ಕನ್ನಡ ಒಂದು ಜೀವನ ಧಾರೆ
ಮುಂಬೈ ಕನ್ನಡ ಲೋಕದ ಹಿರಿಯರಾಗಿ ಗುರುತಿಸಿಕೊಂಡಿರುವ ಬಾಬು ಶಿವ ಪೂಜಾರಿ ಹೊಟೇಲ್ ಉದ್ಯಮಿ. ಜೊತೆಗೆ ಸಮಾಜದ ಕುರಿತಂತೆ ಅಪಾರ ಕಾಳಜಿಯುಳ್ಳ ಹೃದಯವಂತ ಬರಹಗಾರ. ಸಂಶೋಧಕ ಹಾಗೂ ಜಾನಪದ ವಿದ್ವಾಂಸರಾದ ಬಾಬು ಶಿವ ಪೂಜಾರಿಯವರ ‘‘ಬಿಲ್ಲವರು ಒಂದು ಅಧ್ಯಯನ’ ಕೃತಿ ವಿದ್ವಾಂಸರ ಅಪಾರ ಪ್ರಶಂಸೆಯನ್ನು ತನ್ನದಾಗಿಸಿಕೊಂಡಿದೆ. ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಅವರ ಇನ್ನೊಂದು ಮಹತ್ವದ ಕೃತಿ. ಮಂದರ್ತಿಯಲ್ಲಿ ಬಿಲ್ಲವ ಕಲಾವಿದರ ಮೇಲೆ ಜಾತಿ ದೌರ್ಜನ್ಯ ನಡೆದಾಗ, ಇಡೀ ಪ್ರಕರಣಕ್ಕೆ ಸಂಬಂಧ ಪಟ್ಟ ಲೇಖನ, ಬರಹಗಳನ್ನು ಸಂಗ್ರಹಿಸಿ ಅದನ್ನು ಸಂಪಾದಿಸಿರುವುದು ಅವರ ಸಾಮಾಜಿಕ ಕಾಳಜಿಗೆ ಇನ್ನೊಂದು ಸಾಕ್ಷಿಯಾಗಿದೆ. ಮುಂಬೈಯಲ್ಲಿದ್ದು, ಕನ್ನಡ ನಾಡು ನುಡಿಯನ್ನು ಅವರು ಕಂಡ ಬಗೆ ಈ ಲೇಖನದಲ್ಲಿದೆ.
ಬಾಬು ಶಿವ ಪೂಜಾರಿ
ಪ್ರಪಂಚದ ಯಾವುದೇ ಭಾಷೆಗಳು ವಿದ್ಯಾವಂತರಿಂದ, ವಿಜ್ಞಾನಿಗಳಿಂದ, ದಾರ್ಶನಿಕರಿಂದ, ಸಾಹಿತಿಗಳಿಂದ, ವ್ಯಾಕರಣಕಾರರಿಂದ ಹುಟ್ಟಿದವುಗಳಲ್ಲ. ಭಾಷೆಗಳು ಹುಟ್ಟಿದ್ದು, ಕಾಡುಮೇಡು, ಹಳ್ಳಿಹಳ್ಳಿಗಳಲ್ಲಿಯ ಜನ ಸಾಮಾನ್ಯರಿಂದ, ಕಾಡು ಮೇಡಿನ ಅನಕ್ಷರ ಜನರೇ ಜಗತ್ತಿನ ಎಲ್ಲಾ ಭಾಷೆಗಳ ಜನನಿ, ಜನಕರು.
ಭಾಷೆ ಮತ್ತು ಮನಸ್ಸು ಸ್ಥೂಲವಾಗಿ ಅಭಿನ್ನವೆಂದು ತೋರಿದರೂ ಸೂಕ್ಷ್ಮದಲ್ಲಿ ಅವು ಭಿನ್ನವಾದವುಗಳೇ ಆದರೂ ಭಾಷೆಗೂ ಮನಸ್ಸಿಗೂ ಅವಿನಾಭಾವ ಸಂಬಂಧ. ಮಗುವಿನ ಅಳು, ನಗು, ಅಂಗಸನ್ನೆ, ಅಂಗಾಲಾಪನೆ, ಸ್ವರಸಂಜೆಗಳಿಂದ ವ್ಯಕ್ತಗೊಳ್ಳುವ ಮನಸ್ಸು ಹಂತ ಹಂತವಾಗಿ ತಾಯಿ-ತಂದೆ-ಬಂಧುಗಳ ಸ್ವರ, ಸಂಕೇತಗಳನ್ನು ಅನುಸರಿಸಿ, ಅವಲಂಬಿಸಿ, ರೂಢಿಸಿ, ನುಡಿಯಾಗಿಸಿ ಆ ನುಡಿಗಳನ್ನು ಭಾಷೆಯಾಗಿಸಿಕೊಳ್ಳುತ್ತದೆ. ಮನಸ್ಸು, ಬುದ್ಧಿ, ಭಾವನೆ, ಅನುಭವ, ಚಿತ್ರ, ಭಾಷೆಗೆ ಪರಸ್ಪರ ಪೂರಕಗಳು, ಮನಸ್ಸಿನ ಭಾವನೆ, ಅನುಭವಗಳೆಲ್ಲ ಭಾಷೆ, ಕಲೆ, ನೃತ್ಯ, ಶಿಲ್ಪ, ನಾಟಕ, ಸಂಗೀತ ಹೀಗೆ ವಿಭಿನ್ನ ರೂಪಗಳಲ್ಲಿ ವ್ಯಕ್ತಗೊಳ್ಳುತ್ತವೆ. ಇವುಗಳನ್ನೆಲ್ಲಾ ಒಟ್ಟಾಗಿಸಿ ನಾವು ಸಾಹಿತ್ಯ ಎನ್ನುತ್ತೇವೆ.
