ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
ಜಾತಿ ಗಣತಿ, ಜಾತಿ ಸಮಾನತೆ ಮತ್ತು ಜಾತಿ ವಿನಾಶ

ಡಾ.ನಾಗೇಗೌಡ ಕೀಲಾರ ಶಿವಲಿಂಗಯ್ಯ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದವರು. ಪ್ರಸ್ತುತ ಬೆಂಗಳೂರಿನ PES Universityಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾಗೇಗೌಡರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಚಿರಪರಿಚಿತವಾಗಿದ್ದು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಷಯಗಳ ಬಗೆಗೆ ನಿರಂತರವಾಗಿ ಎಚ್ಚರ ಮೂಡಿಸುವ ಕೆಲಸವನ್ನು ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುತ್ತಿದ್ದಾರೆ.
ನಾಗೇಗೌಡ ಕೀಲಾರ ಶಿವಲಿಂಗಯ್ಯ
ಸಾಮಾಜಿಕ ಸಮಾನತೆ ಎನ್ನುವುದು ಅನಿವಾರ್ಯ ಆಶಯ. ನಮ್ಮ ಹುಟ್ಟಿಗೆ ಅಂಟಿಕೊಂಡ ಗುರುತುಗಳು ನಮ್ಮ ಸಾಮುದಾಯಿಕ ಬದುಕನ್ನೂ, ಸ್ಥಾನಮಾನಗಳನ್ನೂ ತೀರ್ಮಾನಿಸಬಾರದು. ಇದಕ್ಕೆ ವ್ಯತಿರಿಕ್ತವಾಗಿರುವ ಚಿಂತನೆಗಳನ್ನು ಮುಲಾಜಿಲ್ಲದೆ ತಿಪ್ಪೆಗೆ ಎಸೆಯಬೇಕು. ಈ ಆಶಯ ಸಾಕಾರಗೊಳ್ಳುವುದು ಮನುಷ್ಯನ ಮನೋಪರಿವರ್ತನೆಯಿಂದ ನಿಧಾನವಾಗಿ ಬೆಳೆಯುವ ಭ್ರಾತೃತ್ವ ಭಾವದಿಂದ ಎನ್ನುವುದು ಒಂದು ವಾದ. ಸಮಾನತೆಯನ್ನು ಘೋಷವಾಕ್ಯ ಮಾಡಿಕೊಂಡಿರುವ ನಾಡಾಳ್ತನವು (ಸ್ಟೇಟ್) ತನ್ನ ಕಾರ್ಯಕ್ರಮಗಳಿಂದ ಅದನ್ನು ಒಂದು ಕಾರ್ಯಸೂಚಿಯಂತೆ ಸಾಧಿಸಬೇಕು ಎನ್ನುವುದು ಇನ್ನೊಂದು ವಾದ. ಇವೆರಡೂ ವಾದಗಳಲ್ಲಿ ಸತ್ಯವಿದೆಯಲ್ಲದೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದರಷ್ಟೇ ಆಶಯವು ಕಾರ್ಯಗತಗೊಳ್ಳುವುದು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು, ಹುಟ್ಟಿಗೆ ಅಂಟಿದ ಗುರುತುಗಳನ್ನು ಮೀರಲು ಮೊಟ್ಟಮೊದಲಿಗೆ ಆ ಗುರುತುಗಳನ್ನು ದಾಖಲಿಸುವ ಕೆಲಸವನ್ನೇ ನಿಲ್ಲಿಸಿ ಬಿಡಬೇಕು ಎಂಬ ವಾದವೂ ಇದೆ. ಜಾತಿ ವಿನಾಶ ಸಾಧ್ಯವಾಗಲು ನಮ್ಮನ್ನು ನಾವು ನಮ್ಮ ಜಾತಿಗಳಿಂದ ಗುರುತಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕೆಂದು ಈ ವಾದವು ಹೇಳುತ್ತದೆ. ಇದನ್ನು ಖಂಡಿಸುವವರು, ತಮ್ಮ ಹುಟ್ಟುಗುರುತಿನ ಕಾರಣಕ್ಕಾಗಿಯೇ ಸಕಲೆಂಟು ಅವಕಾಶಗಳನ್ನು ಅನುಭವಿಸಿದವರ ವಾದವಿದು ಎಂದು ಹೇಳುತ್ತಾರೆ. ಹುಟ್ಟುಗುರುತಿನ ಕಾರಣಕ್ಕಾಗಿಯೇ ಯಾವ ಯಾವ ಸಮುದಾಯಗಳು ಅವಕಾಶಗಳಿಂದ ವಂಚಿತವಾಗಿವೆಯೆಂದು ತಿಳಿಯಲು ಮತ್ತು ಅವುಗಳಿಗೆ ಹಕ್ಕುಬದ್ಧ ಅಧಿಕಾರ, ತೆರಹು (ಸ್ಪೇಸ್) ಸಿಗುವಂತಾಗಲು ಅದು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿದೆಯೆಂದು ಖಾತರಿಯಾಗುವವರೆಗೂ ಜನರು ತಮ್ಮ ತಮ್ಮ ಹುಟ್ಟುಗುರುತುಗಳನ್ನು, ಅದರಲ್ಲೂ ಪ್ರಮುಖವಾಗಿ ಜಾತಿಯನ್ನು ದಾಖಲಿಸುವ ಅಗತ್ಯವಿದೆ ಎಂದವರು ವಾದಿಸುತ್ತಾರೆ.
ಪ್ರಸ್ತುತ ಲೇಖನದಲ್ಲಿ, ಸಮಾನತೆಯನ್ನು ಸಾಧಿಸಲು ನಾಡಾಳ್ತನದ ಕಾರ್ಯಕ್ರಮಗಳ ಭಾಗವಾಗಿ ಜಾತಿ ಗಣತಿಯನ್ನು ವಿಶ್ಲೇಷಿಸುತ್ತ ಅದರ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಅಲ್ಲದೆ, ಜಾತಿ ಗಣತಿಯಿಂದಾಗಿ ಸಮುದಾಯಗಳಲ್ಲಿ ನಡೆಯುವ ಚಟುವಟಿಕೆಗಳು ಹೇಗೆ ಜಾತಿ ವಿನಾಶ ಎಂಬ ಆಶಯವನ್ನು ಈಡೇರಿಸಲು ಪೂರಕವಾಗಿರುತ್ತವೆಯೆಂದೂ ತೋರಿಸಲಾಗಿದೆ. ಈ ಮೂಲಕ, 2021-22ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನಷ್ಟೇ ಅಲ್ಲದೆ ಮಿಕ್ಕೆಲ್ಲ ಜಾತಿಗಳ ಗಣತಿಯೂ, ದಾಖಲಾತಿಯೂ ನಡೆಯಬೇಕೆಂದು ಒತ್ತಾಯಿಸಲಾಗಿದೆ.
