varthabharthi


ನಿಮ್ಮ ಅಂಕಣ

ಮುಸ್ಲಿಂ ಮಹಿಳೆಯರ ವಿರುದ್ಧ ಆನ್‌ಲೈನ್ ಲೈಂಗಿಕ ದೌರ್ಜನ್ಯ: ಭಾರತದ ಮುಖ್ಯ ನ್ಯಾಯಾಧೀಶರಿಗೆ ಬಹಿರಂಗ ಪತ್ರ

ವಾರ್ತಾ ಭಾರತಿ : 13 Jan, 2022

ಜನವರಿ 3, 2022
ರವರಿಗೆ,
ಜಸ್ಟೀಸ್ ಶ್ರೀ ಎಂ.ವಿ.ರಮಣ,
ಭಾರತದ ಮುಖ್ಯ ನ್ಯಾಯಾಧೀಶರು

ಸರ್ವೋಚ್ಚ ನ್ಯಾಯಾಲಯ ಹೊಸದಿಲ್ಲಿ.

ಮಾನ್ಯರೇ,
ವಿಷಯ: 'ಸುಲ್ಲಿಡೀಲ್ಸ್' ಮತ್ತು 'ಬುಲ್ಲಿಬಾಯ್' ಅಪ್ಲಿಕೇಶನ್‌ಗಳ ಮೂಲಕ ಅಸಾಂವಿಧಾನಿಕವಾಗಿ ಹಾಗೂ ಕಾನೂನುಬಾಹಿರವಾಗಿ, ಸ್ತ್ರೀದ್ವೇಷಿ ಮನಸ್ಥಿತಿಯಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಪಡಿಸಿರುವವರ ವಿರುದ್ಧ ಸುಮೋಟೋ ಅರ್ಜಿಯನ್ನು ದಾಖಲಿಸುವಂತೆ ಕೋರಿ ಮನವಿ.

ಜನವರಿ 1, 2022ರಂದು ಇಡೀ ಜಗತ್ತು ಹೊಸ ವರ್ಷದ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ನೂರಾರು ಮುಸ್ಲಿಂ ಮಹಿಳೆಯರು 'ಬುಲ್ಲಿಬಾಯ್' ಅಪ್ಲಿಕೇಶನ್ ಮೂಲಕ ತಮ್ಮ ಮೇಲೆ ನಡೆದ ಅತ್ಯಂತ ಆಕ್ಷೇಪಾರ್ಹ, ಅಸಹ್ಯಕರ, ಸ್ತ್ರೀದ್ವೇಷಿ ಮನಸ್ಥಿತಿಯ ದಾಳಿಯನ್ನು ಕಂಡು ದಿಗ್ಭ್ರಮೆಗೊಂಡರು. ಖ್ಯಾತ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಚಿಂತಕರೂ ಸೇರಿದಂತೆ ನೂರಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತಲ್ಲದೆ, ಅವುಗಳನ್ನು 'ಹರಾಜಿ'ಗೆ ಸಹ ಇಡಲಾಗಿತ್ತು.

'ಬುಲ್ಲಿಬಾಯ್' ಅಪ್ಲಿಕೇಶನ್ ಅನ್ನು bullibai.github.io. ಎನ್ನುವ ಯುಆರ್‌ಎಲ್ ಮೂಲಕ ಹೋಸ್ಟ್ ಮಾಡಲಾಗಿತ್ತು. github ಎಂಬುದು ವೆಬ್‌ಸೈಟ್‌ಗಳನ್ನು ಹೋಸ್ಟ್ ಮಾಡುವ ಜಾಲತಾಣವಾಗಿದೆ. ಈ ಘಟನೆಯ ಕುರಿತು ಭಾರೀ ಆಕ್ರೋಶ ವ್ಯಕ್ತವಾದ ನಂತರ ಜನವರಿ 1, 2022ರ ಬೆಳಗ್ಗೆ ಇದನ್ನು ತೆಗೆದುಹಾಕಲಾಗಿದೆ ಹಾಗೂ 'ಬುಲ್ಲಿಬಾಯ್' ನ ಟ್ವಿಟರ್ ಖಾತೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. 'ಸುಲ್ಲಿಡೀಲ್ಸ್' ನಂತೆಯೇ 'ಬುಲ್ಲಿಬಾಯ್' ಅನ್ನೂ ಸಹ github ಮೂಲಕವೇ ಸೃಷ್ಟಿಸಲಾಗಿದೆ. ಈ github ಜಾಲತಾಣವು ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಿ, ಹಂಚಿಕೊಳ್ಳುವುದನ್ನು ಅನುಮತಿಸುತ್ತದೆ.ಇನ್ನು ಈ ಪೋರ್ಟಲ್ ಸ್ಥಗಿತಗೊಂಡಿದ್ದರೂ ಸಹ ಅಪರಾಧಿಗಳು ಮಾತ್ರ ಸಂತ್ರಸ್ತ ಮಹಿಳೆಯರ ವೈಯಕ್ತಿಕ ಮಾಹಿತಿಯನ್ನು ಅವರ ದೇಹಗಳನ್ನು ಕೊಂಡುಕೊಳ್ಳುವ ಹಾಗೂ ಮಾರುವ ಲಕ್ಷಾಂತರ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಬಹಿರಂಗಪಡಿಸಿ, ಸರ್ವ ಸ್ವತಂತ್ರರಾಗಿ ಹೊರಗಡೆ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಇದು ಈ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹೊರಜಗತ್ತಿನಲ್ಲಿ ದುರ್ಬಲರನ್ನಾಗಿಸಿದೆ.

