varthabharthi


ವಿಶೇಷ-ವರದಿಗಳು

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ

ವಿಶ್ವಮಾನವ ಕಲ್ಪನೆಯ ದೃಷ್ಟಾರ ಸ್ವಾಮಿ ವಿವೇಕಾನಂದ

ವಾರ್ತಾ ಭಾರತಿ : 12 Jan, 2022
ಪ್ರೊ. ಕೆ. ಎಸ್. ಪಣಿಕ್ಕರ್ | ಅನು: ಕೆ. ಎಸ್. ಪಾರ್ಥಸಾರಥಿ

ಹೌದು ! ವಿವೇಕಾನಂದರು ಒಬ್ಬ ನಿಷ್ಠಾವಂತ ಹಿಂದೂವಾಗಿದ್ದರು; ಆದರೆ ಕೋಮುವಾದಿಯಲ್ಲ. ಆದರೆ ಅವರನ್ನು ವೈಭವೀಕರಿಸುವ ಸಂಘಪರಿವಾರದ ನೆಲೆಯೇ ಅನ್ಯಮತ ದ್ವೇಷ... ವಿವೇಕಾನಂದರು ಸಾಮಾಜಿಕ ಸಾಮರಸ್ಯವನ್ನು ಪ್ರತಿಪಾದಿಸಿದವರು; ವಿವಿಧ ಮತಧರ್ಮಗಳ ನಡುವೆ ಆರೋಗ್ಯಕರ ಸಂಭಾಷಣೆಯನ್ನು ಬಯಸಿದವರು. ಹೀಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿವೇಕಾನಂದರ ನಡುವೆ ಪರಸ್ಪರ ಸಮಾನವಾದ ಚಿಂತನೆಗಳೇ ಇಲ್ಲ. ಮೊದಲಿಗೆ ವಿವೇಕಾನಂದರ ಚಟುವಟಿಕೆಗಳಲ್ಲಿ ನವ-ಹಿಂದೂ ಚಳವಳಿಯ ಚಿಂತನೆಯೇ ಕೇಂದ್ರ ಇದ್ದಂತೆ ಕಂಡುಬರಬಹುದು. ಆ ಅನಿಸಿಕೆ ಸಂಘಪರಿವಾರಕ್ಕೆ ಅದರೊಳಗೆ ಹೊಕ್ಕು, ವಿವೇಕಾನಂದರ ಚಿಂತನೆಯಲ್ಲಿ ತನ್ನದೇ ಸಮರ್ಥನೆಯನ್ನು ಕಾಣಲು ಅದು ಹಾತೊರೆಯುತ್ತದೆ. ತಾನು ಆ ಹೊಕ್ಕಳ ಬಳ್ಳಿ ಎಂದು ಹೇಳಿಕೊಳ್ಳಲು ಬಯಸುತ್ತದೆ. ಹಿಂದೂ ಮತದ ಬಗ್ಗೆ ಸ್ವಾಮೀಜಿ ಹಲವು ಸಂದರ್ಭಗಳಲ್ಲಿ ವಿವಿಧ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳನ್ನು ಅವುಗಳ ಸಂದರ್ಭದಿಂದ ಪ್ರತ್ಯೇಕಿಸಿ ಅರ್ಥೈಸಲಾಗದು. ಅವರ ಸಮಗ್ರಚಿಂತನೆಯ ಅಂಗವಾಗಿ ಅವನ್ನು ಅವಲೋಕಿಸಿದಾಗ, ಅವು ಯಾವುವೂ ಸಂಘಪರಿವಾರದ ಕೋಮು ಚಿಂತನೆಯೊಡನೆ ಮೇಳೈಸುವುದಿಲ್ಲ. ವಿವೇಕಾನಂದರು ಒಬ್ಬ ನಿಷ್ಠಾವಂತ ಹಿಂದೂ; ಜನತೆಯ ಸಾಂಸ್ಕೃತಿಕ ಮತ್ತು ಮತಧರ್ಮೀಯ ಕಾಳಜಿಗಳೊಡನೆ ಸ್ಪಂದಿಸಿ, ಒಟ್ಟಾರೆ ಜನಹಿತವನ್ನು ಸಾಧಿಸುವುದು ಅವರ ಉದ್ದೇಶವಾಗಿತ್ತು. ಅದರ ಅಗತ್ಯವನ್ನು ಗುರುತಿಸಿ, ಅದನ್ನು ಸಾಧಿಸಲು ಬದ್ಧರಾಗಿದ್ದರು. ಈ ಹಿಂದೆ ಸುಧಾರಣೆಯ ಹೆಸರಿನಲ್ಲಿ ನಡೆದ ಬದಲಾವಣೆಗಳನ್ನು ಅವರು ಸ್ವೀಕರಿಸಲಿಲ್ಲ. ಅವು ಸಾಮಾಜಿಕ ಸುಧಾರಣೆಗಳನ್ನು ಬಯಸುತ್ತವೆ. ಆದರೆ, ಜಾತೀಯತೆಯ ಪ್ರಶ್ನೆಯನ್ನು ಮುಟ್ಟುವುದೇ ಇಲ್ಲ. ಇದು ಅವರಿಗೆ ಸರಿ ಎನಿಸುವುದಿಲ್ಲ. ಹಿಂದೂ ಮತಧರ್ಮ ತುಂಬ ಜಡವಾಗಿದ್ದು, ಸ್ವಲ್ಪವೂ ಸಡಿಲಗೊಳ್ಳದೆ, ಸಮಸ್ಯೆಯ ಪರಿಹಾರ ಜಟಿಲವಾದುದು ಎನ್ನುತ್ತಾರೆ. ಒಂದು ಕಡೆ ಓಬೀರಾಯನ ಕಾಲದ ಪದ್ಧತಿಗಳು ಮತ್ತೊಂದು ಕಡೆ ಮೂಢನಂಬಿಕೆಗಳು, ಅವರಿಗೆ ಇವು ಕ್ಲಿಷ್ಟತೆಯ ಸವಾಲು.

ಭಾರತದ ಸರ್ವಾಂಗೀಣ ಪುನಶ್ವೇತನದ ಕನಸು ಅವರದು, ಆ ಹಿನ್ನೆಲೆಯ ಅಲ್ಲಿಯವರೆಗಿನ ಸುಧಾರಣಾ ಪ್ರಯತ್ನಗಳನ್ನು ಅವರು ಗಮನಿಸುವುದು. ಅವರು ಪ್ರವೇಶಿಸುವ ಸಮಯಕ್ಕೆ ಆಗಲೇ ಉಂಟಾಗಿದ್ದ ಹಲವು ಸುಧಾರಣಾ ಚಳವಳಿಗಳು ತಮ್ಮ ಬಿರುಸು ಕಳೆದುಕೊಂಡಿದ್ದವು. ಆದರೆ ಅವು ಬದಲಾವಣೆಯ ಬಯಕೆಯನ್ನೇನೋ ನೆಟ್ಟಿದ್ದವು. ತಾನು ಬಯಸುವ ಬದಲಾವಣೆಗೆ ಚಾಲನೆ ನೀಡಬಲ್ಲ ಯೋಗಿಯೊಬ್ಬನ ಬರವಿಗೆ ನಿರೀಕ್ಷಿಸುತ್ತಿತ್ತು ಸಮಾಜ, ಆ ತೆರವನ್ನು ತುಂಬಿದ್ದು ಸ್ವಾಮಿ ವಿವೇಕಾನಂದರು. ಈ ಹಿಂದೆ ರಾಮ್‌ಮೋಹನ್ ರಾಯ್ ಮತ್ತಿತರರು ಸಾಮೂಹಿಕ ಪ್ರಾರ್ಥನೆ ಪೂಜೆಯ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಅದರ ಸ್ಥಾನದಲ್ಲಿ ವಿವೇಕಾನಂದರು ವೈಯಕ್ತಿಕ ಪೂಜಾಕ್ರಮವನ್ನು ಸಮರ್ಥಿಸಿದರು. ಮತಧರ್ಮಕ್ಕೆ ಇದ್ದ ಒಂದು ಸಂಘಟಿತ ವ್ಯವಸ್ಥೆ ಅವರಿಗೆ ಸರಿಯಾಗಿ ಕಾಣಲಿಲ್ಲ. ಹೌದು; ಅವರೂ ತಮ್ಮದೇ ಆದ ಒಂದು ವ್ಯವಸ್ಥೆಯನ್ನು ಸಂಘಟಿಸಿದರು. ಆದರೆ ಅದರಲ್ಲಿ ಅಡಗಿದ್ದ ಕರುಣೆ, ಸಾಮಾಜಿಕ ಸೇವೆ ಮತ್ತು ಮಾನವೀಯತೆಯ ಕಲ್ಪನೆಗಳು ಅದನ್ನು ವಿಶಿಷ್ಟವಾಗಿಸುತ್ತದೆ.

