varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

‘ಮೋಹನದಾಸ’ ಚಿತ್ರ ಯಾಕೆ ಮಾಡಿದೆ?

ವಾರ್ತಾ ಭಾರತಿ : 8 Jan, 2022
ಪಿ. ಶೇಷಾದ್ರಿ

ಪಿ. ಶೇಷಾದ್ರಿ ಕನ್ನಡದ ಸದಭಿರುಚಿಯ ಚಲನಚಿತ್ರಗಳ ನಿರ್ದೇಶಕರು. ಸತತ ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಅಪರೂಪದ ಸಾಧನೆ ಇವರದ್ದು. ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ, ಸಿನೆಮಾ-ಕಿರುತೆರೆ ಧಾರಾವಾಹಿಗಳ ಚಿತ್ರಕಥೆ-ಸಂಭಾಷಣೆಕಾರರಾಗಿ ಅನುಭವ ಹೊಂದಿದ್ದು, 1985ರಿಂದ ಸ್ವತಂತ್ರವಾಗಿ ದೂರದರ್ಶನ ಧಾರಾವಾಹಿ ಹಾಗೂ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದವರು. ಇಲ್ಲಿಯವರೆಗೆ 12 ಚಿತ್ರಗಳನ್ನು, 11 ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.

ಪಿ. ಶೇಷಾದ್ರಿ 

ಇಲ್ಲಿಯವರೆಗೆ ಮಹಾತ್ಮಾ ಗಾಂಧಿಯವರನ್ನು ಕುರಿತು ಎರಡು ಪ್ರಮುಖ ಚಲನಚಿತ್ರಗಳು ಬಂದಿವೆ. ಒಂದು ರಿಚರ್ಡ್ ಆಟನ್‌ಬರೋ ತೆಗೆದ ‘ಗಾಂಧಿ’ ಮತ್ತು ಶ್ಯಾಂ ಬೆನಗಲ್ ತಯಾರಿಸಿದ ‘ಮೇಕಿಂಗ್ ಆಫ್ ಮಹಾತ್ಮಾ’. ಆದರೆ, ಯಾರೂ ಅವರ ಬಾಲ್ಯವನ್ನು ಕುರಿತು ಚಿತ್ರವೊಂದನ್ನೇಕೆ ಮಾಡಲಿಲ್ಲವೋ? ವಿಚಿತ್ರ ಎಂದರೆ ಮಹಾತ್ಮಾ ಗಾಂಧಿಯವರು ಕೂಡ ತಮ್ಮ ಆತ್ಮಕಥನದಲ್ಲಿ ಬಾಲ್ಯದ ಕುರಿತು ಹೇಳಿಕೊಂಡಿರುವುದು ಕೇವಲ ಮೂವತ್ತು ಪುಟಗಳಲ್ಲಿ ಮಾತ್ರ!

ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’- ಈ ಪುಸ್ತಕವನ್ನು ನೀವು ಓದಿರಬಹುದು. ಇದರ ಶೀರ್ಷಿಕೆಯೇ ಕತೆ ಹೇಳುತ್ತದೆ. ಇದರ ಆಂಭದ ಪುಟಗಳಲ್ಲಿ ಬೊಳುವಾರು ಹೀಗೆ ಬರೆಯುತ್ತಾರೆ:

‘ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ನಾವು, ದೊಡ್ಡವರೆಲ್ಲ ಸೇರಿಕೊಂಡು ಒಮ್ಮತದಿಂದ ನಮ್ಮ ದೇಶದ ರಾಜರಸ್ತೆಗಳಿಗೆಲ್ಲ ಮಹಾತ್ಮಾ ಗಾಂಧಿ ಮಾರ್ಗವೆಂದು ಹೆಸರಿಟ್ಟೆವು. ಕ್ರಮೇಣ ಆ ರಸ್ತೆಗಳಲ್ಲಿ ಕಲ್ಲು ಮುಳ್ಳುಗಳೇ ಜಾಸ್ತಿ ಎಂಬುದನ್ನರಿತು, ನಯವಾಗಿ ಜಾರಬಲ್ಲ, ಬಲುಬೇಗ ಗುರಿ ತಲುಪಬಲ್ಲ ಒಳದಾರಿ ಬಳಸಲಾರಂಭಿಸಿದೆವು. ನಾವು ಕೈ ಹಿಡಿದು ನಡೆಸಿದ ನಮ್ಮ ಮಕ್ಕಳು ಕೂಡಾ ಸಹಜವಾಗಿ ನಮ್ಮ ಜತೆಗೆ ನಮ್ಮದೇ ದಾರಿಯಲ್ಲಿ ನಡೆದು ಬಂದರು. ಆದ್ದರಿಂದ ಅವರಿಗೆ ಗಾಂಧಿಮಾರ್ಗದ ಪರಿಚಯವಾಗಲಿಲ್ಲ. ಅವರಿಗೆ ಗೊತ್ತಿರುವುದು ಎಂದರೆ, ಗಾಂಧೀಜಿಯೆಂದರೆ ಬ್ರಿಟಿಷರೊಡನೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಲು ದೊಡ್ಡ ಮಹಾತ್ಮಾ; ಗಾಂಧಿ ಜಯಂತಿಯೆಂದರೆ ಆ ಮಹಾತ್ಮಾನ ಹ್ಯಾಪಿ ಬರ್ತ್‌ಡೇ; ಗಾಂಧಿ ಮಾರ್ಗವೆಂದರೆ ಎಂ.ಜಿ.ರೋಡ್ ಇಷ್ಟೇ! ಯಾಕೆಂದರೆ ನಾವು ಅವರಿಗೆ ಕಲಿಸಿದ್ದು ಅಷ್ಟೇ.

