುಕನ್ನು ಕಟ್ಟುತ್ತಾ ದೇಸೀ ಚಿಂತನೆಗಳನ್ನು ಬಿತ್ತುತ್ತಿರುವ ಕೋಟಿಗಾನಹಳ್ಳಿ ರಾಮಯ್ಯನವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡಮಿಯು 2010ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕೋಟಿಗಾನಹಳ್ಳಿ ರಾಮಯ್ಯ
ನಾನು ಕೋಲಾರ ಬೆಟ್ಟಕ್ಕೆ ಬಂದು ನೆಲೆಗೊಂಡು ಒಂದೂವರೆ ದಶಕಕ್ಕಿಂತಲೂ ಹೆಚ್ಚು ಕಾಲವಾಯಿತು. ಈ ಬೆಟ್ಟದ ಮೇಲೆ ನಾನು ನಂಬಿ ಮೋಸ ಹೋದದ್ದೇ ಹೆಚ್ಚು. ಅದರಲ್ಲೂ ಈ ರಹೀಮನನ್ನು ನಂಬಿ ಮೋಸ ಹೋದಷ್ಟು ಮತ್ತ್ಯಾರಿಂದಲೂ ಆಗಿಲ್ಲ.
ಒಂದು ದಿನ ಆದಿಮದ ಜೋಡು ಬಂಡೆಯ ಬಿರುಕಿನಲ್ಲಿ ಓತಿಯಂತೆ ಬಂಡೆಗೆ ಮೆತ್ತಿಕೊಂಡಿದ್ದಾಗ ಈಶಾನ್ಯ ದಿಕ್ಕಿನಿಂದ ರಹೀಮೋದಯವಾಯಿತು. ದೊಗಳೆ ಪ್ಯಾಂಟು, ಮಂಕಿ ಕ್ಯಾಪು, ಕೋಟು, ಕೈಯಲ್ಲೊಂದು ಹೊದರು ಬೇರು ಸಮೇತ ಬಂದವನೇ ‘ರತನ್ ಪುರುಷ್ ಸಾಬ್ ನಾ ಮರ್ದ್ ಕೋ ಬಿ ಮರ್ದ್ ಬನಾತಾಹೈ’ ಎಂದು ನನ್ನನ್ನು ಮನ್ಮಥನನ್ನಾಗಿಸುವ ಸ್ವಪರಿಚಯ ಪತ್ರ ಮುಂದಿಟ್ಟ.ಹುಸೇನಜ್ಜನ ಖಾಂದಾನ್ ಎಂದ. ನಾನು ಮನ್ಮಥನಾಗ ಬಯಸದೆ ದೋಸ್ತಿ ಆಗ ಬಯಸಿ ರತನ್ ಪುರುಷ್ ಎಂಬ ವಯಾಗ್ರ ಹೊದರನ್ನು ನಿರಾಕರಿಸಿ ‘ರಾಂ’ ಆದ ನಾನು ‘ರಹೀಮ್’ ಎಂಬ ಚೀಸಿನೊಂದಿಗೆ ‘ರಾಮ್ ಔರ್‌ರಹೀಮ್’ ರೀತಿ ಬೆರೆತದ್ದರ ಫಲ ಹಲವು ಎತ್ತಂಗಡಿಗಳು, ಸ್ಥಾನಪಲ್ಲಟಗಳು, ಅವಮಾನ ಪರ್ವತಗಳು. ಆದರೂ ರಹೀಮ ನನಗೆ ಬಲು ಮೆಚ್ಚು. ಅವನ ಕಣ್ಣಿನ ಮೂಲಕ ಈ ಬೆಟ್ಟವನ್ನು ಸಮಸ್ತ ಲೋಕವನ್ನು ನೋಡುವ ರೀತಿಯೇ ಚಂದ.
