varthabharthi


ವಾರ್ತಾಭಾರತಿ 19ನೇ ವಾರ್ಷಿಕ ವಿಶೇಷಾಂಕ

ಕಲ್ಯಾಣ ಕರ್ನಾಟಕದ ಅಮೂರ್ತ ಪರಂಪರೆ

ವಾರ್ತಾ ಭಾರತಿ : 11 Jan, 2022
ರಿಷಿಕೇಶ್ ಬಹದ್ದೂರ ದೇಸಾಯಿ

ರಿಷಿಕೇಶ್ ಬಹದ್ದೂರ ದೇಸಾಯಿ ಅವರ ಮೂಲ ಊರು ಅಗಡಿ. ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅಗಡಿ, ಹಾನಗಲ್ಲು, ಪಣಜಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಗಳಲ್ಲಿ ಓದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್‌ನ ನಂತರ ಈಗ ಕೆಲಸ ಮಾಡುತ್ತಿರುವುದು ಬೆಳಗಾವಿಯಲ್ಲಿ. ಓದಿದ್ದು ಆಂಗ್ಲ ಸಾಹಿತ್ಯ, ಪತ್ರಕರ್ತರಾಗಿದ್ದು ‘ದಿ ಹಿಂದೂ ಪತ್ರಿಕೆ’ಯಲ್ಲಿ. ಸಂವೇದನಾಶೀಲ ಲೇಖಕರು ಮತ್ತು ಪ್ರಗತಿಪರ ಚಿಂತಕರು. 

ರಿಷಿಕೇಶ್ ಬಹದ್ದೂರ ದೇಸಾಯಿ

ಕಲ್ಯಾಣ ಕರ್ನಾಟಕ ದಾಸ ಸಾಹಿತ್ಯದ, ವಚನ ಸಾಹಿತ್ಯದ, ತತ್ವಪದಕಾರರ, ಸೂಫಿ ಸಂತರ ನೆಲ. ಇಲ್ಲಿನ ಗಾಳಿಗೆ ಇವೆಲ್ಲರ ಗಂಧವೂ ಪೂಸಿದೆ. ಅನೇಕ ಪ್ರಮಥರು ತಮ್ಮ ತಮ್ಮ ಪ್ರಯತ್ನದಿಂದಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಕಂಡುಕೊಂಡ ಈ ಸತ್ಯದ ನೆಲೆಗಳು ಈಗಿನ ಕಾಲದಲ್ಲಿಯೂ ಸಹವಾಸಿಗಳಾಗಿ ಇಲ್ಲಿ ಏಕಕಾಲಕ್ಕೆ ಜೀವಂತ ಇರುವುದು ಇಲ್ಲಿನ ವೈಶಿಷ್ಟ.

     ನಮ್ಮ ತಾಯಿಯ ಊರು ಬಾಡ, ಕನಕದಾಸರ ಊರು. ನಮ್ಮ ಊರಿನಲ್ಲಿ ಸಂಗೀತ ಹೇಳಿ ಕೊಡುವವರು ಎಲ್ಲರೂ ಕನಕದಾಸರ ಹಾಡು ಹೇಳಿಕೊಡುತ್ತಿದ್ದರು. ನಾವು ಸಣ್ಣವರಿದ್ದಾಗ ನಮಗೆ ಹೇಳಿಕೊಟ್ಟಿದ್ದ ಹಾಡು ಒಂದನ್ನು ನಾವು ಹೇಳುತ್ತಿದ್ದೆವು.

ಅದರಲ್ಲಿ ಒಂದು ಸಾಲು ಇತ್ತು. ಅದು ‘ಅಸಮ ಭಾವ ಆದಿಕೇಶವ ರಾಯ’. ಆದರೆ ನಾವು ಅದನ್ನು ಅಸಂಭವ ಆದಿಕೇಶವ ರಾಯ ಅಂತ ಹೇಳುತ್ತಿದ್ದೆವು. ಅನೇಕ ವರ್ಷಗಳ ನಂತರ ನನಗೆ ಅದರ ನಿಜವಾದ ಅರ್ಥ ಆಯಿತು. ಅದನ್ನು ನನಗೆ ಹೇಳಿಕೊಟ್ಟವರು ಮಲಯಾಳಿ ಸಾಧಕರು ಹಾಗೂ ಅನುವಾದಕರು ಆಗಿರುವ ವಿನಯ ಚೈತನ್ಯ ಅವರು. ಅವರು ಅಕ್ಕ ಮಹಾದೇವಿ ವಚನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದರು. ಅವರು ಹೇಳಿದರು ‘‘ಭವ ಅಂದರೆ ಬೀಯಿಂಗ್. ಅದಕ್ಕೆ ಅಸಮ ಭವ ಎಂದರೆ ನಿನಗೆ ಸಮನಾಗಿರುವರು ಇನ್ನು ಮುಂದೆ ಹುಟ್ಟಲಾರರು,’’ ಅಂತ. ನನಗೆ ನನ್ನ ತಪ್ಪಿನ ಅರಿವು ಆಯಿತು. ಅಲ್ಲದೆ, ನಾವು ಅನಿರೀಕ್ಷಿತ ಮೂಲಗಳಿಂದ ಬದುಕಿನ ಪಾಠಗಳನ್ನು ಕಲಿಯಬಹುದು ಅನ್ನುವುದು ಸಾಬೀತಾಯಿತು.

ನಾನು- ನನ್ನ ಊರಿಗೆ ಹೋದಾಗ ಬಂದಾಗ, ನಾನು ಬೀದರ್-ಗುಲ್ಬರ್ಗ ಕತೆಗಳನ್ನು ಹೇಳುವುದರಿಂದಲೋ ಏನೋ ಅನೇಕರು ನನ್ನನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀವು- ಬೀದರ್‌ನವರೇ? ಗುಲ್ಬರ್ಗದವರೇ? ಒಟ್ಟಿನಲ್ಲಿ ನೀವು ಹೈದರಾಬಾದ್ ಕರ್ನಾಟಕದವರು, ಅದೇ ಆ 371ದವರು ಅಲ್ಲವೇ? ಅಂತ. ಉತ್ತರವಾಗಿ ನಾನು ನಕ್ಕು ಬಿಡುತ್ತೇನೆ. ‘‘ಅಯ್ಯೋ ನಾನು ಅಷ್ಟು ಒಳ್ಳೆಯವನಲ್ಲ ಬಿಡಿ,’’ ಅಂತ ಹೇಳುತ್ತೇನೆ. ಅವರು ಆಶ್ಚರ್ಯ ಸೂಚಿಸುವ ಮೊದಲೇ, ‘‘ನಾನು ಅಲ್ಲಿ ಬಹಳ ವರ್ಷ ಕೆಲಸ ಮಾಡಿದೆ. ಅಲ್ಲಿಯ ಜನ ನನ್ನನ್ನು ತುಂಬ ಹಚ್ಚಿಕೊಂಡು ಬಿಟ್ಟಿದ್ದಾರೆ,’’ ಅಂತ ಸಮಜಾಯಿಷಿ ಕೊಡುತ್ತೇನೆ.

ಪ್ರತಿ ಬಾರಿಯೂ ಈ ಪ್ರಶ್ನೆ ಎದುರಾದಾಗ ನನಗೆ ತುಂಬ ಖುಷಿಯಾಗುತ್ತದೆ. ‘‘ಅವರ ಬಾಯಹರಕೆಯಂತೆ ಆಗಬಾರದಿತ್ತೆ’’ ಅಂತ ಅನ್ನಿಸುತ್ತದೆ. ಆದರೆ ಇಲ್ಲಿನ ಜನರ ಹೃದಯ ವೈಶಾಲ್ಯದ ಬಗ್ಗೆ ಹೊರಗಿನವರಿಗೆ ಮನವರಿಕೆ ಮಾಡಿಕೊಡಲು ನನಗೆ ಇನ್ನೂ ಸಾಧ್ಯ ಆಗಿಲ್ಲವಲ್ಲ ಅಂತ ಕೊಂಚ ಬೇಸರವೂ ಮೂಡುತ್ತದೆ. ನನ್ನ ಕೆಲಸದ ಸ್ವರೂಪದಿಂದಾಗಿ ನಾನು ಅನೇಕ ಊರುಗಳಲ್ಲಿ ಓಡಾಡಿದ್ದೇನೆ, ವಿಶೇಷ ರೀತಿಯ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ, ವಿವಿಧ ರೀತಿಯ ಆಸಕ್ತಿಕರ ಘಟನೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಇದು ನನಗೆ ಆನಂದದಾಯಕ, ಅವಿಸ್ಮರಣೀಯ, ಅಸಹಜ ಅನುಭವಗಳನ್ನು ನೀಡಿದೆ. ಇವುಗಳ ಹಿಂದೆ ಹೊಸ ವಿಷಯಗಳನ್ನು ಕಲಿತುಕೊಳ್ಳುವ ನನ್ನ ಕುತೂಹಲ ಕೆಲಸ ಮಾಡಿರಬಹುದು.

