varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಒಲಿದ ಸ್ವರಗಳು

ವಾರ್ತಾ ಭಾರತಿ : 10 Jan, 2022
ಬಿದಲೋಟಿ ರಂಗನಾಥ್

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಿದಲೋಟಿ ಗ್ರಾಮದ ಕವಿ ರಂಗನಾಥ್ ವೃತ್ತಿಯಿಂದ ವಕೀಲರು. ಬೆಂದ ಅನ್ನದ ಅಗುಳಿನ ಪರಿಮಳದಂತೆ ಇವರ ಕವನಗಳ ಘಮ. ಮಣ್ಣಿಗೆ ಬಿದ್ದ ಹೂವುಗಳು, ಬದುಕು ಸೂಜಿ ಮತ್ತು ನೂಲು, ಉರಿವ ಕರುಳ ದೀಪ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಇವರ ನಾಲ್ಕು ಕವನ ಸಂಕಲನಗಳು. ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ಶಾಲಿನಿ ಪ್ರಶಸ್ತಿ ಇವರ ಕವನಗಳಿಗೆ ಸಂದ ಗೌರವವಾಗಿವೆ.

ಬಿದಲೋಟಿ ರಂಗನಾಥ್

ಅವ್ವನ ಕಣ್ಣ ಬೆಳಕು

ಬುಡ್ಡಿ ಬೆಳಕಲ್ಲಿ

ನೆಂದ ಸೌದೆಗಳನ್ನು ಒಲೆಗೆ ತುರುಕಿ

ಹೊಗೆಯಲ್ಲಿ ಕೆಂಪಾದ ಕಣ್ಣುಗಳ ಉಜ್ಜಿಕೊಳ್ಳುತ

ಅವ್ವ ಸುಡುತ್ತಿದ್ದ ರಾಗಿ ರೊಟ್ಟಿಯ ಬೆರಳು

ನನ್ನೊಟ್ಟೆಯೊಳಗೆ

ಗರಿ ತೂತುಗಳಲ್ಲಿ ಹನಿಗಳು ತೊಟ್ಟಿಕ್ಕಿ

ಗೂಡರಿಸಿ ಕೂತ ಒಲೆಯ ಕರುಳ ವ್ಯಸನ

ಬೆನ್ನಿಗಂಟಿದ ಹೊಟ್ಟೆಗೆ ಮರುಗಿದ ಜೀವ

ಗವಾಕ್ಷಿಯ ಬೆಳಕಿಗೆ

ಕಣ್ಣುಗಳು ಬೆಳಗಿ

ಹಸಿವಿನ ಮೊಗದ ಕನ್ನಡಿ ಬಯಲಾಗಿ

ನೋವಿನ ನೆತ್ತರು ನರಗಳು ಕುಡಿದು

ಜೋಪಡಿಯ ಲಾಟೀನು ಬೆಳಕಲ್ಲಿ

