varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ- ಯಾಕೆ ಹೀಗೆ?

ವಾರ್ತಾ ಭಾರತಿ : 8 Jan, 2022
ಡಾ. ಬಂಜಗೆರೆ ಜಯಪ್ರಕಾಶ್

ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರರಾಗಿರುವ ಬಂಜಗೆರೆ ಜಯಪ್ರಕಾಶ್, ಕಳೆದ ಎರಡು ಮೂರು ದಶಕಗಳಿಂದ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಪ್ರಸ್ತುತ ಹಾರೋಹಳ್ಳಿಯಲ್ಲಿ ನೆಲೆಸಿರುವ ಇವರು ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಆದಿಮ ಬುಡಕಟ್ಟು ಸಮುದಾಯಗಳ ಅಧ್ಯಯನ ಯೋಜನೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಕೃತಿಗಳನ್ನು ರಚಿಸಿ, ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾದವರು.

ಡಾ. ಬಂಜಗೆರೆ ಜಯಪ್ರಕಾಶ್

ಮಾಂಸಾಹಾರವನ್ನು ಅನಧಿಕೃತ ಆಹಾರ ಪದ್ಧತಿ ಎಂದು ಬಿಂಬಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಸಸ್ಯಾಹಾರಕ್ಕಿರುವ ಸಾಂಸ್ಕೃತಿಕ ಹೆಚ್ಚುಗಾರಿಕೆ ಯಾವಾಗಿನಿಂದ ಆರಂಭವಾಯಿತು ಎಂದು ಆಲೋಚಿಸಿದರೆ ಸ್ಪಷ್ಟವಾದ ಉತ್ತರಗಳು ದೊರೆಯುವುದು ಕಷ್ಟ. ವೇದಕಾಲೀನ ಸಮಾಜದಲ್ಲಿ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಮಾಂಸಾಹಾರಕ್ಕೆ ಅವಕಾಶವಿತ್ತು. ಗೋಮಾಂಸವೂ ಸೇರಿದಂತೆ ಬೇರೆ ಬೇರೆ ಬಗೆಯ ಮಾಂಸಾಹಾರದ ನೈವೇದ್ಯ ಮತ್ತು ಸೇವನೆಯ ಬಗ್ಗೆ ಉಲ್ಲೇಖಗಳಿರುವುದನ್ನು ಹಲವು ವಿದ್ವಾಂಸರು ವಿವರಿಸಿ ಹೇಳಿದ್ದಾರೆ. ಕ್ರಿ.ಪೂ. 3ರಿಂದ ಕ್ರಿ.ಶ. 3ರ ಕಾಲಾವಧಿಯಲ್ಲಿ ಸಂಕಲನಗೊಂಡಿರುವ, ವೈದಿಕ ಧರ್ಮದ ಅಧಿಕೃತ ಧರ್ಮಶಾಸ್ತ್ರ ಎಂದು ಈಗ ಕರೆಯಲ್ಪಡುತ್ತಿರುವ ಮನುಧರ್ಮಶಾಸ್ತ್ರದಲ್ಲೂ ಮಾಂಸಾಹಾರ ಪೂರ್ಣವಾಗಿ ನಿರಾಕರಣೆಗೊಂಡಿಲ್ಲ. ಬ್ರಾಹ್ಮಣರು ಯಾವ ಯಾವ ಪ್ರಾಣಿಗಳ ಮಾಂಸ ತಿನ್ನಬಾರದು ಎಂಬ ಸೂಚನೆ ಅದರಲ್ಲಿದೆ. ಆದರೆ ಮಾಂಸಾಹಾರವನ್ನೇ ತಿನ್ನಬಾರದು ಎಂಬ ನೀತಿ ಅದರಲ್ಲಿ ಇಲ್ಲ ಎಂದು ಹೇಳಲಾಗಿದೆ. ಹಾಗಾದರೆ ಬ್ರಾಹ್ಮಣರು ಸಂಪೂರ್ಣ ಸಸ್ಯಾಹಾರಿಗಳಾಗಿದ್ದು ಯಾವಾಗ. ಬಸವಣ್ಣನ ಒಂದು ವಚನ ‘ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು ವೇದವ ನೋದುವರ ಮುಂದೆ ಅಳು ಕಂಡ್ಯಾ ಎಲೇ ಹೋತೆ’ ಎಂಬ ಸಾಲಿರುವುದನ್ನು ಅನುಲಕ್ಷಿಸಿ ಕರ್ನಾಟಕದಲ್ಲಿ 10-11ನೇ ಶತಮಾನದವರೆಗೂ ಯಜ್ಞ ಯಾಗಾದಿಗಳಲ್ಲಿ ಪ್ರಾಣಿ ಬಲಿ ಇತ್ತು, ಅದರ ಮಾಂಸವನ್ನು ಬ್ರಾಹ್ಮಣರು ಸೇವಿಸುತ್ತಿದ್ದಿರಬೇಕು ಎಂಬ ವಿಶ್ಲೇಷಣೆಯನ್ನು ಕೂಡ ಮಾಡಿದವರಿದ್ದಾರೆ. ಬರುಬರುತ್ತಾ ಭಾರತದ ಬಹುಭಾಗಗಳಲ್ಲಿ ಬ್ರಾಹ್ಮಣರು ಮಾಂಸಾಹಾರವನ್ನು ವ್ಯರ್ಜ್ಯ ಎಂದು ತೀರ್ಮಾನಿಸಿಕೊಂಡಿದ್ದಾರೆ. ಅದಕ್ಕೆ ಅವರದೇ ಆದ ಶಾಸ್ತ್ರ ಸೂತ್ರಗಳು ಆಧಾರವೊದಗಿಸಿರಬೇಕು. ಭೌಗೋಳಿಕ ಪರಿಸ್ಥಿತಿಗಳನ್ನು ಆಧರಿಸಿ, ವಾತಾವರಣದ ರೀತಿಯನುಸಾರ ಭಾರತದ ಕೆಲವು ಭಾಗಳಲ್ಲಿ ಬ್ರಾಹ್ಮಣರಿಗೆ ಮಾಂಸಾಹಾರ ಸೇವಿಸಲು ಶಾಸ್ತ್ರಗಳಲ್ಲಿ ಅವಕಾಶವಿದೆ ಎನ್ನಲಾಗಿದೆ. ಬಂಗಾಳ, ಅಸ್ಸಾಂ, ನಾಗಾ ಪ್ರದೇಶಗಳಲ್ಲಿ ಬ್ರಾಹ್ಮಣರಿಗೆ ಮಾಂಸಾಹಾರ ಸೇವಿಸಲು ಅವಕಾಶವಿದೆ ಎನ್ನುವುದಕ್ಕೆ ಉಲ್ಲೇಖಗಳಿವೆ. ಕಾಶ್ಮೀರಿ ಬ್ರಾಹ್ಮಣರಲ್ಲೂ ಮಾಂಸಾಹಾರ ಬಳಕೆಯಲ್ಲಿದೆ. ಗೋವಾದ ಕೆಲವು ಬ್ರಾಹ್ಮಣ ಪಂಗಡಗಳು ಮಾಂಸಾಹಾರ ಸೇವನೆ ಮಾಡುತ್ತವೆ. ಇದಕ್ಕೆ ಕಾರಣ ಆಯಾ ಪ್ರದೇಶದ ವಾತಾವರಣ, ತರಕಾರಿಗಳ ಲಭ್ಯತೆ ಕೆಲವು ಋತುಮಾನಗಳಿಗೆ ಸೀಮಿತಗೊಂಡಿರುವುದು ಮುಂತಾಗಿದೆ.