ಇಂತಹ ಮಕ್ಕಳಿಗೆ, ಮಹಾತ್ಮಾ ಗಾಂಧೀಜಿಯೆಂದರೆ, ಯಾರಿಗೂ ನಿಲುಕದ ಅತಿಮಾನವನಲ್ಲ, ಸುಮಾರು ನೂರೈವತ್ತು ವರ್ಷಗಳ ಹಿಂದೆ ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ ಒಬ್ಬ ಸಾಮಾನ್ಯ ಮಗುವಾಗಿದ್ದವನು; ಎಲ್ಲರಂತೆಯೇ ಅಪ್ಪ ಅಮ್ಮನ ಮುದ್ದಿನ ಪಾಪುವಾಗಿದ್ದವನು; ಶಾಲೆಗೆ ಸೇರಿ, ಆಟವಾಡಿ ಪಾಠ ಓದಿ ಪರೀಕ್ಷೆ ಬರೆದು ಪಾಸಾಗಿ ದೊಡ್ಡ ವಕೀಲನಾಗಿದ್ದವನು; ಕಷ್ಟದಲ್ಲಿರುವವರ ಬಗ್ಗೆ ಸದಾ ಮರುಗುವ, ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಡಿದ ಯುವಕನಾಗಿದ್ದವನು; ಸಾಮಾನ್ಯ ಮನುಷ್ಯನೊಬ್ಬ ಪರಿಪೂರ್ಣ ಮನುಷ್ಯನಾಗಲು, ಮಹಾತ್ಮಾನೆಂಬುದಾಗಿ ಕರೆಸಿಕೊಳ್ಳಲು ಹೇಗೆ ಬದುಕಿ ಬಾಳಬೇಕು ಎಂಬುದಕ್ಕೆ ಮಾದರಿಯಾದ ಅಜ್ಜನಾಗಿದ್ದವನು; ಪ್ರಯತ್ನ ಪಟ್ಟರೆ ಎಲ್ಲ ಮಕ್ಕಳೂ ಗಾಂಧೀಜಿಯಂತಾಗಬಹುದು ಎಂದಷ್ಟೇ ತಿಳಿಸಿಕೊಡುವುದು ಈ ಪುಸ್ತಕದ ಉದ್ದೇಶ...’

ಸುಮಾರು ಹದಿನೈದು ವರ್ಷಗಳ ಹಿಂದೆ ಈ ಪುಸ್ತಕ ಪ್ರಕಟವಾದಾಗ ಈ ಮಾತುಗಳನ್ನು ಓದಿದಾಗ ನನಗೆ ಹೌದಲ್ಲಾ ಅನ್ನಿಸಿತು. ಬೊಳುವಾರು ಅಕ್ಷರಗಳಲ್ಲಿ ಪಾಪುಗಾಂಧಿಯ ಕಥನವನ್ನು ಹಿಡಿದಿಟ್ಟಿದ್ದಾರೆ. ಇದನ್ನು ನಾನು ದೃಶ್ಯದಲ್ಲೇಕೆ ಕಟ್ಟಿಕೊಡಬಾರದು ಎಂದು ನಿರ್ಧರಿಸಿದೆ. ಆದರೆ ಇದು ಕಾರ್ಯಗತವಾಗುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಸತತ ಪ್ರಯತ್ನದಿಂದ ಕೊನೆಗೊಮ್ಮೆ ಆಯಿತು. ಆದರೆ ಇದಾಗಲು ಹದಿನಾಲ್ಕು ವರ್ಷ ಕಾಯಬೇಕಾಯಿತು. ಈ ಮಧ್ಯೆ ಇದೇ ಹೆಸರಿನ ನಾಟಕವೂ ಬಂತು. ಯಶಸ್ವಿಯೂ ಆಯಿತು. ಇದೇ ಧೈರ್ಯದಿಂದ ನಾನೂ ಚಿತ್ರವನ್ನೂ ಸಂಪೂರ್ಣ ಮಾಡಿದೆ.

