varthabharthi


ಸಂಪಾದಕೀಯ

ಪ್ರಧಾನಿ ಮೋದಿ ಸಮಚಿತ್ತತೆ ಕಳೆದುಕೊಂಡಿರುವುದು ನಿಜವೇ?

ವಾರ್ತಾ ಭಾರತಿ : 5 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಹೇಳಿರುವ ಸತ್ಯಗಳು, ಪ್ರಧಾನಿ ನರೇಂದ್ರ ಮೋದಿಯ ಕುರಿತಂತೆ ಬಿಜೆಪಿ ಭ್ರಮನಿರಸನಗೊಂಡಿರುವುದನ್ನು ಬಹಿರಂಗಪಡಿಸಿವೆ. ಸಾಧಾರಣವಾಗಿ ರಾಜ್ಯಪಾಲ ಹುದ್ದೆ ನಿರ್ವಹಿಸುವವರು ಕೇಂದ್ರ ಸರಕಾರದ ಕೈಗೊಂಬೆಗಳಾಗಿರುತ್ತಾರೆ. ಒಂದು ಕಾಲದಲ್ಲಿ ಈ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಂತಹ ಸತ್ಯಪಾಲ್, ರಾಜ್ಯಪಾಲ ಹುದ್ದೆಯನ್ನು ನಿರ್ವಹಿಸುತ್ತಿರುವಾಗಲೇ, ಮೋದಿಯವರ ‘ದುರಹಂಕಾರ’ದ ಬಗ್ಗೆ ಮಾತನಾಡಿದ್ದಾರೆ ಎಂದರೆ, ಪರಿಸ್ಥಿತಿ ತೀರಾ ಬಿಗಡಾಯಿಸಿದೆ ಎಂದು ಅರ್ಥ. ಪ್ರಧಾನಿ ಮೋದಿಯವರು ಸಮಚಿತ್ತತೆಯನ್ನು ಕಳೆದುಕೊಂಡಿದ್ದಾರೆ ಎನ್ನುವ ಮಲಿಕ್ ಹೇಳಿಕೆ, ಕೇವಲ ರೈತರ ವಿಷಯಕ್ಕಷ್ಟೇ ಅಲ್ಲ, ದೇಶದ ಇನ್ನಿತರ ಸಮಸ್ಯೆಗಳನ್ನು ನಿಭಾಯಿಸಿದ ರೀತಿಗೂ ಅನ್ವಯವಾಗುತ್ತದೆ. ನೋಟು ನಿಷೇಧದಿಂದ ಹಿಡಿದು, ಜನತಾ ಕರ್ಫ್ಯೂವರೆಗೆ ಮೋದಿಯ ಎಲ್ಲ ಯೋಜನೆಗಳು, ಮಾರ್ಗದರ್ಶನ ಸಂಪೂರ್ಣ ವಿಫಲವಾಗಿದೆ. ದೇಶವನ್ನು ಹೀನಾಯಸ್ಥಿತಿಗೆ ತಂದು ನಿಲ್ಲಿಸಿದೆ. ಇದಕ್ಕೆ ಕೇವಲ ಪ್ರಧಾನಿ ಮೋದಿಯವರು ಕಾರಣರಲ್ಲ. ಮೋದಿಯವರನ್ನು ವಾಸ್ತವದಿಂದ ತುಂಬಾ ದೂರ ಇಟ್ಟು, ತಪ್ಪು ಮಾಹಿತಿಗಳನ್ನು ಕೊಟ್ಟು ದಾರಿ ತಪ್ಪಿಸುತ್ತಿರುವ ಕಾರ್ಪೊರೇಟ್ ಕುಳಗಳ ಪಾತ್ರಗಳೂ ಇವೆ.

