varthabharthi


ನಿಮ್ಮ ಅಂಕಣ

ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ದುರಂತಗಳನ್ನು ತಡೆಯಬಹುದು

ವಾರ್ತಾ ಭಾರತಿ : 5 Jan, 2022
ಭರತ್ ಡೋಗ್ರಾ

ಜನವರಿ 1ರ ಮುಂಜಾನೆ, ಹೊಸ ವರ್ಷ ಆಗಷ್ಟೇ ಕಾಲಿಟ್ಟಿದ್ದಾಗ ಜಮ್ಮುವಿನಲ್ಲಿ ಸಂಭವಿಸಿದ ದೊಡ್ಡ ದುರಂತವೊಂದು ವಿಷಾದದ ಛಾಯೆಯನ್ನು ಎಲ್ಲೆಡೆ ಹರಿಡಿತು. ಕಾಲ್ತುಳಿತದಲ್ಲಿ 12 ಯಾತ್ರಿಕರು ಮೃತಪಟ್ಟರು ಹಾಗೂ ಸುಮಾರು ಅಷ್ಟೇ ಸಂಖ್ಯೆಯ ಜನ ಗಾಯಗೊಂಡರು. ಜನದಟ್ಟಣೆಯ ಸಂದರ್ಭಗಳಲ್ಲಿ ಸಾಮಾನ್ಯವಾಗಿ ನಡೆಯುವ ಇಂತಹ ಅಪಘಾತವು ಕೋವಿಡ್ ಸಮಯದಲ್ಲಿ ನಡೆದಿರುವುದು ನಿಜವಾಗಿಯೂ ಬೇಸರದ ಸಂಗತಿಯೇ ಸರಿ. ಪರಿಹಾರ ಮತ್ತು ರಕ್ಷಣಾ ಕಾರ್ಯವು ಸಮರ್ಪಕವಾಗಿರಲಿಲ್ಲ ಎನ್ನುವುದು ದುರಂತದಲ್ಲಿ ಪಾರಾದವರ ಮಾತುಗಳಿಂದ ತಿಳಿದುಬರುತ್ತದೆ.

ಇದು ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳ ಪೈಕಿ ಒಂದು. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ, ಅಲ್ಲಿ ನಡೆದಿರುವ ದುರಂತವು ಆಘಾತಕಾರಿಯಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ. ಈ ವರದಿಯ ಆಧಾರದಿಂದಲಾದರೂ, ಆ ಯಾತ್ರಾ ಸ್ಥಳದ ಸುರಕ್ಷತಾ ವ್ಯವಸ್ಥೆಯು ಹೆಚ್ಚುತ್ತದೆ ಎಂಬುದಾಗಿ ನಾವು ಆಶಿಸೋಣ.

ಭಾರತದ ಧಾರ್ಮಿಕ ಸಮಾರಂಭಗಳಲ್ಲಿ ಮತ್ತು ಯಾತ್ರಾ ಸ್ಥಳಗಳಲ್ಲಿ ನಡೆಯುವ ಅಪಘಾತಗಳ ಪಟ್ಟಿ ಉದ್ದವಿದೆ. 2016 ಅಕ್ಟೋಬರ್‌ನಲ್ಲಿ ಜೈ ಗುರುದೇವ್ ಪಂಥದ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗವಹಿಸುವುದಕ್ಕಾಗಿ ದೇಶದ ವಿವಿಧ ಭಾಗಗಳಿಂದ ವಾರಣಾಸಿಗೆ ಬಂದಿದ್ದವರ ಪೈಕಿ 25 ಮಂದಿ ಕಾಲ್ತುಳಿತದಿಂದ ಮೃತಪಟ್ಟರು. ಆದರೆ ಈ ದುರಂತವನ್ನು ಸಂಪೂರ್ಣವಾಗಿ ತಡೆಯಬಹುದಾಗಿತ್ತು. ಆ ದುರಂತದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡರು.

ಅಕ್ಟೋಬರ್ 15ರಂದು ಪಂಥದ ಅನುಯಾಯಿಗಳು ವಾರಣಾಸಿ ಮತ್ತು ನೆರೆಯ ಚಂದೌಲಿ ಜಿಲ್ಲೆಯನ್ನು ಸಂಪರ್ಕಿಸುವ ಸೇತುವೆಯತ್ತ ನಡೆಯಲಾರಂಭಿಸಿದರು. ಎರಡು ಜಿಲ್ಲೆಗಳ ಗಡಿಯಲ್ಲಿ ಪ್ರಧಾನ ಸಮಾರಂಭ ನಡೆಯಬೇಕಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ ಜನರ ಸಂಖ್ಯೆಯು, ಸಂಘಟಕರು ಜಿಲ್ಲಾಡಳಿತಗಳಿಗೆ ನೀಡಿದ್ದ ಸಂಖ್ಯೆಗಿಂತ ತುಂಬಾ ಹೆಚ್ಚಾಗಿತ್ತು ಎನ್ನುವುದು ಬಳಿಕ ಎಲ್ಲರ ಗಮನಕ್ಕೆ ಬಂತು.

