varthabharthi


ವಿಶೇಷ-ವರದಿಗಳು

ತಯಾರಕರಿಗೇ ನಿರುಪಯೋಗಿ ಟಯರ್ ನಿರ್ವಹಣೆಯ ಹೊಣೆ: ಪರಿಸರ ಸಚಿವಾಲಯದಿಂದ ಅಧಿಸೂಚನೆ

ವಾರ್ತಾ ಭಾರತಿ : 11 Jan, 2022
ಆತಿರಾ ಪೆರಿಂಚೆರಿ

ಕೇಂದ್ರ ಪರಿಸರ ಸಚಿವಾಲಯವು 2021 ಡಿಸೆಂಬರ್ 31ರಂದು ನೂತನ ಕರಡು ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಹಳೆಯ ಟಯರ್‌ಗಳನ್ನು ವಿಲೇವಾರಿ ಮಾಡುವಲ್ಲಿ ‘ಉತ್ಪಾದಕರಿಗೆ ಹೆಚ್ಚಿನ ಜವಾಬ್ದಾರಿ’ (ಇಪಿಆರ್) ಯನ್ನು ವಿಧಿಸಿದೆ.

ಟಯರ್‌ಗಳನ್ನು ಉತ್ಪಾದಿಸುವ ಅಥವಾ ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಅವುಗಳನ್ನು ವಿಲೇವಾರಿ ಮಾಡುವ ಹೆಚ್ಚುವರಿ ಜವಾಬ್ದಾರಿಯ ಬಗ್ಗೆ ಈ ಅಧಿಸೂಚನೆ ಮಾಹಿತಿ ನೀಡಿದೆ. ಆ ಮೂಲಕ ಟಯರ್‌ಗಳನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವಲ್ಲಿ ಗ್ರಾಹಕರ ತಲೆನೋವನ್ನು ಕಡಿಮೆಗೊಳಿಸಿದೆ.
ಸರಕಾರದ ಮಾನದಂಡಗಳ ಪ್ರಕಾರ, ತಮ್ಮ ಎಲ್ಲ ಉತ್ಪನ್ನಗಳು ಮರುಬಳಕೆಯಾಗುವುದನ್ನು ಟಯರ್‌ಗಳ ಉತ್ಪಾದಕರು ಅಥವಾ ಆಮದುದಾರರು ಖಾತರಿಪಡಿಸಬೇಕು ಎಂದು ಅಧಿಸೂಚನೆ ಹೇಳುತ್ತದೆ. ಇದನ್ನು ಕಾರ್ಯಗತಗೊಳಿಸಲು ಈ ಕಂಪೆನಿಗಳಿಗೆ 2024ರವರೆಗೆ ಕಾಲಾವಕಾಶವಿದೆ.

ಅನುಪಯೋಗಿ ಟಯರ್‌ಗಳು
ಭಾರತವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಪ್ರಾಕೃತಿಕ ರಬ್ಬರ್‌ನ ಉತ್ಪಾದಕ ಹಾಗೂ ನಾಲ್ಕನೇ ಅತಿ ದೊಡ್ಡ ಬಳಕೆದಾರ ದೇಶವಾಗಿದೆ. ದೇಶದಲ್ಲಿ ಆಟೊಮೊಬೈಲ್ ಉದ್ಯಮವು ಅತಿ ದೊಡ್ಡ ಬಳಕೆದಾರ ಕ್ಷೇತ್ರವಾಗಿದೆ ಎಂದು ವರದಿಯೊಂದು ಹೇಳುತ್ತದೆ. ಭಾರತವು ಪ್ರತಿ ದಿನ 6.5 ಲಕ್ಷ ಟಯರ್‌ಗಳನ್ನು ಉತ್ಪಾದಿಸುತ್ತದೆ ಎಂದು ‘ಬಿಸ್ನೆಸ್ ಸ್ಟ್ಯಾಂಡರ್ಡ್’ ವರದಿ ಮಾಡಿದೆ.
ಆಟೊಮೊಬೈಲ್ ಉದ್ಯಮವು ದೇಶದಲ್ಲಿ ಬೆಳೆಯುತ್ತಿರು ವಂತೆಯೇ, ಉತ್ಪಾದನೆಯಾಗುವ ಟಯರ್‌ಗಳ ಸಂಖ್ಯೆ ಹೆಚ್ಚಲಿದೆ.
2035ರ ವೇಳೆಗೆ ಭಾರತದಲ್ಲಿ ಸುಮಾರು 8.01 ಕೋಟಿ ಪ್ರಯಾಣಿಕ ವಾಹನಗಳು (ಕಾರುಗಳು ಮತ್ತು ಇತರ ವಾಹನಗಳು) ಮತ್ತು 23.64 ಕೋಟಿ ದ್ವಿಚಕ್ರ ವಾಹನಗಳು ರಸ್ತೆಗಳಲ್ಲಿರುತ್ತವೆ ಎಂದು ‘ಚಿಂತನ್’ ಎಂಬ ಹೆಸರಿನ ಪರಿಸರ ಸಂಶೋಧನೆ ಮತ್ತು ಕ್ರಿಯಾ ಗುಂಪೊಂದು 2017ರಲ್ಲಿ ವರದಿ ಮಾಡಿದೆ.
ಜಗತ್ತಿನಾದ್ಯಂತ ಪ್ರತಿ ವರ್ಷ 150 ಕೋಟಿಗಿಂತಲೂ ಅಧಿಕ ಅನುಪಯೋಗಿ ಟಯರ್‌ಗಳು ರಾಶಿ ಬೀಳುತ್ತಿದ್ದು, ಅವುಗಳ ಪೈಕಿ ಶೇ. 6 ಭಾರತದಲ್ಲಿವೆ. ಇದಕ್ಕೆ ಹೆಚ್ಚುವರಿಯಾಗಿ ಭಾರತವು ಪ್ರತಿ ವರ್ಷ ಮರುಬಳಕೆಗಾಗಿ ಸುಮಾರು 3 ಲಕ್ಷ ಟನ್ ಟಯರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಟಯರ್‌ಗಳನ್ನು ಅಧಿಕ ಉಷ್ಣತೆಗಳಲ್ಲಿ ಥರ್ಮೋಕೆಮಿಕಲ್ ಸಂಸ್ಕರಣೆಗಳಿಗೆ ಒಳಪಡಿಸಿ ಕೈಗಾರಿಕೆಗಳಲ್ಲಿ ಬಳಸುವ ತೈಲ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ಇದರಿಂದ ಉಂಟಾಗುವ ಪರಿಸರ ಮಾಲಿನ್ಯವು ದೊಡ್ಡ ತಲೆನೋವಾಗಿದೆ. 2019ರಲ್ಲಿ, 19 ರಾಜ್ಯಗಳಲ್ಲಿರುವ ‘ಟಯರ್‌ಗಳನ್ನು ಬಿಸಿ ಮಾಡಿ ರೂಪಾಂತರಿಸುವ’ 270 ಘಟಕಗಳನ್ನು ಮುಚ್ಚುವಂತೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಆದೇಶಿಸಿದೆ. ಈ ಘಟಕಗಳು ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ ಹಾಗೂ ಅಧಿಕ ಮಟ್ಟದ ಮಾಲಿನ್ಯಕ್ಕೆ ಅವುಗಳೇ ಕಾರಣವಾಗಿದೆ ಎಂದಿದೆ.
ಅದೇ ವರ್ಷದಲ್ಲಿ, ದೇಶದಲ್ಲಿ ಅನುಪಯೋಗಿ ಟಯರ್ ನಿರ್ವಹಣೆಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವಂತೆ ಹಾಗೂ ಅನುಪಯೋಗಿ ಟಯರ್‌ಗಳ ಆಮದನ್ನು ನಿರ್ಬಂಧಿಸುವ ಬಗ್ಗೆ ಪರಿಶೀಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸಿಪಿಸಿಬಿಗೆ ಸೂಚಿಸಿತ್ತು.

