varthabharthi


ಬೆಂಗಳೂರು

ಹಿರಿಯ ಸಾಹಿತಿ ಚಂಪಾ ನಿಧನ

ವಾರ್ತಾ ಭಾರತಿ : 10 Jan, 2022

ಬೆಂಗಳೂರು, ಜ.10: ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಪ್ರೊ.ಚಂದ್ರಶೇಖರ್ ಪಾಟೀಲ್ (ಚಂಪಾ) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಚಂಪಾ ಅವರು ಇಂದು ಬೆಳಗ್ಗೆ ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೃತರು , ಒಬ್ಬ ಪುತ್ರ, ಒಬ್ಬರು ಪುತ್ರಿ ಸಹಿತ ಅಪಾರ ಬಂಧುಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ನಗರದ ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಎಂಬ ಗ್ರಾಮದವರಾದ ಚಂಪಾ 1939ರ ಜೂನ್‌ 18ರಂದು ಜನಿಸಿದರು. ತಂದೆ ಬಸವರಾಜ ಹಿರೇಗೌಡ, ತಾಯಿ ಮುರಿಗೆವ್ವ. ಚಂಪಾ ಹುಟ್ಟು ಹೋರಾಟಗಾರ ಮನೋಭಾವದವರು. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು.

ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್ ಅವರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿ.ಕೃ.ಗೋಕಾಕರ ಮಾರ್ಗದರ್ಶನ ಸಿಕ್ಕಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಅವರ ಪ್ರಥಮ ಕವನ ಸಂಕಲನ 'ಬಾನುಲಿ'(1960) ಪ್ರಕಟವಾಯಿತು. ನವ್ಯ ಮಾರ್ಗದಲ್ಲಿ ಕಾವ್ಯ ಕೃಷಿ ಆರಂಭಿಸಿದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಸ್ನಾತಕೋತ್ತರ (1962) ಪದವೀಧರರು.

ಇದಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾನಿಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು.

  ಸ್ನೇಹಿತರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರ ಜೊತೆ ಸೇರಿ 'ಸಂಕ್ರಮಣ' (1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು. 2018ರ ವರೆಗೂ ಆ ಪತ್ರಿಕೆ ಪ್ರಕಟವಾಗಿದೆ.  

ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ, ಛೇರ್‌ಮನ್‌ ಆಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ತುರ್ತುಪರಿಸ್ಥಿತಿಯ ದಿನಗಳಲ್ಲಿ, ಅದನ್ನು ಪ್ರತಿಭಟಿಸಿ, ಜೆ.ಪಿ. ಚಳವಳಿ ಬೆಂಬಲಿಸಿ ಜೈಲುವಾಸ ಅನುಭವಿಸಿದ್ದರು.

ಕನ್ನಡಕ್ಕಾಗಿ ದುಡಿಯುತ್ತಿದ್ದ ಚಂಪಾರನ್ನು 1996ರಲ್ಲಿ ಕರ್ನಾಟಕ ಸರಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. 1999ರ ವರೆಗೆಈ ಜವಾಬ್ದಾರಿ ನಿರ್ವಹಿದ್ದ ಅವರು 2004-18ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದರು. ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು ‘ಪುಸ್ತಕ ಸಂತೆ’ಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರು.  

ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್‌ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.

2017ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿಗೂ ಪಾತ್ರರಾಗಿದ್ದರು.

ಮುಖ್ಯಮಂತ್ರಿ ಸಂತಾಪ

ಚಂಪಾ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, "ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್(ಚಂಪಾ) ಅವರು ನಿಧನರಾದ ವಿಷಯದಿಂದ ತುಂಬಾ ದುಃಖಿತನಾಗಿದ್ದೇನೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರಾದ ಚಂಪಾ ಅವರು ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ ಎಂದು ಸ್ಮರಿಸಿದ್ದಾರೆ.

"ಗೋಕಾಕ್ ಚಳವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅವರು ಪ್ರಾಧ್ಯಾಪಕರಾಗಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಕಂಬನಿ ಮಿಡಿದಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸಂತಾಪ

ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ.

ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)