varthabharthi


ವಿಶೇಷ-ವರದಿಗಳು

ಜೀವನ ಜೀವನೋಪಾಯ ಮತ್ತು ಘನತೆಯ ಬದುಕು

ವಾರ್ತಾ ಭಾರತಿ : 9 Jan, 2022
ನಾ. ದಿವಾಕರ

ಮುಷ್ಕರ ನಿರತರಾಗಿರುವ 14 ಸಾವಿರ ಅತಿಥಿ ಉಪನ್ಯಾಸಕರ ಪೈಕಿ ಬಹುಪಾಲು ಕುಟುಂಬ ಹೊಂದಿದವರೇ ಆಗಿದ್ದಾರೆ. 20 ವರ್ಷಗಳಿಂದಲೂ ಇದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬೋಧಕ ಸಿಬ್ಬಂದಿಯ ಕೌಶಲಾಭಿವೃದ್ಧಿಯ ಯಾವುದೇ ಕ್ರಮಗಳನ್ನು ಸರಕಾರವಾಗಲೀ, ವಿಶ್ವವಿದ್ಯಾಲಯಗಳಾಗಲೀ ರೂಪಿಸದೆ ಇರುವುದರಿಂದ, ಈ ಉಪನ್ಯಾಸಕರಲ್ಲಿ ಅನೇಕರಿಗೆ ಖಾಸಗಿ ಕೋಚಿಂಗ್ ಸೆಂಟರ್‌ಗಳನ್ನು ಆಶ್ರಯಿಸುವುದೂ ದುಸ್ತರವಾಗುತ್ತದೆ. ನಿವೃತ್ತಿಯ ಅಂಚಿನಲ್ಲಿರುವ ನೂರಾರು ಉಪನ್ಯಾಸಕರು ಇಂದು ಅನಿಶ್ಚಿತ ಭವಿಷ್ಯ ಎದುರಿಸುತ್ತಿದ್ದಾರೆ. 


ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಅಪ್ಪಿಕೊಂಡು, ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ನವ ಉದಾರವಾದಿ ಅರ್ಥ ವ್ಯವಸ್ಥೆಯತ್ತ ಮುನ್ನುಗ್ಗುತ್ತಿರುವ ಭಾರತ ಇಂದು ಶಿಕ್ಷಣ ಮತ್ತು ಆರೋಗ್ಯ ವಲಯಗಳನ್ನು ಮಾರುಕಟ್ಟೆಯ ಶಕ್ತಿಗಳಿಗೆ ಒಪ್ಪಿಸಲು ಸಜ್ಜಾಗಿದೆ. ಕಾರ್ಪೊರೇಟ್ ಬಂಡವಾಳ ನಿಯಂತ್ರಿತ ಶೈಕ್ಷಣಿಕ ವಲಯಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಿಕ್ಷಣವನ್ನು ಜ್ಞಾನಾರ್ಜನೆಯ ನೆಲೆಯಿಂದ ಬೇರ್ಪಡಿಸಿ ಲಾಭಗಳಿಕೆಯ ಉದ್ಯಮವನ್ನಾಗಿ ಮಾಡಲು ಭಾರತ ಸರಕಾರ ಮುಂದಾಗಿದೆ. 1980ರಿಂದಲೇ ಆರಂಭವಾದ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ ಪ್ರಕ್ರಿಯೆಗೆ ಈಗ ಅಂತಿಮ ಸ್ವರೂಪ ನೀಡಲಾಗುತ್ತಿದ್ದು, ಪೂರ್ವ ಪ್ರಾಥಮಿಕ ಹಂತದಿಂದ ಅತ್ಯುನ್ನತ ಶಿಕ್ಷಣದವರೆಗೆ ಶೈಕ್ಷಣಿಕ ವಲಯ ಕಾರ್ಪೊರೇಟೀಕರಣ ಪ್ರಕ್ರಿಯೆಗೊಳಗಾಗುತ್ತಿದೆ. ಈ ಪ್ರಕ್ರಿಯೆಯ ಒಂದು ದುರಂತ ಆಯಾಮವನ್ನು ಅತಿಥಿ ಉಪನ್ಯಾಸಕರ ಸಮಸ್ಯೆಗಳಲ್ಲಿ ಗುರುತಿಸಬಹುದಾಗಿದೆ. ಬೋಧಕ ವೃತ್ತಿಯ ಔದ್ಯೋಗೀಕರಣ

