varthabharthi


ವಿಶೇಷ-ವರದಿಗಳು

ಭಾರತದಲ್ಲಿ ಎಪಿಎಂಸಿ ಮಾರುಕಟ್ಟೆ ಜಾಲ ವಿಸ್ತರಣೆಯ ಅಗತ್ಯ

ವಾರ್ತಾ ಭಾರತಿ : 10 Jan, 2022
ಮೂಲ: ದೇವಿಂದರ್ ಶರ್ಮಾ - ಕನ್ನಡಕ್ಕೆ: ನಾಗೇಶ್.ಕೆ.ಎನ್

ಭಾರತದಂತಹ ರಾಷ್ಟ್ರಕ್ಕೆ ಆಹಾರ ಆಮದು ಮಾಡಿಕೊಳ್ಳುವುದೆಂದರೆ ನಿರುದ್ಯೋಗ ಆಮದು ಮಾಡಿಕೊಂಡಂತೆಯೇ ಸರಿ, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರೆ ಹೆಚ್ಚಿನ ಪ್ರಮಾಣದ ಸಣ್ಣ ರೈತರು ಕೃಷಿ ಉತ್ಪಾದನೆಯಿಂದ ಆಚೆ ಬಂದಂತೆ, ಆಹಾರ ಭದ್ರತೆಗೆ ಬೇಕಾದ ಕ್ರಮಗಳನ್ನು ಭಾರತ ತೆಗೆದುಕೊಳ್ಳುವುದಾಗಿ ಹೇಳುತ್ತಿದೆಯಾದರೂ ಮುಂದಿನ ಡಿಸೆಂಬರ್‌ನಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯ ಮಂತ್ರಿ ಮಂಡಲದಲ್ಲಿ ಭಾರತದ ನಿಲುವು ಏನು ಎಂಬುದನ್ನು ಕಾದು ನೋಡಬೇಕಿದೆ.

1. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ)ಯ ಅಂದಾಜಿನ ಪ್ರಕಾರ ಅತಿ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದು, ಆದರೆ 194.6 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಹಾರ ಉತ್ಪಾದನೆ ಹಾಗೂ ಸರಬರಾಜು ಕ್ಷೇತ್ರಗಳಲ್ಲಿರುವ ಮೂಲಭೂತ ಸಮಸ್ಯೆಗಳೇನು?

ಭಾರತ ತುಂಬಾ ಅವಮಾನಕರ ಪರಿಸ್ಥಿತಿಯಲ್ಲಿರುವ ಸ್ವಸಂತುಷ್ಟಿಯ ವೈರುಧ್ಯಗಳ ದೇಶ. ಒಂದು ಕಡೆ ದಾಸ್ತಾನು ಕೇಂದ್ರಗಳಲ್ಲಿ ಧಾನ್ಯಗಳು ತುಂಬಿ ತುಳುಕುತ್ತಿವೆ ಮತ್ತೊಂದು ಕಡೆ ವಿಶ್ವದಾದ್ಯಂತ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ ಭಾರತದಲ್ಲಿಯೇ ಹೆಚ್ಚಿದೆ. ಮಕ್ಕಳ ಅಪೌಷ್ಟಿಕತೆಯ ವಿಚಾರದಲ್ಲಿ ಆಫ್ರಿಕಾದ ಸಹರಾ ಪ್ರದೇಶದ ಉಪದೇಶಗಳಿಗಿಂತ ಭಾರತ ಕಳದರ್ಜೆಯಲ್ಲಿದೆ. ಆಹಾರ ಧಾನ್ಯಗಳ ಕಣಜಗಳನ್ನು ಸರಿಯಾಗಿ ನಿರ್ವಹಿಸದೆ ಕಳೆದ ಹಲವು ದಶಕಗಳಿಂದ ಈ ಸಮಸ್ಯೆ ಉಳಿದುಕೊಂಡು ಬಂದಿದೆ. 2001-03 ರಿಂದ ಈಚೆಗೆ ದೇಶದಲ್ಲಿ ಪ್ರತಿ ವರ್ಷ ಅಗತ್ಯಕ್ಕಿಂತ ಸರಾಸರಿ 60 ಮಿಲಿಯನ್ ಟನ್‌ನಷ್ಟು ಆಹಾರ ಧಾನ್ಯಗಳು ದುಪ್ಪಟ್ಟು ಉತ್ಪಾದನೆ ಆಗಿ ದಾಸ್ತಾನಾಗುತ್ತಿದೆ. ಆದರೂ ಲಕ್ಷಾಂತರ ಜನರು ರಾತ್ರಿ ಊಟಕ್ಕಿಲ್ಲದೆ ನಿದ್ರೆಗೆ ಜಾರುತ್ತಿದ್ದಾರೆ. ಅನೇಕ ಕುಟುಂಬಗಳು ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ.

