varthabharthi


ವಿಶೇಷ-ವರದಿಗಳು

ಒಳಿತಿನ ಕಡೆಗೆ ಕೊಂಡೊಯ್ದ ಚಂದ್ರಶೇಖರ ಪಾಟೀಲ

ವಾರ್ತಾ ಭಾರತಿ : 11 Jan, 2022
ಪುರುಷೋತ್ತಮ ಬಿಳಿಮಲೆ

ಚಂದ್ರಶೇಖರ ಪಾಟೀಲರು (ಚಂಪಾ, ಜೂನ್ 18, 1939 ಜನವರಿ 10, 2022) ತೀರಿಕೊಂಡಾಗ ಜನಪರ ಚಳವಳಿಯ ಕೊಂಡಿಯೊಂದು ಕಳಚಿದಂತಾಯಿತು. ಜನಪರ ಚಳವಳಿಗಾರರನ್ನು ಆಂದೋಲನ ಜೀವಿಗಳೆಂದು ಪ್ರಧಾನಿಗಳೇ ಕರೆಯುವ ಇಂದಿನ ಸಂದರ್ಭದಲ್ಲಿ ಚಂಪಾ ಅಗಲಿಕೆ ತುಂಬ ಸಾಂಕೀತಿಕವಾಗಿಯೂ ಕಾಣುತ್ತದೆ. 1980ರ ದಶಕದಲ್ಲಿ ಕಾಣಿಸಿಕೊಂಡ ಪ್ರಬಲವಾದ ಬಂಡಾಯ ಚಳವಳಿಯಲ್ಲಿ ನಮಗೆಲ್ಲ ಅವರು ಮಾರ್ಗದರ್ಶನ ಮಾಡಿದರು. ಬರಗೂರರ ಜೊತೆ ಸೇರಿಕೊಂಡು ಕರ್ನಾಟಕಕ್ಕೆ ಒಂದು ಹೊಸ ದಿಕ್ಕು ತೋರಿಸಿದರು. ಜಾತ್ಯತೀತವಾದ ದೃಷ್ಟಿಕೋನ, ಲಿಂಗಸಮಾನತೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಛಾತಿ, ಶಕ್ತಿ ರಾಜಕಾರಣದ ಮೋಸಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ, ಮೊದಲಾದ ಹಲವು ವಿಷಯಗಳನ್ನು ಬೀದಿಯಲ್ಲಿ ನಿಂತು ಅವರು ನಮಗೆ ಹೇಳಿಕೊಟ್ಟರು. ನಾವು ಕರೆದಲ್ಲಿಗೆ ಬಂದು ಭಾಷಣ ಮಾಡಿದರು. ನೆಲದಲ್ಲಿ ಕುಳಿತು ಘೋಷಣೆ ಕೂಗಿದರು. ಬಾವುಟ ಹಿಡಿದರು, ಪೋಸ್ಟರುಗಳನ್ನು ಬರೆದರು, ಗೋಡೆಗಳಲ್ಲಿ ಕವಿತೆ ಬರೆದರು. ನನ್ನಂತಹ ಕೆಲವರಲ್ಲಿ ಏನಾದರೂ ಚಿಕ್ಕ ಪುಟ್ಟ ಪ್ರತಿಭಟನೆಯ ಕಿಚ್ಚು ಉಳಿಸಿಕೊಂಡಿದ್ದರೆ ಅದಕ್ಕೆ ಚಂಪಾ ಮುಖ್ಯ ಕಾರಣ. ಅವರು ನಿರ್ಬಿಢೆಯಿಂದ ತರುತ್ತಿದ್ದ ‘ಸಂಕ್ರಮಣ’ ಪತ್ರಿಕೆ ಕರ್ನಾಟಕಕ್ಕೆ ಹೊಸ ಭಾಷೆಯನ್ನೇ ಕಲಿಸಿತು. ಅನಂತಮೂರ್ತಿ, ಲಂಕೇಶ್, ರಾಮಚಂದ್ರ ಶರ್ಮ ಮೊದಲಾದ ಬೆಂಗಳೂರು ಕೇಂದ್ರಿತ ಸಾಹಿತಿಗಳನ್ನು ಟೀಕಿಸುತ್ತಾ ಸಾಹಿತ್ಯದ ಚರ್ಚೆಗಳನ್ನು ಚಂಪಾ ವಿಕೇಂದ್ರೀಕರಣ ಮಾಡಿದರು. ಸಂಕ್ರಮಣದ ಚಂಪಾ ಕಾಲಂ ಹೇಳುವ ಚರಿತ್ರೆಯನ್ನು ಅಭ್ಯಸಿಸಿದರೆ ನಮಗೆ ಸಾಹಿತ್ಯದ ರಾಜಕೀಯಗಳ ಒಂದು ಚಿತ್ರ ದೊರೆಯುತ್ತದೆ. ಕವಿ, ನಾಟಕಕಾರ, ವಿಮರ್ಶಕ, ಭಾಷಣಕಾರ ಮತ್ತು ಕನ್ನಡ ಪರ ಹೋರಾಟಗಾರರಾಗಿ ಪಾಟೀಲರು ಸದಾ ನಮ್ಮ ನೆನಪಲ್ಲಿ ಉಳಿಯುತ್ತಾರೆ.

