ಹಿಮಾಲಯಕ್ಕೆ ಎದುರಾದ ಗಂಡಾಂತರ
ಜಗತ್ತಿನ 140 ಕೋಟಿ ಜನರು ಹಿಮಾಲಯದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಅವಲಂಬಿತವಾಗಿದ್ದಾರೆ. ದುರಂತವೆಂದರೆ ಹಿಮ ಬೀಳುವುದು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು ಮುಂದಿನ ಕೆಲವೇ ದಶಕಗಳಲ್ಲಿ ಅದು ನಿಂತುಹೋಗಲಿದೆ. ಅಂದರೆ ನದಿಗಳು ಸಂಪೂರ್ಣವಾಗಿ ಬರಡಾಗಲಿವೆ. ಹಾಗಾದರೆ ಹಿಮಾಲಯದಲ್ಲಿ ಕಟ್ಟುತ್ತಿರುವ ಸಾವಿರಾರು ಅಣೆಕಟ್ಟುಗಳು, ಜಲವಿದ್ಯುತ್ ಯೋಜನೆಗಳ ಗತಿ ಏನಾಗುತ್ತದೆ? ಈ ಯೋಜನೆಗಳ ಮೇಲೆ ತೊಡಗಿಸಿರುವ ಕೋಟ್ಯಂತರ ರೂಪಾಯಿಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಯೆ? ಪ್ರಕೃತಿ ಎಷ್ಟೇ ಎಚ್ಚರಿಕೆಗಳನ್ನು ಕೊಡುತ್ತಿದ್ದರೂ ಮನುಷ್ಯ ಎಚ್ಚರಗೊಳ್ಳುತ್ತಿಲ್ಲವೇಕೆ?
ಹಿಮಾಲಯ ಎಂದರೆ ಇಂಡೋ-ಯುರೇಶ್ಯ ಭೂಖಂಡಗಳ ಗುದ್ದಾಟ, ಜಗತ್ತಿನ ಎತ್ತರದ ಛಾವಣಿ, ಭೂಕಂಪನಗಳ ಆಗರ, ಎವರೆಸ್ಟ್ ಶಿಖರ, ಪೃಥ್ವಿಯ ಮೂರನೇ ಧ್ರುವ, ನೂರಾರು ನದಿಗಳು ಹುಟ್ಟುವ ರುದ್ರ ರಮಣೀಯ ಪರ್ವತ ಶಿಖರಗಳು... ಹೀಗೆ ಹಿಮಾಲಯದ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದರೆ ಈಗ ಜಗತ್ತಿನ ಛಾವಣಿ ಎಂದು ಕರೆಯುವ ಈ ಹಿಮಾಲಯಗಳಿಗೆ ಎಲ್ಲಾ ರೀತಿಯಲ್ಲೂ ಗಂಡಾಂತರ ಸುತ್ತಿಕೊಂಡಿದೆ.
ಸುಮಾರು 454 ಕೋಟಿ ವರ್ಷಗಳ ಆಸುಪಾಸು ಸೂರ್ಯಮಂಡಲದಲ್ಲಿ ಭೂಗ್ರಹ ನಿಶ್ಚಲವಾಗಿ ಕಾಣಿಸಿಕೊಂಡಿತು. ಭೂಮಿಯ ಮೇಲಿನ ಭೂಖಂಡಗಳೆಲ್ಲ ಗುಬ್ಬಚ್ಚಿಯ ಮೊಟ್ಟೆಯೊಳಗೆ ಗರ್ಭ ಧರಿಸಿದಂತೆ ದಕ್ಷಿಣ ಧ್ರುವದಲ್ಲಿ ಒಂದೇ ಕಡೆ ಮುದುರಿ ಕುಳಿತುಕೊಂಡಿದ್ದವು. ಆಗ ಭೂಖಂಡಗಳಿಗೆ ಇನ್ನೂ ರೆಕ್ಕೆಗಳು ಮೂಡಿರಲಿಲ್ಲ. ಸೂರ್ಯನ ಕಾವು ಬೀಳುವುದು ಹೆಚ್ಚಾದಂತೆ ಭೂಮಿಯ ತಾಪಮಾನ ಹೆಚ್ಚಿ ಭೂಖಂಡಗಳು ಚೈತನ್ಯಗೊಂಡು ಹೊರಟುನಿಂತವು. ಅದು 250 ದಶಲಕ್ಷ ವರ್ಷಗಳ ಹಿಂದಿನ ಮಾತು. ಅಂದು ತೆಥಿಸ್ ಎಂಬ ಮಹಾಸಾಗರ ಇಂದಿನ ಹಿಮಾಲಯ ಇದ್ದ ಜಾಗದಲ್ಲಿ ದೊಡ್ಡ ಬಿರುಕೊಂದು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಕಾಣಿಸಿಕೊಂಡಿತ್ತು. ಅದೇ ಸಮಯದಲ್ಲಿ ಆ ಬಿರುಕಿನ ಉತ್ತರದಲ್ಲಿ ಯುರೇಶ್ಯ, ದಕ್ಷಿಣದಲ್ಲಿ ಇಂಡಿಯನ್ ಭೂಫಲಕ ಬೀಡುಬಿಟ್ಟಿದ್ದವು. ಎರಡೂ ಭೂಫಲಕಗಳು ತೆಥಿಸ್ ಸಾಗರದ ಕತ್ತು ಹಿಸುಕುತ್ತಾ ಹೋದಂತೆ ತೆಥಿಸ್ ಮಹಾಸಾಗರ ಸಂಚಯನ (ಮೃದುಶಿಲೆಗಳು) ಏಳೂವರೆ ಕೋಟಿ ವರ್ಷಗಳ ಹಿಂದೆ ಐದು ಹಂತಗಳಲ್ಲಿ ಹಿಮಾಲಯ ಪರ್ವತಗಳು ಎವರೆಸ್ಟ್ ಎತ್ತರಕ್ಕೆ ಏರಿ ಕುಳಿತುಬಿಟ್ಟವು. ಅದು ಈಗಲೂ ವರ್ಷಕ್ಕೆ ಸರಾಸರಿ ಆರು ಸೆ.ಮೀ.ಗಳ ಎತ್ತರ ಬೆಳೆಯುತ್ತಿದೆ. ಈ ನಡುವೆ ಭೂಮಿಯ ವಾತಾವರಣ ತಂಪುಗೊಂಡು ಸುರಿಸಿದ ಹಿಮಮಳೆಯಿಂದ ಹಿಮಾಲಯದ ಉದ್ದಗಲಕ್ಕೂ ಹಿಮಕವಚ ಆವರಿಸಿಕೊಂಡಿತು.
ಅದೊಂದು ಕಾಲ ಹಿಮಾಲಯ ಎಂದರೆ ಸ್ವರ್ಗದ ಬೀಡು. ಕಾಲಚಕ್ರ ಉರುಳಿತು. ಜೀವವಿಕಾಸದ ಕೊನೆಯಲ್ಲಿ ಮನುಷ್ಯನೆಂಬ ದೂರ್ತ ಪ್ರಾಣಿ ಭೂಮಿಯ ಮೇಲೆ ವಕ್ಕರಿಸಿಕೊಂಡ. ಹಿಮಾಲಯದ ದಿಕ್ಕುದಿಕ್ಕುಗಳಲ್ಲಿ ಹರಿಯುತ್ತಿದ್ದ ನದಿದಡಗಳಲ್ಲೆಲ್ಲ ನಾಗರಿಕತೆಯ ತೊಟ್ಟಿಲುಗಳು ಕಾಣಿಸಿಕೊಂಡವು. ಬಂಗಾಳದ ಬಯಲಿನಲ್ಲಿ ಸಮೀಕ್ಷೆ ನಡೆಸುತ್ತಿದ್ದ ಗಣಿತಜ್ಞ-ಸರ್ವೇಯರ್ ರಾಧಾನಾಥ್ ಸಿಕ್ದರ್ ಜಗತ್ತಿನ ಎತ್ತರದ ಹಿಮ ಶಿಖರವನ್ನು ಬೆರಗು ಕಣ್ಣುಗಳಿಂದ ಮೊದಲಿಗೆ ನೋಡಿದ. ನಂತರ ತನ್ನ ಗುರು ಬ್ರಿಟಿಷ್-ಇಂಡಿಯಾ ಸರ್ವೇಯರ್ ಜನರಲ್, ಜಾರ್ಜ್ ಎವರೆಸ್ಟ್ ಹೆಸರನ್ನು ಆ ಶಿಖರಕ್ಕೆ ಅಂಟಿಸಿಬಿಟ್ಟ. ಈ ಜಗತ್‌ಪ್ರಸಿದ್ಧ ಶಿಖರದ ಹೆಸರು ಕೇಳಿದ್ದೇ ಜನ ಮರುಳೊ ಜಾತ್ರೆ ಮರುಳೊ ಎಂಬಂತೆ ಜಗತ್ತಿನ ಪರ್ವತಾರೋಹಿಗಳೆಲ್ಲ ಪ್ರತಿವರ್ಷ ಮೇ ತಿಂಗಳಲ್ಲಿ ಎವರೆಸ್ಟ್ ಏರಲು ಧಾವಿಸಿ ಬರತೊಡಗಿದರು. ಏರುವ ಧಾವಂತದಲ್ಲಿ ಅಪಘಾತಗಳಿಗೆ ಒಳಗಾದ ನೂರಾರು ಪರ್ವತಾರೋಹಿಗಳ ಶವಗಳು ಈಗಲೂ ಆಳಪಾತಾಳ ಬಿರುಕುಗಳಲ್ಲಿ ಹಾಗೇ ಕೊಳೆಯದೆ ಉಳಿದುಕೊಂಡಿವೆ. ಎವರೆಸ್ಟ್ ಏರಿದವರೆಲ್ಲ ಅವರ ದೇಶಗಳ ಬಾವುಟಗಳು ಇನ್ನಿತರ ವಸ್ತುಗಳನ್ನು ಶಿಖರದ ಮೇಲೆಲ್ಲ ಬಿಸಾಕಿ ತಿಪ್ಪೆ ಮಾಡಿಬಿಟ್ಟಿದ್ದಾರೆ. ಇನ್ನು ಅವರು ಬಿಡಾರ ಹೂಡುವ ಕ್ಯಾಂಪ್ ಪ್ರದೇಶಗಳು "fecal time bomb' ಗಳಾಗಿ ಸೃಷ್ಟಿಯಾಗಿವೆ. ಅಂದರೆ ಪರ್ವತಾರೋಹಿಗಳು ಇಲ್ಲೆಲ್ಲ ತಂಗುವ ಪ್ರದೇಶಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ಅದು ಐಸ್‌ನಲ್ಲಿ ಕೊಳೆಯದೆ "fecal time bomb' ಆಗಲು ಕಾರಣವಾಗಿದೆ. ಎಪ್ರಿಲ್ 25, 2015ರಲ್ಲಿ ಭೂಕಂಪನವಾದಾಗ ನೇಪಾಳ/ಎವರೆಸ್ಟ್ ದಾರಿಯಲ್ಲಿ "fecal time bomb' ಸಂಭವಿಸಿತ್ತು. ಈ ಜಗತ್ತಿನ ಛಾವಣಿ ಹಿಮ ಸಾಮ್ರಾಜ್ಯದ ಭಾಗವಾಗಿರುವ ದೇಶಗಳು ಗಡಿಗಳ ಹೆಸರಿನಲ್ಲಿ ಬೇಲಿಗಳನ್ನು ಹಾಕಿಕೊಂಡು ಹಗಲು-ರಾತ್ರಿ ಎನ್ನದೆ ರಾಶಿರಾಶಿ ಹಿಮ ಗುಡಿಸುತ್ತ ಬೆಟ್ಟಗುಡ್ಡ, ತಪ್ಪಲು, ಅರಣ್ಯಗಳನ್ನು ನಾಶ ಮಾಡುತ್ತಿವೆ. ಅಣೆಕಟ್ಟುಗಳು, ವಿದ್ಯುತ್ ಸ್ಥಾವರಗಳನ್ನು ಕಟ್ಟುತ್ತ ರಸ್ತೆಗಳನ್ನು ನಿರ್ಮಾಣ ಮಾಡುತ್ತ ಭೂಕುಸಿತಗಳು, ಹಿಮಪಾತಗಳನ್ನು ಸೃಷ್ಟಿ ಮಾಡುತ್ತಿವೆ.
