varthabharthi


ವಿಶೇಷ-ವರದಿಗಳು

‘ಬುಲ್ಲಿ ಬಾಯ್’ ಕೇವಲ ಸೈಬರ್ ಕ್ರೈಮ್ ಎಂದು ಪರಿಗಣಿಸಲು ಸಾಧ್ಯವೇ?

ವಾರ್ತಾ ಭಾರತಿ : 9 Jan, 2022
ಡಾ. ಎನ್.ಸಿ. ಅಸ್ತಾನ

ಗಿಟ್‌ಹಬ್ ವೇದಿಕೆಯಲ್ಲಿ ‘ಬುಲ್ಲಿ ಬಾಯ್’ ಎಂಬ ಆ್ಯಪ್‌ನಲ್ಲಿ ಮುಸ್ಲಿಮ್ ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕುವ ಮೂಲಕ ಅವರ ಘನತೆ ಮತ್ತು ವ್ಯಕ್ತಿತ್ವವನ್ನು ಅವಮಾನಿಸುವ ಕೃತ್ಯ ನಡೆಯಿತು. ಈ ಬಗ್ಗೆ ದಿಲ್ಲಿ ಮತ್ತು ಮುಂಬೈಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು ಹಾಗೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ ‘ಸುಲ್ಲಿ ಡೀಲ್ಸ್’ ಎಂಬ ಆ್ಯಪ್‌ನಲ್ಲಿ ಬಹುತೇಕ ಮುಸ್ಲಿಮ್ ಮಹಿಳೆಯರ ಸಾರ್ವಜನಿಕವಾಗಿ ಲಭ್ಯವಿರುವ ಫೋಟೋಗಳನ್ನು ಪಡೆದುಕೊಂಡು ಪ್ರೊಫೈಲ್ ರಚಿಸಿ ‘ಈ ದಿನದ ವ್ಯವಹಾರ’(ಡೀಲ್ಸ್ ಆಫ್ ದಿ ಡೇ) ಎಂದು ಅಡಿಬರಹ ನೀಡಲಾಗಿತ್ತು. ಈ ಬಗ್ಗೆ ತೀವ್ರ ಖಂಡನೆ, ಪ್ರತಿಭಟನೆ ವ್ಯಕ್ತವಾಗಿ 2 ಎಫ್‌ಐಆರ್ ದಾಖಲಾದರೂ ಇದುವರೆಗೂ ಯಾವುದೇ ಬಂಧನ ನಡೆದಿಲ್ಲ ಎಂದು 2021ರ ಅಕ್ಟೋಬರ್ 30ರಂದು ‘ದಿ ಇಂಟರ್‌ನೆಟ್ ಫ್ರೀಡಂ ಫೌಂಡೇಷನ್’(ಐಎಫ್‌ಎಫ್) ವರದಿ ಮಾಡಿದೆ. ಇನ್ನೂ ಅವರನ್ನು ಬಂಧಿಸದಿರುವುದು ಆಶ್ಚರ್ಯವೇನಲ್ಲ.

ಸುಲ್ಲಿ, ಬುಲ್ಲಿ ಮುಂತಾದ ಪದಗಳು ಮುಸ್ಲಿಮ್ ಮಹಿಳೆಯರನ್ನು ಹೀಯಾಳಿಸುವ ಮುಲ್ಲಿ ಪದದ ಸ್ಪಷ್ಟ ವಿರೂಪಗಳಾಗಿವೆ. ಹೀಗೆ ವಿರೂಪಗೊಳಿಸಿದ ಪದವನ್ನು ಬಳಸಿರುವುದಕ್ಕೂ ಕಾರಣವಿದೆ. ಒಂದು ವೇಳೆ ಆನ್‌ಲೈನ್ ವೇದಿಕೆ ಈ ಪದದ ಅರ್ಥವನ್ನು ಗ್ರಾಮ್ಯ ಅರ್ಥಕೋಶ (ಗ್ರಾಮ್ಯ ಪದ ಮತ್ತು ನುಡಿಗಟ್ಟುಗಳ ಅರ್ಥಕೋಶ)ದಲ್ಲಿ ಹುಡುಕಿ, ಈ ವಿಷಯವನ್ನು ಅಪ್‌ಲೋಡ್ ಮಾಡಲು ನಿರಾಕರಿಸಬಾರದು ಎಂಬುದು ಇದರ ಉದ್ದೇಶವಾಗಿದೆ.