2014 ಜೂನ್‌ನಲ್ಲಿ ಭಾರತದಲ್ಲಿ ಸುಮಾರು 83 ಮಿಲಿಯನ್ ಟನ್ ಆಹಾರ ಧಾನ್ಯಗಳು ದುಪ್ಪಟ್ಟು ಉತ್ಪಾದನೆ ಆದದ್ದು ದಾಖಲಾಗಿದೆ. ಈ ಹೆಚ್ಚುವರಿ ದಾಸ್ತಾನು ಮೂಟೆ ಕಟ್ಟಿ ಒಂದರ ಮೇಲೊಂದು ಸೇರಿಸಿದರೆ ಚಂದ್ರಲೋಕಕ್ಕೆ ಏಣಿ ಮಾಡಬಹುದಿತ್ತು. ಇಷ್ಟೊಂದು ಆಹಾರ ಧಾನ್ಯಗಳು ಅಗತ್ಯಕ್ಕಿಂತ ಹೆಚ್ಚಿದ್ದರೂ ಹಸಿವಿನಿಂದ ಬಳಲುವ ಪ್ರಪಂಚದ ನಾಲ್ಕನೆಯ ಒಂದರಷ್ಟು ಭಾಗ ಜನರು ಭಾರತದಲ್ಲೇ ಏಕಿದ್ದಾರೆ? ಆಹಾರ ಅಭದ್ರತೆ ಉಂಟಾಗಲಿಕ್ಕೆ ಮೂಲ ಕಾರಣವೇನೆಂದರೆ ಆಹಾರ ವಿತರಣೆಯನ್ನು ನಾವೆಂದಿಗೂ ಸರಿಯಾಗಿ ಮಾಡಿಕೊಂಡು ಬಂದಿಲ್ಲ. ಯಾವುದೇ ಸರಕಾರಕ್ಕೆ ತನ್ನ ಜನರಿಗೆ ಆಹಾರ ಒದಗಿಸಬೇಕಾದದ್ದು ಪ್ರಮುಖ ಕೆಲಸವಾಗಬೇಕು. ಕಳೆದ ಎರಡು ವರ್ಷಗಳಲ್ಲಿ ಭಾರತ ಸುಮಾರು 40 ಮಿಲಿಯನ್ ಆಹಾರ ಧಾನ್ಯಗಳನ್ನು ರಫ್ತು ಮಾಡಿದೆ. ತನ್ನ ದೇಶದ ಜನರೇ ಹಸಿವಿನಿಂದ ಬಳಲುತ್ತಿರಬೇಕಾದರೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವಲ್ಲಿ ಯಾವ ತರ್ಕವೂ ಕಾಣುತ್ತಿಲ್ಲ.

   2. ಹಣ್ಣು ತರಕಾರಿಗಳು ಮತ್ತು ಆಹಾರ ಧಾನ್ಯಗಳಲ್ಲಿ ಕೊಯ್ಲೋತ್ತರ ನಷ್ಟವನ್ನು ತಡೆಗಟ್ಟಲು ಸರಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶೀಥಲ ಘಟಕಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವುದು, ಸಂಸ್ಕರಣೆಗೆ ಬೇಕಾದ ಸವಲತ್ತು ಒದಗಿಸುವುದರ ಜೊತೆಗೆ ಸಮಗ್ರ ಕೊಯ್ಲೋತ್ತರ ನಿರ್ವಹಣೆಗೆ ಧನ ಸಹಾಯ ಒದಗಿಸುವುದೂ ಸೇರಿದಂತೆ ಅನೇಕ ಯೋಜನೆಗಳಿವೆ. ಇವುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸರಕಾರ ಮತ್ತು ಖಾಸಗಿ ಕ್ಷೇತ್ರದಿಂದ ಕೊಯ್ಲೋತ್ತರ ನಷ್ಟವನ್ನು ತಪ್ಪಿಸಲು ಇನ್ನೇನೆಲ್ಲಾ ಕ್ರಮಗಳನ್ನು ಅನುಸರಿಸಬಹುದು?

ಕೊಯ್ಲೋತ್ತರ ನಷ್ಟವನ್ನು ತಡೆಯಬೇಕೆನ್ನುವ ಮಾತು ಸತ್ಯ ಆದರೆ, ನಮ್ಮ ದೇಶದಲ್ಲಿ ಈ ನಷ್ಟದ ಲೆಕ್ಕಾಚಾರವನ್ನು ಎದ್ವಾ ತದ್ವಾ ತೊೀರಿಸಲಾಗುತ್ತಿದೆ. ಕಳೆದ 30 ವರ್ಷದಿಂದ ಭಾರತದಲ್ಲಿ ಶೇ. 40 ರಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂಬ ಮಾತನ್ನು ನಾನು ಪದೇ ಪದೇ ಕೇಳುತ್ತಲೇ ಇದ್ದೇನೆ. ಈ ಚಿತ್ರಣ ಅದೆಲ್ಲಿಂದ ಬರುತ್ತಿದೆ ಎಂಬುದನ್ನು ನಾನು ಕಾಣೆ. ಲೂಧಿಯಾನದ ಪೋಸ್ಟ್ ಹಾರ್ವೆಸ್ಟ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಸಿಐಪಿಎಚ್‌ಇಟಿ) ನಡೆಸಿದ ಸಮೀಕ್ಷೆಯ ಪ್ರಕಾರ ಧಾನ್ಯಗಳಲ್ಲಿ ಶೇ.4.3 ರಿಂದ 6.1ರಷ್ಟು: ಕಾಳುಗಳು ಶೇ.4.3 ರಿಂದ 6 ಎಣ್ಣೆ ಕಾಳುಗಳು ಶೇ. 6: ಮಾಂಸ ಶೇ. 23, ಹಾಲು ಶೇ. 0; ಹಣ್ಣುಗಳಲ್ಲಿ ಶೇ.5.8 (ಸಪೋಟ) ರಿಂದ ಗರಿಷ್ಠ ಶೇ. 18: (ಸೀಬೆಕಾಯಿ); ತರಕಾರಿಗಳಲ್ಲಿ ಹೂಕೋಸು ಶೇ. 6.8 ನಷ್ಟವಾದರೆ ಟೊಮ್ಯಾಟೋದಲ್ಲಿ ಶೇ.12.4 ಇದನ್ನು ಅಮೆರಿಕದೊಂದಿಗೆ ನೋಡಿದರೆ ಒಂದು ಕಡೆ ನಮ್ಮ ತಟ್ಟೆಗೆ ಬರುವ ಮುನ್ನ ಶೇ. 40ರಷ್ಟು ಆಹಾರ ಪದಾರ್ಥ ವ್ಯರ್ಥವಾಗುತ್ತಿದ್ದರೆ ಮತ್ತೊಂದು ಕಡೆ ಶೇ.52ರಷ್ಟು ಹಣ್ಣು ತರಕಾರಿಗಳು ಸೂಪರ್ ಮಾರ್ಕೆಟ್‌ಗಳಲ್ಲಿ ಕೊಳೆಯುತ್ತಿವೆ.