ಈ ರೀತಿಯ ಅಮೂಲ್ಯ ಅನುಭವಗಳಿಂದ ಕಲಿಯಬೇಕಷ್ಟು ಪಾಠ ಕಲಿಯಲು ನನಗೆ ಸಾಧ್ಯ ಆಗಿರಲಿಕ್ಕಿಲ್ಲ. ಹಳ್ಳಿಯ ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಬಯಸ್ಕೋಪು ನೋಡಿ ಆನಂದಪಡುತ್ತಾರೆ ಅಷ್ಟೇ ಅಲ್ಲವೇ? ಅದರಿಂದ ಏನಾದರೂ ಪಾಠ ಕಲಿತಾರೆಯೇ? ನನ್ನ ಬದುಕು ಸಹ ಅಷ್ಟೇ ಅಂತ ನಾನು ಅಂದುಕೊಳ್ಳುತ್ತೇನೆ. ಬದುಕು ನನ್ನ ಎದುರು ತೆರೆದಿಟ್ಟ ಅನುಭವಗಳು. ಅನುಭೂತಿಯಾಗಿ ಬದಲಾಗಲು ನನಗೆ ಇನ್ನೂ ಸಮಯಬೇಕೇನೋ. ಆದರೆ ನಾನು ಜನ್ಮಜಾತ ಪತ್ರಕರ್ತನಾಗಿರುವುದರಿಂದ, ಕೇಳುಗರನ್ನು ಸುತ್ತ ಕೂಡಿಸಿಕೊಂಡು ಸುದ್ದಿ ಹೇಳುವುದು ನನಗೆ ರೂಢಿಗತ ಆಗಿರುವುದರಿಂದ, ನನಗೆ ಆಗಿರುವ ಅನುಭವಗಳನ್ನು, ನನಗೆ ತಿಳಿದಷ್ಟು ನಿಮಗೆ ಹೇಳಲು ಇಚ್ಛಿಸುತ್ತೇನೆ.

ನೇತಿ- ನೇತಿ

ನನ್ನ ಇಷ್ಟದ ನೀತಿ ಕತೆಗಳಲ್ಲಿ ಒಂದು ಗೋವಿನ ಕತೆ. ಇದು ನಾವೆಲ್ಲರೂ ಚಿಕ್ಕಂದಿನಲ್ಲಿ ಕಲಿತ, ತನ್ನ ಸತ್ಯದ ಬಲದಿಂದ ಕ್ರೂರ ಹುಲಿಯ ಹೃದಯ ಪರಿವರ್ತನೆ ಮಾಡಿದ ಗೋವಿನ ಕತೆ ಅಲ್ಲ. ಇದು ಸದಾ ಸತ್ಯದ ಹುಡುಕಾಟದಲ್ಲಿ ಮುಳುಗಿ ಹೋಗಿರುವ ಗೋವಿನ ಕತೆ. ಇದು ರಾಮಕೃಷ್ಣ ಪರಮಹಂಸ ಅವರು ಹೇಳುತ್ತಿದ್ದ ನೀತಿ ಕತೆಗಳಲ್ಲಿ ಒಂದು.

ಹಸುವೊಂದು ಹುಲ್ಲುಗಾವಲಿನಲ್ಲಿ ಅಲೆದಾಡುತ್ತಾ ಇದ್ದಾಗ ಅದಕ್ಕೆ ಒಂದು ಸಂದೇಹ ಬಂತು. ದೇವರು ಎಲ್ಲಿ ಇದ್ದಾನೆ? ನನಗೆ ದೇವರು ದೊರಕುವುದು ಹೇಗೆ? ನನ್ನ ದಿನನಿತ್ಯದ ಜೀವನದಲ್ಲಿ ನಾನು ನೋಡುವ, ಕೇಳುವ, ಗ್ರಹಿಸುವ ವಸ್ತುಗಳಲ್ಲಿ ದೇವರು ಇದ್ದಾನೆಯೇ? ಎಂದು ಅದಕ್ಕೆ ಅನ್ನಿಸತೊಡಗಿತು. ಅದು ಹೋಗಿ ಹುಲ್ಲು ತಿನ್ನಲು ಶುರು ಮಾಡಿತು. ಈ ಹುಲ್ಲೇ ದೇವರು ಇರಬಹುದೇ ಅಂತ ಅದರ ಮನಸ್ಸಿನಲ್ಲಿ ಪ್ರಶ್ನೆ ಮೂಡಿತು. ನೇತಿ - ನೇತಿ (ಇಲ್ಲ-ಇದಲ್ಲ) ಎಂದು ಹೇಳಿ ಮುಂದೆ ಸಾಗಿತು. ಅಲ್ಲಿ ಬೆಳೆದ ದೊಡ್ಡ ಗಿಡದ ಎಲೆಗಳನ್ನು ಕಿತ್ತು ತಿಂದಿತು. ಈ ಎಲೆಗಳೇ ದೇವರು ಇರಬಹುದೇ? ನೇತಿ-ನೇತಿ ಇಲ್ಲ ಇಲ್ಲ, ಅಂತ ಅನ್ನಿಸಿ ಮುಂದೆ ಸಾಗಿತು. ನಂತರ ನೀರು ಕುಡಿಯಲು ಕೆರೆಯ ಕಡೆ ಹೋಯಿತು. ಈ ನೀರಿನಲ್ಲಿ ದೇವರು ಇದ್ದಾನೆಯೇ? ನೇತಿ-ನೇತಿ ಇಲ್ಲ ಇಲ್ಲ, ಇದಲ್ಲ ಅಂತ ಅಲೆದಾಡಿತು.

ಮಧ್ಯಾಹ್ನದ ಬಿಸಿಲು ಜೋರಾಗಿತ್ತು. ಆ ಹಸು ಮರವೊಂದರ ಕೆಳಗೆ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡಿತು. ಈ ಸುಡುವ ಬಿಸಿಲಿನಲ್ಲಿ ತಾಯಿಯ ಸೆರಗಿನಂತೆ ನನ್ನನ್ನು ಕಾಪಾಡಿದ ಈ ನೆರಳೇ ದೇವರು ಇರಬಹುದೇ? ಅಥವಾ ನಮಗೆ ಕಾಲಕಾಲಕ್ಕೆ ಶಿಕ್ಷೆ ನೀಡಿ ಬುದ್ಧಿ ಕಲಿಸುವ ಬಿಸಿಲೇ ದೇವರು ಇರಬಹುದೇ? ಈಗ ಬೀಸುತ್ತಿರುವ ತಂಗಾಳಿ ಇರಬಹುದೇ? ಆ ಆಕಾಶ ಇರಬಹುದೇ? ಈ ಭೂಮಿ ಇರಬಹುದೇ? ಇಲ್ಲ ಇವು ಯಾವುವೂ ಅಲ್ಲ, ನೇತಿ-ನೇತಿ ಎಂದು ಹೇಳುತ್ತಾ ಅದು ಬೇರೆ ಕಡೆಗೆ ಹೊರಟು ಹೋಯಿತು. ಇದು ನೇತಿಯ ಗೋವಿನ ಕತೆ.

ಬ್ರಹದಾರಣ್ಯಕ ಉಪನಿಷತ್ತಿನಲ್ಲಿ ಕಂಡ ಒಂದು ಸಾಲನ್ನು ಬಳಸಿ ಶಂಕರಾಚಾರ್ಯರು ನಿರ್ವಾಣ ಶತಕದಲ್ಲಿ ಒಂದು ಸೂತ್ರವನ್ನು ತಿಳಿಸಿದ್ದಾರೆ. ಇದನ್ನು ರಾಮಕೃಷ್ಣ ಪರಮಹಂಸರು ತಮ್ಮ ಮಕ್ಕಳ ಕತೆಗಳಲ್ಲಿ ಸೇರಿಸಿದ್ದರು. ಹಾಗಾದರೆ ದೇವರಿಗಾಗಿ ಮಾನವ ಮಾಡುವ ಈ ಹುಡುಕಾಟ ಶುರು ಆಗಿದ್ದು ಯಾವಾಗ? ಅದಕ್ಕೆ ಕೊನೆ ಇದೆಯೇ? ಈಗಲೂ ಅದು ನಡೆಯುತ್ತಿದೆಯೇ? ಇದ್ದರೆ ಅದು ಎಲ್ಲಿದೆ? ನನ್ನ ಪ್ರಕಾರ ಈ ಜಗತ್ತಿನಲ್ಲಿ ಮನುಷ್ಯ ಹುಟ್ಟಿಕೊಂಡ ಮೊದಲ ದಿನದಿಂದಲೇ ಅದು ಶುರು ಆಗಿದೆ. ಹುಲ್ಲುಗಾವಲಿನ ಗೋವು ದೇವರನ್ನು ಹುಡುಕುತ್ತಾ ಇದೆಯೋ ಇಲ್ಲವೋ. ಆದರೆ ಮನುಷ್ಯ ಮಾತ್ರ ಹುಡುಕುತ್ತಲೇ ಇದ್ದಾನೆ.