ಚಂಪಾ ಹುಟ್ಟಿದ್ದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ. ಓದಿದ್ದು ಹತ್ತಿಮತ್ತೂರು-ಹಾವೇರಿಗಳಲ್ಲಿನ ಕನ್ನಡ ಶಾಲೆಗಳಲ್ಲಿ. 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿ, 1960ರಲ್ಲಿ ಬಿ.ಎ. ಪೂರೈಸಿದರು. 1962ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ಇಂಗ್ಲಿಷ್ ಬೋಧಿಸುತ್ತಿದ್ದರೂ ಅವರು ಕನ್ನಡವನ್ನು ಬೆಳೆಸಿದರು. ಕನ್ನಡಕ್ಕಾಗಿ ಹೋರಾಡಿದರು. ಇಂಗ್ಲೆಂಡಿನ ಲೀಡ್ಸ್ ವಿವಿಯಲ್ಲಿ ಭಾಷಾ ವಿಜ್ಞಾನದಲ್ಲಿ ಪದವಿ ಗಳಿಸಿದರೂ ಭಾಷಾ ವಿಜ್ಞಾನಕ್ಕೆ ಆತುಕೊಳ್ಳುವ ಪಂಡಿತರಾಗಲೇ ಇಲ್ಲ ಚಂಪಾ. ಆದರೆ ಭಾಷೆಯ ಬಗೆಗಣ ತಮ್ಮ ತಿಳಿವಳಿಕೆಯನ್ನು ಹರಿತ ಮಾಡಿಕೊಂಡರು. 1980-83ರ ಅವಧಿಯಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದರು. ಹೋರಾಟಕ್ಕೂ ಧುಮುಕಿದರು. ಗೋಕಾಕ್ ಚಳವಳಿಯು ಅವರನ್ನು ನಾಡಿನ ಪ್ರಮುಖ ಹೋರಾಟಗಾರರೆಂದು ಗುರುತಿಸುವಂತೆ ಮಾಡಿತು. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಅವರು ಸಾಹಿತಿಗಳ ಮೈ ಚಳಿ ಬಿಡಿಸಿದರು.

ಮಾತೃಭಾಷಾ ಮಾಧ್ಯಮ ಚಳವಳಿಗೆ ಚಂಪಾ ಕೊಡುಗೆ ಬಹಳ ದೊಡ್ಡದು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ ಕಲಿಸಬೇಕು, ಕೇಂದ್ರ ಪಠ್ಯಕ್ರಮದ ಮಾಧ್ಯಮಗಳ ಶಾಲೆಗಳು ಕರ್ನಾಟಕದಲ್ಲಿದ್ದರೆ ಅವು ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಅವರು ನಿರಂತರವಾಗಿ ಸರಕಾರದೊಂದಿಗೆ ಹೋರಾಡಿದರು. ಮಂತ್ರಿಗಳಿರಲಿ, ಅಧಿಕಾರಿಗಳಿರಲಿ, ಚಂಪಾ ಧ್ವನಿ ಯಾವತ್ತೂ ಕಂಪಿಸಿದ್ದು ನಾನು ಕಂಡಿಲ್ಲ. ದೊಡ್ಡ ದೊಡ್ಡವರು ಬಂದಾಗ ಅವರ ಸ್ವರ ಇನ್ನಷ್ಟು ಹೆಚ್ಚು ಏರುತ್ತಿತ್ತೇ ವಿನಾ ಕುಗ್ಗುತ್ತಿರಲಿಲ್ಲ. ಅವರು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ನಡೆಸುತ್ತಿದ್ದ ಸುಮಾರು 2,215 ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸಿದರು. ಬೆದರದೆ, ಬೆಚ್ಚದೆ ಮುಂದುವರಿಯುವುದನ್ನು ನಾವೆಲ್ಲ ಅವರಿಂದ ಕಲಿಯಬೇಕು.