ನೂತನ ಇಪಿಆರ್ ವ್ಯವಸ್ಥೆ
ಅನುಪಯೋಗಿ ಟಯರ್‌ಗಳ ನಿರ್ವಹಣೆಯನ್ನು ಇಪಿಆರ್ ವ್ಯಾಪ್ತಿಗೆ ತರುವಂತೆ ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯು ಈ ಕಳವಳಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ.
ಸಚಿವಾಲಯವು ನೀತಿ ಆಯೋಗ, ಸಿಪಿಸಿಬಿ ಮತ್ತು ಅಖಿಲ ಭಾರತ ರಬ್ಬರ್ ಮತ್ತು ಟಯರ್ ರೀಸೈಕ್ಲರ್ಸ್ ಅಸೋಸಿಯೇಶನ್‌ನ ಪ್ರತಿನಿಧಿಗಳನ್ನು ಒಳಗೊಂಡ ಪರಿಣತ ಸಮಿತಿಯೊಂದನ್ನು ರಚಿಸಿದೆ ಎಂದು ಅಧಿಸೂಚನೆ ಹೇಳಿದೆ. ಅನುಪಯೋಗಿ ಟಯರ್‌ಗಳನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದ ಸಮಗ್ರ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ.
ಟಯರ್ ಉದ್ಯಮಕ್ಕೆ ಸಂಬಂಧಪಟ್ಟವರನ್ನು ಭೇಟಿಯಾದ ಬಳಿಕ ಹಾಗೂ ಸಮಿತಿಯಿಂದ ಮಾಹಿತಿಗಳನ್ನು ಪಡೆದ ಬಳಿಕ, ಸಚಿವಾಲಯವು ಅನುಪಯೋಗಿ ಟಯರ್‌ಗಳ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ಇಪಿಆರ್ ಕುರಿತ ಶಿಫಾರಸುಗಳೂ ಇವೆ. ವರದಿಯನ್ನು 2021 ಆಗಸ್ಟ್‌ನಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಲಾಗಿದೆ.
ನೂತನ ಕರಡು ಅಧಿಸೂಚನೆಯ ಪ್ರಕಾರ, 2024-25ರ ವೇಳೆಗೆ ಟಯರ್‌ಗಳ ಎಲ್ಲ ತಯಾರಕರು ಮತ್ತು ಹೊಸ ಟಯರ್‌ಗಳ ಆಮದುದಾರರು ತಮ್ಮ ಉತ್ಪನ್ನಗಳನ್ನು ಮರುಬಳಕೆ ಮಾಡಬೇಕಾಗುತ್ತದೆ. ಆರಂಭದಲ್ಲಿ 35 ಶೇಕಡದಷ್ಟನ್ನು ರೀಸೈಕ್ಲಿಂಗ್ ಮಾಡಿದರೆ, ಬಳಿಕ ಎರಡು ವರ್ಷಗಳ ಒಳಗೆ ಈ ಪ್ರಮಾಣವನ್ನು ಶೇ. 75ಕ್ಕೆ ಏರಿಸಬೇಕು. ಅಂತಿಮವಾಗಿ 2024ರ ವೇಳೆಗೆ ಶೇ. 100 ಮರುಬಳಕೆಯನ್ನು ಸಾಧಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.
ಪೈರೋಲಿಸಿಸ್ ತೈಲ ಅಥವಾ ಕಲ್ಲಿದ್ದಲು ಉತ್ಪಾದಿಸುವ ಏಕೈಕ ಉದ್ದೇಶದೊಂದಿಗೆ ಅನುಪಯೋಗಿ ಟಯರ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ಅಧಿಸೂಚನೆ ನಿಷೇಧಿಸುತ್ತದೆ.
ಅದೂ ಅಲ್ಲದೆ, ಎಲ್ಲ ಟಯರ್ ಉತ್ಪಾದಕರು ಮತ್ತು ಆಮದುದಾರರು ತಮ್ಮನ್ನು ಸಿಪಿಸಿಬಿಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ತಾವು ಮರು ಬಳಕೆ ಮಾಡುವ ಎಲ್ಲ ಉತ್ಪನ್ನಗಳಿಗೆ ‘ಇಪಿಆರ್ ಪ್ರಮಾಣಪತ್ರ’ ಪಡೆದುಕೊಳ್ಳಬೇಕು. ಪೈರೋಲಿಸಿಸ್ ಮುಂತಾದ ಪ್ರಕ್ರಿಯೆಯಲ್ಲಿ ತೊಡಗುವ ಘಟಕಗಳು ಸೇರಿದಂತೆ ಮರುಬಳಕೆ ಕಂಪೆನಿಗಳು ತಿಂಗಳಿಗೊಮ್ಮೆ ವರದಿ ನೀಡಬೇಕು ಎಂದು ಅಧಿಸೂಚನೆ ಹೇಳುತ್ತದೆ.
ನಿಯಮಾವಳಿಗಳನ್ನು ಪಾಲಿಸದ ಟಯರ್ ಉತ್ಪಾದಕರು ಮತ್ತು ಮರು ಬಳಕೆದಾರರು ಅಥವಾ ನಕಲಿ ಇಪಿಆರ್ ಪ್ರಮಾಣಪತ್ರಗಳನ್ನು ಹೊಂದುವವರಿಗೆ ದಂಡ ವಿಧಿಸುವ ಹಾಗೂ ಅವರಿಂದ ಪರಿಸರ ಪರಿಹಾರವನ್ನು ಸಂಗ್ರಹಿಸುವ ಹೊಣೆಯನ್ನು ಸಿಪಿಸಿಬಿಗೆ ವಹಿಸಲಾಗಿದೆ.

ತಪ್ಪಿತಸ್ಥರಿಗೆ ದಂಡ
ಟಯರ್ ಉತ್ಪಾದಕರ ಕೆಲಸದ ರೀತಿಯನ್ನು ಬದಲಾಯಿಸುವ ಕಾನೂನನ್ನು ಹಲವು ವರ್ಷಗಳಿಂದ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ, ಕರಡು ಕಾನೂನೊಂದನ್ನು ಪರಿಸರ ಸಚಿವಾಲಯವು 2017ರಲ್ಲಿ ಪರಿಶೀಲನೆ ನಡೆಸಿತ್ತು. ಆದರೆ, ಆನಂತರದ ಬೆಳವಣಿಗೆಗಳ ಬಗ್ಗೆ ತಿಳಿದುಬಂದಿಲ್ಲ. ಅನುಪಯೋಗಿ ಟಯರ್‌ಗಳ ಸಮಸ್ಯೆಯನ್ನು ನಿಭಾಯಿಸಲು ಶಾಸನವೊಂದನ್ನು ಹೊಂದುವುದು ಸರಿಯಾದ ಕ್ರಮವಾಗುತ್ತದೆ. ಯಾಕೆಂದರೆ ಶಾಸನವು ಟಯರ್ ಉದ್ಯಮವನ್ನು ಪರಿಸರಕ್ಕೆ ಉತ್ತರದಾಯಿಯನ್ನಾಗಿಸುತ್ತದೆ ಎಂಬುದಾಗಿ ಜೆ.ಕೆ. ಟಯರ್ಸ್‌ನ ಓರ್ವ ನಿರ್ದೇಶಕರು 2017ರಲ್ಲಿ ‘ಬಿಸ್ನೆಸ್ ಸ್ಟ್ಯಾಂಡರ್ಡ್’ಗೆ ಹೇಳಿದ್ದರು. ಆಗ ಪರಿಸರ ಸಚಿವಾಲಯವು ಕರಡು ಮಸೂದೆಯ ಬಗ್ಗೆ ಪರಿಶೀಲನೆಯಲ್ಲಿ ತೊಡಗಿತ್ತು.
2021ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ, ಗ್ರಾಹಕೋತ್ತರ ಹಂತದವರೆಗೆ ತಮ್ಮ ಉತ್ಪನ್ನಗಳನ್ನು ನಿರ್ವಹಣೆಗೆ ಉತ್ಪಾದಕರನ್ನು ಜವಾಬ್ದಾರಿಯಾಗಿಸುವ ಇಪಿಆರ್ ವ್ಯವಸ್ಥೆಯನ್ನು ಹಲವು ದೇಶಗಳು ಸ್ವೀಕರಿಸಿವೆ. ಉದಾಹರಣೆಗೆ; ಐರೋಪ್ಯ ಒಕ್ಕೂಟದಲ್ಲಿ ಇದು ಅತ್ಯಂತ ಸಾಮಾನ್ಯ ಅನುಪಯೋಗಿ ಟಯರ್ ನಿರ್ವಹಣಾ ವ್ಯವಸ್ಥೆಯಾಗಿದೆ. ಅಭಿವೃದ್ಧಿಶೀಲ ದೇಶಗಳೂ ಅದನ್ನು ಸ್ವೀಕರಿಸಿವೆ. ಕಾರುಗಳು, ಟ್ರಕ್‌ಗಳು ಮತ್ತು ಬಸ್‌ಗಳ ಅನುಪಯೋಗಿ ಟಯರ್‌ಗಳ ನಿರ್ವಹಣೆಗಾಗಿ ಇಕ್ವೆಡಾರ್ 2013ರಲ್ಲಿ ಇಪಿಆರ್ ನೀತಿಯನ್ನು ರೂಪಿಸಿದೆ.
ಇಪಿಆರ್ ವ್ಯವಸ್ಥೆಯನ್ನು ಜಾರಿಗೆ ತಂದರೆ ಅನುಪಯೋಗಿ ಟಯರ್‌ಗಳ ಅಕ್ರಮ ಸಂಗ್ರಹವನ್ನು ಕಡಿಮೆ ಮಾಡಬಹುದಾಗಿದೆ ಹಾಗೂ ಮರುಬಳಕೆಯನ್ನು ಹೆಚ್ಚಿಸುವ ಮೂಲಕ ಸಂಪನ್ಮೂಲಗಳ ಮಿತವ್ಯಯವನ್ನು ಸಾಧಿಸಬಹುದಾಗಿದೆ ಎನ್ನುವುದನ್ನು 2019ರ ಅಧ್ಯಯನವೊಂದು ಕಂಡುಕೊಂಡಿದೆ.