ವ್ಯಕ್ತಿಗೊಂದು ಮನಸ್ಸಿರುವಂತೆ ವ್ಯಕ್ತಿಗಳಿಂದ ಕೂಡಿದ ಸಮುದಾಯಕ್ಕೂ ಪ್ರತ್ಯೇಕ ಎನ್ನಬಹುದಾದ ಸಾಮೂಹಿಕ ಮನಸ್ಸೊಂದು ಇರುತ್ತದೆ. ಅದು ಸಮಾಜದ ಒಟ್ಟು ವ್ಯಕ್ತಿಗಳ ಮನಸ್ಸಿನ ಮೊತ್ತ, ಸಮಾಜದ ವ್ಯವಹಾರ ವಿಸ್ತರಣೆಗೊಂಡಂತೆ ಭಾಷೆಯ ಪರಿಧಿ ಹಿಗ್ಗುತ್ತಾ ಹೋಗುತ್ತದೆ. ಭಾಷೆ ಬೆಳೆದಂತೆ ಮನಸ್ಸಿಗೆ ವ್ಯಕ್ತವಾಗಲು ಅವಕಾಶ, ಅನುಕೂಲಗಳು ಹೆಚ್ಚುತ್ತವೆ. ಮನಸ್ಸು ಹೆಚ್ಚೆಚ್ಚು ಅನುಭವ ಪಡೆದಂತೆ ಭಾಷೆ ಸಮೃದ್ಧವಾಗುತ್ತದೆ.
ನಿರ್ದಿಷ್ಟ ವಸ್ತುವಿಗೆ ನಿರ್ದಿಷ್ಟ ಸಂಖ್ಯೆಗಳನ್ನು, ಅವುಗಳಿಗೆ ನಿರ್ದಿಷ್ಟ ಸ್ವರ ವಿನ್ಯಾಸಗಳನ್ನು ರೂಢಿಸಿ ನಿರಂತರ ಬಳಸುತ್ತಿದ್ದಂತೆ ಕಾಲಕ್ರಮೇಣ ಆ ಸಂಜ್ಞಾಸಹಿತ ಸ್ವರವಿನ್ಯಾಸಗಳು ನಿರ್ದಿಷ್ಟ ಅರ್ಥದ ಶಬ್ದಗಳಾಗುತ್ತವೆ. ಶಬ್ದ ಎನ್ನುವುದಕ್ಕೆ ಸ್ವರ ಎನ್ನುವುದು ಮೂಲಾರ್ಥ. ನಿರಂತರ ಬಳಕೆಗಳಿಂದ ಸಂಜ್ಞೆಗಳು ಹಿಂದುಳಿದು ಸ್ವರಸಂಯೋಜಿತ ಶಬ್ದಗಳು ಭಾಷೆಗಳಾಗಿ ಬೆಳೆಯುತ್ತವೆ. ಪ್ರತಿ ಶಬ್ದ ನಿರ್ಮಾಣಕ್ಕೂ ಅಗಣಿತ ಜನರ ಅನಿರ್ದಿಷ್ಟಾವಧಿಯ ಪರಿಶ್ರಮ ಇರುತ್ತದೆ. ಕಲ್ಲನ್ನು ಕಡಿದು ಸುಂದರ ಮೂರ್ತಿ ಮಾಡಿದಂತೆ ಶಬ್ದಗಳು ಒರಟಾಗಿ ಹುಟ್ಟಿ ಬಾಯಿಯಿಂದ ಬಾಯಿಗೆ ಬಳಸಲ್ಪಟ್ಟ, ನಯಗೊಂಡು ನಿಶ್ಚಿತ ಅರ್ಥ/ಅರ್ಥಗಳನ್ನು ಪಡೆಯುತ್ತವೆ. ಭೌಗೋಳಿಕ ಪರಿಸರ ಮತ್ತಲ್ಲಿಯ ಕಾಡುಮೇಡು, ಮರಗಿಡ, ಪಶುಪಕ್ಷಿ, ಸರಿಸೃಪ, ನೆಲ ಜಲ ಮೊದಲ್ಗೊಂಡು ಮಾನವ ಮತ್ತವನ ಸಹಜೀವಿಗಳ ಜೀವನದ ಪ್ರತಿ ಹಂತಗಳನ್ನು, ಅವುಗಳ ಸೂಕ್ಷ್ಮ ನಿರೀಕ್ಷಾನುಭವಗಳನ್ನು ಭಾಷೆ ಪ್ರತಿನಿಧಿಸುತ್ತದೆ. ‘ಭಾಷೆ ಇಲ್ಲದವ’ ಕುಂದಾಪುರ ಗ್ರಾಮ ಕನ್ನಡದಲ್ಲೊಂದು ನುಡಿ ಇದು. ಅಂದರೆ ತಿಳುವಳಿಕೆರಹಿತ ಸಂಸ್ಕೃತಹೀನ ಎಂದು. ಸಹಸ್ರ ಸಹಸ್ರ ವರ್ಷಗಳಲ್ಲಿಯ ಮಾನವನ ಜೀವನದ ಪ್ರತ್ಯಕ್ಷ, ಪರೋಕ್ಷ ಅನುಭವ ನಿಧಿಗಳು ಪ್ರತೀ ಭಾಷೆಗಳಲ್ಲೂ ಅಡಕವಾಗಿರುತ್ತವೆ. ಭಾಷೆ ಎನ್ನುವುದು ಸಂಜ್ಞೆ, ಕಲೆ, ಸ್ವರ, ಸಂಗೀತ, ನೃತ್ಯ, ನಾಟಕ, ಶಿಲ್ಪ, ಧರ್ಮ, ನಾಗರಿಕತೆ. ಭಾಷೆ ಎನ್ನುವುದು ಸಂಸ್ಕೃತಿ, ಭಾಷೆ ಎನ್ನುವುದು ಜೀವನ ಧಾರೆ. ಭಾಷೆ ಎನ್ನುವುದು ಜೀವನ ವಿಧಾನ, ಶಿಷ್ಯ ಭಾಷೆಗಳಿಗೆ ವೈವಿಧ್ಯಮಯ ಗ್ರಾಮಭಾಷೆಗಳು ಮೂಲ ಸೆಲೆಗಳು ಮತ್ತವುಗಳ ಜೀವಾಳಗಳು. ಕನ್ನಡ ಭಾಷೆಗೆ ನೂರಾರು ಗ್ರಾಮ ಮತ್ತು ಉಪಭಾಷೆಗಳು, ಗ್ರಾಮ್ಯ ಭಾಷೆಗಳ ಬಳಕೆಯನ್ನು ತ್ಯಜಿಸಿದ್ದರ ಪರಿಣಾಮ ಬಹುಮೂಲ್ಯವಾದ ಸಾವಿರಾರು ವರ್ಷಗಳ ಮನುಷ್ಯನ, ಕಾಡುನಾಡಿನ ಪಶುಪಕ್ಷಿಗಳ ಜೀವನಕ್ರಮಗಳನ್ನು, ಅಲ್ಲಿಯ ಪ್ರಾಚೀನ ಪರಿಸರ, ಪರಿಕರ, ಪರಿಚಯ, ನಂಬಿಕೆ, ಸಂಪ್ರದಾಯ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ದಾಖಲಾತಿಗಳನ್ನು ಹಿಡಿದಿಟ್ಟುಕೊಂಡಿದ್ದ ಸಹಸ್ರ ಸಹಸ್ರ ಗ್ರಾಮ್ಯ ಶಬ್ದಗಳು ಮರೆಯಾದವು, ಆಗುತ್ತಿವೆ. ಪರಿಣಾಮ ಭಾಷೆ ಬರಡು ಬಡವಾಗುತ್ತಿದೆ.
