varthabharthi


ನಿಮ್ಮ ಅಂಕಣ

ಅಸಮಾನತೆಯ ನಡುವೆ ಖಾಸಗೀಕರಣವೆಂಬ ಭ್ರಾಂತಿ

ವಾರ್ತಾ ಭಾರತಿ : 5 Jan, 2022
ಡಾ. ಅಮ್ಮಸಂದ್ರ ಸುರೇಶ್

ಖಾಗೀಕರಣ ಹೊಸ ಪರಿಕಲ್ಪನೆಯೇನೂ ಅಲ್ಲ. ಭಾರತೀಯ ಆರ್ಥಿಕತೆಯಲ್ಲಿ ಖಾಸಗಿ ವಲಯವು 1950ರಿಂದಲೇ ಕಾರ್ಯತತ್ಪರವಾಗಿದೆ. ಆದರೆ ಖಾಸಗೀಕರಣವು ಎಂದಿಗೂ ಏಕಸ್ವಾಮ್ಯವಾಗಿರಲಿಲ್ಲ. ಅದೊಂದು ಆಯ್ಕೆಯಾಗಿತ್ತು ಅಷ್ಟೆ. ಕೆಲವರು ಜಗತ್ತಿನಲ್ಲಿಯೇ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಇಂತಹವರು ಜಿಡಿಪಿಯೊಂದೇ ಆರ್ಥಿಕ ಪ್ರಗತಿಯ ಸೂಚಕ ಎಂದು ಅರ್ಥೈಸಿಕೊಂಡಿದ್ದಾರೆ. ಆದರೆ ಜಿಡಿಪಿಯೊಂದೇ ಅಭಿವೃದ್ಧಿಯ ಅಳತೆಗೋಲಲ್ಲ. ಭಾರತೀಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿರುವ ಅಸಮಾನತೆಯನ್ನು ಕೊನೆಗಾಣಿಸದೆ ಖಾಸಗೀಕರಣದ ಕುರಿತು ಕಲ್ಪನೆಗಳನ್ನು ಇಟ್ಟುಕೊಳ್ಳುವುದೂ ಕೂಡ ಸರಿಯಲ್ಲ.


ಖಾಸಗೀಕರಣ ಇಂದು ಎಲ್ಲೆಡೆ ಭಾರೀ ಚರ್ಚೆಗೆ ಒಳಗಾಗಿರುವ ವಿಚಾರ. ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ನಡೆಸುವುದು ಅಥವಾ ಸೇವಾ ವಲಯದ ಉಸ್ತುವಾರಿಯನ್ನು ನೋಡಿಕೊಂಡು ಹೋಗುವುದು ಸರಕಾರದ ಜವಾಬ್ದಾರಿಯಲ್ಲ ಎಂಬ ಹೇಳಿಕೆಗಳಲ್ಲಿಯೂ ಖಾಸಗೀಕರಣದ ಪ್ರಸ್ತಾಪವಿದೆ. ಖಾಸಗೀಕರಣದಿಂದ ಲಾಭ ನಮಗಾಗಲಿದೆ ಎಂಬ ಗುಂಗಿನಲ್ಲಿ ನಮ್ಮ ಸಾರ್ವಜನಿಕರು ಕೂಡ ಇರುವಂತೆ ಭಾಸವಾಗುತ್ತಿದೆ. ನಿಜಕ್ಕೂ ಖಾಸಗೀಕರಣದಿಂದ ಸಾರ್ವಜನಿಕರಿಗೆ ಲಾಭವಾಗಲಿದೆಯೇ? ಎಂಬುದು ಇಂದು ಹೆಚ್ಚು ಪ್ರಸ್ತುತ ಚರ್ಚಾಸ್ಪದ ವಿಷಯವಾಗಿದೆ. ಈ ದೇಶದ ಬಹುಸಂಖ್ಯಾತರಾದ ಶೂದ್ರರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಖಾಸಗೀಕರಣದಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂಬುದು ನಿಜವಾದರೂ ಭಾರತದಂತಹ ಸಾಮಾಜಿಕ ಅಸಮಾನತೆಯನ್ನು ಹೊಂದಿರುವ ದೇಶಕ್ಕೆ ಮತ್ತು ಅದರ ಜನತೆಗೆ ಖಾಸಗೀಕರಣದಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಕೇವಲ ಆರ್ಥಿಕತೆಯ ಆಧಾರದ ಮೇಲೆ ದೇಶದ ಅಭಿವೃದ್ಧಿಯನ್ನು ನಿರ್ಧರಿಸುವುದು ಸೂಕ್ತವಲ್ಲ ಎಂಬುದು ಅನೇಕ ಅರ್ಥಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಏಕೆಂದರೆ ಯಾವುದೇ ದೇಶವಾಗಿರಲಿ ಆರ್ಥಿಕವಾಗಿ ಪ್ರಗತಿ ಹೊಂದಿದೆ ಎಂದ ಮಾತ್ರಕ್ಕೆ ಅಂತಹ ದೇಶವನ್ನು ಮುಂದುವರಿದ ದೇಶ ಅಥವಾ ಅಭಿವೃದ್ಧಿ ಹೊಂದಿದ ದೇಶ ಎಂದು ಹೇಳುವುದು ಸಮಂಜಸವೆನಿಸುವುದಿಲ್ಲ. ಅಭಿವೃದ್ಧಿಯೆಂದರೆ ಕೇವಲ ಆರ್ಥಿಕವಾಗಿ ಸದೃಢವಾಗುವುದು ಎಂದಲ್ಲ. ಬದಲಾಗಿ ಆ ದೇಶದಲ್ಲಿನ ಸಾಕ್ಷರತೆಯ ಪ್ರಮಾಣ, ಆರೋಗ್ಯ ವ್ಯವಸ್ಥೆಗಳ ಲಭ್ಯತೆ, ತಲಾ ಆದಾಯ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಸಾಮಾಜಿಕ ಭದ್ರತೆ, ಸಾಮಾಜಿಕ ಸಮಾನತೆ ಇವುಗಳು ಕೂಡ ಆರ್ಥಿಕತೆಯಷ್ಟೇ ಮುಖ್ಯ. ಇವುಗಳಲ್ಲಿ ಗುರಿಯನ್ನು ಸಾಧಿಸದೆ ಅಥವಾ ಪ್ರಗತಿಯನ್ನು ಕಾಣದೆ ಕೇವಲ ಆರ್ಥಿಕತೆಯೊಂದನ್ನೇ ಗುರಿಯಾಗಿರಿಸಿಕೊಂಡು ದೇಶವೊಂದರ ಅಭಿವೃದ್ಧಿಯನ್ನು ಅಳೆಯವುದು ವೈಜ್ಞಾನಿಕ ಕ್ರಮವಾಗುವುದಿಲ್ಲ.