ನಾನು ರಹೀಮನನ್ನು ಪ್ರತಿನಿತ್ಯ ನೋಡಲೇಬೇಕಾಗುತ್ತಿತ್ತು. ಅದೆಷ್ಟು ಸಹಜ ವಿದ್ಯಮಾನ ವೆಂದರೆ.. ಬಂಡೆಗಂಟಿದ ಓತಿಕ್ಯಾತವನ್ನೋ, ಇಲ್ಲವೇ ಮಾಮರದ ಗಿಳಿಯನ್ನೋ, ಇಲ್ಲವೇ ದರ್ಗಾದ ಎದುರು ಸದಾ ರಸ್ತೆಯಲ್ಲೇ ಬಿದ್ದು ತೂಕಡಿಸುವ ಹಿಂಡು ನಾಯಿಗಳ ಲೋಲುಪ್ತೆಯನ್ನೋ ನೋಡೇ ನೋಡಬೇಕಾಗಿ ಬರುವಂತೆ..
ಕಳೆದ ಆರು ತಿಂಗಳಿಂದ ಬೆಟ್ಟದ ಮೇಲೆ ರಹೀಮನ ಮುಖದರ್ಶನವಿಲ್ಲ. ಕಾರಣ ಅವನು ಕುಡಿದು ಬಂದು ತನ್ನ ಹಳೆಯ ದಾದಾಗಿರಿಯ ದಿನಗಳ ಝಲಕೊಂದನ್ನು ಚೆಲ್ಲಿ ಹೋಗಿದ್ದರಿಂದ ದರ್ಗಾದ ವಾರಸುದಾರರು, ಮುಜ್ಹ್ಹಾವರ್‌ಗಳು ಯಾವ ಕಾರಣಕ್ಕೂ ರಹೀಮ ಇವರನ್ನು ಮಾತ್ರವಲ್ಲ ಇವರ ಹೆಂಡತಿ, ಅಕ್ಕ, ತಂಗಿ.. ಎಲ್ಲರನ್ನೂ ಸೇರಿಸಿ ಬೈದು ಬಚಾವಾಗಿ ಬೆಟ್ಟ ಇಳಿದು ಹೋಗಿದ್ದಾನೆ. ಇವರು ಅವನಿಗಾಗಿ ಬಂಡೆಗಳ ಮೇಲೆ ಕತ್ತಿ ಮಸೆಯುತ್ತಾ ಸಾಣೆ ಹಿಡಿಯುತ್ತಿರುವ ಸದ್ದು ಬರೆಯುತ್ತಾ ಕೂತಿರುವುದು ನನ್ನ ಕಿವಿಗಳಲ್ಲಿ ಪಿಸುಗುಡುತ್ತಿದೆ.
ಆದರೂ ರಹೀಮನಿರಬೇಕಿತ್ತು. ಇದು ಚಿಟ್ಟೆಗಳ, ಪತಂಗಗಳ ವಸಂತ. ರಹೀಮನಿದ್ದಿದ್ದರೆ ಆ ಚಿಟ್ಟೆಯ ರೆಕ್ಕೆಗಳಲ್ಲಿರುವುದೇನನ್ನೋ ಓದಿ ಹೇಳುತ್ತಿದ್ದ. ಅಂದ ಹಾಗೆ ರಹೀಮ ‘ಕುರ್‌ಆನ್’ ಓದಲಾರದಷ್ಟು ಅಕ್ಷರಹೀನ. ಆದರೇನಂತೆ ರಹೀಮ ರಹೀಮನೆ. ಅವನು ರಹೀಮನಾಗಿದ್ದಷ್ಟೂ ರಾಮರಾಮನಾಗತ್ತಾನೆ. ರಾಮರಾಮನಾಗದಿರುವ ಈ ಹೊತ್ತು ರಾಮನನ್ನು ರಾಮನಾಗಿಸುವುದೇ ನಿಜಧರ್ಮ.. ರಹೀಮನ ಧರ್ಮ. ಚಿಟ್ಟೆಗಳ ರೆಕ್ಕೆಗಳ ಮೇಲೆ ಬರೆದಿರುವುದನ್ನು ಓದಿಸುತ್ತದೆ. ಈ ಓದಿನ ಓನಾಮ ಹಂತದ ವಿದ್ಯಾರ್ಥಿ ನಾನು. ನಾನು ನನ್ನದೇ ಶಾಲೆಯ ಮೊದಲ ವಿದ್ಯಾರ್ಥಿ. ನನ್ನ ಶಾಲೆ ಗೋಡೆಗಳಾಚೆಗಿನ ಕಲಿಕಾ ನೆಲೆಗಳ ಗುರುಕುಲಗಳನ್ನು ಒಳಗೊಂಡಿರುವಂತಹದ್ದು.