ಕೃಷಿ ಕಾಯ್ದೆಯಗಳ ವಿರುದ್ಧ ರೈತರ ಹೋರಾಟ ಬಿಗಡಾಯಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಮೇಘಾಲಯ ರಾಜ್ಯಪಾಲ ಸತ್ಯಪಾಲ್, ವಾಸ್ತವವನ್ನು ಮನವರಿಕೆ ಮಾಡಿಸುವ ಪ್ರಯತ್ನ ನಡೆಸಿದ್ದರು. ಈಗಾಗಲೇ 500 ರೈತರು ಮೃತಪಟ್ಟಿರುವ ಅಂಶವನ್ನು ಅವರು ಮೋದಿಗೆ ತಿಳಿಸಿದ್ದರು. ಆಗ ಅತ್ಯಂತ ಕ್ರೂರವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ‘‘ಅವರೇನು ನನಗಾಗಿ ಸತ್ತಿದ್ದಾರೆಯೆ?’ ಎಂದು ಮರು ಪ್ರಶ್ನಿಸಿದ್ದರು. ಆಗ ನಡೆದ ಮಾತಿನ ಚಕಮಕಿಯಲ್ಲಿ ಸತ್ಯಪಾಲ್ ಮಲಿಕ್ ನಿಷುರವಾಗಿ ಪ್ರತಿ ಉತ್ತರಿಸಿದ್ದರು ‘‘ಅವರು ನಿಮಗಾಗಿಯೇ ಮೃತಪಟ್ಟಿದ್ದಾರೆ. ನೀವು ಈ ದೇಶದ ದೊರೆ’’ ಎಂದಾಗ, ಮಾತನ್ನು ಅರ್ಧದಲ್ಲೇ ನಿಲ್ಲಿಸಿ ‘ನೀವು ಅಮಿತ್ ಶಾ ಅವರನ್ನು ಭೇಟಿ ಮಾಡಿ’ ಎಂದು ಹೇಳಿದ್ದರು. ಈ ಎಲ್ಲ ವಿವರಗಳನ್ನು ಮಲಿಕ್ ಅವರು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ, ಸ್ವತಃ ಅಮಿತ್ ಶಾ ಅವರೇ, ‘ಮೋದಿಯವರು ಸಮಚಿತ್ತವನ್ನು ಕಳೆದುಕೊಂಡಿದ್ದಾರೆ’ ಎನ್ನುವುದನ್ನು ಒಪ್ಪಿಕೊಂಡಿರುವುದು. ದೂರದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡ ನಾಯಕನ ಕೈಯಲ್ಲಿ ಈ ದೇಶದ ಚುಕ್ಕಾಣಿಯಿದೆ ಎಂಬುದನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಸೂಚ್ಯವಾಗಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಸಂಭವಿಸಿದ 2,000ಕ್ಕೂ ಅಧಿಕ ಜನರ ಸಾವಿನಿಂದ ತಲ್ಲಣಿಸದ ಮೋದಿಯವರಿಗೆ 500ಕ್ಕೂ ಅಧಿಕ ಮಂದಿ ರೈತರ ಸಾವು ತಟ್ಟಬೇಕೆಂದೇನಿಲ್ಲ. ಆದರೆ, ಆ ರೈತರ ಸಾವಿಗೆ ಕಾರಣವೇನು? ಅವರು ಯಾರಿಗಾಗಿ, ಯಾತಕ್ಕಾಗಿ ಪ್ರಾಣತೆತ್ತರು ಎನ್ನುವ ಅರಿವು ಪ್ರಧಾನಿಯಾದವರಿಗೆ ಇರಲೇ ಬೇಕಾಗುತ್ತದೆ. ರೈತರ ಚಳವಳಿಯನ್ನು ಅವರು ಎಷ್ಟೊಂದು ಹಗುರವಾಗಿ ತೆಗೆದುಕೊಂಡಿದ್ದರು ಎನ್ನುವುದನ್ನು ಇದು ಹೇಳುತ್ತದೆ. ಚಳವಳಿಯ ಗಂಭೀರತೆಯನ್ನು ಅರಿತಿದ್ದರೆ ಅವರಿಗೆ ರೈತರ ಪ್ರಾಣದ ಮಹತ್ವವೂ ಅರಿವಾಗಬಹುದಿತ್ತೇನೋ. ಭಾರತದ ಕೃಷಿ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದಾಗಿದ್ದ ಕಾಯ್ದೆಗಳನ್ನು ವಿರೋಧಿಸಿ ರೈತರು ಬೀದಿಗಿಳಿದಿದ್ದರು. ಅವರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಆಲಿಸಿದ್ದಿದ್ದರೆ ರೈತರು ಸುಮಾರು ಒಂದು ವರ್ಷ ಬೀದಿಯಲ್ಲಿ ಕಳೆಯಬೇಕಾಗಿರಲಿಲ್ಲ. ಪೊಲೀಸರ ಮೂಲಕ, ನ್ಯಾಯಾಲಯದ ಮೂಲಕ, ಕಾರ್ಯಕರ್ತರ ಮೂಲಕ ಪ್ರತಿಭಟನೆಯನ್ನು ದಮನಿಸಬಹುದು ಎನ್ನುವ ಸರ್ವಾಧಿಕಾರಿ ಮನಸ್ಥಿತಿಯ ಕಾರಣದಿಂದ ಪರಿಸ್ಥಿತಿ ಬಿಗಡಾಯಿಸಿತು. ಕೊನೆಗೂ ಅವರು ಕಾಯ್ದೆಗಳನ್ನು ಹಿಂದೆಗೆಯಬೇಕಾಯಿತು.