‘ಮೋಹನದಾಸ’ ನನ್ನ ಹನ್ನೆರಡನೆಯ ಸಿನೆಮಾ. ‘ಮುನ್ನುಡಿ’ಯಿಂದ ಮೊದಲುಗೊಂಡ ನನ್ನ ಎರಡು ದಶಕಗಳ ಸಿನೆಮಾ ಜರ್ನಿಯಲ್ಲಿ ಇದು ನಾನು ಮಾಡಿದ ಮೊದಲ ಬಯೋಪಿಕ್! ಈ ಸಿನೆಮಾದ ಮೊದಲ ಡ್ರಾಫ್ಟ್ ಬರೆದಾಗ ಅದಕ್ಕೆ ‘ಪಾಪುಗಾಂಧಿ’ ಎಂದು ಹೆಸರಿಡಲಾಗಿತ್ತು. ಬೊಳುವಾರು ಬರೆದ ‘ಪಾಪುಗಾಂಧಿ ಗಾಂಧಿಬಾಪು ಆದ ಕತೆ’ ಪುಸ್ತಕವೇ ಇದಕ್ಕೆ ಆಧಾರ. ಜೊತೆಗೆ ಬೆಂಬಲಕ್ಕೆ ಮಹಾತ್ಮಾ ಗಾಂಧಿಯವರ ಆತ್ಮಕಥನ ‘ನನ್ನ ಸತ್ಯಾನ್ವೇಷಣೆ’ ಕೂಡ ಬೆಂಬಲಕ್ಕಿತ್ತು. ‘ಪಾಪುಗಾಂಧಿ..’ ಓದಿದ ಮೇಲೆ ಗಾಂಧಿಯ ಬಾಲ್ಯದ ಎಷ್ಟೋ ಘಟನೆಗಳು ನನಗೆ ಗೊತ್ತೇ ಇರಲಿಲ್ಲವಲ್ಲ ಅನ್ನಿಸಿತು. ನನ್ನ ಶಾಲಾ ದಿನಗಳಲ್ಲಿ ಅವರ ಬಾಲ್ಯದ ಒಂದೋ ಎರಡೋ ಘಟನೆಗಳ ಕುರಿತು ಪಾಠ ಓದಿದ ನೆನಪಷ್ಟೇ ಇದ್ದದ್ದು. ಆನಂತರ ನಾನು ಮಹಾತ್ಮಾ ಗಾಂಧಿಯವರೇ ಬರೆದ ಆತ್ಮಚರಿತ್ರೆಯನ್ನು ಮತ್ತೆ ಓದಿದೆ. ನನ್ನ ಹಿಂದಿನ ಓದಿಗೂ ಈಗಿನ ಓದಿಗೂ ವ್ಯತ್ಯಾಸ ನನಗೇ ಒಡೆದು ಕಾಣುವಂತಿತ್ತು. ಜಗತ್ತಿನ ಕೆಲವೇ ಅತ್ಯುತ್ತಮ ಆತ್ಮಕಥನಗಳಲ್ಲಿ ಈ ಕೃತಿಯೂ ಒಂದು ಎಂಬುದು ಜಗತ್ತಿಗೇ ತಿಳಿದಿರುವ ವಿಚಾರ. ಮೋಹನದಾಸ ಕರಮಚಂದ ಗಾಂಧಿ ಯಾವುದನ್ನೂ ಮುಚ್ಚಿಟ್ಟಿರಲಿಲ್ಲ. ಆತ್ಮಕಥೆಯಲ್ಲಿ ಒಂದು ಸನ್ನಿವೇಶ ಬರುತ್ತದೆ. ಅದು ನಡೆದದ್ದು ಅವರ ಹದಿಮೂರನೇ ವಯಸ್ಸಿನಲ್ಲಿ. ಕರಮಚಂದರು ತಮ್ಮ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುತ್ತಾರೆ. ಮೋಹನದಾಸ ದಿನವೂ ರಾತ್ರಿ ಮಲಗುವ ಮುಂಚೆ ಅವರ ಕಾಲೊತ್ತಿ ಶುಶ್ರೂಷೆ ಮಾಡುತ್ತಿರುತ್ತಾನೆ. ಆಗ ಮೋಹನದಾಸನಿಗೆ ಮದುವೆಯಾದ ಹೊಸತು. ವಿಷಯ ಸುಖಲಾಲಸೆ ಕಾಡುತ್ತಿದ್ದ ದಿನಗಳು. ಅಂದು ರಾತ್ರಿ ತಂದೆಯ ಕಾಲೊತ್ತುತ್ತಾ ಇದ್ದರೂ ಮನಸ್ಸು ಮಾತ್ರ ಶಯನಗೃಹದಲ್ಲಿ! ಆಗ ಅಲ್ಲಿಗೆ ಬಂದ ಇವರ ಚಿಕ್ಕಪ್ಪ, ‘ನೀನು ಹೋಗಿ ಮಲಗಿಕೋ, ನಾನು ಅಣ್ಣನನ್ನು ನೋಡಿಕೊಳ್ಳುತ್ತೇನೆ’ ಎನ್ನುತ್ತಾರೆ. ಮೊಹನದಾಸನಿಗೆ ಬಿಡುಗಡೆ ಸಿಕ್ಕ ಸಂತೋಷ. ಓಡಿ ಶಯನಗೃಹ ಸೇರಿಕೊಳ್ಳುತ್ತಾರೆ. ಆರೇಳು ನಿಮಿಷ ಕಳೆದಿರಬಹುದು. ನೌಕರ ಬಂದು ಬಾಗಿಲು ಬಡಿಯುತ್ತಾನೆ. ಮೋಹನದಾಸ ಬಾಗಿಲು ತೆರೆದು ಏನು ಎಂದು ಕೇಳಿದಾಗ ‘ತಂದೆಯವರು ತೀರಿಕೊಂಡರು’ ಎಂಬ ಉತ್ತರ ಬರುತ್ತದೆ! ಮೋಹನದಾಸನಿಗೆ ನಾಚಿಕೆಯಾಯಿತು. ತನ್ನ ವಿಷಯಾಸಕ್ತಿ ತಂದೆಯಿಂದ ನನ್ನನ್ನು ಕೊನೆಯ ಕ್ಷಣದಲ್ಲಿ ದೂರ ಮಾಡಿತಲ್ಲ ಎಂದು ಮಮ್ಮಲ ಮರುಗುತ್ತಾರೆ. ಮುಂದಿನ ಕತೆ ನಿಮಗೆ ಗೊತ್ತೇ ಇದೆ. ಹೀಗೆ ಪಶ್ಚಾತ್ತಾಪಕ್ಕಿಂತ ಪ್ರಾಯಶ್ಚಿತ್ತ ಮತ್ತೊಂದಿಲ್ಲ ಎಂಬುದರ ಮಹತ್ವವನ್ನು ಗಾಂಧಿ ಎಷ್ಟು ಚೆನ್ನಾಗಿ ಬಾಲ್ಯದಲ್ಲೇ ಅಳವಡಿಸಿಕೊಂಡಿದ್ದರು!

ಗಾಂಧೀಜಿಯವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು. ಮೋಹನದಾಸನನ್ನು ಬಾಲ್ಯದಲ್ಲಿ ಮನೆಯವರು ಪ್ರೀತಿಯಿಂದ ಮೋನಿಯಾ ಎಂದು ಕರೆಯುತ್ತಿದ್ದರು. ಮೋನಿಯಾ ಕೂಡ ಎಲ್ಲರಂತೆ ತಂಟೆ ಮಾಡುತ್ತಿದ್ದ, ಹಠವಾದಿಯಾಗಿದ್ದ, ಸುಳ್ಳು ಹೇಳುತ್ತಿದ್ದ. ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ. ಒಮ್ಮೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಧೂಮಪಾನ ಮಾಡಿದ್ದ, ಮಾಂಸ ಸೇವಿಸಿದ್ದ, ವೇಶ್ಯೆ ಮನೆಗೆ ಕೂಡ ಎಡತಾಕಿದ್ದ! ಆ ನಂತರ ತಾನು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಪಟ್ಟು, ಶ್ರವಣ, ಹರಿಶ್ಚಂದ್ರ ಮುಂತಾದ ಕತೆಗಳಿಂದ ಪ್ರಭಾವಿತನಾಗಿ ತಮ್ಮ ಬದುಕನ್ನೇ ಬದಲಿಸಿಕೊಂಡದ್ದು ಇತಿಹಾಸ. ಆಗ ನಾನು ಸುಮ್ಮನೇ ನನ್ನ ಬಾಲ್ಯವನ್ನು ನೆನಪಿಸಿಕೊಂಡೆ. ನನ್ನ ಬಾಲ್ಯವೂ ವಿಶೇಷವಾಗಿರಲಿಲ್ಲ. ಎಲ್ಲರಂತೆ ನಾನೂ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಬಣ್ಣ ಕಪ್ಪು, ನರಪೇತಲ ಎಂಬ ಕೀಳರಿಮೆಯಿಂದ ಕೊರಗುತ್ತಿದ್ದೆ. ಜೊತೆಗೆ ಸಂಕೋಚದ ಮುದ್ದೆಯಾಗಿದ್ದೆ. ಶಾಲೆಯಲ್ಲಿ ನನಗೆ ಹೆಚ್ಚು ಮಿತ್ರರಿರಲಿಲ್ಲ. ಮನೆಯಲ್ಲಿ ನಾನೂ ಕೆಲವೊಮ್ಮೆ ಸುಳ್ಳು ಹೇಳಿದ್ದೆ. ಅಪ್ಪನ ಜೇಬಿನಿಂದ ಹಣ ಎಗರಿಸಿದ್ದೆ. ಸ್ನೇಹಿತರ ಜೊತೆಗೂಡಿ ಬೀಡಿ ಎಳೆದಿದ್ದೆ. ಮಾಂಸ ತಿನ್ನುವುದು ವರ್ಜ್ಯವಾಗಿದ್ದ ನಮ್ಮ ಕುಟುಂಬದಲ್ಲಿ ಮೊಟ್ಟೆ ತಿಂದು ರಾತ್ರಿಯೆಲ್ಲಾ ನರಳಿದ್ದೆ. ಆದರೆ ಈ ಘಟನೆಗಳನ್ನು ನಾನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನನ್ನ ಬಾಲ್ಯದಲ್ಲಿ ಆಗಿರುವಂತಹ ಇಂಥ ಘಟನೆಗಳು ಇತರರ ಬಾಲ್ಯದಲ್ಲೂ ಖಂಡಿತಾ ಆಗಿರುತ್ತವೆ. ಅದು ಮೋಹನದಾಸನ ಬಾಲ್ಯದಲ್ಲೂ ಆಗಿತ್ತು. ಆದರೆ ಈ ಸನ್ನಿವೇಶಗಳನ್ನು ನಾವು ಎದುರಿಸಿದ ರೀತಿಗೂ ಗಾಂಧಿ ಎದುರಿಸಿದ ರೀತಿಗೂ ಬಹಳ ವ್ಯತ್ಯಾಸವಿದೆ.