ಇದನ್ನು ತಡೆಯಬೇಕೆಂದಲ್ಲಿ ಶೀಥಲ ಘಟಕಗಳನ್ನು ಸ್ಥಾಪನೆ ಮಾಡುವುದು ಬಹಳ ಮುಖ್ಯ, ಸರಕಾರ ಈ ಕ್ಷೇತ್ರಕ್ಕೆ ಧನ ಸಹಾಯ ನೀಡುತ್ತಿರುವುದು ಒಳ್ಳೆಯದು, ಆದರೆ ಆಹಾರ ಸಂಸ್ಕರಣೆಯಲ್ಲಿ ವ್ಯರ್ಥವಾಗುತ್ತಿರುವ ಪಾಲು ಬಹಳ ಹೆಚ್ಚಿದ್ದರೂ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಂಸ್ಕರಣೆಯಲ್ಲೇ ಪೋಲಾಗಿ ಹೋಗುವುದನ್ನು ತಡೆಯಲು ಸಾಧ್ಯವಾಗದೇ ಇರುವಾಗ ಆಹಾರ ಪದಾರ್ಥಗಳ ನಷ್ಟವನ್ನು ಕಡಿಮೆ ಮಾಡಲು ಹೊಸ ಹೊಸ ಸಂಸ್ಕರಣಾ ಘಟಕಗಳನ್ನು ಮಾಡುವುದು ತರವಲ್ಲ. ಉದಾಹರಣೆಗೆ ಒಂದು ಲೀಟರ್ ನೀರು ಪ್ಯಾಕ್ ಮಾಡಲು 6 ಲೀಟರ್ ನೀರನ್ನು ಏಕೆ ವ್ಯರ್ಥ ಮಾಡಬೇಕು? ಅದೇ ರೀತಿ ಆರ್‌ಒ ಯಂತ್ರದಲ್ಲಿ 25 ಲೀಟರ್ ನೀರು ಪಡೆಯಲು 75 ಲೀಟರ್ ನೀರು ಚರಂಡಿಯ ಪಾಲಾಗುತ್ತದೆ. ಇಂತ ನಷ್ಟಗಳನ್ನು ತಡೆಯಲು ಖಾಸಗಿ ಸಂಸ್ಥೆಗಳು ಏಕೆ ಪ್ರಯತ್ನಿಸಬಾರದು. ಸಂಸ್ಕರಿತ ಆಹಾರದಲ್ಲೂ ಬಹಳ ನಷ್ಟವಾಗುತ್ತಿದೆ. ಆಹಾರ ಕೈಗಾರಿಕೆಗಳು ಹಣ್ಣಿನ ಕಾನ್ಸಂಟೇಷನ್ ಆಮದು ಮಾಡಿಕೊಳ್ಳುತ್ತಿರುವ ಬಗೆಗೂ ನನಗೆ ನೋವಿದೆ. ಕೆಚಪ್ ಮತ್ತಿತರ ಪದಾರ್ಥಗಳಲ್ಲಿ ಬಳಸಲು ಬಹಳ ದೊಡ್ಡ ಪ್ರಮಾಣದಲ್ಲಿ ಟೊಮ್ಯಾಟೋ ಪೇಸ್ಟ್ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಉತ್ಪಾದನೆ ಆಗುವ ಹಣ್ಣು ತರಕಾರಿಗಳ ನಷ್ಟ ಕಡಿಮೆ ಮಾಡಲು ಸಾಧ್ಯವಿಲ್ಲ. ಸ್ಥಳೀಯವಾಗಿ ಉತ್ಪಾದನೆ ಆಗುವ ಸೇಬು ಹಾಳಾಗಿ ಹೋಗುತ್ತಿರುವಾಗ ಚಿಲಿ ಮತ್ತು ನ್ಯೂಝಿಲ್ಯಾಂಡ್‌ನಿಂದ ಸೇಬು ಆಮದು ಮಾಡಿಕೊಳ್ಳುತ್ತಿರುವ ಹಿಂದಿನ ತರ್ಕವಾದರೂ ಏನು? ಇಂತಹ ಅನಗತ್ಯ ಸಾರಿಗೆಯಿಂದ ‘ಪುಡ್ ಮೈಲ್’ (ಆಹಾರ ಪದಾರ್ಥ ನಮ್ಮ ತಟ್ಟೆಗೆ ಬರುವ ಮುನ್ನ ಸಾಗಾಣಿಕೆಯಾದ ಅಂತರ) ಹೆಚ್ಚಾಗುವುದಲ್ಲದೆ ಗ್ಲೋಬಲ್ ವಾರ್ಮಿಂಗ್ ಕೂಡಾ ಹೆಚ್ಚಾಗುತ್ತದೆ.

3. ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ನ್ಯಾಯ ಬೆಲೆ ಅಂಗಡಿ) ಪಿಡಿಎಸ್ ಹಲವಾರು ಸಮಸ್ಯೆಗಳ ಕೂಪವಾಗಿದೆ. ಬಡಜನರ ಗುರುತುಸುವಿಕೆ, ಸೋರಿಕೆ, ಆಡಳಿತ ಲೋಪಗಳು ಹೀಗೆ ಅನೇಕ ಸಮಸ್ಯೆಗಳಿವೆ, ಈ ವ್ಯವಸ್ಥೆಯನ್ನು ಸುಧಾರಿಸಲು ಇರುವ ಸಮರ್ಪಕ ಮಾರ್ಗೋಪಾಯಗಳೇನು?

  ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಲೋಪಗಳಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಇಷ್ಟು ದೊಡ್ಡ ದೇಶದಲ್ಲಿ ಪ್ರತಿ ಹಳ್ಳಿಗಳಿಗೂ ಆಹಾರ ತಲುಪಿಸುವುದು ಸುಲಭದ ಮಾತಲ್ಲ. ಇದರ ನಡುವೆ ಸೋರಿಕೆಯನ್ನೂ ತಡೆಗಟ್ಟಿ ನೈಜ ಫಲಾನುಭವಿಗಳಿಗೆ ಆಹಾರ ತಲುಪಿಸುವುದು ತನ್ಮೂಲಕ ಆಹಾರ ಭದ್ರತೆ ಒದಗಿಸುವ ಒಟ್ಟಾರೆ ವ್ಯವಸ್ಥೆಯನ್ನೇ ಭಿನ್ನ ಸೃಷ್ಟಿಕೋನದಿಂದ ನೋಡಬೇಕಿದೆ. ಸುಮಾರು 6.4 ಲಕ್ಷ ಹಳ್ಳಿಗಳಿರುವ ಭಾರತದಲ್ಲಿ ಆಹಾರ ಉತ್ಪಾದನೆ ಹಾಗೂ ಬಳಕೆಯಲ್ಲಿ ಸ್ವಾವಲಂಬನೆ ತರಬೇಕು ಎಂಬುದು ನನ್ನ ಅಭಿಮತ. ಪ್ರತಿ ಹಳ್ಳಿ ಅಥವಾ ಹಲವು ಹಳ್ಳಿಗಳ ಸಮೂಹ ತನ್ನ ಆಹಾರವನ್ನು ತಾನೇ ಉತ್ಪಾದನೆ ಮಾಡಿಕೊಳ್ಳಬೇಕು. ಆಹಾರ ಭದ್ರತೆ ಕಾಯ್ದುಕೊಳ್ಳಬೇಕು. ಪ್ರತಿ ತಾಲೂಕು ಅಥವಾ ಪಂಚಾಯತ್‌ನಲ್ಲಿ ಪಾರ ಧಾನ್ಯದ ಬ್ಯಾಂಕ್‌ಗಳು ಮಾಡುವ ಮುಖೇನ ಭಾರತದಲ್ಲಿ ಇದನ್ನು ಸಾಧಿಸಬಹುದು. ಈ ಆಹಾರ ಧಾನ್ಯದ ಬ್ಯಾಂಕ್‌ಗಳನ್ನು ಸ್ಥಳೀಯ ಪಂಚಾಯತ್ ಅಥವಾ ಮಹಿಳಾ ಸ್ವಸಹಾಯ ಸಂಘಗಳು ನಿರ್ವಹಿಸಬೇಕು. ಸ್ಥಳೀಯ ಉತ್ಪಾದನೆ, ವಿತರಣೆ ಹಾಗೂ ಬಳಕೆ ಇದಕ್ಕೆ ಸೂತ್ರವಾಗಬೇಕು. ಬ್ರಿಟೀಷರು ಭಾರತಕ್ಕೆ ಬರುವುದಕ್ಕಿಂತ ಮುನ್ನ ಇಂತಹ ವ್ಯವಸ್ಥೆ ಭಾರತದಲ್ಲಿತ್ತು. ಈಗಲೂ ಕೆಲವು ಪ್ರದೇಶದಲ್ಲಿ ಇಂತಹ ವ್ಯವಸ್ಥೆಯನ್ನು ಕಾಣಬಹುದು. ಸ್ಥಳೀಯವಾಗಿ ಉತ್ಪಾದನೆ ಹಾಗೂ ಬಳಕೆ ಮಾಡುವುದಾದಲ್ಲಿ ಸಾಗಣೆಯಲ್ಲಾಗುವ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಅಂದರೆ ಆಹಾರ ವಿತರಣೆಯನ್ನು ವಿಕೇಂದ್ರೀಕರಣ ಮಾಡಿದಂತಾಗುತ್ತದೆ. ನಾಗರಿಕ ಸರಬರಾಜು ವ್ಯವಸ್ಥೆಯನ್ನು ಕುಂಟಿತಗೊಳಿಸುವ ವಿಶ್ವ ವಾಣಿಜ್ಯ ಒಪ್ಪಂದದ ಬಗೆಗೆ ಭಾರತ ತಲೆಕೆಡಿಸಿಕೊಳ್ಳುವಂತಹ ಪರಿಸ್ಥಿತಿಯೂ ಉದ್ಭವವಾಗದಂತಹ ವಾತಾವರಣ ಸೃಷ್ಟಿಸಬೇಕು. ಹಳ್ಳಿಗಳಿಗೆ ತಮಗೆ ಬೇಕಾದ ಆಹಾರವನ್ನು ತಾವೇ ಉತ್ಪಾದಿಸಿ ವಿತರಿಸಿಕೊಳ್ಳುವ ವ್ಯವಸ್ಥೆ ಬಂದಾದಲ್ಲಿ ಪಿಡಿಎಸ್ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ. ಅದಾಗ ನಗರಗಳಿಗೆ ಆಹಾರ ಒದಗಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು.

4. ಅಗ್ರಿಟೆಕ್ ಇನ್ಪ್ರಾಸ್ಟ್ರಕ್ಟರ್ ಫಂಡ್ ಮುಖೇನ ಇಡೀ ವಿಶ್ವದ ಕೃಷಿ ಮಾರುಕಟ್ಟೆಯನ್ನು ಬೆಸೆಯುವ ಯೋಜನೆ ಸರಕಾರದ ಮುಂದಿದೆ. ಈ ಯೋಜನೆಯ ಪ್ರಕಾರ ದೇಶದ 585 ಮಾರುಕಟ್ಟೆಗಳಲ್ಲಿ ಇಲೆಕ್ಟ್ರಾನಿಕ್ ವೇದಿಕೆ ಸೃಷ್ಟಿ ಮಾಡಲಾಗುತ್ತದೆ. ಈ ಬಗ್ಗೆ ನಿಮ್ಮ ಚಿಂತನೆ ಏನು?

