ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ
‘‘ಬೇವಿನ ಬೀಜವ ಬಿತ್ತಿ...’’

ಕನ್ನಡ ಅಧ್ಯಾಪಕರಾಗಿ ನಿವೃತ್ತರಾದ ಎಚ್.ಎಸ್. ರಾಘವೇಂದ್ರರಾವ್, ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದರು. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾದ ಇವರ ವಿಸ್ತೃತ ಓದು, ಅನ್ಯಶಾಸ್ತ್ರಗಳ ಜೊತೆಗೆ ಸಂಬಂಧಗಳ ಹುಡುಕಾಟ ಹಾಗೂ ಸಂಶೋಧನೆಯ ಪರಿಶ್ರಮಗಳೆಲ್ಲ ಎದ್ದು ಕಾಣುವಂತಹದ್ದು. ತರುತಳೆದ ಪುಷ್ಪ, ಸಂಗಡ, ನಮಸ್ಕಾರ, ಅವಘ, ಇಂದಿನ ಕವಿತೆ, ಸಾಹಿತ್ಯ ಸಂವಾದ, ಭೃಂಗಮಾರ್ಗ, ವಿಶ್ಲೇಷಣೆ, ಮಂಜು ಮಣ್ಣು ಮೌನ, ಕಪ್ಪು ಕವಿತೆ, ಹತ್ತು ದಿಕ್ಕಿನ ಬೆಳಕು, ಕಣ್ಣ ಹನಿಗಳೆ ಕಾಣಿಕೆ, ಚಕ್ರವರ್ತಿಯ ಬಟ್ಟೆಗಳು, ಪ್ಲೇಗ್.. ಇವರ ಕೃತಿಗಳು.
ಎಚ್. ಎಸ್. ರಾಘವೇಂದ್ರ ರಾವ್
ತಕ್ಷಣದ ತೊಡಕುಗಳಿಂದ ಉಗಮದ ಕಡೆಗೆ, ಉಗಮದ ಉಲ್ಲಾಸ-ವಿಷಾದಗಳಿಂದ ತಕ್ಷಣದ ವಿಷಾದ-ನಿರೀಕ್ಷೆಗಳ ಕಡೆಗೆ ಚಲಿಸುವುದು ಎಷ್ಟು ಕಷ್ಟ! ಅಂದಿನಿಂದ ಇಂದಿನವರೆಗೆ ದೇಶ ದೇಹವನ್ನು ಅಮರಿಕೊಂಡಿರುವ ರೋಗದ ನಡುವೆ, ಯಾವುದೋ ಒಂದು ಅಂಗದ ಸಮಸ್ಯೆಗಳಿಗೆ ಇಲಾಜು ಮಾಡುವುದು ಹೇಗೆ? ಹಡಗು ಕಳ್ಳರ ಹತ್ತಿರ ಹೋಗಿ, ಕೋಳಿಕಳ್ಳರ ಬಗ್ಗೆ ದೂರು ಕೊಡುವುದು ಎಷ್ಟೊಂದು ವ್ಯರ್ಥ.
ಹಲವು ಹಿರಿಯರ, ನನ್ನಂತಹ ಗೆಳೆಯರ ಮತ್ತು ಇಡೀ ನಾಡಿನ ಕನಸಾಗಿ ಮೂಡಿದ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಬಗ್ಗೆ ಬರೆಯಹೊರಟಾಗ, ಇಂತಹ ಪ್ರಶ್ನೆಗಳು ಕಾಡುತ್ತವೆ. ಆಪಾದನೆ-ಸಮರ್ಥನೆಗಳ ಮುಸುಕುಗುದ್ದಿನ ಆಟದಲ್ಲಿ ಸಿಕ್ಕಿಕೊಳ್ಳದೆ, ‘ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು’ ಎಂಬ ಹಳಹಳಿಕೆಯಲ್ಲಿ ಕಳೆದು ಹೋಗದೆ ಕೆಲವು ಮಾತುಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಏಕೆಂದರೆ ನನ್ನಂತಹವರು ಮೌನ ವಹಿಸುವುದು ಅಪರಾಧ ಮತ್ತು ಮಾತನಾಡುವುದು ತಂತಿಯ ಮೇಲಿನ ನಡಿಗೆ.
‘ಕನ್ನಡ ವಿಶ್ವವಿದ್ಯಾನಿಲಯ’ವು, ಎಲ್ಲ ನೆಲೆಗಳಲ್ಲಿಯೂ ಬಹುತ್ವವನ್ನು ಕಂಡುಕೊಳ್ಳಬೇಕು ಎಂಬ ಅಪೇಕ್ಷೆಯೊಂದಿಗೆ ಹುಟ್ಟಿಕೊಂಡಿತು. ಸಾಮರಸ್ಯ ಮತ್ತು ಸಂಘರ್ಷಗಳ ನಡುವೆಯೇ ಹಲವು ಕಾಲದಿಂದ ಕರ್ನಾಟಕದಲ್ಲಿ ಬಾಳಿರುವ ಬಹುಭಾಷಿಕ, ಬಹುಪ್ರಾದೇಶಿಕ, ಬಹುಜಾತೀಯ ವಾಸ್ತವಗಳ ಮರೆತು ಹೋದ ಅಥವಾ ನಿರ್ಲಕ್ಷಿತವಾದ ಸತ್ಯಗಳನ್ನು ಮುನ್ನೆಲೆಗೆ ತರುವ ಕನಸು ಅದರದು. ಹಳೆಯದನ್ನು ಸೋಸಿ ನೋಡಿ, ಸರಿಯಾದುದನ್ನು ಹೊಸದರ ಜೊತೆಗಿಟ್ಟು ಪೊರೆಯಲೆಂದೇ ಹುಟ್ಟಿಕೊಂಡ ಈ ಸಂಸ್ಥೆಯು, ವಿಶ್ವವಿದ್ಯಾನಿಲಯದ ವಿದ್ವಾಂಸರು ಜ್ಞಾನದ ಏಕಸ್ವಾಮ್ಯ ಪಡೆದಿಲ್ಲವೆಂಬ ತಿಳಿವಳಿಕೆಯನ್ನು ಅಳವಡಿಸಿಕೊಂಡು ಹಲವು ಕಡೆ ಹರಡಿಕೊಂಡಿರುವ ಬೆಳಕನ್ನು ಕಂಡುಕೊಳ್ಳಲೆಂದು ಹೊರಟಿತು. ಇಂತಹ ಕೆಲಸಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ನಾಡಿನೊಳಗಿನ, ಗಡಿಯಾಚೆಗಿನ ಸೀಮೆಗಳಲ್ಲಿ ಅರಸಲಾಯಿತು.