ಜನಗಣತಿ ಮತ್ತು ಜಾತಿಗಣತಿ - ಒಂದು ಹಿನ್ನೋಟ
ಚಾಣಕ್ಯನ ಅರ್ಥಶಾಸ್ತ್ರದ ಕಾಲದಿಂದಲೂ ಭಾರತದಲ್ಲಿ ಜನಗಣತಿಯ ಪರಿಕಲ್ಪನೆ ಚಲಾವಣೆಯಲ್ಲಿದೆ.ಅದರ ಭಾಗವಾಗಿ ಮತ್ತು ಕೆಲವೊಮ್ಮೆ ಪ್ರತ್ಯೇಕವಾಗಿ ಜಾತಿಗಳನ್ನು ಗುರುತಿಸುವ ಮತ್ತು ಎಣಿಸುವ ಪ್ರಕ್ರಿಯೆಯೂ ಜಾರಿಯಲ್ಲಿತ್ತು. ಆದರೆ, ಬ್ರಿಟಿಷ್ ವಸಾಹತಾಗಿ ಭಾರತ ಉಪಖಂಡವು ಒಂದು ಆಧುನಿಕ ರಾಷ್ಟ್ರದ ಸ್ವರೂಪವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಜನಗಣತಿಗಳು ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನೂ, ದೃಢ ವ್ಯವಸ್ಥೆಯನ್ನೂ ಹೊಂದಿದ್ದವು. ಈ ಅರ್ಥದಲ್ಲಿ ಭಾರತದ ಮೊಟ್ಟ ಮೊದಲ ಜನಗಣತಿಯು ಬ್ರಿಟಿಷರ ಮುಂದಾಳುತನದಲ್ಲಿ 1871ರಲ್ಲಿ ನಡೆದಿತ್ತು ಎಂದೆನ್ನಬಹುದು. ಜಾತಿ ಗಣತಿಯೂ ಇದರ ಭಾಗವಾಗಿತ್ತು. ಈ ಎರಡು ಗಣತಿಗಳಿಂದ ಭಾರತೀಯರನ್ನು ಅರಿಯುವುದರ ಮೂಲಕ ಅವರ ಮೇಲೆ ಹಿಡಿತ ಸಾಧಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಅಲ್ಲದೆ ಇವು, ಹಳೆಯ ಜಾತಿ ವ್ಯವಸ್ಥೆಗೆ ಹೊಸ ಸ್ವರೂಪವನ್ನಿತ್ತವಲ್ಲದೆ ಕೆಲವೊಮ್ಮೆ ಹೊಸ ಜಾತಿಗಳನ್ನೂ ಸೃಷ್ಟಿಸಿದವು. ಭಾರತೀಯರನ್ನು ಹಿಡಿತಕ್ಕೆ ತೆಗೆದುಕೊಂಡು ಅಧಿಕಾರ ಚಲಾಯಿಸುವುದು ಮೂಲ ಉದ್ದೇಶವಾಗಿದ್ದರೂ ಜಾತಿ ಗಣತಿಯು ಶೂದ್ರರಲ್ಲೂ, ದಲಿತರಲ್ಲೂ ಒಂದು ಸಮಾನ ನಿರ್ದಿಷ್ಟ ಅಸ್ಮಿತೆ ಚಿಗುರುವಂತೆ ಮಾಡಿತು ಹಾಗೂ ಇವರೆಲ್ಲರೂ ಸಂಘಟಿತರಾಗಲು ಪ್ರೇರೇಪಿಸಿತು. ಇದು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಕೆಲವು ಸಕಾರಾತ್ಮಕ ನಡೆಗಳಿಗೂ ದಾರಿ ಮಾಡಿಕೊಟ್ಟಿತು. ಬ್ರಿಟಿಷರಿಂದ ಅರೆ ಸ್ವಾತಂತ್ರ ಪಡೆದಿದ್ದ ರಾಜ ಸಂಸ್ಥಾನಗಳೂ ಹಿಂದುಳಿದ ಜಾತಿಗಳನ್ನು ಮೇಲೆತ್ತುವ, ಅವುಗಳಿಗೆ ಮೀಸಲಾತಿ ನೀಡುವ ಒತ್ತಡಕ್ಕೆ ಬಿದ್ದವು. ಅಂತಹ ಸಮುದಾಯದಿಂದ ಅಂಬೇಡ್ಕರ್‌ರಂತಹ ವ್ಯಕ್ತಿಗಳು ರೂಪುಗೊಳ್ಳುವಲ್ಲಿ ಜಾತಿಗಣತಿಯ ಪರಿಣಾಮದ ಪಾಲೂ ಇತ್ತು ಎಂದರೆ ತಪ್ಪಾಗಲಾರದು.
1871ರಿಂದ 1931ರವರೆಗೂ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನ-ಜಾತಿ ಗಣತಿ ನಡೆಯಿತು. ಅಸಹಕಾರ ಚಳವಳಿಯ ಹೊರತಾಗಿಯೂ ಗಾಂಧಿ 1921ರ ಗಣತಿಯನ್ನು ಸ್ವಾಗತಿಸಿದ್ದರಲ್ಲದೆ ಈ ಪ್ರಕ್ರಿಯೆಗೆ ಬೆಂಬಲ ನೀಡಿರೆಂದು ಜನರಿಗೆ ಕರೆ ನೀಡಿದ್ದರು.ಆದರೆ 1931ರ ಗಣತಿಗೆ ಗಾಂಧಿಯವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ.
ಆ ವರ್ಷದ ಜನವರಿ 11ನೇ ತಾರೀಕನ್ನು ಜನಗಣತಿ ಬಹಿಷ್ಕಾರ ದಿನವನ್ನಾಗಿ ಆಚರಿಸಲು ಅಂದಿನ ಕಾಂಗ್ರೆಸ್ ಕರೆಕೊಟ್ಟಿತ್ತು. ಈ ಮೂಲಕ ವಸಾಹತುಶಾಹಿ ಕಾರ್ಯಸೂಚಿಗಳನ್ನು ವಿರೋಧಿಸುತ್ತಾ ಬ್ರಿಟಿಷರನ್ನು ಮುಜುಗರಕ್ಕೀಡು ಮಾಡಲು ಮುಂದಾಯಿತು. 1941ರಲ್ಲಿ ಜಾತಿ ಗಣತಿ ನಡೆದಿದ್ದರೂ ವರದಿಯನ್ನು ಬ್ರಿಟಿಷ್ ಸರಕಾರ ಬಹಿರಂಗಗೊಳಿಸಿರಲಿಲ್ಲ. ನಂತರ 1948ರಲ್ಲಿ ಭಾರತೀಯ ಜನಗಣತಿ ಕಾಯ್ದೆ ಜಾರಿಗೆ ಬಂತು. ಸ್ವಾತಂತ್ರೋತ್ತರ ಭಾರತದ ಮೊಟ್ಟ ಮೊದಲ ಜನಗಣತಿ, 1951ರ ಜನಗಣತಿ ಎಸ್ಸಿ/ಎಸ್ಟಿ ಮಾಹಿತಿಯನ್ನಷ್ಟೇ ಅಲ್ಲದೆ ಒಬಿಸಿಗೆ ಸೇರಿದವರ ಜಾತಿಗಳನ್ನೂ ದಾಖಲಿಸಿತು.