14 ವರ್ಷ ವಯಸ್ಸಿನವರೆಗೂ ಎಲ್ಲ ಮಕ್ಕಳಿಗೂ ಉಚಿತ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ನೀಡುವುದು ಭಾರತದ ಸಂವಿಧಾನದ ಮೂಲ ಆಶಯವಾದರೂ, ಈವರೆಗಿನ 74 ವರ್ಷಗಳಲ್ಲಿ ಯಾವುದೇ ಸರಕಾರವೂ ಈ ಧ್ಯೇಯವನ್ನು ಸಾಕಾರಗೊಳಿಸಲು ಮುಂದಾಗಿಲ್ಲ. ಭಾರತದ ಜಾತಿ ವ್ಯವಸ್ಥೆ ಸೃಷ್ಟಿಸಿರುವ ತಾರತಮ್ಯಗಳು ಮತ್ತು ಶೋಷಣೆಯ ನೆಲೆಗಳನ್ನು ಧ್ವಂಸ ಮಾಡಲು ಶಿಕ್ಷಣವೊಂದೇ ಮಾರ್ಗ ಎಂಬ ಉದ್ದೇಶದಿಂದಲೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತಿತರ ನೇತಾರರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಒಂದು ಸ್ವಸ್ಥ-ಸೌಹಾರ್ದಯುತ-ಸಮಾನತೆಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಬಹುಮುಖ್ಯ ಆಕರವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ದೇಶದ ಶೈಕ್ಷಣಿಕ ನೀತಿಯನ್ನು ಅಲ್ಲಿನ ಸಾಮಾಜಿಕ ಪರಿಸರ ಮತ್ತು ಸಾಂಸ್ಕೃತಿಕ ನೆಲೆಯನ್ನು ಆಧರಿಸಿ ರೂಪಿಸಬೇಕಾಗುತ್ತದೆ. ಹಾಗಾಗಿಯೇ ಭಾರತದ ಸಂವಿಧಾನದಲ್ಲೂ ಭಾರತದ ಜನಪದೀಯ ಬಹುಸಂಸ್ಕೃತಿಯ ನೆಲೆಗಳನ್ನು ಗಟ್ಟಿಗೊಳಿಸುವ ರೀತಿಯಲ್ಲಿ ಜಾತ್ಯತೀತ ಪರಂಪರೆಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಆಧುನಿಕ ತಂತ್ರಜ್ಞಾನ ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕವೇ ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳಲ್ಲಿ ದೇಶಾದ್ಯಂತ ಸ್ಥಾಪಿಸಲಾದ ಐಐಟಿ, ಐಐಎಂ ಮತ್ತು ಏಮ್ಸ್‌ನಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದ ಬೌದ್ಧಿಕ ಸಂಪತ್ತನ್ನು ಹೆಚ್ಚಿಸುವ ಪ್ರಮುಖ ವಾಹಿನಿಗಳಾದವು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ಐಐಎಸ್ಸಿ, ಇಸ್ರೋ ಮುಂತಾದ ಸಂಸ್ಥೆಗಳು ಭಾರತದಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ಸುಭದ್ರ ಬುನಾದಿ ಒದಗಿಸಿದ್ದವು. ಇಂದು ಭಾರತ ಚಂದ್ರಯಾಣದ ಕನಸು ಸಾಕಾರಗೊಳ್ಳುವುದನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣ ಈ ನೀತಿಗಳೇ ಆಗಿವೆ.

