ಹಸಿವಿನಿಂದ ಸಾಯುವ ಹುಲಿಯ ಮರಿಯನ್ನು ಸಂತೈಸಿದ ಪುಣ್ಯಕೋಟಿ
ಜನಪ್ರಿಯ ಪುಣ್ಯಕೋಟಿಯ ಕತೆ ಯಾರಿಗೆ ಗೊತ್ತಿಲ್ಲ? ಸತ್ಯವೇ ನಮ್ಮ ತಾಯಿ ತಂದೆ ಎಂದು ಸಾರುವ ಗೋವಿನ ಹಾಡು ಚಿಕ್ಕ ವಯಸ್ಸಿನಲ್ಲಿ ಬಹುತೇಕ ಶಾಲೆಗಳಲ್ಲಿ ಒಮ್ಮೆಯಾದರೂ ಅಭಿನಯಿಸಿರುತ್ತೇವೆ ಅಥವಾ ನೋಡಿರುತ್ತೇವೆ ಇಲ್ಲವೆ ಕೇಳಿರುತ್ತೇವೆ. ನಮ್ಮ ಸ್ಮತಿಯಲ್ಲಿ ಸದಾ ಉಳಿಯುವ ಈ ಕತೆ, ನಾವು ಬೆಳೆದು ದೊಡ್ಡವರಾದ ಮೇಲೆ ಸತ್ಯಮೇವ ಜಯತೆ ಎಂಬುದು ಪ್ರಶ್ನಾತೀತವೇ ಆದರೂ ಪ್ರಾಣ ತ್ಯಾಗ ಮಾಡಿದ ಹುಲಿಯ ಬಗ್ಗೆಯೂ ಯೋಚಿಸಬೇಕಲ್ಲವೆ ಎಂದೆನ್ನಿಸದಿರದು. ಕಳೆದವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪುಣ್ಯಕೋಟಿ ಕತೆಯ ಸಂಗೀತ ನಾಟಕ ಹೊಂಗಿರಣ ತಂಡದಿಂದ ಪ್ರದರ್ಶನಗೊಂಡಿತು. ಈ ನಾಟಕವನ್ನು ನಮ್ಮ ತಂಡದ ಪ್ರತಿಭಾವಂತ ನಟಿ ಸುಪ್ರಿಯಾ ರಾವ್ ನಿರ್ದೇಶಿಸಿದ್ದರು. ಅವರಿಗೆ ಸಹಾಯಕ ನಿರ್ದೇಶಕರಾಗಿದ್ದವರು ಮಾನಸ ಸಂತೋಷ. ಎಲ್ಲರಿಗೂ ಗೊತ್ತಿರುವ ಈ ಕತೆಯನ್ನೇ ಮತ್ಯಾಕೆ ತೋರಿಸಬೇಕು ಎಂಬ ನನ್ನ ಗೊಂದಲಕ್ಕೆ ನಾಟಕದ ಕ್ಲೈಮ್ಯಾಕ್ಸ್ ಉತ್ತರ ನೀಡಿತು. ಹುಲಿಗೆ ಮಾತು ಕೊಟ್ಟಿದ್ದೇನೆ ಎಂಬ ಕಾರಣಕ್ಕೆ ಹಿಂದಿರುಗುವ ಪುಣ್ಯಕೋಟಿಯ ಪ್ರಾಮಾಣಿಕತೆಗೆ ನೀಡಿದಷ್ಟೇ ಬೆಲೆಯನ್ನು ಸತ್ಯಸಂಧತೆಗೆ ಮೆಚ್ಚಿ ತನ್ನ ಪ್ರಾಣ ತ್ಯಾಗ ಮಾಡುವ ಹುಲಿಗೂ ನೀಡಿದ್ದು ಈ ನಾಟಕದ ವಿಶೇಷ. ಇದರಲ್ಲಿ ಅಭಿನಯಿಸಿದ ಎಲ್ಲಾ ಮಕ್ಕಳು ಅಭಿನಂದನಾರ್ಹರು. ಇಲ್ಲಿ ಹುಲಿ ತಾನಾಗಿಯೇ ಹಾರಿ ಪ್ರಾಣ ತೆಗೆದುಕೊಳ್ಳುವುದಿಲ್ಲ. ಅದನ್ನು ಕತೆಯಲ್ಲಿ ಕೇಳಿದಾಗಲೂ ತೀರ ಅಸಹಜ ಎನ್ನಿಸುತ್ತಿತ್ತು. ಬದಲಾಗಿ, ಹಸಿವಿನಿಂದ ಹುಲಿ ಸಾಯುತ್ತದೆ. ಹಾಗೆಯೇ ಹುಲಿಯ ಮರಿ ತನ್ನ ತಾಯಿಯ ಕಳೇಬರದ ಎದುರು ಸಂಕಟಪಡುತ್ತಿರುತ್ತದೆ. ಆಗ ಅಲ್ಲಿಗೆ ಪುಣ್ಯಕೋಟಿಯ ಕರು ಬಂದು ಹುಲಿಯ ಮರಿಯನ್ನು ಸಂತೈಸುತ್ತದೆ. ಪುಣ್ಯಕೋಟಿಯೂ ಬಂದು ಹುಲಿಯ ಮರಿ ಕೂಡ ಅನಾಥವಾಗುವುದು ಬೇಡ ಎಂಬ ಕಾರಣಕ್ಕೆ ಅದರ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ವಾಸ್ತವಿಕವಾಗಿ ಹುಲಿಯ ಮರಿ ಪುಣ್ಯಕೋಟಿಯ ಕೊಟ್ಟಿಗೆ ಸೇರುವುದು ಕಷ್ಟವೇ ಇರಬಹುದು. ಆದರೆ ಹುಲಿಯನ್ನು ಹಸಿವಿನಿಂದ ಸಾಯುವಂತೆ ತೋರಿಸಿ, ಒಂದು ವೇಳೆ ಪುಣ್ಯಕೋಟಿಯನ್ನು ಹುಲಿ ಸಾಯಿಸಿ ತಿಂದಿದ್ದರೆ ಆಗ ಗೋವಿನ ಕರು ಅನಾಥವಾಗುತ್ತಿದ್ದಂತೆಯೇ ಹುಲಿ ಸತ್ತಾಗ ಅದರ ಮರಿಯೂ ಅನಾಥವಾಗುತ್ತದಲ್ಲವೆ ಎಂದು ಯೋಚಿಸಿದ ನಿರ್ದೇಶಕರ ಬಗ್ಗೆ ಮೆಚ್ಚಲೇಬೇಕು. ಯಾವುದೂ ಕಾಲಾತೀತವಾಗಲೀ, ಪ್ರಶ್ನಾತೀತವಾಗಲೀ ಇರುವುದಿಲ್ಲ. ಹುಲಿಯ ಮರಿಯನ್ನು ಸಂತೈಸುವ ಪುಣ್ಯಕೋಟಿಯ ದೃಶ್ಯ ಈ ಕಾಲದ ಅಗತ್ಯ ಸಂಕೇತಗಳಲ್ಲೊಂದು.