ಬುಲ್ಲಿ ಬಾಯ್ ಮತ್ತು ಸುಲ್ಲಿ ಡೀಲ್ಸ್‌ಗಳನ್ನು ಕೇವಲ ಸೈಬರ್‌ಕ್ರೈಮ್ ಎಂದು ಪರಿಗಣಿಸುವಂತಿಲ್ಲ ಅಥವಾ ಕಿಕ್(ಕ್ಷಣಿಕ ಉಮೇದಿಗಾಗಿ) ಪಡೆಯಲು ವಿಕೃತ ಮನಸ್ಸಿನ ಕೆಲವು ವ್ಯಕ್ತಿಗಳು ಮಾಡುವ ಕೈಚಳಕವಲ್ಲ. ಇದು ಕಿಕ್‌ಗಾಗಿ ಮಾಡುವ ಕಾರ್ಯವಾಗಿದ್ದರೆ ಅವರು ಬೇರೆಡೆಯ ಮಹಿಳೆಯರನ್ನೂ ಸೇರಿಸಲು ತಮ್ಮ ನೆಲೆಯನ್ನು ವಿಸ್ತರಿಸುತ್ತಿದ್ದರು. ಹೆಚ್ಚಿನವರು ಮುಸ್ಲಿಮ್ ಮಹಿಳೆಯರಾದ್ದರಿಂದ ಇಲ್ಲಿನ ಉದ್ದೇಶವೆಂದರೆ ಅವರನ್ನು ಹೀನೈಸುವುದು ಮತ್ತು ಅವಮಾನಿಸುವುದು ಎಂಬುದು ಸ್ಪಷ್ಟವಾಗಿದೆ.

ಇಂದಿನ ಭಾರತದಲ್ಲಿ ಕೋಮು ದ್ವೇಷ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಹರಿದ್ವಾರದಲ್ಲಿ ನಡೆದ ಧರ್ಮಸಂಸದ್‌ನಂತಹ ಬಹಿರಂಗ ವೇದಿಕೆಯಲ್ಲಿ ಮುಸ್ಲಿಮರ ನರಮೇಧಕ್ಕೆ ಬಹಿರಂಗ ಕರೆ ನೀಡಲಾಗುತ್ತಿದೆ. ಆದರೆ, ಭಾರತೀಯ ಮುಸ್ಲಿಮರನ್ನು ತೊಡೆದುಹಾಕುವ ತಮ್ಮ ಉತ್ಕಟ ಬಯಕೆಯ ಹೊರತಾಗಿಯೂ 200 ಮಿಲಿಯನ್ ಜನರನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂಬುದು ದ್ವೇಷ ಪ್ರಸಾರಕರು ಅರಿತಿದ್ದಾರೆ. ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಣಾಂತಿಕ ಸಂಘರ್ಷ ಎಂದು ದಾಖಲಾಗಿರುವ 2ನೇ ವಿಶ್ವಯುದ್ಧದಲ್ಲೂ, ಸುಮಾರು 6 ವರ್ಷದ ಯುದ್ಧದಲ್ಲಿ 85 ಮಿಲಿಯನ್‌ಗಿಂತ ಕಡಿಮೆ ಮಂದಿ ಹತರಾಗಿದ್ದರು.