ಮೋಹನದಾಸ ಕರಮಚಂದ ಗಾಂಧಿ ತಮ್ಮ ಎಲ್ಲ ತಪ್ಪುಗಳನ್ನೂ ತಂದೆಯ ಮುಂದೆ ಪತ್ರದ ಮೂಲಕ ನಿವೇದಿಸಿಕೊಂಡರು. ಅದಕ್ಕೆ ಅವರ ತಂದೆ ಕರಮಚಂದರು ಪ್ರತಿಕ್ರಿಯಿಸಿದ ರೀತಿಯಂತೂ ಅನನ್ಯವಾದದ್ದು. ಆ ಸಂದರ್ಭದಲ್ಲಿ ಬೇರೆ ಯಾವುದೇ ಪೋಷಕರಿದ್ದರೂ ಹೊಡಿದು ಬಡಿದು ದೂಷಣೆ ಮಾಡುತ್ತಿದ್ದರು. ಬಾಲಕ ಮೋಹನದಾಸನೂ ತನ್ನ ತಂದೆಯಿಂದ ಅದನ್ನೇ ನಿರೀಕ್ಷಿಸಿದ್ದ ಕೂಡ. ‘ಅವರು ನನ್ನನ್ನು ಶಿಕ್ಷಿಸದಿದ್ದರೂ ಗೋಡೆಗೆ ತಮ್ಮ ತಲೆ ಘಟ್ಟಿಸಿಕೊಳ್ಳುವುದರ ಮೂಲಕ ತಮ್ಮನ್ನೇ ಶಿಕ್ಷಿಸಿಕೊಳ್ಳುತ್ತಾರೆ’ ಎಂದು ಭಾವಿಸಿದ್ದ. ಆದರೆ ಕರಮಚಂದರು ಪತ್ರವನ್ನು ಓದಿ ಒಂದು ಹನಿ ಕಣ್ಣೀರು ಹಾಕಿದರು. ಹಿಂದೆ ಮುಂದೆ ನೋಡದೆ ಮಗನ ಪ್ರಾಯಶ್ಚಿತ್ತ ಪತ್ರವನ್ನು ಹರಿದು ಚೂರು ಮಾಡಿದರು. ಮಗನನ್ನು ಬರಸೆಳೆದು ಅಪ್ಪಿಕೊಂಡು ಸಂತೈಸಿದರು. ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡ ಎಂದು ಹೇಳಿದರು. ತಂದೆಯ ಈ ಪ್ರತಿಕ್ರಿಯೆ ಮೋಹನದಾಸನ ಮೇಲೆ ವಿಶೇಷ ಪರಿಣಾಮ ಬೀರಿತು. ಹಾಗಾಗಿ ಈ ಕಥನ ಬರಿಯ ಮಕ್ಕಳಿಗಷ್ಟೇ ಅಲ್ಲ ಪೋಷಕರಿಗೂ ಬೋಧಪ್ರದವಾದ ಅಂಶಗಳನ್ನು ಹೊಂದಿದೆ ಅನ್ನಿಸಿತು.

ನಾನು ಈ ಚಿತ್ರದ ಚಿತ್ರಕಥೆ ಬರೆಯುತ್ತಿರುವ ಹೊತ್ತಿನಲ್ಲಿ ನನ್ನ ಮಗ ಯಾವುದೋ ತಪ್ಪು ಮಾಡಿ ಸಿಕ್ಕಿಹಾಕಿಕೊಂಡ. ಅದು ಕೌಮಾರ್ಯದಲ್ಲಿ ಯಾವುದೇ ಹುಡುಗ ಮಾಡುವ ತಪ್ಪು. ಸಹಜವಾಗಿ ನನಗೆ ಕೋಪ ಬಂದಿತ್ತು. ಅವನಿಗೆ ಹೇಗೆ ತಿಳಿವಳಿಕೆ ಹೇಳುವುದು ಎಂದು ಚಿಂತಿಸಿದೆ. ಕರಮಚಂದರ ತಂತ್ರವನ್ನೇ ಬಳಸಿದರೆ ಹೇಗೆ ಎನ್ನಿಸಿತು. ನನ್ನ ತಂದೆ ಅದನ್ನೇ ಬಾಲ್ಯದಲ್ಲಿ ನನ್ನ ಮೇಲೆ ಪ್ರಯೋಗಿಸಿದ್ದರು. ನಾನೂ ಅದನ್ನೇ ಬಳಸಿದೆ. ನನ್ನ ಆ ಪ್ರತಿಕ್ರಿಯೆ ಅವನಿಗೆ ಆಶ್ಚರ್ಯ ತಂದಿದೆ ಎಂಬುದು ಅವನ ಮುಖಭಾವದಿಂದ ತಿಳಿಯುತ್ತಿತ್ತು. ಆನಂತರ ಅವನು ನಾನು ಕೋಪದಿಂದ ಛೀಮಾರಿ ಹಾಕಿದ್ದರೆ ಪಡುವ ಯಾತನೆಗಿಂತ ಹೆಚ್ಚಿನ ಯಾತನೆ ಪಟ್ಟದ್ದು ನನ್ನ ಅರಿವಿಗೆ ಬಂದಿತ್ತು.

ಇಂದೇನಾಗಿದೆ ಎಂದು ನಿಮಗೇ ಗೊತ್ತಿದೆ? ಗಾಂಧಿಯ ಆದರ್ಶಗಳು ಅಪ್ರಸ್ತುತ ಅನ್ನುವ ಚರ್ಚೆ ಎದ್ದಿದೆ. ಗಾಂಧಿಯನ್ನು ದ್ವೇಷಿಸುವ ಒಂದು ವರ್ಗವೇ ಇದೆ. ಇವತ್ತಿನ ಬಹುತೇಕ ಮಕ್ಕಳಿಗೆ ಗಾಂಧಿ ಎಂದರೆ ಅಕ್ಟೋಬರ್ ಎರಡರಂದು ಬರುವ ‘ಗಾಂಧಿ-ಜಯಂತಿ’, ಮತ್ತೊಂದು ರಜಾ ದಿನ! ಹರೆಯದವರಿಗೆ ಮೋಜಿನ ಎಂ.ಜಿ.ರೋಡ್! ದೊಡ್ಡವರಿಗೆ ಕರೆನ್ಸಿ ನೋಟಿನ ಮೇಲಿನ ಚಿತ್ರ! ಕೋರ್ಟ್ ಕಚೇರಿಗಳಿಗೆ ಈ ಫೋಟೊ ಒಂದು ಸಾಂಕೇತಿಕ ಚಿತ್ರ.