ಕ್ಷುದ್ರ ರಾಜಕೀಯ ಕಾರಣಗಳಿಗಾಗಿ ಪ್ರಧಾನಮಂತ್ರಿಗಳಾದಿಯಾಗಿ ಅನೇಕರು, ಮೊದಲ 25 ವರ್ಷಗಳಲ್ಲಿ ಏನೂ ಸಾಧಿಸಿಲ್ಲ ಎಂದು ಹೇಳುತ್ತಿದ್ದರೂ, ವಾಸ್ತವ ಕಣ್ಣೆದುರಿನಲ್ಲೇ ಇದೆ. ಇದೇ ಅವಧಿಯಲ್ಲೇ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನೂ ಭದ್ರಪಡಿಸುವ ನೀತಿಯನ್ನು ಅನುಸರಿಸಲಾಯಿತು. ಆದರೆ ಸಂವಿಧಾನದ ಅನುಚ್ಛೇದ 21 ಎ ಅನುಸಾರ ಭಾರತದಲ್ಲಿ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ, ಕಡ್ಡಾಯ, ಸಾರ್ವತ್ರಿಕ ಶಿಕ್ಷಣ ನೀಡಬೇಕು ಎಂದು ಹೇಳಲಾಗಿದ್ದರೂ, ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿರಲೇ ಇಲ್ಲ. ಈ ಲೋಪವನ್ನು ಸರಿಪಡಿಸಲು ಆರು ದಶಕಗಳೇ ಬೇಕಾದವು. 2009ರಲ್ಲಿ ಯುಪಿಎ ಸರಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಿಸಿತ್ತು. ವಿಶ್ವದಲ್ಲಿ 135 ದೇಶಗಳಲ್ಲಿ ಮಾತ್ರವೇ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಕಾಯ್ದೆಯನ್ನು ರೂಪಿಸುವ ವೇಳೆಗೆ ಶಿಕ್ಷಣ ಸರಕಾರದ ಆದ್ಯತಾ ಕ್ಷೇತ್ರವಾಗಿ ಉಳಿದಿರಲಿಲ್ಲ. 1980ರಿಂದಲೇ ಶಿಕ್ಷಣ ನೀಡುವುದು ಸರಕಾರದ ಕೆಲಸ ಅಲ್ಲ ಎನ್ನುವ ಅಘೋಷಿತ ನೀತಿಯನ್ನು ಭಾರತದ ಸರಕಾರಗಳು ಜಾರಿಗೊಳಿಸಲಾರಂಭಿಸಿದ್ದವು.

ಶಿಕ್ಷಣ ಕ್ಷೇತ್ರದ ಖಾಸಗೀಕರಣ ಮತು ಶೈಕ್ಷಣಿಕ ಕೇಂದ್ರಗಳ ಔದ್ಯಮೀಕರಣ ಪ್ರಕ್ರಿಯೆಗೆ 1991ರ ನಂತರ ಕ್ಷಿಪ್ರ ಗತಿಯಲ್ಲಿ ಚಾಲನೆ ನೀಡಲಾಗಿತ್ತು. ಪ್ರಾಥಮಿಕ ಹಂತದ ಶಾಲಾ ಮಕ್ಕಳಿಗೆ ಸಮೀಪದಲ್ಲೇ ಶಾಲಾ ಸೌಲಭ್ಯವನ್ನು ಒದಗಿಸುವ ನೀತಿಗೆ ತಿಲಾಂಜಲಿ ನೀಡಿ, ಪೂರ್ವ ಪ್ರಾಥಮಿಕ ಹಂತದಲ್ಲೂ ಖಾಸಗಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಶೈಕ್ಷಣಿಕ ನೀತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. ಗ್ರಾಮೀಣ ಮಕ್ಕಳಿಗೆ ಉತ್ತಮ ಸೌಲಭ್ಯಗಳುಳ್ಳ ಗುಣಮಟ್ಟದ ಶಾಲೆಗಳನ್ನು ಒದಗಿಸುವ ಬದಲು ಸಮೀಪದ ನಗರ-ಪಟ್ಟಣಗಳಲ್ಲಿ ಖಾಸಗಿ ಶಾಲೆಗಳಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಯಿತು. 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ನೀತಿಯ ಅನುಸಾರ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಯಿತಾದರೂ, ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಅವಕಾಶವನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಬೇಕು ಎನ್ನುವ ನೀತಿಯ ಮೂಲಕ, ಖಾಸಗೀಕರಣಕ್ಕೆ ಅಧಿಕೃತ ಮನ್ನಣೆ ನೀಡಲಾಯಿತು. ಶಿಕ್ಷಣ ವ್ಯವಸ್ಥೆಯನ್ನು ಸಾರ್ವತ್ರೀಕರಿಸಬೇಕಿದ್ದ ಈ ಕಾಯ್ದೆ ಪರೋಕ್ಷವಾಗಿ ಖಾಸಗೀಕರಣ ನೀತಿಗೆ ಪುಷ್ಟಿ ನೀಡಲು ಸಹಾಯಕವಾಗಿತ್ತು. ಈ ಪರಂಪರೆಯಲ್ಲೇ ಶಿಕ್ಷಕರನ್ನು-ಬೋಧಕ ಉಪನ್ಯಾಸಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪದ್ಧತಿಯನ್ನೂ ಪೋಷಿಸಿಕೊಂಡು ಬರಲಾಗಿದೆ.