‘ಬುಡ್ಡಿದೀಪ’.. ಕೇವಲ ಒಂದು ನುಡಿಕಟ್ಟು ಮಾತ್ರವಲ್ಲ, ರೂಪಕ..‘ಬುಡ್ಡಿದೀಪ’ ಭಾರತಮಾತೆಯ ಪಾದಗಳಡಿಯ ಅಧೋಜಗತ್ತನ್ನು ಕಾಣಿಸುವ ಕನ್ನಡಿ. ರಹೀಮ ಈ ಅಧೋಜಗತ್ತಿನ ಯಕಃಶ್ಚಿತ್, ಲೆಕ್ಕಕ್ಕೆ ಬಾರದ ಹುಳ ಹುಪ್ಪಟೆ. ಇತಿಹಾಸದಲ್ಲಿ ಕೆಲವು ‘ಹಗೆ’ಗಳನ್ನು ಹುಳ ಹುಪ್ಪಟೆ ಹೆಸರಿನಲ್ಲಿಯೇ ಕೋಡೆಡ್ ಲಾಂಗ್ವೇಜ್ ಆಗಿ ಬಳಸುವುದು. ಉದಾ: ರೌಂಡಾದಲ್ಲಿ ಒಂದು ಡಾಮಿನೆಂಟ್ ಎಥಿಕ್ ಗ್ರೂಪ್ ಇನ್ನೊಂದನ್ನು ‘ಜಿರಲೆಗಳು’ ಎಂದೇ ಸಂಬೋಧಿಸುವುದು. ಈ ಜಿರಲೆಗಳನ್ನು ಹೊಸಕಿ ಹಾಕಬಹುದು ಎಂಬುವುದೇ ಈ ಪ್ರಬಲ ಗುಂಪಿನ ವಿಶ್ವಾಸ. ಇದು ಸಾಧ್ಯವೇ? ಇಲ್ಲ. ನ್ಯೂಕ್ಲಿಯರ್ ವಾರ್‌ಫೇರ್ ನಂತರವೂ ಬದುಕುಳಿವ ಜೀವಿಯಂತೆ ‘ಜಿರಲೆ’. ಓಹ್! ಹಾಗಾದರೆ ನಮ್ಮ ಮುಂದಿನ ಮಕ್ಕಳು ಜಿರಲೆಗಳಾಗಿಯಾದರೂ ವಿಕಾಸದ ಕೊಂಡಿಯನ್ನು ಮುಂದುವರಿಸಲೆಂದು ಹಾರೈಸಬಹುದಲ್ಲವೇ? ‘ರಹೀಮ’ ಜಿರಲೆ ಅಲ್ಲ. ಈ ಬೆಟ್ಟದ ಊಗುಮುಳ್ಳು. ಊಗುಮುಳ್ಳು ಎನ್ನುವುದು ಪೊರಕೆ ಕಡ್ಡಿಯ ಬೀಜದ ಹೆಸರು. ಇದು ಎಷ್ಟು ಹಗುರ, ಸಪೂರ ಅಂದರೆ ಗಾಳಿಯಲ್ಲೇ ತೇಲಿ ತೇಲಿ ಹೋಗುವಷ್ಟು. ಎಕ್ಕ ಬಿತ್ತದಂತೆ. ರಹೀಮ ಇನ್ನೊಂದು ಗುಂಪಿನ ಕಣ್ಣಲ್ಲಿ ಜಿರಲೆಯಾಗದೆ ಎಕ್ಕ ಬಿತ್ತವಾದರೂ ಆದಲ್ಲಿ ಯಾವುದೋ ನೆಲದಲ್ಲಿ ಮೊಳಕೆ ಒಡೆಯಬಲ್ಲ. ರಹೀಮರ ಸಂತತಿ ಹೆಚ್ಚಿದಷ್ಟೂ ಬೆಟ್ಟದ ಜೀವಗಳು ನೆಮ್ಮದಿಯಿಂದಿರಬಲ್ಲವು.
