ಓ ಮೆಣಸೇ...
ಹೋರಾಟ ನನ್ನ ರಕ್ತದಲ್ಲೇ ಇದೆ
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಬಡಕಲಾಗಿರುವ ಕಾಂಗ್ರೆಸ್‌ಗೆ ತಿಂಗಳಿಗೆ ಒಮ್ಮೆಯಾದರೂ ರಕ್ತ ದಾನ ಮಾಡಿ.
ಕೊರೋನ ಸಂಭಾವ್ಯ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಿದೆ
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಜನಸಾಮಾನ್ಯರ ಮೇಲೆ ಮೂರನೇ ಹಲ್ಲೆ ಎಂದರೆ ಚೆನ್ನಾಗಿರುತ್ತದೆ.
ನಾನು ಸಚಿವನಾಗಿ ಅಧಿಕಾರದಲ್ಲೇ ಇರಬೇಕು ಎಂದು ಬಯಸುವವನಲ್ಲ
-ಗೋವಿಂದ ಕಾರಜೋಳ, ಸಚಿವ
ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರೂ ನಡೆಯುತ್ತದೆ ಅಲ್ಲವೇ ?
ನಾನು ಈಗಲೂ ದೊಡ್ಡ ನಾಯಕ. ಪಕ್ಷ ಹೇಳಿದರೆ ಬ್ಯಾಗ್ ತೆಗೆದುಕೊಂಡು ಹೇಳಿದ ಸ್ಥಳಕ್ಕೆ ಹೋಗಿ ಸ್ಪರ್ಧಿಸಲು ಸಿದ್ಧ
-ಶ್ರೀರಾಮುಲು, ಸಚಿವ
ಬ್ಯಾಗ್‌ನೊಳಗೆ ಎಷ್ಟು ಕೋಟಿ ತುಂಬಿಕೊಂಡಿರುತ್ತೀರಿ?
ಯಾವ ಕಾರಣಕ್ಕೂ ದೇಶದ ಅಭಿವೃದ್ಧಿಯನ್ನು ತಡೆಯಲು ಕೊರೋನಕ್ಕೆ ಬಿಡುವುದಿಲ್ಲ
-ನರೇಂದ್ರ ಮೋದಿ, ಪ್ರಧಾನಿ
ಕೊರೋನಾಕ್ಕೆ ಮೊದಲೇ ಆ ಕೆಲಸ ನೀವೇ ಮಾಡುತ್ತಾ ಬಂದಿದ್ದೀರಿ.
ಕೊರೋನ ಬಗ್ಗೆ ನಿರ್ಲಕ್ಷ ತೋರಿದರೆ ಲಾಕ್‌ಡೌನ್ ಅನಿವಾರ್ಯ
-ಆರ್.ಅಶೋಕ್, ಸಚಿವ
ಇದು ರಾಜಕಾರಣಿಗಳಿಗೆ ಅನ್ವಯಿಸುತ್ತದೆಯೇ?
ಹಿಂದುತ್ವ ಮತ್ತು ಕಾರ್ಪೊರೇಟ್ ಯಜಮಾನಿಕೆಯಿಂದ ದೇಶ ವಿನಾಶದಂಚಿಗೆ ತಲುಪಿದೆ
-ಪ್ರಕಾಶ್ ಕಾರಟ್, ಸಿಪಿಐಎಂ ನಾಯಕ
ಸಿಪಿಎಂ ವಿನಾಶದಂಚಿಗೆ ತಲುಪಿರುವ ಕಾರಣಗಳನ್ನು ಕಂಡು ಹಿಡಿಯಿರಿ.
ಪೊಲೀಸರು ಒಳ್ಳೆಯ ಕೆಲಸ ಮಾಡದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಎದುರಾಗುತ್ತದೆ
-ಆರಗ ಜ್ಞಾನೇಂದ್ರ, ಸಚಿವ
ಇನ್ನಾದರೂ ಕೊಡಬಾರದೇ?