 ಮೊದಲೆಲ್ಲ ಕಲ್ಯಾಣ ರಾಜ್ಯಗಳು ಅಥವಾ ಸುಖೀ ರಾಜ್ಯಗಳು ಎಂಬ ಕಲ್ಪನೆಯಿತ್ತು. ಹಾಗಾದರೆ ಇವುಗಳ ಅರ್ಥವೇನು? ಎಂಬ ಕುರಿತು ವಿಮರ್ಶೆ ಮಾಡುವುದು ಇಂದಿನ ಸಂದರ್ಭದಲ್ಲಿ ಹೆಚ್ಚು ಸೂಕ್ತ ಎನಿಸುತ್ತದೆ. ಯಾವುದೇ ಸರಕಾರಗಳಾಗಲಿ, ದೇಶಗಳಾಗಲಿ ಅವುಗಳಲ್ಲಿ ವಾಸಿಸುವ ನಾಗರಿಕರಿಗೆ ರಕ್ಷಣೆ, ಸಾಮಾಜಿಕ ಭದ್ರತೆ, ಸಮಾನತೆ, ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಸಂಪರ್ಕ, ಆರೋಗ್ಯ, ಶಿಕ್ಷಣ, ಸ್ವಚ್ಛ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆಗಳನ್ನು ಒದಗಿಸುವುದು ಕಲ್ಯಾಣ ರಾಜ್ಯಗಳ ಪ್ರಾಥಮಿಕ ಕರ್ತವ್ಯವಾಗುತ್ತದೆ. ಆದರೆ ಕುಡಿಯುವ ನೀರನ್ನು ಕೂಡ ಖಾಸಗೀಕರಣ ಮಾಡುವ ಪ್ರಯತ್ನಗಳು ನಡೆದರೆ ದೇಶವೊಂದರ ಸರಕಾರದ ಆಡಳಿತ ವ್ಯವಸ್ಥೆ ಯಾಕೆ ಬೇಕು? ಎಂಬ ಪ್ರಶ್ನೆ ಉದ್ಭವಿಸದೆ ಇರದು. ಉದ್ಯೋಗ ಅಥವಾ ಮೀಸಲಾತಿಯ ಸೌಲಭ್ಯ ದೊರೆಯುವುದು ಸರಕಾರ ಅಥವಾ ಸಾರ್ವಜನಿಕ ವಲಯದಲ್ಲೇ ಹೊರತು ಖಾಸಗಿ ವಲಯದಲ್ಲಲ್ಲ. ಉದ್ಯೋಗ ಖಾತ್ರಿ ಅಥವಾ ಉದ್ಯೋಗ ಭದ್ರತೆಯನ್ನು ಖಾಸಗಿ ವಲಯದಿಂದ ನಿರೀಕ್ಷಿಸುವುದೂ ಕೂಡ ಸಾಧ್ಯವಿಲ್ಲ. ಏಕೆಂದರೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಬೇಕೆಂಬ ವಿಚಾರ ನಮ್ಮ ಸಂವಿಧಾನದಲ್ಲಿಯೂ ಕೂಡ ಇಲ್ಲ. ಖಾಗೀಕರಣದ ವ್ಯಾಪ್ತಿಗೆ ಒಳಪಡುವ ಇಲಾಖೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರಕಾರ ಮನಸ್ಸು ಮಾಡಿದರೆ ಕೆಲವೊಂದು ಉತ್ತೇಜನಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಹೊರತು ತಮ್ಮ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಕೊಡದ ಖಾಸಗಿ ಸಂಸ್ಥೆಗಳ ವಿರುದ್ಧ ಯಾವುದೇ ರೀತಿಯಲ್ಲಿ ಶಿಕ್ಷಿಸುವ ಅಥವಾ ಒತ್ತಾಯಿಸುವ ಅಧಿಕಾರ ಇರುವುದಿಲ್ಲ. ಹಾಗಾದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಏನಾಗುತ್ತದೆ ಎಂಬುದನ್ನು ಸಾರ್ವಜನಿಕರು ಯೋಚಿಸಬೇಕಲ್ಲವೆ? ‘ಜಾಗತಿಕ ಅಸಮಾನತೆ ವರದಿ-2022’ರಲ್ಲಿ ಭಾರತವು ಶ್ರೀಮಂತ ಗಣ್ಯರನ್ನು ಹೊಂದಿರುವ ಅತ್ಯಂತ ಅಸಮಾನ ದೇಶವಾಗಿ ಎದ್ದು ಕಾಣುತ್ತದೆ ಮತ್ತು ದೇಶದ ಒಟ್ಟು ರಾಷ್ಟ್ರೀಯ ಆದಾಯದ ಶೇ.75ರಷ್ಟು ಪಾಲು ಶ್ರೀಮಂತರಾದ ಶೇ. 