ದೇವರು

ಹಾಗಾದರೆ ಈ ದೇವರು ಎಂದರೆ ಯಾರು? ಸಕಲ ಜೀವರಾಶಿಗಳಿಗೆ ದೊರಕಿದ ಆ ಬೃಹತ್ ಮೇಧಾಶಕ್ತಿಯ ಮೂಲದ ಸ್ವರೂಪ ಯಾವುದು? ಅದು ಮೂರ್ತವೋ, ಅಮೂರ್ತವೋ?
‘ಅಖಂಡ ಮಂಡಲಾಕಾರಂ, ವ್ಯಾಪತಮ್ ಯೇನ ಚರಾಚರಂ’, ಎಂದು ನಾವು ನೆನೆಸುವಾಗ, ‘ಸಚ್ಚಿದಾನಂದ ರೂಪಾಯ, ಆನಂದಾಯ ನಮೋ ನಮಃ’ ಎಂದು ಜಪಿಸುವಾಗ ನಮ್ಮ ಕಣ್ಣಮುಂದೆ ಬರುವುದು ಏನು?

ಇಲ್ಲಿ ಬೇರೆಯವರು ತಿಳಿದುಕೊಂಡಿದ್ದನ್ನು ಹೇಳುವುದಕ್ಕೆ ಮೊದಲು ನನಗೆ ತೋಚಿದ್ದನ್ನು ಹೇಳುತ್ತೇನೆ. ನನ್ನ ಪ್ರಕಾರ ನಿಸರ್ಗವೇ ಮನುಷ್ಯನಿಗೆ ಕಂಡ ಮೊದಲ ದೇವರು. ಶಿಲಾಯುಗದ ಮಾನವ ಅನುಭವಿಸಿದ ಚಂಡಮಾರುತ, ಭೀಕರ ಮಳೆ, ಪ್ರಚಂಡ ಪ್ರವಾಹ, ಗೊತ್ತಿಲ್ಲದೆ ಹತ್ತಿಕೊಳ್ಳುತ್ತಿದ್ದ ಕಾಡಿನ ಕಿಚ್ಚು, ವನ್ಯಮೃಗಗಳು, ರೋಗ, ಸಾವು, ಇತ್ಯಾದಿಗಳು ಅವನಲ್ಲಿ ಅತೀವ ಭಯ ಹುಟ್ಟಿಸಿದವು. ಗೊಂದಲ ಉಂಟು ಮಾಡಿದವು. ತನ್ನ ಸುತ್ತಮುತ್ತಲೂ ಸುಂದರವಾಗಿಯೂ, ಘನಘೋರವಾಗಿಯೂ ಇರುವ ಪ್ರಕೃತಿ ತನ್ನ ಅಳವಿಗೆ ಮೀರಿದ್ದು ಎಂದು ಅವನಿಗೆ ಗಾಬರಿಯಾಯಿತು.

ಅದರ ಬಗ್ಗೆ ಅವನಿಗೆ ಅನೇಕ ಪ್ರಶ್ನೆಗಳು ಇದ್ದವು, ಸುಲಭವಾಗಿ ಪರಿಹಾರವಾಗಲಾರದ ಸಂದೇಹಗಳು ಇದ್ದವು. ಈ ಸಂದೇಹ-ಪ್ರಶ್ನೆಗಳನ್ನು ಎಲ್ಲರ ಎದುರು, ಖುಲ್ಲಂ ಖುಲ್ಲಾ ಕೇಳಿಕೊಂಡ ವ್ಯಕ್ತಿ ಗುರು ಆಗಿಹೋದ. ಮಾನವನಿಗೆ ನಿಸರ್ಗದ ವಿಸ್ಮಯಗಳ ಬಗ್ಗೆ ಅನೇಕ ವರ್ಷಗಳಾದರೂ ಮಾಸಲಾರದ ಹೆದರಿಕೆ ಇತ್ತು. ಆ ಅನೂಹ್ಯ ಅಂಜಿಕೆಯೇ ದೈವೀರೂಪ ಪಡೆಯಿತು ಅಂತ ನನಗೆ ಅನ್ನಿಸುತ್ತದೆ. ತನ್ನ ವಾತಾವರಣದ ಬಗ್ಗೆ ಅವನಲ್ಲಿ ಹುಟ್ಟಿಕೊಂಡ ಆ ಅಂಜಿಕೆಯೇ ಆದರವಾಗಿ, ಆರಾಧನೆಯಾಗಿ ಮಾರ್ಪಾಡು ಆಯಿತು.

ಯಾವುದು ತನಗೆ ತಿಳಿಯಲಿಲ್ಲವೋ, ತನ್ನ ಸುತ್ತಲಿನ ಬದಲಾವಣೆಗಳು ತನ್ನ ಅರಿವಿಗೆ ಮೀರಿದಂತೆ ಆದವೋ, ಯಾವುದು ತನ್ನ ಮಿದುಳಿನ ಅಂಕೆ ಮೀರಿ ಹೋಗಿ, ಅವನ್ನು ಅರ್ಥ ಮಾಡಿಕೊಳ್ಳಲು ಅವನು ತನ್ನ ಎದೆಯಾಳದ ನಂಬಿಕೆಗೆ ಮೊರೆ ಹೋದ. ‘‘ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ- ಮಂಕುತಿಮ್ಮ’’ ಎಂಬ ಕವಿ ವಾಣಿಯಂತೆ ಕಾಣದ- ತಿಳಿಯದ- ಹುಲುಮಾನವರ ಲೆಕ್ಕಕ್ಕೆ ಸಿಗದ ಹೋದ ಶಕ್ತಿಗೆ ಆಗ ಶರಣಾದ.

ಈಗಲೂ ಇದು ಸ್ವಲ್ಪ ಹಾಗೆಯೇ ಇದೆ. ತುಂಬಾನೇ ಏನೂ ಬದಲಾಗಿಲ್ಲ. ನಾವು ನಿಯಮಿತವಾಗಿ ಮಾಡುವ ಪಂಚಭೂತಗಳ ಆರಾಧನೆಯಲ್ಲಿ ಇದನ್ನು ಕಾಣಬಹುದು. ವಿವಿಧ ಹಬ್ಬ ಹರಿದಿನಗಳಲ್ಲಿ, ಬಾವಿ ತೆಗೆಸುವಾಗ, ಮನೆ ಕಟ್ಟಿಸುವಾಗ, ಸುಗ್ಗಿಯ ಆಚರಣೆಯಲ್ಲಿ, ನಾವು ನಿಸರ್ಗವನ್ನು ಆರಾಧಿಸುತ್ತೇವೆ. ನಾನು ಇದನ್ನು ಋಣಾತ್ಮಕವಾಗಿ ನೋಡೋದಿಲ್ಲ. ಧನಾತ್ಮಕವಾಗಿಯೇ ನೋಡುತ್ತೇನೆ. ಇದು ನನ್ನ ಅಭಿಪ್ರಾಯ. ‘ಲೋಕೋ ಭಿನ್ನ ರುಚಿಃ’ ಅನ್ನುವಂತೆ ಇದಕ್ಕೂ ಭಿನ್ನವಾದ ಅಭಿಪ್ರಾಯ ನಿಮಗೆ ಇರಬಹುದು. ಈ ರೀತಿ ಇರುವುದು ಸಮಾಜದ ಆರೋಗ್ಯಕ್ಕೆ ಒಳ್ಳೆಯದು.

‘ವಾದೇ ವಾದೇ ಜಾಯತೆ ತತ್ವ ಭೇದಹ’ ಎನ್ನುವ ನುಡಿಯಂತೆ ಅದು ನಮಗೆಲ್ಲರಿಗೂ ಕಲಿಕೆಯ ಅವಕಾಶ ಒದಗಿಸಿ ಕೊಡುತ್ತದೆ. ಈ ರೀತಿಯ ವಾತಾವರಣ ಸೃಜನಶೀಲತೆಗೆ ಫಲವತ್ತಾದ ನೆಲ, ನಾವೀನ್ಯತೆಯ ಸೆಲೆ. ಇದು ನನ್ನ ಇನ್ನೊಂದು ಅಭಿಪ್ರಾಯ. ಇದರ ಜೊತೆಗೂ ನಿಮಗೆ ಭಿನ್ನ ಅಭಿಪ್ರಾಯ ಇರಬಹುದು. ಅದಕ್ಕೂ ಸ್ವಾಗತ ಇದೆ.

ಕರ್ನಾಟಕದ ಕಲ್ಯಾಣ ಭೂಮಿ

ಇವು ಇಡೀ ಜಗದ ಮಾತು. ಆದರೆ ನಮ್ಮ ಹೈದರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ವಿಶೇಷತೆ ಏನು? ನನ್ನ ಪ್ರಕಾರ ಭಾರತ ವಿವಿಧ ಧರ್ಮಗಳಿಗೆ ಜನ್ಮ ಕೊಟ್ಟ ನಾಡು. ಆದರೆ, ಹೈದರಾಬಾದ್ ಕರ್ನಾಟಕ ವಿವಿಧ ಅಧ್ಯಾತ್ಮ ಪರಂಪರೆಗಳ ನೆಲೆ. ನಾವು ಇವುಗಳನ್ನು ಹುಡುಕಲಿಕ್ಕೆ ಹೋಗಬೇಕಾಗಿಲ್ಲ. ಸುಮ್ಮನೇ ನಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿದರೆ ನಮಗೆ ಅವು ಕಾಣದೇ ಇರಲು ಸಾಧ್ಯವೇ ಇಲ್ಲ.