1980ರ ದಶಕದಿಂದಲೇ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರಿಗೆ ಖಾಯಂ ನೌಕರಿ ನೀಡದೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪದ್ಧತಿಗೆ ಯುಜಿಸಿ ಸಹ ಅನುಮೋದನೆ ನೀಡಿತ್ತು. ಶಿಕ್ಷಣವನ್ನು ಸರಕಾರದ ಆದ್ಯತಾವಲಯದಿಂದ ಹೊರತುಪಡಿಸಿದ ಪರಿಣಾಮ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಮತ್ತು ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆಗಳೂ ಮಾರುಕಟ್ಟೆಗನುಗುಣವಾಗಿ ಬದಲಾಗತೊಡಗಿದ್ದವು. ಉನ್ನತ ಶಿಕ್ಷಣ ಹಂತದಲ್ಲೂ ಉಪನ್ಯಾಸಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಒಂದು ವ್ಯವಸ್ಥೆಗೆ ಗೌರವಯುತವಾಗಿ ಅತಿಥಿ ಉಪನ್ಯಾಸಕ-ಬೋಧಕ ಎಂದು ಹೆಸರಿಡಲಾಯಿತು. ಅಂದರೆ ಅವಶ್ಯಕತೆ ಇದ್ದಾಗ ಮಾತ್ರವೇ ಬಳಸಿಕೊಳ್ಳಬಹುದಾದ ಸರಕು ಮಾರುಕಟ್ಟೆಯ ತಂತ್ರವನ್ನು ಬೋಧಕರನ್ನು ನೇಮಿಸುವಾಗಲೂ ಅನುಸರಿಸಲಾಯಿತು. ಡಿಜಿಟಲೀಕರಣ ಮತ್ತು ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿರುವ ನವ ಭಾರತದಲ್ಲಿ ಈಗ ಶಿಕ್ಷಣವೂ ಮಾರುಕಟ್ಟೆಯ ಒಂದು ಭಾಗವಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ- 2020’ಯನ್ನು ಮಾರುಕಟ್ಟೆಯ ಅವಶ್ಯಕತೆಗಳಿಗನುಗುಣವಾಗಿಯೇ ರೂಪಿಸಲಾಗಿದ್ದು, ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಗೆ ಅವಶ್ಯವಾದ ಮಾನವ ಸರಕುಗಳನ್ನು ಉತ್ಪಾದಿಸಲು ಕಾರ್ಪೊರೇಟ್ ನಿಯಂತ್ರಿತ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಜ್ಞಾನಾರ್ಜನೆಯ ಮಾರ್ಗಗಳಿಂದ ವಿಮುಖವಾಗಿ ಬಂಡವಾಳ ಕ್ರೋಡೀಕರಣದ ವಾಹಕದಂತೆ ಕಾರ್ಯನಿರ್ವಹಿಸಲಾರಂಭಿಸುತ್ತದೆ. ಮಾರುಕಟ್ಟೆ ಅರ್ಥವ್ಯವಸ್ಥೆ ಸೃಷ್ಟಿಸಬಹುದಾದ ಅನಿಶ್ಚಿತತೆ, ಅಭದ್ರತೆ ಮತ್ತು ತಾರತಮ್ಯಗಳನ್ನೇ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯೂ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಕಂಡುಬರುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಿದೆ.