ಹಿಂದೂ ಸಮಾಜದ ಪ್ರತಿಯೊಂದು ಸಮುದಾಯಗಳು ತಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ಹಿಂದೂ ಸಮಾಜ ಎದ್ದು ನಿಲ್ಲಲು ಸಾಧ್ಯ
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ತಮ್ಮತನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸ್ವಾಮೀಜಿಗೆ ಇಲ್ಲವೇ?
ಹಿಂದೂ, ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೂ ಮತಾಂತರದ ಕಂಟಕ ಇದೆ
-ನಳಿನ್ ಕುಮಾರ್ ಕಟೀಲು, ಸಂಸದ
ಮತಾಂತರ ಕಂಟಕ ಯಾರಿಗೆ? ಮತಾಂತರ ಆಗುವವರಿಗೆ ಅದೊಂದು ಬಿಡುಗಡೆ.
ಬಿಜೆಪಿಯದ್ದು ಬೇರ್ಪಡಿಸುವ ಕತ್ತರಿ, ಕಾಂಗ್ರೆಸ್‌ನದ್ದು ಜೋಡಿಸುವ ಸೂಜಿ
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆ ಸೂಜಿಯಿಂದ ಹರಿದ ಕಾಂಗ್ರೆಸ್ಸನ್ನು ಹೊಲಿಯಬಾರದೇ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ‘ಆಕಸ್ಮಿಕ ಹಿಂದೂ’
-ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ
ನೀವು ಕನಿಷ್ಠ ಒಬ್ಬ ಆಕಸ್ಮಿಕ ಮನುಷ್ಯನಾಗಿ ಯಾದರೂ ಬದಲಾಗಬಾರದೆ?
ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ ಕುರಿತಂತೆ ಕಾಂಗ್ರೆಸ್‌ನವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ
-ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಬಿಜೆಪಿಯವರು ಹಬ್ಬಿಸುತ್ತಿರುವ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಪಾದಯಾತ್ರೆಯಿಂದ ಕೊರೋನ ಹೆಚ್ಚಿದರೆ ಅದಕ್ಕೆ ಕಾಂಗ್ರೆಸ್ಸೇ ಹೊಣೆ
-ನಳಿನ್ ಕುಮಾರ್ ಕಟೀಲು, ಸಂಸದ
ಪಾದಯಾತ್ರೆ ಇಲ್ಲದೆ ಇದ್ದಾಗ ಕೊರೋನ ಹೆಚ್ಚಿತಲ್ಲ, ಅದರ ಹೊಣೆಯನ್ನು ಬಿಜೆಪಿ ಹೊತ್ತುಕೊಂಡಿದೆಯೇ?
ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶ
-ರಘುಪತಿ ಭಟ್, ಶಾಸಕ
ಎರಡು ಡೋಸ್ ಲಸಿಕೆ ಹಾಕಿದವರಿಗೆ ಗರ್ಭ ಗುಡಿ ಪ್ರವೇಶ ಸಿಗಬಹುದೇ?
ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ ಹೀಗೆ ನಮ್ಮದು ಡಬಲ್ ಇಂಜಿನ್ ಸರಕಾರ -ಶ್ರೀರಾಮುಲು, ಸಚಿವ
ಡಬಲ್ ಇಂಜಿನ್ ಬುಲ್ಡೋಜರ್ ಎಂದರೆ ಚೆನ್ನಾಗಿತ್ತು. ಪ್ರಪಂಚದ ಯಾವುದೇ ಒಂದು ದೇಶ ಕೋವಿಡ್‌ನಿಂದ ಮುಕ್ತವಾಗಿಲ್ಲ
-ಡಾ.ಜಿ.ಪರಮೇಶ್ವರ್, ಶಾಸಕ
ಅದಕ್ಕಾಗಿ ಭಾರತ ಕೋವಿಡ್‌ನಿಂದ ಮುಕ್ತವಾಗುವ ಅಗತ್ಯವಿಲ್ಲ ಎಂದು, ಅಭಿಪ್ರಾಯವೇ?
