varthabharthi


ಸಂಪಾದಕೀಯ

ಲೋಕಾಯುಕ್ತದೊಳಗಿರುವ ವೈರಸ್‌ಗಳಿಗೆ ಬೇಕಿದೆ ಲಸಿಕೆ

ವಾರ್ತಾ ಭಾರತಿ : 13 Jan, 2022

ತಜ್ಞರು ‘ಎತ್ತು ಈದೈತೆ’ ಎಂದರೆ, ಸರಕಾರ ‘ಕೊಟ್ಟಿಗೆಯಲ್ಲಿ ಕಟ್ಟು’ ಎಂದಿತಂತೆ. ಸದ್ಯಕ್ಕೆ ಕೊರೋನ ಹೆಸರಿನಲ್ಲಿ ಹೊರ ಬೀಳುತ್ತಿರುವ ಆದೇಶಗಳೆಲ್ಲವೂ ಈ ಗಾದೆಗೆ ತಕ್ಕಂತೆಯೇ ಇದೆ. ‘ತಜ್ಞರು ಹೇಳಿದ್ದಾರೆ’ ಎಂದು ಕಣ್ಣು ಮುಚ್ಚಿ ಆದೇಶಗಳನ್ನು ಜಾರಿಗೊಳಿಸುತ್ತಿರುವ ಸರಕಾರ, ಜನಸಾಮಾನ್ಯರ ಆಕ್ರೋಶ, ಆಕ್ರಂದನಗಳಿಗೆ ಸಂಪೂರ್ಣ ಕಿವುಡಾಗಿದೆ. ಕೆಲವು ತಿಂಗಳ ಹಿಂದೆ, ಲಸಿಕೆ ಹಾಕಿಸಿಕೊಳ್ಳದ ಜನರಿಗೆ ರೇಷನ್ ಇಲ್ಲ ಎಂದು ಸ್ಥಳೀಯ ಜಿಲ್ಲಾಧಿಕಾರಿಗಳು ಆದೇಶ ನೀಡಿರುವುದು ಭಾರೀ ವಿವಾದಕ್ಕೀಡಾಗಿತ್ತು. ಬಳಿಕ, ಆ ಆದೇಶವನ್ನು ಹಿಂದೆಗೆದುಕೊಳ್ಳಲಾಯಿತು. ಲಸಿಕೆಯನ್ನು ಕಡ್ಡಾಯಗೊಳಿಸುವುದಕ್ಕೆ ದೇಶದ ಹಲವು ನ್ಯಾಯಾಲಯಗಳು ಈಗಾಗಲೇ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿವೆ. ಲಸಿಕೆಗಳ ಪರಿಣಾಮಗಳ ಬಗ್ಗೆ ಇನ್ನೂ ಜನರ ಸಂಶಯಗಳು ನೀಗಿಲ್ಲ. ಲಸಿಕೆಯ ಕಡ್ಡಾಯ ಪ್ರಯೋಗದ ವಿರುದ್ಧ ಯುರೋಪ್‌ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಮಾನಸಿಕವಾಗಿ ಜನರನ್ನು ಸಿದ್ಧಗೊಳಿಸದೆ ಅವರ ದೇಹದ ಮೇಲೆ ಪ್ರಯೋಗವನ್ನು ನಡೆಸುವುದು ಅಮಾನವೀಯ. ಅದು ಅವರ ಬದುಕುವ ಹಕ್ಕಿನ ಮೇಲೆ ನಡೆಸುವ ದಾಳಿ ಎನ್ನುವುದನ್ನು ಸರಕಾರ ಮನಗಾಣಬೇಕಾಗಿದೆ. ಮೊತ್ತ ಮೊದಲು, ಲಸಿಕೆಯಿಂದ ಕೊರೋನವನ್ನು ಎದುರಿಸಲು ಸಾಧ್ಯವೆನ್ನುವುದನ್ನು ಜನರಿಗೆ ಸಾಬೀತು ಪಡಿಸಬೇಕು. ಆದರೆ ಈ ಭರವಸೆಯನ್ನು ಯಾವುದೇ ವೈದ್ಯಕೀಯ ತಜ್ಞರು ನೀಡಿಲ್ಲ. ಅಷ್ಟೇ ಅಲ್ಲ, ದೇಶಾದ್ಯಂತ ಲಸಿಕೆಗಳನ್ನು ನೀಡಿದ ಬಳಿಕವೂ ನಾವು ಮೂರನೇ ಅಲೆಯ ಆತಂಕದಲ್ಲಿದ್ದೇವೆ. ಲಸಿಕೆ ಪಡೆದವರಿಗೇ ಮತ್ತೆ ಕೊರೋನ ಬಂದಿರುವುದು ಲಸಿಕೆಯ ಪರಿಣಾಮವನ್ನು ಜನರು ಸಂಶಯಿಸುವಂತೆ ಮಾಡಿದೆ. ಹಲವು ವೈದ್ಯರೇ ಲಸಿಕೆಗಳನ್ನು ಪ್ರಶ್ನಿಸುತ್ತಿರುವಾಗ, ಅದನ್ನು ಬೇರೆ ಬೇರೆ ಒತ್ತಡಗಳ ಮೂಲಕ ಜನರ ಮೇಲೆ ಹೇರಲು ಸರಕಾರ ಪ್ರಯತ್ನಿಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.