ಸುಮಾರು 3,000ದಿಂದ 4,000 ಮಂದಿ ಮೆರವಣಿಗೆಯಲ್ಲಿ ಭಾಗವಹಿಸಬಹುದು ಎಂಬುದಾಗಿ ಆಡಳಿತಕ್ಕೆ ಸಂಘಟಕರು ತಿಳಿಸಿದ್ದರು. ಆದರೆ, ವಾಸ್ತವವಾಗಿ ಈ ಸಂಖ್ಯೆಯ ನೂರು ಪಟ್ಟು ಜನರು ಅಲ್ಲಿ ಜಮಾಯಿಸಿದ್ದರು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಮೂಲ ಅಂದಾಜಿಗಿಂತ 20 ಪಟ್ಟು ಅಧಿಕ ಮಂದಿ ಅಲ್ಲಿ ನೆರೆದಿದ್ದರು ಎನ್ನುವುದನ್ನು ಸಂಘಟಕರೇ ಒಪ್ಪಿಕೊಂಡಿದ್ದಾರೆ. ಜಿಲ್ಲಾಡಳಿತಗಳು ಮೊದಲೇ ಮುಂಜಾಗರೂಕತೆ ವಹಿಸಿ, ಸಣ್ಣ ಸಣ್ಣ ಗುಂಪುಗಳಲ್ಲಿ ಜನರನ್ನು ಬಿಡುವಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೆ, ದುರಂತವನ್ನು ತಪ್ಪಿಸಬಹುದಾಗಿತ್ತು.

ಅದು ಅಕ್ಟೋಬರ್ ತಿಂಗಳಾಗಿದ್ದರೂ ಬೆಳಗ್ಗೆ ಮತ್ತು ಮಧ್ಯಾಹ್ನದ ವಾತಾವರಣ ಅತ್ಯಂತ ಬಿಸಿಯಾಗಿತ್ತು. ಹಾಗಾಗಿ, ಜನರು ಬಳಲಿ ಬೆಂಡಾಗಿದ್ದರು. ಬಾಯಾರಿಕೆಯಿಂದ ಬಳಲಿದ್ದ ಕೆಲವರು ಗಂಗಾ ನದಿಯ ಸಮೀಪದಲ್ಲೇ ಮೂರ್ಛೆ ಹೋದರು. ಅಂತಿಮವಾಗಿ, ಸೇತುವೆ ಬಿರುಕು ಬಿಟ್ಟಿದೆ ಎಂಬ ಊಹಾಪೋಹಗಳು ಹರಡಿದವು. ಜನರು ಗಾಬರಿಯಿಂದ ಸಿಕ್ಕಿದೆಡೆಗೆ ಧಾವಿಸಿದಾಗ ನೂಕುನುಗ್ಗಲು ಏರ್ಪಟ್ಟಿತ್ತು. ಕಾಲುಗಳಡಿ ಬಿದ್ದು ಹಲವರು ಮೃತಪಟ್ಟರು ಹಾಗೂ ಗಾಯಗೊಂಡರು.
ಆನಂತರವಾದರೂ, ಸರಿಯಾದ ಪರಿಹಾರ ಕಾರ್ಯಾಚರಣೆ ನಡೆದಿದ್ದರೆ ಹಲವು ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿತ್ತು. ಕೆಲವು ವರದಿಗಳು ಹೇಳುವಂತೆ, ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಾಗ ಲಿಂಗ ತಾರತಮ್ಯ ಮಾಡಲಾಯಿತು ಹಾಗೂ ಹಲವು ಮಹಿಳಾ ಸಂತ್ರಸ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಯಿತು.

ಈ ವಲಯದ ಪ್ರಮುಖ ಹಿಂದಿ ದಿನಪತ್ರಿಕೆಯೊಂದು ಅಕ್ಟೋಬರ್ 16ರಂದು ಹೀಗೆ ವರದಿ ಮಾಡಿತ್ತು: ‘‘ಸಂಘಟಕರು ಗಂಭೀರವಾಗಿ ಗಾಯಗೊಂಡಿದ್ದ ಐವರು ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯದೆ ಆಶ್ರಮಕ್ಕೆ ಒಯ್ದರು. ಅವರನ್ನು ತಕ್ಷಣ ಆಸ್ಪತ್ರೆಗಳಿಗೆ ಕರೆದೊಯ್ದಿದ್ದರೆ ಅವರ ಜೀವಗಳನ್ನು ಉಳಿಸಬಹುದಾಗಿತ್ತು.’’
ಇಂತಹ ದುರಂತಗಳು ಸಂಭವಿಸಿದಾಗ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಸಂತ್ರಸ್ತರಿಗೂ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು.