ಗಾಯದ ಗೋಡೆಯ ಗೂಟಕೆ

ಜೋಳಿಗೆ ನೇತಾಕಿ

ಎರಗಿದ ತೂಕವ ಹೆಗಲ ಮೇಲೆ ಹೊತ್ತೇ ನಡೆದು

ನನ್ನೊಳಗಿನ ತೂಕದ ನೋವಿಗೆ ಮರುಗಿದಳು

ಸೀಳುಕ್ಕೆಯಲಿ ನೆಂದು

ಗಿಡಗಂಟೆಗಳ ನಡುವೆ ಬೆವರಲಿ ಬೆಂದು

ಕಿಂಡಿ ಬೆಳಕಿನ ಜೊತೆ ಆಡಿ

ನೆಲದ ನಿಟ್ಟುಸಿರ ಆತವಳು

ಕಗ್ಗತ್ತಲ ರಾತ್ರಿಯಲಿ

ಗದ್ದೆ ಪೈರ ಮೇಲೆ ಹರಿದ ಕಣ್ಣ ಬೆಳಕು

ಪೆಡೆಯ ಮಣ್ಣ ಮುಟ್ಟಿ

ಮಡಿ ಮಡಿಯಲ್ಲೂ ನಡೆದು

ಹೊತ್ತಾರೆ ಬೈಗು ನಡು ಮಧ್ಯಾಹ್ನ

ಉಸಿರು ಬಿಗಿಹಿಡಿದು

ಅಂಗೈಯೊಳಗೆ ನಕ್ಷತ್ರ ಪುಂಜ ಕಂಡ ಅವ್ವನ

ಕಣ್ಣೀರ ಹನಿಗಳ ಲೆಕ್ಕವಿಲ್ಲ

ಮಾಗಿಯು ಬಾಗಿ ಹುಲುಸು ಸಾಗಿ

ಮಂಕರಿಯಲಿ ಹೊತ್ತ ಗೊಬ್ಬರಕೆ

ಮೊಳೆತ ಬದುಕಿನ ಪೈರು

ರಾಗಿಕಡ್ಡಿ ಕುಪ್ಪೆಯಲಿ ಅವ್ವನ ಜೀವ

ಅರಳಿದ ಕಣದ ಜೀವಂತ ಬದುಕು

ಉಗಾದಿಗೆ ಅವ್ವನ ಹೊಸ ಸೀರೆಯ ನೆರಿಗೆಗಳಲ್ಲಿ

ಕನಸುಗಳು ಆಡಿ

ಅಪ್ಪನ ಮನದಂಗಳದಲ್ಲಿ ಶುಕ್ರದೆಸೆಯ ಬೆಳಕು

ಅಂಕು ಡೊಂಕಿನ ಸೆಗಣಿ ಕದರು ಹಟ್ಟಿಯ ಮೇಲೆ

ಅವ್ವ ಕಟ್ಟಿ ಹಾಕಿದ

ನಗುವ ಪುಡಿ ರಂಗೋಲಿಯ ಗೆರೆಗಳು

ಉರಿಯದ ಒಲೆಯಲಿ

ಹಸಿವಿನ ಸಂಕಟ ಸುಟ್ಟು

ಉರಿಯುತ್ತಿದ್ದಳು ಅವ್ವ

ಒಳಗೂ ಹೊಲಮಾಳದೊಳಗು

ಅವಳಿಗೆ ಬದುಕೆಂದರೆ

ಬೆವರಿ ಬಾಯಾರಿ ಬಿರಿದ ನೆಲದ ಬಿಕ್ಕಳಿಕೆ

ಕದರು ನೆಲಕೆ ಕಾಲೂರಿ ನಿಂತ ಕವೆ

ಕಣ್ಣ ಚಿತ್ರದ ಬಣ್ಣ ಕರಗಿ...

