varthabharthi


ಸಂಪಾದಕೀಯ

ಪ್ರಧಾನಿ ಮೋದಿ ನೇತೃತ್ವದಲ್ಲಿ ಹರಡಿದ ಕೊರೋನ ಬಗ್ಗೆ ಯಾಕೆ ಮೌನ?

ವಾರ್ತಾ ಭಾರತಿ : 12 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘‘ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲೀಗಿಗಳುಮೊದಲನೇ ಅಲೆಗೆ ಕಾರಣರಾದರೆ, ಕಾಂಗ್ರೆಸಿಗರು ಮೂರನೇ ಅಲೆಗೆ ಕಾರಣರಾಗುತ್ತಿದ್ದಾರೆ’’ ಇದು ಕಾಂಗ್ರೆಸ್ ನಾಯಕರ ‘ಮೇಕೆದಾಟು ಪಾದಯಾತ್ರೆ’ಯ ಬಗ್ಗೆ ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್. ಈ ಮೂಲಕ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕಿಗೆ ಕಾಂಗ್ರೆಸ್ ನಾಯಕರನ್ನು ಹೊಣೆ ಮಾಡಲು ಬಿಜೆಪಿ ಮುಂದಾಗಿದೆ. ಸದ್ಯಕ್ಕೆ ಕೊರೋನ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ಹೆಚ್ಚಳವಾಗಿದೆ. ಇಂತಹ ಸಂದರ್ಭದಲ್ಲಿ ‘ಪಾದಯಾತ್ರೆ ಎಷ್ಟು ಸರಿ?’ ಎಂದು ಕೇಳುವುದರಲ್ಲಿ, ಆ ಬಗ್ಗೆ ಚರ್ಚಿಸುವುದರಲ್ಲಿ ತಪ್ಪೇನು ಇಲ್ಲ. ಇದೇ ಸಂದರ್ಭದಲ್ಲಿ, ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿ, ಸಮಾವೇಶಗಳ ಸಂದರ್ಭದಲ್ಲಿ ಕೊರೋನ ಸೋಂಕಿನ ಬಗ್ಗೆ ಮೌನ ತಾಳುವ ಸರಕಾರ, ಜನಪರ ಯೋಜನೆಯ ಪರವಾಗಿ ಯಾರಾದರೂ ಬೀದಿಗಿಳಿದಾಗ ಮಾತ್ರ ಯಾಕೆ ಆತಂಕ ವ್ಯಕ್ತಪಡಿಸುತ್ತದೆ? ಎನ್ನುವುದೂ ಉತ್ತರಿಸಬೇಕಾದ ಪ್ರಶ್ನೆಯೇ ಆಗಿದೆ. ಈ ಕಾರಣದಿಂದಲೇ, ಸರಕಾರ ಹೆದರುತ್ತಿರುವುದು ಕೊರೋನ ವೈರಸ್‌ಗೋ, ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೋ ಎಂಬ ಅನುಮಾನ ಜನರನ್ನು ಕಾಡುತ್ತಿರುವುದು. ಕಾಂಗ್ರೆಸ್‌ನ್ನು ಟೀಕಿಸುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ‘ಮೊದಲನೇ ಅಲೆಗೆ ತಬ್ಲೀಗಿ ಸಮಾವೇಶ ಕಾರಣ’ ಎನ್ನುವ ಮಾಧ್ಯಮಗಳ ಪೂವಾಗ್ರಹ ಪೀಡಿತ ವರದಿಯನ್ನು ತನ್ನ ಟ್ವೀಟ್ ಮೂಲಕ ಮತ್ತೆ ಜೀವಂತವಾಗಿಸಲು ಯತ್ನಿಸಿರುವುದು ಇನ್ನೊಂದು ವಿಪರ್ಯಾಸ.