ಗುಡಾರ-ಬಿಡಾರ ಮಿಲಿಟರಿ ಪೋಸ್ಟ್, ಕ್ಯಾಂಪ್‌ಗಳು ಮತ್ತು ಮಿಲಿಟರಿ ವಸತಿಗಳನ್ನು ಕಟ್ಟಿಕೊಂಡು ಲಕ್ಷಾಂತರ ವಾಹನಗಳನ್ನು ಚಲಿಸುತ್ತ ವಿಷ ಅನಿಲ ಸುರಿಸುತ್ತಾ ಹಿಮ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಚೀನಾ ವಿಮಾನ ನಿಲ್ದಾಣಗಳನ್ನೇ ನಿರ್ಮಿಸುತ್ತಿದೆ. ಹಿಮಪಾತ, ಹಿಮಗಲ್ಲು-ಹಿಮಸರೋವರಗಳು ಕುಸಿದು, ಹಿಮಾಲಯ ಪರ್ವತ ಶ್ರೇಣಿಗಳು ಬೋಳುಬೆಟ್ಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಭೂಮಿ-ಆಕಾಶದ ಮಧ್ಯೆ ಏರ್ಪಟ್ಟಿದ್ದ ಲಕ್ಷಾಂತರ ವರ್ಷಗಳ ತಾಳಮೇಳದ ಪರಿಸರ ಕೊಂಡಿಗಳು ಛಿದ್ರಗೊಳ್ಳುತ್ತಿವೆ. ಹಿಮಾಲಯ ತಪ್ಪಲುಗಳಲ್ಲಿ ಲಕ್ಷಾಂತರ ವರ್ಷಗಳಿಂದ ತಾಯಿಯನ್ನು ತಬ್ಬಿಕೊಂಡಂತೆ ಬದುಕು ನಡೆಸುತ್ತಿದ್ದ ನೀರ್ಗಲ್ಲು-ಹಿಮನದಿಗಳು ಮಾನವಜನ್ಯ ಚಟುವಟಿಕೆಗಳಿಂದ ಛಿದ್ರಗೊಂಡು ಮಾಯವಾಗುತ್ತಿವೆ. ಜಗತ್ತು ಎರಡು ವಿಶ್ವ ಮಹಾಯುದ್ಧಗಳನ್ನು ಕಂಡು ಸುಧಾರಿಸಿಕೊಳ್ಳುತ್ತಿದ್ದಾಗ ಮುಂದಾಲೋಚನೆಯ ಚೀನಾ ಜಲ ಸಂಪನ್ಮೂಲಕ್ಕಾಗಿ ಟಿಬೆಟ್ ದೇಶವನ್ನು ಒಮ್ಮೆಲೇ ಕಬಳಿಸಿಕೊಂಡು ಜಗತ್ತಿನ ಛಾವಣಿಯ ಮೇಲೆ ಕುಳಿತುಕೊಂಡುಬಿಟ್ಟಿತು. ಚೀನಾ ಹಿಮಾಲಯದಲ್ಲಿ ಹುಟ್ಟಿ ಹರಿಯುವ ಎಲ್ಲಾ ನದಿಗಳ ಮೇಲೆ ನೂರಾರು ಅಣೆಕಟ್ಟು/ವಿದ್ಯುತ್ ಯೋಜನೆಗಳನ್ನು ಕಟ್ಟುತ್ತಾ ಹರಿಯುವ ನೀರಿಗೆ ಅಡ್ಡಗಾಲು ಹಾಕಿ ಹಿಮಾಲಯವನ್ನು ಹೈರಾಣ ಮಾಡುಬಿಟ್ಟಿದೆ. ಇದರಲ್ಲಿ ಭಾರತ ಮತ್ತು ಇತರ ದೇಶಗಳ ಕೊಡುಗೆಯೂ ಸೇರಿದೆ. ವಿಜ್ಞಾನಿಗಳು, ಪರಿಸರವಾದಿಗಳು ಅನೇಕ ರೀತಿಯ ಸಂಶೋಧನೆಗಳು, ಪ್ರಯೋಗಗಳನ್ನು ನಡೆಸುತ್ತಾ ಎಚ್ಚರಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ ಅವರ ಮಾತುಗಳನ್ನು ಕೇಳುವವರು ಯಾರೂ ಇಲ್ಲ. ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತು ಕೊಳ್ಳೆಯಾಗುತ್ತಲೇ ಇದೆ. ಇಷ್ಟಕ್ಕೂ ಹಿಮಾಲಯದಲ್ಲಿ ನಡೆಯುತ್ತಿರುವ ದುರಂತಗಳಾದರೂ ಏನು? ಕಳೆದ ವರ್ಷದ ಚಳಿಗಾಲದಲ್ಲಿ ಕಡಿಮೆ ಹಿಮ ಬಿದ್ದ ಕಾರಣಕ್ಕೆ ಹಿಮಗಲ್ಲುಗಳು ಮುರಿದು ಬಿದ್ದವು ಅಥವಾ ನೀರ್ಗಲ್ಲು ಸ್ಫೋಟಗೊಂಡಿತು ಎಂಬುದಾಗಿ ವಿಜ್ಞಾನಿಗಳ ವಿವರಣೆ ನೀಡಿದರು.