ಎದೆ ಎಲುಬಿನೊಳಗೊಂದು

ಜೀವತಂತು ಉಸಿರಾಡುತ್ತಾ

ರೆಕ್ಕೆ ಚಾಚಿ ಚುಕ್ಕಿಗಳ ಹೊತ್ತು

ಕತ್ತಲೆಯ ಗರ್ಭದೊಳು ನಡೆಯುತ್ತಿದೆ

ಬಿದ್ದ ಕಾಲದ ಕನಸುಗಳು

ತಂಕಾಲಗೊಂಡಿವೆ

ರಕ್ತ ಮಾಂಸ ತುಂಬಲು

ಕೈ ನಡುಕ

ಹೊಟ್ಟೆ ಬೆನ್ನಿಗತ್ತಿ

ಹಸಿವು ಬಾಯಿತೆರೆದರೂ

ತುತ್ತಿಲ್ಲದ ತುತ್ತಿನ ಚೀಲಕೂ

ಬರದ ಹೆಜ್ಜೆ

ಮಡುಗಟ್ಟಿದ ದುಃಖ ಬೆಳಕಿಗೆ ಮೌನದ ತೊಟ್ಟಿಲ ಕಟ್ಟಿ

ಕಣ್ಣು ಕಿವಿ ಮಾನಾಂಗ ಶೂನ್ಯದ ಹೆಗಲೇರಿ

ಬೀಸುವ ಗಾಳಿಗೆ ಬೆದರಿ

ತಟ್ಟಾಡುತ್ತಿದೆ ಮೂಳೆ ಹೊತ್ತ ಪಂಜರ

ಮುಖವಿಲ್ಲದ ಬೆಕ್ಕೊಂದು

ಕತ್ತಲ ಕುಡಿಯುತ್ತಿದೆ

ತೀರದ ದಾಹ ನಿಲ್ಲದ ನೀಲಿಮಳೆಗೆ

ಕಣ್ಣ ಚಿತ್ರದ ಬಣ್ಣ ಕರಗಿ

ಗುರುತು ಸಿಗದ ಕಾಲುದಾರಿ.!

ಯಾವ ಕಡೆ ಚಲಿಸುತ್ತಿದೆಯೋ

ನಾನಿಲ್ಲಿ

ಶತಮಾನದ ಹಸಿವಿಗೆ

ಬೆರಗುಗೊಂಡು ನಾದ

ಮೀಟುತ್ತಿದ್ದೇನೆ.!

ತಾತನ ಕದ ಮತ್ತು ಅಪ್ಪ

ತಾತನಿಟ್ಟ ‘ಕದ’ ಸೌದೆಗೆಂದು

ಅಪ್ಪ ಸಿಗೆಹೊಯ್ಯುವಾಗ

ತಾತನ ಕಣ್ಣಲ್ಲಿ ಬೆವರ ನೀರು

ಕೂಲಿ ಮಾಡಿ ಕದ ಮಾಡಿಸಿದ

ಹೆಗ್ಗುರುತಾಗಿ ತಾತನ ಅಂಗೈಯೊಳಗೆ

ಕರೆಗಟ್ಟಿದ ಬೊಬ್ಬೆಯ ನೋವು

ಅಪ್ಪ ಒಡೆದ ಸೌದೆಗಳು

ಉರಿದು ಇದ್ದಿಲಾದವು ಕನಸುಗಳ ಸುಟ್ಟು

ಮತ್ತೆ ಇದ್ದಿಲ ಮುಟ್ಟಿದ ತಾತ

ಕೆಂಡ ಮಾಡಿ ಮಚ್ಚು ಬಡಿದ

ಕದ ಇಟ್ಟಾಗಿನ ಕನಸುಗಳು

ಮತ್ತೆ ಕೊನರಿದವು ತಾತನ ಕಣ್ಣುಗಳಲ್ಲಿ

ಮಚ್ಚು ಮುಟ್ಟಿದ ಅಪ್ಪನ ಕರಗಳು

ತಾತ ನೆಟ್ಟ ಗಿಡಗಳ ಕತ್ತರಿಸಿದವು

ನೆರಳಲ್ಲಿ ಕೂತಿದ್ದ ಅಪ್ಪನ ಬದುಕು

ಬಿಸಿಲ ಹೊತ್ತು ನಡೆಯಿತು...

ಮರ ಬಿದ್ದ ಜಾಗದಲಿ

ಅದರದೇ ಬೀಜ ಮೊಳಕೆ ಒಡೆದು

ನಗುವಾಗ...