ಆದರೆ, ಬಹಿರಂಗಗೊಂಡ ವರದಿಯಲ್ಲಿ ಒಬಿಸಿಗಳ ಜಾತಿಮಾಹಿತಿ ಇರಲಿಲ್ಲ. ಆದರೆ ಈ ಮಾಹಿತಿಯನ್ನು ಮಂಡಲ್ ಆಯೋಗವನ್ನೂ ಒಳಗೊಂಡಂತೆ ಸಾಮಾಜಿಕ ನ್ಯಾಯದ ಆಧಾರದಲ್ಲಿ ಕಾರ್ಯಕ್ರಮಗಳನ್ನು ಶಿಫಾರಸು ಮಾಡುವ ಕೆಲವು ಆಯೋಗಗಳಿಗೆ ನೀಡಲಾಯಿತು. ಒಬಿಸಿಗಳಿಗೆ ಶೇ.27 ಮೀಸಲಾತಿಯನ್ನು ಮಂಡಲ್ ಆಯೋಗ ಶಿಫಾರಸು ಮಾಡಿದ್ದು ಕೂಡ 1951ರ ಗಣತಿಯ ಹಿನ್ನೆಲೆಯಲ್ಲಿಯೇ! ಅಲ್ಲಿಂದ 2011ರವರೆಗಿನ ಪ್ರತಿ ಹತ್ತು ವರ್ಷದ ಜನಗಣತಿಯು ಕೇವಲ ಎಸ್ಸಿ/ಎಸ್ಟಿ ಜಾತಿಗಣತಿಯನ್ನಷ್ಟೇ ದಾಖಲಿಸುತ್ತ, ಬಹಿರಂಗಪಡಿಸುತ್ತ ಸಾಗಿ ಬಂದಿದೆ. ಹೀಗಿದ್ದೂ, ಎಸ್ಸಿ/ಎಸ್ಟಿಯೇತರ ಇತರ ಹಿಂದುಳಿದ ಜಾತಿಗಳ ಸ್ಥಿತಿಗತಿಗಳ ಕುರಿತು ಪ್ರತ್ಯೇಕ ಅಧ್ಯಯನಗಳು, ಗಣತಿಗಳು ನಡೆದಿವೆ. ಇವುಗಳಲ್ಲಿ ಪ್ರಮುಖವಾದದ್ದು 2011ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್‌ರ ಆಜ್ಞೆಯಂತೆ ನಡೆದ ಎಸ್‌ಇಸಿಸಿ (ಸೋಶಿಯೋ ಎಕನಾಮಿಕ್ ಆ್ಯಂಡ್ ಕಾಸ್ಟ್ ಸೆನ್ಸಸ್) ಗಣತಿ. ಆದರೆ, ಈ ಗಣತಿಯ ಮಾಹಿತಿಯು ಇನ್ನೂ ಬಹಿರಂಗಗೊಂಡಿಲ್ಲ. ಇದರ ವರದಿಯು ಬಹಿರಂಗಗೊಳಿಸಲಾರದಷ್ಟು ಅಸ್ತವ್ಯಸ್ತವಾಗಿದೆ ಎಂಬುದು ಇಂದಿನ ಒಕ್ಕೂಟ ಸರಕಾರದ ಅಂಬೋಣವಾಗಿದೆ. ಇದನ್ನೇ ಉಚ್ಚನ್ಯಾಯಾಲಯಕ್ಕೂ ತಿಳಿಸಿದೆ. ಹೀಗಿದ್ದೂ, ಕೋವಿಡ್ ಕಾರಣಕ್ಕೆ ಮುಂದೂಡಲ್ಪಟ್ಟಿರುವ 2021ರ ಜನಗಣತಿಯಲ್ಲಿ ಜಾತಿಗಣತಿಯು ಏಕಿಲ್ಲ ಎಂದು ಉಚ್ಚ ನ್ಯಾಯಾಲಯ ಕೇಳಿದೆ. ಬಹುತೇಕ ವಿರೋಧ ಪಕ್ಷಗಳು ಹಾಗೂ ಕೆಲವು ಮಿತ್ರ ಪಕ್ಷಗಳು ಕೂಡ ಜಾತಿಗಣತಿಗಾಗಿ ಒಕ್ಕೂಟ ಸರಕಾರವನ್ನು ಒತ್ತಾಯಿಸುತ್ತಿವೆ. ಇದು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಒತ್ತಾಯ ಎಂದನಿಸಿದರೂ ಈ ನಡೆಯು ಒಬಿಸಿಗಳಲ್ಲಿ ಮತ್ತು ಇತರ ಬಲಿಷ್ಠ ಜಾತಿಗಳಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೂ ಹೇಗೆ ಲಾಭದಾಯಕವಾಗಬಲ್ಲದೆಂದು ಈ ಲೇಖನದಲ್ಲಿ ಮುಂದೆ ನೋಡಲಿದ್ದೇವೆ.
ಜಾತಿ ಗಣತಿಯಿಂದ ನಿರೀಕ್ಷಿತ ಉದ್ದೇಶ ಮತ್ತು ಒಳಿತುಗಳು
‘‘ಒಂದು ನ್ಯಾಯಯುತ ಸಮಾಜದಲ್ಲಿ ಸಾಮಾಜಿಕವಾಗಿ ತನಗಿಂತ ಮೇಲಿರುವವರ ಬಗ್ಗೆ ಪೂಜ್ಯಭಾವನೆಯೂ, ಕೆಳಗಿರುವವರ ಬಗ್ಗೆ ನಿಕೃಷ್ಟ ಭಾವನೆಯೂ ಅಳಿದು, ಅದರ ಬದಲಿಗೆ ವ್ಯಕ್ತಿ-ವ್ಯಕ್ತಿಗಳ ನಡುವೆ ಕಾರುಣ್ಯ ಮನೆ ಮಾಡಿರುತ್ತದೆ’’ ಎಂದು ಹೇಳುತ್ತಾರೆ ಅಂಬೇಡ್ಕರ್.ಈ ಪೂಜ್ಯ ಮತ್ತು ನಿಕೃಷ್ಟ ಭಾವನೆಗಳು ಅರಿವು ಮತ್ತು ಪಶ್ಚಾತ್ತಾಪದಿಂದ ಒದಗುವ ಮನೋಪರಿವರ್ತನೆಯಿಂದಷ್ಟೇ ಸಾಧ್ಯವಾಗುವುದಿಲ್ಲ. ಸಮಾಜದಲ್ಲಿ ಒಪ್ಪಿತವಾಗಿರುವ ಮೌಲ್ಯಗಳು ಆ ಸಮಾಜದ ಅಧಿಕಾರ ಕೇಂದ್ರಗಳಿಂದ ಹೊರತಾದವಲ್ಲ. ಹಾಗಾಗಿ, ಪೂಜ್ಯ-ನಿಕೃಷ್ಟ ಭಾವನೆಗಳು ಅಳಿಯಲು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಧಿಕಾರ ಕೇಂದ್ರಗಳಲ್ಲಿ ಸಮಾಜದ ಎಲ್ಲ ಸಮುದಾಯಗಳು ತಮ್ಮ ಜನಸಂಖ್ಯೆಯನುಸಾರ ಪಾಲು ಪಡೆದುಕೊಳ್ಳುವುದೂ ಮುಖ್ಯವಾಗುತ್ತದೆ. ಈ ನಿಟ್ಟಿನಿಂದ ಜಾತಿಗಣತಿಯನ್ನು ಗಮನಿಸಿದರೆ ಅದರ ಉದ್ದೇಶ ಕೇವಲ ಜಾತಿಗಳನ್ನು, ಜಾತಿಗರನ್ನು ಎಣಿಸುವುದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.ಅಂಕಿ-ಅಂಶಗಳ ಆಧಾರದಲ್ಲಿ, ಯಾವ ಯಾವ ಕೆಲಸಗಳಲ್ಲಿ ಯಾವ ಯಾವ ಜಾತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ, ಯಾವ ಯಾವ ಆರ್ಥಿಕ ಶ್ರೇಣಿಗಳಲ್ಲಿ ಯಾವ ಯಾವ ಜಾತಿಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ರಾಷ್ಟ್ರಪ್ರಭುತ್ವದಲ್ಲಿ ಬಗೆಬಗೆಯ ಜಾತಿಗಳು ಹೇಗೆ ಬದುಕುತ್ತಿವೆ ಮತ್ತು ಏನು ಮಾಡುತ್ತಿವೆ ಎಂದು ತಿಳಿದುಕೊಳ್ಳುವುದೇ ಜಾತಿಗಣತಿಯ ನಿಜ ಉದ್ದೇಶವಾಗಿದೆ. ಜಾತಿಗಳೊಳಗೆ ಹಾಗೂ ಜಾತಿ-ಜಾತಿಗಳ ನಡುವೆ ಚಲನಶೀಲತೆಯ ಪ್ರಮಾಣವನ್ನು ಗುರುತಿಸುವುದು ಗಣತಿಯ ತಾತ್ವಿಕತೆಯಾಗಿದೆ.ಇದನ್ನು ತಿಳಿದುಕೊಂಡಾಗ ನಾಡಾಳ್ತನದ ಹಿಂದಿನ ಎಲ್ಲ ಪ್ರಯತ್ನಗಳನ್ನು ಮೀರಿಯೂ ಅವಕಾಶವಂಚಿತವಾದ ಸಮುದಾಯಗಳನ್ನು ಮೇಲೆತ್ತುವ ಸಲುವಾಗಿ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಜಾತಿಗಣತಿಯ ಒಳಿತುಗಳನ್ನು ಮತ್ತಷ್ಟು ವಿವರಿಸುವುದು ಇಲ್ಲಿ ಅಗತ್ಯ.