ಜೀವನ ಜೀವನೋಪಾಯದ ಶೋಧದಲ್ಲಿ ಬೋಧಕರು

‘ಅತಿಥಿ’ ಎನ್ನುವ ಪದವೇ ಸಾಪೇಕ್ಷವಾದುದು. ವ್ಯಕ್ತಿಗತ-ಕೌಟುಂಬಿಕ ನೆಲೆಯಲ್ಲಿ ಅತಿಥಿ ಎಂದರೆ ಆದರಿಸಲ್ಪಡುವ ಮತ್ತು ಗೌರವಯುತವಾಗಿ ಕಾಣಲ್ಪಡುವ ವ್ಯಕ್ತಿ ಎಂದು ಅರ್ಥೈಸಬಹುದು. ಆದರೆ ಮೂಲತಃ ಅತಿಥಿ ಎನ್ನುವುದು ಆತಿಥ್ಯವನ್ನು ಅವಲಂಬಿಸಿರುತ್ತದೆ. ಆತಿಥೇಯ ನೆಲೆಗಳಲ್ಲೇ ಅತಿಥಿಗಳ ಸ್ಥಾನಮಾನಗಳೂ ನಿರ್ಧರಿಸಲ್ಪಡುತ್ತವೆ. ಈ ಸಾಪೇಕ್ಷತೆಯ ನೆಲೆಯಲ್ಲೇ ನೋಡಿದಾಗ, ಅತಿಥಿ ಎಂದರೆ ಆತಿಥೇಯರಿಗೆ ಅವಶ್ಯಕತೆ ಇದ್ದಾಗ ಆದರಿಸಲ್ಪಡುವವರು ಎಂಬ ಅರ್ಥ ಬರುತ್ತದೆ. ಇದನ್ನು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿಟ್ಟು ನೋಡಿದಾಗ ಶಾಲಾ ಕಾಲೇಜುಗಳಿಗೆ ನೇಮಕವಾಗುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಖಾಯಂ ನೌಕರಿಯನ್ನು ಒದಗಿಸುವ ಬದಲಾಗಿ, ಗುತ್ತಿಗೆ ಆಧಾರದ ಮೇಲೆ, ಅವಶ್ಯಕತೆಗನುಗುಣವಾಗಿ ನೇಮಿಸಿಕೊಳ್ಳುವ ಒಂದು ಪ್ರಕ್ರಿಯೆಯನ್ನೇ ನಮ್ಮ ಸರಕಾರಗಳು ಅತಿಥಿ ಉಪನ್ಯಾಸಕ ಎಂದು ಗೌರವಯುತವಾಗಿ ಕರೆಯತ್ತದೆ. ಈ ಪದ್ಧತಿಗೆ ನಾಲ್ಕು ದಶಕಗಳ ಇತಿಹಾಸ ಇದ್ದರೂ, ಕಳೆದ ಎರಡು ದಶಕಗಳಲ್ಲಿ ಶೈಕ್ಷಣಿಕ ನೀತಿಗಳಲ್ಲಿ ಆಗುತ್ತಿರುವ ಮಾರ್ಪಾಡುಗಳು ಮತ್ತು ಶಿಕ್ಷಣದ ವಾಣಿಜ್ಯೀಕರಣ ಪ್ರಕ್ರಿಯೆ ಅತಿಥಿ ಉಪನ್ಯಾಸಕ ಹುದ್ದೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಈಗ ಭಾರತ ಶಿಕ್ಷಣದ ವಾಣಿಜ್ಯೀಕರಣ ಹಂತದಿಂದ ಕಾರ್ಪೊರೇಟೀಕರಣ ಹಂತಕ್ಕೆ ಮುನ್ನಡೆದಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶಿಕ್ಷಣದವರೆಗೆ ಕಾರ್ಪೊರೇಟ್ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದರ ಮೂಲಕ ಶಿಕ್ಷಣ ಮತ್ತು ವಿದ್ಯಾಭ್ಯಾಸವನ್ನು ಮಾರುಕಟ್ಟೆ ಉತ್ಪಾದಕೀಯತೆಯ ಚೌಕಟ್ಟಿನಲ್ಲಿ ಅಳೆಯಲಾಗುತ್ತಿದೆ. ಬೌದ್ಧಿಕ ಜ್ಞಾನಾಭಿವೃದ್ಧಿ ಮತ್ತು ಸಂಶೋಧನೆಯ ಕ್ಷೇತ್ರಗಳನ್ನು ಬಂಡವಾಳ ಮಾರುಕಟ್ಟೆಯ ಲಾಭ ನಷ್ಟದ ವ್ಯಾಪ್ತಿಯಲ್ಲೇ ರೂಪಿಸಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಉತ್ಪಾದಕೀಯತೆಯನ್ನು ಅಳೆಯಲು ಬೌದ್ಧಿಕ ಮಾನದಂಡಗಳ ಬದಲು ಮಾರುಕಟ್ಟೆ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ನೇಮಕಗೊಳ್ಳುವ ಬೋಧಕರ ವೇತನ ಮತ್ತಿತರ ಸವಲತ್ತುಗಳನ್ನು ಸಹ ಮಾರುಕಟ್ಟೆಯ ಲೆಕ್ಕಾಚಾರದಲ್ಲೇ ನಿಷ್ಕರ್ಷೆ ಮಾಡಲಾಗುತ್ತದೆ.