ಹೌದು! ಜಾಗತೀಕರಣದಿಂದ ಭೂಮಿಯ ತಾಪಮಾನ ಹೆಚ್ಚಾದಂತೆ ಹಿಮ ಕಡಿಮೆ ಬೀಳುವುದು ವೈಜ್ಞಾನಿಕ ಪ್ರಕ್ರಿಯೆ. ಚಳಿಗಾಲದಲ್ಲಿ ಕಡಿಮೆ ಹಿಮ ಬೀಳುವುದರಿಂದ ಕಡಿದಾದ ತಪ್ಪಲುಗಳಲ್ಲಿರುವ ಹಿಮಗಲ್ಲುಗಳು ಕರಗಿ ಮುರಿದುಬಿದ್ದು ಪ್ರವಾಹಗಳು ಉಂಟಾಗುತ್ತವೆ. ಜೊತೆಗೆ ಹಾಗೆ ಜಾರಿದ ಹಿಮ ನೀರಾಗಿ ಕೆಳಹಂತಗಳಲ್ಲಿ ಸರೋವರಗಳಾಗಿ ಪರಿವರ್ತನೆಯಾಗುತ್ತವೆ. ಇವುಗಳನ್ನು ಹಿಮಕಟ್ಟೆಗಳೆಂದು ಕರೆಯಲಾಗಿ ಇವು ಕೂಡ ಮುರಿದುಬಿದ್ದು ಪ್ರವಾಹವಾಗಿ ಹರಿಯುತ್ತವೆ. ಕಳೆದ ವರ್ಷ ಉತ್ತರಾಖಂಡದ ನಂದಾದೇವಿಯಲ್ಲಿ ಆಗಿದ್ದು ಇದೇ. ಇಡೀ ವರ್ಷ ಸೊನ್ನೆ ಡಿಗ್ರಿ ತಾಪಮಾನ ಇರುವ ಹಂತದವರೆಗೆ ಹಿಮ ಹೆಪ್ಪುಕಟ್ಟಿಕೊಂಡೇ ಇರುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಹಿಮ ಕರಗಿ ನೀರಾಗಿ ಹರಿಯುವುದರಿಂದ ಅದರ ಗೆರೆ ಮೇಲಕ್ಕೆ ಸಾಗುತ್ತಾ ಹೋಗುತ್ತದೆ. ಮತ್ತೆ ಚಳಿಗಾಲ ಬಂದಾಗ ಹಿಮ ಬಿದ್ದು ಅದು ಕೆಳಗಿನ ಹಂತದ ಕಡೆಗೆ ಇಳಿಯುತ್ತದೆ. ಇದು ಲಕ್ಷಾಂತರ ವರ್ಷಗಳಿಂದ ನಡೆದು ಬಂದಿರುವ ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿಪರೀತ ಶಾಖವರ್ಧಕ ಅನಿಲಗಳು ವಾತಾವರಣಕ್ಕೆ ಸೇರಿ ಜಾಗತಿಕ ತಾಪಮಾನ ಹೆಚ್ಚುತ್ತಿರುವ ಕಾರಣ ಹಿಮ ಬೀಳುವುದು ಕಡಿಮೆಯಾಗಿ ಹಿಮ ಕವಚದ ಗೆರೆ ಮೇಲಕ್ಕೆ ಸಾಗುತ್ತಾಹೋಗಿ ತಪ್ಪಲುಗಳ ಹಿಡಿತ ಕಡಿಮೆಯಾಗುತ್ತಿದೆ. ಸ್ವಿಸ್ ಸಂಶೋಧನಾ ಸಂಸ್ಥೆಯೊಂದು ಹಿಮಾಲಯದಾದ್ಯಂತ 251 ಹಿಮ ಕಟ್ಟೆಗಳಿದ್ದು ಅವುಗಳಲ್ಲಿ ಸುಮಾರು 104 ಅಪಾಯಕಾರಿ ಸರೋವರಗಳಾಗಿ ಪರಿವರ್ತನೆಗೊಂಡಿವೆ ಎಂದಿದೆ.