ಮಾಂಸಾಹಾರವನ್ನು ಧಾರ್ಮಿಕತೆಯೊಂದಿಗೆ ಜೋಡಿಸಿ ನೋಡಲಾಗುವುದಿಲ್ಲವೆಂಬುದಕ್ಕೆ ಮೇಲಿನ ಉದಾಹರಣೆಗಳು ನಮಗೆ ನೆರವು ನೀಡುತ್ತಿವೆ. ವೈದಿಕ ಧರ್ಮದ ಮುಂಚೂಣಿಯಲ್ಲಿರುವ ಕೆಲವು ಬ್ರಾಹ್ಮಣ ಪಂಗಡಗಳಿಗೆ ಮಾಂಸಾಹಾರ ನಿಷಿದ್ಧವಲ್ಲ ಎಂಬ ವಾಸ್ತವಾಂಶ ಇದ್ದಾಗಲೇ ಭಾರತದ ಉಳಿದ ಭಾಗಗಳಲ್ಲಿ ಮಾಂಸಾಹಾರ ಎನ್ನುವುದು ಅಪವಿತ್ರ, ಅಶುದ್ಧ ಆಹಾರ ಪದ್ಧತಿ ಎಂಬ ನಂಬಿಕೆಯನ್ನು ಪ್ರಚಲಿತಗೊಳಿಸಲಾಗಿದೆ. ಬ್ರಾಹ್ಮಣ ಪುರೋಹಿತರ ಪ್ರಭಾವ, ಮಾಂಸಾಹಾರದ ಅಭ್ಯಾಸವುಳ್ಳ ಜಾತಿಗಳ ಧಾರ್ಮಿಕ ಆಚರಣೆಗಳಲ್ಲಿ ಬ್ರಾಹ್ಮಣ ಪುರೋಹಿತರ ಪಾಲ್ಗೊಳ್ಳುವಿಕೆ ವಿಸ್ತರಿಸಿದಂತೆ ಬಹುಶಃ ಜನ ಸಮುದಾಯಗಳು ಮಾಂಸಾಹಾರವನ್ನು ಧಾರ್ಮಿಕವಾಗಿ ಮನ್ನಣೆ ಹೊಂದಿಲ್ಲದ ಆಹಾರ ಎಂದು ಭಾವಿಸುತ್ತಾ ಬಂದಂತಿದೆ. ಭಾರತೀಯ ಭೂಖಂಡದಲ್ಲಿ ವಿವಿಧ ಬಗೆಯ ಮಾಂಸಗಳನ್ನು ಸೇವಿಸುವ ಸಮುದಾಯಗಳು ಮೊದಲಿನಿಂದಲೂ ಇವೆ. ಮತ ಪರಿವರ್ತನೆಯ ಅಂಗವಾಗಿ ಕೆಲವು ಸಮುದಾಯಗಳು ಕಾಲಾನಂತರದಲ್ಲಿ ಮಾಂಸಾಹಾರವನ್ನು ವ್ಯರ್ಜ್ಯಗೊಳಿಸಿರಬಹುದಾದರೂ, ಮಾಂಸ ಸೇವಿಸುವ ಸಮುದಾಯಗಳೇ ಈಗಲೂ ಸಂಖ್ಯೆಯಲ್ಲಿ ಹೆಚ್ಚಿವೆ. ಮಾಂಸಾಹಾರವನ್ನು ಸೇವಿಸದಿರುವ ಜನರ ಸಂಖ್ಯೆ ನಮ್ಮ ಸಮಾಜದಲ್ಲಿ ಶೇ.30ನ್ನು ಮೀರುವುದಿಲ್ಲ. ನಗರೀಕರಣ, ಕೈಗಾರಿಕೀಕರಣ, ಆಧುನೀಕರಣದಂತಹ ಪ್ರಕ್ರಿಯೆಗಳು ಒಂದು ಪದ್ಧತಿಯಾಗಿ ಮಾಂಸಾಹಾರ ನಿಷೇಧಿಸಿರುವ ಜಾತಿಗಳ ಎಷ್ಟೋ ಸದಸ್ಯರಲ್ಲಿ ಮಾಂಸಾಹಾರದ ಅಭ್ಯಾಸ ಬೆಳೆಸಿವೆ. ಅದನ್ನು ಅವರು ಅಧಿಕೃತವಾಗಿ ಘೋಷಿಸಿಕೊಳ್ಳದಿದ್ದರೂ ಬೇರೆ ಬೇರೆ ಸಂದರ್ಭಗಳಲ್ಲಿ ಮಾಂಸಾಹಾರ ಸೇವನೆ ಮಾಡುತ್ತಿರುವುದಂತೂ ನಿಜ.

ಪ್ರಪಂಚದ ಇತರ ಧರ್ಮಗಳಲ್ಲಿ ಮಾಂಸಾಹಾರದ ಬಗ್ಗೆ ಈ ಬಗೆಯ ನಿಷೇಧಗಳು ಕಂಡು ಬರುವುದಿಲ್ಲ. ನಿರ್ದಿಷ್ಟ ಪ್ರಾಣಿಯ ಮಾಂಸ ಸೇವಿಸಲಾರದು ಎಂಬಂತಹ ನಿಯಮಗಳು ಕೆಲವು ಧರ್ಮಗಳಲ್ಲಿದೆ. ಕೆಲವು ಮಾಸಗಳಲ್ಲಿ ವ್ರತಗಳ ಸಂದರ್ಭದಲ್ಲಿ ವಿಧಿಯಾಚರಣೆ ಹಾಗೂ ಪೂಜೆಗಳ ಸಂದರ್ಭದಲ್ಲಿ ಮಾಂಸಾಹಾರ ಮಾಡಕೂಡದು ಎಂಬಂತಹ ನಿಯಮಗಳು ಬೇರೆ ಬೇರೆ ಪಂಗಡಗಳಲ್ಲಿವೆ. ಆದರೆ ಮಾಂಸಾಹಾರ ಕನಿಷ್ಠ ಆಹಾರಾಭ್ಯಾಸ ಎಂಬ ಸಾಮಾಜಿಕ ಪರಿಗಣನೆ ಅವರಲ್ಲಿಲ್ಲ. ಆದರೆ ಭಾರತದ ಹಲವು ಭಾಗಗಳಲ್ಲಿ ಮಾಂಸಾಹಾರ ಎನ್ನುವುದು ಶಾಸ್ತ್ರಾಚಾರ ವಿರೋಧಿ ಎಂಬ ನಿಲುವು ಮಾತ್ರ ಪ್ರಚಲಿತದಲ್ಲಿದೆ. ಮಾಂಸಾಹಾರವನ್ನು ಬಹಳ ಇಷ್ಟಪಟ್ಟು ಸೇವಿಸುವ ಕರ್ನಾಟಕದ ಹಲವು ಜಾತಿಗಳೂ ಕೂಡ ಇದನ್ನು ಹೊಲಸು ಆಹಾರ ಎಂದೇ ವಿಂಗಡಿಸುವ ಅಭ್ಯಾಸ ಬೆಳೆಸಿಕೊಂಡಿವೆ.