ಮಧುರೈಯಿಂದ ಕಾಸರಗೋಡಿನವರೆಗೆ, ಬೀದರ್‌ನಿಂದ ಚಾಮರಾಜನಗರದವರೆಗೆ ಮೂಲೆಮೂಲೆಗಳಿಂದ ಬಂದ ತರುಣ ತರುಣಿಯರು ಒಬ್ಬರೊಡನೊಬ್ಬರು ತಿಳಿವಳಿಕೆಯ ವಿನಿಮಯ ಮಾಡಿಕೊಳ್ಳುವ ಅವಕಾಶಗಳು ಅಲ್ಲಿ ತೆರೆದುಕೊಂಡಿದ್ದವು. ಅಲ್ಲಿದ್ದ ಹಿರಿಯ ಪ್ರಾಧ್ಯಾಪಕರೂ ಐವತ್ತರ ಗಡಿ ದಾಟಿರಲಿಲ್ಲ. ಅನಿರೀಕ್ಷಿತವಾಗಿ ನೆರೆಬಂದು ಕಲ್ಲುಮಂಟಪಗಳು ಮುಳುಗಿದಾಗ, ‘ಮುಳುಗಿದ್ದು ಮಂಟಪಗಳು ಮಾತ್ರ. ವಿಶ್ವವಿದ್ಯಾನಿಲಯವಲ್ಲ’ ಎಂದು ಹೇಳುವ ಆತ್ಮವಿಶ್ವಾಸ ಅದರ ನೇತಾರರಿಗಿತ್ತು. ಆದರೆ, ಒಳಿತು ಕೆಡುಕುಗಳು ಧ್ರುವಗಳಲ್ಲ; ಅವು ಒಂದರ ನಂತರ ಒಂದರಂತೆ ಬರುವ ಯುಗಗಳಲ್ಲ. ಅವು ನಮ್ಮೆಲ್ಲರ ಎದೆಯಲ್ಲಿ ಹಾಸಿಗೆ ಹಂಚಿಕೊಂಡು ಒಟ್ಟಿಗೆ ಉಸಿರಾಡುವ ಸಂಗಾತಿಗಳು.
ಎಂತಹ ನಿಯಮಗಳೂ ಯೋಜನೆಗಳೂ ಮನುಷ್ಯರ ಬದ್ಧತೆ ಮತ್ತು ಪ್ರಾಮಾಣಿಕತೆಗಳ ಎಚ್ಚರದಲ್ಲಿಯೇ ನಿಜವಾಗಬೇಕು. ಕೆಲಸ ಮಾಡುವ ಉತ್ಸಾಹ ಮತ್ತು ನಿಯಮ ಪಾಲನೆ ಎಂಬ ಎರಡೂ ನೆಲೆಗಳು ಜಾಗೃತವಾಗಿರಬೇಕು. ಇಂತಹ ಮಹತ್ವದ ಕೆಲಸದಲ್ಲಿ ಭಾಗವಹಿಸುವವರ ಸಾಮರ್ಥ್ಯ ಹಾಗೂ ಪರಿಶ್ರಮಗಳ ಮೌಲ್ಯಮಾಪನವನ್ನು ಕಾಲದಿಂದ ಕಾಲಕ್ಕೆ ಮಾಡುವಂತಹ, ಮಾನವೀಯವಾದರೂ ನಿಷ್ಠುರವಾದ ವ್ಯವಸ್ಥೆಯು ರೂಪಿತವಾಗಬೇಕು. ಅಂತಹ ವ್ಯವಸ್ಥೆ ಕೂಡ ನಿರಂತರವಾಗಿ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು. ಇದನ್ನು ಕನ್ನಡ ವಿಶ್ವವಿದ್ಯಾನಿಲಯದಲ್ಲೇ ಇದ್ದ ಗೆಳೆಯರೊಬ್ಬರು ‘ಅಕಾಡಮಿಕ್ ಆಡಿಟಿಂಗ್’ ಎಂದು ಕರೆಯುತ್ತಿದ್ದರು. ಅದರ ಪರಿಣಾಮವಾಗಿ ‘ಕಳೆ ಕೀಳುವ ಕೆಲಸ’ ನಡೆಯುತ್ತದೆ. ಆಗ ಅನ್ಯರ ಮೇಲೆ ದೂರು ಹೇಳುವಾಗಲೂ ಕನ್ನಡಿ ನೋಡಿಕೊಳ್ಳುವ ನಿಲುವು ಬೆಳೆಯುತ್ತದೆ.
ಇದು ಕಷ್ಟದ ಕೆಲಸ. ‘ಕೆಟ್ಟ ಇಟ್ಟಿಗೆಯಿಂದ ಕಟ್ಟದಿರು ಹೊಸ ಮನೆಯ’ ಎಂದು ಕವಿ ಹೇಳಿದರು. ಅವುಗಳ ಜಾಗದಲ್ಲಿ ಹೊಸ ಇಟ್ಟಿಗೆಗಳನ್ನು ಜೋಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇಂತಹ ಕೆಲಸವು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ನಡೆಯಲೇ ಇಲ್ಲ. ಬೇರೆ ಸಂಸ್ಥೆಗಳಲ್ಲೂ ನಡೆಯುತ್ತಿಲ್ಲ. ಅದು ನಡೆಯಲು ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ಕೊಡಲಿಲ್ಲ. ಹೀಗಾಗಲು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗನ್ಯಾಯ ಮುಂತಾದ ಸಂಗತಿಗಳೇ ಕಾರಣವೆಂದು ಬೊಬ್ಬೆ ಹೊಡೆಯುವುದು ಅಕ್ಷಮ್ಯ ಅಪರಾಧ. ಎಲ್ಲ ಸಾಮಾಜಿಕ ಸ್ತರ, ಪ್ರದೇಶ, ಲಿಂಗಗಳಲ್ಲೂ ಪ್ರತಿಭಾವಂತರು, ಪ್ರಾಮಾಣಿಕರು ಮತ್ತು ದುಡಿಮೆಗಾರರು ಇದ್ದೇ ಇರುತ್ತಾರೆ. ಅಲ್ಲಿಯೂ ಇದ್ದರು/ಇದ್ದಾರೆ.
ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಮಾದರಿಗಳನ್ನು ನೀಡಿ, ಉತ್ತೇಜನ ಕೊಟ್ಟು ಅವರನ್ನು ಬೆಳೆಸುವ ಕೆಲಸ ನಡೆಯಲಿಲ್ಲ. ಇದು ಸಾಧ್ಯವಾಗಲು ಕೆಲವರಾದರೂ ಹಿರಿಯರು ತಮ್ಮ ಸ್ವಂತ ಕೆಲಸದ ಜೊತೆಗೆ/ಬದಲಾಗಿ ಕಿರಿಯರನ್ನು ಬೆಳೆಸುವ ಹೊಣೆ ಹೊರಬೇಕು. ಅಂತಹವರಿಗೆ ಮುಕ್ತ ಅವಕಾಶ, ಅಧಿಕಾರಗಳನ್ನು ಕೊಡಬೇಕು. ಯಾರು ಯಾವ ಕೆಲಸ ಮಾಡಬಲ್ಲರೆಂದು ಗುರುತಿಸಿ, ಅವರಿಗೆ ಅಂತಹುದೇ ಕೆಲಸವನ್ನು ಕೊಟ್ಟು ಮಾಡಿಸಬೇಕು. ಉದಾಹರಣೆಗೆ ಅಲ್ಲಿನ ಗೆಳೆಯರೊಬ್ಬರು ಅಧ್ಯಾಪನ, ಅಧ್ಯಯನಗಳ ಬದಲಾಗಿ ಪ್ರಸಾರಾಂಗದ ಕೆಲಸವನ್ನು ಆರಿಸಿಕೊಂಡು ಬಹಳ ನಿಷ್ಠೆಯಿಂದ ಅದನ್ನು ನಿರ್ವಹಿಸಿದರು. ಅದರ ಜೊತೆಗೆ ಬಹಳ ಪ್ರಸ್ತುತವಾದ ಅನುವಾದಗಳನ್ನು ಮಾಡಿದರು. ಇನ್ನೊಬ್ಬರು ‘ಆಧುನಿಕ’ ಗ್ರಂಥ ಸಂಪಾದನೆಯಲ್ಲಿ ತೊಡಗಿಕೊಂಡರು. ಮತ್ತೆ ಕೆಲವರು ಅಧ್ಯಯನ ಮತ್ತು ಆಡಳಿತಗಳ ಜೋಡುದಾರಿಯನ್ನು ಸವೆಸಿದರು. ಇನ್ನೂ ಕೆಲವರು ತಮ್ಮ ಆಸಕ್ತಿಗೆ ಬಾಹಿರವಾದ,
ತಮ್ಮ ಪ್ರತಿಭೆಗೆ ಹೊಂದಿಕೊಳ್ಳದ ವಿಭಾಗಗಳಲ್ಲಿ, ಕೊಟ್ಟ ಕುದುರೆಯನೇರಲರಿಯದೆ ದಶಕಗಳನ್ನೇ ಕಳೆದರು. ಇನ್ನೂ ಕೆಲವರು ದೂರದೂರುಗಳಲ್ಲಿ ಅಥವಾ ಆ ಈ ಪೀಠಗಳ ಅಧಿಪತಿಗಳಾಗಿ ಕೇಂದ್ರದಿಂದ ದೂರವಾದರು. ಆಗ ಅವರ ತವರು ವಿಭಾಗಗಳು ಜನಬಲವಿಲ್ಲದೆ ಸೊರಗಿದವು. ಅಧ್ಯಾಪಕರ ಕೆಲಸಗಳ ಮೌಲ್ಯಮಾಪನ ಮತ್ತು ನಿಯಂತ್ರಣಗಳು ಸಾಧ್ಯವಾಗದಂತಹ ಪರಿಸರದಲ್ಲಿ ಅಥವಾ ಕೇವಲ ನಾಮ್-ಕೇ-ವಾಸ್ತೇ ಆದಾಗ ಅರ್ಥಪೂರ್ಣವಾದ ಸಾಧನೆ ಜರುಗುವುದಾದರೂ ಹೇಗೆ? ಇನ್ನು ಮುಂದೆ ಮಾತು ಲಂಬಿಸದಿರಲೆಂದು ಕೆಲವು ಸಂಗತಿಗಳನ್ನು ಸಂಗ್ರಹವಾಗಿ ಗುರುತಿಸುತ್ತೇನೆ. ಇವುಗಳನ್ನು ಬಿಡಿಬಿಡಿಯಾಗಿಯೇ ನೋಡಬೇಕು. ಅವುಗಳ ಒಟ್ಟಂದದಲ್ಲಿ ಮೂಡುವ ತಿಳಿವಳಿಕೆಯು ನಾನು ಹೇಳಬಯಸುತ್ತಿರುವ ಸತ್ಯಕ್ಕೆ ಸಮೀಪವಾಗಬಹುದು.
1.ಮೊದಲನೆಯದಾಗಿ ಈಗ ಸುದ್ದಿಯಲ್ಲಿರುವ ಭ್ರಷ್ಟಾಚಾರವನ್ನೇ ಪ್ರಸ್ತಾಪಿಸುತ್ತೇನೆ. ನಿಜ. ಈಗ ಪ್ರಕಟವಾಗುತ್ತಿರುವ ವಿವರಗಳು ಗಾಬರಿ ಹುಟ್ಟಿಸುತ್ತವೆ. ಹಣಕಾಸಿಗೆ ಸಂಬಂಧಿಸಿದ ಭ್ರಷ್ಟಾಚಾರವು ತಕ್ಷಣ ಮಾಧ್ಯಮಗಳ ಗಮನ ಸೆಳೆಯುತ್ತದೆ. ಆದರೆ ಭ್ರಷ್ಟಾಚಾರವು ಯೋಜನೆ, ಅನುಷ್ಠಾನ, ಬೌದ್ಧಿಕ ಚಟುವಟಿಕೆಗಳು, ಆಡಳಿತದ ದುರುಪಯೋಗ, ಹಣಕಾಸು ಎಂಬ ಹಲವು ನೆಲೆಗಳಲ್ಲಿ ನಡೆಯುತ್ತದೆ. ನಿಷ್ಕ್ರಿಯೆ ಮತ್ತು ಸೋಮಾರಿತನಗಳೂ ಭ್ರಷ್ಟಾಚಾರವೇ. ಇವೆಲ್ಲವೂ ಪರಸ್ಪರ ಪರಿಣಾಮ ಬೀರಿ ರಾಡಿ ಬಗ್ಗಡವಾಗಿ ಕೆಸರಾಗುತ್ತದೆ. ಗಿಡವಾಗಿ ಬಗ್ಗದ್ದು ಮರವಾಗುತ್ತದೆ. ಯಾವ ನೆಲೆಯಲ್ಲಿಯೂ ಶಿಕ್ಷೆಯ ಭಯ ಉಳಿಯುವುದಿಲ್ಲ. ಅಧಿಕಾರ, ಜಾತಿ, ರಾಜಕೀಯ ಸಂಪರ್ಕ, ಹಣ, ‘ದುಷ್ಟ ಮಿತ್ರಕೂಟ’ಗಳು ಎಲ್ಲವೂ ಆತ್ಮರಕ್ಷಣೆಯ ಕವಚಗಳಾಗುತ್ತವೆ. ಸರಿಯಿರಲಿ, ತಪ್ಪಿರಲಿ ‘ನಮ್ಮವರನ್ನು ಕಾಪಾಡಿಕೊಳ್ಳಬೇಕು’ ಎನ್ನುವುದೇ ಮೂಲಮಂತ್ರವಾಗುತ್ತದೆ. ಒಮ್ಮೆ ಕೆಲಸ ದೊರಕಿಸಿಕೊಂಡ ಮೇಲೆ ಮೂರೂವರೆ ದಶಕಗಳು ಯಾವುದೇ ಚಿಂತೆಯಿಲ್ಲದೆ ಕಾಲ ಕಳೆಯಬಹುದು ಎಂಬ ಗ್ಯಾರಂಟಿಯೇ ಭ್ರಷ್ಟತೆಗೆ ಫಲವತ್ತಾದ ನೆಲ.