ಗಾಂಧಿ ಅಪ್ರಸ್ತುತ ಎನ್ನುವವರ ಬಗ್ಗೆ ಹೇಳಿದೆನಲ್ಲಾ, ಅವರ ಬಗ್ಗೆ ಪಠ್ಯಪುಸ್ತಕಗಳು ಏನು ಹೇಳುತ್ತವೆ ನೋಡೋಣ ಎಂದು DSERT (Department of State Educational Research and Training) ಸಂಸ್ಥೆಗೆ ಹೋದೆ. ಅಲ್ಲಿ ಪ್ರಾಥಮಿಕ ಮಟ್ಟದಿಂದ ಹೈಸ್ಕೂಲ್ ಮಟ್ಟದವರೆಗೆ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಾರೆ. ಅಲ್ಲಿ ಸಿಗುವ ಎಲ್ಲ ಪಠ್ಯಪುಸ್ತಕಗಳನ್ನು ಒಂದಿಡೀ ದಿನ ಕುಳಿತು ತಿರುವಿ ಹಾಕಿದೆ. ಆಶ್ಚರ್ಯವೆಂದರೆ ಹೆಚ್ಚಿನ ಪಠ್ಯಗಳಲ್ಲಿ ಗಾಂಧಿ ನಾಪತ್ತೆಯಾಗಿದ್ದರು. ನನಗೆ ಸಂದಿಗ್ಧ. ನಾನು ಈ ಚಿತ್ರ ಮಾಡಿದರೆ ಪ್ರೇಕ್ಷಕರು ಸ್ವೀಕರಿಸಿಯಾರೇ? ಹೆಚ್ಚಿನ ಬಜೆಟ್ ಕೋರುವ ನನ್ನ ಪ್ರಯತ್ನ ವಿಫಲವಾದರೆ ಗತಿಯೇನು? ಈ ತೊಳಲಾಟದಲ್ಲಿ ಸಿನೆಮಾ ಮಾಡುವ ಕುರಿತು ಮಿತ್ರರೊಂದಿಗೆ ಚರ್ಚಿಸುತ್ತಿದ್ದಾಗ, ‘ಯಾಕೆ ಈ ಚಿತ್ರ ಮಾಡುತ್ತಿದ್ದೀಯ? ಗಾಂಧಿಯ ಬದುಕಿನಲ್ಲಿ ಹೇಳಲಿಕ್ಕೆ ಏನು ಉಳಿದಿದೆ?’ ಎಂದು ಕೇಳಿದರು. ಇದು ಭಾರತೀಯರೆಲ್ಲರಲ್ಲೂ ಇರುವ ಸಾಮಾನ್ಯ ನಂಬಿಕೆ. ಆದರೆ ಕೆಲವು ವಿದೇಶೀ ಮಿತ್ರರಲ್ಲಿ ಚರ್ಚಿಸಿದಾಗ, ನೀನು ಈ ಚಿತ್ರ ಮಾಡಲೇಬೇಕು. ಗಾಂಧಿಯ ಬಾಲ್ಯದ ಕುರಿತು ದೃಶ್ಯಮಾಧ್ಯಮದಲ್ಲಿ ಏನೊಂದೂ ಬಂದಿಲ್ಲ; ನಿಮಗೆ ಗಾಂಧಿ ಚಿತ್ರಕುರಿತು ಹೊರದೇಶದವರೇ ಹೇಳಬೇಕೇ ಎಂದು ಪ್ರಶ್ನಿಸುತ್ತಿದ್ದರು. ನಾನು ಚಿತ್ರಕಥೆ ರಚಿಸಿಕೊಂಡು, ಈ ಚಿತ್ರ ಮಾಡುವುದೋ, ಬಿಡುವುದೋ ಎಂಬ ಅನುಮಾನದಲ್ಲಿದ್ದಾಗ, ಆ ಚಿತ್ರಕಥೆ ಓದಿದ ನನ್ನ ಮಗ, ನೀನು ಈ ಚಿತ್ರ ಮಾಡಲೇಬೇಕು ಎಂದ. ನನ್ನ ನಿರ್ಧಾರ ಬಲವಾಗಲು ಇದೂ ಒಂದು ಕಾರಣವಾಯಿತು. ಗಾಂಧಿ ನಮ್ಮ ದೇಶದವರು ಎನ್ನುವ ಒಂದೇ ಕಾರಣಕ್ಕೆ ಎಲ್ಲರ ತಿಳಿವಳಿಕೆಗೆ ನಿಲುಕುವ ವ್ಯಕ್ತಿ ಅವರಲ್ಲ. ಹೆಚ್ಚು ಹೆಚ್ಚು ಅರಿತಷ್ಟು ಅರಿಯುವುದಿನ್ನೂ ಬಹಳ ಉಳಿಯುತ್ತದೆ. ಜ್ಞಾನದ ಪರಿಧಿಗೆ ನಿಲುಕಿದ್ದಕ್ಕಿಂತ ನಿಲುಕಬೇಕಾಗಿರುವುದು ಗಾಂಧೀಜಿಯ ವಿಚಾರದಲ್ಲಿ ಇನ್ನೂ ಬಹಳ ಉಳಿಯುತ್ತದೆ ಎನ್ನುವುದು ಅರ್ಥವಾಯಿತು.