ಮಾಂಸದ ಅಡುಗೆಯನ್ನು ಮಾಡಲು ಬೇರೆ ಒಲೆ ಮೀಸಲಿಸಿರುವುದರಿಂದ ಹಿಡಿದು, ಅದನ್ನು ಬೇಯಿಸಲು ಬೇರೆ ಪಾತ್ರ ಪಗಡಗಳನ್ನು ತೆಗೆದಿರಿಸುವವರೆಗೆ ಇದು ಬೆಳೆದಿದೆ. ಕೆಲವು ಪಂಗಡಗಳಲ್ಲಿ ಮಾಂಸಾಹಾರ ಸೇವನೆ ಮಾಡಿದ ನಂತರ ಸ್ನಾನ ಮಾಡಿಯೇ ಮನೆಯೊಳಗೆ ಪ್ರವೇಶಿಸಬೇಕು ಎಂಬ ಪರಿಪಾಠವಿದೆ. ದೇವಸ್ಥಾನಕ್ಕೆ ಹೋಗುವಾಗ, ಯಾತ್ರೆಗೆ ಹೋಗುವಾಗ, ಕೆಲವು ಹಬ್ಬಗಳನ್ನು ಆಚರಿಸುವಾಗ ಮಾಂಸಾಹಾರ ಸೇವನೆ ಮಾಡಬಾರದು, ಕೆಲವು ವಾರಗಳಂದು ಮಾಂಸ ಸೇವನೆ ನಿಷಿದ್ಧ ಎಂಬ ಪರಿಪಾಠಗಳೂ ಇವೆ. ಪರಂಪರೆಯನ್ನು ಗಮನಿಸಿದರೆ ಮಾಂಸಾಹಾರ ಸೇವನೆಯ ಕುರಿತಾಗಿ ಬೆಳೆದಿರುವ ಈ ಬಗೆ ಬಗೆಯ ಕಟ್ಟಲೆಗಳು ಕ್ರಮೇಣ ಜಾರಿಗೆ ಬಂದಿರಬೇಕು ಎಂದು ಊಹಿಸಬಹುದು. ಬ್ರಾಹ್ಮಣ ಸಂಸ್ಕೃತಿಯು ರಾಜ ಮಾನ್ಯರಿಂದ ಗೌರವಾದರಗಳನ್ನು ಪಡೆದುಕೊಂಡ ಮೇಲೆ ಅದು ಸಮಾಜದ ಇತರ ವಲಯಗಳಲ್ಲೂ ಪ್ರಭಾವ ಉಂಟುಮಾಡಿತು. ಶಾಸ್ತ್ರಗಳು ಆಹಾರ ವಸ್ತುಗಳನ್ನು ಸಾತ್ವಿಕ, ರಾಜಸ, ತಾಮಸ ಎಂದು ವಿಂಗಡಣೆಗೊಳಪಡಿಸಿದವು. ಸಮಾಜದಲ್ಲಿ ಪ್ರಭುತ್ವಾಧಿಕಾರ ಯಾವ ಗುಂಪಿನ ಕೈಯಲ್ಲಿದ್ದರೂ ಇಡೀ ಸಮಾಜಕ್ಕೆ ಪಾಠ ಹೇಳುವ, ನೀತಿ ಬೋಧನೆ ಮಾಡುವ ಹಾಗೂ ಶಾಸ್ತ್ರಾಚರಣೆಗಳನ್ನು ನಿಗದಿಗೊಳಿಸುವ ಸ್ಥಾನವು ಬ್ರಾಹ್ಮಣ ಪುರೋಹಿತರ ಕೈಯಲ್ಲೇ ಇತ್ತು. ಅದನ್ನು ಇಡೀ ಸಮಾಜವೇ ಮಾನ್ಯಗೊಳಿಸಿತ್ತು. ಹೀಗಾಗಿ ಬ್ರಾಹ್ಮಣ ಬದುಕಿನ ಆಚಾರಗಳನ್ನು ತಾವು ಆಚರಿಸಲು ಸಾಧ್ಯವಿಲ್ಲದಿದ್ದರೂ ಬ್ರಾಹ್ಮಣ ಆಚರಣೆಗಳ ಬಗ್ಗೆ ವಿಶಿಷ್ಠ ಭಾವನೆಯಂತೂ ಬೆಳೆದು ಬಂದಿತು.