ಇವುಗಳಲ್ಲಿ ಕೆಲವನ್ನು ನೆನಪು ಮಾಡಿಕೊಳ್ಳೋಣ. ಕಲ್ಯಾಣ ಕರ್ನಾಟಕ ದಾಸ ಸಾಹಿತ್ಯದ, ವಚನ ಸಾಹಿತ್ಯದ, ತತ್ವಪದಕಾರರ, ಸೂಫಿ ಸಂತರ ನೆಲ. ಇಲ್ಲಿನ ಗಾಳಿಗೆ ಇವೆಲ್ಲರ ಗಂಧವೂ ಪೂಸಿದೆ. ಅನೇಕ ಪ್ರಮಥರು ತಮ್ಮ ತಮ್ಮ ಪ್ರಯತ್ನದಿಂದಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಕಂಡುಕೊಂಡ ಈ ಸತ್ಯದ ನೆಲೆಗಳು ಈಗಿನ ಕಾಲದಲ್ಲಿಯೂ ಸಹವಾಸಿಗಳಾಗಿ ಇಲ್ಲಿ ಏಕಕಾಲಕ್ಕೆ ಜೀವಂತ ಇರುವುದು ಇಲ್ಲಿನ ವೈಶಿಷ್ಟ್ಯ.

‘ನಾನು ಹೇಳುವುದಷ್ಟೇ ಸತ್ಯ, ನೀನು ಹೇಳುವುದು ಎಲ್ಲಾ ಸುಳ್ಳು’ ಎನ್ನುವ ಭಾವನೆ ಇಲ್ಲಿ ಇಲ್ಲ. ‘ನನ್ನ ಧರ್ಮ ನನಗೆ, ನಿಮ್ಮ ಧರ್ಮ ನಿಮಗೆ. ಇಬ್ಬರ ಹಾದಿ ಬೇರೆ ಇದ್ದೀತು, ಆದರೆ ನಮ್ಮ ನಡೆ ಅಧ್ಯಾತ್ಮದ ಎಡೆಗೆ’ ಎನ್ನುವ ಧೋರಣೆಯೇ ಇದೆ.

ನಾನು ಕಲ್ಯಾಣ ಕರ್ನಾಟಕದ ತುಂಬ ಓಡಾಡಿದ್ದೇನೆ. ಇಲ್ಲಿನ ಅಸಂಖ್ಯ ಸಂತರಲ್ಲಿ ಕೆಲವರು ತುಂಬ ಜನಪ್ರಿಯತೆ ಗಳಿಸಿ ಈ ನಾಡಿನ ಆಚೆಗೂ ಪರಿಚಿತರಾಗಿದ್ದಾರೆ. ಅವರಿಗೆ ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಮಟ್ಟದ ಭಕ್ತರಿದ್ದಾರೆ. ಅಂತಹ ಕೆಲವರನ್ನು ಹೊರತುಪಡಿಸಿ ನೋಡಿದರೆ, ಇಲ್ಲಿ ಪ್ರತಿ ಹಳ್ಳಿ- ಹಳ್ಳಿಯಲ್ಲಿಯೂ ಗುರು ಪಂಥದ ಪ್ರತಿನಿಧಿಗಳು ಇದ್ದಾರೆ. ಸೂಫಿ ಸಂತರು-ದಾಸರು-ಶರಣರು-ತತ್ವಪದಕಾರರು, ಸ್ಥಳೀಯ ಶ್ರದ್ಧಾ ಕೇಂದ್ರದ ಗುರುಗಳು-ಪೀರರು ಇದ್ದಾರೆ. ಹಿಂದೊಮ್ಮೆ ವಿದೇಶಿ ಪ್ರವಾಸಿಯೊಬ್ಬರು ನನ್ನನ್ನು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ ಏನು? ಇಲ್ಲಿನ ಜೀವಂತ ಪರಂಪರೆ ಯಾವುದು? ಅಂತ ಕೇಳಿದಾಗ ನಾನು ‘‘ಇದು ಮಲ್ಲಿಕಾರ್ಜುನ ಸ್ವಾಮಿ ದರ್ಗಾ ಹಾಗೂ ಖಾದರ ಲಿಂಗನ ಮಠ ಇರುವ ಭೂಮಿ. ಅವು ಕೇವಲ ಕಟ್ಟಡಗಳಾಗಿ ಉಳಿದಿಲ್ಲ. ಅವುಗಳ ಹಿಂದಿನ ತತ್ವಗಳನ್ನು ಜನ ಇಂದಿಗೂ ಉಸಿರಾಡುತ್ತಾರೆ. ಇದೇ ಇಲ್ಲಿನ ಜೀವಂತ ಪರಂಪರೆ’’ಅಂತ ಹೇಳಿದ್ದೆ. ಇಲ್ಲಿನ ಗುರು ಪಂಥ, ಅವರಿಗೆ ನಡೆದುಕೊಳ್ಳುವ ಶಿಷ್ಯರು, ವಿಶ್ವಾಸಿಕರ ಪ್ರಶ್ನಾತೀತ ಶ್ರದ್ಧೆ ಇವೆಲ್ಲವೂ ನನ್ನನ್ನು ಮೂಕನನ್ನಾಗಿ ಮಾಡಿದೆ. ನನ್ನ ಪ್ರಕಾರ ಗುರು ಪಂಥ ಎನ್ನುವುದೇ ಅಮೂರ್ತ ಪರಂಪರೆಯ ಪ್ರತೀಕಗಳಲ್ಲಿ ಒಂದು. ಹಾಗೆಂದು ಇದು ಕೇವಲ ಧಾರ್ಮಿಕ ವಿಷಯಗಳಿಗೆ ಸೀಮಿತ ಆಗಿಲ್ಲ. ಅದು ಒಂದು ಜೀವನ ಶೈಲಿಯಾಗಿ ರೂಪುಗೊಂಡುಬಿಟ್ಟಿದೆ. ಇಲ್ಲಿನ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಇಲ್ಲಿನ ಜನ ನಡೆದುಕೊಳ್ಳುವ ರೀತಿ, ಅವರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಚರಣೆಗಳು, ಇವೆಲ್ಲವುಗಳ ಮೇಲೆ ಈ ತತ್ವ -ಸಿದ್ಧಾಂತಗಳ ಪ್ರಭಾವ ಇದೆ. ಅಷ್ಟು ಅಲ್ಲದೆ, ಇಲ್ಲಿನ ಜನರ ರೀತಿ - ನೀತಿ- ಸೌಜನ್ಯ, ಭಾಷೆ, ಅವರ ನಡವಳಿಕೆ ಎಲ್ಲರ ಮೇಲೆಯೂ ಈ ಅಧ್ಯಾತ್ಮದ ಪ್ರಭಾವಳಿಯ ಛಾಪು ಮೂಡಿದೆ.

ಇದನ್ನು ಹೇಳುವಾಗ ಒಂದು ಘಟನೆ ನೆನಪಾಗುತ್ತದೆ. ಒಂದು ದಿನ ನಾವು ಹಿರಿಯ ಪತ್ರಕರ್ತ ಹನುಮಂತಪ್ಪ ಪಾಟೀಲ್ ಅವರ ಮನೆಗೆ ಹೋಗಿದ್ದೆವು. ನನ್ನ ಹೆಂಡತಿ ವೀಣಾ ಮತ್ತು ನಮ್ಮ ಪುಟ್ಟ ಮಗಳು ಜೊತೆಗೆ ಇದ್ದರು. ನಾವು ಸ್ವಲ್ಪ ಹೊತ್ತು ಕೂತು, ಅವರ ಆತಿಥ್ಯ ಸ್ವೀಕರಿಸಿ, ಹೊರಟು ಬರುವಾಗ ಅವರು ನನ್ನ ಹೆಂಡತಿಯ ಕಾಲಿಗೆ ನಮಸ್ಕಾರ ಮಾಡಿದರು. ಇದನ್ನು ನಿರೀಕ್ಷೆ ಮಾಡದ ನಾವು ಗಾಬರಿಗೊಂಡೆವು. ಎಪ್ಪತ್ತಕ್ಕೂ ಹೆಚ್ಚು ವಯಸ್ಸಾಗಿದ್ದ ಪಾಟೀಲರು ನಿವೃತ್ತರಾದ ಮೇಲೂ ವರದಿಗಾರಿಕೆ ಮಾಡುತ್ತಿದ್ದರು. ವಯಸ್ಸಿನಲ್ಲಿ ಅಷ್ಟೊಂದು ಹಿರಿಯರು ಹೀಗೆ ಮಾಡಿದ್ದು ನಮಗೆ ಆಶ್ಚರ್ಯವಾಯಿತು. ಹೀಗೇಕೆ ಎನ್ನುವ ಪ್ರಶ್ನೆ ಮೂಡಿ ಆಶ್ಚರ್ಯ ಆಯಿತು. ಆ ನಂತರ ಅವರ ಮನೆಯವರು ತಿಳಿ ಹೇಳಿದರು.