‘ತಬ್ಲೀಗಿ ಸಮಾವೇಶದಿಂದ ಕೊರೋನ ಹಬ್ಬಿತು’ ಎನ್ನುವ ಮಾಧ್ಯಮಗಳ ವರದಿಯ ವಿರುದ್ಧ ಈಗಾಗಲೇ ನ್ಯಾಯಾಲಯ ಹಲವಾರು ತೀರ್ಪುಗಳನ್ನು ನೀಡಿದೆ. ಕೊರೋನವನ್ನು ಸಮಾಜ ಒಡೆಯುವುದಕ್ಕೆ ಬಳಸಿದ ಮಾಧ್ಯಮಗಳ ಕೃತ್ಯಗಳಿಗಾಗಿ ನ್ಯಾಯಾಲಯ ಛೀಮಾರಿ ಹಾಕಿದೆ. ಹಾಗೆಯೇ ಪೂರ್ವಾಗ್ರಹ ಪೀಡಿತರಾಗಿ ಪೊಲೀಸರು ತಬ್ಲೀಗಿ ಸಮಾವೇಶಕ್ಕೆ ಆಗಮಿಸಿದ ವಿದೇಶಿಯರ ಮೇಲೆ ಹಾಕಿದ ಮೊಕದ್ದಮೆಗಳನ್ನು ವಜಾಗೊಳಿಸಿದೆ ಮಾತ್ರವಲ್ಲ, ಪೊಲೀಸರ ಕ್ರಮಗಳ ಬಗ್ಗೆಯೂ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ತಬ್ಲೀಗಿ ಹೆಸರಿನಲ್ಲಿ, ಕೊರೋನ ಸೋಂಕನ್ನು ಒಂದು ಧರ್ಮ ತಲೆಗೆ ಕಟ್ಟುವುದಕ್ಕೆ ಸಂಘಪರಿವಾರ ನಡೆಸಿದ ಪ್ರಯತ್ನ ಕೊನೆಗೂ ವಿಫಲವಾಯಿತು. ಆದರೆ ಇದೀಗ ರಾಜ್ಯ ಬಿಜೆಪಿ, ಮೊದಲನೇ ಅಲೆಗೆ ತಬ್ಲೀಗಿಗಳು ಕಾರಣ ಎನ್ನುತ್ತಾ, ಉರಿವ ಮನೆಯ ಗಳ ಹಿರಿಯುವ ಕೆಲಸವನ್ನು ಮಾಡಿದೆ.

ದೇಶದಲ್ಲಿ ಕೊರೋನ ವ್ಯಾಪಕವಾಗಲು ಮುಖ್ಯ ಕಾರಣ, ಪ್ರಧಾನಿ ಮೋದಿಯವರು ಅಹ್ಮದಾಬಾದ್‌ನಲ್ಲಿ ಹಮ್ಮಿಕೊಂಡ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ. ವಿಶ್ವದಲ್ಲಿ ಕೊರೋನ ಸುದ್ದಿಯಾಗುತ್ತಿದ್ದ ಹಾಗೆಯೇ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ್ದಿದ್ದರೆ, ಭಾರತದಲ್ಲಿ ಕೊರೋನ ಈ ಮಟ್ಟಿಗೆ ವ್ಯಾಪಿಸುತ್ತಿರಲಿಲ್ಲ. ಇನ್ನೊಂದು ದೇಶದ ಅಧ್ಯಕ್ಷನನ್ನು ವೈಭವೀಕರಿಸುವುದಕ್ಕಾಗಿ ಹಲವು ಕೋಟಿ ರೂ. ವೆಚ್ಚ ಮಾಡಿದ ಭಾರತ ಪ್ರತಿಯಾಗಿ ಗಳಿಸಿದ್ದು ಕೊರೋನ ಸೋಂಕನ್ನು. ‘ನಮಸ್ತೆ ಟ್ರಂಪ್’ನ ಕಾರ್ಯಕ್ರಮದ ಯಶಸ್ಸಿಗಾಗಿ ವಿಮಾನ ನಿಲ್ದಾಣಗಳನ್ನು ಸರಕಾರ ಮುಕ್ತವಾಗಿರಿಸಿತು. ನಮಸ್ತೆ ಟ್ರಂಪ್ ಕಾರ್ಯಕ್ರಮದ ಬಳಿಕವಾದರೂ ಸರಕಾರ ಎಚ್ಚೆತ್ತುಕೊಳ್ಳುತ್ತದೆ ಎಂದು ನಿರೀಕ್ಷಿಸಿದರೆ ಅದೂ ಇಲ್ಲ. ಆ ಕಾರ್ಯಕ್ರಮದ ಬೆನ್ನಿಗೇ ಬಿಜೆಪಿ ಪ್ರಾಯೋಜಕತ್ವದಲ್ಲಿ ದಿಲ್ಲಿ ಗಲಭೆಗಳು ನಡೆದವು. 50ಕ್ಕೂ ಅಧಿಕ ಅಮಾಯಕರು ಈ ಗಲಭೆಯಲ್ಲಿ ಪ್ರಾಣ ಕಳೆದುಕೊಂಡರು. ಕೋಟೆ ಲೂಟಿಯಾದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ, ಕೊರೋನ ದೇಶಕ್ಕೆ ಕಾಲಿಟ್ಟ ಬಳಿಕ ಸರಕಾರ ಎಚ್ಚೆತ್ತುಕೊಂಡಿತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ‘ತಬ್ಲೀಗಿ ಕೊರೋನ’ವನ್ನು ಸೃಷ್ಟಿಸಿತು. ಮೋದಿ ಸರಕಾರವನ್ನು ರಕ್ಷಿಸುವುದಕ್ಕಾಗಿ ಮಾಧ್ಯಮಗಳು ತಬ್ಲೀಗಿ ಸಮಾವೇಶದಲ್ಲಿ ಭಾಗವಹಿಸಿದವರನ್ನು ಅಪರಾಧಿಗಳನ್ನಾಗಿ ಬಿಂಬಿಸಲು ಸರ್ವ ಪ್ರಯತ್ನ ಮಾಡಿದವು. ಆದರೆ ಆ ಎಲ್ಲ ಪ್ರಯತ್ನಗಳು ನ್ಯಾಯಾಲಯದಲ್ಲಿ ವಿಫಲವಾದವು.