ತಾತನ ಮೊಗದಲಿ ಬೆಳ್ಳಿ ಚುಕ್ಕಿಯ ಹೆಜ್ಜೆ

ಅಪ್ಪನ ಕಣ್ಣು ಮಸುಕಾದ ಹೊತ್ತು

ತಾತನು ಹೆಣೆದ ತಟ್ಟಿ

ಗಂಜಲದ ಕಸ ಹೊರುವಾಗಲೂ ತಲೆ ತೊಯ್ಯಲಿಲ್ಲ

ಅದೇ ಅಪ್ಪನು ಹೆಣೆದ ತಟ್ಟಿ

ಮೂರುಮಾರು ಹೊತ್ತು ನಡೆಯಲಾಗಲಿಲ್ಲ !

ತಾತನ ಜಮೀನು ಕಳೆಗಟ್ಟಿ ನಕ್ಕು

ತೆನೆತೂಗಿ ಮನೆ ತುಂಬಿದ್ದ ನೆನಪಾಗಿ

ಪಾಳುಬಿದ್ದ ನೆಲದಲ್ಲಿ

ಅಪ್ಪನ ಹೆಜ್ಜೆ ಹುಡುಕಿದೆ

ನನ್ನ ಹೆಜ್ಜೆಯೂ ಉಕ್ಕೆಯ ಮೇಲಿನ ಗುರುತಾಗಲಿಲ್ಲ!

ರಾಗಿದೀಪದ ಬೆಳಕು

ಕರದ ಮಲ್ಲಿಗೆ ಕರಗಿದ ಈ ಹೊತ್ತು

ನೆಲದ ಕುಲಬಳ್ಳಿ ಹಬ್ಬಿ ಉಸಿರಾಡುತ್ತಿದೆ

ಜೀವ ಜೀವಗಳ ತೊಟ್ಟಿಲ ಕಟ್ಟಿನ ಮೇಲೆ

ಕುಲ ಕಟ್ಟಿ ಕೆಟ್ಟು ಹೋದವರ

ಕಾರ್ಯತಂತುವಿನ ತತ್ಪರತೆಯ

ಮೊಗದ ಕನ್ನಡಿ ಮಗುಚಿ...

ಬಿದ್ದ ನೆರಳ ಹಾಸಿನ ಮೇಲೆ

ಬಿಸಿಲ್ಗುದುರೆಯೊಂದು ಕುಣಿಯುತ್ತಿದೆ

ಆದಿಮೂಲದ ಅನಂತತೆಯಲಿ ನೆಲವ ಅಪ್ಪಿ

ಬೆಳಗುವ ಪರಂಜ್ಯೋತಿಯ ಕಣ್ಣು

ಕಾರ್ಗತ್ತಲ ಸೀಳುತ್ತಿದೆ

ಚೌಡಿಕೆಯೆಂಬ ತಂತಿವಾದ್ಯ

ಹಟ್ಟಿಯ ಮೇಲೆ ನುಡಿದು

ಮುಡಿದ ಹೂವಿನ ವಾಸನೆ

ಹರಿದು

ಕೋಣನ ತಲೆಯ ಮೇಲೆ

ತನ್ನೆದೆಯ ಕೊಬ್ಬಿನ ರಾಗದೀಪದ

ಬೆಳಕು !

ಆದಿಮಾಯೆಯ ಬೆಟ್ಟು

ಸೂತ್ರದ ನೆಲದ ನಡಿಗೆ

ಮೌಢ್ಯದ ಬಟ್ಟೆ ಹರಿದ ಹಾದಿ

ಕಣ್ಣಿಡುವ ಕೂಸಿನ ದಿಕ್ಸೂಚಿ

ಸೃಷ್ಟಿಯ ಮೂಲ ನಕ್ಷತ್ರ

ಜೋಗುಳವೇ ಬೆಂಕಿಗಾಳಿಯಾದ

ಹೊತ್ತು

ಅರುಂಧತಿಯ ಮಡಿಲ

ಮಗುವಿನ ಹಣೆಯಲ್ಲಿ

ನಗುವ ಚಂದ್ರನ ಕಂಡು

ವಸಿಷ್ಠನಿಗೆ ಕರುಳು ಕಿವುಚಿದ

ಸಂಕಟ

ಸೃಷ್ಟಿಯ ಬಯಲ ಬಳ್ಳಿಯ ತಾವು

ಮತಾಪು

ಗಾಯದ ನೆತ್ತಿಗೆ ಮೋಳೆ ಬಡಿಯುವ ಸದ್ದು !