ಆದರೆ, ಅನುಪಯೋಗಿ ಟಯರ್‌ಗಳ ಸಂಸ್ಕರಣೆಯನ್ನು ಪರಿಸರಕ್ಕೆ ಅತ್ಯಂತ ಪೂರಕವಾಗಿ ಮಾಡುವಂತೆ ಇಪಿಆರ್ ವ್ಯವಸ್ಥೆಯು ಖಾತರಿಪಡಿಸಲಾರದು. ಯಾಕೆಂದರೆ, ಇಪಿಆರ್ ವ್ಯವಸ್ಥೆಯೊಂದನ್ನು ಸಮರ್ಪಕವಾಗಿ ವಿನ್ಯಾಸಗೊಳಿಸಿ ಜಾರಿಗೊಳಿಸಿದರೆ ಅದು ತನ್ನ ಉದ್ದೇಶಗಳನ್ನು ಮಾತ್ರ ಸಾಧಿಸಬಲ್ಲದು.
ಅದೂ ಅಲ್ಲದೆ, ಹೆಚ್ಚಿನ ಅಭಿವೃದ್ಧಿಶೀಲ ದೇಶಗಳಲ್ಲಿ, ಇಪಿಆರ್ ವ್ಯವಸ್ಥೆಯನ್ನು ಹೆಚ್ಚಾಗಿ ಇಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿಭಾಯಿಸಲು ಜಾರಿಗೊಳಿಸಲಾಗುತ್ತಿದೆ.
ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು 2016ರಲ್ಲಿ ಜಾರಿಗೊಂಡ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ಇಪಿಆರ್ ಕಲ್ಪನೆಯನ್ನು ಪರಿಚಯಿಸಿವೆ. ಈ ನಿಯಮಗಳ ಪ್ರಕಾರ, ಮಾಲಿನ್ಯಕ್ಕೆ ಕಾರಣರಾಗುವವರು ನಿರ್ವಹಣೆಯ ವೆಚ್ಚವನ್ನು ಭರಿಸುತ್ತಾರೆ. ಆದರೆ, ಇದರ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಹೊಸದಿಲ್ಲಿಯ ‘ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್’ನಲ್ಲಿ ಮುನಿಸಿಪಲ್ ಘನ ತ್ಯಾಜ್ಯ ವಿಭಾಗದ ಉಪ ಕಾರ್ಯಕ್ರಮ ನಿರ್ವಾಹಕ ಸಿದ್ಧಾರ್ಥ ಘನಶ್ಯಾಮ್ ಸಿಂಗ್ 2021 ಡಿಸೆಂಬರ್‌ನಲ್ಲಿ ಬರೆದಿದ್ದಾರೆ.
2021 ಅಕ್ಟೋಬರ್‌ನಲ್ಲಿ, ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸುವುದಕ್ಕಾಗಿ ಪರಿಸರ ಸಚಿವಾಲಯವು ಕರಡು ಇಪಿಆರ್ ನೀತಿಯನ್ನು ಬಿಡುಗಡೆಗೊಳಿಸಿತು. ಇದು ಮಹತ್ವದ ಉಪಕ್ರಮವಾದರೂ, ಅದು ದಕ್ಷ ತ್ಯಾಜ್ಯ ನಿರ್ವಹಣೆಗೆ ಅಗತ್ಯವಾಗಿರುವ ಇಪಿಆರ್‌ನ ಹಲವಾರು ಮೂಲ ಅಂಶಗಳನ್ನು ಉಪೇಕ್ಷಿಸಿದೆ ಎಂದು ಸಿಂಗ್ ಬರೆದಿದ್ದಾರೆ. ತ್ಯಾಜ್ಯವನ್ನು ಕನಿಷ್ಠಗೊಳಿಸುವುದು ಅಥವಾ ಅನೌಪಚಾರಿಕ ತ್ಯಾಜ್ಯ ನಿರ್ವಹಣೆ ಕ್ಷೇತ್ರವನ್ನು ರೂಪಿಸುವ ಬಗ್ಗೆ ಅದು ಏನೂ ಹೇಳಿಲ್ಲ.

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)