ಆದರೂ, ಪದೇ ಪದೇ 200 ಮಂದಿಯನ್ನು ಅವಮಾನಿಸಿ ಹೀಯಾಳಿಸಲು ಸಾಧ್ಯ ಎಂಬುದು ಅವರಿಗೆ ತಿಳಿದಿದೆ. ಸೋತವರನ್ನು ಸಾರಾಸಗಟಾಗಿ ಸಾಯಿಸುವ ಬದಲು ಅವರನ್ನು ಅವಮಾನಿಸುವುದು ಸಂತೋಷದ ವಿಷಯವಾಗಿದೆ ಮತ್ತು ಸೋತವರಿಗೆ ಅವಮಾನವು ಸಾವಿಗಿಂತ ಕೆಟ್ಟದಾಗಿದೆ ಎಂಬುದೂ ಅವರಿಗೆ ತಿಳಿದಿದೆ. ಇಂತಹ ಘಟನೆಗಳು ಮುಸ್ಲಿಮರನ್ನು ಅವಮಾನಿಸುವ, ಕೀಳಂದಾಜಿಸುವ, ಅವರ ಘನತೆ ಮತ್ತು ಆತ್ಮಗೌರವಕ್ಕೆ ಘಾಸಿ ಎಸಗುವ ಕುಟಿಲ ತಂತ್ರವಾಗಿದ್ದು, ಹಿಂದುತ್ವ ಸಿದ್ಧಾಂತದ ಪ್ರಕಾರ ‘ಐತಿಹಾಸಿಕವಾಗಿ ನೆಲೆಸುವ ಹಕ್ಕು ಇಲ್ಲದ ಭೂಮಿಯಲ್ಲಿ ಬಹುಸಂಖ್ಯಾತರ ಕರುಣೆಯಿಂದ ಬದುಕುತ್ತಿರುವ ಸಂಪೂರ್ಣ ಸೋತುಹೋದ ಜನತೆ’ ಎಂದು ತಮ್ಮ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತೆ ಮಾಡುವ ಉದ್ದೇಶ ಇದರ ಹಿಂದೆ ಇದೆ.

ಈ ಎಲ್ಲಾ ದ್ವೇಷ ಮತ್ತು ಅವಮಾನಿಸುವ ಅಭಿಯಾನದ ಅಂತಿಮ ಉದ್ದೇಶ ಎಂದರೆ, ಮುಸ್ಲಿಮರನ್ನು ಒಂದು ರೀತಿಯ ಸಾಮಾಜಿಕ ಸೋಲನ್ನು ಬಲವಂತವಾಗಿ ಒಪ್ಪಿಕೊಳ್ಳುವ ಹಂತಕ್ಕೆ ಇಳಿಸುವುದಾಗಿದೆ. ‘ಇತರ’ ಪ್ರಕ್ರಿಯೆಯೊಂದಿಗೆ ಪ್ರಾರಂಭಿಸಿದ ಬಳಿಕ ಮೊದಲು ಅವರನ್ನು 2ನೇ ದರ್ಜೆಯ ನಾಗರಿಕ ಸ್ಥಾನಮಾನವನ್ನು ಒಪ್ಪ್ಪುವಂತೆ ಮತ್ತು ಅಂತಿಮವಾಗಿ ಎಲ್ಲಿಯೂ ಸಲ್ಲದ ಜನರು ಎಂಬ ಸ್ಥಾನಮಾನವನ್ನು ಒಪ್ಪಲು ಬಲವಂತಗೊಳಿಸುವ ಯೋಜನೆಯಿದು.

ಸ್ವಾಭಿಮಾನ, ಘನತೆ, ಗೌರವದಿಂದ ಬದುಕುವ ಅವರ ಇಚ್ಛೆಯನ್ನು ಕಡಿದು ಹಾಕುವುದು ಇವರ ಮಹಾ ಉದ್ದೇಶವಾಗಿದೆ. ಸುಶಿಕ್ಷಿತ ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸುವ ಹಿಂದೆ ಒಂದು ಸ್ಪಷ್ಟ ಕಾರ್ಯತಂತ್ರವಿದೆ. ಮಹಾಭಾರತದಲ್ಲಿ ಜೂಜಿನಲ್ಲಿ ಸೋತ ಪಾಂಡವರ ಪತ್ನಿ ದ್ರೌಪದಿಯನ್ನು ಸಭೆಗೆ ಕರೆದು ಅವಮಾನಿಸುವ ಮೂಲಕ ಪಾಂಡವರ ಗಂಡಸ್ತನಕ್ಕೆ ಅವಮಾನ ಮಾಡುವುದು ಕೌರವರ ಉದ್ದೇಶವಾಗಿತ್ತು. ಹೀಗೆ ಮಾಡುವುದು ಸರಿಯಲ್ಲ ಎಂದು ದ್ರೌಪದಿ ಹೇಳಿದಾಗ ‘‘ನೀನು ನಮ್ಮ ದಾಸಿ. ದಾಸಿಗೆ ಯಾವುದೇ ಗೌರವವಿಲ್ಲ’’ ಎಂದು ದುರ್ಯೋಧನ ಉತ್ತರಿಸುತ್ತಾನೆ. ಹೀಗೆ ಮೊದಲು ಅವಳ ಘನತೆಯನ್ನು ಅಪಹರಿಸಲಾಗುತ್ತದೆ. ನಂತರದ ದೈಹಿಕ ವಸ್ತ್ರಾಪಹರಣ ಕೇವಲ ಔಪಚಾರಿಕವಾಗಿತ್ತು.