ಮೇಕೆದಾಟು ವಿಳಂಬದ ಮಾಹಿತಿ ಹೊರ ಹಾಕುವೆ ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರೆಲ್ಲ ಮೈಮೇಲೆ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ
-ಗೋವಿಂದ ಕಾರಜೋಳ, ಸಚಿವ
ಪಾದಯಾತ್ರೆ ವಿರುದ್ಧ ನೀವೇಕೆ ಮೈಮೇಲೆ ಕೊರೋನ ಬಂದವರಂತೆ ಆಡುತ್ತಿರುವುದು? ಭಾರತದ ಅಭ್ಯುದಯ ಯುವ ಜನರ ಕೈಯಲ್ಲಿದೆ
-ಥಾವರ್‌ಚಂದ್ ಗೆಹ್ಲೋಟ್, ರಾಜ್ಯಪಾಲ
ಮೋದಿಗೆ ವಯಸ್ಸಾಯಿತೇ?
ಚುನಾವಣೆಯಲ್ಲಿ ಬಹುಮತದೊಂದಿಗೆ ಉ.ಪ್ರ.ದಲ್ಲಿ ಎಸ್ಪಿ ಸರಕಾರ ರಚನೆ ಮಾಡಲಿದೆ ಎಂದು ಶ್ರೀಕೃಷ್ಣನೇ ನನ್ನ ಕನಸಿನಲ್ಲಿ ಬಂದು ಹೇಳಿದ್ದಾನೆ
-ಅಖಿಲೇಶ್ ಯಾದವ್, ಎಸ್ಪಿ ಅಧ್ಯಕ್ಷ
ಸರಕಾರ ರಚನೆಯೂ ಕನಸಿನಲ್ಲೇ ನಡೆಯಲಿದೆಯೇ?
ರಾಜಕಾರಣಕ್ಕೆ ನಿವೃತ್ತಿ, ವಿದ್ಯಾರ್ಹತೆ ಎರಡೂ ಇಲ್ಲ
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪ್ರಧಾನಿಯ ವಿದ್ಯಾರ್ಹತೆಯನ್ನು ಕೇಳಿದವರಿಗೆ ಇದು ಉತ್ತರವಿರಬೇಕು.
ಜೆಡಿಎಸ್‌ನ ನಾಮಾವಶೇಷ ಮಾಡಲು ಯಾರಿಂದಲೂ ಸಾಧ್ಯವಿಲ್ಲ
-ದೇವೇಗೌಡ, ಮಾಜಿ ಪ್ರಧಾನಿ
ನೀವು ಮತ್ತು ನಿಮ್ಮ ಮಕ್ಕಳೇ ಸಾಕು.
ಕೊರೋನ 3ನೇ ಅಲೆ ಬೇಗನೆ ಏರಿ, ಬೇಗನೇ ಇಳಿಯಲಿದೆ
-ಡಾ.ಸುಧಾಕರ್, ಸಚಿವ
ಕೊರೋನವನ್ನು ಅಡಿಕೆ ಮರ ಏರಲು ಬಳಸಿದರೆ ಹೇಗೆ?
ಪ್ರಧಾನಿ ಮೋದಿ ಭದ್ರತಾ ವೈಫಲ್ಯದಲ್ಲಿ ಕೇಂದ್ರದ ಭದ್ರತಾ ಪಡೆಗಳ ಲೋಪವೇ ಹೊರತು ರಾಜ್ಯ ಸರಕಾರದ್ದಲ್ಲ
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಕೇಂದ್ರದ ಲೋಪಗಳು ಜನರಿಗೆ ಅಭ್ಯಾಸ ಆಗಿದೆ.