ಈ ಬಗೆಯ ಭಾವನೆಗಳ ಬೆಳವಣಿಗೆ ಸಹಜವಾಗಿ ಬೆಳೆದು ಬಂದಿತು ಎನ್ನಲಾಗುವುದಿಲ್ಲ. ಭಾರತೀಯ ಸಮಾಜದ ಮೇಲೆ ನಡೆಯುತ್ತಾ ಬಂದ ಸಾಂಸ್ಕೃತಿಕ ಆಕ್ರಮಣದ ಒಂದು ಭಾಗವಾಗಿ ಈ ಬಗೆಯ ಭಾವನೆಗಳನ್ನು ಬಲಪಡಿಸಲಾಯಿತು. ಬುಡಕಟ್ಟು ಸಮುದಾಯಗಳು ತಮ್ಮ ಮೂಲ ದೈವಾರಾಧನೆಯನ್ನು ಪ್ರಾಣಿಬಲಿಗಳ ಮುಖಾಂತರವೇ ನೆರವೇರಿಸುತ್ತಿದ್ದುದು. ರಕ್ತ ತರ್ಪಣ ಮತ್ತು ಮಾಂಸದ ನೈವೇದ್ಯಕ್ಕೆ ಇನ್ನಿಲ್ಲದಷ್ಟು ಪ್ರಾಶಸ್ತ್ಯವಿತ್ತು. ಪ್ರಾಣಿ ಬಲಿ ನೀಡಿದ ಹೊರತು ಶಾಂತಿಗೊಳ್ಳದಿರುವ ದೈವಗಣಗಳು ಗ್ರಾಮೀಣ ಸಮುದಾಯಗಳಲ್ಲಿವೆ. ಮೂಲಾಚಾರವನ್ನು ಬಹಳಷ್ಟು ಸಮುದಾಯಗಳು ಈಗಲೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಜಾತ್ರೆ, ಪರಿಷೆಗಳು ಮಾಂಸಾಹಾರದ ಪರ ನಡೆಯುತ್ತವೆ. ಬಹಳ ಹಿಂದೆಯೇ ಆರಂಭಗೊಂಡಿದೆ ಎಂದು ಹೇಳಬಹುದಾದ ಪಿತೃಪೂಜೆ (ಹಿರಿಯರ ಹಬ್ಬ)ಯಲ್ಲೂ ಮಾಂಸಾಹಾರದ ಎಡೆಯೇ ಬಳಕೆಯಲ್ಲಿದೆ. ಸಂಸ್ಕೃತಿಗಳನ್ನು ಅಧ್ಯಯನ ಮಾಡಿರುವ ಮಾನವಶಾಸ್ತ್ರಜ್ಞರು ಹೇಳುವ ಪ್ರಕಾರ ಪಿತೃಪೂಜೆ ಎನ್ನುವುದು ಬಹಳ ಆದಿಮವಾದ ಆಚಾರ. ಅದನ್ನು ಬಿಟ್ಟರೆ ಅಮ್ಮನ ಪೂಜೆ ಎನ್ನುವುದು ಕೂಡ ಬಹಳ ಪ್ರಾಚೀನ. ಗ್ರಾಮ ದೇವತೆಗಳಲ್ಲಿ ಬಹಳ ಹಿಂದಿನವರಾದ ಮಾರಮ್ಮ, ಕಾಳಮ್ಮ ಮುಂತಾದ ಊರಮ್ಮಗಳ ಹಬ್ಬದಾಚರಣೆಗೆ ಪ್ರಾಣಿಬಲಿ ಆಗಲೇಬೇಕು. ಗುಡಿ ಸಂಸ್ಕೃತಿ ಕ್ರಮೇಣ ದೇವಾಲಯ ಸಂಸ್ಕೃತಿಗೆ ಜಾಗ ಬಿಟ್ಟುಕೊಟ್ಟಿತು. ಗುಡಿ ಸಂಸ್ಕೃತಿ ವಾರ್ಷಿಕ ಪೂಜೆಗಳ ಸ್ವರೂಪದಲ್ಲಿದ್ದುದು ಹೆಚ್ಚು. ದೇವಾಲಯಗಳು ವಾರದ ಪೂಜೆ, ದಿನದ ಪೂಜೆಗಳಿಗೆ ನಾಂದಿ ಹಾಡಿದವು. ಗುಡಿ ಸಂಸ್ಕೃತಿಯಲ್ಲಿ ದೈವಗಳನ್ನು ಪೂಜಿಸುವವರು ಸಾಮಾನ್ಯವಾಗಿ ಶೂದ್ರ ವರ್ಣದ ಪೂಜಾರಿಗಳಾಗಿರುತ್ತಿದ್ದರು. ಅವರು ಮಾಂಸಾಹಾರದ ಎಡೆ ಸೇವಿಸುವವರೂ ಆಗಿದ್ದರು. ಗುಡಿಗಳಲ್ಲಿದ್ದ ದೈವಗಳ ಬದಲಿಗೆ ದೇವಾಲಯಗಳಲ್ಲಿ ಪ್ರತಿಷ್ಠಾಪನೆಗೊಂಡ ದೇವರು ವೈದಿಕ ಸಂಸ್ಕೃತಿಯ ಪ್ರಭಾವದಿಂದ ಮೂಡಿ ಬಂದವುಗಳಾಗಿದ್ದವು. ಸ್ಥಳೀಯ ನಂಬುಗೆಯ ದೈವಗಳನ್ನು ಅವತಾರಿ ದೇವರುಗಳನ್ನಾಗಿ ಕಥನಗೊಳಿಸಲಾಯಿತು. ಇಂತಹ ದೇವರುಗಳ ಪೂಜಾರಿಗಳು ಬ್ರಾಹ್ಮಣರಾಗಿರುವುದು ಪರಿಪಾಠವಾಯಿತು. ಬ್ರಾಹ್ಮಣರಲ್ಲದವರು ಪೂಜಾರಿಗಳಾಗಿ ಇರಬೇಕಾದ ಸಂದರ್ಭಗಳಿದ್ದರೆ ಅವರನ್ನು ಬ್ರಾಹ್ಮಣಿಕೆಯ ಆಚಾರಗಳಿಗೆ ಅನುಸಾರವಾಗಿ ಮಾರ್ಪಡಿಸಲಾಯಿತು. ಅದರಲ್ಲಿ ಸಸ್ಯಾಹಾರದ ವ್ರತವೂ ಒಂದು. ದೇವಾಲಯಗಳಲ್ಲಿರುವ ದೇವರುಗಳಲ್ಲಿ ಕೆಲವಕ್ಕೆ ಪ್ರಾಣಿ ಬಲಿಯ ಹರಕೆ ಮುಂದುವರಿಯಿತು. ಆದರೆ ದೇವರಿಗೆ ಮಾಂಸಾಹಾರದ ನೈವೇದ್ಯ ಕೊಡುವ ಪದ್ಧತಿ ನಿಲ್ಲಿಸಲಾಯಿತು. ಮಾಂಸಾಹಾರಕ್ಕಿದ್ದ ಪ್ರಾಶಸ್ತ್ಯ ಬ್ರಾಹ್ಮಣ ಪುರೋಹಿತರ ಪ್ರಭಾವದಿಂದಾಗಿ ಎರಡನೆಯ ದರ್ಜೆಯದಾಯಿತು ಮಾತ್ರವಲ್ಲ ಅದನ್ನು ಕ್ರಮೇಣ ಅಪವಿತ್ರೀಕರಿಸಲಾಯಿತು. ಜನಪದರಲ್ಲಿ ಅವರವರ ಕುಲಾಚಾರಗಳ ಅನುಸಾರ, ದೈವ ನಂಬಿಕೆಗಳ ಅನುಸಾರ ಮಾಂಸದ ನೈವೇದ್ಯ ಹಾಗೂ ಮಾಂಸಾಹಾರ ಸೇವನೆ ಮುಂದುವರಿಯಿತಾದರೂ, ಒಟ್ಟಾರೆ ಮಾನ್ಯ ಸಂಸ್ಕೃತಿಯ ದೃಷ್ಟಿಯಲ್ಲಿ ಅದು ವಾಮಾಚಾರ ಎಂದಾಯಿತು. ಇದನ್ನು ಪ್ರಶ್ನಿಸಿ ತಮ್ಮ ಆಹಾರ ಸಂಸ್ಕೃತಿಯ ಶೇಷ್ಠತೆಯನ್ನು ಪ್ರತಿಪಾದನೆ ಮಾಡಬೇಕಾದ ಅಗತ್ಯ ಸಮುದಾಯಗಳಿಗೆ ಬರಲಿಲ್ಲ. ಯಾಕೆಂದರೆ ಬ್ರಾಹ್ಮಣ ಪುರೋಹಿತರ ಪ್ರವೇಶವಿದ್ದ ಪ್ರಸಂಗಗಳು ಅವರ ಒಟ್ಟು ಜೀವನಕ್ರಮದಲ್ಲಿ ಕಡಿಮೆಯಿದ್ದವು. ಆ ಸಂದರ್ಭಗಳಿಗೆ ಸೀಮಿತಗೊಳಿಸಿ ಸಸ್ಯಾಹಾರದ ನಿಯಮ ಪಾಲಿಸಿಕೊಂಡು ಮಿಕ್ಕಂತೆ ಮಾಂಸಾಹಾರ ಸೇವಿಸುವ ಹಾಗೂ ಎಡೆ ಇಡುವ ರೂಢಿಗೆ ಬಾಧಕವಿರಲಿಲ್ಲ.