‘‘ಇದು ಬಸವಣ್ಣನ ಭೂಮಿ ಅಲ್ಲವೇ, ಇಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ಹೀಗೆಯೇ. ದೊಡ್ಡವರು ಅವರ ಕಾಲಿಗೆ ನಮಸ್ಕಾರ ಮಾಡುವುದು ಸಹಜ’’ ಅಂತ ಹೇಳಿದರು. ಆ ಹೊತ್ತಿಗೆ ನಿರಾಳವಾದರೂ ಕೂಡ ನನಗೆ ಅನೇಕ ದಿನ ಆ ವಿಷಯ ಕಾಡಿತು. ಸಿದ್ಧಾಂತವೊಂದು ಜನಜೀವನದಲ್ಲಿ ಹಾಸುಹೊಕ್ಕಾಗಿ ಅವರ ದಿನನಿತ್ಯದ ಬದುಕನ್ನು ಪ್ರಭಾವಿಸುವುದು, ನಂಬಿಕಸ್ತರ ಆಚಾರ, ವಿಚಾರ, ನಡವಳಿಕೆ ಎಲ್ಲವನ್ನೂ ನಿರ್ಧರಿಸುವುದಕ್ಕೆ ಇದೊಂದು ಉದಾಹರಣೆ.

ಹಿರಿಯ ಸಾಹಿತಿ ದೇಶಾಂಶ ಹುಡುಗಿ ಅವರು ನನಗೆ ಒಂದು ಪುಸ್ತಕ ಕೊಟ್ಟರು. ಅದು ಭುಲಾಯಿ ಹಾಡಿನ ಪುಸ್ತಕ. ಅದರ ಹಿನ್ನೆಲೆ ನನಗೆ ಗೊತ್ತಿರಲಿಲ್ಲ. ಅವರನ್ನು ಕೇಳಿದಾಗ ನಮ್ಮ ಪ್ರದೇಶದಲ್ಲಿ ಹೈದರಾಬಾದಿನ ಆಳುವ ಪಕ್ಷದ ಅರೆ ಸೇನಾಪಡೆಯಾಗಿದ್ದ ರಜಾಕಾರರು ನಡೆಸಿದರು ಎನ್ನಲಾದ ಕ್ರೌರ್ಯದ ಬಗ್ಗೆ ನಮ್ಮ ಜಾನಪದರು ಒಂದು ರೀತಿಯ ಹಾಡುಗಳನ್ನು ಹೇಳುತ್ತಾರೆ. ಅವು ಭುಲಾಯಿ ಹಾಡುಗಳು. ನಮ್ಮ ಜನ ತಮ್ಮ ಪೂರ್ವಜರು ಅನುಭವಿಸಿದ ಹಿಂಸೆಯನ್ನು ಮರೆಯಲು ಈ ಹಾಡು ಹೇಳುತ್ತಾರೆ ಅಂತ ಅಂದ್ರು. ಅಲ್ಲ ಸಾರ್, ಮರೆಯಬೇಕಾದ ವಿಷಯಗಳ ಬಗ್ಗೆ ಹಾಡು ಹೇಳಿಕೊಂಡು ಇದ್ದರೆ ಮರೆಯುವುದು ಹೇಗೆ ಅಂತ ನಾನು ಕೇಳಿದೆ. ಆಗ ಅವರು ಜೋರಾಗಿ ನಕ್ಕರು. ಇದು ಒಂದು ರೀತಿಯ ಗ್ರೀಕ್ ನಾಟಕಗಳ ಕಥಾರಸಿಸ ತಂತ್ರ. ನಮ್ಮ ಸಂಕಟವನ್ನು ಹೊರಗೆ ಹಾಕಿ ಮರೆಯಲು ಪ್ರಯತ್ನಿಸುವುದು, ಅಂತ ಅವರು ಹೇಳಿದರು. ಅದರ ಹಿಂದೆಯೂ ಒಂದು ಸಿದ್ಧಾಂತ ಇದೆ. ಅಂತೆಯೇ ಇಲ್ಲಿನ ಪ್ರತಿ ಸಿದ್ಧಾಂತದ ಪ್ರಭಾವದ ಬಗ್ಗೆಯೂ ಈ ರೀತಿಯ ಉದಾಹರಣೆಗಳನ್ನು ಕೊಡಬಹುದು ಅನ್ನಿಸುತ್ತದೆ.

ಬಾಂಧವ್ಯ

ನನ್ನ ಅನುಭವಕ್ಕೆ ಬಂದ ಕೆಲವು ಸ್ಥಳ- ವ್ಯಕ್ತಿ- ಪರಂಪರೆಗಳನ್ನು ನೆನಸಿಕೊಳ್ಳಬಹುದಾದರೆ ಈ ಹೆಸರುಗಳನ್ನು ಹೇಳಬಹುದು. ಇವು ಎಲ್ಲವೂ ಅಮೂರ್ತ ಪರಂಪರೆಯ ಉದಾಹರಣೆಗಳು. ಬೀದರ್‌ನಿಂದ ಎರಡೇ ಕಿಲೋಮೀಟರ್ ದೂರ ಇರುವ ಅಷ್ಟೂರನ ನಾಗರಿಕರು ಎರಡು ಹಬ್ಬಗಳನ್ನು ಆಚರಿಸುತ್ತಾರೆ. ಅವು ಹದಿನಾಲ್ಕನೇ ಶತಮಾನದಲ್ಲಿ ಭಾರತದ ಬಹುಭಾಗವನ್ನು ಆಳಿದ, ದೊರೆ ಅಹ್ಮದ್ ಶಾ ಬಹಮನಿಯ ಜಯಂತಿ ಹಾಗೂ ಪುಣ್ಯತಿಥಿ.

ಬೀದರ್ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಹತ್ತು ವರ್ಷಕ್ಕೂ ಮೀರಿ ಆಡಳಿತ ನಡೆಸಿದ, ತನ್ನ ರಾಜ್ಯವನ್ನು ದಖನ್ ಪ್ರಸ್ಥಭೂಮಿಯ ಆಚೆ ಬೆಳೆಸಿದ ಅಹ್ಮದ್ ಶಾ ತನ್ನ ಕೊನೆಗಾಲಕ್ಕೆ ಅಧ್ಯಾತ್ಮದ ರುಚಿ ಹಚ್ಚಿಸಿಕೊಂಡ. ಪರ್ಶಿಯಾದ ಧರ್ಮಗುರು ಮುಹಮ್ಮದ್ ಕಲಿ ಉಲ್ಲಾ ಅವರನ್ನು ಬೀದರ್‌ಗೆ ಕರೆಸಿದ. ತನ್ನ ಹೆಸರಿಗೆ ‘ವಲಿ’ (ಸಂತ) ಎನ್ನುವ ಪದ ಸೇರಿಸಿಕೊಂಡ. ತನ್ನ ಗುರುಗಳ ಗೋರಿಯ ಹತ್ತಿರ ತನ್ನ ಗೋರಿಯನ್ನು ತಾನೇ ನಿಂತು ಕಟ್ಟಿಸಿಕೊಂಡ. ಅಷ್ಟೂರನಲ್ಲಿ ಇರುವ ವಲಿಯ ಗೋರಿ ಇಡೀ ಏಶ್ಯ ದೇಶದಲ್ಲಿ ವಿಶಿಷ್ಟವಾಗಿದೆ. ಅದರ ಹೊರ ಮೈಯಲ್ಲಿ ನೀಲಿ ಟೈಲ್ಸ್ ಹೊಂದಿಸಿರುವ, ಒಳ ಮೈಗೆ ಬಹುವರ್ಣದ ಚಿತ್ತಾರಗಳು ಇರುವ ಈ ಸ್ಮಾರಕವನ್ನು ಅಧ್ಯಯನ ಮಾಡಲು ಜಗತ್ತಿನ ಮೂಲೆ - ಮೂಲೆಯಿಂದ ಆಸಕ್ತರು ಬರುತ್ತಾರೆ.