ನಾಡೊಂದು, ನುಡಿಯೊಂದು ಜನವೊಂದು ಬೇಕೇ ಬೇಕು. ಇದರೊಂದಿಗೆ ನಾಡಲ್ಲಿ, ನುಡಿಯಲ್ಲಿ ಜನರಲ್ಲಿ ವೈವಿಧ್ಯತೆ ಬೇಕಲ್ಲವೇ? ಶುದ್ಧ ನೀರಿನ ಕಾವೇರಿ ಬೇಕನ್ನುವವರಿಗೆ ಅದರ ಮೂಲದಲ್ಲಿಯ ಗುಡ್ಡದ ಬಿಲಗಳಿಂದ, ಮರಗಿಡ ಪೊದೆಗಳ ಬೇರುಗಳ ಬುಡದಿಂದ, ಪಾಚಿಕಟ್ಟಿದ ಕಲ್ಲುಗಳ ಮೇಲಿಂದ, ಕೆಸರು ತಂಬಿದ ಹಳ್ಳಪಳ್ಳ, ಹೊಂಡಗಳಿಂದ ಒಸರಿ ಹರಿದು ಬರುವ ಆ ನೀರು ಬೇಡವೇ? ಬೇಡವೆಂದರೆ ಹೇಗೆ? ಅವೇ ಕಾವೇರಿಯ ಜನ್ಮದಾತೆಯರು, ಕಾವೇರಿಯ ಜೀವ ರಕ್ಷಕಗಳು, ಅವುಗಳಿಲ್ಲದೆ ಕಾವೇರಿ ಬದುಕುವಳೇ? ಕಾವೇರಿ ಬೇಕು. ಕಾವೇರಿ ಬದುಕಬೇಕು, ಬದುಕಿಗೆ ಕಾವೇರಿ ಬೇಕು ಎನ್ನುವುದಾದರೆ ಅವಳು ನಿರಂತರ ಜೀವನದಿಯಾಗಿ ಹರಿಯುತ್ತಿರಬೇಕು. ಅವಳು ಹಾಗಿರಬೇಕಾದರೆ ಪಶ್ಚಿಮ ಘಟ್ಟವೂ ಬೇಕು, ಕಾಡುಮೇಡು, ಝರಿ, ತೊರೆ, ತೋಡು, ಗಿಡಗಂಟಿ, ಮಳೆಗಾಲದ ಕಸಕಡ್ಡಿಗಳಿಂದ ಕೂಡಿದ ರಾಡಿನೀರೆಲ್ಲವೂ ಬೇಕೇಬೇಕು.
ಕನ್ನಡ ಕಾವೇರಿಯಂತೆ ನಿರಂತರ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿರಬೇಕು ಎನ್ನುವುದಾದರೆ, ಶಿಷ್ಟ ಕನ್ನಡದ ಬೇರು ಗ್ರಾಮದ ಮಣ್ಣಿನಲ್ಲೂ, ಅದರ ಜೀವಾಳ ಗ್ರಾಮದ ಜನಪದದಲ್ಲೂ ಅದರ ಉಸಿರು ಗ್ರಾಮೀಣ ಜನಜೀವನದಲ್ಲೂ ಅಡಗಿರುವ ಸತ್ಯವನ್ನು ಅರಿತು ಆ ಮೂಲದ ವೈವಿಧ್ಯತೆಗಳ ಚಿಗುರು ಮುರುಟದಂತೆ, ಕರುಟದಂತೆ ಕರಟಿ ಕರಗಿ ಸಾಯದಂತೆ ಕಾಯಬೇಕು. ಕಾದು ಪೋಷಿಸಬೇಕು. ಗ್ರಾಮ ಕನ್ನಡ ಸತ್ತರೆ ಅದರ ಚಿತೆ ಉರಿಯುವುದು ಶಿಷ್ಟ ಕನ್ನಡದ ಹೃದಯದಲ್ಲಿ!! ಈ ಗಂಭೀರ ಸತ್ಯವನ್ನು ಪ್ರತಿಯೊಬ್ಬ ಭಾಷಾಪ್ರೇಮಿ ತಿಳಿದಿರಲೇಬೇಕು. ಗ್ರಾಮ್ಯ ಕನ್ನಡವನ್ನು ಕಳೆದುಕೊಂಡ ಶಿಷ್ಟ ಕನ್ನಡ ಬರಡಾಗುತ್ತಿದೆ. ಹಳೆಬೇರು ಇಲ್ಲವಾದಾಗ ಹೊಸ ಚಿಗುರು ಕನರುವುದು ಕಷ್ಟ, ಜೀವಾಳವನ್ನು ಹೀರಿ ಜೀವಶಕ್ತಿ ಕೊಡುವ ಬೇರುಗಳನ್ನು ಕಡಿದು, ಬೇರಿಲ್ಲದ ದಿಂಡಿನಲ್ಲಿ ಚಿಗುರನ್ನು ಬೆಳೆಸುವ ಪ್ರಯತ್ನ ಜಾಣತನವಲ್ಲ. ಮೂರ್ಖತನ ಆದೀತು.