ಅ) ಮೀಸಲಾತಿ ಮತ್ತು ಇನ್ನಿತರ ನ್ಯಾಯಯುತ ಹಕ್ಕುಗಳನ್ನು ಪಡೆದುಕೊಂಡಿರುವ ಸಮುದಾಯಗಳ ಒಳಗೆ ನಿರ್ಲಕ್ಷಿತ ಜಾತಿಗಳನ್ನು ಗುರುತಿಸಲು ಮತ್ತು ಅವುಗಳನ್ನು ಸಾಮಾಜಿಕ ಚಲನೆಯ ನಿಯಂತ್ರಕ ಸ್ಥಾನಗಳಿಗೆ ಏರಿಸಲು ಜಾತಿಗಣತಿ ಅತ್ಯವಶ್ಯಕವಾಗಿದೆ. ಒಂದು ನಿದರ್ಶನವನ್ನು ನೋಡೋಣ.ಕರ್ನಾಟಕ ರಾಜ್ಯದ ಒಬಿಸಿಗಳನ್ನು ಗುರುತಿಸುವ ಒಕ್ಕೂಟ ಸರಕಾರದ ಪಟ್ಟಿಯಲ್ಲಿ ಸರಿಸುಮಾರು 200 ಜಾತಿಗಳಿವೆ. ರಾಜ್ಯ ಸರಕಾರದ ಶಿಕ್ಷಣ ಮತ್ತು ಉದ್ಯೋಗ ಸಂಸ್ಥೆಗಳಲ್ಲಿ ಈ ಎಲ್ಲ ಜಾತಿಗಳಿಗಾಗಿ ಶೇ.32 ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಅವಕಾಶ ಎಲ್ಲ 200 ಜಾತಿಗಳಿಗೂ ಯೋಗ್ಯಾನುಸಾರ ಸಿಕ್ಕಿದೆಯೇ ಎಂದು ಪ್ರಶ್ನೆ ಹಾಕಿಕೊಂಡರೆ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ.ಕರ್ನಾಟಕದಲ್ಲಿ ಕೆಲವೇ ಜಾತಿಗಳು ಒಬಿಸಿ ಮೀಸಲಾತಿಯ ಸಿಂಹಪಾಲು ಪಡೆದಿರುವುದನ್ನು ನಾವು ಕಾಣಬಹುದು.ಇನ್ನು, ಸಿಂಹಪಾಲು ಪಡೆದ ಜಾತಿಗಳಲ್ಲಿ ಕೆಲವು ನಿರ್ದಿಷ್ಟ ಉಪ-ಜಾತಿಗಳಷ್ಟೇ ಮೀಸಲಾತಿಯ ಲಾಭ ಪಡೆದುಕೊಂಡಿರುವುದು ಕಂಡುಬರುತ್ತದೆ.ಇಂತಹ ಕೊರತೆಗಳನ್ನು ನೀಗಿಸಲು ಜಾತಿಗಣತಿಯಿಂದ ಪಡೆದ ಅಂಕಿ-ಅಂಶಗಳು ಅಳತೆಗೋಲಾಗಿದೆ.
ಆ) ಮಂಡಲ್ ವರದಿಯ ಪ್ರಕಾರ (ಅರ್ಥಾತ್ 1951ರ ಜನಗಣತಿಯ ಪ್ರಕಾರ) ಒಬಿಸಿಗಳ ಸಂಖ್ಯೆ ದೇಶದ ಜನಸಂಖ್ಯೆಯ ಶೇ.52ರಷ್ಟಿದೆ. ಈ ವಿಶಾಲ ಸಮುದಾಯದಿಂದ ಬೆಳೆದ ರಾಜಕೀಯ ನಾಯಕರು ಮಾತ್ರ ಕೇವಲ ಕೆಲವೇ ಕೆಲವು ಜಾತಿಗಳಿಂದ ಬಂದವರಾಗಿದ್ದಾರೆ. ಅಲ್ಲದೆ, ತಮ್ಮ ರಾಜಕೀಯ ಸ್ಥಾನಮಾನವನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ತಮ್ಮ ಜಾತಿಗಳು ನಿಜಕ್ಕೂ ಹಿಂದುಳಿದಿವೆಯೆಂದು ತೋರಿಸುವ ಕಸರತ್ತನ್ನು ಕೆಲವು ನಾಯಕರು ಮಾಡುತ್ತಿದ್ದಾರೆ. ಜಾತಿಗಣತಿಯಿಂದ ತಮ್ಮ ಜಾತಿ ಮತ್ತು ಉಪಜಾತಿಗಳ ಹಿಂದುಳಿದ ಸ್ಥಾನಕ್ಕೆ ಎಲ್ಲಾದರೂ ಕುತ್ತಾಗಬಹುದೆಂಬ ಆತಂಕ ಕೆಲವರಲ್ಲಿದೆ. ಹಾಗಾಗಿ ಜಾತಿಗಣತಿಯು ಸಮುದಾಯವೊಂದರಲ್ಲಿ ನಿಜಕ್ಕೂ ಹಿಂದುಳಿದ ಮತ್ತು ಮುಂದುವರಿದ ಜಾತಿಗಳನ್ನು ಗುರುತಿಸಲು ಹಾಗೂ ಅಧಿಕಾರ ಕೇಂದ್ರಗಳನ್ನು ನ್ಯಾಯಯುತವಾಗಿ ಬದಲಾಯಿಸಲು ಪ್ರೇರಕಶಕ್ತಿಯಾಗಲಿದೆ. ಇದನ್ನು ನಾವು ಎಸ್ಸಿ/ಎಸ್ಟಿ ಒಳಮೀಸಲಾತಿ ಹಕ್ಕೊತ್ತಾಯಗಳಲ್ಲಿ ಕಾಣಬಹುದು. ಈ ಹಕ್ಕೊತ್ತಾಯ ಮತ್ತು ಪೂರಕ ಹೋರಾಟಗಳು ಸಾಧ್ಯವಾದದ್ದು ಜಾತಿಗಣತಿ ಬಿಚ್ಚಿಟ್ಟ ಸತ್ಯಗಳಿಂದಾಗಿಯೇ ಎನ್ನುವುದು ವಿವಾದಾತೀತ ಸಂಗತಿಯಾಗಿದೆ. ಹಾಗಾಗಿ ಜಾತಿಗಣತಿಯು ಜಾತಿಗಳನ್ನಷ್ಟೇ ಅಲ್ಲದೆ ಉಪಜಾತಿಗಳನ್ನೂ ದಾಖಲಿಸುವುದು ಅನಿವಾರ್ಯವಾಗಿದೆ.
ಇ) ಮೇಲಿನ ವಾದದಲ್ಲಿ ನಾವು ಧಾರ್ಮಿಕ ಅಲ್ಪಸಂಖ್ಯಾತರನ್ನೂ ಒಳಗೊಳ್ಳಬೇಕಿದೆ. ಈ ನಾಡಿನ ಜಾತಿ ಏರ್ಪಾಡುಗಳು ಮತಾಂತರದಿಂದ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವಷ್ಟು ಸರಳವಾಗಿಲ್ಲ, ಸಡಿಲವಾಗಿಲ್ಲ. ಇತ್ತೀಚೆಗೆ ಬಹುರೂಪಿ ಪ್ರಕಾಶನದಿಂದ ಬಿಡುಗಡೆಯಾದ, ಪ್ರೊ.ಮುಜಾಫರ್ ಅಸ್ಸಾದಿ ಅವರ ಪುಸ್ತಕ ‘‘ಅಲ್ಪಸಂಖ್ಯಾತರು ಮತ್ತು ಜಾತಿವ್ಯವಸ್ಥೆ’’ಯು ಅಲ್ಪಸಂಖ್ಯಾತರಲ್ಲಿ, ಅದರಲ್ಲೂ ಪ್ರಮುಖವಾಗಿ ಮುಸ್ಲಿಮರಲ್ಲಿ ಜಾತಿ ಶ್ರೇಣೀಕರಣವು ಹೇಗೆ ನೆಲೆಗೊಂಡಿದೆ ಮತ್ತದರ ಕಾರ್ಯವೈಖರಿ ಹೇಗಿದೆಯೆಂದು ತಿಳಿಸುತ್ತದೆ. ಇಂತಹ ಗಂಭೀರ ಸಂಶೋಧನೆಗಳ ಅಗತ್ಯವನ್ನು ಮನಗಾಣುತ್ತಲೇ ಆ ಶೋಧಗಳಿಗೆ ಪೂರಕವಾದ ಮಾಹಿತಿಯನ್ನು ಒಟ್ಟು ಮಾಡುವ ಮತ್ತು ಅದರ ಆಧಾರದಲ್ಲೂ ಸಾಮಾಜಿಕ ನ್ಯಾಯದ ಬೇಡಿಕೆ ಮುಂದಿಡುವ ಅಗತ್ಯವನ್ನೂ ನಾವು ಮನಗಾಣಬೇಕಿದೆ. ಈ ನಿಟ್ಟಿನಲ್ಲಿ, ಧರ್ಮಾತೀತವಾಗಿ ಭಾರತದ ಎಲ್ಲ ಪ್ರಜೆಗಳ ಜಾತಿಗಣತಿಯಾಗಬೇಕಾದದ್ದು ಅವಶ್ಯ.