ಈ ವಲಿಯ ಸಮಾಧಿಯನ್ನು ಇಲ್ಲಿನ ಜನ ಅಲ್ಲಮಪ್ರಭು ಗುಡಿ ಎಂದು ಕರೆಯುತ್ತಾರೆ. ಅದಕ್ಕೆ ಒಬ್ಬ ಹಿಂದೂ ಪೂಜಾರಿ, ಒಬ್ಬ ಮುಸ್ಲಿಮ್ ಮುತವಲ್ಲಿ ಇದ್ದಾರೆ. ಇದರ ಎದುರು ಇರುವ ರಾಜನ ರಾಣಿಯ ಸಮಾಧಿಯನ್ನು ಅಲ್ಲಮ ಪ್ರಭುವಿನ ಮಡದಿ ಮಾಯಿದೇವಿಯ ಗುಡಿ ಎಂದು ಕರೆಯುತ್ತಾರೆ. ಅಹ್ಮದ್ ಶಾನ ಹುಟ್ಟಿದ ದಿನವನ್ನು ಅಲ್ಲಮಪ್ರಭು ಜಯಂತಿ ಎಂದು ಹಿಗ್ಗಿನಿಂದ ಆಚರಿಸುತ್ತಾರೆ. ಊರ ಮುಂದಿನ ದೊಡ್ಡ ಜಾಗೆಯಲ್ಲಿ ಜಾತ್ರೆ ನಡೆಯುತ್ತದೆ. ಹಳ್ಳಿಯ ಪಾಟೀಲರ ಮನೆಯ ಹಿರಿಯರು ಜಾತ್ರಾ ಸಮಿತಿಯ ಅಧ್ಯಕ್ಷರಾಗುತ್ತಾರೆ. ಜಾತ್ರೆಯಲ್ಲಿ ಕುಸ್ತಿ- ಹಾಡು ಕುಣಿತ- ಮಕ್ಕಳ ಆಟದ ಸಾಮಾನುಗಳನ್ನು ಇರಿಸಲಾಗುತ್ತದೆ. ಪಕ್ಕದ ಕಲಬುರಗಿಯ ಮಾಡಯಾಳ್ ಗ್ರಾಮದ ಶಿವಪ್ಪ ಒಡೆಯರ್ ಸ್ವಾಮೀಜಿ ಅವರು ಪಾದಯಾತ್ರೆಯಲ್ಲಿ ಬಂದು ಇಲ್ಲಿ ಕುಸ್ತಿ ಪಂದ್ಯ ಉದ್ಘಾಟಿಸಿದ ನಂತರ ಜಾತ್ರೆ ಆರಂಭ ಆಗುತ್ತದೆ.

ವಲಿಯ ಪುಣ್ಯ ತಿಥಿಯ ದಿವಸ ಉರೂಸು ಆಯೋಜಿಸಲಾಗುತ್ತದೆ. ಹಳ್ಳಿಯ ಉರೂಸು ಕಮಿಟಿಯಲ್ಲಿ ವಿವಿಧ ಧರ್ಮದ ಜನ ಇರುತ್ತಾರೆ. ಈ ಎರಡೂ ದಿನಗಳನ್ನು ಹಿಂದೂ-ಮುಸ್ಲಿಮರು ಒಟ್ಟಿಗೆ ಆಚರಿಸುತ್ತಾರೆ. ಜಾತ್ರೆ - ಉರೂಸಿನ ದಿನಗಳಲ್ಲಿ ಒಂದು ಮೂಲೆಯಲ್ಲಿ ತತ್ವಪದ ಗಾಯನ ನಡೆಯುತ್ತಿದ್ದರೆ, ಇನ್ನೊಂದು ಮೂಲೆಯಲ್ಲಿ ಕವಾಲಿ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಅಲ್ಲಿಗೆ ಹೋಗಿ ಬಂದವರಿಗೆ ಸಂತನ ಸಮಾಧಿಯ ಪಕ್ಕದ ಬಕುಲದ ಹೂವಿನ ಪರಿಮಳ, ಸ್ಮಾರಕಕ್ಕೆ ಲೇಪಿಸಿದ ಚಂದನ- ಆರತಿಯ ಕರ್ಪೂರ - ಲೋಬಾನ ಮಾತ್ರ ನೆನಪಿರುತ್ತದೆ. ಮತ- ಕುಲಗಳ ವ್ಯತ್ಯಾಸ, ಮೇಲೂ ಕೀಳಿನ ಘಾಟು ಅವರ ಮೂಗಿಗೆ ಬಡಿಯುವುದಿಲ್ಲ. ದ್ವೇಷದ ಭಾವನೆ ಅಲ್ಲಿ ಸುಳಿಯುವುದಿಲ್ಲ. ಹಿಂದೊಮ್ಮೆ ನಾವು ಬೀದರ್‌ನಲ್ಲಿ ಪಾರಂಪರಿಕ ಮ್ಯಾರಥಾನ್ ಆಯೋಜಿಸಿದಾಗ ಅಲ್ಲಿಗೆ ಬಂದ ದಿಲ್ಲಿಯ ಪ್ರವಾಸಿಯೊಬ್ಬರು ಗುರುದ್ವಾರದ ರಸ್ತೆ ಕೇಳಿದರು. ನಾನು ನಿಮಗೆ ಯಾವುದು ಬೇಕು- ಗುರುನಾನಕ ಅವರದೋ, ಸಾಹಿಬ್ ಸಿಂಗ್ ಅವರದೋ ಅಥವಾ ಮಾಯಿ ಭಾಗೋ ಅವರದೋ ಅಂತ ಕೇಳಿದೆ. ಅವರಿಗೆ ಆಶ್ಚರ್ಯವಾಗಿ ಈ ಸಣ್ಣ ಊರಿನಲ್ಲಿ ಮೂರು ಗುರುದ್ವಾರ ಇವೆಯಾ ಅಂತ ಗಾಬರಿ ಹಾಗೂ ಸಂತೋಷದಿಂದ ಕೇಳಿದರು. ಇದು ಅನೇಕರಿಗೆ ಗೊತ್ತಿಲ್ಲ. ಸುಮಾರು 500 ವರ್ಷಗಳ ಹಿಂದೆ ತಮ್ಮ ದಕ್ಷಿಣಾಪಥದ ಯಾತ್ರೆಯಲ್ಲಿ ಗುರುನಾನಕರು ನಾಂದೇಡ್ ನಿಂದ ಇಲ್ಲಿಗೆ ಬಂದಿದ್ದರು ಎನ್ನುವ ನಂಬಿಕೆ ಇದೆ. ಅವರು ಬಂದಾಗ ಬರಗಾಲ ಬಿದ್ದಿತ್ತು. ಗುರುಗಳು ತಮ್ಮ ಕಾಲು ಬೆರಳಿನಿಂದ ಒಂದು ಕಲ್ಲು ಸಾರಿಸಿದಾಗ ಅಲ್ಲಿಂದ ಸಿಹಿ ನೀರಿನ ಝರಿ ಹರಿಯಿತು ಎಂದು ಆಸಕ್ತರು ನಂಬುತ್ತಾರೆ. ನಗರ ಬಸ್ ನಿಲ್ದಾಣದ ಎದುರು ಗುರುದ್ವಾರ ಇದೆ. ಗುರುನಾನಕ ಝೀರಾ ಈಗಲೂ ಹರಿಯುತ್ತಿದೆ.

ಅಂತೆಯೇ, ಸುಮಾರು 300 ವರ್ಷಗಳ ಹಿಂದೆ ಸಾಹಿಬ್ ಚಂದ ಎನ್ನುವ ಸವಿತಾ ಸಮಾಜದ ಬಾಲಕ ಇಲ್ಲಿಂದ ಪಂಜಾಬಿನ ಆನಂದಪುರ ಸಾಹಿಬ್ ನಗರಕ್ಕೆ ಹೋಗಿ ಗುರು ಗೋವಿಂದಸಿಂಗ್ ಅವರ ಕರೆಗೆ ಓಗೊಟ್ಟು ಖಾಲಸಾ ಪಂಥ ಸೇರಿದ ಎನ್ನುವ ನಂಬಿಕೆಯೂ ಇದೆ. ಇವರ ನೆನಪಿನಲ್ಲಿ ಬೀದರ್- ನಾಂದೇಡ್ ರಸ್ತೆಯಲ್ಲಿ ಸಾಹಿಬ್ ಸಿಂಗ್ ಗುರುದ್ವಾರ ಇದೆ. ಬೀದರ್ ಹಾಗೂ ಮಾಯಿ ಭಾಗೋ ಅವರ ನಂಟಿಗೆ ಐತಿಹಾಸಿಕ ಪುರಾವೆ ಇದೆ. ಗುರು ಗೋವಿಂದ ಸಿಂಗ್ ಅವರ ಮಹಿಳಾ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮಾಯಿ ಭಾಗೋ ಅವರು ನಾಂದೇಡ್ ಯುದ್ಧದಲ್ಲಿ ತಮ್ಮ ಸಂಬಂಧಿಕರೆಲ್ಲರನ್ನೂ ಕಳೆದುಕೊಂಡು ಬೀದರ್ ಹತ್ತಿರದ ಜೈನ ಕುಟುಂಬಗಳು ಹೆಚ್ಚಾಗಿದ್ದ ‘ಜಿನಾವಾಡ’ಕ್ಕೆ ಬರುತ್ತಾರೆ. ಅಲ್ಲಿ ಒಬ್ಬರ ಮನೆಯಲ್ಲಿ ಇದ್ದುಕೊಂಡು ತಮ್ಮ ಉಳಿದ ಜೀವನವನ್ನು ವೈರಾಗ್ಯ- ಅಧ್ಯಾತ್ಮದಲ್ಲಿ ಕಳೆಯುತ್ತಾರೆ. ಅವರು ಇದ್ದ ಮನೆಯನ್ನು ಈಗ ಗುರುದ್ವಾರವಾಗಿ ಪರಿವರ್ತಿಸಲಾಗಿದೆ. ಹೈದರಾಬಾದ್‌ನಿಂದ ಸುಮಾರು 1890ರ ಸುಮಾರಿಗೆ ಕ್ರಿಶ್ಚಿಯನ್ ಮಿಷಿನರಿಗಳು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಕಡೆ ಬಂದರು. ಅದು ಇನ್ನೂ ನಿಜಾಮರ ಪ್ರದೇಶ ಆಗಿತ್ತು. ಆಗ ಅವರು ಮೊದಲು ಉಳಿದುಕೊಂಡಿದ್ದು, ಬೀದರ್‌ನ ಒಬ್ಬ ಮುಸ್ಲಿಮ್ ವರ್ತಕರ ಮನೆಯಲ್ಲಿ. ಆ ಮಿಷಿನರಿಗಳು 1892 ರಲ್ಲಿ ಇಡೀ ಪ್ರದೇಶದ ಮೊದಲ ಕನ್ನಡ ಶಿಕ್ಷಕ ತರಬೇತಿ ಕೇಂದ್ರ ಶುರು ಮಾಡಿದರು. ಕನ್ನಡ ಕಲಿಕೆಗೆ ಅನುಕೂಲ ಆಗಲು ಕೈ ಬರಹದ ಪಠ್ಯ ಪುಸ್ತಕ ಮಾಡಿದರು. ಇಂದಿಗೂ ಸೈಂಟ್ ಜೋಸೆಫ್ ಶಾಲೆಯ ಹಾಗೂ ಹಬಶಿ ಕೋಟೆಯ ಸೂರ್ಯೋದಯದ ಗುಹಾಂತರ್ಗತ ಚರ್ಚಿನ ವಾರ್ಷಿಕೋತ್ಸವ ಆರಂಭ ಆಗುವುದು ಆ ವರ್ತಕರ ಮನೆಯ ಅಂಗಳದಿಂದ.