ಬಹಿರಂಗವಾಗಿ ಮುಸ್ಲಿಂ ಮಹಿಳೆಯರ ದೇಹಗಳನ್ನು ಸಾರ್ವಜನಿಕವಾಗಿ ಹರಾಜು ಹಾಕುವ ಅತಿರೇಕದ ವರ್ತನೆ ಇದೇ ಮೊದಲಲ್ಲ. 2021ರ ಜುಲೈ ತಿಂಗಳಿನಲ್ಲಿ ಇದೇತರಹದ 'ಸುಲ್ಲಿಡೀಲ್ಸ್' ಎಂಬ ಅಪ್ಲಿಕೇಶನ್ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹರಾಜು ಹಾಕಲು ಹಂಚಿಕೊಂಡಿತ್ತು. ಮುಸ್ಲಿಂ ಮಹಿಳೆಯರ ಮಾರಾಟವನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸುವ ಅಪ್ಲಿಕೇಶನ್ ಅನ್ನು ಸೃಷ್ಟಿಸಿ, ಹಂಚಿಕೊಂಡ ಅಪರಾಧಿಗಳಿಗೆ ಕಾನೂನಿನ ಕ್ರಮಗಳ ಭಯವೇ ಇರಲಿಲ್ಲ. ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅನುಮತಿ ಇಲ್ಲದೆ ಡೌನ್‌ಲೋಡ್ ಮಾಡಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸ್ಪಷ್ಟವಾಗಿ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಅಲ್ಲದೆ ಇದು, ಎರಡೂ ರೀತಿಯಲ್ಲಿ, ಮುಸ್ಲಿಂ ಮಹಿಳೆಯರನ್ನು ನಿಂದಿಸುವುದು, ಕೀಳಾಗಿಸುವುದು ಹಾಗೂ ಮುಖ್ಯವಾಗಿ ಅಮಾನವೀಯಗೊಳಿಸುವುದಾಗಿದೆ. ಈ ರೀತಿ ಮಹಿಳೆಯರನ್ನು 'ಹರಾಜು' ಹಾಕುವುದು ಅವರನ್ನು ಕೇವಲ ಸರಕು ಅಥವಾ ವಸ್ತುಗಳಂತೆ ನೋಡುವ ಪ್ರಯತ್ನವಾಗಿದ್ದು, ಅವರ ವ್ಯಕ್ತಿತ್ವ ಮತ್ತು ಘನತೆಯನ್ನು ಅವರಿಂದ ಕಸಿದುಕೊಳ್ಳುವಂತಹದ್ದಾಗಿದೆ. ಇದು ಸಂವಿಧಾನದ 21ನೇ ಅನುಚ್ಛೇದದಲ್ಲಿ ನೀಡಲಾಗಿರುವ ಮೂಲ ಹಕ್ಕುಗಳಾದ ಘನತೆಯಿಂದ ಬದುಕುವ ಹಕ್ಕು ಹಾಗೂ ದೈಹಿಕ ಸ್ವಾಯತ್ತತೆಯ ಹಕ್ಕಿನ ಅತೀ ಸ್ಪಷ್ಟ ಉಲ್ಲಂಘನೆಯಾಗಿದೆ.