2.ಈ ವಿಶ್ವವಿದ್ಯಾನಿಲಯವು ಪ್ರಾರಂಭವಾದಾಗ ಅಲ್ಲಿ ಅಧ್ಯಯನಾಂಗ, ಪ್ರಸಾರಾಂಗ ಮತ್ತು ಆಡಳಿತಾಂಗ ಎಂಬ ಮೂರು ನೆಲೆಗಳನ್ನು ರೂಪಿಸಲಾಯಿತು. ಇವುಗಳಲ್ಲಿ ಅಧ್ಯಯನಾಂಗವು ಎಲ್ಲಕ್ಕಿಂತ ಮುಖ್ಯ, ಅಲ್ಲಿ ಜ್ಞಾನದ ಸೃಷ್ಟಿ ಮತ್ತು ಹುಡುಕಾಟಗಳು ನಡೆಯಬೇಕು ಎನ್ನುವ ತಿಳಿವಳಿಕೆ ಇತ್ತು. ಎರಡನೆಯ ಆದ್ಯತೆ ಪ್ರಸಾರಾಂಗಕ್ಕೆ ಇತ್ತು. ಅಧ್ಯಯನಾಂಗದಲ್ಲಿ ಸಂಚಿತವಾದ ತಿಳಿವಳಿಕೆಯನ್ನು ಸಮುದಾಯಗಳಿಗೆ ತಲುಪಿಸುವ ಹೊಣೆ ಇದರದು. ಇದು ಪುಸ್ತಕ ಹಾಗೂ ನಿಯತಕಾಲಿಕಗಳ ಪ್ರಕಟನೆ ಮಾತ್ರವಲ್ಲ, ಉಪನ್ಯಾಸಗಳು, ವೀಡಿಯೊ/ಡಾಕ್ಯುಮೆಂಟರಿಗಳ ನಿರ್ಮಾಣ, ಹೊರಗಿನ ವಿದ್ವತ್ತನ್ನು ಹಂಚಿಕೊಳ್ಳುವ ‘ಮಂಟಪ ಮಾಲೆ’ ಮುಂತಾದವು ಕೂಡ ಮುಖ್ಯವೆನಿಸಿದವು. ಈ ಎರಡೂ ಘಟಕಗಳಿಗೆ ನೆರವು ನೀಡುವುದು ಮಾತ್ರ ಆಡಳಿತಾಂಗದ ಕೆಲಸವಾಗಿತ್ತು. ಅದಕ್ಕೆ ಮೂರನೆಯ ಸ್ಥಾನ ಇತ್ತು. ಇವುಗಳ ನಡುವೆ ಗಡಿಗೆರೆಗಳಿದ್ದವು. ಕ್ರಮೇಣ ಈ ಆದ್ಯತೆಗಳು ತಲೆಕೆಳಗಾದವು. ಆಡಳಿತದ ಮರ್ಜಿ ಹಿಡಿದು ಸ್ವಂತ ಕೆಲಸ ಮಾಡಿಸಿಕೊಳ್ಳುವ ದರ್ದು ಹುಟ್ಟಿಕೊಂಡಿತು. ಗುಣಕ್ಕಿಂತ ಪ್ರಮಾಣ ಮುಖ್ಯವಾಯಿತು. ಮಾರ್ಗದರ್ಶನ ನೀಡಬೇಕಾದ ಹಿರಿಯರು ಆ ಕೆಲಸ ಮಾಡಲು ಬೇಕಾದ ಸಾಮರ್ಥ್ಯ ಮತ್ತು ನೈತಿಕ ಧೈರ್ಯವಿಲ್ಲದೆ ಹಿಂಜರಿದರು. ಹೊರಗಿನ ವಿದ್ವಾಂಸರ ಆಯ್ಕೆ ಮತ್ತು ಒಳಗಿನವರ ಕೆಲಸದ ಮೌಲ್ಯಮಾಪನ ಸರಿಯಾಗಿ ನಡೆಯದೆ ಹೋದಾಗ ಪ್ರಕಟನೆಗಳ ಮೌಲ್ಯ ಕುಸಿಯುವುದು ಸಹಜ. ವಿಶ್ವವಿದ್ಯಾನಿಲಯವು ಹಲವು ಕಾರಣಗಳಿಂದ ವಿಭಜಿತವಾಗಿರುವ ಸಮಾಜದ ಪಡಿನೆಳಲಾಗಿ ವಿಶ್ವವಿದ್ಯಾನಿಲಯವೂ ಒಡೆಯಿತು. ಪರಸ್ಪರ ಸಹಕಾರ ಸಂಘಗಳು ಹುಟ್ಟಿಕೊಂಡವು. ಉದ್ಯೋಗಗಳು ಖಾಯಂ ಆದ ಮೇಲೆ ಸ್ವಚ್ಛಂದತೆಯೂ ಜಾಸ್ತಿಯಾಯಿತು. ಇಂತಹ ಸನ್ನಿವೇಶದಲ್ಲಿ ಉಂಟಾಗುವ ಪತನವೂ ಭ್ರಷ್ಟಾಚಾರವೇ.
3.ಯೋಜನೆ ಮತ್ತು ಅನುಷ್ಠಾನಗಳು ಮೂಲಭೂತವಾಗಿ ಆದ್ಯತೆಗಳ ಪ್ರಶ್ನೆ. ಯಾವ ಕೆಲಸ ಆಗಬೇಕು, ಹೇಗೆ ಆಗಬೇಕು ಯಾರನ್ನೊಳಗೊಳ್ಳಬೇಕು, ಕಾಲಮಿತಿ ಯಾವುದು ಮುಂತಾದ ಸಂಗತಿಗಳನ್ನು ಒಬ್ಬ ಸಂಶೋಧಕ ಅಥವಾ ಒಂದು ವಿಭಾಗ ಮಾತ್ರವಲ್ಲ, ಇಡೀ ವಿಶ್ವವಿದ್ಯಾನಿಲಯದ ತನ್ನ ಕೂಡು ಚಿಂತನೆಯಿಂದ ರೂಪಿಸಬೇಕಾಗುತ್ತದೆ. ವಿಭಾಗಗಳು ದ್ವೀಪಗಳಾಗಬಾರದು. ಅಧಿಕಾರಿಗಳು, ಆಡಳಿತ ಪಕ್ಷಗಳು ಬದಲಾದಂತೆ ಯೋಜನೆಗಳಲ್ಲಿ ಸಾರಾಸಗಟಾದ ಬದಲಾವಣೆಗಳು ಆಗಬಾರದು. ಹಳೆಯ ಯೋಜನೆಗಳ ಮುಂದುವರಿಕೆಯೂ ಆಗಬೇಕು. ಎಲ್ಲ ಸಮುದಾಯಗಳ ಹಿತರಕ್ಷಣೆಯನ್ನು ಗಮನಿಸಬೇಕು. ಇಂತಹ ಹಲವು ಕೆಲಸಗಳು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಆಗಿವೆ, ಇನ್ನೆಷ್ಟೋ ಆಗದೆ ಉಳಿದಿವೆ, ಒಂದೊಮ್ಮೆ ಆದರೂ ಕಳಪೆಯಾಗಿವೆ. ಅನುಷ್ಠಾನವಾದ ಯೋಜನೆಗಳನ್ನು ಒಟ್ಟು ನಾಡಿನ ಚಿಂತನವಲಯಕ್ಕೆ ಒಡ್ಡಿಕೊಳ್ಳುವ ಆತ್ಮವಿಶ್ವಾಸ ಅಲ್ಲಿನ ವಿದ್ವಾಂಸರಿಗೆ ಬರಬೇಕು. ಇಲ್ಲದಿದ್ದರೆ ಎಲ್ಲವೂ ಬೆಲೆ ಕಳೆದುಕೊಳ್ಳುತ್ತವೆ. ‘ನಾಡೋಜ’, ‘ಡಿ. ಲಿಟ್.’, ‘ವಿದ್ವತ್ ಪತ್ರಿಕೆಗಳು’, ‘ಪುಸ್ತಕ ಮಾಹಿತಿ’, ‘ಚೆಲುವ ಕನ್ನಡ’, ‘ವಿಶ್ವಕೋಶಗಳು’, ಚರಿತ್ರೆಯ ಸಂಪುಟಗಳು, ವೈದ್ಯಕೀಯ ವಿಶ್ವಕೋಶ ಮುಂತಾದ ಹಲವು ಮಹತ್ವದ ಕೃತಿಗಳು ಬಂದವು. ವ್ಯಾಪಕವಾದ ಕ್ಷೇತ್ರಕಾರ್ಯ ನಡೆಯಿತು. ಒಟ್ಟು ಆವರಣದ ‘ದೇಶೀಯತೆ’ಯೇ ವಿಶಿಷ್ಟವಾಗಿತ್ತು. ಇವೆಲ್ಲವೂ ಕ್ರಮೇಣ ಕಾಣೆಯಾಗಿದ್ದನ್ನು, ಅಪಮೌಲ್ಯಗೊಂಡಿದ್ದನ್ನು ಅಥವಾ ಅವನತಿಯ ಕಡೆ ಚಲಿಸಿದ್ದನ್ನು ನಾಡು ಗಮನಿಸಿದೆ. ಪ್ರತಿಯೊಂದು ವಿಭಾಗವೂ ಸಹಜವಾಗಿಯೇ ಏರಿಳಿತಗಳ ಚಕ್ರಗತಿಯನ್ನು ಅನುಭವಿಸಿದೆ. ಇದೆಲ್ಲವೂ ಭ್ರಷ್ಟಾಚಾರದ ವ್ಯಾಪ್ತಿಯಲ್ಲೇ ಬರುತ್ತದೆ. ಇಂದಿನ ಹೆಜ್ಜೆಯ ಕಾರಣಗಳು ಆಂಶಿಕವಾಗಿಯಾದರೂ ಹಿಂದಣ ಹೆಜ್ಜೆ ಗಳಲ್ಲಿಯೂ ಇರುತ್ತವೆ.