ಹುಟ್ಟಿನಿಂದ ಮುಸ್ಲಿಮನಾಗಿ ಕೊನೆಗೆ ಹರಿದಾಸನಾಗಿ ಮಾರ್ಪಟ್ಟ ಗೋನವಾರದ ಬಾಡೆ ಸಾಬನ ನಾಡು ಇದು. ಮಂತ್ರಾಲಯ ಮಠಕ್ಕೆ ಅನುದಾನ ನೀಡಿದ, ರಾಘವೇಂದ್ರ ಸ್ವಾಮಿಗಳ ಪಾಂಡಿತ್ಯವನ್ನು ಮೆಚ್ಚಿ ಅವರೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿದ, ಆದೋನಿ ನವಾಬರ ನಾಡು. ಇಲ್ಲಿನ ಇಂಡೋ ಸಾರಸೇನಿಕ ವಾಸ್ತುಶಿಲ್ಪ ಶೈಲಿ ತನ್ನ ಗಾಢ ಛಾಯೆಯನ್ನು ಎಲ್ಲ ಕಡೆ ಬೀರಿದೆ. ಮಂತ್ರಾಲಯವೂ ಸೇರಿದಂತೆ ಇಲ್ಲಿನ ಅನೇಕ ಮುಸ್ಲಿಮೇತರ ಸಂತರ ಬೃಂದಾವನ, ಸಮಾಧಿ, ಸ್ಮಾರಕ, ಆಲಯ, ಮನೆ, ಇತ್ಯಾದಿಗಳಲ್ಲಿ ಈ ವಾಸ್ತುಶಿಲ್ಪದ ಪ್ರಭಾವ ಕಾಣಬಹುದು.

ಎಲ್ಲಾ ರೀತಿಯ ತತ್ವ- ಆದರ್ಶ- ಸಿದ್ಧಾಂತಗಳನ್ನು ಅರಿತುಕೊಂಡು ತಮ್ಮ ಭಕ್ತರಿಗೆ ಅವೆಲ್ಲದರ ರಸಸ್ವಾದ ಉಣಿಸಿದ ಸಕಲ ಮತಾಚಾರ್ಯ ಮಾಣಿಕ ಪ್ರಭು ಮಹಾರಾಜರು ಹುಮಾನಬಾದ್‌ನಲ್ಲಿ ತೆರೆದ ಬಾಗಿಲ ಆಶ್ರಮ ಕಟ್ಟಿದ್ದಾರೆ. ಪ್ರತಿ ವರ್ಷ ದತ್ತ ಜಯಂತಿಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೋ, ಅಷ್ಟೇ ಶ್ರದ್ಧಾಭಕ್ತಿಯಿಂದ ಸೂಫಿ ಸಂತ ಮೆಹಬೂಬ್ ಸುಬಾನಿಯ ಗ್ಯಾರಾಹವಿಯನ್ನು ಆಚರಿಸುತ್ತಾರೆ. ಮಾಣಿಕ ನಗರದಲ್ಲಿ ಆ ಸೂಫಿ ಸಂತನ ಸ್ಮಾರಕವನ್ನು ಜತನದಿಂದ ರಕ್ಷಿಸಿ ಇಟ್ಟಿದ್ದಾರೆ.

ಇಳಿ ವಯಸ್ಸಿನಲ್ಲಿ ಕಲಬುರಗಿಗೆ ಬಂದು ಇಲ್ಲಿನ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಸಾಮ್ರಾಟ್‌ನಿಗೂ, ಸಾಮಾನ್ಯರಿಗೂ ದಾರಿ ತೋರಿದ, ‘ಪ್ರೀತಿಗೂ ಮುಂದೆ ಯಾವುದೇ ಸಿದ್ಧಾಂತ ಇಲ್ಲ’ ಎಂಬಂತೆ ಬದುಕಿದ ಖ್ವಾಜಾ ಬಂದೇ ನವಾಝರು ಹೇಳಿದ ಮಾತು ಒಂದನ್ನು ಇಲ್ಲಿ ನೆನಪಿಸುತ್ತೇನೆ. ‘‘ಪಾನಿ ಮೇ ನಮಕ್ ಡಾಲ ಔರ್ ದೇಖ್ ಉಸೆ. ಪಾನಿ ಮೇ ನಮಕ್ ಘುಲ್ ಜಾಯೆಗಾ ತೋ ನಮಕ್ ಕಹೆ ಕಿಸೆ?’’ (ನೀರಿನಲ್ಲಿ ಉಪ್ಪುಹಾಕು. ನೀರಿನಲ್ಲಿ ಕರಗಿದ ಮೇಲೆ ಉಪ್ಪುಅಂತ ಕರೆಯುವುದು ಯಾವುದನ್ನು?)

ತಿಂಥಣಿ ಮುನೇಶ್ವರನ ಆಲಯದಲ್ಲಿ ದಿನ ಬೆಳಗ್ಗೆ ಮೊಳಗುವ ‘ಏಕ್ ಲಾಖ್ ಯಸ್ಸಿ ಹಜಾರ್ ಪಾಂಚೊ ಪೀರ್ ಪೈಗಂಬರ್..’ಎಂದು ಆರಂಭವಾಗುವ ಶ್ಲೋಕ ಮುನೇಶ್ವರನ ಸ್ವರೂಪದ ಬಗ್ಗೆ ತಿಳಿಸಿದಷ್ಟೇ, ಅವನ ಭಕ್ತರ ಮನಸ್ಸಿನ ಆಳದ ಬಗೆಗೂ ತಿಳಿಸುತ್ತದೆ. ಐದು ಶತಮಾನಗಳ ಹಿಂದೆ ಸಮಾನತೆಯ ಸಂದೇಶ ಸಾರುವ ಒಂದು ಲಕ್ಷ 96 ಸಾವಿರ ವಚನ ಬರೆದ,‘ಬಜಾರದಾಗ ಹಸಿರು ಪಲ್ಲಕ್ಕಿ ಮೆರೆದ’ ಬಸವಣ್ಣ ನೆಲೆಸಿದ ಕೊಡೆಕಲ್, ಸಕಲ ಧರ್ಮೀಯರನ್ನು ಆಕರ್ಷಿಸುತ್ತದೆ.

ಇಂಡೋ ಸಾರಸೇನಿಕ ವಾಸ್ತುಶಿಲ್ಪದ ಮಠದಲ್ಲಿ ಇರುವುದು ಸಾವಳಗಿ ಶಿವಲಿಂಗನ ಸನ್ನಿಧಿ. ಬಂದೇ ನವಾಝರ ಸಹವಾಸ-ಸಾಂಸ್ಕೃತಿಕ ಸ್ನೇಹ ಹೊಂದಿದ್ದ ಶಿವಲಿಂಗೇಶ್ವರರು ಅಧ್ಯಾತ್ಮ ಎನ್ನುವುದು ಧರ್ಮದ ಎಲ್ಲೆಗಳನ್ನು ಮೀರಿದ್ದು. ಅದನ್ನು ಕೇವಲ ಪ್ರವಾದಿಗಳು, ಸಂತರು ಮಾತ್ರ ಸಾಧಿಸಿದರೆ ಸಾಲದು. ಎಲ್ಲರೂ ಸಾಧಿಸಬೇಕು ಎಂದು ತಿಳಿ ಹೇಳಿದರು.