ಕಳೆದ ಒಂದೂವರೆ ತಿಂಗಳಿಂದ ಈಚೆ ಮೂರು ನಾಟಕಗಳನ್ನು ಬರೆದಿರುವೆ. ಇವು ಈ ಕಾಲದ ನನ್ನಕಣ್ಣ ಬಿಂಬಗಳು-ಅವು 1.ನರೇಂದ್ರ ಪೆಡಿಯಾಟ್ರಿಯಲ್ಲಿ ಜಗದಂಬೆ, 2.ಡಾ.ಅಂಬೇಡ್ಕರ್ ಲೈಬ್ರರಿ, 3. ಹನುಮಂತೂ ದಿ ಕೊರಿಯರ್ ಬಾಯ್ ಇದೀಗ ನಾಲ್ಕನೆಯದನ್ನೂ ಆರಂಭಿಸಿರುವೆ- ಹನುಮಂತೂ ದಿ ರಾಕ್‌ಸ್ಟಾರ್! ಐದು ಜನರ ತಂಡವಾದರೆ ಸಾಕು ರಂಗದ ಮೇಲೆ ತರಬಹುದು.
ಆ ತಂಡ ಹೇಗಿರಬೇಕು ಎಂದು ಯೋಚಿಸುತ್ತಾ ದರ್ಗಾದಿಂದ ಬುಡ್ಡಿ ದೀಪದತ್ತ ನಡೆದು ಬರುವಾಗ ಜೋಡಿಚಿಟ್ಟೆ ಕಾಣಿಸಿದವು. ಮೈಪೂರಾ ಕಪ್ಪು ಹಿಂಬದಿ ಬಿಳಿಯ ಸ್ಟ್ರೋಕುಗಳು. 95 ಭಾಗ ಕಪ್ಪು 5 ಭಾಗ ಬಿಳುಪು. ಆ ಬಿಳುಪು ಅಷ್ಟೇ ಇದ್ದರೂ ತನ್ನ ಇರುವು ಎದ್ದು ಕಾಣುವಷ್ಟು ಸತ್ವಯುತ. ಅರೇ ಹೌದಲ್ಲ. ಇದು ಚಿಟ್ಟೆಗಳ ಮಧುಚಂದ್ರ ಕಾಲ. ಬಗೆ ಬಗೆ ಬಣ್ಣದ ‘ಇಜ್ಜೋಡು’ ಚಿಟ್ಟೆಗಳು ಒಂದರ ಬೆನ್ನತ್ತಿ ಇನ್ನೊಂದು ಕಿರುದಾರಿಗಳಲ್ಲಿ ಹಾರುತ್ತಲೇ ಇರುತ್ತವೆ. ಚಿಟ್ಟೆಗಳ ಈ ಲೀಲೆಯಲ್ಲೇ ಇಡೀ ದಿನ ನೋಡುತ್ತಾ ಕಳೆದು ಬಿಡುವವರು ಬಹು ಕಮ್ಮಿ. ಇಲ್ಲವೆಂದೇ ಹೇಳಬೇಕು. ರಹೀಮನ ಹೊರತು. ಅವನ ಈ ತಪಸ್ಸಿಗೆ ಭಂಗತರುವಂತೆ..
‘‘ಏನ್ಲೇಗುಟ್ಲೇ..ಅಲ್ಲೇನು ನೂರು ರೂಪಾಯಿ ನೋಟು ಏನಾದ್ರೂ ಹಾರಾಡ್ತಾ ಅವಾ ಗಾಳೀಲಿ?’’ ಅನ್ನುತ್ತಿದ್ದೆ.. ಅವ್ನ‘‘ನಿಮ್ಮದು ಆ ನೋಟ್ನಾಗ ಗಾಂಧೀಗೆ ನಗ್ತಾರೆ ನೋಡಿದ್ದಿರಾ?’’ ಕ್ವಶ್ಚನ್ನಿಗೇ ಕೌಂಟರ್‌ಕ್ವಶ್ಚನ್. ಇದು ರಹೀಮನ ಶೈಲಿ.
‘‘ಹೌದೋ ಗುಲ್ಡು.. ಹಂಗೆ ನಗನಗ್ತಾನೆ ನಾನೂ ಕೊಟ್ಟಿರೋದು? ಎಲ್ಲಿ ರಿಟರ್ನ್ ಮಾಡಿದಿಯಾ? ಕಮಾನ್ ಈವಾಗ ಕಕ್ಕು?’’