4.ಆಡಳಿತವು ಅಧಿಕಾರದ ಬಳಕೆ ಮತ್ತು ದುರುಪಯೋಗಗಳ ತಂತಿ ನಡಿಗೆ. ಅದು ಅಕಾಡಮಿಕ್ ಚಟುವಟಿಕೆಗಳ ಹಾಗೆಯೇ ದೈನಂದಿನ ವ್ಯವಹಾರಕ್ಕೂ ಸಂಬಂಧಿಸಿದ್ದು. ಅದು ಅಧಿಕಾರ ಪಡೆಯಲು ಹೂಡಿದ ಬಂಡವಾಳವನ್ನು ಮರಳಿ ಪಡೆಯುವ ಮಾರ್ಗವಲ್ಲ. ಗೆಳೆಯರಿಗೆ ನೆರವು ನೀಡುವ ಕೇಂದ್ರವೂ ಅಲ್ಲ. ಢಾಳಾಗಿ ಕಾಣುತ್ತಿರುವ ಅಪರಾಧಗಳನ್ನು ಕಾರ್ಪೆಟ್ ಕೆಳಗೆ ಮರೆಮಾಡುವ ವ್ಯವಸ್ಥೆಯೂ ಅಲ್ಲ. ಇಂತಹ ಕಡೆ ವಿವೇಚನೆಯ ಹಾಗೆಯೇ ಬಹಳ ಖಚಿತವಾದ ನಿಯಮಗಳ/ಸರಕಾರಿ ಕಾನೂನುಗಳ ಪಾರದರ್ಶಕ ಪರಿಪಾಲನೆಯೂ ಮುಖ್ಯ. ಕುಲಪತಿಗಳಿಂದ ಮೊದಲಾಗಿ ಪಿಎಚ್‌ಡಿ ಗೈಡ್‌ಗಳವರೆಗೆ ಎಲ್ಲರಿಗೂ ಚಿಕ್ಕ ಪುಟ್ಟ ಅಧಿಕಾರಗಳಿರುತ್ತವೆ, ಚಿಕ್ಕಪುಟ್ಟದಾಗಿಯೇ ಇವುಗಳ ದುರುಪಯೋಗವೂ ನಡೆಯುತ್ತದೆ. ನಾನು ಕೇಳಿರುವ ಸ್ಕಾಂಡಲ್‌ಗಳನ್ನು ಎಲ್ಲಿ ಹೇಳಿದರೂ ಏನು ಪ್ರಯೋಜನ! 5.ಹಣವೇ ಕೇಂದ್ರವಾದ ಭ್ರಷ್ಟಾಚಾರಕ್ಕೆ ಕೋಟಿ-ಕೋಟಿಗಳಿಂದ ಮೊದಲಾಗಿ ನೂರು ರೂ.ಗಳ ಕಮಿಷನ್‌ವರೆಗೆ ಹಲವು ನೆಲೆಗಳು ಇರುತ್ತವೆ. ಬಿಲ್ಡಿಂಗ್‌ಗಳ ಗುತ್ತಿಗೆಯಿಂದ ಮೊದಲಾಗಿ ನೇಮಕಾತಿಗೆ ವಿಧಿಸುವ ಲಂಚದವರೆಗೆ ಇದು ಹರಡಿದೆ. ಪಡೆಯುತ್ತಿರುವ ಸಂಬಳಕ್ಕೆ ನ್ಯಾಯ ಒದಗಿಸಬೇಕೆಂಬ ಆತ್ಮಸಾಕ್ಷಿಯೇ ಕಾಣೆಯಾದರೆ ಏನು ಮಾಡುವುದು? ಅದರಲ್ಲಿಯೂ ಲಕ್ಷಗಟ್ಟಲೇ ಸಂಬಳ ಪಡೆಯುತ್ತಿರುವವರ ತಪ್ಪುನಡೆ ಮತ್ತು ಕೆಲಸ ಕದಿಯುವ ಅಭ್ಯಾಸಗಳು ಜನಸಾಮಾನ್ಯರಲ್ಲಿ ಅಸಹ್ಯವನ್ನು ಹುಟ್ಟಿಸಿದರೆ ಏನೂ ತಪ್ಪಿಲ್ಲ.
6.ಪ್ರತಿಭೆಗೂ ಪ್ರಾಮಾಣಿಕತೆಗೂ ಅವಿನಾಭಾವ ಸಂಬಂಧವೇನೂ ಇಲ್ಲ. ‘ದಾರ್ಶನಿಕ’ರೂ ಭ್ರಷ್ಟರಾಗಿರಬಹುದು. ಇಂತಹ ಸನ್ನಿವೇಶವನ್ನು ನಿರ್ವಹಿಸುವುದು ಬಹಳ ಕಷ್ಟ. ವಾದಿ ಪ್ರತಿವಾದಿಗಳಿಬ್ಬರೂ ಅಪರಾಧಿಗಳೇ ಆದಾಗ ನ್ಯಾಯ ತೀರ್ಮಾನ ಮಾಡುವುದು ಹೇಗೆ? ಇಲ್ಲಿ ನಾನು ಹೇಳುತ್ತಿರುವ ಪ್ರತಿಯೊಂದು ಮಾತಿಗೂ ಖಚಿತವಾದ ಉದಾಹರಣೆಗಳಿವೆ. ಮೂವತ್ತು ವರ್ಷಗಳ ಇತಿಹಾಸವಿದೆ. ಇಂದಿನ ಕನ್ನಡಿಯಲ್ಲಿ ಕಾಣುವ ಮುಖಗಳ ಹಿಂದೆ ನೆನ್ನೆಯ ನೆರಳುಗಳೂ ಇರುತ್ತವೆ. 7.ಕನ್ನಡ ವಿಶ್ವವಿದ್ಯಾನಿಲಯವು ಈಗ ವಿಜಯನಗರ ಜಿಲ್ಲೆಯ ‘ವಿದ್ಯಾರಣ್ಯ’ದಲ್ಲಿ ಇದ್ದರೂ ಇಡೀ ಕರ್ನಾಟಕವೇ ಅದರ ವ್ಯಾಪ್ತಿ ಪ್ರದೇಶ. ಕನ್ನಡ ವಿಶ್ವವಿದ್ಯಾನಿಲಯ, ಮಹಿಳಾ ವಿಶ್ವವಿದ್ಯಾನಿಲಯ, ಸಂಸ್ಕೃತ ವಿಶ್ವವಿದ್ಯಾನಿಲಯ ಮುಂತಾದ ಸಂಸ್ಥೆಗಳ ಸ್ವರೂಪವೇ ಅವುಗಳ ಭೌಗೋಳಿಕ ಎಲ್ಲೆಯನ್ನು ವಿಸ್ತರಿಸುತ್ತದೆ. ಹೀಗಿರುವಾಗ ಅದು ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಸೇರಿದ್ದೆಂದೂ ಅವುಗಳ ಅಧ್ಯಾಪಕ ವರ್ಗವು ಬಹುಮಟ್ಟಿಗೆ ಅಲ್ಲಿಂದಲೇ ಬರಬೇಕೆಂದು ಕಾನೂನು ಮಾಡಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಹೆಚ್ಚೆಂದರೆ ಮೂರು ಮತ್ತು ನಾಲ್ಕನೇ ವರ್ಗದ ನೌಕರರಿಗೆ ಅನ್ವಯಿಸಬೇಕಾದ ನಿಯಮವನ್ನು ಅಕಾಡಮಿಕ್ ನೇಮಕಗಳಿಗೂ ಅನ್ವಯಿಸಿದರೆ, ಅವು ನಾಶವಾಗುತ್ತವೆ, ಆ ಪ್ರದೇಶಗಳಿಗೆ ಸಂಬಂಧಿಸಿದ ಸಂಶೋಧನೆಯನ್ನೂ ಹೊರಗಿನಿಂದ ಬಂದವರೂ ಮಾಡಬಹುದು, ಮಾಡಿದ್ದಾರೆ. ಈ ಕೆಲಸದಲ್ಲಿ ಸ್ಥಳೀಯವಾದ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. ಸರಕಾರವು ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಲೇಬೇಕು. ಕರ್ನಾಟಕದ ಹಲವು ಭಾಗಗಳಿಂದ ಬಂದು ಸೇರಿದ ವಿದ್ವಾಂಸರ ಸಹಯೋಗದಲ್ಲಿ ಇಡೀ ನಾಡಿಗೆ ಸಂಬಂಧಿಸಿದ ಕೆಲಸ ನಡೆಯಬಲ್ಲದು. ಇದು ಅಪೂರ್ವ ಅವಕಾಶ.