ಬ್ರಾಹ್ಮಿ ಲಿಪಿಯಿಂದ ಉಪಕೃತವಾದ ಕನ್ನಡ ಲಿಪಿಗೆ 2 ಸಾವಿರ ವರ್ಷಗಳಿಗೆ ಮಿಕ್ಕಿದ ಐತಿಹಾಸಿಕ ಅಧಿಷ್ಠಾನದ ಹಿರಿಮೆ. 3ನೇ ಶತಮಾನದ್ದೆಂದು ನಂಬಲಾದ ಬೌದ್ಧ ಕೃತಿ ‘ಲಲಿತ ವಿಸ್ತಾರ’ದಲ್ಲಿ ಉಲ್ಲೇಖಗೊಂಡ 14 ಲಿಪಿಗಳಲ್ಲಿ ಕಾನಾಡಿ ಲಿಪಿ ಕನ್ನಡ ಲಿಪಿಯ ಮೂಲ ಆಗಿರಬಹುದೆಂದು ಹೇಳಲಾಗಿದೆ. ಕ್ರಿ.ಶ. 446- 451 ರ ತನಕ ಸಿಂಹಾಸನದಲ್ಲಿದ್ದ ಶಾತವಾಹನ ಹಾಲರಾಜನು ಪ್ರಾಕೃತದಲ್ಲಿ ಬರೆದ ‘ಗಾತಾ ಸತ್ತ ಇ’ ಅಂದರೆ ‘ಗಾಥಾ ಸಪ್ತ ಶತಿ’ಯಲ್ಲಿ ಕನ್ನಡದ ಹುಟ್ಟನ್ನು ಕೆಲವು ಕನ್ನಡ ಇತಿಹಾಸಕಾರರು ಹುಡುಕಿದ್ದೂ ಇದೆ.
ಕನ್ನಡ ಲಿಪಿಯ ಆಧಾರದಲ್ಲಿ ಕನ್ನಡ ಭಾಷೆಯ ಲಿಖಿತ ಸಾಹಿತ್ಯಕ್ಕೆ 2 ಸಾವಿರ ವರ್ಷಗಳೆಂದು ಒಪ್ಪಿಕೊಂಡರೂ, ಕ್ರಿ.ಪೂರ್ವದ ಮಹಾಭಾರತದಲ್ಲಿಯ ‘ಕರ್ನಾಟ’ ‘ಕುಂತಳ’ ‘ವನವಾಸಿ’ಗಳಂತೆ ಕರ್ಣಾಟದ ಮಹಿಷ ಮಂಡಳವನ್ನು ಗಣನೆಗೆ ತೆಗೆದುಕೊಂಡರೆ ಮಹಾಭಾರತದ ಕಾಲಕ್ಕೂ ಹಿಂದೆ ಅಂದರೆ ಕನ್ನಡ ಲಿಪಿಕರಣ ಆಗುವುದಕ್ಕೆ ಸಾವಿರಾರು ವರ್ಷಗಳ ಮೊದಲು ಕನ್ನಡ ಹುಟ್ಟಿ ಬೆಳೆದು ಭಾರತದ ಬಹು ಭಾಗಗಳಲ್ಲಿ ಪಸರಿಸಿರಬೇಕು. ರಾಮಾಯಣದ ‘ಮೈಂದ’ ಹಳೆಗನ್ನಡ ಮತ್ತು ತುಳುವಿನ ‘ಮೈಂದ್’ ಅಂದರೆ ಮಂಜು, ಮಂಜು ಪ್ರಾಚೀನ ಕಾಲದ ಹೆಣ್ಣು ದೇವತೆಯಾಗಿ ಮೈಂದಾಳಮ್ಮ, ಮೈಂದಾಳಿ ಮತ್ತು ಗಂಡು ಮಂಜುನಾಥನಾಗಿ ತುಳುನಾಡ ಆರಾಧ್ಯ ದೈವಗಳಾದವರು.
ಹಂಪೆಯ ಕಿಂದೆಯಲ್ಲಿ ಹುಟ್ಟಿದ ಆಣ್+ಮಂತ ಆಣ್=ಗಂಡು, ಮಂತ =ಮಂಗ ಹನುಮಂತನಾದದ್ದನ್ನು ಗಮನಿಸಬಹುದು. ಇವು ಕನ್ನಡದ ಪ್ರಾಚೀನತೆಯನ್ನು ರಾಮಾಯಣದ ಕಾಲಕ್ಕೆ ಕೊಂಡೊಯ್ಯುತ್ತವೆ. ಕ್ರಿ.ಶ. ಆರಂಭದ ಶತಮಾನಗಳಿಂದ ಕಾವೇರಿಯಿಂದ ಮಾಘ ಮಾಸದ ‘ತಾಯ್ಕರ್ ಮೀಯುವ’ ತಮಿಳರನ್ನು ನೆನಸಿದರೆ ‘ನೀರ್’ ಶಬ್ದವನ್ನು ಸಂಸ್ಕೃತ ಮತ್ತು ತಮಿಳಿಗೆ ಕೊಟ್ಟದ್ದೇ ಕನ್ನಡ ಎನಿಸುತ್ತದೆ. ಹಾಗೆಯೇ ಕನ್ನಡ ನಾಡಿನ ವ್ಯಾಪ್ತಿ ಕಾವೇರಿಯಿಂದ ಗೋದಾವರಿ ತನಕವೆಂಬ ಕವಿರಾಜಮಾರ್ಗದ ಹೇಳಿಕೆ ಕನ್ನಡ ನಾಡು ನುಡಿಯ ಪ್ರಾಚೀನ ಪ್ರಾದೇಶಿಕ ವ್ಯಾಪಕತ್ವ ದರ್ಶಿಸುತ್ತದೆ.
ಗುಜರಾತ್‌ನ ಸುಲ್ತಾನ್ ಬಹದ್ದೂರ್ ಶಾಹ 1534ರಲ್ಲಿ ಪೋರ್ಚುಗೀಸರಿಗೆ ಮುಂಬೈ ದ್ವೀಪಗಳನ್ನು ಒಪ್ಪಿಸಿದ್ದನು. 2ನೇ ಚಾರ್ಲ್ಸ್ ಪೋರ್ಚುಗೀಸ್ ರಾಜಕುಮಾರಿ ಇನ್‌ಫೆಂಟಾ ಕ್ಯಾಥರಿನ್ ಬ್ರಾಗಾಂಜಳನ್ನು 23-6-1661ರಲ್ಲಿ ಮದುವೆ ಆದಾಗ ಪೋರ್ಚುಗೀಸ್ ರಾಜ ವರದಕ್ಷಿಣೆಯಾಗಿ ಮುಂಬೈಯನ್ನು ತನ್ನ ಮಗಳ ಗಂಡನಿಗೆ ಕೊಟ್ಟನು. 1668ರಲ್ಲಿ ಅದು ಬ್ರಿಟಿಷರಿಗೆ ಹಸ್ತಾಂತರವಾಯಿತು. 27-3-1668 ರಂದು ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಗೆ 10 ಪೌಂಡ್ ವಾರ್ಷಿಕ ಬಾಡಿಗೆಗೆ ಕೊಟ್ಟರು. ಆಗ ಇಲ್ಲಿ ಇಂಗ್ಲಿಷ್, ಗುಜರಾತಿ, ಮರಾಠಿ ಮತ್ತು ಕನ್ನಡ ಆಡಳಿತ ಭಾಷೆಗಳಾಗಿದ್ದವು. ಆ ಸಮಯದಲ್ಲಿ ಇಂಗ್ಲಿಷ್ ರಾಜಕುಮಾರನಿಗೆ ನಾಗರಿಕರು ಕೊಟ್ಟ ಸನ್ಮಾನ ಪತ್ರ ಕನ್ನಡದಲ್ಲಿತ್ತು. ಮುಂಬಾ ಅಂದರೆ ಮೊದಲ ಅಂಬ ಅಂಬಾ= ಅಮ್ಮ ಎನ್ನುವ ಕನ್ನಡ ಪದ. ಇಲ್ಲಿಯ ಮೂಲ ದೇವಿ ಅವಳು. ಮರಾಠಿ ಎಂಬ ಶಬ್ದವೇ ಮರಹಟ್ಟಿ ಎಂಬ ಕನ್ನಡ ಶಬ್ದದ ರೂಪಾಂತರವಾಗಿದೆ. ಹಟ್ಟಿ ಎಂದರೆ ಮನೆ, ಮರಗಳ ಮೇಲೆ ಹಟ್ಟಿ ಕಟ್ಟಿಕೊಳ್ಳುವವರು ಮರಹಟ್ಟಿಗಳು.
2008ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಯುನೆಸ್ಕೋ ಭಾಷಾ ನಕ್ಷೆ ಪ್ರಪಂಚದಾದ್ಯಂತ ಬಳಕೆಯಲ್ಲಿರುವ 6,700ಕ್ಕೂ ಹೆಚ್ಚು ಭಾಷೆಗಳಲ್ಲಿ ಅರ್ಧಕ್ಕೂ ಹೆಚ್ಚಿನ ಭಾಷೆಗಳು ಅಳಿವಿನ ಅಪಾಯದಲ್ಲಿರುವ ಆತಂಕಕಾರಿ ಸಂಗತಿಯನ್ನು ಹೊರಗೆಡಹಿದೆ. 1961ರ ಭಾರತೀಯ ಜನಗಣತಿಯಲ್ಲಿ 1,652 ಮಾತೃಭಾಷೆಗಳು ದಾಖಲಾಗಿ, ಕರ್ನಾಟಕದಲ್ಲಿ 176 ಭಾಷೆಗಳನ್ನು ಗುರುತಿಸಲಾಗಿತ್ತು. ದಿ. ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ 21 ವರ್ಷಗಳ ಸರ್ವೇ ಮಾಡಿ 2013ರ ಜುಲೈ ತಿಂಗಳಲ್ಲಿ 780 ಭಾಷೆಗಳನ್ನು ಭಾರತೀಯರು ಬಳಸುತ್ತಿದ್ದಾರೆಂದು ವರದಿ ಪ್ರಕಟಿಸಿತು. ಆ 780 ರಲ್ಲಿ 22 ಭಾಷೆಗಳನ್ನು ಅನುಸೂಚಿತ ಭಾಷೆಗಳೆಂದು ಪರಿಗಣಿಸಲಾಗಿದೆ. ಪ್ರಸ್ತುತ 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ 12 ಭಾಷೆಗಳಿವೆ. ಭಾರತದಲ್ಲಿ ಶಾಲೆಗಳಲ್ಲಿ ಕಲಿಸುವ ಭಾಷೆಗಳು 69 ಮತ್ತು ಕಲಿಕೆಯ ಮಾಧ್ಯಮಕ್ಕೆ ಬಳಕೆಯಾಗುತ್ತಿರುವ ಭಾಷೆಗಳ ಅಂದಾಜು 42, 86 ವಿವಿಧ ಲಿಪಿಗಳಿರುವ ಬಗ್ಗೆ ತಿಳಿಸಲಾಗಿತ್ತು. ರಾಜಕೀಯ ಕಾರಣಗಳಿಗಾಗಿ ಭಾಷಾವಾರು ರಾಜ್ಯಗಳು ರಚನೆಯಾಗಿದ್ದರೂ ಅವುಗಳು ಏಕ ಭಾಷಿಕ ರಾಜ್ಯಗಳಾಗಿಲ್ಲ. ನಮ್ಮ ಕರ್ನಾಟಕವನ್ನೇ ತೆಗೆದು ಕೊಂಡರೂ ಈ ರಾಜ್ಯದ ಅಧಿಕೃತ ಭಾಷೆ ಕನ್ನಡವಾದರೂ ಇಲ್ಲಿ ಒಟ್ಟು 176 ಮಾತೃ ಭಾಷೆಗಳಿವೆ ಎಂದು 1961ರ ಜನಗಣತಿ ಹೇಳುತ್ತದೆ.