ಇಂತಹ ದುರಂತಗಳು ಸಂಭವಿಸುವಾಗ ಆದ್ಯತೆಯಿಂದ ಮಾಡಬೇಕಾದ ಇನ್ನೊಂದು ಕೆಲಸವೆಂದರೆ, ಬೇರ್ಪಟ್ಟ ಮಕ್ಕಳನ್ನು ಮತ್ತೆ ಹೆತ್ತವರ ಜೊತೆಗೆ ಸೇರಿಸಲು ಪ್ರಯತ್ನಿಸುವುದು. ಹೆತ್ತವರನ್ನು ತಕ್ಷಣಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ, ಮಕ್ಕಳ ಹೆಸರುಗಳು ಮತ್ತು ಇತರ ವಿವರಗಳನ್ನು ಸರಿಯಾಗಿ ದಾಖಲಿಸಬೇಕು ಹಾಗೂ ಮಕ್ಕಳನ್ನು ಅಧಿಕೃತ ಸಂಸ್ಥೆ ಅಥವಾ ಮಾನ್ಯತೆ ಪಡೆದ ಮತ್ತು ಜವಾಬ್ದಾರಿಯುತ ಸ್ವಯಂಸೇವಾ ಸಂಘಟನೆಯೊಂದರ ವಶಕ್ಕೆ ಒಪ್ಪಿಸಬೇಕು. ಈ ಸಂಘಟನೆಗಳು ಹೆತ್ತವರು ಪತ್ತೆಯಾಗುವವರೆಗೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಕಾಲ್ತುಳಿತದ ಬಳಿಕ ಕೆಲವು ಮಕ್ಕಳು ಹೆತ್ತವರಿಂದ ಬೇರ್ಪಟ್ಟಿವೆ ಎಂಬುದಾಗಿ ವರದಿಗಳು ಹೇಳಿವೆ.