8.ಕರ್ನಾಟಕದ ಬಹುಮುಖೀ ಸಂಸ್ಕೃತಿಯ ಅಧ್ಯಯನವು ವಿಭಿನ್ನ ಶೈಕ್ಷಣಿಕ ಶಿಸ್ತುಗಳಿಗೆ ಸೇರಿದ ವಿದ್ವಾಂಸರ ಸಹಯೋಗದಲ್ಲಿ ನಡೆಯಬೇಕಾದ ಕೂಡು ಕೆಲಸ. ಆದ್ದರಿಂದ ಪ್ರತಿಯೊಬ್ಬ ಅಧ್ಯಾಪಕನೂ ತನ್ನ ವಿಭಾಗಕ್ಕೆ ಸೀಮಿತವಾದ ಸಂಶೋಧನೆಯ ಜೊತೆಗೆ ಇತರ ವಿಭಾಗಗಳ ವಿದ್ವಾಂಸರ ಜೊತೆಗೆ ಸೇರಿ ಯೋಜನೆಗಳನ್ನು ನಿರ್ವಹಿಸುವುದು ಕಡ್ಡಾಯವಾಗಬೇಕು. ಉದಾಹರಣೆಗೆ ಜಾನಪದ ಮಹಾಕಾವ್ಯಗಳ ಅಧ್ಯಯನವನ್ನು ಬುಡಕಟ್ಟು ಅಧ್ಯಯನ, ಜಾನಪದ ಅಧ್ಯಯನ, ಸಾಹಿತ್ಯ ಮತ್ತು ಭಾಷಾಶಾಸ್ತ್ರಗಳ ಪರಿಣಿತರು ಒಟ್ಟುಗೂಡಿ ನಡೆಸಬಹುದು. ‘ಚಾವಡಿ’, ‘ಮಂಟಪಮಾಲೆ’ಯಂತಹ ಕಾರ್ಯಕ್ರಮಗಳು ಇಂತಹ ಸಂವಾದಕ್ಕೆ ನೆರವಾಗುತ್ತಿದ್ದವು. ತಾತ್ಕಾಲಿಕವಾಗಿ ಹೊರಗಿನಿಂದ ಬಂದ ಪರಿಣಿತರ ಮುಖಾಮುಖಿಯಲ್ಲಿ ಹೊಸ ಬೆಳಕು ಮೂಡುತ್ತಿತ್ತು.
9. ವಿಶ್ವವಿದ್ಯಾನಿಲಯವು ಮಾಡುವ ಕೆಲಸದಲ್ಲಿ ಸಾತತ್ಯ, ಪರಿಷ್ಕರಣ ಮತ್ತು ಹೊಸತನಗಳ ಸಂಯೋಜನೆ ಇರಬೇಕು. ಕುಲಪತಿಗಳು ಬದಲಾದಂತೆಲ್ಲಾ ಹಿಂದಿನ ಯೋಜನೆಗಳನ್ನು ಕೈಬಿಟ್ಟು ಹೊಸದನ್ನು ಮೊದಲು ಮಾಡಿಕೊಂಡರೆ ಮೂರು ವರ್ಷಗಳ ಬಳಿಕ ಆ ಹೊಸದಕ್ಕೂ ಅದೇ ಗತಿ ಕಾದಿರುತ್ತದೆ. ಪ್ರತಿಯೊಬ್ಬ ಕುಲಪತಿಗೂ ಅನುದಾನಗಳನ್ನು ಪಡೆದು ಕಟ್ಟಡಗಳನ್ನು ಕಟ್ಟಿಸುವುದು ಅಥವಾ ಪ್ರಕಟನೆಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಆದ್ಯತೆಯಾಗಬಾರದು. ಇದೇ ಮಾತು ಹಿಂದೆ ಪ್ರಕಟವಾದ ಒಳ್ಳೆಯ ಪುಸ್ತಕಗಳ ಮರುಮುದ್ರಣಕ್ಕೂ ಅನ್ವಯಿಸುತ್ತದೆ. ಕಷ್ಟಪಟ್ಟು ಮಹತ್ವದ ಸಂಪುಟಗಳನ್ನು ಸಿದ್ಧಪಡಿಸಿ ಅವುಗಳ ಸಾವಿರ ಪ್ರತಿಗಳನ್ನು ಮುದ್ರಿಸಿ ಕೈತೊಳೆದುಕೊಳ್ಳುವುದು ಸರಿಯಲ್ಲ.
10.ವಿಶ್ವವಿದ್ಯಾನಿಲಯದ ಹೊರಗಿರುವ ವಿದ್ವತ್ ವಲಯಕ್ಕೂ ಅದರ ಒಳಗಿರುವ ಅಕಾಡಮಿಕ್ ವ್ಯವಸ್ಥೆಗೂ ಯಾವ ರೀತಿಯ ಸಂಬಂಧವಿರಬೇಕು ಎನ್ನುವುದು ಮುಖ್ಯ ಪ್ರಶ್ನೆ. ಕನ್ನಡ ವಿಶ್ವವಿದ್ಯಾನಿಲಯ ಇಡೀ ನಾಡಿನ ತಿಳಿವಳಿಕೆಯನ್ನು ತನ್ನ ಆಶಯಗಳ ಪೋಷಣೆಗೆ ಬಳಸಿಕೊಳ್ಳಬೇಕು ಎಂಬ ಆಶಯವಿತ್ತು. ಪದವಿಗಳ ಹಂಗಿಲ್ಲದ, ವಿಶ್ವವಿದ್ಯಾನಿಲಯಗಳ ಆಚೆಗಿರುವ ವಿದ್ವಾಂಸರು ಪಿಎಚ್‌ಡಿಗೆ ಮಾರ್ಗದರ್ಶಕರಾಗುವ, ತಮ್ಮದೇ ಯೋಜನೆಗಳನ್ನು ಕೈಗೊಳ್ಳುವ ಅವಕಾಶವಿತ್ತು. ಅಂತೆಯೇ ಪ್ರಾಥಮಿಕ ಶಾಲೆಗಳ ಉಪಾಧ್ಯಾಯರಿಂದ ಹಿಡಿದು, ಉತ್ತರ ಕರ್ನಾಟಕದ ಜಾನಪದ ಗಾಯಕರವರೆಗೆ ಹಲವರ ಸಂಪರ್ಕ ಬೆಳೆಸಿ ಅವರಿಂದ ತಿಳಿವಳಿಕೆ ಪಡೆಯುವ-ನೀಡುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿತ್ತು. ನಾಡಿನ ಚಿಕ್ಕಪುಟ್ಟ ಪತ್ರಿಕೆಗಳಿಗೆಂದೇ, ತಿಳಿದವರಿಂದ ಲೇಖನಗಳನ್ನು ಬರೆಸಿಕೊಡುವ ಯೋಜನೆಯೂ ಕೆಲವು ಕಾಲ ಇತ್ತು. ಪ್ರಸಾರಾಂಗದ ಪ್ರಕಟನೆಗಳು ಕೂಡ ಒಟ್ಟು ನಾಡಿನ ತಿಳಿವಳಿಕೆಯನ್ನು ಹುಡುಕಿ, ಕ್ರೋಡೀಕರಿಸಿ ಪ್ರಕಟಿಸುವ ಕೆಲಸ ಮಾಡುತ್ತಿತ್ತು. ಇದುವರೆಗೆ ಹೇಳಿದ ಭ್ರಷ್ಟಾಚಾರದ ಜೊತೆಜೊತೆಗೇ ಇದೂ ಸಾಧ್ಯವಾಗುತ್ತಿತ್ತು.