10ರಷ್ಟು ಜನರು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕತೆಯ ನಾಗಾಲೋಟವೇ ಮುಖ್ಯ ಗುರಿ ಎಂದು ಭಾವಿಸುವುದು ಒಪ್ಪುವಂತಹ ವಿಷಯವಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿದ್ದರೂ ಅಸಮಾನತೆ ಇನ್ನೂ ತೊಲಗಿಲ್ಲ. ಆರ್ಥಿಕ ಅಸಮಾನತೆಯ ಮಾತು ಹಾಗಿರಲಿ ಸಾಮಾಜಿಕ ಅಸಮಾನತೆಯ ವಿಚಾರವಂತೂ ನಾಗರಿಕ ಸಮಾಜ ಇಂದಿಗೂ ತಲೆತಗ್ಗಿಸುವಂತಹ ಪರಿಸ್ಥಿತಿಯಲ್ಲೇ ಇದೆ. ಇಂದಿಗೂ ಗ್ರಾಮಾಂತರ ಪ್ರದೇಶದ ಹೊಟೇಲ್‌ಗಳಲ್ಲಿ ದಲಿತರಿಗೆ ಪ್ರತ್ಯೇಕವಾದ ಲೋಟ ಮತ್ತು ತಟ್ಟೆಗಳನ್ನು ಉಪಯೋಗಿಸಲಾಗುತ್ತಿದೆ. ಕ್ಷೌರ ಮಾಡುವವರೂ ಕೂಡ ಕ್ಷೌರ ಮಾಡಲು ನಿರಾಕರಿಸುತ್ತಿದ್ದಾರೆ. ಮೃತ ದೇಹಗಳನ್ನು ಸ್ಮಶಾನಕ್ಕೆ ಒಯ್ಯುವಾಗ ಕೆಲವರು ತಮ್ಮ ಖಾಸಗಿ ಜಮೀನಿನಲ್ಲಿ ದಾರಿಯನ್ನೂ ಬಿಡದ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಶೈಕ್ಷಣಿಕವಾಗಿಯಂತೂ ಸಾಕಷ್ಟು ಅಸಮಾನತೆಗಳು ಇರುವುದನ್ನು ಕಾಣಬಹುದು. ನಗರ ಪ್ರದೇಶದ ವಿದ್ಯಾರ್ಥಿಗಳೂ ಹೊಂದಿರುವ ಶೈಕ್ಷಣಿಕ ಸವಲತ್ತುಗಳಿಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಭ್ಯವಾಗುತ್ತಿರುವ ಶೈಕ್ಷಣಿಕ ಸೌಲಭ್ಯಗಳಿಗೂ ಅಜಗಜಾಂತರ ವ್ಯತ್ಯಾಸ ಮತ್ತು ಅಸಮಾನತೆಗಳನ್ನು ನಾವು ಕಾಣಬಹುದು. ‘ಜಾಗತಿಕ ಅಸಮಾನತೆ ವರದಿ-2022’ರಲ್ಲಿ ಭಾರತದಲ್ಲಿ ಬಡತನ ಮತ್ತು ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಡಲಾಗಿದೆ.

ಈ ಅಸಮಾನತೆಗಳನ್ನು ದೂರ ಮಾಡದೆ ಮೀಸಲಾತಿಯ ಮೇಲೆ ಪರೋಕ್ಷವಾಗಿ ಪ್ರಹಾರ ಮಾಡುವುದು ಅಥವಾ ಆ ನಿಟ್ಟಿನಲ್ಲಿ ಯೋಚಿಸುವುದು ಎಷ್ಟು ಸರಿ? ಮೊದಲು ಇಂತಹ ಅಸಮಾನತೆಗಳನ್ನು ಕೊನೆಗಾಣಿಸುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ಸಾರ್ವಜನಿಕ ಸಂಪತ್ತಿನ ಪಾಲು ಶೀಘ್ರಗತಿಯಲ್ಲಿ ಇಳಿಮುಖವಾಗುತ್ತಿರುವುದನ್ನು ಈ ವರದಿಯಲ್ಲಿ ಪ್ರಮುಖವಾಗಿ ಹೇಳಲಾಗಿದೆ. ಇದರಲ್ಲಿ ಮುಖ್ಯವಾಗಿ ಸಾರ್ವಜನಿಕ ಕಟ್ಟಡಗಳ ವಸತಿ, ಆಡಳಿತಗಳು, ಸಾರ್ವಜನಿಕ ಆಸ್ಪತ್ರೆಗಳು ಸೇರಿದಂತೆ ಇತರ ಸಾರ್ವಜನಿಕ ಸೇವೆಗಳು ಭಾರತದಲ್ಲಿ ಕಡಿಮೆ ಆಗಿದ್ದು ಖಾಸಗೀಕರಣವು ತೀವ್ರವಾಗಿ ಏರಿಕೆಯಾಗುತ್ತಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಸಾರ್ವಜನಿಕ ಸಂಪತ್ತಿನ ಖಾಸಗೀಕರಣ ಕೂಡ ಈ ರೀತಿಯ ಅಸಮಾನತೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ದೇಶದ ಸಾರ್ವಜನಿಕ ಸಂಪತ್ತು ಕಡಿಮೆಯಾಗುತ್ತಿದೆ ಮತ್ತು ಇದೇ ಸಮಯದಲ್ಲಿ ಖಾಸಗಿ ಸಂಪತ್ತು ಏರಿಕೆ ಆಗುತ್ತಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇಶಗಳು ಶ್ರೀಮಂತವಾಗುತ್ತಿವೆ ಆದೇ ಸಮಯದಲ್ಲಿ ಸರಕಾರಗಳು ಬಡವಾಗುತ್ತಿವೆ. ರಾಷ್ಟ್ರೀಯ ಸಂಪತ್ತಿನಲ್ಲಿ ಖಾಸಗಿ ಒಡೆತನದ ಆಸ್ತಿಗಳ ಪಾಲು ಅಧಿಕವಾಗುತ್ತಿದೆ. ಅಂದರೆ ಸಾರ್ವಜನಿಕ ಸಂಪತ್ತಿನ ಪಾಲು ಗಣನೀಯವಾಗಿ ಇಳಿಮುಖವಾಗುತ್ತಿದೆ. ಯುರೋಪ್ ಖಂಡವು ಅಸಮಾನತೆಯನ್ನು ಹೊಂದಿರುವ ಖಂಡವಾಗಿದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಅತಿ ಹೆಚ್ಚು ಅಸಮಾನತೆ ಕಂಡು ಬರುತ್ತದೆ. ದೇಶಗಳು ಅತಿ ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆಯನ್ನು ವಿಧಿಸಬೇಕು ಮತ್ತು ಬಲವಾದ ಪುನರ್ವಿತರಣಾ ಆಡಳಿತವನ್ನು ನೀತಿ ನಿಯಮಗಳ ರೂಪದಲ್ಲಿ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಹೀಗೆ ಮಾಡುವುದರಿಂದ ಹೆಚ್ಚುತ್ತಿರುವ ಅಸಮಾನತೆಯ ಪ್ರಸಕ್ತ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಅದನ್ನು ತಡೆಯಲು ಸಾಧ್ಯವಾಗುತ್ತದೆ.