ಗಾಯದ ಗೋಪುರದ ಮೇಲೆ

ಹದ್ದೊಂದು ಸತ್ತು ಬಿದ್ದಿದೆ

ಕಾಗೆ ಕುಕ್ಕುವ ಪರಿಗೆ

ರಕ್ತ ಒಸರಿ ನೆಲ ಮುಟ್ಟಿದೆ

ನೋಡುವ ಕಣ್ಣುಗಳಲ್ಲಿ ಎಷ್ಟೊಂದು

ಸೂರ್ಯರು

ನೇಣುಗೇರಿದ್ದಾರೆ

ವಜ್ರ ವೈಢೂರ್ಯ ಮುತ್ತು ರತ್ನ

ಮಣಗಟ್ಟಲೇ ಅಳೆದ ನೆಲದ ಮೇಲೆ

ತುಣುಕು ಬೆಳಕ ಹುಡುಕುತ್ತಿರುವೆ

ಎತ್ತ ನೋಡಿದರು ತರಚಿದೆ ಗೋಡೆ

ಧರ್ಮ ಭ್ರಾತೃತ್ವದ ಗೋಡೆ ಬಿರುಕು

ಬಿಟ್ಟು

ಗುಲಾಬಿಯೊಂದು ಮಗುಚಿ ಬಿದ್ದಿದೆ

ತಾಳಲಾರದ ಬಂಡೆಯ ಕಾವು

ಭಾವ ರೆಕ್ಕೆಗಳ ಸುಟ್ಟು

ಮನಸು ಮನಸುಗಳ ನಡುವೆ

ಮಸಿ ಬಳಿದು ಕೂತಿವೆ

ಜಾತಿ ಸೋಂಕಿನ ಜಾಡ್ಯ ವಿರೂಪಾಕ್ಷನ

ಕೊರಳ ಹಾರದ ಮೇಲೆ ಕೂತು

ವಿಜೃಂಭಿಸುವ ಪರಿಗೆ

ತತ್ತರಿಸಿ ಹೋಗಿದೆ ಈ ನೆಲದ ಬದುಕು

ಹಸಿವೆನ್ನುವ ತುಟಿಗಳ ಒಲೆವ ಆಡಳಿತ

ಒಂಟಿ ನಡಿಗೆಯು ರೆಕ್ಕೆ ಬಿಚ್ಚಿ

ಗಾಯವಾದ ನೆತ್ತಿಗೆ ಮೊಳೆ ಬಡಿಯುತ್ತಿದೆ

ದೆಹಲಿ ಕೆಂಪುಕೋಟೆಯ ಮೇಲೆ

ಉಡ್ಡರಿಸುವ ಬಸವನ ಮರಿ ಹುಳ

ನಡುಗಿಸಿದೆ ನೆಲಮೂಲದ ಬೇರುಗಳ

ತಿರುಚಿ ಬರೆಯುವ ಇಂಕಿನ ಪೆನ್ನು

ಸಂವಿಧಾನದ ಹಾಳೆಯ ತಿರುವಿದೆ

ಕನಸುಗಳನ್ನು ಸುಡುವ ಹಕ್ಕಿಯೊಂದು

ಬೆಂಕಿ ಉಂಡೆಗಳ ತತ್ತಿ ಹಾಕುತ ಕೂತಿದೆ

ಧ್ವನಿ ಮಾಡದ ಹೊರತು

ಭಾರತದ ಭೂಪಟ

ಸುಡುಗಾಡಿನಲಿ ಸುತ್ತಿದ

ಚಾಪೆಯಾದೀತು !

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)