ವಿವೇಕಾನಂದರ ಕಾರ್ಯಕ್ರಮಗಳು ಕೇವಲ ಮತಧರ್ಮ ಕ್ಷೇತ್ರಕ್ಕೆ ಸೀಮಿತವಲ್ಲ. ಅವರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೂ ಅಷ್ಟೇ ಸ್ಪಂದಿಸುತ್ತಿದ್ದರು. ಅದನ್ನು ಬೇರೆ ರೀತಿಯಲ್ಲಿ ಹೇಳಬಹುದು: ಹಿಂದೂಗಳು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಂಪೂರ್ಣ ಬದಲಾವಣೆಗೆ ಶ್ರಮಿಸಬೇಕು. ಅವರ ಕಾಲದ ಬ್ರಹ್ಮ ಸಮಾಜ ಚಳವಳಿ ಹೇಗೆ ಕೆಲಸ ಮಾಡುತ್ತಿತ್ತು ಎನ್ನುವುದನ್ನು ಗಮನಿಸಿದ್ದ ಅವರಿಗೆ ಅದರ ಅನುಭವ, ಎಲ್ಲ ವಿಧವಾದ ಸುಧಾರಣಾ ಚಳವಳಿಗಳ ಬಗೆಗೂ ಒಂದಿಷ್ಟು ಅತೃಪ್ತಿಯುಂಟುಮಾಡಿತ್ತು. ಆದರೆ ಬಣ್ಣದ ಗಾಜಿನಲ್ಲಿ ಎಲ್ಲವನ್ನೂ ಕಂಡರೆಂದು ತೋರುತ್ತದೆ. ಸ್ವಾಮಿ ವಿವೇಕಾನಂದರ ಪ್ರವೇಶದ ವೇಳೆಗಾಗಲೆ ಕೇರಳ ಮತ್ತು ಪಂಜಾಬ್ ಪ್ರದೇಶಗಳನ್ನು ಬಿಟ್ಟು ಮಿಕ್ಕೆಲ್ಲ ಕಡೆ ಸುಧಾರಣಾ ಚಳವಳಿಗಳು ತಮ್ಮ ಬಿರುಸು ಕಳೆದುಕೊಂಡಿದ್ದವು. 19ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಎಲ್ಲ ಮತಧರ್ಮೀಯ ಚಳವಳಿಗಳೂ ತಮ್ಮ ಸತ್ವ ಕಳೆದುಕೊಂಡಿದ್ದವು. ಶಕ್ತಿ ಉಡುಗಿತ್ತು. ಅದರ ಸ್ಥಾನವನ್ನು ಒಂದು ವಿಧವಾದ ಜನಪ್ರಿಯ ಮತಧರ್ಮ ಆಕ್ರಮಿಸುತ್ತಿತ್ತು. ಈ ಎಲ್ಲ ಚಳವಳಿಗಳಿಗೂ ಅಂದಿನ ಮಧ್ಯಮವರ್ಗವೇ ಮುಖ್ಯ ಪೋಷಕ ವರ್ಗವಾಗಿತ್ತು. ಆ ವರ್ಗದ ಬಗ್ಗೆ ವಿವೇಕಾನಂದರು ತಿರಸ್ಕಾರದಿಂದ ಹೇಳುತ್ತಾರೆ: ಪಂಗಡಗಳೊಳಗೆ ಒಳಪಂಗಡ, ಆದರೊಳಗೆ ಮತ್ತೊಂದಾಗಿ, ವಿಚ್ಛಿದ್ರತೆಯೇ ಶಾಪವಾಗಿ, ಮೂಢನಂಬಿಕೆಗಳು, ಒಂದಿಷ್ಟೂ ದಾನಶೀಲತೆಯಿಲ್ಲದೆ, ಆಷಾಢಭೂತಿಗಳೂ, ವಾಸ್ತವದಲ್ಲಿ ನಾಸ್ತಿಕರೂ ಆಗಿರುವ ಈ ಮಧ್ಯಮವರ್ಗ!

ಹಾಗೆಂದು ವಿವೇಕಾನಂದರು ಮಧ್ಯಮವರ್ಗ ಸುಧಾರಣೆಯ ಅಲೆಗೆ ಏನೇನೂ ಮಾಡಲಿಲ್ಲ ಅಂತ ಹೇಳಲಾಗುವುದಿಲ್ಲ. ಆಗಾಗ ಬ್ರಹ್ಮ ಸಮಾಜ ಚಳವಳಿ ಸಾಮಾಜಿಕ ಮತ್ತು ಮತಧರ್ಮೀಯ ಕ್ಷೇತ್ರದಲ್ಲಿ ಮಾಡಿದ್ದ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ಕೇವಲ ಆಧ್ಯಾತ್ಮಿಕತೆ ಮಾತ್ರ ಮುಖ್ಯವಾಗಲಿಲ್ಲ. ಸ್ವಾಮೀಜಿ ಅವರ ಜೀವನದ ಬಹುಭಾಗವನ್ನು ಜಾಗತಿಕವಾಗಿ ರಾಷ್ಟ್ರೀಯವಾಗಿ ವಿಸ್ತಾರವಾಗಿ ಸಂಚರಿಸುವುದರಲ್ಲೇ ಕಳೆದವರು, ಆ ಸಂಚಾರ ಅವರಿಗೆ ಒಂದು ಜಾಗತಿಕ ದೃಷ್ಟಿಕೋನವನ್ನು ನೀಡಿದ್ದೂ ವಾಸ್ತವ. ಬಡತನದ ವಿಷಯ ಅವರಿಗೆ ತೀರ ಯಾತನೆ ಉಂಟುಮಾಡಿತ್ತು. ಅಮಾನವೀಯ ಜಾತಿಪದ್ಧತಿ ದುಃಖ ಉಂಟುಮಾಡಿತ್ತು. ಶೂದ್ರ ಒಮ್ಮೆ ಆಡಳಿತದ ಚುಕ್ಕಾಣಿ ಹಿಡಿಯುವುದು ಖಂಡಿತವೆಂದು ಭವಿಷ್ಯ ನುಡಿದಿದ್ದವರು ಅವರು. ಕೇರಳದಲ್ಲಿ ಕಂಡ ಜಾತಿಯ ಶೋಷಣೆ, ದಬ್ಬಾಳಿಕೆ ಅವರ ಮನಕರಗಿಸಿ, ಮಾಸದ ಛಾಪು ಮೂಡಿಸಿತ್ತು ಅವರ ಮನಃಪಟಲದಲ್ಲಿ.