11. ನನ್ನ ಸಹೋದ್ಯೋಗಿಯೊಬ್ಬರು ನಾವು ಪ್ರತಿದಿನವೂ ಹೊಸಪೇಟೆಯಿಂದ ಹಂಪಿಗೆ ಹೋಗುತ್ತಿದ್ದ ಲಕ್ಸುರಿ ಬಸ್ಸಿನ ಕಪ್ಪು-ತಂಪು ಗಾಜುಗಳ ಆಚೆಗೆ ಕಾಣುತ್ತಿದ್ದ ಮಲಪನ ಗುಡಿ, ಗಾಳೆಮ್ಮನ ಗುಡಿ, ಅನಂತಶಯನಗುಡಿ, ಕಮಲಾಪುರಗಳ ಪದದಲಿತರ ಬದುಕನ್ನು ಕಣ್ಣಿಟ್ಟು ನಮ್ಮ ವಿಶ್ವವಿದ್ಯಾನಿಲಯವು ಅವರಿಂದ ದೂರವಿರುವ ದಂತಗೋಪುರ ಆಗಬಾರದು ಎಂಬ ವಿಷಾದ ಮತ್ತು ಕಾಳಜಿಗಳನ್ನು ತೋಡಿಕೊಂಡಿದ್ದರು. ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವುದು ಎಂದರೆ ಅವರ ಬದುಕಿನ ಬವಣೆಗಳೊಂದಿಗೆ ಆಸರೆಗಳನ್ನು, ವರ್ತಮಾನದೊಂದಿಗೆ ಇತಿಹಾಸವನ್ನು ಕಂಡುಕೊಳ್ಳುವುದು ಹಾಗೂ ಅರ್ಥೈಸಿಕೊಳ್ಳುವುದು ಎಂದು ಆಲೋಚಿಸಿದ ಅವರು ನಾಡೊಳಗೆ ಅಡ್ಡಾಡಿ ಅದರ ನಾಡಿಮಿಡಿತಗಳನ್ನು ಕಂಡುಕೊಳ್ಳಲು ಯತ್ನಿಸಿದರು. ಇನ್ನೊಬ್ಬರು ಹೈದರಾಬಾದ್ ಕರ್ನಾಟಕದ ಆರ್ಥಿಕ ಸಂಕೀರ್ಣತೆಯನ್ನು ಅಧ್ಯಯನ ಮಾಡಿದರು. ಇವರಿಬ್ಬರೂ ಕರ್ನಾಟಕದ ಒಳನಾಡಿನಿಂದ ಬಂದವರು. ಕನ್ನಡದ ಮೂವರು ಶ್ರೇಷ್ಠ ಕತೆಗಾರರು ಇಲ್ಲಿ ಬೆಳೆದರು. ಜೀವನ, ಸಮಾಜ, ನಾಡುಗಳ ತವಕ-ತಲ್ಲಣಗಳನ್ನು ತೀಕ್ಷ್ಣವಾದ ಚಿಂತನೆಯ ಮೂಸೆಯಲ್ಲಿ ಕರಗಿಸಿ ಹೇಳಿದ ಚಿಂತಕರೂ ಇದ್ದರು. ಹೆಚ್ಚು ಕಡಿಮೆ ಎಲ್ಲ ವಿಭಾಗಗಳಲ್ಲಿಯೂ ಮಾರ್ಗದರ್ಶಕವೆನ್ನಿಸುವಂತಹ ಮಹತ್ವದ ಕೆಲಸಗಳು ನಡೆದವು. ಹೆಮ್ಮೆ ಪಡಬಹುದಾದ ಗ್ರಂಥಾಲಯಗಳು ರೂಪಿತವಾದವು. ವಿದ್ಯಾರಣ್ಯದ ಕಟ್ಟೋಣವೇ ವಿಶಿಷ್ಟವಾಗಿದೆ. ಹೀಗೆ ಇದ್ದ ಮತ್ತು ಈಗ ಇರುವ ಪ್ರತಿಭಾವಂತರ ಕೊಡುಗೆಯನ್ನೂ ಇಲ್ಲಿ ಹೇಳಬೇಕು. ಇವರಿಂದಲೇ ಈ ವಿಶ್ವವಿದ್ಯಾನಿಲಯದ ಬಗ್ಗೆ ಹಿರಿಯ ನಿರೀಕ್ಷೆಗಳು ಹುಟ್ಟಿಕೊಂಡವು. ಇವೆಲ್ಲವೂ ಅಷ್ಟಿಷ್ಟು ಲೋಪದೋಷಗಳು ಮತ್ತು ನಿಯಮಭಂಗಗಳ ಜೊತೆಜೊತೆಗೇ ನಡೆದವು. ಈಗಿನಂತೆಯೇ ಆಗಲೂ ಒಳ್ಳೆಯದು ಕೆಟ್ಟದ್ದು ಎರಡೂ ಸುದ್ದಿಯಾಗಿದ್ದವು. ಅವಸರ್ಪಿಣಿಯ ಹಾಗೆ ಉತ್ಸರ್ಪಿಣೀ ಕಾಲವೂ ಬರಲೆಂಬ ಹಂಬಲ ನನ್ನದು.
ನನಗೆ ಚೆನ್ನಾಗಿ ನೆನಪಿದೆ.1992ರಲ್ಲಿ ಬಾಬರಿ ಮಸೀದಿಯನ್ನು ನಾಶ ಮಾಡಿದಾಗ ವಿಶ್ವವಿದ್ಯಾನಿಲಯದ ಅಧ್ಯಾಪಕವರ್ಗವು ಸ್ವ-ಇಚ್ಛೆಯಿಂದ ಅದನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡು ಪ್ರಕಟಿಸಿತ್ತು. ಹೊಸ ಕಟ್ಟಡಗಳ ಉದ್ಘಾಟನೆಯು ಹೋಮಹವನಗಳ ನಡುವೆ ನಡೆದಾಗ ಕೆಲವರಾದರೂ ಅದನ್ನು ವಿರೋಧಿಸಿದ್ದರು. ತಮಾಷೆಗೆ ‘ಒಡ್ಡೋಲಗ’ವೆಂದು ಕರೆಯುತ್ತಿದ್ದ ಪ್ರತಿದಿನದ ಚರ್ಚೆಯಲ್ಲಿ ಕುಲಪತಿಗಳೊಂದಿಗೆ ಮಾತನಾಡಿ ಹೊಸ ಯೋಜನೆಗಳನ್ನು ಪ್ರಸ್ತಾಪಿಸುವ, ಚರ್ಚಿಸುವ ಅವಕಾಶ ಸೀನಿಯರ್ ಅಧ್ಯಾಪಕರಿಗೆ ಇತ್ತು. ತಮಗೆ ತಾವೇ ನೈತಿಕ ನಿಬಂಧನೆಗಳನ್ನು ಹಾಕಿಕೊಂಡು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪಾಲಿಸುತ್ತಿದ್ದರು. ‘ಎಲ್ಲದಕ್ಕೂ’ ಮಾದರಿಗಳಿದ್ದವು. ಈಗಲೂ ಇರುತ್ತವೆ. ಹುಡುಕಬೇಕು ಅಷ್ಟೇ.