ಈ) ಜಾತಿಗಣತಿಯು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳಿಗೆ ಹಿಡಿದ ಕೈಗನ್ನಡಿ. ಹಾಗಾಗಿ, ನಿಜಕ್ಕೂ ಹಿಂದುಳಿದ ಜಾತಿ ಮತ್ತು ಉಪಜಾತಿಗಳು ಧರ್ಮಾತೀತವಾಗಿ ಸಂಘಟಿತರಾಗಲು ಜಾತಿಗಣತಿಯು ಪ್ರೇರೇಪಿಸಬಲ್ಲದು.ಇದರಿಂದಾಗಿ ಮತೀಯ ಮೂಲಭೂತವಾದ ಮತ್ತು ಕೋಮುವಾದದ ಸಂಕಥನವು ಉಡುಗಿ ಸಾಮಾಜಿಕ ವಾಸ್ತವದ ಕುರಿತು ಚರ್ಚೆಯೇ ಪ್ರಧಾನ ಸಂಕಥನವಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ನಮ್ಮ ರಾಜಕೀಯ ಪರಿಭಾಷೆಗಳು ವಾಸ್ತವದಲ್ಲಿ ಬೇರುಬಿಟ್ಟು ಸಮಾನತೆೆ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಆಶಯಗಳತ್ತ ಚಾಚಿದ ಅರ್ಥಗಳನ್ನು ಪಡೆದುಕೊಳ್ಳುತ್ತವೆ.
ಉ) ಶಿಕ್ಷಣ ಮತ್ತು ಉದ್ಯೋಗದ ನೇಮಕಾತಿಗಳಲ್ಲಿ ಮೀಸಲಾತಿಯ ಪ್ರಮಾಣ ಶೇ. 50 ದಾಟಬಾರದೆಂದು ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಆರ್ಟಿಕಲ್ 14ಅನ್ನು ಉಲ್ಲೇಖಿಸುತ್ತಾ ತೀರ್ಪು ನೀಡಿತ್ತು. ತಥಾಕಥಿತ ಹಿಂದೂ ಧರ್ಮದಲ್ಲಿರುವ ಒಬಿಸಿ, ಎಸ್ಸಿ, ಎಸ್ಟಿಗಳ ಒಟ್ಟು ಸಂಖ್ಯೆಯು ಭಾರತದ ಜನಸಂಖ್ಯೆಯ ಶೇಕಡ 70 ದಾಟುತ್ತದೆ. ಮೀಸಲಾತಿಗೆ ಅರ್ಹರಾಗಿರುವ ಅಲ್ಪಸಂಖ್ಯಾತರ ಸಂಖ್ಯೆಯನ್ನೂ ಒಳಗೊಂಡರೆ ಇದು ಶೇಕಡ 95 ದಾಟುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಇವರೆಲ್ಲರಿಗೆ ಶೇ.50ರಷ್ಟೇ ಮೀಸಲಾತಿ ನೀಡುವುದು ಸೂಕ್ತವೇ ಎಂಬ ಪ್ರಶ್ನೆ ಹಲವು ವಲಯಗಳಿಂದ ಏಳುತ್ತಲೇ ಇದೆ.ಈಗಾಗಲೇ ಕೆಲವು ರಾಜ್ಯಗಳು ಮೀಸಲಾತಿಯ ಪ್ರಮಾಣವನ್ನು ಹಿಗ್ಗಿಸುವ ಕಸರತ್ತು ನಡೆಸಿದ್ದರೂ ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಮನ್ನಣೆ ನೀಡಲಿಲ್ಲ. ಇದನ್ನು ಸರಿಪಡಿಸುವ ಅಳವಿರುವುದು ಸಂಸತ್ತಿಗೆ. ಆದರೆ, ಮೀಸಲಾತಿ ಹೆಚ್ಚಳಕ್ಕೆ ಪೂರಕವಾದ ಕರಡು ಮಸೂದೆಯನ್ನು ಸಿದ್ಧಪಡಿಸಲು ಸೂಕ್ತ ಮಾಹಿತಿ ಬೇಕಾಗುತ್ತದೆ.ಇದನ್ನು ಜಾತಿಗಣತಿಯು ಒದಗಿಸುತ್ತದೆ.
ಇಲ್ಲಿ ಒಂದು ವಿಷಯದ ಪ್ರಸ್ತಾಪ ಬಹಳ ಮುಖ್ಯ. ಇದು ಮೀಸಲಾತಿಯ ಮೂಲ ಉದ್ದೇಶಕ್ಕೆ ಸಂಬಂಧಿಸಿದ್ದು.2019ರ ಜನವರಿಯಲ್ಲಿ ಒಕ್ಕೂಟ ಸರಕಾರವು ಆರ್ಥಿಕ ಮಾನದಂಡವನ್ನು ಬಳಸಿಕೊಂಡು ಎಸ್ಸಿ, ಎಸ್ಟಿ ಮತ್ತು ಒಬಿಸಿಗೆ ಸೇರದವರಿಗೆ- ಅಂದರೆ, ಸಾಮಾನ್ಯ ವರ್ಗಕ್ಕೆ ಸೇರುವವರಿಗೆ - ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿಯನ್ನು ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ಕಲ್ಪಿಸಿತು (ಇಡಬ್ಲುಎಸ್ ಮೀಸಲಾತಿ).ಇದು ಮೀಸಲಾತಿಯ ಮೂಲ ಉದ್ದೇಶಕ್ಕೆ ತದ್ವಿರುದ್ಧವಾದ ನಡೆಯಾಗಿದೆ. ಮೀಸಲಾತಿಯು ವರ್ಗಕ್ಕೆ ಸಂಬಂಧಿಸಿದ್ದಲ್ಲ ಜಾತಿಗೆ ಸಂಬಂಧಿಸಿದ್ದು. ಸಮಾಜದ ಎಲ್ಲ ಜಾತಿಗರೂ ಈ ದೇಶದ ಸಾರ್ವಜನಿಕ ವಲಯದಲ್ಲಿ ಸರಿಪ್ರಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿರಬೇಕೆಂಬುದು ಮೂಲ ಆಶಯ. ಇದಕ್ಕೆ ಆರ್ಥಿಕತೆಯು ಮಾನದಂಡವಾಗುವುದೇ ಇಲ್ಲ. ಹಣಕಾಸಿನ ಸ್ಥಿತಿಗತಿಯು ಉನ್ನತಗೊಂಡ ಮಾತ್ರಕ್ಕೆ ಸಾಮಾಜಿಕ ಸ್ಥಾನವೂ ಉನ್ನತಗೊಂಡ ಉದಾಹರಣೆಗಳು ಭಾರತದಲ್ಲಿ ಇಲ್ಲ ಎನ್ನುವಷ್ಟು ಕಡಿಮೆ. ದಲಿತ ಎಂಬ ಕಾರಣಕ್ಕೆ ರಾಷ್ಟ್ರಪತಿಗಳ ದೇಗುಲ ಪ್ರವೇಶವನ್ನೇ ಅಶುದ್ಧವೆಂದು ಭಾವಿಸಿದ ಜನರಿರುವ ನಾಡು ನಮ್ಮದು! ಪಂಚಮ ವರ್ಣವನ್ನುಳಿದು ಮಿಕ್ಕ ನಾಲ್ಕು ವರ್ಣಗಳಲ್ಲಿ ಯಾರೇ ಆಗಿರಲಿ, ಅವರ ಸಂಪತ್ತು ಎಷ್ಟೇ ಇರಲಿ, ತಾವು ‘ಭೂಪತಿ’ಗಳಾಗಲು ‘ಭೂಸುರ’ರ ಅಪ್ಪಣೆ ಬೇಕಿತ್ತೆಂದು ಚರಿತ್ರೆ ಸಾರುತ್ತದೆ!