ಭಾರತದ ಸಮಾಜ ಸುಧಾರಣೆಯ ಪ್ರಯತ್ನದಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. ಮೊದಲನೆಯದು ಆಧುನೀಕರಣವನ್ನು ಒತ್ತಾಯಿಸಿದ ಉದಾರವಾದದ ಹಂತ. ಈ ಮಾರ್ಗದಲ್ಲಿ ರಾಮ್‌ಮೋಹನ್ ರಾಯ್ ಕೆಲವು ಸಾಂಪ್ರದಾಯಿಕ ಅನುಸರಣೆಗಳನ್ನು ಬದಲಾಯಿಸಲು ಪ್ರಯತ್ನಿಸಿದರು. ಸುಧಾರಣೆಯ ಅಗತ್ಯವನ್ನು ಗುರುತಿಸುತ್ತಲೇ ಅದಕ್ಕೆ ವಿದೇಶಿ ಅಥವಾ ಹೊರಗಿನ ಯಾವುದೇ ಪ್ರಭಾವಗಳನ್ನು ಸ್ವೀಕರಿಸದೆ, ನಮ್ಮದೇ ನೆಲೆಯ ಮಾರ್ಗಗಳನ್ನು ಬಳಸಿ, ಆಧುನೀಕರಣ ಸಾಧಿಸುವ ಪ್ರಯತ್ನ ಎರಡನೇ ಹಂತ ಮೂರನೆಯ ಹಂತದಲ್ಲಿ ಈ ಎರಡೂ ಮಾರ್ಗಗಳನ್ನು ಬಳಸಿಕೊಂಡು, ಅಂದರೆ ಸಾಂಪ್ರದಾಯಿಕ ವ್ಯವಸ್ಥೆಯಲ್ಲೇ ಇರುವ ಆಧುನೀಕರಣ ಸಾಧ್ಯತೆ ಹಾಗೂ ಲಭ್ಯವಿದ್ದ ಬಾಹ್ಯ ಪ್ರಭಾವಗಳನ್ನು ಬಳಸಿಕೊಂಡ ಆಧುನೀಕರಣ ಪ್ರಕ್ರಿಯೆಯ ಪರ್ಯಾಯ ಮಾದರಿಯದು. ಇದು ಸ್ವಾಮಿ ವಿವೇಕಾನಂದರ ಮಾರ್ಗವಾಗಿತ್ತು. ಮೊದಲನೆಯ ಮಾರ್ಗ ಅನುಸರಿಸಿದವರನ್ನು ‘ಬಾಬೂ ಲೋಗ್’ ಅಂತ ಅಣಕು ನುಡಿದಿದ್ದರು. ಅವರ ಬಗ್ಗೆ ಅವರಿಗೆ ತಾಳ್ಮೆ ಇರಲಿಲ್ಲ. ರೂಢಿಬಿಡದ ಸಂಪ್ರದಾಯವಾದಿಗಳು ಎರಡನೇ ಗುಂಪಿನವರು. ಇವರು ಅಂಧಶ್ರದ್ಧೆ, ಆಚಾರಗಳು, ಮಡಿಮೈಲಿಗೆ, ಜಪತಪಗಳಲ್ಲಿ ಮುಳುಗಿದ್ದವರು, ವಿವೇಕಾನಂದರು ಸುಧಾರಣೆಗಳ ಮಾರ್ಗವನ್ನು ಸಮರ್ಥಿಸುತ್ತಲೇ ರಚನಾತ್ಮಕ ಸಾಮಾಜಿಕ ಕೆಲಸಗಳ ಅಗತ್ಯವನ್ನು ಹೇಳಿದರು. ಸ್ವಾಮಿ ವಿವೇಕಾನಂದರ ಉಪದೇಶ ಸಾರವೆಂದರೆ ಸಾರ್ವತ್ರಿಕ, ಸರ್ವಸಮಾನ ಮತಧರ್ಮತತ್ವ, ಇದನ್ನು ಸ್ವೀಕರಿಸಿದವರ ಮನಃಸ್ಥಿತಿ, ವಿವಿಧ ಧರ್ಮೀಯರ ನಡುವೆ ಯಾವುದೇ ಪರಸ್ಪರ ವಿರೋಧವನ್ನು ಕಾಣುವುದಿಲ್ಲ. ಎಲ್ಲ ಮತಧರ್ಮಗಳೂ ಸಮಾನ ಮತ್ತು ಅವೆಲ್ಲವೂ ಸತ್ಯವೆ, ಅವರಿಗೆ ಹಿಂದೂಧರ್ಮದ ಸ್ವಭಾವದಲ್ಲೇ ಆ ಸಾರ್ವತ್ರಿಕತೆ ಅಂತಸ್ಥ. ಅದು ಅದರ ಆದರ್ಶ. ಆದ್ದರಿಂದ ಹಿಂದೂ ಮತಧರ್ಮ ಆಧ್ಯಾತ್ಮಿಕ ವಿಷಯಗಳಲ್ಲಿ ಮುಂದಾಳು. ಇದರೊಂದಿಗೆ ಸಾಮಾಜಿಕ ಸೇವೆಯ ದೀಕ್ಷೆ ಅವರ ಸಿದ್ಧಾಂತದ ಇನ್ನೊಂದು ಭಾಗ. ಇದನ್ನು ಕೈಗೊಳ್ಳಲೋಸ್ಕರವೇ ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಈ ಸಂಸ್ಥೆ ಸುಧಾರಣೆಯ ಕೆಲಸಕ್ಕೆ ಒಂದು ಹೊಸ ಆಯಾಮವನ್ನೇ ನೀಡಿತು.

ಸ್ವಾಮಿ ವಿವೇಕಾನಂದರು ಮತಧರ್ಮಗಳ ಜಾಗತಿಕ ಸಮಾವೇಶದಲ್ಲಿ ಮಾಡಿದ ಉಪನ್ಯಾಸ ಮತ್ತು ಭಾರತದಾದ್ಯಂತ ತಮ್ಮ ಪ್ರವಾಸ ಸಮಯದಲ್ಲಿ ನೀಡಿದ ಮತಧರ್ಮೀಯ ಪ್ರವಚನಗಳು ಜನಪ್ರಿಯವಾಗಿ, ಸಾಮಾನ್ಯ ಜನರ ಮನಸ್ಸಿನಲ್ಲಿ ಹಾಗೂ ವಿದ್ವಾಂಸರ ವೇದಿಕೆಗಳಲ್ಲಿ ಮಹತ್ತರ ಪರಿಣಾಮ ಉಂಟುಮಾಡಿ, ಅವರನ್ನು ಕುರಿತು ಜನರ ಕಲ್ಪನೆಗಳನ್ನು ರೂಪಿಸಿವೆ. ಚಿಕಾಗೋ ನಗರದ ಜಾಗತಿಕ ಸಮಾವೇಶದಲ್ಲಿ ಅವರು ನೀಡಿದ ಉಪನ್ಯಾಸ ಅಪಾರ ಮೆಚ್ಚುಗೆ ಪಡೆಯಿತು. ಅದರಲ್ಲಿ ಅವರು ಎಲ್ಲ ಮತಧರ್ಮಗಳಲ್ಲೂ ಅಡಗಿರುವ ಸಾರ್ವತ್ರಿಕತೆಯ ಸೆಲೆಯನ್ನು ಬಿಚ್ಚಿಟ್ಟರು ಹಾಗೂ ಮತಧರ್ಮದಲ್ಲಿ ಹೇಗೆ ಬಿಂಬಿತವಾಗಿದೆ ಎಂದು ವರ್ಣಿಸಿದರು. ಈ ನಿಲುವಿಗೆ ಮುಖ್ಯ ಕಾರಣ ವೇದಾಂತ ಕುರಿತ ಅವರ ಪರಿಕಲ್ಪನೆ. ವೇದಾಂತದ ತಿರುಳು ಯಾವುದೇ ಒಂದು ಮತಧರ್ಮ ಅಥವಾ ಸಾಂಸ್ಕೃತಿಕ ಸಂಪ್ರದಾಯಕ್ಕೆ ಸೀಮಿತವಲ್ಲ ಎಂದು