ಆಧುನಿಕ ತಂತ್ರಜ್ಞಾನವನ್ನು ಕೃಷಿ ಮಾರುಕಟ್ಟೆಗೆ ಬಳಸುವುದು ಬಹಳ ಮುಖ್ಯ. ಈ ಬಗೆಯ ಪ್ರಸ್ತಾವ ಆರಂಭವಾಗಿದ್ದೇ ಕರ್ನಾಟಕದ 55 ಮಾರುಕಟ್ಟೆಗಳಲ್ಲಿ ಇ-ಪ್ಲಾಟ್ ಫಾರ್ಮ್ ಆರಂಭವಾದಮೇಲೆ, ಶೇ. 50ರ ಅನುಪಾತದಲ್ಲಿ ಎನ್‌ಸಿಟಿಎಕ್ಸ್ ಸಹಯೋಗದೊಂದಿಗೆ ರಾಷ್ಟ್ರೀಯ ಇ- ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ ಕಲ್ಪಿಸಿರುವ ವ್ಯವಸ್ಥೆ ಸರಿಯಾಗಿ ಇದ್ದಲ್ಲಿ ಕರ್ನಾಟಕದ ರೈತರು ತ್ಮು ಉತ್ಪನ್ನಗಳಿಗೆ ಉತ್ತಮ ಬೆಲೆ ಏಕೆ ಪಡೆದುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಒಟ್ಟಾರೆ 155 ಎಪಿಎಂಸಿ ಮಾರುಕಟ್ಟೆಗಳಲ್ಲಿ ಈಗಾಗಲೇ 55 ಎಪಿಎಂಸಿಗಳಲ್ಲಿ ಸಿಂಗಲ್ ಲೈಸನ್ಸಿಂಗ್ ವ್ಯವಸ್ಥೆಯನ್ನು ಜಾರಿಮಾಡಲಾಗಿದೆ. ಇಷ್ಟರ ನಡುವೆಯೂ ಕರ್ನಾಟಕದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ನೆಯುತ್ತಲೇ ಇವೆ. ಇ-ಪ್ಲಾಟ್ ಫಾರ್ಮ್

ಎಂದರೆ ಸ್ಪಾಟ್ ಎಕ್ಸ್‌ಚೇಂಜ್ ಅಥವಾ ಸ್ಥಳದಲ್ಲಿ ವಿನಿಮಯ ಆಗುವ ವ್ಯವಸ್ಥೆ ಅಷ್ಟೆ. ಕರ್ನಾಟಕದಲ್ಲಿ ತೆಂಗು ಮಾರುಕಟ್ಟೆ ಇದರಲ್ಲಿ ಚೆನ್ನಾಗಿದೆ. ಈಗಿರುವ ಕೃಷಿ ಬಿಕ್ಕಟ್ಟಿಗೆ ಇಪ್ಲಾಟ್‌ಫಾರ್ಮ್ ಪರಿಹಾರ ಎಂದುಕೊಳ್ಳುವುದು ಸರಿಯಲ್ಲ. ಭಾರತಕ್ಕೆ ಅತಿ ಹೆಚ್ಚು ಎಪಿಎಂಸಿ ಗಳ ಜಾಲ ಸೃಷ್ಟಿಯಾಗಬೇಕು. ಈಗ ಭಾರತದಲ್ಲಿ 7,000 ಎಪಿಎಂಸಿ ಮಾರುಕಟ್ಟೆಗಳಿವೆ. ಆದರೆ ಪ್ರತಿ ಹಳ್ಳಿಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 42,000 ಮಂಡಿಗಳು ನಮಗೆ ಬೇಕಿದೆ. ಇಷ್ಟಾದರೆ ರೈತರಿಗೆ ಮಾರುಕಟ್ಟೆ ಒದಗಿಸಿದಂತಾಗುತ್ತದೆ. ಜೊತೆಗೆ ಉತ್ತಮ ಬೆಲೆ ಕೊಟ್ಟಂತೆಯೂ ಆಗುತ್ತದೆ. ಈಗ ಕೇವಲ ಶೇ. 6 ರಷ್ಟು ರೈತರಿಗೆ ಮಾತ್ರ ಮಾರುಕಟ್ಟೆಯ ನೈಜ ಬೆಲೆ ಸಿಗುತ್ತಿದೆ. ಇನ್ನುಳಿದ ಶೇ. 94 ರಷ್ಟು ರೈತರು ಸ್ಥಳೀಯ ಮಾರುಕಟ್ಟೆಗಳ ಮೇಲೆ ಅವಲಂಬಿತರಾಗಿದ್ದಾರೆ. ಮಾರುಕಟ್ಟೆಗಳು ಕ್ರಿಯಾತ್ಮಕವಾಗಿದ್ದಿದ್ದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಮತ್ತು ಅವಕಾಶ ಸಿಕ್ಕರೆ ಕೃಷಿ ತ್ಯಜಿಸುವ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ಬಿಹಾರ್ ಮತ್ತು ಪಂಜಾಬ್‌ನ ಉದಾಹರಣೆ ತೆಗೆದುಕೊಳ್ಳುವುದಾದರೆ ಬಿಹಾರ 2007ರಲ್ಲಿ ಎಪಿಎಂಸಿ ಅಧಿನಿಯಮವನ್ನು ಸುಧಾರಿಸಿದೆ. ಪಂಜಾಬ್‌ನ ರೈತರು ಪ್ರತಿ ಕ್ವಿಂಟಾಲ್ ಗೋಧಿಯನ್ನು 1450 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಬಿಹಾರದ ರೈತರು 800-900 ರೂ.ಗೆ ಮಾರುತ್ತಿದ್ದಾರೆ. ಪಂಜಾಬ್‌ನಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನು ಅತಂತಗೊಳಿಸಿದ್ದೇ ಆದಲ್ಲಿ ಪಂಜಾಬ್‌ನ ರೈತರಿಗೂ ಬಿಹಾರದ ರೈತರ ಸುಸ್ಥಿತಿ ಬರುತ್ತದೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಧ್ಯರ್ತಿಗಳನ್ನು ತಪ್ಪಿಸಲು ತಂತ್ರಜ್ಞಾನ ಉಪಯೋಗಿಸಿಕೊಳ್ಳಬೇಕು. ಇದೀಗ ಇಡೀ ದೇಶದಾದ್ಯಂತ ಎಪಿಎಂಸಿ ಮಾರುಕಟ್ಟೆಗಳನ್ನು ವಿಸ್ತರಿಸಬೇಕು. ಎಲ್ಲಾ 23 ಬೆಳೆಗಳಿಗೂ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ಹಾಗಾದರೆ ಕೃಷಿ ಮಾರುಕಟ್ಟೆಯ ನೈಜ ಒಗ್ಗೂಡುವಿಕೆಯಾದಂತೆಯೇ ಸರಿ. ಉಗ್ರಾಣಗಳನ್ನು ನಿರ್ಮಿಸಲು ಹೂಡಿಕೆ ಬೇಕು. ಸರಕಾರ 2.5 ಲಕ್ಷ ಪಂಚಾಯತ್‌ಗಳಲ್ಲಿ ಮನೆ ನಿರ್ಮಿಸಲು ಹಣ ವಿನಿಯೋಗ ಮಾಡುತ್ತಿರಬೇಕಾದರೆ ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ದಾಸ್ತಾನು ಕೇಂದ್ರಗಳನ್ನು ನಿರ್ಮಿಸಲು ಏಕೆ ಬಳಸಲಾಗುತ್ತಿಲ್ಲ.