1979ರಲ್ಲಿ ಬಂಡಾಯ ಚಳವಳಿಯು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹಿಷ್ಕಾರ ಹಾಕಿದರೂ ಚಂಪಾ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ (ನವೆಂಬರ್ 2004ರಿಂದ 2008ರವರೆಗೆ) ಸೇವೆ ಸಲ್ಲಿಸಿದರು. ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ಸಾಹಿತ್ಯ ಸಮ್ಮೇಳನ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ಕಸಾಪವನ್ನು ಜನರ ಹತ್ತಿರ ಕೊಂಡೊಯ್ಯಲು ಅವರು ಮಾಡಿದ ಕೆಲಸಗಳು ಹಲವು. ಅದರಲ್ಲಿ ಅವರು ಚಾಲ್ತಿಗೆ ತಂದ ಶನಿವಾರದ ಪುಸ್ತಕ ಸಂತೆ ಕಾರ್ಯಕ್ರಮವೂ ಒಂದು. ಪ್ರತಿ ಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಡಿೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅಷ್ಟೇ ಅಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದ ಲೇಖಕರೂ ಇಲ್ಲಿ ತಮ್ಮ ಪುಸ್ತಕಗಳನ್ನು ತಂದು ಮಾರುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಇದರ ಜತೆಗೆ ಪರಿಷತ್ತಿನ ಮುಂಭಾಗದಲ್ಲಿ ಹಾಡು, ನೃತ್ಯ, ಭಾಷಣ ಇತ್ಯಾದಿ ಕಾರ್ಯಕ್ರಮಗಳೂ ನಡೆದವು. ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಅದು ಯಾಕೋ ನಿಂತು ಹೋಯಿತು. ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಕನ್ನಡಕ್ಕಾಗಿ ಗುಡುಗಿದರು.

ಈ ಎಲ್ಲಾ ಕೆಲಸಗಳ ನಡುವೆಯೂ ಚಂಪಾ ನಾಲ್ಕು ಕಾಲ ಉಳಿಯುವಂತಹ ಕೃತಿಗಳನ್ನು ರಚಿಸಿದರು. ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದುವು ಅವರ ಕವನ ಸಂಗ್ರಹಗಳು. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ಮೊದಲಾದವು ಅವರ ಜನಪ್ರಿಯ ನಾಟಕಗಳು. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ, ಮೊದಲಾದುವು ಅವರ ಇತರ ಕೃತಿಗಳು. ಸಮಕಾಲೀನ ತುರ್ತುಗಳಿಗೆ ಅವರು ಸಾಹಿತ್ಯದ ಮೂಲಕ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ.