ಈ ಎಲ್ಲ ಮಾತುಗಳು ತಿರುಕನ ಮಾತಿನಂತೆ ಭಾಸವಾಗುವುದು ಬಹಳ ಸಹಜ. ಹೊಸ ತಿಳಿವಳಿಕೆಯ ಹುಟ್ಟು ಕೂಡ ಮನುಷ್ಯಸ್ವಭಾವದ ಆವರಣದಲ್ಲಿಯೇ ಆಗುತ್ತದೆ. ಒಳಿತು ಕೆಡುಕುಗಳ ಮೇಲಾಟವೂ ನಡೆಯುತ್ತಲೇ ಇರುತ್ತದೆ. ರಾಜಕೀಯ, ಆಡಳಿತ, ನ್ಯಾಯಾಂಗ ಎಂಬ ಮೂರು ನೆಲೆಗಳಲ್ಲಿ ಕೆಟ್ಟದ್ದೇ ಸಮುದಾಯಗಳ ಆಯ್ಕೆಯೆಂದು ತಿಳಿಯುವುದು ಸರಿಯಲ್ಲ. ಹುಲಿ ಮತ್ತು ದರಿಗಳ ನಡುವೆ ಅವರು ಮಾಡುತ್ತಾ ಬಂದಿರುವ ಆಯ್ಕೆಗಳ ಹಿಂದಿನ ಅಸಹಾಯಕತೆ, ನಿಟ್ಟುಸಿರುಗಳನ್ನು ಪ್ರಾಜ್ಞರು ತಿಳಿಯಬೇಕು, ಕೈಚೆಲ್ಲದೆ ಹೋರಾಟ ನಡೆಸಬೇಕು. ಇಂತಹ ಎಚ್ಚರದ ಬೆಳಕು ಆಗಬಹುದಾಗಿದ್ದ ಕನ್ನಡ ವಿಶ್ವವಿದ್ಯಾನಿಲಯದ ಬಗ್ಗೆಯೇ ‘ಎಚ್ಚರಿಕೆಯ ಗಂಟೆ’ ಕೇಳಿಸುತ್ತಿದೆ. ‘ತಾಯ ಮೊಲೆಹಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ದೂರುವೆ?’ ಎಂಬ ಬಸವಣ್ಣನವರ ಅಳಲು ನಮ್ಮೆಲ್ಲರದೂ ಆಗಿದೆ. ಅದರ ಜೊತೆಗೇ ತಾವೇ ಒಂದು ವಿಶ್ವವಿದ್ಯಾನಿಲಯದಂತೆ ಬಾಳಿ ಬದುಕಿದ ಗಾಂಧಿ, ಅಂಬೇಡ್ಕರ್, ಕುವೆಂಪು, ಕಾರಂತ, ಲಂಕೇಶ್, ದೇವನೂರು ಮುಂತಾದವರು ನೀಡಿದ ತಿಳಿವಳಿಕೆಯೂ ಇದೆ. ಅವರೆಲ್ಲರೂ ಭಿನ್ನಮತವನ್ನು ಗೌರವಿಸಿದರು. ವ್ಯಕ್ತಿ ದುಡಿಯುವ ಬಗೆ ಮತ್ತು ಸಂಸ್ಥೆಗಳು ಕೆಲಸ ಮಾಡುವ ಬಗೆಗಳ ಅರ್ಥಪೂರ್ಣ ಸಂಯೋಜನೆಯಿಂದ ನಾಡು ಮುನ್ನಡೆಯುತ್ತದೆ. ನಾವು ಹತಾಶರಾದರೂ ಮೌನಿಗಳಾಗಬಾರದು. ‘ಸುದ್ದಿಶೂರ’ರಾಗದೆ ಸಮಚಿತ್ತವನ್ನು ಕಳೆದುಕೊಳ್ಳದೆ ಬದುಕಬೇಕು, ಬರೆಯಬೇಕು. ನನ್ನ ಕನಸುಗಳನ್ನು ಹಂಚಿಕೊಂಡ ಕನ್ನಡ ವಿಶ್ವವಿದ್ಯಾನಿಲಯದ ಸಾರ್ವಕಾಲಿಕವಾದ ಉನ್ನತಿ-ಅವನತಿಗಳ ಹಿನ್ನೆಲೆಯಲ್ಲಿ ಈ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಎನ್ನಿಸಿತು. ಕೊನೆಗೂ ‘ಎನ್ನ ಚಿತ್ತ ಅತ್ತಿಯ ಹಣ್ಣು’ ಎಂದ ಅಣ್ಣನ ಮಾತು ನಮಗೆಲ್ಲ ಕನ್ನಡಿ ಮತ್ತು ಕೈದೀವಿಗೆ.
ಎಚ್ಚರದ ಬೆಳಕು ಆಗಬಹುದಾಗಿದ್ದ ಕನ್ನಡ ವಿಶ್ವವಿದ್ಯಾನಿಲಯದ ಬಗ್ಗೆಯೇ ‘ಎಚ್ಚರಿಕೆಯ ಗಂಟೆ’ ಕೇಳಿಸುತ್ತಿದೆ. ‘ತಾಯ ಮೊಲೆಹಾಲು ನಂಜಾಗಿ ಕೊಲುವೊಡೆ ಇನ್ನಾರಿಗೆ ದೂರುವೆ?’ ಎಂಬ ಬಸವಣ್ಣನವರ ಅಳಲು ನಮ್ಮೆಲ್ಲರದೂ ಆಗಿದೆ. ಅದರ ಜೊತೆಗೇ ತಾವೇ ಒಂದು ವಿಶ್ವವಿದ್ಯಾನಿಲಯದಂತೆ ಬಾಳಿ ಬದುಕಿದ ಗಾಂಧಿ, ಅಂಬೇಡ್ಕರ್, ಕುವೆಂಪು, ಕಾರಂತ, ಲಂಕೇಶ್, ದೇವನೂರು ಮುಂತಾದವರು ನೀಡಿದ ತಿಳಿವಳಿಕೆಯೂ ಇದೆ. ಅವರೆಲ್ಲರೂ ಭಿನ್ನಮತವನ್ನು ಗೌರವಿಸಿದರು. ವ್ಯಕ್ತಿ ದುಡಿಯುವ ಬಗೆ ಮತ್ತು ಸಂಸ್ಥೆಗಳು ಕೆಲಸ ಮಾಡುವ ಬಗೆಗಳ ಅರ್ಥಪೂರ್ಣ ಸಂಯೋಜನೆಯಿಂದ ನಾಡು ಮುನ್ನಡೆಯುತ್ತದೆ. ನಾವು ಹತಾಶರಾದರೂ ಮೌನಿಗಳಾಗಬಾರದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