ಸ್ವಾತಂತ್ರೋತರದಲ್ಲಿ ರಾಜಕಾರಣಿಗಳ, ಶ್ರೀಮಂತರ ಒಲವು ಇಂಗ್ಲಿಷಿನತ್ತ ಹೆಚ್ಚು ಹರಿಯಿತು. ಬಡ ಜನವರ್ಗಗಳಿಗೆ ಸರಕಾರಿ ಶಾಲೆಗಳ ಕನ್ನಡ ಕಲಿಕೆಯಾಗಿ ಸ್ವಾಭಾವಿಕವಾಗಿ ಕನ್ನಡ ಎರಡನೇ ದರ್ಜೆಗೆ ತಳ್ಳಲ್ಪಟ್ಟಿತು. ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಉನ್ನತ ಉದ್ಯೋಗಗಳು ಇಂಗ್ಲಿಷ್ ಬಲ್ಲ ಶ್ರೀಮಂತ ವರ್ಗಗಳಿಗೆ ಮೀಸಲಾದವು. ಕೋರ್ಟ್ ಕಚೇರಿಗಳು ಇಂಗ್ಲಿಷ್ ಬಳಕೆಯಲ್ಲಿಯೇ ಉಳಿದು ಸರಕಾರಿ ಮಾಧ್ಯಮ ಭಾಷೆಯಾಗಿ ಇಂಗ್ಲಿಷ್ ಬಳಕೆಯಿಂದ ಕನ್ನಡ ಕಳೆಗುಂದಿತು. ಕನ್ನಡಕ್ಕೆ ನೆಲೆ ತಪ್ಪಿತು. ಕನ್ನಡ ಶಿಕ್ಷಣಇಂಗ್ಲಿಷ್ ಶಿಕ್ಷಣದೆದುರು ಕೀಳರಿಮೆಗೆ ಒಳಗಾಯಿತು.
ಮಳೆಗಾಲದಲ್ಲಿ ಸೋರುವ ಮಾಡುಗಳು, ಹರಕು ಮುರುಕು ಬಣ್ಣಗೆಟ್ಟ ಕಟ್ಟಡಗಳಲ್ಲಿ ಅನಾರೋಗ್ಯಕರ ಸ್ಥಿತಿಯಲ್ಲಿ ಕನ್ನಡ ಶಾಲೆಗಳು ಅರೆಜೀವ ಹಿಡಿದು ನಿಂತವುಗಳು ಬಹುತೇಕ ಕನ್ನಡ ಶಾಲೆಗಳಿಗೆ ಅಗತ್ಯದ ಮತ್ತು ದೈನಂದಿನ ಉಪಯೋಗದ ವಸ್ತುಗಳ ಅಭಾವಗಳಿಂದ ಮುಕ್ತಿಯೇ ಸಿಗಲಿಲ್ಲ. ಇವುಗಳಿಗೆ ಪ್ರತಿ ಸ್ಪರ್ಧಿಯಾಗಿ ಇಂಗ್ಲಿಷ್ ಶಾಲೆಗಳು ನಾನಾ ತರದ ನೂತನ ಉಪಕರಣಗಳು, ಸುಂದರ ಕಟ್ಟಡಗಳು, ನವೀನ ಆಟೋಪಕರಣದ ಪರಿಕರಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಕ್ಲಾಸ್‌ಗಳು, ಆಧುನಿಕ ಉಪಕರಣಗಳೊಂದಿಗೆ ಆಧುನಿಕ ಕಲಿಕೆಯ ವಿನ್ಯಾಸಗಳನ್ನು, ಯೋಗ್ಯ ಶಿಕ್ಷಕರನ್ನು ಹೊಂದಿರುತ್ತವೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಮತ್ತು ಮರಳಿ ಬಿಡಲು ವಾಹನಗಳು, ಬಸ್ಸಿಗೆ ಬಿಡಲು ಬರುವ ಮತ್ತು ಶಾಲೆಯಿಂದ ಬಸ್ಸಿನಿಂದ ಬಂದು ಇಳಿಯುವ ಮಕ್ಕಳನ್ನು ಎದುರುಗೊಳ್ಳಲು ಕಾಯುತ್ತ ನಿಲ್ಲುವ ಸಿಂಗಾರದ ಮಮ್ಮಿಗಳು, ಕನ್ನಡ ಇಂಗ್ಲಿಷ್ ಶಾಲೆಗಳ ಬಡತನ ಮತ್ತು ಸಿರಿತನಗಳ ಅಂತರವನ್ನು ಸ್ವಾಭಾವಿಕವಾಗಿ ಪ್ರದರ್ಶಿಸುತ್ತವೆ.