5. ಭಾರತದ ಕೃಷಿ ಕ್ಷೇತ್ರದಲ್ಲಿರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಗುತ್ತಿಗೆ ಕೃಷಿ ಉತ್ತರವಾಗಬಲ್ಲದೇ? ದೇಶದಲ್ಲಿ ಗುತ್ತಿಗೆ ಕೃಷಿ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಿದೆ?

ಭಾರತದ ಬೆಳೆಗಳಲ್ಲಿ ಕೆಲವೇ ಕೆಲವು ಪ್ರದೇಶಗಳಲ್ಲಿ ಗುತ್ತಿಗೆ ಕೃಷಿ ಗೆದ್ದಿದೆ. ಆದರೆ ನಿತ್ಯ ಬಳಕೆಯಲ್ಲಿರುವ ಅನೇಕ ಬೆಳೆಗಳಲ್ಲಿ ಗುತ್ತಿಗೆ ಆಧಾರದ ಕೃಷಿ ಸಮರ್ಪಕವಾದ ಉತ್ತರ ಕೊಟ್ಟಿಲ್ಲ. ಅಂದರೆ ಎರಡೂ ಬಗೆಯ ಅನುಭವ ಈ ಗುತ್ತಿಗೆ ಆಧಾರದ ಕೃಷಿಯಲ್ಲಿ ಕಂಡಾಗಿದೆ. ಗುತ್ತಿಗೆ ಆಧಾರದ ಕೃಷಿಯಲ್ಲಿ ರೈತರಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಪರಸರ ಸಹಾಯವಾಗಬಲ್ಲ ಮಾದರಿ ಹೇಗಿರಬೇಕು ಮತ್ತು ಈಗಿರುವ ಗುತ್ತಿಗೆ ಪದ್ಧತಿಯಲ್ಲಿನ ಹುಳುಕುಗಳೇನು ಎಂಬುದರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಪಾರಂಪರಿಕವಾಗಿ ಕಬ್ಬು; ಸಕ್ಕರೆ ಕಾರ್ಖಾನೆಗಳ ಜೊತೆಯಲ್ಲಿಯೇ ನಡೆಯುತ್ತಿರುವುದು ಒಂದು ಬಗೆಯ ಗುತ್ತಿಗೆ ಕೃಷಿಯೇ ಆಗಿದೆ. ಆದರೆ ಇತ್ತೀಚೆಗೆ ಬಹುದೊಡ್ಡ ಮೊತ್ತದ ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ಕೊಡುತ್ತಿಲ್ಲವಾದದ್ದನ್ನು ಕಂಡಾಗ ಇಂತಹ ಪದ್ಧತಿಯಲ್ಲೂ ಎಲ್ಲವೂ ಸರಿಯಾಗಿಲ್ಲ ಎಂಬುದು ವೇದ್ಯವಾಗುತ್ತದೆ.

ರೈತನ ಪರ ಹಾಗೂ ಪರಿಸರದ ಪರ ಇರಬಹುದಾದ ವ್ಯವಸ್ಥೆ ಸರಿಯಾಗಿದ್ದರೆ, ಗುತ್ತಿಗೆ ಕೃಷಿಯಿಂದ ಲಾಭವಿದೆ ಎಂದು ನನಗನಿಸುತ್ತದೆ. ಬಹುತೇಕ ಆಹಾರ ಕೈಗಾರಿಕೆಗಳು ಕಡಿಮೆ ಅವಧಿಯಲ್ಲಿ ಲಾಭ ಗಳಿಸುವ ಲೆಕ್ಕಾಚಾರ ಹಾಕಿಕೊಂಡಿರುವುದರಿಂದ ತುಂಬಾ ತೀವ್ರತರವಾದ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಇದರಿಂದ ಬಹಳ ಅಗಾಧವಾಗಿ ಪರಿಸರದ ಮೇಲೆ ಹಾನಿ ಉಂಟಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಪೂರ್ವಭಾವಿಯಾಗಿ ನಿರ್ಧಾರ ಕೈಗೊಳ್ಳಬೇಕಿದೆ.

6. ಬಹಳ ದೇಶಗಳು ಕೃಷಿ ವಾಣಿಜ್ಯದಲ್ಲಿ ವಿಭಿನ್ನ ಸ್ಥರಗಳಲ್ಲಿರುವ ಹಿನ್ನೆಲೆಯಲ್ಲಿ ವಿಶ್ವ ವಾಣಿಜ್ಯ ಒಪ್ಪಂದದ ದೋಹಾ ಸುತ್ತಿನ ಮಾತುಕತೆ ಕಳೆದ ದಶಕದಲ್ಲಿ ಯಶಸ್ವಿಯಾಗಲಿಲ್ಲ. ಇದರಲ್ಲಿರುವ ಹುಳುಕುಗಳೇನು ಮತ್ತು ಇದನ್ನು ಬಗೆಹರಿಸಲು ಇರುವ ಮಾರ್ಗೋಪಾಯಗಳೇನು?