ವಾದಿಸಿದರು. ‘‘ಸತ್ಯವೇ ನನ್ನ ದೇವರು; ಇಡೀ ಜಗತ್ತು ನನ್ನ ರಾಷ್ಟ್ರ’’ ಎಂದರು. ಅವರ ಸ್ವಂತ ತಿಳುವಳಿಕೆಯಾದ ಸಾರ್ವತ್ರಿಕತೆಯನ್ನು ಹಿಂದೂ ತತ್ವಶಾಸ್ತ್ರದೊಡನೆ ಮೇಳೈಸಿದರು. ಸಾರ್ವತ್ರಿಕತೆ ಎನ್ನುವುದನ್ನು ಹೀಗೆ ಸೃಜನಶೀಲವಾಗಿ ವಿಸ್ತರಿಸಿದ್ದು ಅವರ ವಿಶಿಷ್ಟತೆ. ಎಲ್ಲ ಮತಧರ್ಮಗಳ ತತ್ವವೂ ಎಲ್ಲರಿಗೂ ಅನ್ವಯವಾಗುವಂತಹವು. ಯಾವೊಂದು ಮತಧರ್ಮವೂ ಮತ್ತೊಂದಕ್ಕಿಂತ ಹಿರಿಯದಲ್ಲ. ಪ್ರತಿಯೊಂದು ಮತಧರ್ಮವೂ ಒಂದು ಸ್ಪಷ್ಟನೆ ಒಂದೇ ಸತ್ಯವನ್ನು ಹೊರಗೆಡಹುವ ವಿವಿಧ ಭಾಷೆಗಳಷ್ಟೆ; ಆದ್ದರಿಂದ ನಾವು ಪರಸ್ಪರ ಮಾತನಾಡುವಾಗ ಅವರವರ ಭಾಷೆಯಲ್ಲೇ ಮಾತನಾಡಬೇಕು.’’

ಅವರಾಡಿದ್ದೂ ಅವರ ಗುರು ಶ್ರೀ ರಾಮಕೃಷ್ಣ ಪರಮಹಂಸರ ಮಾತುಗಳು. ಅವರ ಮಾತು ಹಿಂದೂಧರ್ಮದಲ್ಲಿನ ಜಗನ್ವಿಮುಖತೆಯದಲ್ಲ. ಆದರೆ ಅದು ‘‘ಶ್ರೀ ರಾಮಕೃಷ್ಣರ ಭಾಷೆ, ಹಿಂದೂಗಳು ಅದನ್ನೂ ಹಿಂದೂ ಮತಧರ್ಮದ್ದು ಅಂತ ಹೇಳಿಕೊಳ್ಳಲಿ. ಮಿಕ್ಕವರು ಅವರವರಿಗೆ ಹಿತವಿದ್ದಂತೆ ಕರೆದುಕೊಳ್ಳಲಿ. ಆದರೆ ನಮ್ಮ ಗುರು ಕೇವಲ ಭಾರತಕ್ಕೆ ಮಾತ್ರ ಸ್ವಂತವೇನು?’’ ಎಂದು ಪ್ರಶ್ನಿಸುತ್ತಾರೆ. ವಿವೇಕಾನಂದ ಭಾರತದ ಅವನತಿಗೆ ಕಾರಣವಾದ ಹಲವು ಸಂಕುಚಿತತೆಗಳ ವಿರುದ್ಧ ಶ್ರೀ ರಾಮಕೃಷ್ಣ ಅವರು ಮಾತನಾಡಿದ್ದನ್ನು ಗಮನಿಸುತ್ತಾರೆ. ‘‘ಇವುಗಳನ್ನು ರೂಢಮೂಲವಾಗಿ ಕಿತ್ತೊಗೆಯದೆ ಯಾವುದೇ ಉಪಯುಕ್ತ ಪರಿಣಾಮ ಉಂಟಾಗುವುದಿಲ್ಲ. ಮತಧಾರ್ಮಿಕ ಸಾರ್ವತ್ರಿಕತೆ ಅಂದರೆ ಎಲ್ಲ ಮತಧರ್ಮಗಳೂ ನಿಜ ಆದರೆ ಎಲ್ಲವೂ ಸತ್ಯ ಅಂತ ಅಲ್ಲ. ಅವರು ಹಿಂದುವೇ ಇರಲಿ, ಇಂಗ್ಲಿಷ್ ಕಲಿತ ಮುಸ್ಲಿಮರೇ ಇರಲಿ, ಆದರೆ ಇದು ಎಲ್ಲ ಸುಧಾರಕರ ನಿಲುವು. ತಮ್ಮ ಮೂಲ ಸೆಲೆಯಿಂದ ದೂರವಾದ ಭಾರತದ ಮಧ್ಯಮವರ್ಗಗಳು ಚಿಕ್ಕಾಸು ಬೆಲೆ ಇಲ್ಲದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರಿಗೆ ಮೂಲತಃ ಸುಧಾರಣೆಯತ್ತ ಒಲವಿಲ್ಲ. ವಿಚ್ಛಿದ್ರತೆಯ ಕೆಸರಿನಲ್ಲಿ ಸಿಕ್ಕಿ, ಅಂಧಶ್ರದ್ಧೆಯಲ್ಲಿ ಮುಳುಗಿ, ಒಂದಿಷ್ಟೂ ಉದಾರತೆಯಿಲ್ಲದ, ಕಪಟವೃತ್ತಿಯ ನಾಸ್ತಿಕ ಹೇಡಿಗಳು’’ ಎಂದಿದ್ದಾರೆ.

ಅಂತಹ ವರ್ಗವನ್ನೇ ಆಧಾರವಾಗಿರಿಸಿಕೊಂಡ ಸುಧಾರಣೆಗಳ ಬಗ್ಗೆ ಅವರಿಗೆ ತಿರಸ್ಕಾರ ಮನೋಭಾವವಿತ್ತು. ಈ ವಿಶ್ಲೇಷಣೆ ರಾಮ್‌ಮೋಹನ್ ರಾಯ್ ಕಾಲದಿಂದ ನಡೆದಿದ್ದ ಎಲ್ಲ ಸುಧಾರಣ ಪ್ರಯತ್ನಗಳೊಡನೆ ಎಲ್ಲ ಸಂಬಂಧವನ್ನು ಕಡಿದುಕೊಳ್ಳುವಂತೆ ಮಾಡಿತು. ಅದಕ್ಕೆ ಅವರು ಸೂಚಿಸಿದ ಪರ್ಯಾಯ ಸಾಮಾಜಿಕ ಬದಲಾವಣೆ; ಅದನ್ನು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಳ ಮೂಲಕ ಸಾಧಿಸಬೇಕು. ಅದೇ ಕಾರಣ ಅವರು ಸ್ಥಾಪಿಸಿದ ರಾಮಕೃಷ್ಣ ಚಳವಳಿ ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿತು.

ವಿವೇಕಾನಂದರೇನಾದರೂ ವರ್ತಮಾನ ಭಾರತದಲ್ಲಿ ತಿರುಗಿ ಬಂದರೆ ಅವರಂತೂ ಕೋಮುವಾದಿಗಳ ಪಾಳಯದಿಂದ ಉದಿಸಿಬರುವುದು ಸಾಧ್ಯವಿಲ್ಲ ಎಂದು ಹಿಂದೂ ಪುನರುತ್ಥಾನಾದಿಗಳು ಸ್ಪಷ್ಟವಾಗಿ ಹೇಳಬಹುದು.

(ಮೂಲ: Vivekananda's Legacy of Universalism)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)