ಹಾಗಾಗಿ ಮೀಸಲಾತಿಯು ಜಾತಿ ಶ್ರೇಣೀಕರಣದಿಂದ ಉಂಟಾದ ಅಸಮಾನ ಪ್ರಾತಿನಿಧ್ಯವನ್ನು ಅಡ್ರೆಸ್ ಮಾಡುವ ಉಪಾಯವೇ ಹೊರತು ಆರ್ಥಿಕ ಅಸಮಾನತೆಯನ್ನು ಟ್ಯಾಕಲ್ ಮಾಡುವ ಮಾರ್ಗೋಪಾಯವಲ್ಲ. ಆರ್ಥಿಕ ಅಸಮಾನತೆಯನ್ನು ಮೀಸಲಾತಿಯ ಮೂಲಕ ಸರಿದೂಗಲೂ ಬರುವುದಿಲ್ಲ. ಇದಕ್ಕಾಗಿ ಬೇರೆ ಸ್ವರೂಪದ ಯೋಜನೆಗಳು ಜಾರಿಯಲ್ಲಿವೆಯಲ್ಲದೆ ಅವುಗಳಲ್ಲಿ ಮತ್ತಷ್ಟು ಆಮೂಲಾಗ್ರ ಬದಲಾವಣೆಯ ಅಗತ್ಯವೂ ಇದೆ. ಹಾಗಾಗಿ ಆರ್ಥಿಕ ದುರ್ಬಲತೆ ಎಂಬ ನೆಪವೊಡ್ಡಿ ಒಕ್ಕೂಟ ಸರಕಾರ ಮಾಡಹೊರಟಿರುವುದು ಜನಸಂಖ್ಯೆಯ ಶೇ.3ರಿಂದ 4ರಷ್ಟಿರುವ ಜನರಿಗೆ ಸರಕಾರದ ಅಂಗಸಂಸ್ಥೆಗಳಲ್ಲಿ ಶೇ.10ರಷ್ಟು ಸ್ಥಾನಗಳನ್ನು ಶಾಶ್ವತಗೊಳಿಸುವ ರಾಜಕಾರಣವನ್ನೇ. ಇದು ಜನರನ್ನು ಮಂಗ ಮಾಡುವ ನಡೆ, ಸಂವಿಧಾನದ ಆಶಯಕ್ಕೆ ಬಗೆದ ದ್ರೋಹ. ಮೀಸಲಾತಿಯ ಆಶಯವನ್ನು ಉದ್ದೇಶಪೂರ್ವಕವಾಗಿ ಹೀಗೆ ತಪ್ಪಾಗಿ ಅರ್ಥೈಸಿದ್ದನ್ನು ನಾವು ವಿವಿಧ ಪ್ರವರ್ಗಗಳ ಕೆನೆಪದರವನ್ನು ತೀರ್ಮಾನಿಸುವ ವಾರ್ಷಿಕಾದಾಯ ಮಿತಿಯಲ್ಲೂ ಗುರುತಿಸಬಹುದು.ಆದಾಯ, ಸಂಪತ್ತು ಎಷ್ಟೇ ಇರಲಿ ಅವು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಾಗಿ ಪ್ರಭಾವಿಸುವುದಿಲ್ಲ ಎಂಬುದನ್ನು ನಾವೀಗಾಗಲೇ ಕಂಡಿದ್ದೇವೆ. ಹಾಗಾಗಿ ಒಕ್ಕೂಟ ಸರಕಾರವು ವಾರ್ಷಿಕಾದಾಯದ ಹಿನ್ನೆಲೆಯಲ್ಲಿ ಕೆನೆಪದರವನ್ನು ಗುರುತಿಸುವ ಕೆಲಸವನ್ನು ಮೊದಲು ನಿಲ್ಲಿಸಬೇಕು. ಒಂದು ವೇಳೆ ಆ ಅಳತೆಗೋಲನ್ನು ಬಳಸಲೇಬೇಕು ಎಂದಾದರೆ ಜಾತಿಗಳ ಸಾಮಾಜಿಕ ಸ್ಥಾನಮಾನ ಮತ್ತು ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಆದಾಯ ಮಿತಿ ನಿರ್ಧರಿತವಾಗಬೇಕು.
ಜಾತಿ ಗಣತಿಯಿಂದ ಜಾತಿ ವಿನಾಶದವರೆಗೆ
ಜಾತಿ ಗಣತಿಯಿಂದ ಹಿಂದುಳಿದ ಜಾತಿ ಮತ್ತು ಉಪಜಾತಿಗಳನ್ನು ಗುರುತಿಸುವ ಕೆಲಸವಾಗುತ್ತದೆ ಎಂಬುದೇನೋ ನಿಜ. ಆದರೆ, ಇದು ಜಾತಿ ಹರಳುಗಟ್ಟುವುದಕ್ಕೆ ಹಾಗೂ ಆ ಮೂಲಕ ಜಾತಿ ವ್ಯವಸ್ಥೆಯು ಮತ್ತಷ್ಟು ಬಲಿಷ್ಠಗೊಂಡು ಮುಂದುವರಿಯುವುದಕ್ಕೆ ಎಡೆಮಾಡಿಕೊಡುತ್ತದಲ್ಲವೇ?ಜಾತಿ-ಜಾತಿಗಳ ನಡುವಿನ ಹಗೆತನ ಬೆಳೆಯುತ್ತದಲ್ಲವೇ?ಎಂಬಂತಹ ಪ್ರಶ್ನೆಗಳನ್ನು ಹಲವರು ಎತ್ತುತ್ತಾರೆ.ಹೀಗಾಗಿ ಜಾತಿ ಗಣತಿಯು ಜಾತಿ ವಿನಾಶಕ್ಕೆ ವಿಮುಖವಾದ ನಡೆಯೆಂದೂ ಹೇಳುತ್ತಾರೆ.ಈ ನಿಲುವು ಮೇಲ್ನೋಟಕ್ಕೆ ಅಹುದಹುದೆನ್ನುವಂತೆ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ಇದು ಪ್ರಚಲಿತವಿರುವ ಜಾತಿ ವ್ಯವಸ್ಥೆಯನ್ನು, ಅಧಿಕಾರ ಸಂರಚನೆಯನ್ನು ಮುಂದುವರಿಸುವ ಧ್ವನಿಯನ್ನೇ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ.ಜಾತಿವಿನಾಶವು ಜಾತಿಯ ಅಸ್ತಿತ್ವವನ್ನು ನಿರಾಕರಿಸಿ ಬದುಕುವುದರಿಂದ ಸಾಧ್ಯವಿಲ್ಲ. ಹಾಗೆ ಬದುಕುವುದೂ, ಕಣ್ಣಿದ್ದೂ ಕುರುಡನಂತೆ ನಟಿಸುವುದೂ, ಲೋಕದಲ್ಲಿ ರೋಗವೇ ಇಲ್ಲವೆಂದು ಮದ್ದುಗಳನ್ನು ಕಡೆಗಣಿಸುವುದೂ ಎಲ್ಲವೂ ಒಂದೇ, ಎಲ್ಲವೂ ಮೋಸದ ನಡೆಯೇ. ಜಾತಿ ವಿನಾಶದ ಮೊದಲು ಜಾತಿ ಜಾತಿಗಳ ನಡುವೆ ಸಾಮರಸ್ಯ ಬೆಳೆಯಬೇಕು ಹಾಗೂ ಜಾತಿಜಾತಿಗಳು ಬೆರೆತು ಮಿಶ್ರಜಾತಿಗಳು ಹೆಚ್ಚಬೇಕು. ಸಾಮರಸ್ಯ ಮತ್ತು ಮಿಶ್ರಣವು ಅರ್ಥಪೂರ್ಣವಾಗುವುದು ಎಲ್ಲ ಜಾತಿಗಳಿಗೂ ಸಮಾಜದಲ್ಲಿ ಸಮಾನ ಅವಕಾಶ, ಗೌರವಾದರಗಳು ದಕ್ಕಿದಾಗಲೇ. ಇದು ಸಾಧ್ಯವಾಗದ ಪರಿಸರದಲ್ಲಿ ಜಾತಿ ವಿನಾಶದ ಮಾತು ಕಣ್ಣಿಗೆ ಮಣ್ಣೆರಚುವಂತಹದ್ದು.