ವಿಶ್ವ ವಾಣಿಜ್ಯ ಸಂಸ್ಥೆ ಅಸ್ಥಿತ್ವಕ್ಕೆ ಬಂದಾಗಿನಿಂದ ನನ್ನದೇ ಅಧ್ಯಯನದ ಪ್ರಕಾರ ಹೆಚ್ಚೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳು ಆಹಾರ ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿ ಮಾರ್ಪಟ್ಟಿವೆ. ಸುಮಾರು 105 ರಾಷ್ಟ್ರಗಳು ಆಹಾರಕ್ಕಾಗಿ ಇತರ ದೇಶಗಳನ್ನು ಅವಲಂಬಿಸಿವೆ. ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಪ್ರೇರೇಪಿಸಿದಂತೆ ತಾರತಮ್ಯ ನೀತಿಯನ್ನು ಅನುಸರಿಸಿದ್ದೇ ಆದಲ್ಲಿ ಭಾರತ ಅವಲಂಬನೆಗೆ ಒಳಗಾಗುವ ರಾಷ್ಟ್ರವಾಗುತ್ತದೆ. ಈಗಾಗಲೇ ಭಾರತದಲ್ಲಿ ಕೊಳ್ಳುವ ಬೆಲೆ ಉತ್ಪಾದನೆಗಿಂತ ಕಡಿಮೆ ಇದೆ ಅಥವಾ ಸಮನಾಗಿದೆ. ವಿಶ್ವ ವಾಣಿಜ್ಯದಲ್ಲಿ ಕೃಷಿ ಉತ್ಪನ್ನಗಳ ಕಥೆ ವ್ಯಥೆಯನ್ನು ಬಿಡಿಸಿ ಹೇಳುವ ಮುನ್ನ ಅಥವಾ ಸರಿ ತಪ್ಪುಗಳನ್ನು ಅರ್ಥೈಸಿಕೊಳ್ಳುವ ಮುಂಚೆ ಬಹಳ ದೊಡ್ಡ ತೊಡಕೇನೆಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಕೃಷಿ ಸಹಾಯಧನವನ್ನು ಕಡಿಮೆ ಮಾಡುತ್ತಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರತಿ ವರ್ಷ 500 ಬಿಲಿಯನ್ ಡಾಲರ್ ಕೃಷಿ ಸಹಾಯಧನ ಕೊಡಲಾಗುತ್ತಿದೆ ಅಮೆರಿಕಾದ 2014ರ ಕೃಷಿ ಬಿಲ್ ಮುಂದಿನ ಹತ್ತು ವರ್ಷಕ್ಕೆ 90 ಬಿಲಿಯನ್ ಅಮೆರಿಕದ ಡಾಲರ್ ಮೀಸಲಿಟ್ಟಿದೆ. ಅಂದ ಮೇಲೆ ಅಲ್ಲಿನ ಕೃಷಿ ಪ್ರೊಟೆಕ್ಟ್ ಮಾಡಿದಂತಾಗಿದೆ. ಈ ದೇಶಗಳು ತಮ್ಮ ಕೃಷಿ ಉತ್ಪನ್ನಗಳಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂದು ತಾಕೀತು ಮಾಡುತ್ತಿವೆ. ಜೊತೆಗೆ ಆಮದು ಸುಂಕ ಕಡಿತಗೊಳಿಸಲು ಕೋರುತ್ತಿವೆ. ಭಾರತದಂತಹ ರಾಷ್ಟ್ರಕ್ಕೆ ಆಹಾರ ಆಮದು ಮಾಡಿಕೊಳ್ಳುವುದೆಂದರೆ ನಿರುದ್ಯೋಗ ಆಮದು ಮಾಡಿಕೊಂಡಂತೆಯೇ ಸರಿ. ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರೆ ಹೆಚ್ಚಿನ ಪ್ರಮಾಣದ ಸಣ್ಣ ರೈತರು ಕೃಷಿ ಉತ್ಪಾದನೆಯಿಂದ ಆಚೆ ಬಂದಂತೆ, ಆಹಾರ ಭದ್ರತೆಗೆ ಬೇಕಾದ ಕ್ರಮಗಳನ್ನು ಭಾರತ ತೆಗೆದುಕೊಳ್ಳುವುದಾಗಿ ಹೇಳುತ್ತಿದೆಯಾದರೂ ಮುಂದಿನ ಡಿಸೆಂಬರ್‌ನಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯ ಮಂತ್ರಿ ಮಂಡಲದಲ್ಲಿ ಭಾರತದ ನಿಲುವು ಏನು ಎಂಬುದನ್ನು ಕಾದು ನೋಡಬೇಕಿದೆ.

7. ಭಾರತದ ಬಹುತೇಕ ರೈತರು ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರೇ ಆಗಿದ್ದಾರೆ. ಇಂತಹ ಸಣ್ಣ ಭೂ ಹಿಡುವಳಿಗಳಲ್ಲಿ ಉತ್ಪಾದಕತೆ ಹೆಚ್ಚಿಬೇಕಾಗಿರುವುದು ಸವಾಲು. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳ ಪಾತ್ರವೇನು?

ಹೌದು. ಬಹುತೇಕ ಭಾರತದ ಕೃಷಿಕರು ಸಣ್ಣ ಮತ್ತು ಅತಿ ಸಣ್ಣ ರೈತರೇ ಆಗಿದ್ದಾರೆ. ಇವರ ನಡುವೆ ಉತ್ಪಾದಕತೆಯೊಂದೇ ಸವಾಲು ಅಲ್ಲ, ಉತ್ಪಾದನೆಗೆ ಒಳ್ಳೆಯ ಬೆೆ ಕೊಡುವುದು ಒಂದು ಸವಾಲಾಗಿದೆ.