‘‘ಅರೇ ಸಾಬ್ ನಿಮ್ದು ಲೆವೆಲ್ ಬಹುತ್ ಕಮ್‌ಡೌನ್ ಆಗೋಯ್ತು.. ನೀವು ನಿಮ್ಮ ನೋಟ್ನಾಗ ನಿಮ್ನೇ ನೋಡ್ತೀರಿ. ನಾನು ಈ ನೋಟ್ನಾಗಿರೊ ಗಾಂಧೀಜಿ ಇಸ್ಮೈಲ್‌ನ ಆ ಚಿಟ್ಟೆ ರೆಕ್ಕೆನಾಗ ನೋಡ್ತೀನಿ.. ದೇಖೋ ದೇಖೋ ಕೈಸಾ ಹಸ್ತಾ ಹೈ.. ಖೂಬ್ ಸೂರತ್!’’
ಈ ಸೂರತ್.. ಗುಜರಾತ್ ಹೆಸರು ಕಿವಿಗೆ ಬಿದ್ದರೆ ಭೀತಿಯಿಂದ ನಾನು ಹೆಚ್ಚು ಹೊತ್ತು ನಿಂತರೆ ನನ್ನನ್ನೂ ಅವನಂತೆ ಗಾನ್‌ಕೇಸ್ ಎಂದು ಬಗೆದಿರುವ ಬೆಟ್ಟದ ಜನ ಹತ್ತಿರ ಬಂದು ಕುಶಲೋಪರಿಗೆ ಇಳಿಯುತ್ತಾರೆಂದು ಅರ್ಥಾತ್ ಉಗಿಯುತ್ತಾರೆಂದು ಎಚ್ಚೆತ್ತು ಕಾಲ್ತೆಗೆದಿದ್ದೆ.
ನಿಜಕ್ಕೂ ರಹೀಮನಿಲ್ಲದಿರುವ ಬೆಟ್ಟವನ್ನಾಗಲಿ.. ಚಿಟ್ಟೆಗಳನ್ನಾಗಲಿ ನೆನಪಿಸಿಕೊಳ್ಳುವುದು ಕಷ್ಟ. ಅವನಿಗೆ ನಿಜಕ್ಕೂ ಚಿಟ್ಟಗಳ ರೆಕ್ಕೆಗಳಲ್ಲಿ ಏನೋ ಕಾಣುತ್ತದೆ. ಅಷ್ಟೇ ಅಲ್ಲ ಬೆಟ್ಟದ ಹುಲ್ಲುಕಡ್ಡಿಯಿಂದ ಹಿಡಿದು ‘ರತನ್ ಪುರುಷ್’ವರೆಗೆ ಹಲವು ಗುಟ್ಟುಗಳು ಗೊತ್ತಿವೆ. ಎರಡೂವರೆ ತಿಂಗಳಾಯಿತು ಅವನಿಲ್ಲದೆ. ಒಂದು ಸುಂದರ ಕಲಾಕೃತಿಯಲ್ಲಿ ಬಿಂದು ಅಡ್ಡಗೆರೆ ಅಳಿಸಲಾಗದೆ ಉಳಿದು ಹೋಗಿ ಆ ನಂತರ ಅದೇ ಎದ್ದು ಕಾಣುವಂತೆ.ರಹೀಮ ಇದ್ದಿದ್ದರೆ ಈ ಹನುಮಂತೂ ದಿ ಕೊರಿಯರ್ ಬಾಯ್ ದಿನಗಳಲ್ಲಿ.. ಖಂಡಿತ ಹೇಳುತ್ತಿದ್ದ..ಆ ಚಿಟ್ಟೆಯ ರೆಕ್ಕೆಗಳಲ್ಲಿ ಹನುಮಂತ ಹಾರುತ್ತಿದ್ದಾನೆಂದು. ಯಾವುದೋ ನರಭಕ್ಷಕ ವೋಜಿನ ವ್ಯಗ್ರ ಮುದಿ ಕೆಂಗಣ್ಣು ಬಿಂಬವಷ್ಟೇ ಹನುಮನಲ್ಲ ಹನುಮ ವಿರಾಟ್ ಸ್ವರೂಪಿ.. ಬಾಲಹನುಮ, ತರುಣ ಹನುಮ, ಬ್ರಹ್ಮಚಾರಿ ಹನುಮ, ಸಂಚಾರಿ ಹನುಮ, ವಿಧ್ವಂಸಕ ಹನುಮ, ಪ್ರಾಣಪಾತ್ರ ಹನುಮ, ನಾನು ಹಿಡಿದಿರುವ ಹನುಮ ಪಾದ.. ಈ ಪ್ರಾಣಪತ್ರ.. ಒಬ್ಬನ ಜೀವ ಉಳಿಸುವುದಕ್ಕೆ ಒಂದು ಪರ್ವತವನ್ನೇ ಹೊತ್ತು ಬರುವ ಶಕ್ತಿ. ನಾಟಕ, ಕೇಳಿಕೆಗಳಲ್ಲಿ ಹನುಮಂತಾಗಮನ ವಸಂತಾಗಮನದಂತೆ ಅಲ್ಲಿಯವರೆಗೂ ರಂಗದ ಮೇಲೆ ಒಂದು ಎತ್ತರದಲ್ಲಿ ಮಾತ್ರರಂಗ ಕ್ರಿಯೆಗಳು ನಡೆಯುತ್ತವೆ. ಹನುಮನಿಗೆಂದೇ ಮರವೊಂದನ್ನು ತಂದು ರಂಗದ ಮೂಲೆಗೆ ನೆಟ್ಟು ಆ ಮರದಲ್ಲಿ ಕೋರುಳೆ, ಹಣ್ಣು ಏನೇನೋ ತಿನ್ನುವ ಪದಾರ್ಥಗಳನ್ನು ರೆಂಬೆಗಳಲ್ಲಿ ಬಿಗಿದಿರುತ್ತಿದ್ದರು. ಧುಮುಕಿ, ಲಾಗಾ ಹಾಕಿ ಹಾಡು ಹಾಡುತ್ತಾ ಮರ ಹತ್ತಿ ಕಿತ್ತು ತಿಂದೂ ಧ್ವಂಸಗೊಳಿಸುವ ‘ಬಾಲ ವಿಧ್ವಂಸಕ’ ಸ್ವಭಾವ ಅದಕ್ಕಾಗಿಯೇ ನಾನು ಮುಂದೆ ಕೂರುತ್ತಿದ್ದೆ. ಮಕ್ಕಳಂತೂ ಕೇಕೆ ಹಾಕಿ ನಗುತ್ತಾರೆ. ವಿಧ್ವಂಸಕತೆ ಮಕ್ಕಳನ್ನು ನಗಿಸುವುದಕ್ಕಾದರೆ ಓಕೆ. ಆದರೆ ‘ಮುದಿವ್ಯಗ್ರತೆ’..Leads to many medical complications. ವಯಸ್ಸಾದವರಲ್ಲಿ ಈ ವ್ಯಗ್ರತೆ ಕಂಡರೆ ಮಕ್ಕಳನ್ನು ಅವರನ್ನು ನರತಜ್ಞರ ಬಳಿ ಒಯ್ಯುತ್ತಾರೆ. ಇಲ್ಲವಾದರೆ ಗ್ಯಾಸ್ಟ್ರಿಕ್, ಅಲ್ಸರ್.. ಇವೆಲ್ಲಾ ನೇರ ಪರಿಣಾಮಗಳು.. ಅಗೋಚರ..ಅಂತಹ ವೇಳೆ ರಹೀಮನಂತೆ ನಾವು ಚಿಟ್ಟೆಯ ರೆಕ್ಕೆಯ ಬಣ್ಣಗಳಲ್ಲಿ ಗಾಂಧಿಯ ನಗುವನ್ನೂ ಹನುಮಂತನ ಬಾಲ ಮಂಗಾಟಗಳನ್ನು ನೋಡಿ ನೋಡಿ ಆನಂದಿಸಬೇಕೆ ಹೊರತು ವ್ಯಗ್ರನಾದ ಮುದಿ ಹನುಮನ ಹತ್ತಿರ ಸುಳಿಯಬಾರದು.