ಆದಾಗ್ಯೂ, ಮುಸ್ಲಿಂ ಮಹಿಳೆಯರ ಘನತೆಯ ಮೇಲಿನ ಈ ಪುನರಾವರ್ತಿತ ದಾಳಿಗಳನ್ನು ಬಹುಸಂಖ್ಯಾತ ಶಕ್ತಿಗಳು ಪೂರ್ವಯೋಜಿತವಾಗಿ ನಡೆಸಿದ ರಾಜಕೀಯ ಕಾರ್ಯತಂತ್ರದ ಭಾಗವೆಂದು ನಾವು ಅನಿವಾರ್ಯವಾಗಿ ಗುರುತಿಸಬೇಕಿದೆ. ಇಂತಹ ದಾಳಿಗಳ ಮೂಲಕ ಮುಸ್ಲಿಮರನ್ನು ಸಾರ್ವಜನಿಕ ಅವಮಾನಕ್ಕೆ ಒಳಪಡಿಸಿ, ಅವರ ದನಿಯನ್ನು ವ್ಯವಸ್ಥಿತವಾಗಿ ಅಡಗಿಸುವುದು ಈ ತಂತ್ರಗಳಲ್ಲೊಂದಾಗಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ. 'ಸುಲ್ಲಿ' ಮತ್ತು 'ಬುಲ್ಲಿ' ಎಂಬ ಪದಗಳು ಅವಹೇಳನಕಾರಿ ಪದಗಳಾಗಿದ್ದು, ಮುಸ್ಲಿಂ ಸಮುದಾಯದ ಮಹಿಳೆಯರನ್ನು ನಿರ್ದಿಷ್ಟವಾಗಿ ನಿಂದಿಸುವ ಪದಗಳಾಗಿವೆ ಹಾಗೂ ಈ ಹಿನ್ನೆಲೆಯಲ್ಲಿ ಇವು ದ್ವೇಷ ಭಾಷಣವನ್ನು ರೂಪಿಸುತ್ತವೆ. ಸಾರ್ವಜನಿಕವಾಗಿ ಮುಸ್ಲಿಂ ಹೆಣ್ಣುಮಕ್ಕಳನ್ನು ಹರಾಜಿಗೆ ಹಾಕುವುದು ಅತ್ಯಂತ ಹೀನ ನಿಂದನೆಯಾಗಿದ್ದು, ಅವರನ್ನು ನಾಗರಿಕರಲ್ಲದವರು ಅಥವಾ ಮನುಷ್ಯರಿಗಿಂತ ಕೀಳು ಎಂಬುದನ್ನು ಬಿಂಬಿಸುತ್ತದೆ. ಕೋಮುಶಕ್ತಿಗಳು ಯಾವುದೇ ಭಯಾತಂಕಗಳಿಲ್ಲದೆ ಬಹಿರಂಗವಾಗಿ ಮಹಿಳೆಯರನ್ನು ಗುರಿಪಡಿಸಿ, ನಿಂದಿಸಿ, ಲೈಂಗಿಕವಾಗಿ ಹಿಂಸಿಸುತ್ತಿರುವ ನಮ್ಮ ಪ್ರಸ್ತುತ ಸಮಾಜದಲ್ಲಿ ತಾಂಡವವಾಡುತ್ತಿರುವ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಒಂದು ನಿರ್ದಿಷ್ಟ ಸಮುದಾಯದ ನರಮೇಧಕ್ಕೆ ಕಳೆದ ವರ್ಷ ದಿಲ್ಲಿಯ ಬೀದಿಗಳಲ್ಲಿ ನೀಡಿದ ಬಹಿರಂಗ ಕರೆಗಳು, ಇತ್ತೀಚೆಗಷ್ಟೇ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಘಟನೆಗಳು ವ್ಯವಸ್ಥಿತವಾಗಿ ರೂಪಿಸಿದ ದ್ವೇಷ ಭಾಷಣಗಳಾಗಿವೆ. ಇವುಗಳು ನಮ್ಮ ದೇಶವನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತವೆ. ಇಂತಹ ಘಟನೆಗಳ ಕುರಿತು ಮತ್ತೆಂದಿಗೂ ಕುರುಡಾಗಿರಬಾರದು.