ನವ್ಯ ಸಾಹಿತ್ಯ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ’ ಕವಿ ಎಂದು ವಿಮರ್ಶಕರು ಕೊಂಡಾಡುತ್ತಿದ್ದರು. ಆದರೆ ನಾವೆಲ್ಲರೂ ಸಂಕ್ರಮಣ ಪತ್ರಿಕೆಯ ಮೂಲಕ ಅನೇಕ ಲೇಖಕರನ್ನು ಬೆಳೆಸಿದ ಚಂಪಾ ಅವರನ್ನು ‘ಅಡಿಗರು ಕಣ್ಣು ಮುಚ್ಚಿಸಿದರು, ಚಂಪಾ ಕಣ್ಣು ತೆರೆಸಿದರು’ ಎಂದು ಹೇಳಿಕೊಂಡು ಕರ್ನಾಟಕಾದ್ಯಂತ ಓಡಾಡುತ್ತಿದ್ದೆವು. ನವ್ಯ ಸಾಹಿತ್ಯವನ್ನು ತಮಾಷೆ ಮಾಡಲು ನಮಗೆಲ್ಲ ಹೇಳಿಕೊಟ್ಟವರೇ ಚಂಪಾ. ಆ ಕಾಲದಲ್ಲಿ ನಮ್ಮೆಲ್ಲರ ಓದಿನ ಕೇಂದ್ರವಾಗಿದ್ದ ಸಂಕ್ರಮಣವನ್ನು ಚಂದ್ರಶೇಖರ ಪಾಟೀಲರು ಗಿರಡ್ಡಿ ಗೋವಿಂದರಾಜ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿಯವರ ಜೊತೆ ಸೇರಿ ಆರಂಭಿಸಿದರು. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿ, ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿಗೆ ಬೆಂಬಲ ನೀಡಿ ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಒದಗಿಸಿತು.

ಚಂಪಾ ತಮ್ಮ ಹರಿತವಾದ ವ್ಯಂಗ್ಯಕ್ಕೆ ಹೆಸರಾದವರು.

‘ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ;

ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ’ 

ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಅವರು ರಾಜ್ಯದಾದ್ಯಂತ ಮಾಡಿದ ಭಾಷಣಗಳಲ್ಲಿ ಬಳಸಿದ ವ್ಯಂಗ್ಯ ಮಾತುಗಳನ್ನು ಯಾರಾದರೂ ಇವತ್ತು ಸಂಗ್ರಹಿಸಬೇಕು. ಅಲ್ಲಿ ಇಲ್ಲಿ ನಾನು ಕೇಳಿದ ಕೆಲವು ಘಟನೆಗಳು ಇಂತಿವೆ-

ಒಬ್ಬ ಕವಿ ತನ್ನೊಂದು ಕವಿತೆಯನ್ನು ಸಂಕ್ರಮಣದಲ್ಲಿ ಪ್ರಕಟಿಸಬೇಕು ಅಂತ ಚಂಪಾ ಅವರ ಬೆನ್ನು ಬಿದ್ದನಂತೆ. ಚಂಪಾ ಕವಿತೆಯನ್ನು ಓದಿ ‘‘ಕವನ ಪ್ರಕಟಿಸೋಣ, ಆದರೆ ನಿನ್ನ ಕವಿತೆಯ ಮೊದಲಿನ ಎಂಟು ಸಾಲು ತೆಗೀ ಮತ್ತೆ ಕೊನೇ ಆರು ಸಾಲ್ ಕಟ್ ಮಾಡಿದ್ರೆ ಇದೊಂದು ಅದ್ಭುತ ಕವನ ಅಗತೈತಿ’’ ಎಂದರಂತೆ. ಆ ಕವಿ ಹೇಳದೆ ಕೇಳದೆ ಕಾಲ್ಕಿತ್ತರು. ಏಕೆಂದರೆ ಅವರು ಬರೆದು ಕೊಂಡು ಬಂದಿದ್ದ ಕವಿತೆ 14 ಸಾಲು ಇತ್ತು.

ಚಂಪಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗ ರಾಜ್ಯೋತ್ಸವದ ಸಮಾರಂಭವೊಂದಕ್ಕೆ ಹೋಗಿದ್ದರು. ಉಗ್ರ ಕನ್ನಡ ಹೋರಾಟಗಾರರೊಬ್ಬರು ವೀರಾವೇಶದಿಂದ ಭಾಷಣ ಮಾಡುತ್ತಿದ್ದರು-‘‘ನಾವು ಕನ್ನಡಿಗರು ನಿರಭಿಮಾನಿಗಳು, ಪುರುಷರಲ್ಲ, ಷಂಡರು’’ ಹೀಗೆ ಸಾಗಿತ್ತು ಅವರು ಮಾತುಗಳು. ಚಂಪಾ ಅವರಿಗೆ ಒಂದು ಚೀಟಿ ಕಳುಹಿಸಿ -‘‘ದಯಮಾಡಿ ನಿಮ್ಮ ವೈಯಕ್ತಿಕ ಸಮಸ್ಯೆಯನ್ನು ಹೀಗೆ ಪಬ್ಲಿಕ್‌ಆಗಿ ಹೇಳಬೇಡಿರಿ’’ ಅಂದರು. ಭಾಷಣ ನಿಂತೇ ಹೋಯಿತು. ಅವರ ಇನ್ನೊಂದು ಪ್ರಸಿದ್ಧ ಮಾತೆಂದರೆ, ‘‘ಕನ್ನಡ ಮಾಧ್ಯಮದಲ್ಲಿ ಓದಿದ ಮಗ ಪಂಪ ಮತ್ತು ರನ್ನ ಎಂದು ಹೇಳಿದರೆ, ಇಂಗ್ಲಿಷ್ ಕಾನ್ವೆಂಟ್‌ನಲ್ಲಿ ಓದಿದ ಮಗ ಪಂಪ್ ಅಂಡ್ ರನ್ ಎಂದು ಹೇಳುತ್ತಾನೆ.’ ‘ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿತವರು ನಿಜವಾದ ವೈದ್ಯರಾಗುತ್ತಾರೆ; ಇಂಗ್ಲಿಷ್ ಮೂಲಕ ಕಲಿತವರು ಕೇವಲ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗುತ್ತಾರೆ’ ಎನ್ನುವ ಅವರ ಮಾತುಗಳಿಗೆ ವೈದ್ಯರು ಪ್ರತಿಭಟನೆಯನ್ನೂ ಸೂಚಿಸಿದ್ದರು.

ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹೊತ್ತು ಅವರು ಒಂದು ಮಾತು ಹೇಳಿದ್ದರು- ‘‘ತುಂಬ ಸಂಕಷ್ಟದ ಕಾಲಘಟ್ಟದಲ್ಲಿ ಈ ಗೌರವ ನನಗೆ ಒಲಿದು ಬಂದಿದೆ. ಭಿನ್ನಾಭಿಪ್ರಾಯಗಳನ್ನು ವಿರೋಧಿಸುವುದಷ್ಟೇ ಅಲ್ಲ; ಅಂತಹ ದನಿಗಳನ್ನು ಗುಂಡುಗಳ ಮೂಲಕ ಶಾಶ್ವತವಾಗಿ ಇಲ್ಲವಾಗಿಸುವ ಅಸಹನೆಯ ವಾತಾವರಣದಲ್ಲಿ ನಾವಿದ್ದೇವೆ. ಸಾಹಿತಿಗಳು, ಪತ್ರಕರ್ತರು, ಸಂಶೋಧಕರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಕನ್ನಡಿಗರು ಮೊದಲಿನಿಂದಲೂ ಸಹಿಷ್ಣುತೆಗೆ ಹೆಸರಾದವರು. ಸಾಂಸ್ಕೃತಿಕ ಬಹುತ್ವದ ಕುರಿತು ಅಚಲ ವಿಶ್ವಾಸಿಗಳು. ಹೀಗಾಗಿ ನಾವೀಗ ಕಠಿಣ ಸಂದೇಶಗಳನ್ನು ನೀಡಬೇಕಾಗಿದೆ. ಸಾಹಿತಿಗಳಿಗೆ ಈಗ ಹಿಂದೆಂದಿಗೂ ಇಲ್ಲದಷ್ಟು ಹೊಣೆಗಾರಿಕೆ ಇದೆ’’. ಇಂತಹ ಜವಾಬ್ದಾರಿಯುತ ಮಾತುಗಳನ್ನು ಹೇಳಿದ ಚಂಪಾ ಇವತ್ತು ನಮ್ಮಾಡನಿಲ್ಲ. ಒಂದು ನಾಡಿನ ಜನಸಮುದಾಯದ ಒಳಿತಿನ ಬಗ್ಗೆ ನಿರಂತರವಾಗಿ ಮಾತಾಡಿಕೊಂಡು, ಹೋರಾಡಿಕೊಂಡು ಬಂದ ಚಂಪಾ ಅಂತಹವರು ನಮ್ಮ ನಡುವೆ ಈಗ ಬಹಳ ಜನ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)