ಆದರೆ ಮಾಂಸಾಹಾರ ಎನ್ನುವುದು ಶ್ರೇಷ್ಠ ಆಹಾರಕ್ರಮವಲ್ಲ ಎನ್ನುವ ಧೋರಣೆಯನ್ನು ಹಲವು ವಿಧದಲ್ಲಿ ಬಲಪಡಿಸಲಾಯಿತು. ಸಾಮಾಜಿಕ ಆದರ್ಶಗಳು ಮತ್ತು ಆಚಾರಗಳ ಬಗ್ಗೆ ಜನಸಾಮಾನ್ಯರಿಗೆ ಪೌರಾಣಿಕ ವ್ಯಕ್ತಿಗಳೇ ಮಾದರಿಗಳು. ರಾಮಾಯಣ, ಮಹಾಭಾರತದ ಕತೆಗಳ ಪುರಾಣವಾಚನಗಳಲ್ಲಿ ಅಲ್ಲಿದ್ದ ಮಾದರಿ ಪಾತ್ರಗಳು ಮಾಂಸಾಹಾರ ತಿನ್ನುತ್ತಿದ್ದರು ಎಂಬ ನಿರೂಪಣೆಗಳನ್ನು ತರಲಾಗುತ್ತಿರಲಿಲ್ಲ. ವಾಲ್ಮೀಕಿ, ವ್ಯಾಸರೇನೋ ತಮ್ಮ ಕಾವ್ಯರಚನೆಯಲ್ಲಿ ವಾಸ್ತವಾಂಶಗಳನ್ನು ಇದ್ದುದಿದ್ದ ಹಾಗೆಯೇ ಬರೆದಿರಬಹುದು. ನಂತರದಲ್ಲಿ ರಚನೆಯಾದ ಭಕ್ತಿ ಪಂಥದ ಪ್ರಭಾವಕ್ಕೊಳಗಾದ ಪುರಾಣ ಪುಣ್ಯಕತೆಗಳು ಪೌರಾಣಿಕ ಪಾತ್ರಗಳನ್ನು ಅವತಾರ ಪುರುಷರನ್ನಾಗಿ ಬಿಂಬಿಸಿದವು. ಸ್ವಯಂ ದೇವರುಗಳೇ ಅವತಾರವೆತ್ತಿ ಭೂಮಿಗೆ ಬಂದಂತಹ ಚಿತ್ರಣಗಳಲ್ಲಿ ಆಹಾರ ಸಂಸ್ಕೃತಿಯ ವರ್ಣನೆಗಳೆಲ್ಲ ಸಿಹಿಯೂಟದ ವೆೇಷ ಧರಿಸಿದವು. ಮಾಂಸ ತಿನ್ನವುದೇನಿದ್ದರೂ ರಾಕ್ಷಸ ಮತ್ತು ದಾನವ ಪಾತ್ರಗಳಿಗೆ ಮೀಸಲಾದ ದುಷ್ಟ ಪ್ರವೃತ್ತಿ ಎಂಬ ನೀತಿಬೋಧೆ ಪ್ರಚಲಿತಗೊಂಡಿತು.

ಭೂಸುರರೆನ್ನಿಸಿಕೊಂಡ ಬ್ರಾಹ್ಮಣರೂ ಸಿಹಿಯೂಟದವರು, ಅವತಾರ ಪುರುಷರಾದ ಪೌರಾಣಿಕ ಪಾತ್ರಗಳೂ ಸಿಹಿಯೂಟದವರು, ದೇವಾನುದೇವತೆಗಳೆಲ್ಲ ಸಿಹಿಯೂಟದವರೇ ಇರಬೇಕು ಎಂಬಂತಹ ಮೌಲ್ಯ ಪ್ರಜ್ಞೆ ನಿರಂತರವಾಗಿ ಪ್ರಚಾರಗೊಂಡಿತು. ಸಂಸ್ಕೃತ ಪಠ್ಯಗಳ ಪರಿಚಯವಿಲ್ಲದ, ಶಾಸ್ತ್ರ ಪುರಾಣಗಳನ್ನು ಸ್ವತಃ ಓದಲು ಅವಕಾಶವಿರದ ಶೂದ್ರ ಸಮುದಾಯಗಳು ವಸ್ತುಸ್ಥಿತಿ ಏನೆಂಬುದನ್ನು ಅರಿಯದವರಾದರು. ನೂರಾರು ವರ್ಷಗಳ ಕಾಲ ನಡೆಯುತ್ತಲೇ ಬಂದ ಈ ಸಾಂಸ್ಕೃತಿಕ ದಮನದಿಂದಾಗಿ ಶಿಷ್ಟ ಸಂಸ್ಕೃತಿ ಮತ್ತು ಪರಿಶಿಷ್ಟ ಸಂಸ್ಕೃತಿ ಎಂಬ ಎರಡು ಧಾರೆಗಳು ಹುಟ್ಟಿಕೊಂಡವು. ಶಿಷ್ಟ ಎಂದು ಕರೆಯಲಾದ ಸಂಸ್ಕೃತಿ ಶಾಸ್ತ್ರಗಳಿಂದ ಪ್ರಣೀತವಾದುದು. ಪರಿಶಿಷ್ಟ ಎನ್ನಲಾದ ಸಂಸ್ಕೃತಿ ಜನರ ಪರಂಪರೆಯಲ್ಲಿ ರೂಢಿಗೊಂಡಿದ್ದು. ಜನರ ರೂಢಿ ಪರಂಪರೆಯನ್ನು ಗೌರವಿಸಿ, ತಾವೂ ಅದರ ಭಾಗವಾಗಿ ಬೆರೆಯಬೇಕಾದ ಅನಿವಾರ್ಯತೆ ಬ್ರಾಹ್ಮಣ ಪುರೋಹಿತಶಾಹಿಗೆ ಉಂಟಾಗಲಿಲ್ಲ. ರಾಜ ಪ್ರಭುತ್ವ ತನ್ನ ಪಂಗಡಕ್ಕೆ ಅಗತ್ಯವಾದ ವಿನಾಯಿತಿಗಳನ್ನು ಪಡೆದುಕೊಂಡು ಬ್ರಾಹ್ಮಣ ಪುರೋಹಿತಶಾಹಿಯ ಆಚಾರ ವಿಚಾರಗಳನ್ನು ಸಂಪೂರ್ಣವಾಗಿ ಮಾನ್ಯಮಾಡಿತು. ಪುರೋಹಿತಶಾಹಿಯೂ ಕೂಡ ಗುರುಮನೆಯ ಆಚಾರ, ಅರಮನೆಯ ಆಚಾರ ಎಂದು ಎರಡು ವಿಧಗಳನ್ನು ಸಮ್ಮತಿಸಿ ತನ್ನ ಆಚಾರ ವಿಚಾರಗಳ ಸಾರ್ವಭೌಮತೆಯನ್ನು ಪ್ರತಿಷ್ಠಾಪಿಸಿತು. ಇವು ಪರಸ್ಪರ ಪೂರಕವಾಗಿ ಮಾಡಿಕೊಂಡ ಒಳ ಒಪ್ಪಂದ. ಗುರುಮನೆ, ಅರಮನೆ ಎರಡೂ ಕೂಡ ಜನಸಾಮಾನ್ಯರಿಗೆ ದೂರದ ಮಾತುಗಳೇ. ಹಾಗಾಗಿ ತಮ್ಮದೇ ಜನಪದ ಧರ್ಮವೊಂದನ್ನು ಆಚರಿಸಿಕೊಳ್ಳುತ್ತಾ ಬದುಕಿನ ನಿತ್ಯ ಕೋಟಲೆಯೊಳಗೆ ಜನರು ತೊಡಗಿಕೊಂಡರು. ಇಹ ಮತ್ತು ಪರಗಳೆರಡರ ವಹಿವಾಟಿಗೆ ಅರಮನೆ-ಗುರುಮನೆಗಳ ಅನುಗ್ರಹ ಬೇಕೆನಿಸಿತಾದ್ದರಿಂದ ಅವುಗಳು ಪ್ರತಿಪಾದಿಸುವ ಶ್ರೇಷ್ಠತೆಗೆ ಸವಾಲು ಹಾಕಲಿಲ್ಲ. ಸವಾಲು ಹಾಕಿದ ದಾರ್ಶನಿಕ ಪಂಥಗಳು ವಾಮಾಚಾರದವು ಎಂದಾಗಿ, ದಂಡನೆಯ ಭಯದಿಂದ ಗುಪ್ತ ಸಮಾಜಗಳಂತೆ ಬಾಳಬೇಕಾಯಿತು. ಸಿದ್ಧ ಪಂಥ, ನಾಥಗಳಂತಹ ಹಲವು ಪರ್ಯಾಯ ದರ್ಶನಗಳು ಮತ್ತು ಪಂಥಗಳು ಬ್ರಾಹ್ಮಣಿಕೆಯ ತತ್ವಗಳಿಗೆ ಸವಾಲು ಹಾಕಿದವಾದರೂ, ಆಹಾರ ಸಂಸ್ಕೃತಿಯ ವಿಷಯದಲ್ಲಿ ತಮ್ಮ ನಿಲುವುಗಳನ್ನು ಸಾರ್ವತ್ರಿಕವಾಗಿ ಪ್ರತಿಪಾದಿಸಲಿಲ್ಲ. ಆಯಾ ಪಂಥಗಳ ಅನುಯಾಯಿಗಳು ಆಯಾ ಪಾಂಥಿಕ ಆಚರಣೆಗಳ ಸಂದರ್ಭದಲ್ಲಿ ಮಾತ್ರ ಭಿನ್ನ ಆಹಾರ ಕ್ರಮವನ್ನು ಜಾರಿಯಲ್ಲಿಟ್ಟುಕೊಂಡವು. ಹೀಗೆ ಬೆಳೆದುಬಂದಿದ್ದಕ್ಕೆ ಮುಖ್ಯಕಾರಣ ಭಾರತದ ಪುರೋಹಿತಶಾಹಿ ಇಲ್ಲಿದ್ದ ಜನಸಮುದಾಯಗಳ ನಡುವೆಯಿಂದ ರೂಪುಗೊಂಡಿದ್ದಲ್ಲ. ಅದೊಂದು ಭಿನ್ನ ನಡೆನುಡಿಯ ಪಂಗಡವಾಗಿ ರೂಪುಗೊಂಡು ತನ್ನ ರೀತಿ ನೀತಿಗಳನ್ನೇ ಬೇರೆಯವರೂ ಅನುಸರಿಸಬೇಕೆಂದು ಪರೋಕ್ಷವಾಗಿ ನಿರ್ಬಂಧಿಸಿತು. ಶಾಸ್ತ್ರ ಸೂತ್ರಗಳು, ಮೌಲ್ಯಗಳು ಕೂಡ ಜನರ ಪರಂಪರೆಯ ಅಂಗವಾಗಿ ರೂಢಿಗೊಂಡವುಗಳಾಗದೆ, ಅವುಗಳನ್ನು ಪುರೋಹಿತ ಶಾಹಿಯು ತನ್ನ ಹಾಗೂ ಪಾಲಕವರ್ಗದ ಹಿತಾಸಕ್ತಿಗಳಿಗಾಗಿ ರೂಪುಗೊಳಿಸಿಕೊಂಡಿದ್ದು. ಇದರಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಎಂಬ ವಿಂಗಡಣೆಯೇ ಮುಖ್ಯವಾದ ನೀತಿಯಾಗಿತ್ತು. ಆಹಾರ, ಉಡುಪು, ಆಚರಣೆ, ಹಬ್ಬ, ವಿವಾಹಾಚಾರ, ನಂಬಿಕೆ, ನಡವಳಿಕೆ, ಭಾಷೆ, ಜ್ಞಾನ, ಸಾಮರ್ಥ್ಯ ಎಲ್ಲಾ ವಿಷಯಗಳಿಗೂ ಈ ಶ್ರೇಷ್ಠ-ಕನಿಷ್ಠ ತಾರತಮ್ಯ ನೀತಿ ರಾಜ್ಯಭಾರದ ಬಹುಮುಖ್ಯ ಧೋರಣೆಯಾಯಿತು.