ಕಲಬುರಗಿಯ ನಾರಾಯಣಪುರ ಹತ್ತಿರ, ಕೃಷ್ಣಾ ನದಿ ದಂಡೆಯ ಮೇಲೆ ಇರುವ ಛಾಯಾ ಭಗವತಿ, ಬೌದ್ಧ ತಾಂತ್ರಿಕ ಪಂಥದ ನೆಲೆ. ಇಡೀ ವಿಶ್ವದಲ್ಲಿಯೇ ವಿಶಿಷ್ಟವಾದ ಸಾಮ್ರಾಟ್ ಅಶೋಕ ಚಕ್ರವರ್ತಿಯ ಹೆಸರು ಹಾಗೂ ಚಿತ್ರ ಇರುವ ಶಿಲ್ಪ ಸನ್ನತಿಯಲ್ಲಿ ಸಿಕ್ಕಿದೆ. ಇಲ್ಲಿ ಬರೆದಿರುವ ರಾಯಾ ಅಸೋಕ ಎನ್ನುವ ಒಂದು ಸಾಲು ವಿಶ್ವದ ಮೂಲೆ ಮೂಲೆಯಿಂದ ಸಂಶೋಧಕರನ್ನು ಸೆಳೆಯುತ್ತದೆ. ಅದು ಕೇವಲ ಬೌದ್ಧ ಧರ್ಮದ ಬಗ್ಗೆ ಅಲ್ಲ, ಭಾರತದ ಭಾಷಾ ಬೆಳವಣಿಗೆಯ ಬಗ್ಗೆ ಸಹಿತ ನಮ್ಮ ಕಣ್ಣು ತೆರೆಸುತ್ತದೆ. ಬೀದರ್‌ನಲ್ಲಿ ಕಮಠಾಣ. ಗುಲಬರ್ಗಾದ ಮಳಖೇಡ. ಪಟ್ಟಣ, ಹರಸೂರ, ಹೆಬ್ಬಾಳ, ಹುಣಸಿ ಹಡಗಿಲಗಳಲ್ಲಿ ಜೈನ ಪರಂಪರೆ ಕಾಣುತ್ತೇವೆ.

ನಾನು ಮೊದಲೇ ಹೇಳಿದಂತೆ ಇವು ಕೇವಲ ಕೆಲವು ಉದಾಹರಣೆಗಳು ಅಷ್ಟೇ. ಇಂತಹ ಧರೆಗೆ ದೊಡ್ಡವರು, ನಮ್ಮೆಲ್ಲರ ಬದುಕನ್ನು ಹಸನು ಮಾಡಿದವರು ಪ್ರತಿ ಹಳ್ಳಿ-ಪಟ್ಟಣ ಶಹರಗಳಲ್ಲಿ ಇದ್ದಾರೆ. ದ್ವೇಷದ ಕೊರೆವ ಚಳಿ ನಮಗೆ ತಾಕದಂತೆ ನಮ್ಮನ್ನು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ತಮ್ಮ ದಪ್ಪ ಕಂಬಳಿಯಿಂದ ನಮ್ಮನ್ನು ಮುಚ್ಚಿಕೊಂಡಿದ್ದಾರೆ. ದಾವಾನಿಲದ ಬೇಗೆಯಿಂದ ನಮ್ಮನ್ನು ತಪ್ಪಿಸಿದ್ದಾರೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಧಾರ್ಮಿಕ ಪರಂಪರೆಯ ಜನರನ್ನು ನಾವು ಕಾಣುತ್ತೇವೆ. ರಾಜ್ಯದ-ದೇಶದ ಇತರ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಕೋಮುಗಲಭೆಗಳು, ದ್ವೇಷ, ಅಸಹಿಷ್ಣುತೆ ಕಂಡು ಬರುವುದು ಕಮ್ಮಿ.

ಇಂತಹ ಜಾಗೃತ ಸ್ಥಾನಗಳಿಗೆ ಭೇಟಿ ನೀಡುವ ಭಕ್ತರು ಕಣ್ಣು ಮುಚ್ಚಿ ಏನನ್ನು ಧ್ಯಾನಿಸುತ್ತಾರೆ? ಅವರ ಮನಸ್ಸಿನಲ್ಲಿ ಯಾವ ಮೂರ್ತಿ ಮೂಡುತ್ತದೆ? ಅವರ ಪಾಲಿನ ದೈವಿಶಕ್ತಿ ಮೂರ್ತವೋ, ಅಮೂರ್ತವೋ? ನಾನು ತಿಳಿದಂತೆ ಇವೆಲ್ಲವೂ ಅಮೂರ್ತ. ಇಂತಹ ತತ್ವಾನ್ವೇಷಕರು ಪ್ರತಿಪಾದಿಸಿದ ವಿಚಾರಗಳು ಯಾವ ಸಾಹಿತ್ಯ, ಸಂಗೀತ, ಕಲೆ, ವಸ್ತು ಶಿಲ್ಪ, ಸಾಂಸ್ಕೃತಿಕ-ಸಾಮಾಜಿಕ- ಧಾರ್ಮಿಕ ಆಚರಣೆಗಳ ಮೇಲೆ ಪ್ರಭಾವ ಬೀರಿದವೋ, ಅವು ಅಮೂರ್ತ ಪರಂಪರೆಯ ಭಾಗಗಳೇ ಆಗಿವೆ. ಇವನ್ನು ಜತನ ದಿಂದ ಕಾಪಾಡಿಕೊಂಡು ಇರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

‘‘ದುರಿತ ಕಾಲದಲ್ಲಿಯೂ ಹಾಡು-ಹಸೆ ಇರುತ್ತದೆಯೋ? ಅವಶ್ಯವಾಗಿ ಇರುತ್ತದೆ. ದುರಿತ ಕಾಲದಲ್ಲಿ, ದುರಿತ ಕಾಲದ್ದೇ ಆದ ಹಾಡು-ಹಸೆ ಇದ್ದೇ ಇರುತ್ತದೆ,’’ ಅಂತ ನಾಟಕಕಾರ ಬರಟೋಲ್ಟ್ ಬ್ರೆಕ್ಟ್ ಅಭಿಪ್ರಾಯಪಟ್ಟಿದ್ದಾನೆ.

ಎಂತಹ ದುರಿತ ಕಾಲವೂ ಕೂಡ ಮಾನವ ಸಹಜ ಕಾರುಣ್ಯವನ್ನು ಕೊನೆಗಾಣಿಸಲಾರದು. ನಾವೆಲ್ಲರೂ ‘ಅಮೃತ ವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ’ ಅನ್ನುವ ಗೋಪಾಲ ಕೃಷ್ಣ ಅಡಿಗರ ಕವಿ ವಾಣಿಯ ಆಶಯದಂತೆ ಇರೋಣ. ಜನಮಾನಸದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಎಂಥ ಹುಳಿ ಹಿಂಡಿದರೂ ಸಹಿತ, ಕೊನೆಗೆ ಗೆಲ್ಲುವುದು ಪ್ರೀತಿ ಎನ್ನುವ ಆಶಾಭಾವನೆಯಿಂದ ಬಾಳೋಣ.

ಇಳಿ ವಯಸ್ಸಿನಲ್ಲಿ ಕಲಬುರ್ಗಿಗೆ ಬಂದು ಇಲ್ಲಿನ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಸಾಮ್ರಾಟ್ ನಿಗೂ, ಸಾಮಾನ್ಯರಿಗೂ ದಾರಿ ತೋರಿದ, ‘ಪ್ರೀತಿಗೂ ಮುಂದೆ ಯಾವುದೇ ಸಿದ್ಧಾಂತ ಇಲ್ಲ’ ಎಂಬಂತೆ ಬದುಕಿದ ಖಾಜಾ ಬಂದೇ ನವಾಝರು ಹೇಳಿದ ಮಾತು ಒಂದನ್ನು ಇಲ್ಲಿ ನೆನಪಿಸುತ್ತೇನೆ. ‘‘ಪಾನಿ ಮೇ ನಮಕ ಡಾಲ ಔರ ದೇಖ ಉಸೆ. ಪಾನಿ ಮೇ ನಮಕ ಘುಲ ಜಾಯೆಗಾ ತೋ ನಮಕ ಕಹೆ ಕಿಸೆ?’’ (ನೀರಿನಲ್ಲಿ ಉಪ್ಪು ಹಾಕು. ನೀರಿನಲ್ಲಿ ಕರಗಿದ ಮೇಲೆ ಉಪ್ಪು ಅಂತ ಕರೆಯುವುದು ಯಾವುದನ್ನು?)

ಎಂತಹ ದುರಿತ ಕಾಲವೂ ಕೂಡ ಮಾನವ ಸಹಜ ಕಾರುಣ್ಯವನ್ನು ಕೊನೆಗಾಣಿಸಲಾರದು. ನಾವೆಲ್ಲರೂ ‘ಅಮೃತ ವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ,’ ಅನ್ನುವ ಗೋಪಾಲ ಕೃಷ್ಣ ಅಡಿಗರ ಕವಿ ವಾಣಿಯ ಆಶಯದಂತೆ ಇರೋಣ. ಜನಮಾನಸದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಎಂಥ ಹುಳಿ ಹಿಂಡಿದರೂ ಸಹಿತ, ಕೊನೆಗೆ ಗೆಲ್ಲುವುದು ಪ್ರೀತಿ ಎನ್ನುವ ಆಶಾಭಾವನೆಯಿಂದ ಬಾಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)