ಇಲ್ಲಿಯವರೆಗೆ ಮಹಾತ್ಮಾ ಗಾಂಧಿಯವರನ್ನು ಕುರಿತು ಎರಡು ಪ್ರಮುಖ ಚಲನಚಿತ್ರಗಳು ಬಂದಿವೆ. ಒಂದು ರಿಚರ್ಡ್ ಆಟನ್‌ಬರೋ ತೆಗೆದ ‘ಗಾಂಧಿ’ ಮತ್ತು ಶ್ಯಾಂ ಬೆನಗಲ್ ತಯಾರಿಸಿದ ‘ಮೇಕಿಂಗ್ ಆಫ್ ಮಹಾತ್ಮಾ’. ಆದರೆ, ಯಾರೂ ಅವರ ಬಾಲ್ಯವನ್ನು ಕುರಿತು ಚಿತ್ರವೊಂದನ್ನೇಕೆ ಮಾಡಲಿಲ್ಲವೋ? ವಿಚಿತ್ರ ಎಂದರೆ ಮಹಾತ್ಮಾ ಗಾಂಧಿಯವರು ಕೂಡ ತಮ್ಮ ಆತ್ಮಕಥನದಲ್ಲಿ ಬಾಲ್ಯದ ಕುರಿತು ಹೇಳಿಕೊಂಡಿರುವುದು ಕೇವಲ ಮೂವತ್ತು ಪುಟಗಳಲ್ಲಿ ಮಾತ್ರ! ನಾನಿಲ್ಲಿ ‘ಮಹಾತ್ಮಾ ಗಾಂಧಿ’ಯನ್ನು ಕುರಿತು ಹೇಳಿಲ್ಲ; ಮೋಹನದಾಸನೆಂಬ ಒಬ್ಬ ಸಾಮಾನ್ಯ ಬಾಲಕನ ಬಾಲ್ಯದ ಕತೆಯನ್ನು ಹೇಳಿದ್ದೇನೆ! ಅದು ಹಿಂದಿಗೂ, ಇವತ್ತಿಗೂ ಮತ್ತು ನಾಳೆಗೂ ಪ್ರಸ್ತುತವಾಗುತ್ತದೆ ಎಂದು ನಿರ್ಧರಿಸಿ ಮುಂದಡಿಯಿಟ್ಟೆ. ಗಾಂಧಿಯ ಕುರಿತ ಹೆಚ್ಚಿನ ಸಂಶೋಧನೆಗಾಗಿ ಅವರು ಹುಟ್ಟಿದ ಪೋರಬಂದರ್, ಅವರು ಓದಿ ಬೆಳೆದ ರಾಜಕೋಟ್‌ಗಳಿಗೆ ಭೇಟಿ ಕೊಟ್ಟು ಚರ್ಚಿಸಿದಾಗ ಹೇಳಿಕೊಳ್ಳುವಂತಹ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲ. ಆದರೆ ಆ ಸ್ಥಳಗಳನ್ನು ನೋಡಿದಾಗ ವಿಚಿತ್ರ ಅನುಭವಗಳಾದವು. ಖ್ಯಾತ ವಿಜ್ಞಾನಿ ಐನ್‌ಸ್ಟೈನ್ ಒಂದೆಡೆ ಹೇಳಿದ್ದ: ಮುಂದೊಂದು ದಿನ, ಗಾಂಧಿ ಎಂಬ ಚಕ್ಕಳ-ಮಾಂಸದ ಒಬ್ಬ ವ್ಯಕ್ತಿ ಈ ಭೂಮಿ ಮೇಲೆ ಹುಟ್ಟಿದ್ದ, ನಡೆದಾಡಿದ್ದ ಎಂದು ಈ ಜಗತ್ತು ಅಚ್ಚರಿಪಡುತ್ತದೆ! ಎಂಬ ಮಾತು ನೆನಪಿಗೆ ಬಂತು. ಏನಾದರಾಗಲಿ ಮೋಹನದಾಸನ ಕುರಿತು ಚಿತ್ರ ಮಾಡಲೇಬೇಕು ಎಂದು ನಿರ್ಧರಿಸಿಬಿಟ್ಟೆ. ಗಾಂಧಿ ಹುಟ್ಟಿದ್ದ, ಓಡಾಡಿದ್ದ, ಓದಿದ್ದ ಶಾಲೆಗಳಲ್ಲೇ ಚಿತ್ರೀಕರಣ ನಡೆಸಬೇಕು ಎಂದು ನಿಶ್ಚಯಿಸಿ ಅದಕ್ಕಾಗಿ ವಿಶೇಷ ಅನುಮತಿಗಳನ್ನು ಪಡೆಯಲು ಸಾಕಷ್ಟು ಶ್ರಮ ಹಾಕಬೇಕಾಯಿತು. ಅಂತೂ ಎಲ್ಲವೂ ಆಗಿ, ಅವರ ನೂರ ಐವತ್ತನೇ ಜನ್ಮ ಶತಾಬ್ಧಿಗೆ ‘ಮೋಹನದಾಸ’ನನ್ನು ಮೂರು ಭಾಷೆಗಳಲ್ಲಿ (ಕನ್ನಡ, ಹಿಂದಿ ಮತ್ತು ಇಂಗ್ಲಿಷ್) ಚಿತ್ರೀಕರಿಸಿದೆ.