ಧಾರ್ಮಿಕ ಸ್ಥಳಗಳಲ್ಲಿ ಕಾಲ್ತುಳಿತದಿಂದಾಗಿ ಅಗಾಧ ಸಂಖ್ಯೆಯ ಜನರು ಮೃತಪಡುವ ಹಾಗೂ ಗಾಯಗೊಳ್ಳುವ ದುರಂತಗಳು ನಡೆಯುತ್ತಲೇ ಇವೆ. ಈ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ, ಸಂಬಂಧಿತರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿರುವುದು ಬಳಿಕ ಬೆಳಕಿಗೆ ಬಂದಿದೆ. ಭಾರತದಲ್ಲಿ ಈ ಮಾದರಿಯ ಅತ್ಯಂತ ದೊಡ್ಡ ದುರಂತವೆನ್ನಬಹುದಾದ ಘಟನೆ 1954ರಲ್ಲಿ ಸಂಭವಿಸಿತು. ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳದಲ್ಲಿ 800ಕ್ಕೂ ಅಧಿಕ ಯಾತ್ರಿಕರು ಕಾಲ್ತುಳಿತಕ್ಕೆ ಬಲಿಯಾದರು. 2005ರಲ್ಲಿ ಮಹಾರಾಷ್ಟ್ರದ ವಾಯಿಯಲ್ಲಿರುವ ಮಂದಾರ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ 258 ಮಂದಿ ಪ್ರಾಣ ಕಳೆದುಕೊಂಡರು. 2008ರಲ್ಲಿ ಜೋಧ್‌ಪುರದ ಚಾಮುಂಡ ದೇವಾಲಯದಲ್ಲಿ ನಡೆದ ಕಾಲ್ತುಳಿತದಲ್ಲಿ 249 ಮಂದಿ ಮೃತಪಟ್ಟರು. 2013ರಲ್ಲಿ ಮಧ್ಯಪ್ರದೇಶದ ರತನ್‌ಗಢ ಮಾತಾ ದೇವಾಲಯದಲ್ಲಿ ನಡೆದ ದುರಂತದಲ್ಲಿ 115 ಮಂದಿ ಪ್ರಾಣ ಕಳೆದುಕೊಂಡರು. ಇದೇ ಮಾದರಿಯ ಇನ್ನೂ ಹಲವು ದುರಂತಗಳು ಭಾರತದಲ್ಲಿ ಸಂಭವಿಸಿವೆ ಹಾಗೂ ದೇಶದಲ್ಲಿ ನಡೆದಿರುವ 5 ಕಾಲ್ತುಳಿತ ಪ್ರಕರಣಗಳ ಪೈಕಿ 4 ಧಾರ್ಮಿಕ ಸ್ಥಳಗಳಲ್ಲಿ ನಡೆದಿವೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ, ಈ ಮಾದರಿಯ ದುರಂತದ ಹೆಚ್ಚು ಪ್ರಕರಣಗಳು ಹಜ್‌ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿವೆ. 1990ರ ಜುಲೈ ತಿಂಗಳಲ್ಲಿ, ಮಕ್ಕಾ ಸಮೀಪದ ಸುರಂಗದ ಒಳಗೆ ನಡೆದ ಕಾಲ್ತುಳಿತದಲ್ಲಿ 1,426 ಯಾತ್ರಿಕರು ಪ್ರಾಣ ಕಳೆದುಕೊಂಡರು. 2015ರ ಸೆಪ್ಟಂಬರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 2,411 ಯಾತ್ರಿಕರು ಅಸುನೀಗಿದರು. ಇದಕ್ಕೂ ಮೊದಲು, ಅದೇ ತಿಂಗಳಲ್ಲಿ ನಡೆದ ಕ್ರೇನ್ ಅಪಘಾತದಲ್ಲಿ 111 ಮಂದಿ ಮೃತಪಟ್ಟಿದ್ದರು. 2006 ಜುಲೈಯಲ್ಲಿ ಜಮರಾತ್ ಸೇತುವೆಯಲ್ಲಿ ನಡೆದ ಕಾಲ್ತುಳಿತದಲ್ಲಿ 382 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜಾಗರೂಕ ಯೋಜನೆ ಹಾಗೂ ಸ್ಥಳೀಯರು ಮತ್ತು ಯಾತ್ರಿಗಳ ಸಹಕಾರದೊಂದಿಗೆ ಆಡಳಿತಾತ್ಮಕ ಕ್ರಮಗಳ ಸಮರ್ಪಕ ಜಾರಿಯ ಮೂಲಕ ಇಂತಹ ದುರಂತಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಇಂತಹ ಎಲ್ಲ ಸಮಾವೇಶಗಳಲ್ಲಿ ಅಪಘಾತ ನಿರ್ವಹಣಾ ಸಿಬ್ಬಂದಿ ಮತ್ತು ನಿರೀಕ್ಷಿತ ಜನಸಂದಣಿಯ ಗಾತ್ರಕ್ಕನುಗುಣವಾಗಿ ಅಗತ್ಯ ಸಲಕರಣೆಗಳನ್ನು ನಿಯೋಜಿಸಬೇಕು. ಇದನ್ನು ಹೊರತುಪಡಿಸಿ ನಿರ್ದಿಷ್ಟ ಸಮಾವೇಶಗಳನ್ನು ಹೊಂದಿಕೊಂಡು ಇತರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಉದಾಹರಣೆಗೆ: ಕೆಲವು ಧಾರ್ಮಿಕ ಸಮಾವೇಶಗಳಲ್ಲಿ ನಿರ್ದಿಷ್ಟ ವಿದ್ಯಮಾನವೊಂದನ್ನು ವೀಕ್ಷಿಸುವುದು ಪ್ರಮುಖ ಉದ್ದೇಶವಾಗಿದೆ. ಬೃಹತ್ ಸಮಾವೇಶಗಳಲ್ಲಿ ಜನರು ಬಹುತೇಕ ಒಂದೇ ಸಮಯದಲ್ಲಿ ನಿರ್ದಿಷ್ಟ ವಿದ್ಯಮಾನದ ವೀಕ್ಷಣೆಗೆ ತೊಡಗಿದರೆ ಸಮಸ್ಯೆಗಳು ತಲೆದೋರಬಹುದು.

 ಧಾರ್ಮಿಕ ಸಮಾವೇಶಗಳು ಕಿರಿದಾದ ಸ್ಥಳದಲ್ಲಿ ನಡೆಯುವುದಾಗಿದ್ದರೆ ಅಥವಾ ಅಂತಹ ಸಮಾವೇಶಗಳಿಗೆ ಹೋಗುವ ದಾರಿಯು ಕಿರಿದಾಗಿದ್ದರೆ ಅಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.

ಅಂತಿಮವಾಗಿ, ವಾರಣಾಸಿಯಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಹೇಳುವುದಾದರೆ, ಸಂಘಟಕರು ನೀಡುವ ಯಾತ್ರಿಗಳ ಸಂಖ್ಯೆಯನ್ನೇ ಸರಕಾರಿ ಆಡಳಿತವು ಅವಲಂಬಿಸಬಾರದು. ಅದು ಜನರ ಜಮಾವಣೆಗೆ ಸಂಬಂಧಿಸಿ ಸ್ವತಂತ್ರ ಪರಿಶೀಲನೆ ನಡೆಸಬೇಕು. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಅಗತ್ಯ ಬಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯಬಾರದು. ಇದು ಸಂಘಟಕರ ಅಸಮಾಧಾನಕ್ಕೆ ಕಾರಣವಾದರೂ ಪರವಾಗಿಲ್ಲ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)