ಆಧುನಿಕ ಯುಗದ ದ್ವೇಷ ಪ್ರಸಾರಕರೂ ಇದನ್ನೇ ಮುಸ್ಲಿಮರಿಗೆ ಮಾಡುತ್ತಿದ್ದಾರೆ.ಇದು ಪತ್ರಕರ್ತರು, ಕಾರ್ಯಕರ್ತರು ಮತ್ತು ವಿಶೇಷವಾಗಿ ಸುಶಿಕ್ಷಿತ ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸುವ ಬಗೆಯಲ್ಲ. ಉತ್ತಮ ಸ್ಥಾನಮಾನದ, ಸುಶಿಕ್ಷಿತ ಮುಸ್ಲಿಮ್ ಮಹಿಳೆಯರನ್ನು ಅವಮಾನಿಸುವ ಮೂಲಕ ಇತರ ಎಲ್ಲಾ ಮುಸ್ಲಿಮರಿಗೂ ಸಂದೇಶ ಕಳುಹಿಸುವುದು(ಇಂತಹ ಮಹಿಳೆಯರ ಗೌರವವನ್ನೇ ಉಲ್ಲಂಘಿಸಬಹುದಾದರೆ ಇತರ ಸಾಮಾನ್ಯ ಮುಸ್ಲಿಮ್ ಮಹಿಳೆಯರು ಯಾವ ಲೆಕ್ಕ? ಎಂಬ ಸಂದೇಶ). ಆದ್ದರಿಂದಲೇ ಸುಲ್ಲೀ ಡೀಲ್ಸ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ಅಥವಾ ಹೋರಾಟಗಳಲ್ಲಿ ಶಾಮೀಲಾಗದ ಮುಸ್ಲಿಮ್ ಮಹಿಳಾ ಪೈಲಟ್‌ಗಳನ್ನು ಗುರಿಯಾಗಿಸಲಾಗಿತ್ತು.

ವಾಸ್ತವವಾಗಿ ಇದು, ಭಯೋತ್ಪಾದಕರು ಮಾಡುವ ರೀತಿಯ ‘ಸಂಕಲ್ಪದ ಮೇಲಿನ ಯುದ್ಧವಾಗಿದೆ.’ ಹೇಗೆ ಹೊಡೆಯಬೇಕು ಮತ್ತು ಎಲ್ಲಿಗೆ ಹೊಡೆದರೆ ಹೆಚ್ಚಿನ ನೋವಾಗುತ್ತದೆ ಎಂಬುದು ಅವರಿಗೆ ಗೊತ್ತು. ಭಯೋತ್ಪಾದಕರೂ ಉದ್ದೇಶಿತ ದೇಶದ ಸಂಕಲ್ಪದ ಮೇಲೆ ದಾಳಿ ಮಾಡುತ್ತಾರೆ. ನೂರಾರು ಬಾಂಬ್ ಸ್ಫೋಟಿಸಿದರೂ ಒಂದು ದೇಶವನ್ನು ತಮ್ಮ ನಿಯಂತ್ರಣಕ್ಕೆ ತರಲಾಗದು ಎಂಬುದು ಅವರಿಗೆ ತಿಳಿದಿದೆ. ಆದರೆ, ಬಾಂಬ್ ಸ್ಫೋಟದಿಂದ ಜನತೆಯ ಮೇಲಾಗುವ ಮಾನಸಿಕ ಪರಿಣಾಮ, ಅವರ ಪ್ರತಿಕ್ರಿಯೆ, ಮುಖ್ಯವಾಗಿ ಮಾಧ್ಯಮದಲ್ಲಿ ಪ್ರಮುಖವಾಗಿರುತ್ತದೆ. ಬಾಂಬ್ ಸ್ಫೋಟದ ಬಳಿಕ ಮಾಧ್ಯಮದಲ್ಲಿ ‘‘ದೇಶವನ್ನು ನಡುಗಿಸಿದ ಬಾಂಬ್‌ಸ್ಫೋಟ’’ ಎಂಬ ಸುದ್ದಿ, ಬಾಂಬ್ ಸ್ಫೋಟದ ವೀಡಿಯೊ ದೃಶ್ಯ, ಗಾಯಗೊಂಡವರ, ಬದುಕುಳಿದವರ ಸಂದರ್ಶನ, ಸ್ಫೋಟದ ಹಿಂದೆ ಇರಬಹುದಾದ ಸಂಘಟನೆಯ ಬಗ್ಗೆ ಊಹಿಸಿ ನಡೆಸುವ ಚರ್ಚೆ, ಬಾಂಬ್‌ನ ವಿನ್ಯಾಸ, ಅದು ಯಾವ ದೇಶದಲ್ಲಿ ತಯಾರಾಗಿದೆ ಎಂಬ ಬಗ್ಗೆ ಚರ್ಚೆ- ಹೀಗೆ ಒಂದು ದೇಶವು ಭಯೋತ್ಪಾದಕರ ಎದುರು ಅಸಹಾಯಕವಾಗಿ ನೆಲಕ್ಕೆ ಒರಗುತ್ತದೆ.