ಶಾಹಿರಿ ರಹೀಮ ಬನ್‌ಗಯಾ ಭೂತರಾಜ!
ಬೆಳಗಿನ ಬಸ್ ಬಂದು ದರ್ಗಾದ ಮುಂದೆ ನಿಲ್ಲುವುದಕ್ಕೂ ನಾನು ಬಾಗಿಲ ಬಳಿಸರಿದು ನಿಲ್ಲುವುದಕ್ಕೂ ವ್ಯಾಳಾವ್ಯಾಳ ವಕ್ಕರಿಸಿ ಬಂತು. ಬಸ್ಸಿನಿಂದ ಇಳಿದವರೆಲ್ಲರೂ ಖಾಲಿಯಾದ ಮೇಲೆ ಕೊನೆಯ ಪ್ರಾಮಾಣಿಕನಾಗಿ ರಹೀಮ ದರ್ಶನ! ಯಾವ ದರ್ಶನವನ್ನು ಕನಸು ಮನಸ್ಸಿನಿಂದ ಕಾಣಲು ಬಯಸುತ್ತಿರಲಿಲ್ಲವೋ ಅಂಥ ದರ್ಶನ. ಅದೂ ಉಸ್ಮಾನ್‌ತಾತನ ದರ್ಗಾದ ಎದುರಿಗೆ. ಕಣ್ಣಾದೆ. ರಹೀಮನ ಪೋಷಾಕಿನಲ್ಲಿ ಈಗ ಕೊಂಚ ಆಧುನಿಕತೆಯ ಛಾಪು. ಕ್ಯಾಪು ಬದಲಾಗಿದೆ. ಚಿತ್ತಾರದ ಮುಸ್ಲಿಮ್ ಕ್ಯಾಪ್ ಆಗಿದೆ. ಗಡ್ಡ ಮೆಚ್ಚುವಷ್ಟು ಉದ್ದಕ್ಕೆ ಟ್ರಿಮ್ ಆಗಿದೆ. ಜರ್ಕಿನ್ ಹೊಸದು. ಬಹುಶಃ ಬೆಟ್ಟಕ್ಕೆ ಬರುವ ‘ಟೆಕ್ಕಿ’ಗಳು ಮೆಚ್ಚಿಕೊಟ್ಟಿರಬೇಕು ಅಥವಾ ಇವನೇ ‘ಏಟ್ಹಾಕಿ’ ಎಗುರಿಸಿಕೊಂಡಿರಬೇಕು. ಪ್ಯಾಂಟ್‌ದೊಗಲೆ ಇಲ್ಲ. (Spots..)ಶೈಲಿಯ Costly Item. ಅರೇ ‘ಆಡಿ ಷೂ’ ಏಕದಂ ರಹೀಮ್ ಬನ್‌ಗಯಾ ಜಂಟ್ಲ್ ಮನ್! ಆದರೆ ಕಪ್ಪುಚುಕ್ಕೆಯಂತೆ ಎಲ್ಲೋ ಏನೋ ದೋಷವಿದೆ ಅನ್ನಿಸಿ ಇನ್ನೊಮ್ಮೆ Top to Bottom ಆ್ಯಂಡ್… Bottom to Top ಸ್ಕಾನ್ ಮಾಡಿದೆ. ಹೌದು ಕಿವಿಗಳಿಗೆ ತಗಲಿಸಿಕೊಂಡಿರುವ Mask ಈಗ ಗಡ್ಡದ ಕವಚ ಆಗಿದೆ. ಅಂದರೆ ಕೊರೋನ ನಿಯಮ ಪಾಲಿಸಿದ್ದಾನೆ. ಇನ್ನೂರು ದಂಡ ಪೀಕಬೇಕಾದ್ದರಿಂದ ಬಚಾವಾಗಲು. ‘ಬಚ್‌ಗಯಾ ಸಾಲಾ’.