ಕನ್ನಡ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ಪರಿಸ್ಥಿತಿಯನ್ನು ಅರ್ಥೈಸಿದ ಬಡವರು, ಮಧ್ಯಮ ವರ್ಗದವರು ತಮ್ಮ ಸಂತಾನದ ಉತ್ತಮ ಭವಿಷ್ಯಕ್ಕಾಗಿ ಕಷ್ಟಪಟ್ಟು, ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಶರಣು ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡೆಂದು ಕುಸಿಗೊಂಡು ‘ಹಚ್ಚೇವು ಕನ್ನಡದ ದೀಪ’ ಎಂದು ಕುಣಿದಾಡಿದ ಕನ್ನಡ ಜನ ಬರೇ ಮುಕ್ಕಾಲು ಶತಮಾನದೊಳಗೆ ತಮ್ಮ ಮನೆಗಳಲ್ಲಿ ಕನ್ನಡ ದೀಪವನ್ನು ಬಿಟ್ಟು ಇಂಗ್ಲಿಷ್ ದೀಪ ಬೆಳಗಬೇಕಾದ ಅನಿವಾರ್ಯ ಪರಿಸ್ಥಿತಿಗೆ ಒಳಗಾದರು. ಕನ್ನಡ ದೀಪ ಮಂದಗೊಳ್ಳಲು ರಾಜಕಾರಣಿಗಳು, ಸಾಹಿತಿಗಳು, ಶ್ರೀಮಂತರು ಸಾಕಷ್ಟು ಕಾರಣರಾದರು. ಕನ್ನಡ ಉಳಿಸಲು, ಬೆಳೆಸಲು ಮಣಗಟ್ಟಲೆ ಬರೆದು ರಾಶಿ ಹಾಕಿದ ಬಹುತೇಕ ಕನ್ನಡ ಸಾಹಿತಿಗಳು ಕೂಡ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸಲಿಲ್ಲ. ಕಳುಹಿಸುತ್ತಿಲ್ಲ. ಸರಕಾರಿ ಮತ್ತು ಸಾರ್ವಜನಿಕ ಕ್ಷೇತ್ರದ ಕೆಲಸದಲ್ಲಿ ಇಂಗ್ಲಿಷ್ ಮಾಧ್ಯಮದವರಿಗೆ ಉನ್ನತ ಹುದ್ದೆಯ ಮೊದಲ ಮಣೆ, ಸರಕಾರಿ ಮಾಧ್ಯಮವಾಗಿ ಇಂಗ್ಲಿಷ್ ಬಳಕೆ, ಆಧುನಿಕ ತಂತ್ರಜ್ಞಾನದ ಬಳಕೆಗೆ ಕನ್ನಡ ಸಾಕಷ್ಟು ತೆರೆದುಕೊಳ್ಳದೆ ಹೋದದ್ದು, ಇಂಗ್ಲಿಷಿನ ತಂತ್ರಜ್ಞಾನಗಳ ಪ್ರಭಾವಗಳ ಪರಿಣಾಮವಾಗಿ ಕನ್ನಡ ತನ್ನ ನೆಲದಲ್ಲಿ ತಳಮಳಿಸಿತು.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಸಾಹಿತ್ಯಕವಾಗಿ ಶ್ರೀಮಂತ ಭಾಷೆ. ಇದು ಕನ್ನಡಿಗರಿಗೆ ಹೆಮ್ಮೆ. ಕನ್ನಡಕ್ಕೆ 2,500 ವರ್ಷಗಳ ಇತಿಹಾಸವಿದ್ದು ಸಾಹಿತ್ಯಕವಾಗಿ ಪ್ರಾಚೀನ ಶ್ರೀಮಂತ ಭಾಷೆ ಎಂದು ಪರಿಭಾವಿಸಿ 31-10-2008ರ ಶುಕ್ರವಾರ ಕೇಂದ್ರ ಸರಕಾರ ಶಾಸ್ತ್ರೀಯ ಸ್ಥಾನವನ್ನು ಕನ್ನಡಕ್ಕೆ ಪ್ರದಾನ ಮಾಡಿತು. ಇಡೀ ರಾಜ್ಯದಲ್ಲಿ ಸಂಭ್ರಮದ ಆಚರಣೆಯ ಹಬ್ಬವಾಯಿತು. ಇದಾಗಿ ಎರಡು ವರ್ಷಗಳಲ್ಲೇ 10 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚುವ ಕಠೋರ ಐತಿಹಾಸಿಕ ನಿರ್ಧಾರ ಮುಖ್ಯಮಂತ್ರಿ ಸದಾನಂದ ಗೌಡರ ಸರಕಾರದ ಸಮ್ಮುಖಕ್ಕೆ ಬಂದದ್ದು ಕನ್ನಡದ, ಕನ್ನಡಿಗರ ದುರ್ದೈವ ಅಲ್ಲದೆ ಮತ್ತೇನು?
2010 ರ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಸರಕಾರ 886 ಸರಕಾರಿ ಅನುದಾನಿತ ಕನ್ನಡ ಶಾಲೆಗಳನ್ನು ವಿದ್ಯಾರ್ಥಿಗಳು ಸಾಕಷ್ಟಿಲ್ಲವೆಂದು ಮೊತ್ತ ಮೊದಲು ಮುಚ್ಚುವ ಘೋಷಣೆ ಮಾಡಿತ್ತು. ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು 2011ರ ಕೊನೆಗೆ 10 ಸಾವಿರ ಶಾಲೆಗಳನ್ನು ಮುಚ್ಚುವ ಅಥವಾ ಒಂದರೊಳಗೊಂದು ವಿಲೀನಗೊಳಿಸುವ
ನಿರ್ಧಾರವನ್ನು ಸರಕಾರ ಘೋಷಿಸಿತು. 2013ರಲ್ಲಿ 15 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವ ಸಂದಿಗ್ಧ ಸ್ಥಿತಿ ಉಂಟಾಯಿತು. ಕನ್ನಡ ಶಾಲೆಗಳು ಉಳಿದಿದ್ದವೆಂದರೂ ಈಗಿರುವ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಗಮನಿಸಬೇಕಾಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಭ್ಯತೆಗಳನ್ನು ಉಳಿಸಲು ಬೆಳೆಸಲು ಕನ್ನಡಿಗರು ದೃಢಸಂಕಲ್ಪಿತರಾಗಬೇಕಾಗಿದೆ.