ಹಾಗಾಗಿ ಇತರ ಔದ್ಯಮಿಕ-ಔದ್ಯೋಗಿಕ ವಲಯದಂತೆಯೇ ಶೈಕ್ಷಣಿಕ ವಲಯದಲ್ಲೂ ಬೋಧಕ, ಬೋಧಕೇತರ ಸಿಬ್ಬಂದಿ ತಮ್ಮ ಜೀವನ ಮತ್ತು ಜೀವನೋಪಾಯದ ಸವಾಲನ್ನು ಎದುರಿಸುವಂತಾಗಿದೆ. ಒಂದು ವರದಿಯ ಪ್ರಕಾರ ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ 14,183 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪೈಕಿ ಪುರುಷರು 7,085 ಮತ್ತು ಮಹಿಳೆಯರು 7,482 ಇದ್ದಾರೆ. ಯುಜಿಸಿ ಅರ್ಹತೆ ಇರುವ ಅಂದರೆ ಪಿಎಚ್‌ಡಿ ಮತ್ತು ಎಂಫಿಲ್ ಮಾಡಿರುವ ಉಪನ್ಯಾಸಕರಿಗೆ ಮಾಸಿಕ ರೂ. 13,000 ಮತ್ತು ಇತರರಿಗೆ ಮಾಸಿಕ ರೂ. 11,000 ವೇತನ ನೀಡಲಾಗುತ್ತಿದೆ. ಈ ವೇತನವನ್ನು ಗೌರವಧನದ ರೂಪದಲ್ಲಿ ನೀಡುವುದರಿಂದ, ಉಪನ್ಯಾಸಕರಿಗೆ ಕೆಲಸ ಲಭ್ಯವಿದ್ದಾಗ ಮಾತ್ರವೇ ವೇತನ ದೊರೆಯುತ್ತದೆ. ವರ್ಷದಲ್ಲಿ ಒಂಬತ್ತು ಅಥವಾ ಹತ್ತು ತಿಂಗಳ ವೇತನ ಮಾತ್ರ ದೊರೆಯುತ್ತದೆ. ಇಎಸ್‌ಐ, ಭವಿಷ್ಯನಿಧಿ, ಗ್ರಾಚ್ಯುಯಿಟಿ ಮುಂತಾದ ಯಾವುದೇ ಸೇವಾ ಸೌಲಭ್ಯಗಳು ಲಭ್ಯವಾಗುವುದಿಲ್ಲ. ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅತಿಥಿ ಉಪನ್ಯಾಸಕರನ್ನೇ ನೇಮಿಸಲಾಗುತ್ತಿದ್ದು ಕೆಲವು ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಾಸಿಕ ವೇತನವನ್ನು ನೀಡಲಾಗುತ್ತಿದೆ. ಈ ಬೋಧಕರಿಗೂ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ ಎನ್ನುವುದೂ ಚಿಂತೆಗೀಡುಮಾಡುವ ವಿಚಾರವೇ ಆಗಿದೆ. ವರ್ಷದಲ್ಲಿ ಕೆಲವು ತಿಂಗಳ ಕಾಲ ವಾರದಲ್ಲಿ ಮೂರು ನಾಲ್ಕು ದಿನಗಳು ಮಾತ್ರ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು ಖಾಯಂ ಉಪನ್ಯಾಸಕರಂತೆ ವಾರದಲ್ಲಿ ಕನಿಷ್ಠ 16 ರಿಂದ 20 ಗಂಟೆಗಳ ಬೋಧನೆ ಮಾಡದಿರುವುದರಿಂದ ಇವರನ್ನು ಖಾಯಂಗೊಳಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ತಮ್ಮ ಬೋಧನಾ ಕಾರ್ಯದೊಂದಿಗೆ ಪರೀಕ್ಷಾ ಕಾರ್ಯ, ಮೌಲ್ಯಮಾಪನ, ನ್ಯಾಕ್ ಕಾರ್ಯಗಳು, ಜಾಗೃತದಳದ ಕಾರ್ಯ ಹೀಗೆ ಇತರ ಕೆಲಸಗಳನ್ನೂ ನಿಭಾಯಿಸಬೇಕಾದ ಅತಿಥಿ ಉಪನ್ಯಾಸಕರು ಅಗತ್ಯಕ್ಕಿಂತಲೂ ಹೆಚ್ಚಿನ ದುಡಿಮೆಯನ್ನೇ ಮಾಡುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯನ್ನು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಅಧಿಕೃತವಾಗಿ ಮಾನ್ಯ ಮಾಡಿದೆ. ಆದರೆ ಬೋಧಕ ವೃತ್ತಿಯ ವೇತನಶ್ರೇಣಿಯಲ್ಲಿ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.