ಎಲ್ಲವನ್ನೂ ಖಾಸಗೀಕರಣ ಮಾಡುವುದಾದರೆ, ಸರಕಾರಗಳು ಏಕೆ ಬೇಕು? ಕೇವಲ ನಿಯಮಗಳನ್ನು ಮಾಡುವುದಕ್ಕಾಗಿ ಚುನಾಯಿತ ಜನಪ್ರತಿನಿಧಿಗಳು ಬೇಕೆ? ಅಥವಾ ಭಾರತೀಯ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಇಂತಹ ಅಸಮಾನತೆಗಳು, ವರ್ಗೀಕರಣಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಚುನಾಯಿತ ಜನಪ್ರತಿನಿಧಿಗಳು ಮತ್ತು ಸರಕಾರಗಳ ಕರ್ತವ್ಯವಲ್ಲವೆ? ಸಮ ಸಮಾಜದ ನಿರ್ಮಾಣ ಇಂದಿನ ಅಗತ್ಯವಲ್ಲವೆ? ಎಂಬ ಪ್ರಶ್ನೆಗಳು ಉದ್ಭ್ಬವಿಸುವುದು ಸಾಮಾನ್ಯ. ಭಾರತದಂತಹ ದೇಶದಲ್ಲಿ ಕೇವಲ ಕಾರ್ಪೊರೇಟ್ ಸಂಸ್ಕೃತಿಯಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು. ದೀರ್ಘಕಾಲೀನ ಸಮಸ್ಯೆಗಳಿಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ. ಎಲ್ಲದರಲ್ಲೂ ಲಾಭ ನಿರೀಕ್ಷಿಸುವುದಾದರೆ ಸರಕಾರಗಳ ಜವಾಬ್ದಾರಿಯೇನು? ಖಾಸಗೀಕರಣವು ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕ ವಯಲದ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ. ಸರಕಾರದ ಪಾಲನ್ನು ಕಡಿಮೆ ಮಾಡುವ, ಬಂಡವಾಳ ಹಿಂದೆಗೆತದಿಂದ ಖಾಸಗಿ ವಲಯಕ್ಕೆ ಮಾಲಕತ್ವ ಮತ್ತು ನಿರ್ವಹಣೆಯನ್ನು ವರ್ಗಾವಣೆ ಮಾಡಲು ಅನುವಾಗುತ್ತದೆ. ದೇಶದ ಸಾಮಾನ್ಯ ವರ್ಗದಲ್ಲಿ ಶೇ. 66ರಷ್ಟು ಜನರು ಸುಧಾರಿತ ಮತ್ತು ಪ್ರತ್ಯೇಕ ಶೌಚಾಲಯ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಹೊಂದಿದ್ದರೆ ಈ ಪ್ರಮಾಣ ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಶೇ. 25.9ರಷ್ಟು ಜನರಿಗೆ ಮಾತ್ರ ಈ ಸೌಲಭ್ಯಗಳು ದೊರೆತಿವೆ ಎಂಬ ವಿಷಯವನ್ನು ಈ ಹಿಂದೆ ಭಾರತದ ವಿವಿಧ ವರ್ಗಗಳಲ್ಲಿರುವ ಆರೋಗ್ಯ-ನೈರ್ಮಲ್ಯ ಅಸಮಾನತೆಗಳ ಕುರಿತು ಆಕ್ಸ್‌ಫಾಮ್ ಸಂಸ್ಥೆಯು ಅಧ್ಯಯನ ನಡೆಸಿ ಸಿದ್ಧಪಡಿಸಿದ್ದ ‘ದಿ ಇಂಡಿಯಾ ಇನ್‌ಈಕ್ವಾಲಿಟಿ ರಿಪೋರ್ಟ್-2021’ರ ವರದಿಯಲ್ಲಿ ತಿಳಿಸಲಾಗಿತ್ತು. ಇದೂ ಕೂಡ ಅಸಮಾನತೆಯ ಮತ್ತೊಂದು ರೂಪವಾಗಿದೆ. ವರದಿಯಲ್ಲಿ ತಿಳಿಸಿರುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ. 50ರಷ್ಟು ಜನರಿಗೆ ವೈದ್ಯಕೀಯ ಸೌಲಭ್ಯಗಳು ದೊರೆಯವುದು ಕಷ್ಟಕರವಾಗಿದೆ. ಸಾಮಾನ್ಯ ವರ್ಗದ ಜನರಿಗೂ ಈ ಸೌಲಭ್ಯಗಳು ಹೇಳಿಕೊಳ್ಳುವ ಪ್ರಮಾಣದಲ್ಲೇನು ಲಭ್ಯವಾಗುತ್ತಿಲ್ಲ. ವರದಿಯೇ ಹೇಳಿರುವಂತೆ ಶೇ. 18.2ರಷ್ಟು ಜನ ಇಂದಿಗೂ ಇಂತಹ ಸೌಲಭ್ಯಗಳಿಗಾಗಿ ಕಷ್ಟ ಪಡುತ್ತಿದ್ದಾರೆ. ಸಾಮಾನ್ಯ ವರ್ಗದ ಜನರಿಗೆ ಹೋಲಿಸಿದರೆ ಪರಿಶಿಷ್ಟ ಪಂಗಡಗಳ ಕುಟುಂಬಗಳಲ್ಲಿ ಶೇ. 12.6ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ ಎಂಬ ಅಂಶವೂ ಕೂಡ ವರದಿಯಲ್ಲಿದೆ.