ಹಾಗಾದರೆ ಜಾತಿ ಗಣತಿಗೂ, ಜಾತಿ ವಿನಾಶಕ್ಕೂ ನೇರಾನೇರ ಸಂಬಂಧವಿದೆಯೇ? ಈ ಪ್ರಶ್ನೆಯನ್ನು ಮೂರು ಆಯಾಮಗಳಲ್ಲಿ ಉತ್ತರಿಸಬೇಕಾಗುತ್ತದೆ. ಮೊದಲನೆಯದಾಗಿ, ಸದ್ಯಕ್ಕೆ ಜಾತಿ ವಿನಾಶಕ್ಕಿಂತ ತುರ್ತಾಗಿ ಸಾಧ್ಯವಾಗಬೇಕಾದ್ದು ಜಾತಿ ಸಮಾನತೆ ಮತ್ತು ಸಾಮಾಜಿಕ, ಆರ್ಥಿಕ ನ್ಯಾಯ.ಇವು ಸಾಧ್ಯವಾಗದೆ ಜಾತಿ ವಿನಾಶ ಸಾಧ್ಯವಿಲ್ಲ. ಎರಡನೆಯದಾಗಿ, ಬಹುತೇಕ ಜಾತಿಗಳು ಸಮಾಜದ ಚಾಲಕ ಶಕ್ತಿ-ಸ್ಥಾನಗಳನ್ನು ಪಡೆದಾಗ ರೂಪುಗೊಳ್ಳುವ ಸಮೀಕರಣಗಳು, ವ್ಯವಹಾರಗಳು ಜಾತಿ ವಿನಾಶದತ್ತಲೇ ಸಾಗಬಹುದಾದ ಸಾಧ್ಯತೆ. ಉದಾಹರಣೆಗೆ, ಪ್ರಸ್ತುತ ಸಂಖ್ಯಾಧಾರಿತ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಹಿಂದುಳಿದ ಜಾತಿಗಳು ಜಾತಿ ಗಣತಿಯ ಕಾರಣಕ್ಕೆ ಜಾಗೃತವಾದಾಗ ತಮ್ಮ ಹಕ್ಕುಗಳನ್ನು ಪಡೆಯಲು ಇತರ ಜಾತಿಗಳೊಂದಿಗೆ ಹೊಂದಾಣಿಕೆ ಮತ್ತು ಕೂಡಿಕೆಯ ತಂತ್ರಕ್ಕೆ ಮೊರೆ ಹೋಗಬಹುದು. ಆಗ ನೂರಾರು ಜಾತಿಗಳು ಹತ್ತಾರಕ್ಕೆ ಇಳಿಯಬಹುದು. ಜಾತಿ ವಿನಾಶಕ್ಕೆ ಬಹಳ ಪ್ರಶಸ್ತವಾದ ಭೂಮಿಕೆ ಹೀಗೆ ರೂಪುಗೊಳ್ಳುತ್ತದೆ. ಇನ್ನು ಮೂರನೆಯದಾಗಿ, ಜಾತಿ ವಿನಾಶ ಎನ್ನುವುದು ಮಹತ್ ಆಶಯ.ಸಾಮಾಜಿಕ ನಡಾವಳಿಗಳು ಶುರುವಿನಲ್ಲಿ ಎಷ್ಟೇ ಉನ್ನತ ಆದರ್ಶಗಳನ್ನಿಟ್ಟು ಮೊದಲಿಟ್ಟರೂ ಬರುಬರುತ್ತಾ ಅವು ಗುರಿಭ್ರಷ್ಟವಾಗುತ್ತವೆ. ಹಾಗಾಗಿ, ಒಂದು ಉನ್ನತ ಆಶಯದೆಡೆಗೆ ಸಮಾಜವು ಅವಿರತವಾಗಿ ಸಾಗಲು ನಾಡಾಳ್ತನದ ಮುತುವರ್ಜಿ ಹಾಗೂ ಜನಸಂಘಟನೆಗಳ ಒತ್ತಾಸೆ, ಒತ್ತಾಯಗಳು ನಿರಂತರವಾಗಿರಬೇಕು.ಇದು ಸಾಧ್ಯವಾಗಲು ಕೂಡ ಎಲ್ಲ ಜಾತಿಗಳು ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮೊದಲು ಬಲಗೊಳ್ಳಬೇಕಾದದ್ದು ಅತ್ಯವಶ್ಯಕವಾಗಿದೆ.
ಎಚ್ಚರಿಕೆ
ಜಾತಿಗಣತಿ ಬೇಕು ಎನ್ನುತ್ತಲೇ ಪ್ರಸ್ತುತ ಗಣತಿ ವ್ಯವಸ್ಥೆಯಲ್ಲಿರುವ ದೋಷವೊಂದರತ್ತ ಗಮನ ಹರಿಸುವುದೂ ಮುಖ್ಯ. ಗಣತಿಯನ್ನು ಹೇಗೆ ನಡೆಸಲಾಗುತ್ತದೆ ಮತ್ತು ಯಾವೆಲ್ಲ ಪ್ರಶ್ನಾವಳಿಗಳನ್ನು ಜನರಿಗೆ ನೀಡಲಾಗುತ್ತದೆ ಎಂಬ ಸಂಗತಿಗಳು ಗಣತಿಯ ಫಲಿತಾಂಶಗಳನ್ನು ತೀರ್ಮಾನಿಸುತ್ತವೆ. ಇನ್ನೊಂದರ್ಥದಲ್ಲಿ, ಗಣತಿಯ ಒಟ್ಟು ಪ್ರಕ್ರಿಯೆಯ ಹಿಂದೆ ಇದ್ದವರ ಜಾತಿ, ವರ್ಗ ಮತ್ತು ವೈಯಕ್ತಿಕ ಹಿತಾಸಕ್ತಿಗಳು ಗಣತಿಯ ಫಲಿತಗಳನ್ನು ಪ್ರಭಾವಿಸಬಲ್ಲವು ಎಂದು ಹೇಳಬಹುದು.ಈ ಕಾರಣಕ್ಕಾಗಿ ಜಾತಿಗಣತಿಯ ಒಟ್ಟು ಪ್ರಕ್ರಿಯೆಯನ್ನು ಬಹಳ ಎಚ್ಚರಿಕೆಯಿಂದ, ಜಾತಿ-ವರ್ಗ-ವೈಯಕ್ತಿಕ ಹಿತಾಸಕ್ತಿಗಳು ಪ್ರಭಾವಿಸದಂತೆ ನೋಡಿಕೊಳ್ಳಬೇಕು.ಇದು ಸಾಧ್ಯವಾಗಲು, ಜಾತಿ ಅಸಮಾನತೆ ವಿರುದ್ಧ ಹೊರಾಡುತ್ತಾ ಬಂದವರು ಮತ್ತು ಜಾತಿ ವಿನಾಶದ ಧ್ಯೇಯದೆಡೆಗೆ ದುಡಿಯುತ್ತಿರುವವರು ಗಣತಿ ಪ್ರಕ್ರಿಯೆಯ ಪಾಲುದಾರರಾಗಬೇಕು, ಅವರ ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆಯೂ ದೊರೆಯಬೇಕು.ಇಲ್ಲವಾದಲ್ಲಿ ಜಾತಿ ಗಣತಿ ಎನ್ನುವುದು ಆಳುವ ಸರಕಾರಕ್ಕೆ ಚುನಾವಣೆ ಕಾಲದ ಅಸ್ತ್ರವಾಗಿಯೂ, ಬಲಿಷ್ಠ ಜಾತಿಗಳಿಗೆ ತಮ್ಮ ಸಾಮಾಜಿಕ ಹಿಡಿತವನ್ನು ಕಾಪಿಟ್ಟುಕೊಳ್ಳಲೊಂದು ಕುತಂತ್ರವಾಗಿಯೂ ಕೆಡುಬಳಕೆಯಾಗುವ ಅಪಾಯವಿದೆ.