ವಿಶ್ವವಿದ್ಯಾನಿಲಯಗಳ, ಕಾಲೇಜುಗಳ ಖಾಯಂ ಉಪನ್ಯಾಸಕರು ಒಂದು ಲಕ್ಷ, ಒಂದೂವರೆ ಲಕ್ಷ ವೇತನ ಪಡೆದರೆ, ಅಷ್ಟೇ ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರು 50 ಸಾವಿರಕ್ಕೆ ದುಡಿಯಬೇಕಿದೆ. ಇಷ್ಟೇ ಕೆಲಸ ನಿಭಾಯಿಸುವ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೇವಲ 11 ಅಥವಾ 13 ಸಾವಿರ ರೂಗಳ ವೇತನವನ್ನಷ್ಟೇ ಪಡೆಯುತ್ತಿದ್ದಾರೆ. ಇಂದು ಮುಷ್ಕರ ನಿರತರಾಗಿರುವ 14 ಸಾವಿರ ಅತಿಥಿ ಉಪನ್ಯಾಸಕರ ಪೈಕಿ ಬಹುಪಾಲು ಕುಟುಂಬ ಹೊಂದಿದವರೇ ಆಗಿದ್ದಾರೆ. 20 ವರ್ಷಗಳಿಂದಲೂ ಇದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬೋಧಕ ಸಿಬ್ಬಂದಿಯ ಕೌಶಲಾಭಿವೃದ್ಧಿಯ ಯಾವುದೇ ಕ್ರಮಗಳನ್ನು ಸರಕಾರವಾಗಲೀ, ವಿಶ್ವವಿದ್ಯಾನಿಲಯಗಳಾಗಲೀ ರೂಪಿಸದೆ ಇರುವುದರಿಂದ, ಈ ಉಪನ್ಯಾಸಕರಲ್ಲಿ ಅನೇಕರಿಗೆ ಖಾಸಗಿ ಕೋಚಿಂಗ್ ಸೆಂಟರ್ ಗಳನ್ನು ಆಶ್ರಯಿಸುವುದೂ ದುಸ್ತರವಾಗುತ್ತದೆ. ನಿವೃತ್ತಿಯ ಅಂಚಿನಲ್ಲಿರುವ ನೂರಾರು ಉಪನ್ಯಾಸಕರು ಇಂದು ಅನಿಶ್ಚಿತ ಭವಿಷ್ಯ ಎದುರಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನೂರಾರು ಖಾಸಗಿ ಕಾಲೇಜುಗಳನ್ನು ಮುಚ್ಚಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ನೌಕರಿ ಕಳೆದುಕೊಂಡು, ಸಣ್ಣ ವ್ಯಾಪಾರದಲ್ಲಿ ತೊಡಗಿರುವುದನ್ನೂ ಕಂಡಿದ್ದೇವೆ. 90ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್‌ಗೆ ಬಲಿಯಾದರೆ, 15 ಶಿಕ್ಷಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. 40 ಶಿಕ್ಷಕರು ತಮ್ಮ ಔಷಧಿ ವೆಚ್ಚವನ್ನು ಭರಿಸಲಾಗದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸರಕಾರ ನಿರ್ಲಿಪ್ತವಾಗಿದೆ.

ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೆ ಇದೂ ಒಂದು ಸಾಕ್ಷಿ ಎನ್ನಬಹುದು. 14 ಸಾವಿರ ಶಿಕ್ಷಕರು ಎಂದರೆ ಸರಾಸರಿ ಕನಿಷ್ಠ 14 ಸಾವಿರ ಕುಟುಂಬಗಳಲ್ಲವೇ? ಈ ಕುಟುಂಬಗಳನ್ನು ನಿರ್ವಹಿಸುವುದಾದರೂ ಹೇಗೆ, ಅವರ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವುದು ಹೇಗೆ? ಇವರಲ್ಲಿ ಎಷ್ಟು ಜನ ಉಪನ್ಯಾಸಕರು ಸರಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ? ಈ ಎಲ್ಲ ಜಟಿಲ ಪ್ರಶ್ನೆಗಳು ಈ ಸಂದರ್ಭದಲ್ಲಿ ಚರ್ಚೆಗೊಳಗಾಗಬೇಕಿದೆ. ಕಳೆದ ವರ್ಷ ಕೋವಿಡ್ ಸಂಕಷ್ಟದ ನಡುವೆಯೇ ರಾಜ್ಯ ಸರಕಾರ ಸರಕಾರಿ ಶಾಲೆಗಳಿಗೆ 18 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷ 57 ಸಾವಿರ ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ವಿಶ್ವವಿದ್ಯಾನಿಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆ ತೀವ್ರವಾಗಿದ್ದು ಅನೇಕ ಪಠ್ಯಗಳಿಗೆ ಬೋಧಕರೇ ಲಭ್ಯವಾಗುತ್ತಿಲ್ಲ. ಇದೇ ವೇಳೆ ನಿರುದ್ಯೋಗ ಪದವೀಧರರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೂ ಸರಕಾರಗಳು ಖಾಯಂ ನೌಕರಿ ನೀಡಲು ಮುಂದಾಗುತ್ತಿಲ್ಲ. ಇತ್ತ ಗುತ್ತಿಗೆ ಆಧಾರದ ಮೇಲೆ ನೇಮಿಸಲ್ಪಡುವ ಉಪನ್ಯಾಸಕರಿಗೆ, ಶಿಕ್ಷಕರಿಗೆ ದಿನಗೂಲಿ ವೇತನಕ್ಕಿಂತಲೂ ಕಡಿಮೆ ವೇತನ ನೀಡುವ ಮೂಲಕ ಶೋಷಣೆ ಮಾಡುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಾರ್ಪೊರೇಟ್ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿರುವಂತೆಲ್ಲಾ ಈ ಬೋಧಕರ ಸಮಸ್ಯೆ ಇನ್ನೂ ಬಿಗಡಾಯಿಸುತ್ತಲೇ ಹೋಗುತ್ತದೆ.

ಶಿಕ್ಷಣ ವ್ಯವಸ್ಥೆ ಒಂದು ಸ್ವಸ್ಥ ಸಮಾಜದ ತಳಪಾಯವನ್ನು ನಿರ್ಮಿಸುತ್ತದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರು ಸಮಾಜವನ್ನು ಕಟ್ಟುವ ಕಾಯಕದಲ್ಲಿ ತೊಡಗಿರುತ್ತಾರೆ. ಇಲ್ಲಿ ಕಂಡುಬರಬಹುದಾದ ಅದಕ್ಷತೆ, ಅಪ್ರಾಮಾಣಿಕತೆ, ಅಶಿಸ್ತು ಮುಂತಾದ ಅಪವಾದಗಳು ಸಾರ್ವತ್ರಿಕವಾದ ಲಕ್ಷಣಗಳಾದ್ದರಿಂದ ಇವುಗಳನ್ನು ಬದಿಗಿಟ್ಟು ಯೋಚಿಸಬೇಕಾಗುತ್ತದೆ. ಮಕ್ಕಳಿಗೆ ಸುಭದ್ರ ಭವಿಷ್ಯವನ್ನು ರೂಪಿಸಲು ನಿತ್ಯ ದುಡಿಯುವ ಶಿಕ್ಷಕರಿಗೆ ತಮ್ಮ ಬದುಕೇ ಅತಂತ್ರ ಸ್ಥಿತಿಯಲ್ಲಿದ್ದರೆ, ಉತ್ತಮ ಶಿಕ್ಷಣ ಅಥವಾ ಬೋಧನೆಯನ್ನು ಹೇಗೆ ನಿರೀಕ್ಷಿಸಲಾದೀತು? ಈ ವರ್ಗ ಎರಡು ದಶಕಗಳಿಂದ ಇದೇ ಅನಿಶ್ಚಿತತೆಯನ್ನು ಎದುರಿಸುತ್ತಿದೆ, ನೂತನ ಶಿಕ್ಷಣ ನೀತಿ ಈ ಅನಿಶ್ಚಿತತೆಯನ್ನು ಮತ್ತಷ್ಟು ತೀವ್ರಗೊಳಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)