ಕನಿಷ್ಠ ತನ್ನ ಪಕ್ಷದೊಳಗಿರುವ ಸಹೋದ್ಯೋಗಿಗಳ ಮಾತುಗಳನ್ನಾದರೂ ಅವರು ಆಲಿಸಿದ್ದರೆ ಈ ಮುಖಭಂಗದಿಂದ ಪಾರಾಗಬಹುದಿತ್ತು. ಆದರೆ ಪ್ರಧಾನಿಯ ಹಿತ್ತಾಳೆಯ ಕಿವಿಗೆ ಕಾರ್ಪೊರೇಟ್ ಬಿರಡೆಯನ್ನು ಜಡಿಯಲಾಗಿತ್ತು. ಈಗಾಗಲೇ ಮೃತ ರೈತರ ಪಟ್ಟಿಯನ್ನು ಸರಕಾರಕ್ಕೆ ನೀಡಲಾಗಿದೆ. ಆದರೆ ಅವರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಇನ್ನೂ ಕೇಂದ್ರ ಸರಕಾರ ಸ್ಪಷ್ಟ ನಿರ್ಧಾರವನ್ನು ತಳೆದಿಲ್ಲ. ಅಷ್ಟೇ ಅಲ್ಲ, ಹಿಂದೆಗೆದುಕೊಂಡ ಕಾಯ್ದೆಗಳನ್ನು ಮತ್ತೆ ಜಾರಿಗೆ ತಂದೇ ತರುತ್ತೇವೆ ಎಂಬ ಹೇಳಿಕೆಗಳನ್ನು ಹಲವು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇದರ ಜೊತೆಗೆ ರೈತ ವಿರೋಧಿ ಕಾಯ್ದೆಗಳನ್ನು ಹಿಂದೆಗೆದುಕೊಂಡ ದಿನದಿಂದ ಪಕ್ಷದೊಳಗೆ ಮೋದಿಯ ವಿರುದ್ಧ ವಿಮರ್ಶೆಗಳು ಆರಂಭವಾಗಿವೆ. ಮೋದಿಯ ತಪ್ಪು ಹೆಜ್ಜೆಗಳು ದೇಶಕ್ಕೂ, ಬಿಜೆಪಿಗೂ ಮಾಡುತ್ತಿರುವ ಹಾನಿ ಇದೀಗ ಚರ್ಚೆಗೆ ಒಳಗಾಗುತ್ತಿವೆ. ಪ್ರಧಾನಿ ಮೋದಿಯವರ ಆತ್ಮೀಯರೆಂದು ಗುರುತಿಸಿಕೊಂಡವರೇ, ಮೋದಿಯ ನೀತಿಗಳನ್ನು ಟೀಕಿಸುವುದಕ್ಕೆ, ವ್ಯಂಗ್ಯವಾಡುವುದಕ್ಕೆ ಶುರು ಹಚ್ಚಿದ್ದಾರೆ. ಇದ ಭಾಗವಾಗಿಯೇ, ಸತ್ಯಪಾಲ್ ಅವರ ಹೇಳಿಕೆಗಳು ಕಾರ್ಯಕ್ರಮವೊಂದರಲ್ಲಿ ಹೊರ ಬಿದ್ದಿವೆ.

ಮಲಿಕ್ ಬಳಿಕ ಸ್ಪಷ್ಟೀಕರಣ ನೀಡಿದ್ದಾರಾದರೂ, ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿಲ್ಲ. ಪ್ರಧಾನಿ ಮೋದಿಯವರನ್ನು ಕೆಲವರು ಹಾದಿ ತಪ್ಪಿಸುತ್ತಿದ್ದಾರೆ ಎಂಬ ಶಾ ಅವರ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಮಲಿಕ್ ಅವರ ಹೇಳಿಕೆಗೆ ಬಿಜೆಪಿ ಸ್ಪಷ್ಟೀಕರಣ ನೀಡಬೇಕಾದುದು ಅತ್ಯಗತ್ಯವಾಗಿದೆ. ಮೊತ್ತ ಮೊದಲನೆಯದಾಗಿ, ಮೃತ ರೈತರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕಾಗಿ ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಬೇಕು. ಮೃತ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಮಾತ್ರವಲ್ಲ, ಯಾವ ಕಾರಣಕ್ಕೂ ಕೃಷಿ ಕಾಯ್ದೆಯನ್ನು ಮತ್ತೆ ಜಾರಿಗೊಳಿಸುವುದಿಲ್ಲ ಎನ್ನುವುದನ್ನು ಪ್ರಧಾನಿ ಮೋದಿಯವರು ಸ್ಪಷ್ಟವಾಗಿ ದೇಶದ ರೈತರಿಗೆ ತಿಳಿಸಬೇಕು. ಹಾಗೆಯೇ, ದೇಶದ ಪ್ರಧಾನಿಯನ್ನು ಯಾರಾದರೂ ದಾರಿ ತಪ್ಪಿಸುತ್ತಿದ್ದಾರೆ ಎಂದಾದರೆ, ಅದು ಗಂಭೀರ ವಿಷಯವಾಗಿದೆ. ಈ ಬಗ್ಗೆ ಅಮಿತ್ ಶಾ ಅವರು ವೌನ ಮುರಿಯಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)