 ಈಗಾಗಲೇ ಮಾಲ್‌ಗಳಂತಹ ಸ್ಥಳಗಳಿಗೆ ಭೇಟಿ ನೀಡಬೇಕಾದರೆ ಲಸಿಕೆ ಕಡ್ಡಾಯ ಎನ್ನುವ ಸರಕಾರದ ನೀತಿ, ನಗರ ಪ್ರದೇಶಗಳ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ ಮಾಲ್‌ಗಳು ಬಿಕೋ ಎನ್ನುತ್ತಾ ನಷ್ಟವನ್ನು ಎದುರಿಸುತ್ತಿವೆ.ಜನರು ಮಾಲ್‌ಗಳಿಂದ ದೂರ ಸರಿಯುತ್ತಿದ್ದಾರೆ. ಮಾಲ್‌ಗಳು ಜನರ ಬದುಕಿನ ಅವಶ್ಯಕತೆಯೇನೂ ಅಲ್ಲ. ಇದು ಪರೋಕ್ಷವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ತುಸು ಅನುಕೂಲಗಳನ್ನು ಮಾಡಿಕೊಟ್ಟಿದೆ. ವಿಪರ್ಯಾಸವೆಂದರೆ, ಲಸಿಕೆಯ ಹಿಂದಿರುವ ಅಕ್ರಮಗಳನ್ನು ಪತ್ತೆ ಹಚ್ಚಬೇಕಾದ ಲೋಕಾಯುಕ್ತವೇ ತನ್ನ ಕಚೇರಿಗೆ ಕಾಲಿಡಬೇಕಾದರೆ ಲಸಿಕೆ ಕಡ್ಡಾಯ ಹಾಕಿಸಿಕೊಂಡಿರಬೇಕು ಎನ್ನುವ ಸುತ್ತೋಲೆಯನ್ನು ಹೊರಡಿಸಿದೆ. ಲೋಕಾಯುಕ್ತದ ಈ ಸುತ್ತೋಲೆ ಅದರೊಳಗಿರುವ ಸಿಬ್ಬಂದಿಗೆ ಮಾತ್ರವಲ್ಲ, ದೂರು ನೀಡಲು ಆಗಮಿಸುವ ಸಾರ್ವಜನಿಕರಿಗೂ ಅನ್ವಯಿಸಿದೆ. ಈಗಾಗಲೇ ಹತ್ತು ಹಲವು ರಾಜಕೀಯ ವೈರಸ್‌ಗಳಿಂದಾಗಿ ಕ್ಷೀಣವಾಗಿರುವ ಲೋಕಾಯುಕ್ತ ಸಂಸ್ಥೆಯನ್ನು ಮೇಲೆತ್ತುವ ಕೆಲಸವನ್ನು ಲೋಕಾಯುಕ್ತರು ಮಾಡಬೇಕಾಗಿತ್ತು. ಇಂದು ಈ ನಾಡನ್ನು ಭ್ರಷ್ಟಾಚಾರದಂತಹ ಭೀಕರ ವೈರಸ್ ಕಾಡುತ್ತಿದೆ ಮತ್ತು ಅದಕ್ಕೆ ಸೂಕ್ತ ಲಸಿಕೆಗಳನ್ನು ನೀಡಿ ಅದರ ಆರೋಗ್ಯವನ್ನು ಉಳಿಸುವಲ್ಲಿ ಲೋಕಾಯುಕ್ತ ವಿಫಲವಾಗಿದೆ. ಸಂತೋಷ್ ಹೆಗ್ಡೆ ಕಾಲದಲ್ಲಿ ಒಂದಿಷ್ಟು ಜೀವ ಪಡೆದುಕೊಂಡ ಸಂಸ್ಥೆ, ಆ ಬಳಿಕ ಇನ್ನಷ್ಟು ದುರ್ಬಲವಾಯಿತು. ಮುಖ್ಯ ಲೋಕಾಯುಕ್ತರ ಸ್ಥಾನವನ್ನು ತುಂಬುವಲ್ಲಿ ನಿವೃತ್ತ ನ್ಯಾಯಾಧೀಶರು ಹಿಂಜರಿಯುವಂತಹ ಸನ್ನಿವೇಶ ಸೃಷ್ಟಿಯಾಯಿತು. ಇಂದಿಗೂ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನರು ಪ್ರತಿಭಟಿಸಲು ಧೈರ್ಯ ತೋರುವುದೇ ಅಪರೂಪ. ಯಾಕೆಂದರೆ ಜನಸಾಮಾನ್ಯರು ಲೋಕಾಯುಕ್ತದಂತಹ ಸಂಸ್ಥೆಯ ಕುರಿತಂತೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ, ಲಸಿಕೆಯ ಹೆಸರಿನಲ್ಲಿ ಜನರು ಭ್ರಷ್ಟಾಚಾರಿಗಳ ವಿರುದ್ಧ ದೂರು ನೀಡದಂತೆ ತಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಈ ಸುತ್ತೋಲೆಯಿಂದ ಅತಿ ಹೆಚ್ಚು ಸಂತ್ರಸ್ತರಾಗುವವರು ಗ್ರಾಮೀಣ ಪ್ರದೇಶದ ಜನರು. ಭ್ರಷ್ಟ ಅಧಿಕಾರಿಯೊಬ್ಬ ಲಂಚ ಕೇಳಿದಾಕ್ಷಣ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವ ಬದಲು, ಲಸಿಕೆ ಪಡೆಯುವುದಕ್ಕೆ ಕ್ಯೂ ನಿಲ್ಲಬೇಕು. ಎರಡೂ ಹಂತದ ಲಸಿಕೆ ಪಡೆದು, ಅದರ ದಾಖಲೆಗಳನ್ನು ಹಿಡಿದುಕೊಂಡು ಲೋಕಾಯುಕ್ತಕ್ಕೆ ಹೋಗಬೇಕು ಎಂದು ಲೋಕಾಯುಕ್ತರು ಬಯಸುತ್ತಿದ್ದಾರೆ. ದೂರು ನೀಡುವುದಕ್ಕೆ ಇಷ್ಟೆಲ್ಲ ಅಡೆತಡೆಗಳನ್ನು ಎದುರಿಸುವುದಕ್ಕಿಂತ ಭ್ರಷ್ಟ ಅಧಿಕಾರಿಗೆ ಲಂಚ ನೀಡುವುದೇ ವಾಸಿ ಎಂದು ಸಾರ್ವಜನಿಕರು ನಿರ್ಧರಿಸಿದರೆ ಅಚ್ಚರಿಯಿಲ್ಲ. ಭ್ರಷ್ಟತೆಯನ್ನು ನಿವಾರಿಸಲು ಲೋಕಾಯುಕ್ತಕ್ಕೆ ಪರೋಕ್ಷವಾಗಿ ಸಹಕರಿಸುವ ಸಾರ್ವಜನಿಕರಿಗೆ ದೂರು ನೀಡುವ ದಾರಿಗಳನ್ನು ಸುಗಮ ಮಾಡಿಕೊಡುವ ಬದಲು, ಕೊರೋನವನ್ನು ಮುಂದಿಟ್ಟುಕೊಂಡು ಅವರಿಗೆ ಕಿರುಕುಳ ನೀಡುವುದು ಎಷ್ಟರಮಟ್ಟಿಗೆ ಸರಿ? ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ದೂರು ನೀಡಬೇಕಾದರೆ ಲಸಿಕೆ ಕಡ್ಡಾಯ, ಖಾತೆಗಳ ಪ್ರತಿ ಪಡೆಯಬೇಕಾದರೆ ಲಸಿಕೆ ಕಡ್ಡಾಯ ಎನ್ನುವ ಸುತ್ತೋಲೆಗಳು ಹೊರಟರೆ ಅದರಲ್ಲಿ ಅಚ್ಚರಿ ಇದೆಯೇ?