ಇದೇ ರೀತಿ, 'ಸುಲ್ಲಿಡೀಲ್ಸ್' ಮತ್ತು 'ಬುಲ್ಲಿಬಾಯ್' ಎಂಬಂತಹ ಅಪ್ಲಿಕೇಶನ್‌ಗಳು ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪದೇ ಪದೇ ಮುಂದುವರಿಸುತ್ತವೆ. ಜಾಲತಾಣಗಳಲ್ಲಿ ಈ ಮಹಿಳೆಯರು ಮುಸ್ಲಿಂ ಎಂದು ಸ್ಥಾಪಿಸುವ ಅವರ ಫೋಟೋಗಳು, ಹೆಸರುಗಳು, ಪೋಸ್ಟ್‌ಗಳನ್ನು ಈ ಅಪ್ಲಿಕೇಶನ್‌ಗಳು ಬಳಸಿಕೊಳ್ಳುತ್ತವೆ. ಇದು ಮುಸ್ಲಿಂ ಮಹಿಳೆಯರನ್ನು ವಸ್ತುಗಳನ್ನಾಗಿಸುವ ನೇರ ಅಭಿವ್ಯಕ್ತಿಯಾಗಿದೆ. ಈ ಕ್ರಿಯೆಗಳು ಮುಸ್ಲಿಂ ಮಹಿಳೆಯರ ಘನತೆಯ ಮೇಲೆ ತೀವ್ರ ದಾಳಿಯನ್ನು ನಡೆಸುವುದರ ಜೊತೆಗೆ ಅವರ ಸಾರ್ವಜನಿಕ ಭಾಗವಹಿಸುವಿಕೆಯನ್ನೂ ಘಾಸಿಗೊಳಿಸುತ್ತದೆ. ಇದರಿಂದಾಗಿ ಅನೇಕ ಮುಸ್ಲಿಂ ಮಹಿಳೆಯರು ಬಲವಂತವಾಗಿ ಅವರ ಫೋಟೋಗಳನ್ನು ಅಳಿಸುವಂತಾಯಿತಲ್ಲದೆ, ಇನ್ನೂ ಅನೇಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನೇ ಸ್ಥಗಿತಗೊಳಿಸುವಂತಾಯಿತು. ಇದು ಸಾರ್ವಜನಿಕ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಇದಕ್ಕೆ ಅವಕಾಶ ನೀಡಿರುವ ಸರಕಾರದ ನಿಷ್ಕ್ರಿಯತೆ, ಸಂವಿಧಾನದ ಪ್ರಸ್ತಾವನೆಯಲ್ಲಿ ನೀಡಿರುವ ಸಮಾನತೆಯ ಅವಕಾಶದ ವಾಗ್ದಾನವನ್ನು ಉಲ್ಲಂಘಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ಸ್ವತಂತ್ರವಾಗಿ ಹಾಗೂ ಸಮಗ್ರವಾಗಿ ಭಾಗವಹಿಸುವ ಅವಕಾಶವನ್ನು ಮುಸ್ಲಿಮರಿಗೆ ನಿರಾಕರಿಸಲಾಗಿದೆ.

ಜುಲೈ 2021ರಲ್ಲಿ 'ಸುಲ್ಲಿಡೀಲ್ಸ್' ಅಪ್ಲಿಕೇಶನ್‌ನಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆದ ದಾಳಿಯ ಕುರಿತು ದಿಲ್ಲಿ ಹಾಗೂ ಉತ್ತರ ಪ್ರದೇಶ ಪೊಲೀಸರು ಎರಡು ಪ್ರಥಮ ವರ್ತಮಾನ ವರದಿ (ಎಫ್‌ಐಆರ್)ಗಳನ್ನು ದಾಖಲಿಸುತ್ತಾರೆ. ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲೂ) ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲೂ) ಈ ವಿಷಯದ ಅರಿವನ್ನು ಪಡೆದು, ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಾರೆ. ಆದರೆ, ಕಳವಳಕಾರಿಯೆಂಬಂತೆ, ಇದಾದ 6 ತಿಂಗಳುಗಳ ನಂತರವೂ ಈ ಪ್ರಕರಣಗಳ ತನಿಖೆಯಲ್ಲಿ ಕೊಂಚವೇ ಪ್ರಗತಿ ಉಂಟಾಗಿದೆ. ತನಿಖಾ ಸಂಸ್ಥೆಗಳು ಈವರೆಗೂ ಈ ಪ್ರಕರಣದ ಅಪರಾಧಿಗಳನ್ನು ಕಂಡುಹಿಡಿಯುವಲ್ಲಿ ವಿಫಲವಾಗಿವೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರಕಾರಗಳ ನಿರ್ಲಜ್ಜ ಧೋರಣೆ ಮುಸ್ಲಿಂ ಮಹಿಳೆಯರ ನೋವು ಮತ್ತು ಆಘಾತವನ್ನು ಸಂಪೂರ್ಣವಾಗಿ ಅಣಕಿಸಿದೆ. ಇದರ ವಿಸ್ತರಣೆಯಾಗಿ, ಮುಸ್ಲಿಂ ಮಹಿಳೆಯರ ಮೇಲೆ ನಡೆಯಲಾಗುತ್ತಿರುವ ಪುನರಾವರ್ತಿತ ದಾಳಿಗಳ ಕುರಿತ ಕಾನೂನು ಜಾರಿಗೊಳಿಸುವ ಪ್ರಾಧಿಕಾರಗಳ ನೀರವ ಮೌನವು ಈ ಅಧಃಪತನವನ್ನು ಅನುಮೋದಿಸುವಂತಿದೆ.

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಘನತೆಯ ಬದುಕಿನ ಹಕ್ಕಿನ ಭರವಸೆಯನ್ನು ನೀಡಿದೆ. ಅದಾಗ್ಯೂ, ಮುಸ್ಲಿಂ ಮಹಿಳೆಯರ ಮೇಲೆ ಪ್ರತಿನಿತ್ಯ ನಡೆಯುವ ಈ ರೀತಿಯ ಕೋಮು ಸ್ತ್ರೀದ್ವೇಷಿ ಆಕ್ರಮಣಗಳು ಅವರನ್ನು ಮೂಲಭೂತ ಹಕ್ಕುಗಳಿಂದ ವಂಚಿಸುತ್ತವೆ. ಇವು ತಮ್ಮ ಸ್ವಂತ ನಾಡಿನಲ್ಲೇ ಅಂಚಿಗೆ ಸರಿಸಲ್ಪಟ್ಟ ಮಹಿಳೆಯರು ಭಯದಿಂದ ಬದುಕುವಂತೆ ಒತ್ತಾಯಿಸುತ್ತವೆ. ಯಾವ ನಾಗರಿಕ ಸಮಾಜವೂ ಸಹ ತನ್ನ ಮಹಿಳೆಯರನ್ನು ವಸ್ತುವನ್ನಾಗಿ ನೋಡುವುದು, ದೌರ್ಜನ್ಯ ಮಾಡುವುದು ಹಾಗೂ ಸಾರ್ವಜನಿಕವಾಗಿಹರಾಜು ಹಾಕುವುದನ್ನು ಅನುಮೋದಿಸಲೇಬಾರದು. ಈ ರೀತಿಯ ಹೀನ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರಗಳು ದೊಡ್ಡ ಮಟ್ಟದಲ್ಲಿ ವಿಫಲವಾಗಿರುವಾಗ, ಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮೇಲೆ ಬೀಳುತ್ತದೆ. ಸರ್ವೋಚ್ಚ ನ್ಯಾಯಾಲಯವು ಕೂಡಲೇ ಮಧ್ಯಪ್ರವೇಶಿಸಿ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಬೇಕು.