ಭಾರತ, ಟಿಬೆಟ್-ಚೀನಾ, ನೇಪಾಳ, ಪಾಕಿಸ್ಥಾನ ಮತ್ತು ಭೂತಾನ್ ದೇಶಗಳು ಕಳೆದ ನಾಲ್ಕು ದಶಕಗಳಿಂದ ಉಪಗ್ರಹಗಳ ಮೂಲಕ ಹಿಮಾಲಯದಾದ್ಯಂತ ನಡೆಸಿದ ಸಂಶೋಧನೆಗಳಿಂದ ಜಾಗತಿಕ ತಾಪಮಾನ ಹಿಮ ನದಿಗಳನ್ನು ತಿಂದುಕೊಳ್ಳುತ್ತಿದೆ ಮತ್ತು 21ನೇ ಶತಮಾನದ ಮೊದಲ ಎರಡು ದಶಕಗಳಲ್ಲಿಯೇ ಕರಗುತ್ತಿರುವ ಹಿಮ ನದಿಗಳು ದ್ವಿಗುಣಗೊಂಡಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಇದೇ ರೀತಿ ಹಿಮ ನದಿಗಳು ಜಾಗತಿಕ ತಾಪಮಾನದಿಂದ ಕರಗುತ್ತಾ ಹೋಗಿ ಹಿಮನದಿಗಳು ಹರಿದು ಬರುವ ಪ್ರದೇಶಗಳಲ್ಲಿರುವ ಕೋಟ್ಯಂತರ ಜನರು ಮುಂದಿನ ದಿನಗಳಲ್ಲಿ ಕೃಷಿ ಮತ್ತು ಕುಡಿಯುವ ನೀರು ದೊರಕದೆ ಆ ಸ್ಥಳಗಳನ್ನು ತೊರೆದು ವಲಸೆ ಹೋಗಬೇಕಾಗಿದೆ. ಜೊತೆಗೆ ಹಿಮಾಲಯಗಳು ಇಂದಿನ ಲೇ-ಲಡಾಖ್‌ನಂತೆ ಬೋಳು ಬೆಟ್ಟಗಳಾಗಲಿವೆ. ಹಿಮಾಲಯದಲ್ಲಿ ಈಗ ಚೀನಾ ಬಿಟ್ಟರೆ ಭಾರತವೇ ಹೆಚ್ಚು ಯೋಜನೆಗಳನ್ನು ಹಾಕಿಕೊಂಡಿದೆ. ಜಗತ್ತಿನ 140 ಕೋಟಿ ಜನರು ಹಿಮಾಲಯದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಅವಲಂಬಿತವಾಗಿದ್ದಾರೆ. ದುರಂತವೆಂದರೆ ಹಿಮ ಬೀಳುವುದು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು ಮುಂದಿನ ಕೆಲವೇ ದಶಕಗಳಲ್ಲಿ ಅದು ನಿಂತುಹೋಗಲಿದೆ. ಅಂದರೆ ನದಿಗಳು ಸಂಪೂರ್ಣವಾಗಿ ಬರಡಾಗಲಿವೆ. ಹಾಗಾದರೆ ಹಿಮಾಲಯದಲ್ಲಿ ಕಟ್ಟುತ್ತಿರುವ ಸಾವಿರಾರು ಅಣೆಕಟ್ಟುಗಳು, ಜಲವಿದ್ಯುತ್ ಯೋಜನೆಗಳ ಗತಿ ಏನಾಗುತ್ತದೆ? ಈ ಯೋಜನೆಗಳ ಮೇಲೆ ತೊಡಗಿಸಿರುವ ಕೋಟ್ಯಂತರ ರೂಪಾಯಿಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಯೆ? ಪ್ರಕೃತಿ ಎಷ್ಟೇ ಎಚ್ಚರಿಕೆಗಳನ್ನು ಕೊಡುತ್ತಿದ್ದರೂ ಮನುಷ್ಯ ಎಚ್ಚರಗೊಳ್ಳುತ್ತಿಲ್ಲವೇಕೆ?