varthabharthi


ನಿಮ್ಮ ಅಂಕಣ

ದ್ವೇಷಕ್ಕೆ ಮರಗಳನ್ನು ಕಡಿಯುವುದು!

ವಾರ್ತಾ ಭಾರತಿ : 5 Jan, 2022
ಮುರುಗೇಶ ಡಿ., ದಾವಣಗೆರೆ

ಮಾನ್ಯರೇ,
ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಲಹಂಕ ಗ್ರಾಮ ಪಂಚಾಯತ್‌ನ ಅಜ್ಜೆನಹಳ್ಳಿಯಲ್ಲಿ, ಯಾವುದೋ ಹಳೆಯ ವೈಯಕ್ತಿಕ ದ್ವೇಷಕ್ಕೆ ರಾತ್ರೋ ರಾತ್ರಿ 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವುದು ನಿಜಕ್ಕೂ ಖಂಡನಾರ್ಹ. ಕುಟುಂಬಗಳ ನಡುವೆ ಅಥವಾ ಯಾವುದೋ ಹಳೆಯ ದ್ವೇಷಕ್ಕೆ, ವ್ಯಕ್ತಿಯನ್ನು ನೇರಾನೇರ ಎದುರಿಸಲಾಗದೆ, ಮರಗಳನ್ನು ತುಂಡರಿಸುವ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ನಾಲ್ಕೈದು ವರ್ಷ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಕಷ್ಟಪಟ್ಟು ಮಕ್ಕಳಂತೆ ಸಾಕಿ ಬೆಳೆಸಿದ ಮರಗಳನ್ನು ಒಂದೇ ರಾತ್ರಿಗೆ ಕಡಿದು ಹಾಕಿದರೆ, ಪಾಪ ಆ ಬಡಪಾಯಿ ರೈತನಿಗೆ ಹೇಗಾಗಬೇಕು?. ಮೊದಲೇ ರೈತರ ಬದುಕು ಬಹಳ ಶೋಚನೀಯವಾಗಿದೆ. ಅದರಲ್ಲೂ ಇಂತಹ ಘಟನೆಗಳು ನಡೆದರೆ ಮೇಲೇಳಲಾರದಂತಹ ಹೀನಾಯ ಸ್ಥಿತಿಗೆ ತಲುಪಿ, ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಾರೆ.
 ದ್ವೇಷಕ್ಕಾಗಿ ಅಡಿಕೆ ಮರ ಕಡಿಯುವ ದುಷ್ಟರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡುವ ಕಾನೂನನ್ನು ಜಾರಿಗೆ ತರಬೇಕಾಗಿದೆ. ಇಂತಹವರಿಗೆ ಕೇವಲ ಮೂರು ತಿಂಗಳೋ ಆರು ತಿಂಗಳೋ ಶಿಕ್ಷೆಯಾದರೆ ಸಾಲದು, ಜೀವಾವಧಿಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಡಿಕೆ ಮರಗಳನ್ನು ಕಳೆದುಕೊಂಡು ನಷ್ಟದಲ್ಲಿರುವ ರೈತರಿಗೆ ಸರಕಾರದಿಂದ ಯಾವುದೇ ಮೂಲದಿಂದಾದರೂ ನಷ್ಟ ಪರಿಹಾರದ ನೆರವು ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)