ಇಷ್ಟು ವರ್ಷಗಳ ಕಾಲ ಆಹಾರದ ಬೆಲೆಯನ್ನು ಕಡಿಮೆ ಇರುವಂತೆ ನೋಡಿಕೊಂಡು ಬರಲಾಗಿದೆ. ಇದಕ್ಕೆ ಕಾರಣ ಹೆಚ್ಚಿನ ಉತ್ಪಾದನೆಯನ್ನು ತಡೆಯುವುದೇ ಆಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ರೈತರು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸುವ ಹೊರೆಯನ್ನು ಹೊರುತ್ತಿದ್ದಾರೆ ಎಂದರ್ಥ. ಇದು ಯಾವ ನ್ಯಾಯ ಕಳೆದ ನಲವತ್ತೈದು ವರ್ಷಗಳಿಂದ ಎಲ್ಲಾ ಕ್ಷೇತ್ರಗಳ ಆದಾಯ ಗಣನೀಯವಾಗಿ ಏರಿಕೆ ಆಗಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ತೀರಾ ಕಡಿಮೆ ಇರುವಂತೆ ನೋಡಿಕೊಳ್ಳಲಾಗಿದೆ. 1970 ರಲ್ಲಿ ಒಂದು ಕ್ವಿಂಟಾಲ್ ಗೋಧಿಗೆ 76 ರೂ.. ಇದೀಗ 2015 ರಲ್ಲಿ, 45 ವರ್ಷಗಳ ನಂತರ ಪ್ರತಿ ಕ್ವಿಂಟಾಲ್ ಗೋಧಿ ಬೆಲೆ 1,450 ರೂ.. ಇದು 19 ಪಟ್ಟು ಹೆಚ್ಚಳ. ಇದೇ ಅವಧಿಯಲ್ಲಿ ಕೇಂದ್ರ ಸರಕಾರಿ ನೌಕರರ ಸಂಬಳ ಮತ್ತು ಭತ್ತೆಗಳು 110 ರಿಂದ 120 ಪಟ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಕರ ಸಂಬಳ 280 ರಿಂದ 320 ರಷ್ಟು ಹೆಚ್ಚಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಅಧ್ಯಾಪಕರಿಗೆ 150-170 ಪಟ್ಟು ಹೆಚ್ಚಿದೆ. ಕಾರ್ಪೊರೇಟ್ ಕ್ಷೇತ್ರದ ನೌಕರರಲ್ಲಿ 350-1000 ಪಟ್ಟು ಹೆಚ್ಚಿದೆ. ಇದೇ ಅವಧಿಯಲ್ಲಿ ಶಾಲಾ ಕಾಲೇಜುಗಳ ಶುಲ್ಕ 200-300 ಪಟ್ಟು ಹೆಚ್ಚಿದೆ. ನಗರಗಳಲ್ಲಿ ಸರಾಸರಿ ಮನೆ ಬಾಡಿಗೆ 350 ಪಟ್ಟು ಹೆಚ್ಚಾಗಿದೆ.

ಈಗ ಮೊದಲು ಆಗಬೇಕಾಗಿರುವ ಕೆಲಸವೇನೆಂದರೆ ಕೃಷಿ ಕ್ಷೇತ್ರ ಹಾಗೂ ಇನ್ನುಳಿದ ಕ್ಷೇತ್ರಗಳಲ್ಲಿನ ಆದಾಯ ಸಮಾನಾಂತರವಾಗಿರುವಂತೆ ನೋಡಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಕೊಡಬೇಕು ಎಂಬುದನ್ನು ಯಾರೂ ಮಾತನಾಡುತ್ತಿಲ್ಲ. ಆದರೆ ಬೆಳೆ ಉತ್ಪಾದಕತೆಯ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದು ಕೃಷಿ ಪರಿಕರಗಳನ್ನು ಮಾರಾಟ ಮಾಡುವವರಿಗೆ ಲಾಭವೇ ಹೊರತು ಮತ್ತಿನ್ನಾರಿಗೆ, ರೈತರ ಕೈಯಲ್ಲಿ ಹೆಚ್ಚು ಹಣವಿದ್ದಲ್ಲಿ ಕೈಗಾರಿಕೆಗಳಿಗೂ ಉತ್ತಮ. ಗ್ರಾಹಕರ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯೂ ಬರುತ್ತದೆ. ಹಾಗಾಗಿ ಕೈಗಾರಿಕೆಗಳು ರೈತರಿಗೆ ಹೆಚ್ಚಿನ ಲಾಭದಾಯಕ ಬೆಲೆ ಕೊಡಿಸಲು ಚಿಂತಿಸಬೇಕು. ಇದೀಗ ರೈತ ಕುಟುಂಬಗಳಿಗೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ತಂದುಕೊಡಬಲ್ಲ ರೈತರ ರಾಷ್ಟ್ರೀಯ ಆದಾಯ ಆಯೋಗ ತುರ್ತಾಗಿ ಆಗಬೇಕಿದೆ.

ಕೃಷಿ ಕ್ಷೇತ್ರಕ್ಕೆ ಸಾರ್ವಜನಿಕ ಕ್ಷೇತ್ರದ ಹೂಡಿಕೆ ಹೆಚ್ಚಾಗಬೇಕು. 11 ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೇವಲ 1 ಲಕ್ಷ ಕೋಟಿ ಕೃಷಿ ಕ್ಷೇತ್ರಕ್ಕೆ ಮೀಸಲಿಡಲಾಗಿತ್ತು. ಇದೀಗ 12ನೇಯ ಪಂಚವಾರ್ಷಿಕ ಯೋಜನೆಯಲ್ಲಿ 1.5 ಲಕ್ಷ ಕೋಟಿ ಮೀಸಲಿಡಲಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಳೆದ 10 ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ಕೇವಲ 2.5 ಲಕ್ಷ ಕೋಟಿ ಮೀಸಲಿಡಲಾಗಿದೆ. ಇಂತಹ ತಾರತಮ್ಯ ಮೊದಲು ಹೋಗಲಾಡಿಸಬೇಕು.

ಕೃಪೆ: ನೆಲದ ಸತ್ಯ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)