ಲೋಕಾಯುಕ್ತದ ಕೆಲಸ ಭ್ರಷ್ಟಾಚಾರವೆನ್ನುವ ಸೋಂಕನ್ನು ಇಲ್ಲವಾಗಿಸುವುದೇ ಹೊರತು, ಕೊರೋನ ವೈರಸ್‌ನ ವಿರುದ್ಧ ಹೋರಾಟಕ್ಕಾಗಿ ಅದನ್ನು ಸ್ಥಾಪಿಸಿಲ್ಲ. ನಿಜಕ್ಕೂ ಕೊರೋನ ವಿರುದ್ಧದ ಹೋರಾಟದಲ್ಲಿ ಪಾಲುಗೊಳ್ಳುವ ಉತ್ಸಾಹವಿದ್ದರೆ, ಕೊರೋನದ ಹೆಸರಿನಲ್ಲಿ ಜನರನ್ನು ಸುಲಿಯುತ್ತಿರುವ ಆಸ್ಪತ್ರೆಗಳಲ್ಲಿರುವ ವೈರಸ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಹಾಗೆಯೇ ಲಸಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕಡೆಗೆ ತನ್ನ ಗಮನ ಹರಿಸಲಿ. ತನ್ನ ಕಚೇರಿಗೆ ಕಾಲಿಡುವವರಿಗೆ ಲಸಿಕೆ ಕಡ್ಡಾಯವೆನ್ನುವ ಸುತ್ತೋಲೆಯನ್ನು ತಕ್ಷಣ ಹಿಂದೆಗೆದುಕೊಂಡು, ಸಾರ್ವಜನಿಕರ ಸಂಕಟಗಳಿಗೆ ಲೋಕಾಯುಕ್ತ ಮುಕ್ತವಾಗಿ ತೆರೆದುಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)