ಸರಿ, ಬಿಜೆಪಿಯೇ ಹೇಳಿದಂತೆ ಮೊದಲನೇ ಕೊರೋನ ಅಲೆಗೆ ತಬ್ಲೀಗಿಗಳು ಕಾರಣ. ಮೂರನೇ ಅಲೆಗೆ ಕಾಂಗ್ರೆಸ್ ಕಾರಣ ಎಂದೇ ಇರಲಿ. ಆದರೆ ಎರಡನೆಯ ಅಲೆಗೆ ಯಾರು ಕಾರಣ? ಎನ್ನುವುದನ್ನು ತನ್ನ ಟ್ವೀಟ್‌ನಲ್ಲಿ ರಾಜ್ಯ ಬಿಜೆಪಿ ಬಹಿರಂಗ ಪಡಿಸಿಲ್ಲ. ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಪಶ್ಚಿಮಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಗಳೇ ಎರಡನೇ ಅಲೆಯನ್ನು ಹುಟ್ಟಿಸಿತು ಎನ್ನುವ ನೈತಿಕ ಸ್ಥೈರ್ಯ ಇದ್ದಾಗ ಮಾತ್ರ, ರಾಜ್ಯ ಬಿಜೆಪಿಗೆ ಮೇಕೆದಾಟು ಹೋರಾಟ ಮೂರನೇ ಅಲೆಗೆ ಕಾರಣವಾಗಲಿದೆ ಎಂದು ಆರೋಪಿಸುವ ನೈತಿಕ ಶಕ್ತಿಯನ್ನು ಪಡೆದುಕೊಳ್ಳಬಹುದು. ಈ ದೇಶವನ್ನು ಮುನ್ನಡೆಸುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎಷ್ಟರಮಟ್ಟಿಗೆ ಕೊರೋನ ನೀತಿ ಸಂಹಿತೆಗಳನ್ನು ಪಾಲಿಸಿದ್ದಾರೆ? ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ ಅದಕ್ಕಾಗಿ ಪಶ್ಚಿಮಬಂಗಾಳದ ಜನರನ್ನು ಅಭಿನಂದಿಸಿ, ದವರು ಪ್ರಧಾನಿ ಮೋದಿ. ಇದಾದ ಬಳಿಕ ಕುಂಭ ಮೇಳಕ್ಕೆ ಅವಕಾಶ ನೀಡಿ ಎರಡನೇ ಅಲೆಯನ್ನು ಸ್ವಯಂ ಆಹ್ವಾನಿಸಿದ ಬಿಜೆಪಿ, ಮೊದಲನೇ ಅಲೆಗೆ ತಬ್ಲೀಗಿಗಳನ್ನು, ಮೂರನೇ ಅಲೆಗೆ ಕಾಂಗ್ರೆಸಿಗರನ್ನು ಹೊಣೆ ಮಾಡುತ್ತಿರುವುದೇ ತಮಾಷೆಯ ವಿಷಯ. ರಾಜ್ಯದಲ್ಲೇ ಉಪಚುನಾವಣೆಯ ಸಂದರ್ಭದಲ್ಲಿ ಸಾವಿರಾರು ಜನರನ್ನು ಒಟ್ಟು ಸೇರಿಸಿದ ರಾಜಕೀಯ ನಾಯಕರು, ಯಾವುದೇ ಜನಪರ ಹೋರಾಟಗಳು ನಡೆಯುವಾಗ ಕೊರೋನವನ್ನು ಗುರಾಣಿಯಾಗಿ ಬಳಸುವುದನ್ನು ನಿಲ್ಲಿಸಬೇಕಾಗಿದೆ. ಕೋತಿ ತಾನು ಬೆಣ್ಣೆ ಕದ್ದು ತಿಂದು, ಮೇಕೆಯ ಮೂತಿಗೆ ಒರೆಸುವ ಬಿಜೆಪಿಯ ಕೊರೋನ ಾಜಕಾರಣ, ಅತ್ಯಂತ ನೀಚತನದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)