ಆಸ್ಟ್ರೇಲಿಯ ಸರ್ಕಾರಕ್ಕೆ ಹಿನ್ನೆಡೆ: ಆಸ್ಟ್ರೇಲಿಯನ್ ಓಪನ್ ಆಡಲು ಜೊಕೊವಿಕ್ ಗೆ ಅವಕಾಶ ನೀಡಿದ ಕೋರ್ಟ್
ನೊವಾಕ್ ಜೊಕೊವಿಕ್ (Photo: AP/PTI)
ವಿಶ್ವದ ನಂಬರ್ ಒನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ತಮ್ಮ ಗೆಲುವು ಸಾಧಿಸಿದ್ದಾರೆ. ವೀಸಾ ರದ್ದು ಪಡಿಸುವಿಕೆ ಹಾಗೂ ಜೊಕೋವಿಕ್ರನ್ನು ಗಡಿಪಾರು ಮಾಡುವ ಆಸ್ಟ್ರೇಲಿಯ ಸರ್ಕಾರದ ಆದೇಶಕ್ಕೆ ಫೆಡೆರಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ದೇಶಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಸಾಂಕ್ರಾಮಿಕ ನಿಯಮಗಳನ್ನು ವಿಧಿಸಿರುವ ಆಸ್ಟ್ರೇಲಿಯಾ ಸರ್ಕಾರಕ್ಕೆ ಇದು ಭಾರೀ ಹಿನ್ನಡೆಯಾಗಿದೆ.
ನ್ಯಾಯಾಲಯದ ಆದೇಶ ತಮ್ಮ ಪರವಾಗಿ ಬಂದಿರುವುದು ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಆಟವಾಡುವ ಅವಕಾಶವನ್ನು ಜೊಕೋವಿಕ್ ಅವರಿಗೆ ನೀಡಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದ ಜೊಕೊವಿಕ್ ಆಸ್ಟ್ರೇಲಿಯಾದಲ್ಲಿ ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕೆ ಬಂಧನಕ್ಕೆ ಒಳಗಾಗಬೇಕಾಗಿತ್ತು. ಕಳೆದ ಬುಧವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್ ತಲುಪಿದ ಜೊಕೊವಿಕ್ ಅವರನ್ನು ಹೋಟೆಲ್ ಒಂದರಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು.
ಆಸ್ಟ್ರೇಲಿಯದಲ್ಲಿ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಲಸಿಕೆ ಕಡ್ಡಾಯವಾಗಿದ್ದು, ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕಿತ್ತು. ಆದರೆ, ವಿಶ್ವದ ಒಂದನೇ ನಂಬರ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದರು. ವೈದ್ಯಕೀಯ ಆಧಾರದ ಮೇಲೆ ಟೂರ್ನಿಯಲ್ಲಿ ಆಡಲು ಅವರಿಗೆ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದರೆ ದೇಶಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ರದ್ದುಮಾಡಿ ಪಾರ್ಕ್ ಹೋಟೆಲ್ನಲ್ಲಿ ಇರಿಸಿದ್ದರು. ಈ ಹಿನ್ನೆಲೆಯಲ್ಲಿ ಜೊಕೊವಿಕ್ ನ್ಯಾಯಾಲಯದ ಮೊರೆ ಹೋಗಿದ್ದರು.
ಜೊಕೋವಿಕ್ ಅಗತ್ಯವಿದ್ದ ವೈದ್ಯಕೀಯ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಸ್ಟ್ರೇಲಿಯನ್ ಸರ್ಕಾರ ಪರ ವಕೀಲರು ವಾದಿಸಿದ್ದರು.
ಕಳೆದ ತಿಂಗಳು ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತನಗೆ ಇನ್ನಷ್ಟು ಕಾಲಾವಕಾಶಬೇಕು ಎಂದಿದ್ದ ಜೊಕೊವಿಕ್ ವಿನಂತಿಸಿಕೊಂಡಿದ್ದರು. ಜೊಕೊವಿಕ್ ಮನವಿಯನ್ನು ಪುರಸ್ಕರಿಸಿದ ಫೆಡೆರಲ್ ಕೋರ್ಟ್, ಕೋವಿಡ್ ಪಾಸಿಟಿವ್ ಆದವರಿಗೆ ಲಸಿಕೆ ಹಾಕಿಸಲು ಆರು ತಿಂಗಳ ಕಾಲ ವಿನಾಯಿತಿ ನೀಡಬಹುದೆಂದು ಹೇಳಿದೆ.