ಮುಸ್ಲಿಂ ಮಹಿಳೆಯರ ಘನತೆಯ ಮೇಲಿನ ಇಂತಹ ಹೇಯ ದಾಳಿಗಳು ಭಾರತದ ಸಂವಿಧಾನದಲ್ಲಿ ಚಿತ್ರಿಸಿರುವ ಭಾರತದ ಪರಿಕಲ್ಪನೆಯ ಮೇಲೆಯೇ ನಡೆದ ಲೆಕ್ಕಾಚಾರದ ದಾಳಿಗಳು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು 'ಇತರರನ್ನಾಗಿಸುವ' ನಿರ್ದಿಷ್ಟ ಉದ್ದೇಶದೊಂದಿಗೆ ನಡೆಯುವ ಈ ದಾಳಿಗಳು, ಭಾರತದ ಜಾತ್ಯತೀತತೆಯನ್ನು ಹಾಳುಗೆಡಹುವ ಪ್ರಯತ್ನಗಳಾಗಿವೆ. ಕೇವಲ ಧಾರ್ಮಿಕ ದ್ವೇಷದ ಮೇಲೆ ನಡೆಯುವ ಈ ಕ್ರಿಯೆಗಳು ಸಾಂವಿಧಾನಿಕ ಆಶಯವಾದ ಭ್ರಾತೃತ್ವದ ಮೇಲೆ ದಾಳಿ ಮಾಡುವುದಲ್ಲದೆ, ಸಮಾನತೆಯ ಹಕ್ಕು, ಅಸಮಾನತೆಯ ವಿರುದ್ಧದ ಹಕ್ಕು, ವೈಯಕ್ತಿಕ ಸ್ವಾತಂತ್ರದ ಹಕ್ಕು, ಧಾರ್ಮಿಕ ಸ್ವಾತಂತ್ರದ ಹಕ್ಕು ಹಾಗೂ ಬದುಕಿನ ಹಕ್ಕನ್ನೇ ಉಲ್ಲಂಘಿಸುತ್ತವೆ. ನಮ್ಮ ಸಂವಿಧಾನವು ಧರ್ಮಾತೀತ ಮತ್ತು ಲಿಂಗಾತೀತವಾಗಿ ಎಲ್ಲಾ ಜನರಿಗೂ ಸುರಕ್ಷತೆಯ ಪರಿಸರವನ್ನು ಸೃಜಿಸಲು ಶ್ರಮಿಸುತ್ತಿರುವಾಗ, ಈ ರೀತಿಯ ಹಿಂಸಾತ್ಮಕ ದಾಳಿಗಳು ಅಸಮಾನತೆಯನ್ನೂ ಹಾಗೂ ಸಾರ್ವಜನಿಕ ಅಶಾಂತಿಯನ್ನು ಉಂಟು ಮಾಡುತ್ತವೆ. ಆದ್ದರಿಂದ, ಭಾರತದ ಸರ್ವೋಚ್ಚ ನ್ಯಾಯಾಲಯವು ಈ ಕುರಿತು ಸುಮೋಟೋ ಅರ್ಜಿಯನ್ನು ದಾಖಲಿಸಿಕೊಂಡು, ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಖಚಿತಪಡಿಸಬೇಕೆಂದು ಒತ್ತಾಯಿಸುತ್ತೇವೆ.

1. ಪೊಲೀಸರು ಸ್ವಯಂಪ್ರೇರಿತರಾಗಿ/ಸಂತ್ರಸ್ತರ ದೂರಿನ ಆಧಾರದ ಮೇರೆಗೆ ಪ್ರಥಮ ವರ್ತಮಾನ ವರದಿ (ಎಫ್‌ಐಆರ್)ಗಳನ್ನು ದಾಖಲಿಸಿಕೊಂಡು, ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.

2. ಈ ಅಪರಾಧಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತನಿಖೆ ಮತ್ತು ಕಾನೂನು ಕ್ರಮದ ಮೇಲ್ವಿಚಾರಣೆ ಕೈಗೊಳ್ಳಬೇಕು.

3. ಜುಲೈ 2021ರ ಇಂತಹದ್ದೇ ಪ್ರಕರಣದ ತನಿಖೆ ಹಾಗೂ ಪ್ರಾಸಿಕ್ಯೂಷನ್‌ನ ಮೇಲುಸ್ತುವಾರಿಯನ್ನು ಸುಪ್ರೀಂಕೋರ್ಟ್ ನೋಡಿಕೊಳ್ಳಬೇಕು ಹಾಗೂ ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಕರ್ತವ್ಯದಲ್ಲಿ ವಿಫಲವಾಗಿದ್ದಾರೆ ಎಂದೆನಿಸಿದರೆ ಆ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.

4. 'ಸುಲ್ಲಿಡೀಲ್ಸ್' ಮತ್ತು 'ಬುಲ್ಲಿಬಾಯ್' ಅಪ್ಲಿಕೇಶನ್‌ಗಳಂತಹ ಕಾನೂನುಬಾಹಿರ ಅಪ್ಲಿಕೇಶನ್‌ಗಳು ಟ್ವಿಟರ್ ಹಾಗೂ GitHub ಪರಿಧಿಯಲ್ಲಿ ಕಾರ್ಯನಿರ್ವಹಿಸದಂತೆ ಎಚ್ಚರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು.

5. ಕೋಮು ದ್ವೇಷದಂತಹ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ನಿರ್ದೇಶಿಸಬೇಕು.

6. ಇಂತಹ ಯಾವುದೇ ಕೋಮು ದ್ವೇಷದ ಅಪರಾಧಗಳು ಮರುಕಳಿಸುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು.


ಕವಿತಾ ಶ್ರೀವಾಸ್ತವ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್), ಟೀಸ್ತಾ ಸೆಟಲ್ವಾಡ್ ಮತ್ತು ಇನ್ನಿತರರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)