ರಾಜ ಪ್ರಭುತ್ವಗಳು ಕೊನೆಗೊಂಡು ವಸಾಹತುಶಾಹಿ ಆಡಳಿತ ಬಂದಾಗಲೂ ಬ್ರಾಹ್ಮಣ ಪುರೋಹಿತಶಾಹಿಯ ಆಧಿಪತ್ಯಕ್ಕೆ ಏನೂ ತಡೆಯುಂಟಾಗಲಿಲ್ಲ. ವಾಸ್ತವವಾಗಿ ಜಾತಿ-ಜಾತಿಗಳ ನಡುವೆ ಜಗಳವುಂಟಾದಾಗ, ವಿವಾದದಲ್ಲಿ ನ್ಯಾಯ ಯಾರ ಪರವಿದೆಯೆಂದು ತೀರ್ಪು ಕೊಡುವ ವಿಷಯದಲ್ಲಿ ಬ್ರಾಹ್ಮಣ ಸಲಹಾದಾರರ ಅಭಿಪ್ರಾಯವನ್ನು ಬ್ರಿಟಿಷ್ ನ್ಯಾಯಾಲಯಗಳು ಕೇಳುತ್ತಿದ್ದವು. ಬ್ರಾಹ್ಮಣ ಪುರೋಹಿತಶಾಹಿಯೇ ಭಾರತದ ಧಾರ್ಮಿಕತೆಯ ನಿಜವಾದ ಪ್ರತಿನಿಧಿ ಎಂಬ ನಂಬಿಕೆಯಲ್ಲೇ ಬ್ರಿಟಿಷ್ ಆಡಳಿತ ಕಾರ್ಯ ನಿರ್ವಹಿಸಿತೆಂದು ಹೇಳುವುದಕ್ಕೆ ಹೇರಳವಾದ ಸಾಕ್ಷಗಳಿವೆ. ಜನಸಾಮಾನ್ಯರ ಧಾರ್ಮಿಕಾಚರಣೆಗಳಲ್ಲಿ ಕ್ರೌರ್ಯದ ಆಂಶಗಳಿವೆ ಎಂದು ಬ್ರಿಟಿಷ್ ಆಡಳಿತಗಾರರು ನಂಬಿದ್ದರು. ಹಾಗಾಗಿ ಪ್ರಾಣಿ ಬಲಿಯೂ ಸೇರಿದಂತೆ ಹಲವಾರು ಆಚರಣೆಗಳನ್ನು ನಿಷೇಧಿಸಿ ಕಾನೂನುಗಳನ್ನು ತಂದರು. ತಮ್ಮ ಆಡಳಿತಾತ್ಮಕ ಅಗತ್ಯಗಳಿಗಾಗಿ ಶಿಕ್ಷಣವನ್ನು ಎಲ್ಲರೂ ಪಡೆಯಬಹುದು ಎಂಬ ಅವಕಾಶ ಕಲ್ಪಿಸಿದರು. ಆದರೆ ಧಾರ್ಮಿಕ ವಿಚಾರಗಳಲ್ಲಿ ತಾನು ತಲೆಹಾಕುವುದಿಲ್ಲ ಎಂಬ ತಟಸ್ಥ ನಿಲುವಿನ ಮುಖಾಂತರ ಬ್ರಾಹ್ಮಣ ಪುರೋಹಿತಶಾಹಿಯ ಹಿಡಿತ ಮುಂದುವರಿಯಲು ಅವಕಾಶವನ್ನು ಕೊಟ್ಟರು. ಇದೊಂದು ರೀತಿ ಹಳೆಯ ರಾಜ-ಪುರೋಹಿತ ಒಳ ಒಪ್ಪಂದದ ಮಾದರಿಯಲ್ಲೇ ನಡೆದುಕೊಂಡು ಬಂತು.

ಸ್ವಾತಂತ್ರಾನಂತರ ಪ್ರಜಾಪ್ರಭುತ್ವ ಬಂದು ಧರ್ಮ ನಿರಪೇಕ್ಷವಾದ ಸಂವಿಧಾನ ರಚನೆಯಾಗಿ, ಆಹಾರದ ಹಕ್ಕು ಸಂವಿಧಾನದಿಂದ ರಕ್ಷಿತಗೊಂಡಿದ್ದರೂ ಸಾಮಾಜಿಕ ಧೋರಣೆಗಳಲ್ಲಿ ಹೆಚ್ಚು ವ್ಯತ್ಯಾಸ ಉಂಟಾಗಿಲ್ಲ. ಬ್ರಾಹ್ಮಣೀಕರಣ ಪ್ರಕ್ರಿಯೆ ವಿದ್ಯಾವಂತ ವಲಯಗಳಲ್ಲಿ ತೀವ್ರಗೊಳ್ಳುತ್ತಿದೆ. ಸ್ವಾತಂತ್ರಾನಂತರ ಎಲ್ಲಾ ವರ್ಗದ ವಿದ್ಯಾರ್ಥಿಗಳು ಶಾಲೆ ಕಲಿಯಲು ಹೋದರೇನೋ ನಿಜ. ಆದರೆ ಕಲಿಸುವ ಮಾಸ್ತರರು ಅದೇ ಬ್ರಾಹ್ಮಣಿಕೆಯ ಪ್ರತಿನಿಧಿಗಳಾಗಿದ್ದರು. ಈಗ ಅಬ್ರಾಹ್ಮಣರು ಕೂಡ ಮಾಸ್ತರರಾಗಿದ್ದಾರೆ. ಆದರೆ ಅವರಲ್ಲಿ ಬಹಳ ಜನಕ್ಕೆ ಸಾಂಸ್ಕೃತಿಕ ಸ್ವಾಭಿಮಾನದ ಎಚ್ಚರ ಇಲ್ಲ. ನವ ಬ್ರಾಹ್ಮಣಿಕೆಯ ರೂಢಿಗಳು ಅವರ ಮನಸ್ಸನ್ನು ಪ್ರಭಾವಿಸಿವೆ. ಅಧಿಕಾರಶಾಹಿಯ ಮೇಲುಸ್ತರದಲ್ಲಿ ಬ್ರಾಹ್ಮಣರ ಆಧಿಪತ್ಯ ಇನ್ನೂ ಬಿಗಿಯಾಗಿಯೇ ಇದೆ. ಬೇರೆಯವರು ಇದ್ದರೂ ಕೂಡ, ಸಾಂಸ್ಕೃತಿಕರಂಗದ ಹಲವು ಕ್ಷೇತ್ರಗಳಲ್ಲಿ ಬ್ರಾಹ್ಮಣಿಕೆಯ ಹಿತಾಸಕ್ತಿಗಳು ಸಕ್ರಿಯವಾಗಿರುವುದರಿಂದ ಇವರ ಮಾತಿಗೆ ಕಿಮ್ಮತ್ತಿಲ್ಲ. ಇವರೂ ಕೂಡ ಆಸ್ತಿ-ಪಾಸ್ತಿ, ಪ್ರತಿಷ್ಠೆಗಳಿಸುವ ಹಾದಿಯಲ್ಲಿ ಬ್ರಾಹ್ಮಣಿಕೆಯ ಧೋರಣೆಗಳಿಗೆ ಒಳಗಾಗಿದ್ದಾರೆ. ಹಾಗಾಗಿಯೇ ಸರಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಮಾಂಸಾಹಾರ ಸರಬರಾಜಾಗುವುದಿಲ್ಲ. ಶೂದ್ರ ಅಧಿಕಾರಿಗಳೇ ಕಾರ್ಯನಿಮಿತ್ತ ಪ್ರವಾಸ ಹೋಗಿದ್ದು ಮಾಂಸಾಹಾರ ತಿಂದಿದ್ದರೂ ಬಿಲ್ ಸಲ್ಲಿಸುವಾಗ ಸಸ್ಯಾಹಾರದ ಬಿಲ್ ಆಗಿ ಪರಿವರ್ತಿಸಿ ಸಲ್ಲಿಸುತ್ತಾರೆ. ಇದೆಲ್ಲ ಒಪ್ಪಿತವಾದೊಂದು ಆಹಾರ ಸಂಸ್ಕೃತಿಯ ಧೋರಣೆಯಾಗಿ ಮುಂದುವರಿಯುತ್ತಿದೆ.