ದೇಶಕ್ಕೆ ಭಯೋತ್ಪಾದಕರ ಬೆಂಕಿಯಿಂದ ಅಲ್ಲ, ಭೀತಿಯಿಂದಾಗಿ ಸೋಲಾಗುತ್ತದೆ. ಭಯೋತ್ಪಾದಕರ ಯೋಜನೆ ಉದ್ದೇಶಿತ ಗುರಿಯ ಮಾನಸಿಕ ಗ್ರಹಿಕೆಯನ್ನು ಬದಲಾಯಿಸುವುದಾಗಿದೆ. ಹರಿದ್ವಾರದ ಧರ್ಮಸಂಸದ್‌ನಲ್ಲೂ ರೂಪಿಸಿದ ಪೂರ್ಣಪ್ರಮಾಣದ ಯೋಜನೆ ಇದೇ ಆಗಿತ್ತು. ಕೆಲವು ಮುಸ್ಲಿಮರು ಬೇಜವಾಬ್ದಾರಿಯ ಹೇಳಿಕೆ ನೀಡುವಂತೆ ಪ್ರಚೋದಿಸುವುದು ಮತ್ತು ಈ ಹೇಳಿಕೆ ಹಿಂದೂಗಳ ವಿರುದ್ಧ ಸೇಡು ತೀರಿಸುವ ಬೆದರಿಕೆ ಎಂದು ಅಪಾರ್ಥ ಕಲ್ಪಿಸುವುದು ಇಲ್ಲಿಯ ಒಂದು ಉದ್ದೇಶವಾಗಿತ್ತು.

ಮುಸ್ಲಿಂ ಮಹಿಳೆಯರ ಘನತೆಯ ಮೇಲಿನ ಈ ಆಕ್ರಮಣವನ್ನು ಎದುರಿಸುವ ಪ್ರಮುಖ ಅಂಶವೆಂದರೆ ದ್ವೇಷ ಪ್ರಸಾರಕರು ಬಯಸುವ ಮಾನಸಿಕ ಪ್ರಯೋಜನ ನಿರಾಕರಿಸುವುದು. ಇಂತಹ ಕೃತ್ಯಗಳಿಂದ ಮುಸ್ಲಿಮ್ ಮಹಿಳೆಯರು ಹತಾಶರಾದರೆ ಮತ್ತು ಎದೆಗುಂದಬೇಕೆಂಬುದು ಅವರ ಆಶಯವಾಗಿದೆ. ಆದರೆ ಉದ್ದೇಶಿತ ಮಹಿಳೆಯರು ಇನ್ನಷ್ಟು ಬಲಿಷ್ಠವಾಗಿ ತಮ್ಮ ಕಾರ್ಯವನ್ನು ಮುಂದುವರಿಸಲು ಅವರಿಗೆ ನೆರವಾಗುವ ಅಗತ್ಯವಿದೆ.