ಕೊರೋನ ನಮ್ಮ ಕನಸುಗಳಿಗೆ ದೊಡ್ಡ ಬ್ರೇಕ್ ಹಾಕಿತು. ಚಿತ್ರ ತಯಾರಾದ ಎರಡು ವರ್ಷಗಳು ಚಿತ್ರ ಡಬ್ಬದಲ್ಲೇ ಕುಳಿತುಕೊಳ್ಳಬೇಕಾಯಿತು. ಇದನ್ನು ಜನರಿಗೆ ತಲುಪಿಸಲು ಹಲವು ಒಟಿಟಿ ಪ್ಲಾಟ್‌ಫಾರಂಗಳನ್ನು ಸಂಪರ್ಕಿಸಿದರೂ ನಮಗೆ ಬೆಂಬಲ ದೊರೆಯಲಿಲ್ಲ. ಅವರು ನೇರವಾಗಿ ಹೇಳದಿದ್ದರೂ ‘ಗಾಂಧಿ ಈಸ್ ಔಟ್‌ಡೇಟೆಡ್’ ಎನ್ನುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆದರೆ ಈ ಮಧ್ಯೆ ಎರಡು ಪ್ರತ್ಯೇಕ ಪ್ರದರ್ಶನಗಳಾದವು. ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮೂರು ಸಾವಿರ ಮಕ್ಕಳು ಮತ್ತು ಸುತ್ತೂರು ಮಠದಲ್ಲಿ ನಾಲ್ಕು ಸಾವಿರ ಮಕ್ಕಳು ನೋಡಿ ಸಂಭ್ರಮಿಸಿದಾಗ ನಮ್ಮ ಪ್ರಯತ್ನ ವ್ಯರ್ಥವಾಗುವುದಿಲ್ಲ ಎಂಬ ನಂಬಿಕೆ ಬಂತು.

ಅಂತೂ ಕಳೆದ ಅಕ್ಟೋಬರ್ ಎರಡಕ್ಕೆ ಚಿತ್ರಮಂದಿರಕ್ಕೂ ಬಂದೆವು. ಆದರೆ ಪ್ರೇಕ್ಷಕ ನಿರೀಕ್ಷಿತ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರಲಿಲ್ಲ. ಹಲವು ರೌಡಿಗಳ ಬದುಕನ್ನು ಆಧರಿಸಿದ ಚಿತ್ರಗಳಿಗೆ ಪ್ರೋತ್ಸಾಹ ನೀಡಿದ ಪ್ರೇಕ್ಷಕ ಪ್ರಭು ಇದಕ್ಕೆ ಧಾಂಗುಡಿ ಇಡಲಿಲ್ಲ. ಆದರೆ ನೋಡಬೇಕಾದ ಮನಸ್ಸುಗಳು ಇವೆ, ಅವು ಮನೆಯಲ್ಲಿ ಕುಳಿತಿವೆ. ಅವರನ್ನು ತಲುಪಬೇಕಾದ ದಾರಿ ದೂರ ಇದೆ ಎನ್ನುವುದು ನನಗೆ ಗೊತ್ತು.

ಅದೇನೇ ಇರಲಿ, ಒಟ್ಟಾರೆ ಈ ಚಿತ್ರದ ಅನುಭವ ನಾನು ಗಾಂಧಿಯನ್ನು ಮತ್ತಷ್ಟು ಅರಿಯಲು ಅನುವು ಮಾಡಿಕೊಟ್ಟಿದೆ. ಇದು ಮೋಹನದಾಸನಿಗಷ್ಟೇ ಏಕೆ ಸೀಮಿತಗೊಂಡಿದೆ ‘ಮಹಾತ್ಮಾ’ನತ್ತ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಯೂ ಹುಟ್ಟಬಹುದು. ನಾನು ಈ ಚಿತ್ರದ ಮೂಲಕ ಹೇಳಹೊರಟಿರುವುದು ಮಹಾತ್ಮಾನ ಕತೆಯಲ್ಲ; ಮೋಹನದಾಸನೆಂಬ ಒಬ್ಬ ಸಾಮಾನ್ಯ ಬಾಲಕನ ಕತೆ. ಮಹಾತ್ಮಾನ ಬೇರುಗಳನ್ನು ಇಲ್ಲಿ ಯಾರೂ ಕೂಡ ಹುಡುಕಿಕೊಳ್ಳಬಹುದು. ಗಾಂಧಿಯೇ ಹೇಳುತ್ತಾರಲ್ಲ.

ಒಟ್ಟಾರೆ ಈ ಚಿತ್ರದ ಅನುಭವ ನಾನು ಗಾಂಧಿಯನ್ನು ಮತ್ತಷ್ಟು ಅರಿಯಲು ಅನುವು ಮಾಡಿಕೊಟ್ಟಿದೆ. ಇದು ಮೋಹನದಾಸನಿಗಷ್ಟೇ ಏಕೆ ಸೀಮಿತಗೊಂಡಿದೆ ‘ಮಹಾತ್ಮಾ’ನತ್ತ ಏಕೆ ಹೋಗಲಿಲ್ಲ ಎಂಬ ಪ್ರಶ್ನೆಯೂ ಹುಟ್ಟಬಹುದು. ನಾನು ಈ ಚಿತ್ರದ ಮೂಲಕ ಹೇಳಹೊರಟಿರುವುದು ಮಹಾತ್ಮಾನ ಕತೆಯಲ್ಲ; ಮೋಹನದಾಸನೆಂಬ ಒಬ್ಬ ಸಾಮಾನ್ಯ ಬಾಲಕನ ಕತೆ. ಮಹಾತ್ಮಾನ ಬೇರುಗಳನ್ನು ಇಲ್ಲಿ ಯಾರೂ ಕೂಡ ಹುಡುಕಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)