ಶಿಕ್ಷಣದ ಭಾಷಾ ಮಾಧ್ಯಮದ ಪುನರ್ವಿಮರ್ಶೆ ಮಾಡಬೇಕಾದ ಪ್ರಸ್ತುತತೆ ಖಂಡಿತ ಇದೆ. ಸರಕಾರಿ ಶಾಲೆಗಳು ರಾಜ್ಯಭಾಷೆಗಳಲ್ಲಿ ಶಿಕ್ಷಣ ಮಾಧ್ಯವನ್ನು ಕಡ್ಡಾಯಗೊಳಿಸುತ್ತವೆ. ಇದೇ ಸಮಯದಲ್ಲಿ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಕೊಡುತ್ತವೆ. ಇಂಗ್ಲಿಷ್ ಮಾಧ್ಯಮದ ಮಕ್ಕಳು ಶ್ರೇಷ್ಠರಂತೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ರಾಜಕಾರಣಿಗಳು, ಶ್ರೀಮಂತರು, ವ್ಯಾಪಾರಿಗಳು, ಸರಕಾರಿ ನೌಕರರು, ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲೂ ತಾರತಮ್ಯಗಳ ಅಂತಸ್ತುಗಳ ಶಾಲೆಗಳಿವೆ.
ಬಹುತೇಕವಾಗಿ ರೈತರು, ಕಾರ್ಮಿಕರು, ಸರಕಾರಿ ಪೇದೆಗಳು ಮುಂತಾದ ಬಡ ವರ್ಗದವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಸರಕಾರಿ ಶಾಲೆಯ ಈ ಮಕ್ಕಳಿಗೆ ದೇಶಿ ಭಾಷೆ ಉಳಿಸುವ ಸಂಕಲ್ಪದ ಉಪದೇಶ ಮಾಡಲಾಗುತ್ತದೆ. ರಾಜಕೀಯದ ಈ ಹುನ್ನಾರ ಈಗೀಗ ಎಲ್ಲರಿಗೂ ಅರ್ಥವಾಗುತ್ತಿದೆ. ಆದ್ದರಿಂದ ಕಷ್ಟಪಟ್ಟಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಕಳುಹಿಸಲು ಪ್ರಯತ್ನಿಸುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಇಲ್ಲಿಯೇ ತಾರತಮ್ಯದ ಕವಲು ದಾರಿಯಲ್ಲಿ ನಡೆಯುತ್ತದೆ. ಕನ್ನಡ- ಇಂಗ್ಲಿಷ್ ಮಾಧ್ಯಮಗಳ ಅಂತರದಿಂದ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇಲ್ಲವಾಗಿದ್ದಾರೆ. ಆದ್ದರಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರಕಾರ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗಿದೆ. ಇದೇ ವೇಳೆಯಲ್ಲಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಪ್ರವೇಶ ದೊರಕುವುದು ಕಷ್ಟವಾಗುತ್ತಿದೆ.
ಇಂಗ್ಲಿಷ್ ಇಲ್ಲದೆ ಬದುಕಿಲ್ಲ ಎನ್ನುವ ಮನೋಭಾವ ವೃದ್ದೀಪನಗೊಂಡು ಕನ್ನಡಿಗರ ಕನ್ನಡತನದ ಸೃಜನಶೀಲತೆ ಮಂಕುಗಟ್ಟಿದೆ. ಕನ್ನಡ ಸಾಹಿತ್ಯ, ಕನ್ನಡ ಶಾಲೆಗಳು, ಪತ್ರಿಕೆಗಳು, ಬಾನುಲಿಗಳು, ದೂರ ದರ್ಶನಗಳು, ವ್ಯವಹಾರ, ಸಂವಾದ ಮೊದಲಾಗಿ ನೂರೊಂದು ಬಗೆಯಲ್ಲಿ ದಿನದಿನ ಕ್ಷಣಕ್ಷಣಕ್ಕೂ ಎರಡು ಕೋಟಿಗೂ ಮಿಕ್ಕಿ ಹೊರನಾಡ ಕನ್ನಡ ಮನಸ್ಸುಗಳು ಮತ್ತು ಆರು ಕೋಟಿಗೂ ಹೆಚ್ಚು ಒಳನಾಡ ಕನ್ನಡ ಮನಸ್ಸುಗಳಲ್ಲಿ ಕನ್ನಡ ಸ್ಪಂದನ ಪ್ರತಿ ಸ್ಪಂದನಗೊಳ್ಳುತ್ತಿದ್ದರೂ ಕನ್ನಡ ಶಾಲೆಗಳು ಶಕ್ತಿಗುಂದಿ ಮುದುಡಿಕೊಳ್ಳುತ್ತಿವೆ. ಕನ್ನಡದಲ್ಲಿ ಅಗಣಿತ ಸಾಹಿತಿಗಳು ಬೆಳೆದು ಸಾಹಿತ್ಯ ವಿಫಲವಾಗಿ ಚಿಗುರಿದ ಪರಿಣಾಮ ಎಂಟು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತವಾಗಿ ಭಾರತೀಯ ಭಾಷೆಗಳಲ್ಲಿ ಅಗ್ರ ಸ್ಥಾನಕ್ಕೇರಿತು. ಕನ್ನಡ ಶಾಸ್ತ್ರೀಯ ಸ್ಥಾನಮಾನದಿಂದಲೂ ಸಮ್ಮಾನಗೊಂಡಿತು. ಆದರೂ ಕನ್ನಡ ಸೋಲುತ್ತಿದೆ. ಕನ್ನಡಿಗರು ಸೋಲುತ್ತಿದ್ದಾರೆ.
ವಿಜ್ಞಾನ, ವಿಮರ್ಶೆ, ಇತಿಹಾಸ, ಧರ್ಮ,