ಎಡಗೈ ಬೆರಳುಗಳ ನಡುವೆ ಮೂರು ಖಾಲಿ ವಾಟರ್ ಬಾಟೆಲ್‌ಗಳು ಜೋತಾಡುವಒಂದು ಗಂಟು. ಕುತೂಹಲಕ್ಕೆ ಏನಿದೆಲ್ಲಾ? ಎಂದು ಕೈ ಸನ್ನೆಯಲ್ಲೇ ಕೇಳಿದೆ. ನನ್ನ ಸನ್ನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ರಹೀಮ. ‘ವಾಟರ್ ಬಾಟ್ಲು..ಡ್ರೈವರ್ ಕಂಡಕ್ಟರಿಗೆ ದರ್ಗಾ ಬಾವಿನೀರು. ಇದು ಬಷೀರ್ ನಾಷ್ಟಾ’ ಬಷೀರ್ ದರ್ಗಾ ಎದುರಿನ ಅಂಗಡಿ ಮಾಲಕ. ಇರುವುದು ಬೆಟ್ಟದ ಕೆಳಗಿನ ಕೋಲಾರ. ಬೆಳಗ್ಗೆ 6ಕ್ಕೆಲ್ಲಾ ಬೈಕ್‌ನಲ್ಲಿ ಬೆಟ್ಟಕ್ಕೆ ಬಂದು ತನ್ನ ಮೂಲದ ಊರಾದ ಕೊನೆಹಳ್ಳಿ ಹೊಸಳ್ಳಿಗೆ ಹೋಗಿ ಹಾಲು ಕರೆದು, ಹಾಲಿನೊಂದಿಗೆ ವಾಪಸ್ ಬಂದು ಅಂಗಡಿ ತೆರೆಯುತ್ತಾನೆ. ಅವನಿಗೆ ಅವನ ಬೀಬಿ ಬಿಸಿ ಬಿಸಿ ನಾಷ್ಟಾ ತಯಾರಿಸಿ ಬುತ್ತಿಗಂಟು ಕಳಿಸುತ್ತಾಳೆ. ಈ ರಹೀಮನೆಂಬ ಕಾರ್ಗೋ ಮೂಲಕ. ಬೆಳಗ್ಗೆ ಬೆಳಗ್ಗೆ ದರ್‌ದರ್ಶನ ಪ್ರೇತಾತ್ಮದರ್ಶನ! ಏನ್ ಕಾದಿದೆಯೋ ಏನೋ ಹೋಗ್ಲಿ.. ನಾರಾಯಣಸ್ವಾಮಿ ನಿನಗೆ ಬೂತಯ್ಯ ಅಂತ ಹೆಸರಿಟ್ಟಿದ್ದನಂತೆ. ನೀನು ಭೂತಾನ ಇಲ್ಲ ಪ್ರೇತಾನ?
‘ಭೂತ ಬೆಟ್ಟದ ಭೂತ’ಎದೆಯುಬ್ಬಿಸಿ ಹೇಳಿದ.
ರಹೀಮ ಎಲ್ಲ ಹಳೆಯ ಫೈಲ್‌ಗಳನ್ನು, ಫೋಲ್ಡರ್‌ಗಳನ್ನು ತಿರುವು ಹಾಕಿದ. ಹೌದೆನ್ನಿಸಿತು. ಪ್ರೇತಗಳಿಗಿಂತ ಭೂತಗಳು ಪೂಜಾರ್ಹ. ‘ಭೂತಾರಾಧನೆ’ ಕುರುಹು.ಆದರೆ ಪ್ರೇತಗಳು.. ಪಿಂಡ ಇಡಿಸಿಕೊಳ್ಳುವ ಕ್ಯಾಟಗರಿ.‘‘ಶಾಯರಿ ರಹೀಮ ಭೂತರಾಜಆಗಿದ್ದು’’ ಇನ್ನು ಬರೆಯಲೇಬೇಕಾಗುತ್ತದೆ. ಈ ಪೀಡೆಯ ಕುರಿತು ಎಂಬುದು ಅನುಭವೇದ್ಯವಾದ್ದರಿಂದ ಮೇಲಿನ ಶೀರ್ಷಿಕೆ ಹೇಳಿ ‘‘ಸರಿ ಹೋಗಬಹುದೇ ಸಾಹೇಬರೇ?’’ಎಂದೆ. ರಹೀಮನ ನಗುವಿನಲ್ಲಿ ಹಾಲಕ್ಕಿಗಳ ಪಲಕು. ಜೈರಾಂಜೈರಹೀಮ್.