ಹಕ್ಕೊತ್ತಾಯ
ಪ್ರಸ್ತುತ ಲೇಖನದಲ್ಲಿ ಮೊದಲು ಭಾರತದಲ್ಲಿ ಜಾತಿಗಣತಿಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಯಿತು. ನಂತರ ಅದರ ಆಶಯ, ಉದ್ದೇಶ ಮತ್ತು ಮಹತ್ವವನ್ನು ಸಾದರಪಡಿಸಲಾಯಿತು.ಕೊನೆಯಲ್ಲಿ, ಜಾತಿ ಗಣತಿಯಾಗದೆ, ಹಿಂದುಳಿದ ಜಾತಿ ಮತ್ತು ಉಪಜಾತಿಗಳು ಸಂಘಟಿತರಾಗದೆ ಜಾತಿ ವಿನಾಶವು ಸಾಧ್ಯವಿಲ್ಲವೆಂದು ವಾದಿಸಲಾಯಿತು. ಇವೆಲ್ಲದರ ಸಾರಾಂಶ ಇಷ್ಟೇ- ಜಾತಿ ಗಣತಿಯಿಂದ ಜಾತಿಗಳ, ಜಾತಿಗರ ಬದುಕಿನ ವಾಸ್ತವ ಗೊತ್ತಾಗುತ್ತದೆ ಹಾಗೂ ಸಾಮಾಜಿಕ ನ್ಯಾಯ ನೇರ್ಪಡಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ನಕ್ಷೆಯೊದಗುತ್ತದೆ.ಹಾಗಾಗಿ, 2021-22ರ ಜನಗಣತಿಯು ಧರ್ಮಾತೀತವಾಗಿ ಭಾರತದ ಎಲ್ಲ ಜನರ ಜಾತಿ ಗಣತಿಯೂ ಆಗಬೇಕು ಎಂದು ಈ ಲೇಖನ ಒಕ್ಕೂಟ ಸರಕಾರವನ್ನು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಕೈಲಾದಷ್ಟು, ಸಾಧ್ಯವಾದ ರೀತಿಯಲ್ಲಿ ಸರಕಾರವನ್ನು ಒತ್ತಾಯಿಸಬೇಕೆಂದೂ ಓದುಗರಲ್ಲಿ ಕೋರುತ್ತದೆ.ಕಳೆದ 70 ವರ್ಷಗಳಿಂದ ಜಾತಿ ಗಣತಿ ನಡೆಯದೆ ಉಂಟಾದ ಅನ್ಯಾಯವನ್ನು ಸರಿಪಡಿಸಲು ಇದೊಂದು ಸುವರ್ಣ ಅವಕಾಶ. ಈ ಅವಕಾಶವನ್ನೂ ಕೈಚೆಲ್ಲಿ ಕುಳಿತರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಮಾಜಿಕ ಅಸಮಾನತೆ ಕೈಮೀರಿ ಬೆಳೆದು, ಕೆಲವು ಜಾತಿಗಳು ಅಳಿವಿನಂಚಿಗೆ ಸರಿದು ಕಣ್ಮರೆಯಾಗುವ ಅಪಾಯ ಕಟ್ಟಿಟ್ಟ ಬುತ್ತಿ. ಇದು ಆಗದಂತೆ ಎಚ್ಚರ ವಹಿಸುವುದೇ ನಿಜ ದೇಶಭಕ್ತಿ.
ಆರ್ಥಿಕ ದುರ್ಬಲತೆ ಎಂಬ ನೆಪವೊಡ್ಡಿ ಒಕ್ಕೂಟ ಸರಕಾರ ಮಾಡಹೊರಟಿರುವುದು ಜನಸಂಖ್ಯೆಯ ಶೇಕಡ 3ರಿಂದ 4ರಷ್ಟಿರುವ ಜನರಿಗೆ ಸರಕಾರದ ಅಂಗಸಂಸ್ಥೆಗಳಲ್ಲಿ ಶೇಕಡ 10ರಷ್ಟು ಸ್ಥಾನಗಳನ್ನು ಶಾಶ್ವತಗೊಳಿಸುವ ರಾಜಕಾರಣವನ್ನೇ. ಇದು ಜನರನ್ನು ಮಂಗ ಮಾಡುವ ನಡೆ, ಸಂವಿಧಾನದ ಆಶಯಕ್ಕೆ ಬಗೆದ ದ್ರೋಹ. ಮೀಸಲಾತಿಯ ಆಶಯವನ್ನು ಉದ್ದೇಶಪೂರ್ವಕವಾಗಿ ಹೀಗೆ ತಪ್ಪಾಗಿ ಅರ್ಥೈಸಿದ್ದನ್ನು ನಾವು ವಿವಿಧ ಪ್ರವರ್ಗಗಳ ಕೆನೆಪದರವನ್ನು ತೀರ್ಮಾನಿಸುವ ವಾರ್ಷಿಕಾದಾಯ ಮಿತಿಯಲ್ಲೂ ಗುರುತಿಸಬಹುದು.
ಜಾತಿ ಗಣತಿ ಬೇಕು ಎನ್ನುತ್ತಲೇ ಪ್ರಸ್ತುತ ಗಣತಿ ವ್ಯವಸ್ಥೆಯಲ್ಲಿರುವ ದೋಷವೊಂದರತ್ತ ಗಮನ ಹರಿಸುವುದೂ ಮುಖ್ಯ. ಗಣತಿಯನ್ನು ಹೇಗೆ ನಡೆಸಲಾಗುತ್ತದೆ ಮತ್ತು ಯಾವೆಲ್ಲ ಪ್ರಶ್ನಾವಳಿಗಳನ್ನು ಜನರಿಗೆ ನೀಡಲಾಗುತ್ತದೆ ಎಂಬ ಸಂಗತಿಗಳು ಗಣತಿಯ ಫಲಿತಾಂಶಗಳನ್ನು ತೀರ್ಮಾನಿಸುತ್ತವೆ. ಇನ್ನೊಂದರ್ಥದಲ್ಲಿ, ಗಣತಿಯ ಒಟ್ಟು ಪ್ರಕ್ರಿಯೆಯ ಹಿಂದೆ ಇದ್ದವರ ಜಾತಿ, ವರ್ಗ ಮತ್ತು ವೈಯಕ್ತಿಕ ಹಿತಾಸಕ್ತಿಗಳು ಗಣತಿಯ ಫಲಿತಗಳನ್ನು ಪ್ರಭಾವಿಸಬಲ್ಲವು ಎಂದು ಹೇಳಬಹುದು.ಈ ಕಾರಣಕ್ಕಾಗಿ ಜಾತಿಗಣತಿಯ ಒಟ್ಟು ಪ್ರಕ್ರಿಯೆಯನ್ನು ಬಹಳ ಎಚ್ಚರಿಕೆಯಿಂದ, ಜಾತಿ-ವರ್ಗ-ವೈಯಕ್ತಿಕ ಹಿತಾಸಕ್ತಿಗಳು ಪ್ರಭಾವಿಸದಂತೆ ನೋಡಿಕೊಳ್ಳಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