ಇದು ಮತ್ತೊಂದು ರೀತಿಯ ಅಪರಾಧ ಎಂದು ಮಾತ್ರ ಪರಿಗಣಿಸಿದರೆ, ನಾಳೆ ದ್ವೇಷ ಪ್ರಸಾರಕರು ಮುಸ್ಲಿಮ್ ಮಹಿಳೆಯರನ್ನು ಅವಮಾನಿಸುವ ಮತ್ತೊಂದು ಮಾರ್ಗವನ್ನು ಹುಡುಕಬಹುದು. ಎಲ್ಲಾ ವೇದಿಕೆಗಳಲ್ಲೂ ಪ್ರಾಚೀನ ಭಾರತದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ದಣಿವಿಲ್ಲದೆ ಮಾತನಾಡುವ ಎಲ್ಲಾ ರಾಜಕೀಯ ಮುಖಂಡರೂ, ಈ ನಾಡಿನಲ್ಲಿ ಒಬ್ಬಳು ದ್ರೌಪದಿಗೆ ಆದ ಅವಮಾನಕ್ಕೆ ಸೇಡು ತೀರಿಸಲು ಶ್ರೀಕೃಷ್ಣ 18 ಅಕ್ಷೌಹಿಣಿ(49 ಲಕ್ಷ) ಮಂದಿಯನ್ನು ಕೊಂದ ಎಂಬುದನ್ನು ಮರೆಯಬಾರದು. ಕೃಷ್ಣ ಇಚ್ಛಿಸಿದ್ದರೆ ಅಪರಾಧಿ (ದುರ್ಯೋಧನ ಇತ್ಯಾದಿ)ಗೆ ಮಾತ್ರ ಶಿಕ್ಷೆ ನೀಡಬಹುದಿತ್ತು. ಆದರೆ ದೇವೋತ್ತಮನಾಗಿ ಆತ, ಮಹಿಳೆಯನ್ನು ಅವಮಾನಿಸುವುದು ಅಪರಾಧ ಮಾತ್ರವಲ್ಲ, ಪಾಪವೂ ಆಗಿದೆ ಎಂಬ ಸಾಮಾಜಿಕ ಸಂದೇಶ ಪ್ರಸಾರ ಮಾಡಲು ನಿರ್ಧರಿಸಿದ. ಇದು ಭಾರತದ ನೈಜ ಸಂಸ್ಕೃತಿ ಮತ್ತು ನೈತಿಕತೆಯ ಮಾನದಂಡ.

ಪತ್ರಕರ್ತೆ ಅರ್ಫಾ ಖನೂಮ್ ಶೆರ್ವಾನಿ ಉಲ್ಲೇಖಿಸಿದಂತೆ, ‘‘ಅವಮಾನಕ್ಕೆ ಗುರಿಯಾದ ಮಹಿಳೆ ನಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕೆ ನಾವು ಸುಮ್ಮನಿರುವಂತಿಲ್ಲ. ಇಂತಹ ವಿಷಯಗಳು ನಮ್ಮ ಮುಸ್ಲಿಮ್ ಮಹಿಳೆಯರ ವಿರುದ್ಧ ನಡೆಯುತ್ತಿರುವುದು ರಾಷ್ಟ್ರೀಯ ಅವಮಾನದ ವಿಷಯವಾಗಿದೆ. ಇದು ಮತ್ತೊಂದು ಯುಗದಲ್ಲಿ, ಮತ್ತೊಂದು ವಿಧದಲ್ಲಿ ನಡೆದಿರುವ ದ್ರೌಪದಿ ವಸ್ತ್ರಾಪಹರಣವಾಗಿದೆ. ಆದರೂ ಪಾಪ ಅದೇ ಆಗಿದೆ. ನಾವು ಈಗಲೂ ಮೌನವಾಗಿದ್ದರೆ ಮತ್ತು ಅವರು ಸಶಕ್ತವಾಗಿ ನಿಲ್ಲಲು ನೆರವಾಗಲು ವಿಫಲವಾದರೆ ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸದು.’’

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)