ಇದರ ಇನ್ನೊಂದು ರೂಪವೇ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ಕೊಡುವುದಕ್ಕೆ ಉಂಟಾಗಿರುವ ವಿರೋಧ. ನಮ್ಮ ಮಕ್ಕಳು ಮೊಟ್ಟೆ ತಿಂದು ಪುಷ್ಟಿಯಾಗಲಿ ಎಂದು ಬಯಸುವ ಪೋಷಕರಿದ್ದಾರೆ. ಆದರೆ ಅವರು ದನಿ ಎತ್ತಿ ಮೊಟ್ಟೆ ವಿತರಣೆ ಬೇಕು ಎನ್ನುವುದಿಲ್ಲ. ಮೊಟ್ಟೆ ಬಹಳ ಪೌಷ್ಟಿಕ ಆಹಾರ. ಶಾಲಾ ವಿದ್ಯಾರ್ಥಿಗಳಲ್ಲಿ ಬಹಳಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದು ಶಿಕ್ಷಣ ತಜ್ಞರಿಗೆ, ಪೌಷ್ಟಿಕ ಆಹಾರ ಸಮಾಲೋಚಕರಿಗೆ, ಮಾಂಸಾಹಾರಿ ಅಧಿಕಾರಿಗಳಿಗೆ ಗೊತ್ತು. ಅವರು ಯಾರೂ ದನಿ ಎತ್ತಿ ಮೊಟ್ಟೆ ವಿತರಣೆ ಇರಲಿ ಎನ್ನುವುದಿಲ್ಲ. ಬ್ರಾಹ್ಮಣಿಕೆಯ ಮೌಲ್ಯಗಳು ಬಗೆಬಗೆಯಾಗಿ ಬಾಯಿಕಟ್ಟಿಹಾಕುತ್ತಿವೆ. ಜನ ಅದೇ ದ್ವಿಮುಖ ನೀತಿಯ ಅನುಯಾಯಿಗಳು. ಮಕ್ಕಳಿಗೆ ಮೊಟ್ಟೆ ಒಳ್ಳೆಯದು, ಆದರೆ ಅದನ್ನು ನಮ್ಮ ಮನೆಗಳಲ್ಲೇ ಕೊಟ್ಟುಕೊಂಡರೆ ಆಯಿತು. ಸರಕಾರವೇ ಕೊಡಲಿ ಎಂದು ಯಾಕೆ ಕೇಳುವುದು. ಮೊಟ್ಟೆ ವಿರೋಧಿಸುವವರು ಹೇಳುತ್ತಿರುವುದು, ಮೊಟ್ಟೆ ವಿತರಣೆಯಿಂದ ಮೊಟ್ಟೆ ತಿನ್ನದ ಮಕ್ಕಳಿಗೆ ಬೇಸರವಾಗುತ್ತದೆ. ಮೊಟ್ಟೆ ಕೊಡುವುದರಿಂದ ಬಹಳಷ್ಟು ಜನರ ಅಪೌಷ್ಟಿಕತೆ ನೀಗುತ್ತದೆ ಎಂಬ ಬಗ್ಗೆ ಪರಿಗಣನೆ ಇಲ್ಲ. ಆದರೆ ತಿನ್ನದವರಿಗೆ ಬೇಜಾರಾಗುತ್ತದೆ ಎಂಬುದೇ ನಿರ್ಣಾಯಕ. ಸಂಖ್ಯಾಬಲದಲ್ಲಿ ತಿನ್ನುವವರು ಹೆಚ್ಚಿದ್ದಾರೋ, ತಿನ್ನದವರು ಹೆಚ್ಚಿದ್ದಾರೋ, ಈ ವಿಷಯದಲ್ಲಿ ಸಂಖ್ಯಾವಾರು ಬಲದಿಂದ ನಿರ್ಧಾರ ಮಾಡುವಂತಿಲ್ಲ ಎಂಬುದು ಅವರ ವಾದ. ಮಾಂಸಾಹಾರ, ಮೊಟ್ಟೆ ಸರಕಾರದ ಕಾರ್ಯಕ್ರಮಗಳಲ್ಲಿ ನಿಷಿದ್ಧ ಎಂದು ಯಾವ ಕಾನೂನಿನಲ್ಲಿದೆ ಎಂದು ಕೇಳಿದರೆ, ಕಾನೂನಿಗೂ ಮೀರಿದ್ದು ನಂಬುಗೆಯ ವಿಷಯ ಎನ್ನುತ್ತಾರೆ. ಯಾರ ನಂಬುಗೆ? ತಿನ್ನುವವರದ್ದೋ, ತಿನ್ನದಿರುವವರದ್ದೋ? ತಿನ್ನದಿರುವವರ ನಂಬುಗೆಯೇ ನಿರ್ಣಾಯಕ? ಅದು ಯಾಕೆ ಹೀಗೆ? ಅದು ನಡೆದುಕೊಂಡು ಬಂದಿರುವುದೇ ಹಾಗೆ!

ಮಾಂಸಾಹಾರ, ಮೊಟ್ಟೆ ಸರಕಾರದ ಕಾರ್ಯಕ್ರಮಗಳಲ್ಲಿ ನಿಷಿದ್ಧ ಎಂದು ಯಾವ ಕಾನೂನಿನಲ್ಲಿದೆ ಎಂದು ಕೇಳಿದರೆ, ಕಾನೂನಿಗೂ ಮೀರಿದ್ದು ನಂಬುಗೆಯ ವಿಷಯ ಎನ್ನುತ್ತಾರೆ. ಯಾರ ನಂಬುಗೆ? ತಿನ್ನುವವರದ್ದೋ, ತಿನ್ನದಿರುವವರದ್ದೋ? ತಿನ್ನದಿರುವವರ ನಂಬುಗೆಯೇ ನಿರ್ಣಾಯಕ? ಅದು ಯಾಕೆ ಹೀಗೆ? ಅದು ನಡೆದುಕೊಂಡು ಬಂದಿರುವುದೇ ಹಾಗೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)