ಭಾರತದಲ್ಲಿ ಆರ್ಥಿಕ ಸುಧಾರಣೆಗಳು ಎಂಬ ಬ್ರಾಂತಿ 1991ರಲ್ಲೇ ಆರಂಭವಾಯಿತು. ಈ ಆರ್ಥಿಕ ಸುಧಾರಣೆಗಳು ಶುರುವಾಗುವುದಕ್ಕಿಂತ ಮುಂಚಿನ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಮಾಡಿದ ಆರ್ಥಿಕ ಸಾಧನೆಗಳು ಮತ್ತು 1991ರ ನಂತರದ ಇದುವರೆಗಿನ ಮೂರು ದಶಕಗಳ ಖಾಸಗೀಕರಣ ಮತ್ತು ಆರ್ಥಿಕ ಸುಧಾರಣೆಗಳ ಪ್ರಕ್ರಿಯೆಯಲ್ಲಿ ಸಾಧಿಸಿದ ಸಾಧನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಅಂತೆಯೇ ಸ್ವಾತಂತ್ರ್ಯ ಪಡೆದ ಏಳು ದಶಕಗಳಲ್ಲಿ ನಾವು ಸಾಧಿಸಿದ ಗುರಿಗಳೇನು? ಸಾಮಾಜಿಕ ಅಸಮಾನತೆಯನ್ನು ಎಷ್ಟರ ಮಟ್ಟಿಗೆ ಸರಿದೂಗಿಸಿಲಾಗಿದೆ? ಲಿಂಗ ಸಮಾನತೆಯನ್ನು ಯಾವ ಪ್ರಮಾಣದಲ್ಲಿ ಸಾಧಿಸಲಾಗಿದೆ? ಆರೋಗ್ಯ ಮತ್ತು ಶಿಕ್ಷಣದ ಲಭ್ಯತೆ ಪ್ರಮಾಣ ಎಷ್ಟು? ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿದೆ? ನಗರ ಮತ್ತು ಗ್ರಾಮಾಂತರ ಪ್ರದೇಶಗಳ ನಡುವೆ ಸೌಲಭ್ಯಗಳ ಲಭ್ಯತೆಯಲ್ಲಿ ಇರುವ ಅಂತರವೇನು? ಎಂಬಂತಹ ಅಂಶಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ನಮ್ಮ ಸಾಧನೆಯನ್ನು ಅವಲೋಕಿಸಿಕೊಳ್ಳಬೇಡವೇ? 75 ವರ್ಷಗಳು ಎಂದರೆ ಅದೇನೂ ಕಡಿಮೆ ಅವಧಿಯಲ್ಲ. ಅದು ಏಳೂವರೆ ದಶಕಗಳ ಕಾಲಾವಧಿ. ಅಸಮಾನತೆ ಎಂಬ ವಿಷಯವನ್ನು ಸರಿಪಡಿಸಲಿಕ್ಕೆ ಪ್ರಜಾಪ್ರಭುತ್ವ ದೇಶವೊಂದಕ್ಕೆ ಏಳು ದಶಕಗಳು ಸಾಕಾಗಲಿಲ್ಲವೆಂದರೆ ನಾವು ಎಂತಹ ಅಭಿವೃದ್ಧಿ ಪಥದಲ್ಲಿ ಸಾಗಿದ್ದೇವೆ ಎಂಬುದರ ಕುರಿತು ಮೆಲುಕು ಹಾಕಬೇಡವೆ? ಏರುತ್ತಿರುವ ನಿರುದ್ಯೊಗ ಪ್ರಮಾಣವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಅನುಸರಿಸಲಾಗಿದೆ? ಎರಡು ಹೊತ್ತಿನ ಕೂಳಿಗೂ ಪರದಾಡುವಂತಹ ಪರಿಸ್ಥಿತಿಯಿಂದ ನಾವಿನ್ನೂ ಸಂಪೂರ್ಣವಾಗಿ ಹೊರಬರಲಾಗಿಲ್ಲ. ಆರ್ಥಿಕ ಭದ್ರತೆಯ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಸಾಗಿದ್ದೇವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲೂ ಉತ್ತಮವಾಗಿಯೇ ಪ್ರಗತಿ ಸಾಧಿಸಲಾಗಿದೆ. ಹಾಗಾಗಿ 1991ರ ಸುಧಾರಣಾ ಪೂರ್ವ ಕಾಲದಲ್ಲಿಯೂ ದೇಶವು ಕೆಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಭಾರತವು ಮೊದಲಿನಿಂದ ಮಿಶ್ರ ಆರ್ಥಿಕ ನೀತಿಯನ್ನು ಪಾಲಿಸಿಕೊಂಡು ಬಂದಿದೆ.

ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಮೊದಲಿನಿಂದಲೂ ಖಾಸಗಿ ವಲಯವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇರುವುದನ್ನು ಅಲ್ಲಗಳೆಯುವಂತಿಲ್ಲ. ಖಾಸಗಿ ವಲಯವನ್ನು ನಿಯಂತ್ರಿಸಲಾಗಿತ್ತೆ ವಿನಃ ಎಂದಿಗೂ ನಿಷೇಧಿಸಿರಲಿಲ್ಲ. ಆದರೆ ಅದನ್ನು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಬಳಸಿಕೊಂಡು ಬರಲಾಗುತ್ತಿತ್ತು. ಆದಾಯ ಮತ್ತು ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂವಿಧಾನದ ಭಾಗ 4ರ ಪರಿಚ್ಛೇದ 38ರ ಸೆಕ್ಷನ್ 2ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಇಂತಹ ಸಂಪತ್ತಿನ ಮತ್ತು ಆದಾಯದ ಅಸಮಾನತೆಯನ್ನು ತಡೆಯುವುದು ಅಗತ್ಯ. ಖಾಗೀಕರಣ ಹೊಸ ಪರಿಕಲ್ಪನೆಯೇನೂ ಅಲ್ಲ. ಭಾರತೀಯ ಆರ್ಥಿಕತೆಯಲ್ಲಿ ಖಾಸಗಿ ವಲಯವು 1950ರಿಂದಲೇ ಕಾರ್ಯತತ್ಪರವಾಗಿದೆ. ಆದರೆ ಖಾಸಗೀಕರಣವು ಎಂದಿಗೂ ಏಕಸ್ವಾಮ್ಯವಾಗಿರಲಿಲ್ಲ. ಅದೊಂದು ಆಯ್ಕೆಯಾಗಿತ್ತು ಅಷ್ಟೆ. ಕೆಲವರು ಜಗತ್ತಿನಲ್ಲಿಯೇ ವೇಗವಾಗಿ ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಇಂತಹವರು ಜಿಡಿಪಿಯೊಂದೇ ಆರ್ಥಿಕ ಪ್ರಗತಿಯ ಸೂಚಕ ಎಂದು ಅರ್ಥೈಸಿಕೊಂಡಿದ್ದಾರೆ. ಆದರೆ ಜಿಡಿಪಿಯೊಂದೇ ಅಭಿವೃದ್ಧಿಯ ಅಳತೆಗೋಲಲ್ಲ. ಭಾರತೀಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿರುವ ಅಸಮಾನತೆಯನ್ನು ಕೊನೆಗಾಣಿಸದೆ ಖಾಸಗೀಕರಣದ ಕುರಿತು ಕಲ್ಪನೆಗಳನ್ನು ಇಟ್ಟುಕೊಳ್ಳುವುದೂ ಕೂಡ ಸರಿಯಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)